ಧರ್ಮದರ್ಶನ: ಅಲಂಕಾರದಿಂದ ವಿಗ್ರಹದ ಸೌಮ್ಯಸ್ವಭಾವ ಉಗ್ರವಾಗದಿರಲಿ

Edit-3
Published on

ನಮ್ಮ ದೇವಾಲಯಗಳಲ್ಲಿ ಭಗವಂತನ ಸಾನ್ನಿಧ್ಯವನ್ನು ಸಂಚಯನ ಮಾಡಿ ರಕ್ಷಿಸುವಂತಹ ಕಾರ್ಯವನ್ನು ಪೂರ್ವಜರು ಮಾಡಿದ್ದಾರೆ. ಹಿಂದೂಧರ್ಮದಲ್ಲಿ ಮಾತ್ರ ಅಲ್ಲ. ಕ್ರೈಸ್ತ ಧರ್ಮದ ಚರ್ಚುಗಳಲ್ಲಿ, ಬೌದ್ಧ-ಜೈನ ಮಂದಿರಗಳಲ್ಲಿ ಹೀಗೆ ಎಲ್ಲ ಧರ್ಮಗಳಲ್ಲಿಯೂ ಭಗವಂತನ ಕಲ್ಪನೆ, ಸಾನ್ನಿಧ್ಯವನ್ನು ಗುರುತಿಸುತ್ತಾರೆ.

ಭಕ್ತರು ಭಗವಂತನನ್ನು ಅನೇಕ ರೂಪದಲ್ಲಿ ಆರಾಧಿಸುತ್ತಾರೆ ಮತ್ತು ಭಜಿಸುತ್ತಾರೆ. ಭಗವಂತನನ್ನು ನಂಬಿಕೊಂಡು ಜೀವನದ ಸುಖದುಃಖಗಳನ್ನು ಎದುರಿಸುತ್ತಾರೆ. ಬಹುರೂಪಿಯಾಗಿ, ಸರ್ವಾಂತರ್ಯಾಮಿ ಮತ್ತು ಸರ್ವವ್ಯಾಪಕನಾಗಿರುವ ಮತ್ತು ಭೌಮಾಕಾರದಲ್ಲಿ ನಮ್ಮ ಕಲ್ಪನೆಗೂ ಮೀರಿದ ಅಸ್ತಿತ್ವವನ್ನು ಹೊಂದಿರುವ ಭಗವಂತನನ್ನು ನಾವು ಮೂರ್ತಿರೂಪದಲ್ಲಿ ಪೂಜಿಸುತ್ತೇವೆ. ಸಹಸ್ರಾರು ವರ್ಷಗಳಿಂದ ನಂಬಿಕೊಂಡು ಆರಾಧಿಸಿಕೊಂಡು ಬಂದಿರುವ ದೇವತಾ ಸ್ವರೂಪಿಗಳು ಚಿರಯೌವನ ಪಡೆದಿರುತ್ತಾರೆ. ಸಾಹಿತ್ಯ, ಲಲಿತ ಕಲೆ, ಪುರಾಣಗಳಿಂದ ದೊರೆತ ಆಧಾರದಂತೆ ಸ್ಪುರದ್ರೂಪಿಯೂ, ಭಕ್ತಪ್ರಿಯರೂ, ಆಪತ್ಬಾಂಧವರೂ ಆಗಿರುವ ಶಕ್ತಿಗಳನ್ನು ಇಷ್ಟದೇವತೆಗಳಾಗಿ ಮತ್ತು ಕುಲದೇವರುಗಳಾಗಿ ನಂಬಿಕೊಂಡು ಬರಲಾಗಿದೆ.

ಲಲಿತ ಕಲೆಗಳಾದ ನೃತ್ಯ, ಸಂಗೀತ, ಇಂದಿನ ಮಾಧ್ಯಮಗಳು ಪ್ರತ್ಯಕ್ಷ ಸಾಕ್ಷಾತ್ಕಾರದ ಕಲ್ಪನೆಯನ್ನು ಕೊಡುತ್ತವೆ. ರಾಜಾರವಿವರ್ಮ ಬರೆದ ಕಮಲದ ಮೇಲೆ ನಿಂತ ಚಂಚಲೆ ಲಕ್ಷ್ಮಿ, ದೃಢವಾದ ಕಲ್ಲಿನ ಮೇಲೆ ಕುಳಿತ ಶಾರದೆಯ ಕಲ್ಪನೆ, ಶಿವ, ರಾಮ, ಕೃಷ್ಣ ಮತ್ತು ಇತರ ದೇವತೆಗಳ ಆಕೃತಿಗಳು ಸಹಜವೋ ಎಂಬಂತೆ ಭಕ್ತರ ಮನದಲ್ಲಿವೆ.

ಅಣುರೇಣುತೃಣಕಾಷ್ಠಗಳಲ್ಲಿ ಭಗವಂತನನ್ನೇ ಕಂಡ ಪ್ರಹ್ಲಾದನ ಕಥೆ ಪ್ರಸಿದ್ಧವಾದದ್ದು ಮತ್ತು ಲೋಕವಿಶ್ರುತವಾದದ್ದು. ಭಾಗವತೋತ್ತಮನಾದ ಪ್ರಹ್ಲಾದನ ತಂದೆ ಹಿರಣ್ಯಕಶಿಪು ಒಬ್ಬ ರಾಕ್ಷಸ. ವಿಷ್ಣುವಿನ ಪರಮದ್ವೇಷಿ. ಅಂತಹ ಹಿರಣ್ಯಕಶಿಪುವು ತನ್ನ ಮಗ ವಿಷ್ಣುವಿನ ಧ್ಯಾನ ಮಾಡಬಾರದು ಎಂದು ಮುನ್ನೆಚ್ಚರಿಕೆ ವಹಿಸಿದ್ದನು. ಪ್ರಹ್ಲಾದನನ್ನು ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳುಹಿಸಿ, ವಿದ್ಯಾಗುರುಗಳಾಗಿರುವ ಶುಕ್ರಾಚಾರ್ಯರ ಮಕ್ಕಳಾದ ಶಂಡ-ಅಮರ್ಕರಿಗೆ, ‘ಪ್ರಹ್ಲಾದನ ಬಾಯಿಂದ ವಿಷ್ಣುವಿನ ಸ್ಮರಣೆ ಬಾರದಂತೆ ನೀವು ನೋಡಿಕೊಳ್ಳಬೇಕು’ ಎಂದು ಹೇಳುತ್ತಾನೆ.

ಪ್ರಹ್ಲಾದನು ಏನೇ ಹೇಳಿದರೂ, ಎಷ್ಟು ವಿಧವಾದ ಆಮಿಷ ತೋರಿಸಿದರೂ ಬೆದರಿಸಿದರೂ ವಿಷ್ಣುವಿನ ಸ್ಮರಣೆಯಲ್ಲಿಯೇ ಮುಳುಗಿರುತ್ತಿದ್ದ. ಶಂಡ- ಅಮರ್ಕರು ಈತನನ್ನು ಸರಿದಾರಿಗೆ ತರಲು ಸಾಧ್ಯವಿಲ್ಲವೆಂದು ಬಗೆದು, ಪ್ರಹ್ಲಾದನನ್ನು ಕರೆದುಕೊಂಡು ರಾಜನ ಆಸ್ಥಾನಕ್ಕೆ ಬರುತ್ತಾರೆ. ಸತ್ಯವಾದ ವಿಷಯ ಹೇಳುವುದಕ್ಕೆ ಭಯಗೊಂಡ ಅವರು ಅರಸನಲ್ಲಿ, ‘ರಾಜನೆ! ನಿನ್ನ ಮಗನಿಗೆ ನಾವು ಕೊಡುವ ಶಿಕ್ಷಣ ಪೂರ್ತಿಯಾಯಿತು. ಇವನನ್ನು ನೀವು ಒಪ್ಪಿಸಿಕೊಳ್ಳಬೇಕು’ ಎಂಬುದಾಗಿ ವಿನಂತಿಸಿಕೊಂಡರು. ಆಗ ಹಿರಣ್ಯಕಶಿಪುವು ಗುರುಕುಲದಲ್ಲಿ ಕಲಿತ ಯಾವ ವಿಷಯದ ಮೇಲೆ ಪ್ರಶ್ನೆ ಮಾಡಿದರೂ ಪ್ರಹ್ಲಾದ ಅದಕ್ಕೆ ನೇರವಾಗಿ ಉತ್ತರ ಕೊಡದೆ ಕೇವಲ ವಿಷ್ಣುಸಂಬಂಧಿಯಾದ ಉತ್ತರವನ್ನು ನೀಡುತ್ತಿದ್ದ. ಇದರಿಂದ ಹಿರಣ್ಯಕಶಿಪುವಿಗೆ ಕ್ರೋಧ ಬಂತು. ‘ನನ್ನ ದ್ವೇಷಿಯಾದ ವಿಷ್ಣುವನ್ನು ಸ್ತುತಿಸುತ್ತಿರುವ ನಿನಗೆ ಯೋಗ್ಯ ಶಿಕ್ಷೆ ನೀಡುತ್ತೇನೆ’ ಎಂಬುದಾಗಿ ಪುತ್ರವಾತ್ಸಲ್ಯವನ್ನು ತೊರೆದು ಅವನನ್ನು ಖಂಡಿಸುತ್ತಾನೆ ಮತ್ತು ದಂಡಿಸುತ್ತಾನೆ. ಅಲ್ಲದೆ ವಿಷ್ಣುವನ್ನು ಧ್ಯಾನಿಸಕೂಡದು ಎಂದು ಕಟ್ಟಪ್ಪಣೆ ಮಾಡುತ್ತಾನೆ. ಇದಕ್ಕೆ ಪ್ರಹ್ಲಾದ ಕಿವಿಗೊಡದೇ ಇದ್ದಾಗ ಅವನಿಗೆ ಎಲ್ಲ ವಿಧವಾದ ದೈಹಿಕ ದಂಡನೆ ನೀಡುತ್ತಾನೆ. ಹೆತ್ತ ತಾಯಿಯಾದ ಕಯಾದುವಿನ ಕೈಯಿಂದಲೇ ಆತನಿಗೆ ವಿಷವನ್ನು ಕೊಡಿಸುತ್ತಾನೆ. ಆದರೆ ಭಗವಂತನ ಸ್ಮರಣೆಯಿಂದ ಪ್ರಹ್ಲಾದನಿಗೆ ಅದೂ ಅಮೃತವಾಗುತ್ತದೆ. ಕೊನೆಗೆ ಹಿರಣ್ಯಕಶಿಪುವು ‘ನಿನ್ನ ಭಗವಂತ ಎಲ್ಲಿದ್ದಾನೆ’ ಎಂದು ಪ್ರಶ್ನಿಸಿದಾಗ ಪ್ರಹ್ಲಾದ ‘ಆತ ಎಲ್ಲೆಲ್ಲೂ ಇದ್ದಾನೆ. ಭಗವಂತ ಸರ್ವಾಂತರ್ಯಾಮಿ’ ಎನ್ನುತ್ತಾನೆ. ಹಿರಣ್ಯಕಶಿಪು ಮಗನ ಕೈ ಹಿಡಿದೆಳೆದು ‘ನಿನ್ನ ಭಗವಂತ ಇಲ್ಲಿ ಇದ್ದಾನೆಯೇ? ಇಲ್ಲಿ ಇದ್ದಾನೆಯೇ’ ಎಂದು ಅನೇಕ ಸ್ಥಳಗಳನ್ನು ತೋರಿಸುತ್ತಾನೆ. ಕೊನೆಗೆ ‘ಈ ಕಂಬದಲ್ಲಿಯೂ ನಿನ್ನ ವಿಷ್ಣು ಇದ್ದಾನೆಯೆ? ಎಂಬ ಪ್ರಶ್ನೆಗೆ ಪ್ರಹ್ಲಾದನು ಹೌದೆಂಬ ಉತ್ತರ ನೀಡುತ್ತಾನೆ. ಹಿರಣ್ಯಕಶಿಪು ಗದೆಯಿಂದ ಆ ಕಂಬವನ್ನು ಒಡೆಯುತ್ತಾನೆ. ಕಂಬದ ಒಳಗಿಂದ ಭಯಂಕರ ರೂಪದ ನರಸಿಂಹಾವತಾರದಿಂದ ಮೂಡಿಬರುತ್ತಾನೆ. ಮತ್ತು ಹಿರಣ್ಯಕಶಿಪುವಿನ ವಧೆಯಾಗುತ್ತದೆ ಎಂಬುದು ಪುರಾಣದಲ್ಲಿ ಬರುವ ಕಥೆ. ಪ್ರಹ್ಲಾದನ ಕಲ್ಪನೆಯಲ್ಲಿ ಭಗವಂತ ಪ್ರಕೃತಿ ಸ್ವರೂಪವನ್ನು ಪಡೆದಿದ್ದಾನೆ. ಆತ ಎಲ್ಲೆಲ್ಲೂ ಇದ್ದಾನೆ ಎಂಬುದನ್ನು ಈ ಕಥೆಯಿಂದ ನಾವು ಗ್ರಹಿಸಬೇಕಾದದ್ದು.

ಭಗವಂತನಿಗೆ ನಿರ್ದಿಷ್ಟವಾದ ನಾಮರೂಪಗಳಿಲ್ಲ. ನಮ್ಮ ದೃಷ್ಟಿಯಂತೆ ಭಗವಂತನ ಸೃಷ್ಟಿ. ಪ್ರತಿಯೊಂದು ವಸ್ತುವೂ ಪವಿತ್ರವಾದದ್ದು. ಅದರಲ್ಲಿ ಭಗವಂತನ ಸಾನ್ನಿಧ್ಯವಿದೆ ಎಂಬ ನಂಬಿಕೆ ಅನಾದಿಕಾಲದಿಂದ ಬೆಳೆದುಕೊಂಡು ಬಂದಿದೆ.

ನಮ್ಮ ದೇವಾಲಯಗಳಲ್ಲಿ ಭಗವಂತನ ಸಾನ್ನಿಧ್ಯವನ್ನು ಸಂಚಯನ ಮಾಡಿ ರಕ್ಷಿಸುವಂತಹ ಕಾರ್ಯವನ್ನು ಪೂರ್ವಜರು ಮಾಡಿದ್ದಾರೆ. ಹಿಂದೂಧರ್ಮದಲ್ಲಿ ಮಾತ್ರ ಅಲ್ಲ. ಕ್ರೈಸ್ತ ಧರ್ಮದ ಚರ್ಚುಗಳಲ್ಲಿ, ಬೌದ್ಧ-ಜೈನ ಮಂದಿರಗಳಲ್ಲಿ ಹೀಗೆ ಎಲ್ಲ ಧರ್ಮಗಳಲ್ಲಿಯೂ ಭಗವಂತನ ಕಲ್ಪನೆ, ಸಾನ್ನಿಧ್ಯವನ್ನು ಗುರುತಿಸುತ್ತಾರೆ.

ಗುಡಿಯನ್ನು ಶಾಸ್ತ್ರೋಕ್ತವಾಗಿ ಅಂದರೆ ವಾಸ್ತು ಪ್ರಕಾರವಾಗಿ ನಿರ್ವಣಮಾಡಿ ಅದಕ್ಕೆ ವಾಸ್ತುವಿನ ಭಗವತ್ ಶಕ್ತಿಗಳನ್ನೆಲ್ಲಾ ಜೋಡಿಸಿ ಕಲಾವೃದ್ಧಿ ಮಾಡುತ್ತಾರೆ. ದೇವಾಲಯದ ಅಂತರಂಗದಲ್ಲಿರುವ ಮೂಲಸ್ಥಾನ, ಗರ್ಭಗೃಹ, ಮೂಲಬಿಂಬ ಇರುವಂತಹ ಸ್ಥಳದಲ್ಲಿ ಸಾನ್ನಿಧ್ಯವನ್ನು ಸರಿಯಾಗಿ ರಕ್ಷಿಸುತ್ತಾರೆ. ಪಂಚತತ್ವದ ಮುಖಾಂತರ ಎಲ್ಲ ಶಕ್ತಿಗಳನ್ನು ಅಲ್ಲಿ ಸಂಕೋಚ ಮಾಡಿ ಸ್ಥಾಪಿಸುತ್ತಾರೆ. ಆ ಮೂಲಮೂರ್ತಿಯಲ್ಲಿ ಪ್ರಾಣಪ್ರತಿಷ್ಠೆಯನ್ನು ಮಾಡುತ್ತಾರೆ. ವಿಶೇಷವಾದ ತಂತ್ರ ಮಂತ್ರ ಆಗಮಶಾಸ್ತ್ರದ ಮುಖಾಂತರ ಧಾರ್ವಿುಕ ವಿಧಿ-ವಿಧಾನಗಳನ್ನು ನೆರವೇರಿಸುತ್ತಾರೆ. ಹಾಗಾಗಿ ಸಾಕ್ಷಾತ್ ಭಗವಂತನೇ ಅಲ್ಲಿ ನೆಲೆಸಿದ್ದಾನೆ ಎಂಬಂತಹ ಪೂರ್ಣ ವಿಶ್ವಾಸ ಭಕ್ತರಲ್ಲಿ ಮೂಡಿರುತ್ತದೆ. ದೇವಾಲಯದಲ್ಲಿ ಸುಂದರವಾದ ಮೂರ್ತಿಯನ್ನು ಮಾಡಿ, ಅದು ನಮ್ಮ ಕಣ್ಣಲ್ಲಿ, ಮನದಲ್ಲಿ ಇರುವಂತೆ ಮಾಡಿಕೊಳ್ಳುತ್ತೇವೆ.

ಬೃಹತ್ ಮೂರ್ತಿಗಳನ್ನು ನಿರ್ವಿುಸುವ ಅಭ್ಯಾಸ ಜೈನರಲ್ಲಿ ಪ್ರಾಚೀನಕಾಲದಿಂದಲೂ ಕಂಡುಬರುತ್ತದೆ. ಸಾವಿರ ವರ್ಷಕ್ಕೂ ಹಿಂದೆ ಶ್ರವಣಬೆಳಗೊಳದಲ್ಲಿ ಚಾವುಂಡರಾಯನು ಬಾಹುಬಲಿಯ ವಿರಾಟ್ ರೂಪದ ಸುಂದರ ಮೂರ್ತಿಯನ್ನು ನಿರ್ಮಾಣ ಮಾಡಿದನು.

ಜವಾಹರಲಾಲ್ ನೆಹರೂ ಅವರು ಪ್ರಧಾನಮಂತ್ರಿಯಾಗಿದ್ದಾಗ ಒಮ್ಮೆ ಶ್ರವಣಬೆಳಗೊಳಕ್ಕೆ ಬಂದಿದ್ದರಂತೆ. ಬೆಟ್ಟ ಹತ್ತಿ ಬಾಹುಬಲಿ ಮೂರ್ತಿಯ ಎದುರು ನಿಂತಾಗ, ಅವರಿಂದ ‘ಓ ಮೈ ಗಾಡ್’ ಎಂಬ ಉದ್ಗಾರ ಬಂತಂತೆ. ಆಗ ಅವರ ಭಾವನೆ ಹೇಗಿರಬೇಕು! ನೆಹರು ನಾಸ್ತಿಕರಂತೂ ಆಗಿರಲಿಲ್ಲ. ಆದರೆ ಬಾಹ್ಯವಾಗಿ ತಮ್ಮ ಭಕ್ತಿಯನ್ನು ಜನಸಾಮಾನ್ಯರಂತೆ ತೋರ್ಪಡಿಸುತ್ತಿರಲಿಲ್ಲ ಮತ್ತು ಪ್ರತಿಯೊಂದನ್ನು ತರ್ಕಬದ್ಧವಾಗಿ ವಿಮರ್ಶೆ ಮಾಡಿಯೇ ಸ್ವೀಕರಿಸುವ ಪ್ರವೃತ್ತಿ ಅವರದ್ದಾಗಿತ್ತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಮೂವತ್ತೊಂಬತ್ತು ಅಡಿ ಎತ್ತರದ ಸುಂದರವಾದ ಬಾಹುಬಲಿ ಮೂರ್ತಿಯ ನಿರ್ವಣವನ್ನು ಕಾರ್ಕಳದಲ್ಲಿ ಮಾಡಲಾಯಿತು. ಈ ಮೂರ್ತಿಯನ್ನು ಧರ್ಮಸ್ಥಳಕ್ಕೆ ಕಳುಹಿಸಿ ಕೊಡುವುದಕ್ಕಾಗಿ ಕಾರ್ಕಳದವರು ಕಾರ್ಯಕ್ರಮ ಹಮ್ಮಿಕೊಂಡು ಹಿರಿಯ ಸಾಹಿತಿ ಜಿ. ಪಿ. ರಾಜರತ್ನಂ ಅವರನ್ನು ಅತಿಥಿಯಾಗಿ ಆಮಂತ್ರಿಸಿದ್ದರು. ಆಗ ರಾಜರತ್ನಂ ಮಾತನಾಡುತ್ತ, ‘ಇಂತಹ ಬೃಹತ್ ಮೂರ್ತಿಯನ್ನು ಯಾಕೆ ಮಾಡುವುದು? ಎಂದು ಎಲ್ಲರ ಮನಸ್ಸಿನಲ್ಲಿಯೂ ಪ್ರಶ್ನೆ ಉದ್ಭವವಾಗುತ್ತದೆ. ಬಂದವರು ದರ್ಶನ ಮಾಡಿ ಹೋಗುವಾಗ ಮೂರ್ತಿಯನ್ನು ಕಿಸೆಯಲ್ಲಿ ಹಾಕಿಕೊಂಡು ಹೋಗದಿರಲೆಂದು ಇಂತಹ ಬೃಹದಾಕಾರದ ಮೂರ್ತಿ’ ಎಂದು ಹಾಸ್ಯಮಯವಾಗಿ ಹೇಳಿದ್ದರು.

ಬೌದ್ಧರಲ್ಲಿಯೂ ಬೃಹತ್ ಮೂರ್ತಿಗಳನ್ನು ನಿರ್ವಿುಸುವ ಪರಂಪರೆ ಇದೆ. ನಮ್ಮೊಳಗೆ ಭಗವಂತನನ್ನು ಆಹ್ವಾನಿಸಿ ಧ್ಯಾನಕ್ಕೆ ಅನುಕೂಲ ಮಾಡಿಕೊಡುವುದಕ್ಕೆ ಇಂತಹ ಭೌಮಾಕಾರದ ಮೂರ್ತಿ ಸಹಕಾರಿ. ಕರ್ನಾಟಕದಲ್ಲಿ ಹೊಯ್ಸಳ ಅರಸರ ಆಡಳಿತ ಕಾಲದಲ್ಲಿ ಸುಂದರ ದೇವಾಲಯಗಳನ್ನು ನಿರ್ವಿುಸಿದ್ದಾರೆ.

ತಿರುಪತಿ, ಧರ್ಮಸ್ಥಳ ಮುಂತಾದ ಪುಣ್ಯಕ್ಷೇತ್ರಗಳಿಗೆ ಹೋದಾಗ ಬಹಳ ವೇಗವಾಗಿ ದರ್ಶನವನ್ನು ಪೂರೈಸಬೇಕಾಗುತ್ತದೆ. ಅನೇಕ ಭಕ್ತರು ‘ನೀವು ಅವಸರ ಮಾಡಿ ಕಳುಹಿಸಿಬಿಡುತ್ತೀರಿ’ ಎಂದು ದೂರುತ್ತಾರೆ. ಭಕ್ತರ ಸಂಖ್ಯೆ ಅಧಿಕವಾಗಿದ್ದಾಗ ಹೀಗೆ ಮಾಡುವುದು ಅನಿವಾರ್ಯವಾಗುತ್ತದೆ. ಇನ್ನೊಂದು ತರ್ಕವೆಂದರೆ ಭಗವಂತನ ದರ್ಶನ ಎಂಬುದು ಫೋಟೋ ತೆಗೆದ ಹಾಗೆ. ಅಂದರೆ ಫೋಟೋ ತೆಗೆಯಲು ಸೆಕೆಂಡಿನ ಹತ್ತನೇ ಒಂದಂಶ ಸಾಕಾಗುತ್ತದೆ. ಹಾಗೆ ಏಕಾಗ್ರತೆಯಿಂದ ಕ್ಷಣಮಾತ್ರದಲ್ಲಿ ಭಗವಂತನ ದರ್ಶನವನ್ನು ಪಡೆದಾಗ ಆ ಮೂರ್ತಿ, ಆ ದರ್ಶನದ ಶಾಂತಿ ನಮ್ಮಲ್ಲಿ ಸರ್ವದಾ ಉಳಿಯುತ್ತದೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆಂದು ಎರಡು ಮೂರು ದಿನ ಪ್ರಯಾಣ ಮಾಡಿ ಸರತಿಯ ಸಾಲಲ್ಲಿ ನಿಲ್ಲುತ್ತಾರೆ. ದರ್ಶನಭಾಗ್ಯ ಸಿಗುವಂಥದ್ದು ಹತ್ತು ಹದಿನೈದು ಸೆಕೆಂಡ್ ಮಾತ್ರ ಆಗಿರಬಹುದು. ಆದರೂ ಕ್ಷಣಮಾತ್ರದ ದರ್ಶನದಿಂದಲೇ ಎಲ್ಲ ಪ್ರಯಾಸ ನಿರಸ್ತವಾಗಿ ಮೂರ್ತಿ ನಮ್ಮ ಹೃದಯದಲ್ಲಿ ಸ್ಥಾಪಿತವಾಗಿ ಬಿಡುತ್ತದೆ.

ಮೀರಾಬಾಯಿ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡಿದ್ದಳು. ಭಗವಂತ ಮತ್ತು ತಾನು ಬೇರೆ ಬೇರೆಯಲ್ಲ ಎಂದು ತಿಳಿದಿದ್ದಳು. ಹಾಗೆಯೇ ದಾಸಶ್ರೇಷ್ಠರು ಕೂಡ ಭಗವಂತನನ್ನು ತಮ್ಮ ಸಾನ್ನಿಧ್ಯದಲ್ಲಿ ಇಟ್ಟುಕೊಂಡು, ಭಗವಂತನ ಜೊತೆಗೆ ಬದುಕುತ್ತಿದ್ದರು. ವ್ಯಕ್ತಿಯು ನವವಿಧ ಭಕ್ತಿಗಳಿಂದ ಭಗವಂತನ ತಾದಾತ್ಮ್ಯ ಹೊಂದಿ, ಸೋಹಂಭಾವದಿಂದ ಎಲ್ಲ ವಸ್ತುಗಳಲ್ಲಿಯೂ ಭಗವಂತನನ್ನು ಕಾಣುತ್ತಾನೆ.

ಗೌಡಸಾರಸ್ವತ ಸಂಪ್ರದಾಯದಲ್ಲಿ, ದೇವಸ್ಥಾನಕ್ಕೆ ಯಾರಾದರೂ ವಿಶೇಷ ಅತಿಥಿಗಳು ಆಗಮಿಸಿದಾಗ ಭಗವಂತನ ವಿಗ್ರಹದ ಎದುರು ನಿಲ್ಲಿಸಿ ಪ್ರಾರ್ಥನೆ ಮಾಡುವ ಸಂಪ್ರದಾಯವಿದೆ. ನಾನು ಅಂಥಲ್ಲಿ ಹೋದಾಗ, ದೇವರ ಮುಂದೆ ನಿಲ್ಲಿಸಿ, ನಮ್ಮ ಸೇವಾಕಾರ್ಯಗಳನ್ನು ಉಲ್ಲೇಖಿಸಿ, ‘ಹೇ ವೆಂಕಟೇಶ! ಹೇ ಮಾರುತಿ! ನಿನ್ನ ದರ್ಶನಕ್ಕೆ ಧರ್ಮಸ್ಥಳದ ಹೆಗ್ಗಡೆಯವರು ಬಂದಿದ್ದಾರೆ. ಅವರನ್ನು ಪೂರ್ತಿ ಅನುಗ್ರಹಿಸಬೇಕು ಮತ್ತು ಎಲ್ಲ ರೀತಿಯ ಯಶಸ್ಸು ಕೀರ್ತಿಗೆ ಭಾಜನರಾಗುವಂತೆ ಅನುಗ್ರಹಿಸು’ ಎಂಬುದಾಗಿ ಪ್ರಾರ್ಥಿಸುತ್ತಾರೆ. ಭಗವಂತನ ಎದುರುನಿಂತು ತನ್ನನ್ನು ಭಗವಂತನಿಗೆ ಪರಿಚಯ ಮಾಡಿಸುವಾಗ ಪ್ರಶಂಸೆ ಜೊತೆಗೆ ದೈನ್ಯತೆ, ಹೊಣೆಗಾರಿಕೆ ಮತ್ತು ತಾನು ಇನ್ನು ಮುಂದೆ ಹೀಗೆ ಇರಬೇಕು ಎಂಬಂತಹ ಕಲ್ಪನೆ ಕೂಡ ವ್ಯಕ್ತಿಯಲ್ಲಿ ಉಂಟಾಗುತ್ತದೆ.

ಮೂಲಮೂರ್ತಿಯು ಸಾಮಾನ್ಯವಾಗಿ ಮುಂಜಾನೆಯ ಪೂಜೆ ಮತ್ತು ಅಭಿಷೇಕದ ಸಮಯದಲ್ಲಿ ಕಾಣಿಸುತ್ತದೆ. ಅನಂತರ ಸಾಯಂಕಾಲದವರೆಗೂ ಅಲಂಕಾರದಲ್ಲಿ ಇರುತ್ತದೆ. ಇತ್ತೀಚೆಗೆ ಮೂರ್ತಿಯ ತೆರೆದ ಕಣ್ಣಿಗೆ ಬೆಳ್ಳಿಯ ಆಭರಣ ಜೋಡಿಸುತ್ತಾರೆ. ಭಗವಂತನು ಸರ್ವದಾ ನಮ್ಮನೆಲ್ಲ ನೋಡುತ್ತಿರುತ್ತಾನೆ ಎಂಬ ಭಾವನೆಯನ್ನು ಜಾಗೃತಗೊಳಿಸಲು ಹೀಗೆ ಮಾಡುತ್ತಿರಬಹುದು. ಆದರೆ ಈ ರೀತಿಯ ಅಲಂಕಾರವು ಮೂರ್ತಿಯ ನಿಜವಾದ ಸೌಂದರ್ಯವನ್ನು ಮರೆಮಾಚಿ, ವಿಕಾರವಾಗಿ ತೋರುತ್ತದೆ. ದೇವಿಯಲ್ಲಿ ದೊಡ್ಡ ಕಣ್ಣನ್ನು ಇಟ್ಟಾಗ ದೇವಿಯ ಸೌಮ್ಯ ಸ್ವರೂಪದ ಬದಲು ಉಗ್ರರೂಪ ತಾಳಿದಂತೆ ಕಾಣುತ್ತದೆ. ನಮ್ಮ ಧಾರವಾಡದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿರುವ ಗುಡಿಯಲ್ಲಿ ಗಣೇಶನ ಮೂರ್ತಿ ಇದೆ. ಆ ಮೂರ್ತಿಗೆ ಇತ್ತೀಚೆಗೆ ಎರಡು ಬೆಳ್ಳಿಯ ಕಣ್ಣುಗಳನ್ನು ಇಟ್ಟಿದ್ದಾರೆ. ಇದ್ದಕ್ಕಿದ್ದಂತೆ ಪ್ರಸನ್ನ ಗಣಪತಿಯು ಉಗ್ರ ಗಣಪತಿಯಾಗಿ ಪರಿವರ್ತನೆ ಹೊಂದಿದ್ದಾನೆ. ಅರ್ಚಕರಲ್ಲಿ ಕೇಳಿದಾಗ, ‘ಯಾರೋ ಭಕ್ತರು ಬೆಳ್ಳಿಯ ಎರಡು ಕಣ್ಣುಗಳನ್ನು ಒಪ್ಪಿಸಿದರು. ಅದನ್ನು ಅಲಂಕರಿಸಿದ್ದೇನೆ’ ಎಂದರು. ಭಕ್ತರು ನೀಡುವ ಇಂತಹ ಆಭರಣಗಳನ್ನು ಯಾವ ರೀತಿಯಲ್ಲಿ ಬಳಸಬೇಕು ಅಲಂಕರಿಸಬೇಕು ಎಂಬುದನ್ನು ಆಡಳಿತದವರು ಚಿಂತಿಸಿ ತೀರ್ಮಾನ ಕೈಗೊಳ್ಳಬೇಕು. ದೇವರಿಗೆ ಬೇರೆ ಬೇರೆ ಅಲಂಕಾರ ಮಾಡುವುದರಲ್ಲಿ ತಪ್ಪೇನಿಲ್ಲ. ಆದರೆ, ಶಾಸ್ತ್ರೀಯವಾಗಿ ನಿರ್ವಿುಸಿದ ಸುಂದರವಾದ ಆ ಸೌಮ್ಯಸ್ವಭಾವ ಎಂಬುದು ಅಲಂಕಾರದಿಂದ ನಷ್ಟವಾಗಬಾರದು ಎಂಬುದು ನನ್ನ ಮಾತಿನ ಅರ್ಥ. ಕಣ್ಣು, ಚಿನ್ನ ಅಥವಾ ಬೆಳ್ಳಿಯ ತುಂಡು ಕೈಗಳು, ಕಾಲುಗಳಿಗೆ ಮಾತ್ರ ಪಾದಗಳನ್ನು ಜೋಡಿಸುವಂತಹ ಅಲಂಕಾರ, ಇಂತಹವು ಮೂಲಬಿಂಬದ ದರ್ಶನವನ್ನು ಮಾಡಿದಾಗ ಉಂಟಾಗುವ ತೃಪ್ತಿಯನ್ನು ಭಕ್ತರಿಗೆ ನೀಡುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net