

| ಪ್ರಶಾಂತ ರಿಪ್ಪನ್ಪೇಟೆ
ಸಾಂಸ್ಕೃತಿಕ ರಾಜಧಾನಿ ಎಂದೇ ಪ್ರಸಿದ್ಧವಾಗಿರುವ ಅರಮನೆನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ಶಿಲ್ಪಕಲೆಗಳ ತವರೂರು ಬೇಲೂರಿನಲ್ಲಿ ಗುರುಮನೆ ದಸರಾಕ್ಕೆ ಸಕಲ ಸಿದ್ಧತೆಗಳಾಗಿವೆ. ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಜಗದ್ಗುರುಗಳ 31ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವು ಈ ಬಾರಿ ಹೊಯ್ಸಳರ ನಾಡು, ಚನ್ನಕೇಶವನ ನೆಲೆಬೀಡು ಬೇಲೂರಿನಲ್ಲಿ ನಡೆಯಲಿದೆ.
ಪರಶಿವನ ಪಂಚಮುಖಗಳಿಂದ ಆವಿರ್ಭವಿಸಿದ ಜಗದ್ಗುರು ಪಂಚಾಚಾರ್ಯರು ದೇಶದ ವಿವಿಧ ಪ್ರಾಂತ್ಯಗಳಲ್ಲಿ ಪಂಚಪೀಠಗಳನ್ನು ಸ್ಥಾಪಿಸಿ ಮಾನವ ಕುಲಕೋಟಿಗೆ ಧರ್ಮ-ಸಂಸ್ಕಾರವನ್ನು ಬೋಧಿಸುತ್ತಾ ಬಂದಿರುವ ಯುಗ ಯುಗಗಳ ಇತಿಹಾಸವಿದೆ. ಅಂತೆಯೇ ಶಿವನ ಸದ್ಯೋಜಾತ ಮುಖದಿಂದ ಉದಿಸಿದ ಜಗದ್ಗುರು ರೇಣುಕಾಚಾರ್ಯರು ತೆಲಂಗಾಣದ ಕೊಲ್ಲಪಾಕಿ ಸ್ವಯಂಭು ಸೋಮೇಶ್ವರ ಲಿಂಗದಿಂದ ಪ್ರಕಟಗೊಂಡು, ಮಲಯಾಚಲದ ಭದ್ರಾನದಿ ತೀರದಲ್ಲಿ ಶ್ರೀ ವೀರಸಿಂಹಾಸನ ಮಹಾಪೀಠವನ್ನು ಸ್ಥಾಪಿಸಿದ್ದಾರೆ. ಇಲ್ಲಿಯವರೆಗೆ 121 ಜಗದ್ಗುರುಗಳು ಪೀಠವನ್ನೇರಿದ ಭವ್ಯ ಇತಿಹಾಸವಿದ್ದು, ಪೀಠದ ಸುದೀರ್ಘ ಪರಂಪರೆಯಲ್ಲಿ ಶರನ್ನವರಾತ್ರಿ ದಸರಾ ಮಹೋತ್ಸವಕ್ಕೆ ತನ್ನದೇ ಆದ ಇತಿಹಾಸವಿದೆ.
ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸುವ ವೀರಶೈವ ಧರ್ಮದಲ್ಲಿ ಶಿವನ ಆರಾಧನೆಯಷ್ಟೇ ಆದ್ಯತೆ ಶಕ್ತಿಯ ಆರಾಧನೆಗೂ ಇದೆ. ಅಂತೆಯೇ ನವರಾತ್ರಿ ಸಂದರ್ಭದಲ್ಲಿ ಜಗದ್ಗುರುಗಳು ಶರನ್ನವರಾತ್ರಿ ದಸರಾ ದರ್ಬಾರ್ ಕಾರ್ಯಕ್ರಮವನ್ನು ಆಚರಿಸುವುದು ಪ್ರಾಚೀನ ಪರಂಪರೆ.
ಪೀಠದ ಪರಿಸರಕ್ಕೆ ಮೀಸಲಾಗಿದ್ದ ಶರನ್ನವರಾತ್ರಿ ದಸರಾ ಮಹೋತ್ಸವವನ್ನು ಮೈಸೂರು ಮಹಾರಾಜರ ಕೋರಿಕೆಯಂತೆ ನಾಡಿನ ವಿವಿಧ ಪ್ರಾಂತ್ಯಗಳಿಗೆ ಕೊಂಡೊಯ್ದ ಕೀರ್ತಿ 118ನೇ ಪೀಠಾಚಾರ್ಯರಾಗಿದ್ದ ಜಗದ್ಗುರು ಶಿವಾನಂದ ರಾಜೇಂದ್ರ ಭಗವತ್ಪಾದರಿಗೆ ಸಲ್ಲುತ್ತದೆ. ಆ ನಂತರ ಪೀಠವನ್ನೇರಿದ ಜಗದ್ಗುರು ವೀರಗಂಗಾಧರ ಭಗವತ್ಪಾದರು ಹಾಗೂ ಜಗದ್ಗುರು ವೀರರುದ್ರಮುನಿ ಭಗವತ್ಪಾದರ ಕಾಲಕ್ಕೆ ದಸರಾ ಮಹೋತ್ಸವವು ಮತ್ತಷ್ಟು ವಿಸ್ತಾರವಾಯಿತು.
ಪ್ರಸ್ತುತ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ವೀರಸಿಂಹಾಸನವನ್ನು ಆರೋಹಣ ಮಾಡಿದ ನಂತರ ಕಳೆದ 30 ವರ್ಷಗಳಿಂದ ನಾಡಿನ ಪ್ರತಿಷ್ಠಿತ ಉತ್ಸವವಾಗಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವು ಆಚರಿಸಲ್ಪಡುತ್ತಿದೆ. ರಾಜ್ಯದ ಮೂಲೆ ಮೂಲೆಗಳಲ್ಲೂ ದಸರಾ ಮಹೋತ್ಸವ ಆಚರಿಸಲ್ಪಟ್ಟಿದ್ದು, ಮೈಸೂರು ಅರಮನೆ ದಸರಾವು ನಾಡಿನ ಸಾಂಸ್ಕೃತಿಕ ಪ್ರತೀಕವಾದರೆ, ರಂಭಾಪುರಿ ಜಗದ್ಗುರುಗಳ ದಸರಾ ಮಹೋತ್ಸವವು ಧಾರ್ವಿುಕ ಪರಂಪರೆಯ ಪ್ರತೀಕವಾಗಿದೆ. ಕಳೆದ ಎರಡು ವರ್ಷದಿಂದ ಕರೊನಾ ಕಾರಣಕ್ಕೆ ಸಾಂಕೇತಿಕವಾಗಿ ಆಚರಿಸಲ್ಪಟ್ಟಿದ್ದ ದಸರಾ ಮಹೋತ್ಸವವು, ಈ ವರ್ಷ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲು ಬೇಲೂರು ಶಾಸಕ ಕೆ.ಎಸ್. ಲಿಂಗೇಶ್ ನೇತೃತ್ವದ ಸ್ವಾಗತ ಸಮಿತಿಯು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಅಂಗವಾಗಿ ಶಿಲ್ಪಕಲೆಗಳ ತವರೂರು ಬೇಲೂರಿನಲ್ಲಿ ರಂಭಾಪುರಿ ಜಗದ್ಗುರುಗಳ 10 ದಿನಗಳ ಧರ್ಮ ಯಜ್ಞ ನಡೆಯಲಿದೆ. ಸೆ. 26ರಿಂದ ಅ. 5ರವರೆಗೆ ವಿವಿಧ ಧಾರ್ವಿುಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸೆ. 25ರಂದು ಜಗದ್ಗುರುಗಳು ಸಾರೋಟು ಉತ್ಸವದ ಮೂಲಕ ಪುರಪ್ರವೇಶ ಮಾಡಲಿದ್ದಾರೆ. ಬೇಲೂರಿನ ಡಾ. ಶಿವಕುಮಾರ ಸ್ವಾಮೀಜಿ ಸಮುದಾಯ ಭವನದಲ್ಲಿ ನಿತ್ಯ ಬೆಳಗ್ಗೆ 8 ಗಂಟೆಯಿಂದ ಜಗದ್ಗುರುಗಳ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನೆರವೇರಲಿದ್ದು, ಸಂಜೆ 7 ಗಂಟೆಗೆ ಧರ್ಮ ಸಮ್ಮೇಳನ ನಡೆಯಲಿದೆ. ಪೀಠದ ಬಿರುದು, ಬಿನ್ನಾವಳಿಗಳ ಸಹಿತ ಜಗದ್ಗುರುಗಳು ರಾಜಪೋಷಾಕಿನಲ್ಲಿ ಸಾನಿಧ್ಯ ಕರುಣಿಸಲಿದ್ದು, ಪ್ರತಿನಿತ್ಯ ಸಮಾರಂಭದ ನಂತರ ಶಿವಾಚಾರ್ಯರು, ಪೀಠದ ಸಿಬ್ಬಂದಿ ಹಾಗೂ ಅಭಿಮಾನಿಗಳು ಜಗದ್ಗುರುಗಳಿಗೆ ನಜರ್ (ಗೌರವ) ಸಮರ್ಪಿಸಲಿದ್ದಾರೆ. ಸೆ. 26ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 10 ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅ. 4 ರವರೆಗೆ ನಿತ್ಯ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಅ. 5 ವಿಜಯದಶಮಿಯಂದು ವಿಶೇಷವಾಗಿ ಬೇಲೂರಿನ ಐತಿಹಾಸಿಕ ವಿಷ್ಣುಸಮುದ್ರ ಕಲ್ಯಾಣಿಯಿಂದ ಸ್ವತಃ ಜಗದ್ಗುರುಗಳು ಅಗ್ರೋದಕವನ್ನು ತಂದು ಮಹಾಪೂಜೆ ನೆರವೇರಿಸಲಿದ್ದಾರೆ. ಅ. 5ರಂದು ಸಂಜೆ 5 ಗಂಟೆಗೆ ಪ್ರಸಿದ್ಧ ಚನ್ನಕೇಶವ ದೇವಾಲಯದಿಂದ ಮಾನವಧರ್ಮ ಮಂಟಪದವರೆಗೆ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದೆ. ಬನ್ನಿಮಂಟಪದಲ್ಲಿ ಶಮೀ ಸೀಮೋಲ್ಲಂಘನೆ ಮಾಡಿದ ನಂತರ ಜಗದ್ಗುರುಗಳು ವೀರಸಿಂಹಾಸನಾರೋಹಣಗೈದು ವಿಜಯದಶಮಿಯ ಶಾಂತಿ ಸಂದೇಶವನ್ನು ನೀಡುವುದರ ಮೂಲಕ 10 ದಿನಗಳ ದಸರಾ ಸಮ್ಮೇಳನಕ್ಕೆ ತೆರೆ ಬೀಳಲಿದೆ.
ಶಾಂತಿ ಸಾಮರಸ್ಯದ ಬದುಕಿಗೆ ಧರ್ಮ ಬುನಾದಿಯಾಗಿದ್ದು, ಸುಸಂಸ್ಕೃತ ಸಮಾಜ ನಿರ್ವಣಕ್ಕೆ ಶಿಕ್ಷಣ ಮತ್ತು ಅಧ್ಯಾತ್ಮದ ಅರಿವು ಅವಶ್ಯಕವಾಗಿದೆ. ಅಧ್ಯಾತ್ಮದ ಸಂಪತ್ತನ್ನು ಸಮಾಜಕ್ಕೆ ಹಂಚುವುದಕ್ಕಾಗಿ ನಮ್ಮೆಲ್ಲ ಗುರುಪೀಠಗಳು ಒಂದಿಲ್ಲೊಂದು ಧಾರ್ವಿುಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಆ ನಿಟ್ಟಿನಲ್ಲಿ ರಂಭಾಪುರಿ ಪೀಠದ ಪರಂಪರೆಯಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಶರನ್ನವರಾತ್ರಿ ದಸರಾ ಮಹೋತ್ಸವ ಪ್ರಮುಖವಾಗಿದೆ. ವೀರಶೈವ ಕೇಸರಿ ಎಂದೇ ಪ್ರಸಿದ್ಧರಾಗಿದ್ದ ಲಿಂಗೈಕ್ಯ ಜಗದ್ಗುರು ವೀರಗಂಗಾಧರ ಭಗವತ್ಪಾದರು ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂದು ನೀಡಿದ ಸಂದೇಶದ ತಳಹದಿಯ ಮೇಲೆ ಪ್ರಸ್ತುತ ಜಗದ್ಗುರುಗಳು ನೀಡಿದ ‘ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ, ಶಾಂತಿ ಸಮೃದ್ಧಿ ಸರ್ವರಿಗಾಗಲಿ’ ಎಂಬ ಉದಾತ್ತ ಸಂದೇಶ ಸಾಕಾರಗೊಳ್ಳುವ ಬೃಹತ್ ವೇದಿಕೆ ಶರನ್ನವರಾತ್ರಿ ದಸರಾ ಮಹೋತ್ಸವ. ಧರ್ಮ-ಸಂಸ್ಕಾರವನ್ನು ಉದ್ದೀಪನಗೊಳಿಸುವ ಉಪದೇಶಾಮೃತಗಳು, ಆಯಾ ಭಾಗದ ಜ್ವಲಂತ ಸಮಸ್ಯೆಗಳ ಕುರಿತು ತಜ್ಞರ ಉಪನ್ಯಾಸ, ಸಾಹಿತ್ಯವನ್ನು ಉತ್ತೇಜಿಸುವ ಕೃತಿಗಳ ಲೋಕಾರ್ಪಣೆ, ಸಂಗೀತ, ನೃತ್ಯ, ಜನಪದ ಕಲೆಯನ್ನು ಪ್ರೋತ್ಸಾಹಿಸುವ ಪ್ರದರ್ಶನಗಳು ಹಾಗೂ ಪಾರಂಪರಿಕ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಆಚರಣೆಗಳು ಧರ್ಮ, ಸಂಸ್ಕೃತಿ, ಕಲೆ, ಸಾಹಿತ್ಯದ ಸಂಗಮ ದಸರಾ ಮಹೋತ್ಸವ. ಸಮಾಜದಲ್ಲಿನ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಸಮಾಜಕ್ಕೆ ಅವರಿಂದ ಮತ್ತಷ್ಟು ಸೇವೆ ಸಲ್ಲುವಂತೆ ಪ್ರೇರೇಪಿಸಲಾಗುತ್ತದೆ. ಸಾಹಿತ್ಯ ಸಿರಿ, ಸಾಧನಾ ಸಿರಿ, ಶಿವಾಚಾರ್ಯ ರತ್ನ ಸೇರಿದಂತೆ 5 ಪ್ರಶಸ್ತಿಗಳನ್ನು ಸಮಾರಂಭದಲ್ಲಿ ನೀಡಲಾಗುತ್ತದೆ. ಅಖಿಲ ಭಾರತ ವೀರಶೈವ ವೇದಿಕೆ ಅಧ್ಯಕ್ಷ ಜಯಂತ ಕುಮಾರ್ ಅವರಿಗೆ ಪ್ರತಿಷ್ಠಿತ ರಂಭಾಪುರಿ ಯುವಸಿರಿ ಪ್ರಶಸ್ತಿಗೆ ಹಾಗೂ ವಿವಿಧ ಸಾಧಕರನ್ನು ಇತರ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.