

ತೀರಾ ಅವೈಜ್ಞಾನಿಕವಾಗಿ ಹೇಳುವುದಾದರೆ, ಈಗಿನ ಆರ್ಥಿಕತೆ ವಿಚಿತ್ರವಾಗಿದೆ. ಪ್ರಮುಖ ಟೆಕ್ ಕಂಪನಿಗಳು ಉದ್ಯೋಗಿಗಳ ವಜಾ ಘೊಷಿಸುತ್ತಲೇ ಇವೆ. ಉದ್ಯೋಗಿಗಳನ್ನು ವಜಾಗೊಳಿಸುವುದಕ್ಕೆ ಮೂಲ ಕಾರಣ ಆರ್ಥಿಕ ಹಿಂಜರಿತ ಅಂದರೆ ರಿಸೆಷನ್.
ಈ ಆರ್ಥಿಕ ಹಿಂಜರಿತ ಎಷ್ಟು ದಿನ? ಎಷ್ಟು ತಿಂಗಳು ಇರುತ್ತೆ ಅಂತ ಮಾತ್ರ ಹೇಳೋಕಾಗಲ್ಲ. ಹಾಗಂತ ಇದ್ದಕ್ಕಿದ್ದಂತೆ ಐಟಿ ಕಂಪನಿಗಳು ರಿಸೆಷನ್ ಅಂತ ಘೊಷಣೆ ಕೂಡ ಮಾಡೋದಿಲ್ಲ. ಇದೆಲ್ಲವೂ ಮಾರುಕಟ್ಟೆಯಲ್ಲಿ ನಡೆಯುವ ಒಂದು ಪ್ರಕ್ರಿಯೆ. ನಿಜ ಹೇಳಬೇಕು ಅಂದ್ರೆ ನಮಗೂ ಅದರ ಬಿಸಿ ತಟ್ಟುವವರೆಗೂ ನಾವು ರಿಸೆಷನ್ನಲ್ಲಿ ಇರುವುದು ತಿಳಿದಿರುವುದಿಲ್ಲ.
ಇದೊಂದು ರೀತಿ ಹವಾಮಾನ ವರದಿ ತರಹ. ಮಳೆ ಬರುತ್ತೆ ಅಂತ ಗೊತ್ತಿರೋದೆ ಇಲ್ಲ. ಆದರೆ, ಸಡನ್ ಆಗಿ ವರದಿ ಬರುತ್ತೆ. ಆದ್ರೆ ನಮ್ಮ ಅರಿವಿಗೆ ಬರೋದು ಮಳೆಲಿ ನೆನೆದಾಗಲೆ. ಹಾಗಾದರೆ ಈ ಆರ್ಥಿಕ ಹಿಂಜರಿತವನ್ನು ಎದುರಿಸಿ ನಿಲ್ಲೋದು ಹೇಗೆ ಅನ್ನೋದು ನನ್ನಂತಹ ಕಂಪನಿ ಎಮ್ ಅಥವಾ ಸಿಇಒಗಳಿಗಿರುವ ಸವಾಲಾಗಿದೆ. ಕಂಪನಿಯ ಕಾಸ್ಟ್ ಕಟ್ಟಿಂಗ್ ಮಾಡಬೇಕು. ಆಗ ಸಡನ್ ಆಗಿ ಕಣ್ಣಿಗೆ ಕಾಣೋದೆ ಲೇ ಆಫ್ (ಉದ್ಯೋಗಿಗಳ ವಜಾ). ಸರಿ ಲೇ ಆಫ್ ಮಾಡಿದ್ರೆ ಎಲ್ಲಾ ಸರಿ ಹೋಗುತ್ತಾ? ಮುಂದೆ ಏನು ಮಾಡೋದು| ಈ ಆರ್ಥಿಕ ಹಿಂಜರಿತದಿಂದ ತಪ್ಪಿಸಿಕೊಳ್ಳೋದು ಹೇಗೆ? ಇದರ ಬಗ್ಗೆಯೂ ನಾವು ಯೋಚನೆಯನ್ನು ಮಾಡ್ಬೇಕಾಗುತ್ತೆ.
ಲೇ ಆಫ್ ಉದ್ಯೋಗಿಗಳಿಗೆ ಹಾನಿಕಾರಕ ಅಲ್ಲ. ಆದರೆ ಕಂಪನಿಗಳಿಗೆ ಕಾಸ್ಟಿ್ಲ ಎಫೆಕ್ಟ್ ಆಗುತ್ತೆ. ಏಕೆಂದರೆ, ನೇಮಕಾತಿ ಮತ್ತು ತರಬೇತಿಯು ಕೂಡ ದುಬಾರಿಯಾಗಿದೆ. ಹೀಗೆ ಇದ್ದಾಗ ಏನು ಮಾಡಬೇಕು ಅನ್ನೋದು ಹಲವರ ಪ್ರಶ್ನೆ ಆಗಿರುತ್ತೆ? ಸುಮ್ಮನೆ ಕೂರೋದಿಕ್ಕೆ ಆಗೋದಿಲ್ಲ. ಕಟ್ಟಿರುವ ಕಂಪನಿಯನ್ನು ಉಳಿಸಿಕೊಳ್ಳಬೇಕು. ಇದು ನಮ್ಮ ಜೀವನವೂ ಹೌದು. ಹೀಗಿದ್ದಾಗ ಏನು ಮಾಡುವುದು. ಪೊ›ಡಕ್ಟಿವಿಟಿ ಇಲ್ಲದ ಉದ್ಯೋಗಿಗಳನ್ನು ವಜಾಗೊಳಿಸುವುದು ಮೊದಲ ಕ್ರಮವಾಗಿರುತ್ತೆ. ಇದು ಯಾವುದೇ ಕಂಪನಿಯಾದರೂ ಮಾಡುವ ಮೊದಲ ಕೆಲಸ. ಉದ್ಯೋಗಿಗಳನ್ನು ವಜಾಗೊಳಿಸುವುದು ಸುಲಭವಲ್ಲ. ಆದರೆ ದುರದೃಷ್ಟವಶಾತ್ ಆರ್ಥಿಕ ಕುಸಿತದ ಸಮಯದಲ್ಲಿ ಬೇರೆ ವಿಧಿ ಇಲ್ಲ. ಹಾಗಂತ ಇಲ್ಲಿ ಯಾವುದೂ ಕೂಡ ಸ್ವಯಂ ಪ್ರೇರಣೆಯಿಂದಾಗಿ ಮಾಡುವಂಥದ್ದಾಗಲಿ ಅಥವಾ ವೈಯಕ್ತಿಕ ಕಾರಣಗಳಿಂದಾಗಲಿ ಯಾರನ್ನೂ ವಜಾಗೊಳಿಸುವುದಿಲ್ಲ. ಎಲ್ಲದಕ್ಕೂ ಒಂದು ಮಾನದಂಡ ಇರುತ್ತೆ. ಅದೇ ಮಾನದಂಡದಲ್ಲಿಯೇ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತದೆ.
ಒಂದು ಐಟಿ ಕಂಪನಿಯ ಮಾಲೀಕಳಾಗಿ ಹೇಳುವುದಾದರೆ ಇದು ಕೂಡ ಒಂದು ಸವಾಲಿನ ಕೆಲಸ. ಯಾಕೆಂದರೆ ಒಬ್ಬ ಪ್ರತಿಭಾವಂತ ಉದ್ಯೋಗಿಯನ್ನು ಹುಡುಕಿ ಕೆಲಸಕ್ಕೆ ತೆಗೆದುಕೊಳ್ಳೋದು ಹೇಗೋ ಹಾಗೇ ಈ ಸಂಕಷ್ಟ ಸಂದಿಗ್ಧ ಪರಿಸ್ಥಿತಿಯಲ್ಲಿ ಅಂತಹ ಪ್ರತಿಭೆ ಉಳಿಸಿಕೊಳ್ಳುವುದು ಕೂಡ ಸವಾಲಿನ ಕೆಲಸವೇ ಆಗಿರುತ್ತೆ. ಒಂದು ಕಡೆ ಟೀಮ್ ಮೆಂಬರ್ ಆಗಿರ್ತಾರೆ. ಮತ್ತೊಂದು ಕಡೆ ಕಂಪನಿಯ ಮಾಡೆಲ್ ಗೊತ್ತಿರುತ್ತೆ. ಟೀಮ್ ಬೆಳೆದಿರುತ್ತೆ. ಹೀಗಿರುವಾಗ ಸಡನ್ ಆಗಿ ಲೇ ಆಫ್, ರಿಸೆಶನ್ ಅನ್ನೋ ಪದಗಳು ಕಿವಿಗೆ ಬೀಳುತ್ತಿದ್ದ ಹಾಗೆ ಎಲ್ಲೋ ಒಂದು ಕಡೆ ಎಲ್ಲರ ಮನಸ್ಸಲ್ಲೂ ತಳಮಳ ಶುರುವಾಗಿಬಿಡುತ್ತೆ. ಹೇಳುವವರಿಗೂ ಕಷ್ಟ, ಕೇಳುವವರಿಗೂ ಕಷ್ಟ. ಆದರೆ, ಇದು ಹೊಸತು ಅಲ್ಲ. ಶಾಶ್ವತವೂ ಅಲ್ಲ. ಎಲ್ಲದಕ್ಕೂ ಒಂದು ಕೊನೆ ಇದ್ದೇ ಇರುತ್ತೆ. ಹಾಗೇ ಈಗ ಒದಗಿರುವ ಆರ್ಥಿಕ ಸಂಕಷ್ಟಕ್ಕೂ ಒಂದು ಪೂರ್ಣ ವಿರಾಮ ಅಲ್ಲದೆ ಇದ್ದರೂ ವಿರಾಮವಂತೂ ಖಂಡಿತ ಇದ್ದೇ ಇರತ್ತೆ. ಆದರೆ, ಅಲ್ಲಿಯವರೆಗೂ ಸಂಭಾಳಿಸುವುದೆ ಜಾಣತನ ಹಾಗೂ ಸವಾಲಿನ ಕೆಲಸ ಕೂಡ.
ಇವೆಲ್ಲವನ್ನೂ ದಾಟಿಯೇ ನಾನು ಈಗ ಈ ಸ್ಥಿತಿಗೆ ತಲುಪಿರುವುದು. ಉದ್ಯೋಗಿಯಾಗಿದ್ದಾಗ ನಾನು ಕೂಡ ರಿಸೆಷನ್, ಲೆ ಆಫ್ ಅಂತಹ ಸಮಸ್ಯೆಗಳನ್ನು ಎದುರಿಸಿದ್ದೀನಿ. ಈಗ ನನ್ನ ಉದ್ಯೋಗಿಗಳನ್ನು ನೋಡಿದಾಗ ನನಗೆ ಆ ದಿನಗಳೇ ನೆನಪಾಗುತ್ತವೆ. ಹಾಗಾಗಿ ನಾನು ನನ್ನ ಉದ್ಯೋಗಿಗಳಿಗೆ ಆಗಲಿ ಅಥವಾ ಬೇರೆ ಯಾರಿಗೆ ಅದರೂ ಹೇಳುವುದು ಒಂದೇ ಧೃತಿಗೆಡಬೇಡಿ. ಇದು ಎಲ್ಲಿಯೇ ಇದ್ದರೂ ಹೇಗೆ ಇದ್ದರೂ ಆಗಬೇಕಿದ್ದರೆ ಆಗೇ ಆಗುತ್ತೆ.
ಉದ್ಯೋಗಿಗಳಿಗೆ ಸಹಜವಾಗಿ ಅನ್ನಿಸುತ್ತೆ. ಹಣ ಇದ್ದರೂ ಸಂಬಳ ಕೊಡೋದಿಲ್ಲ, ಸತಾಯಿಸುತ್ತಾರೆ. ಈಗ ಕಂಪನಿ ಬೆಳೆಯಿತಲ್ಲ ನಮ್ಮ ಅವಶ್ಯಕತೆ ಇಲ್ಲ; ನಾವಿಲ್ಲದಿದ್ದರೆ ಹೇಗೆ ಕಂಪನಿ ಬೆಳೆಯುತ್ತೆ... ಇವೆಲ್ಲ ಮಾತುಗಳು ನನಗೆ ಹೊಸತಲ್ಲ. ಹಾಗೇ ಉದ್ಯೋಗಿಗಳು ಮಾತಾಡುವುದರಲ್ಲಿ ತಪ್ಪು ಇಲ್ಲ, ಯಾಕೆಂದರೆ ಅವರಿಗೆ ಮೇಲ್ನೋಟಕ್ಕೆ ಎಷ್ಟು ತಿಳಿದಿರುತ್ತೋ ಅಷ್ಟನ್ನು ಮಾತ್ರ ಹೇಳ್ತಾರೆ. ನಿಜ ತಿಳಿದರೆ ಬಹುಶಃ ಅವರು ಹಾಗೆ ಮಾತಾಡದೆ ಲೇ ಆಫ್ ಮಾಡಿದ್ದೆ ಸರಿ ಅಂದರೂ ಅನ್ನಬಹುದು.
ಇದು ಸಿಂಪಲ್, ನಿಮ್ಮ ಮನೆಯಲ್ಲಿ ದುಡಿಯುವ ಕೈ ಚೆನ್ನಾಗಿದ್ದಾಗ ಎಲ್ಲವೂ ಸರಿ ಇರುತ್ತೆ, ಒಮ್ಮೆ ಆ ದುಡಿಯುವ ಕೈ ನಿಂತಾಗ ಆಗ ಎಲ್ಲವೂ ತಲೆ ಕೆಳಗಾಗುತ್ತೆ. ಒಮ್ಮೆಗೆ ತಲೆ ಮೇಲೆ ಕೈ ಹೊತ್ತು ಕೂರಬೇಕಾಗುತ್ತೆ. ಮುಂದೆ ಕುಟುಂಬ ಹೇಗೆ ನಡೆಯಬೇಕು, ನಡೆಸೋದು ಯಾರು, ಓದು ಬಿಡಬೇಕು, ಕೆಲಸ ಹುಡುಕಬೇಕು ಹೀಗೆ ನಾನಾ ರೀತಿಯ ಸವಾಲುಗಳು. ಒಂದು ಕಂಪನಿ ಕೂಡ ಹಾಗೆಯೇ. ಒಂದು ಕಂಪನಿ ನಡೆಸೋದು ಮೊದಲನೆಯದಾಗಿ ಸುಲಭವಲ್ಲ. ಆದರೂ ಧೈರ್ಯದಿಂದ ಒಂದು ಕಂಪನಿ ಕಟ್ಟಿ ಉದ್ಯೋಗ ನೀಡುವುದು ಸುಲಭವಲ್ಲ. ಹಾಗೆ ಆ ಉದ್ಯೋಗಿಗಳಿಗೆ ಪ್ರತಿ ತಿಂಗಳು ಸಂಬಳ ನೀಡಲೇಬೇಕು. ಅವರು ಪೊ›ಡಕ್ಟೀವ್ ಆಗಿರಲಿ ಆಗದೇ ಇರಲಿ. ಗೀವ್ ಎ ಚಾನ್ಸ್ ಒನ್ಸ್ ಎಗೈನ್ ಅನ್ನೋ ಪಾಲಿಸಿಯನ್ನು ಫಾಲೋ ಮಾಡೇ ಮಾಡ್ತೀವಿ. ಹಾಗಾದ್ರೂ ತಿದ್ದಿಕೊಳ್ಳದೆ ಕಂಪನಿಗೆ ಆ ಉದ್ಯೋಗಿಯಿಂದ ಹೊರೆ ಆಗ್ತಿದೆ ಅಂದ್ರೆ ಆದಷ್ಟು ಭಾರವನ್ನು ಕಡಿತ ಮಾಡಿಕೊಳ್ಳಲೇಬೇಕು.
ಕಂಪನಿ ಎಷ್ಟೇ ದುಡಿದರೂ ಅದು ಇನ್ವೆಸ್ಟರ್ಸ್ ಮೇಲೆ ಅವಲಂಬಿತವಾಗಿರೋದು ಸುಳ್ಳಲ್ಲ. ಆರ್ಥಿಕ ಹಿನ್ನಡೆ ಇದ್ದಾಗ ಇನ್ವೆಸ್ಟರ್ಸ್ ಕೂಡ ಸುಲಭವಾಗಿ ಸಿಗೋದಿಲ್ಲ. ಪ್ರಾಜೆಕ್ಟ್ ಗಳು ಕೈ ತಪ್ಪುತ್ತೆ. ಸಂಬಳ ಸರಿಯಾದ ಸಮಯಕ್ಕೆ ಸಿಗದೆ ಹೋದಾಗ ಇರುವ ಉದ್ಯೋಗಿಗಳು ಕೂಡ ಕೆಲಸ ಮಾಡುವ ಮನಸ್ಸು ಮಾಡದೆ ಎಷ್ಟೊ ಕೈಗೆ ಬಂದ ಪ್ರಾಜೆಕ್ಟ್ ಗಳು ಮುಂದುವರಿಯದೆ ಅರ್ಧಕ್ಕೆ ಕೈಜಾರಿದ್ದೂ ಇದೆ. ಇವೆಲ್ಲ ಸಮಸ್ಯೆಗಳು ಕೇವಲ ಕಂಪನಿಯ ಮಾಲೀಕನ ಹೆಗಲ ಮೇಲೆ ಇರುತ್ತೆ ಹೊರತು ಯಾವ ಉದ್ಯೋಗಿಯೂ ಜವಾಬ್ದಾರಿಯನ್ನು ಹೊರುವುದಿಲ್ಲ. ಹೀಗಿರುವಾಗ ಕಂಪನಿಯಾದರೂ ಏನು ಮಾಡಬೇಕು? ಇರುವ ಖರ್ಚುಗಳಲ್ಲಿ ಎಷ್ಟೇ ಕಡಿತ ಮಾಡಿದರೂ ಸಮಸ್ಯೆಯಂತೂ ಬಗೆಹರಿಯದೆ ಇದ್ದಾಗ ಲೇ ಆಫ್ ಒಂದೇ ಮಾರ್ಗವಾಗಿರುತ್ತೆ. ವಜಾ ಮಾಡಲೇಬೇಕು.
ಇಂತಹ ಸಂದರ್ಭದಲ್ಲಿ ಏನಾದರೂ ಸಾಧಿಸಿದವರು ನಮ್ಮ ಕಣ್ಣ ಮುಂದೆ ಬರುತ್ತಾರೆ. ನನಗೆ ಹಾಗೆ ಕಾಣಿಸಿದ್ದು ಸಮೋಸ ಸಿಂಗ್. ಹೌದು ಸಿಂಗ್ ದಂಪತಿಯು ಒಳ್ಳೆಯ ಕೆಲಸ ಬಿಟ್ಟು ತಮ್ಮದೆ ಸ್ವಂತ ಉದ್ಯಮ ಆರಂಭಿಸಿ ಲಾಭದಾಯಕ ಸಂತೋಷದ ಜೀವನ ಕಟ್ಟಿಕೊಂಡವರು. ಶೈನ್ವಶೆಟ್ಟಿ ನಟನೆ ಇಲ್ಲದಾಗ ಮೊಬೈಲ್ ಕ್ಯಾಂಟೀನ್ ನಡೆಸಿ ಜೀವನ ಕಂಡುಕೊಂಡರು. ಎಲ್ಲರೂ ಇದೇ ಮಾಡಬೇಕೆಂದು ಇಲ್ಲ. ಬದಲಿಗೆ ಸಾಕಷ್ಟು ಸ್ಟಾರ್ಟ್ ಅಪ್ ಯೋಜನೆಗಳು ಇವೆ. ಅವುಗಳನ್ನು ನಮ್ಮ ಪ್ರತಿಭೆಗೆ ತಕ್ಕ ಹಾಗೆ ಬಳಸಿಕೊಳ್ಳಬೇಕು. ಆದರೆ, ಇದು ಕಂಪನಿ ಹಾಗೂ ಉದ್ಯೋಗಿಗಳು ಎರಡೂ ವರ್ಗಕ್ಕೂ ಒಂದು ಕಷ್ಟದ ಸಮಯ. ತುಂಬಾ ನಾಜೂಕಾಗಿ ವ್ಯವಹರಿಸಬೇಕಾದಂತಹ ಸಮಯ. ಇಲ್ಲಿ ಉದ್ಯೋಗಿಗಳಿಗೆ ಎಷ್ಟು ಎಫೆಕ್ಟ್ ಆಗಿರುತ್ತೋ ಕಂಪನಿಗೂ ಇನ್ನೊಂದು ರೀತಿಯಲ್ಲಿ ಎಫೆಕ್ಟ್ ಆಗಿರುತ್ತೆ. ಆದರೆ, ಉದ್ಯೋಗಿಗಳಿಗೆ ಸ್ವಲ್ಪ ಕಷ್ಟಕರವಾಗಬಹುದು. ಹೀಗಿದ್ದಾಗ ಬಹುಶಃ ನಾನು ಇಂತಹ ಸಂದರ್ಭವನ್ನು ಎದುರಿಸಿದಾಗ ಅನುಸರಿಸಿದ ಕೆಲ ಟಿಪ್ಸ್ ಅನ್ನ ಇಲ್ಲಿ ಶೇರ್ ಮಾಡಬಹುದು.
ವಜಾ ಆದ ಉದ್ಯೋಗಿ ಆಗಿರಬಹುದು ಅಥವಾ ವಜಾಗೊಳಿಸಿದ ಮಾಲೀಕನಿಗೂ ಇರಬಹುದು. ಈ ಕಷ್ಟಕರ ಸಮಯ ಅವರ ವಿಶಾಸಾರ್ಹತೆ ಮೇಲೆ ಬರೆ ಎಳೆಯುತ್ತೆ. ಆದರೆ, ಇದೇ ಕೊನೆ ಅಲ್ಲ. ಮುಂದೇನು ಎನ್ನುವುದನ್ನು ಮೊದಲು ಯೋಚಿಸಲು ಶುರು ಮಾಡಬೇಕು. ಈ ಸಮಸ್ಯೆಗೆ ಅಂತ್ಯ ಹಾಡುವುದು ಹೇಗೆ ಅನ್ನುವುದನ್ನು ಯೋಚಿಸಬೇಕು. ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ವ್ಯಕ್ತಿಯ ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮದ ಮೇಲೆ ಶಾಶ್ವತವಾದ ಪರಿಣಾಮವನ್ನು ಬೀರುವ ಸನ್ನಿವೇಶಗಳು ಎದುರಾಗಬಹುದು. ಅವೆಲ್ಲವನ್ನೂ ಮಾನಸಿಕವಾಗಿ ಎದುರಿಸಲು ಸಿದ್ಧರಾಗಲೇಬೇಕು.
ನಿಮ್ಮ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಸಮಯ ತೆಗೆದುಕೊಳ್ಳಿ ಮತ್ತು ಇದು ಪ್ರಪಂಚದ ಅಂತ್ಯವಲ್ಲ ಅನ್ನೋದನ್ನ ಮೊದಲು ತಿಳಿಯಬೇಕು. ನಿಮ್ಮ ಬಗ್ಗೆ ನೀವು ಮೊದಲು ಸೌಮ್ಯವಾಗಿರಿ. ನಿಮ್ಮ ಭಾವನೆಗಳನ್ನು ಒಪ್ಪಿಕೊಳ್ಳಿ. ದುಃಖದ ಎಲ್ಲಾ ಹಂತಗಳನ್ನು ಅನುಭವಿಸಲು ನಿಮ್ಮ ಮನಸ್ಸಿನಲ್ಲಿ ಜಾಗ ಕೊಡಿ. ನಿಮ್ಮ
ಆತ್ಮವಿಶ್ವಾಸವನ್ನು ಮರಳಿ ಪಡೆಯಿರಿ. ಇದು ಸಾಧ್ಯ ಆಗೋದು ನಿಮ್ಮ ಸುತ್ತ ಯಾರು ಇದ್ದಾರೆ ಎನ್ನುವುದರ ಮೇಲೆ. ಸಾಮಾಜಿಕ ಸಂಪರ್ಕಗಳನ್ನು ಹುಡುಕಿ, ನಿಮ್ಮನ್ನು ಭಾವನಾತ್ಮಕವಾಗಿ ಬೆಂಬಲಿಸುವ ಯಾರೊಂದಿಗಾದರೂ ಮಾತನಾಡಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ.
ನಿಮಗೆ ನೀವೆ ತಾಯಿ ಆಗಿ. ನಿಮ್ಮ ಆರೈಕೆಯನ್ನು ನೀವೆ ಮಾಡಿಕೊಳ್ಳಿ. ಯಾರೋ ಬಂದು ನಿಮ್ಮನ್ನು ಓಲೈಸ್ತಾರೆ ಅಂತ ಎದರು ನೋಡುವ ಬದಲು ನಿಮ್ಮನ್ನ ನೀವು ಸಂತೈಸಿಕೊಳ್ಳಿ. ಪ್ರೀತಿಸಿ. ಸಮಾಧಾನ ಮಾಡಿಕೊಳ್ಳಿ. ಆಗ ಇನ್ನೊಬ್ಬರು ಹೇಳುವುದು ಕೂಡ ಅರ್ಥವಾಗುತ್ತೆ. ಇಲ್ಲವಾದರೆ ನಿಮ್ಮ ಮನಸ್ಸು ಹತೋಟಿ ತಪ್ಪುವುದು ಸಹಜ. ನಿಮ್ಮನ್ನು ಸಂತೈಸಲು ಬಂದವರ ಮೇಲೆ ನೀವು ಕೋಪಗೊಂಡರೂ ಆಶ್ಚರ್ಯ ಇಲ್ಲ. ಒತ್ತಡದ ಕ್ಷಣದಲ್ಲಿ ಅಥವಾ ನಿಮ್ಮ ದಿನವನ್ನು ಪ್ರಾರಂಭಿಸುವ ಮೊದಲು ನಿಮಗೆ ಕೆಲವು ಸಕಾರಾತ್ಮಕ ಕೊಟೇಷನ್ಗಳನ್ನು ಓದುವುದು ಅಭ್ಯಾಸವಾಗಿದ್ದರೆ ಕಂಟಿನ್ಯೂ ಮಾಡಿ. ರಿಪೀಟ್ ಮಾಡಿ. ಹಾಗೆ ಮಾಡಿದಾಗ ಪ್ರತಿದಿನ ಜೀವನವನ್ನು ಮರುಹೊಂದಿಸಲು ಸಹಾಯವಾಗುತ್ತೆ.
ದಿನವಿಡೀ ಸಕ್ರಿಯರಾಗಿರಿ. ವ್ಯಾಯಾಮ ಅಥವಾ ಕೆಲಸಗಳನ್ನು ಮಾಡುವ ಮೂಲಕ. ಆತಂಕವನ್ನು ಕಡಿಮೆ ಮಾಡಲು ಮತ್ತು ಸಕಾರಾತ್ಮಕ ದೃಷ್ಟಿಕೋನವನ್ನು ಕಾಪಾಡಿಕೊಳ್ಳಲು. ಇಂತಹ ಸಮಯದಲ್ಲಿ ಹೊಸದನ್ನು ಅಳವಡಿಸಿಕೊಳ್ಳುವುದು ಮತ್ತು ಕಲಿಯುವುದನ್ನು ಮಾಡಿ. ಇವು ಚೇತರಿಸಿಕೊಳ್ಳಲು, ಪುಟಿದೇಳಲು ನಿಮಗೆ ಸಹಾಯ ಮಾಡುತ್ತವೆ. ಮಾರ್ಕೆಟ್ ನಲ್ಲಿ ಇನ್ನೂ ಹೊರಗೆ ಬಾರದೆ ಇರುವ ಅದೆಷ್ಟೋ ಉತ್ಪನ್ನಗಳು ಅಡಗಿ ಕುಳಿತಿರುತ್ತವೆ. ಅವುಗಳ ಬಗ್ಗೆ ಅಧ್ಯಯನ ನಡೆಸಿ. ಬೇಕಾದರೆ ಒಂದು ಸಣ್ಣ ಟೀಮ್ ಕಟ್ಟಿಕೊಳ್ಳಿ. ತಂಡದ ಸಹಾಯದಿಂದ ಈ ಆರ್ಥಿಕ ಹಿಂಜರಿತದ ಹೊಡೆತದಿಂದ ಚೇತರಿಸಿಕೊಳ್ಳುವ ಮಾರ್ಗ ಇದೆಯೆಂದು ಹುಡುಕಿ. ಯಾವುದಾದರೂ ಮಾರ್ಗ ಇರಲೇಬೇಕಲ್ಲ. ಖಂಡಿತ ಇದ್ದೇ ಇರತ್ತೆ. ಅದರ ಬಗ್ಗೆ ಯೋಚಿಸಿ.
ಯಾವ ಪ್ರಾಡಕ್ಟ್ ಅನ್ನು ವಿನೂತನವಾಗಿ ಲಾಂಚ್ ಮಾಡಿದರೆ ಉತ್ತಮ ಅಂತ ಆಲೋಚಿಸಿ. ಹಿಂದೆ ಮಾಡಿದ ತಪ್ಪುಗಳನ್ನು ಈ ಬಾರಿ ಸರಿದೂಗಿಸಿಕೊಳ್ಳೋಕೆ ಸಮಯ ಮೀಸಲಿಡಿ.
ಲೇ ಆಫ್ ಆಗಿರುವುದು ಒಂದು ದೊಡ್ಡ ಬ್ರೇಕ್ ಆಗಿರಬಹುದು ಅಥವಾ ಸಣ್ಣ ಬ್ರೇಕ್ ಕೂಡ ಆಗಿರಬಹುದು. ಬ್ರೇಕ್ ಸಿಕ್ಕರೆ ಸಾಕು ಅಂತಿರುವವರಿಗೆ ಇದು ಒಳ್ಳೆ ಅವಕಾಶ. ಏನಾದರೂ ಒಂದು ಹೊಸತನ್ನು ಕಲಿಯಲು ಈ ಸಮಯ ಬಂಗಾರದಂತಹ ಸಮಯವೇ ಆಗಿರುತ್ತೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕೆಲವರಿಗೆ ಸಂಗೀತದಲ್ಲಿ ಆಸಕ್ತಿ. ಇನ್ನೂ ಕೆಲವರಿಗೆ ಯೋಗದಲ್ಲಿ ಆಸಕ್ತಿ. ಮತ್ತೆ ಕೆಲವರಿಗೆ ತಮ್ಮದೇ ಸ್ವಂತದ್ದೇನಾದರೂ ಮಾಡಬೇಕು ಅಂತಿರುವಾಗ ಈ ಸಮಯ ಸೂಕ್ತ. ಅವರಲ್ಲಿ ಏನೇ ಪ್ರತಿಭೆ ಇದ್ದರೂ ಅದನ್ನು ಒರೆಗೆ ಹಚ್ಚಿ ಶುರು ಮಾಡಬಹುದು. ಲಕ್ ಚೆನ್ನಾಗಿದ್ದರೆ ಕೈ ಹಿಡಿದು ಮತ್ತೆ ಇನ್ಯಾರ ಮುಂದೆಯೂ ಕೆಲಸಕ್ಕೆ ಕೈ ಚಾಚುವ ಅವಕಾಶವೇ ಬಾರದೇ ಇರಬಹುದು. ಕೆಲವರಿಗೆ ಓದುವ ಹವ್ಯಾಸ, ಇನ್ನೂ ಕೆಲವರಿಗೆ ಬರೆಯುವ ಹವ್ಯಾಸ. ಎರಡಕ್ಕೂ ಈಗ ಸಮಯ ತುಂಬಾ ಇದೆ. ತಮ್ಮದೇ ಯೂ ಟ್ಯುಬ್ ಚಾನೆಲ್ ಆರಂಭಿಸಬಹುದು. ಅಡುಗೆ ಕಲಿತು ಕಲಿಸಲೂಬಹುದು. ಡಿಸೈನಿಂಗ್ ವೇರ್ ಇಷ್ಟಪಡುವವರು ಈಗ ತಾವೇ ಸ್ವತಃ ಕಲಿತು ಒಂದು ಬೊಟಿಕ್ ಶುರು ಮಾಡಬಹುದು. ಸಿನಿಮಾದಲ್ಲಿ ಆಸಕ್ತಿ ಇರುವವರು ಸ್ಕ್ರಿಪ್ಟ್ ಬರೆಯಲೂಬಹುದು. ಮೊಬೈಲ್ನಲ್ಲೇ ಶಾರ್ಟ್ ಮೂವಿ ತೆಗೆಯಬಹುದು. ಯೋಗ ಕಲಿತವರು ಯೋಗ ಕಲಿಸಿಕೊಡಬಹುದು. ನೃತ್ಯ ಕಲಿತವರು ನೃತ್ಯ ಕಲಿಸಬಹುದು. ಮಾಡಲು ಬೇಕಾದಷ್ಟಿದೆ. ಅದಕ್ಕೆ ಬೇಕಾದ ಸಮಯವೂ ಸಿಕ್ಕಿದೆ. ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು ಅಷ್ಟೇ.
ಮನಸ್ಸನ್ನು ನಕಾರಾತ್ಮಕ ಚಿಂತೆಗಳ ಕಡೆಗೆ ಹರಿಬಿಡದೆ ಸಕಾರಾತ್ಮಕವಾಗಿ ಯೋಚಿಸಬೇಕು. ಸಿಕ್ಕಿರುವ ಈ ಅವಕಾಶವನ್ನು ಹೇಗೆ ರಿ ಅರೆಂಜ್ ಮಾಡಿಕೊಂಡು ಯಾವುದಕ್ಕಾಗಿ ಈ ಸಮಯವನ್ನು ವಿನಿಯೋಗಿಸಲಿ ಅಂತ ಯೋಚಿಸಿದರೆ ಬಹುಶಃ ಅವರಲ್ಲಿ ಅವರೇ ಹೊಸತನವನ್ನು ಕಾಣಬಹುದು.
(ಲೇಖಕರು ಪ್ರಸಿದ್ಧ ಮಹಿಳಾ ಉದ್ಯಮಿ)