ಆತುರದ ಲಗ್ನ ತಂದ ಆಪತ್ತು

edite
Published on
aa kshana
ರಾಮಚಂದ್ರ ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ಒಬ್ಬ ಶ್ರೀಮಂತ ಪ್ರಗತಿಪರ ರೈತ. ಆತ ಮತ್ತವನ ಪತ್ನಿ ಸುಷ್ಮಾಗೆ ಒಬ್ಬನೇ ಮಗ, ಶ್ರೇಯಸ್. ಆತ ತೋಟಗಾರಿಕೆ ಇಲ್ಲವೇ ಕೃಷಿ ವಿಷಯದಲ್ಲಿ ಪದವಿ ಪಡೆಯಬೇಕು, ತಮ್ಮ ತೋಟವನ್ನು ಅಭಿವೃದ್ಧಿಪಡಿಸಬೇಕು ಎಂದು ರಾಮಚಂದ್ರ ಮತ್ತವನ ಪತ್ನಿಗೆ ಬಹಳ ಆಸೆಯಿತ್ತು. ಆದರೆ ಚಿಕ್ಕಂದಿನಿಂದಲೇ ಕೆಟ್ಟ ಸಹವಾಸ ಮಾಡುತ್ತಾ ದುಶ್ಚಟಗಳಿಗೆ ಬಿದ್ದಿದ್ದ ಶ್ರೇಯಸ್ ಪಿ.ಯು.ಸಿ. ಫೇಲಾದ ನಂತರ ತಾನು ಮುಂದೆ ಕಲಿಯುವುದಿಲ್ಲ ಎಂದು ಹಠ ಹಿಡಿದ. ‘ಹೋಗಲಿ, ತೋಟದ ಕೆಲಸವನ್ನಾದರೂ ನೋಡಿಕೋ’ ಎಂದು ಅವನಿಗೆ ರಾಮಚಂದ್ರ ಹೇಳಿದರೆ ಅದರಲ್ಲಿಯೂ ಆತ ಆಸಕ್ತಿ ತೋರಿಸಲಿಲ್ಲ. ಅವನಿಗೆ ಬೇಗ ಮದುವೆ ಮಾಡಿದರೆ ಆತ ಸುಧಾರಿಸಬಹುದು ಎಂದು ರಾಮಚಂದ್ರ ನಿಶ್ಚಯಿಸಿದರು. ಅವನ 26ನೇ ಹುಟ್ಟುಹಬ್ಬ ಆಚರಿಸಿದ ಮರುದಿನದಿಂದಲೇ ಸೂಕ್ತ ವಧುಗಳಿಗಾಗಿ ಹುಡುಕಾಡತೊಡಗಿದರು. ಆದರೆ ಶ್ರೇಯಸ್​ಗೆ ಹೆಣ್ಣನ್ನು ಕೊಡಲು ಯಾರೂ ಮುಂದೆ ಬರಲಿಲ್ಲ. ಯಾರಾದರೂ ಮುಂದೆ ಬಂದರೂ ಬಂದ ಹೆಣ್ಣನ್ನು ಶ್ರೇಯಸ್ ಒಪ್ಪುತ್ತಿರಲಿಲ್ಲ. ಹೀಗೆಯೇ ಐದು ವರ್ಷಗಳು ಕಳೆದವು. ತಮ್ಮ ಮಗನಿಗೆ ಕಂಕಣ ಬಲ ಕೂಡಿ ಬರಲೇ ಇಲ್ಲವೆಂದು ರಾಮಚಂದ್ರ ಮತ್ತು ಸುಷ್ಮಾ ಚಿಂತಾಕ್ರಾಂತರಾದರು. ಕಂಡ ಕಂಡ ದೇವರಿಗೆ ಹರಕೆ ಹೊತ್ತರು. ನೂರಾರು ಜ್ಯೋತಿಷಿಗಳಿಗೆ ಮಗನ ಜಾತಕ ತೋರಿಸಿದರು. ಪ್ರತಿಯೊಬ್ಬರೂ ‘ಇನ್ನು ಒಂದೇ ವರ್ಷದಲ್ಲಿಯೇ ನಿಮ್ಮ ಮನೆಗೆ ಸೊಸೆ ಬರುತ್ತಾಳೆ’ ಎಂದು ಆಶ್ವಾಸನೆ ಕೊಟ್ಟರು. ಆದರೆ ಯಾವ ಸಂಬಂಧವೂ ಬಾರದೇ ಹೋದಾಗ ರಾಮಚಂದ್ರ ದಂಪತಿ ತಲೆಯ ಮೇಲೆ ಕೈಹೊತ್ತು ಕುಳಿತರು.

ಹೀಗಿರುವಾಗ ಒಂದು ದಿನ ರಾಮಚಂದ್ರರ ಮನೆಗೆ ಮಧ್ಯವಯಸ್ಸಿನ ಹೆಣ್ಣುಮಗಳೊಬ್ಬಳು ಬಂದಳು. ‘ಸರ್, ನನ್ನ ಹೆಸರು ಸುಭದ್ರ. ನಾನು ಕರ್ನಾಟಕ ರಾಜ್ಯದ ಗಡಿ ಭಾಗದಲ್ಲಿರುವ ಊರೊಂದರಲ್ಲಿ ವಾಸವಾಗಿರುವೆ. ನನಗೆ ಮಕ್ಕಳಿಲ್ಲ. ನನ್ನ ಪತಿ ಐದು ವರ್ಷದ ಹಿಂದೆ ದೈವಾಧೀನರಾದ ಬಳಿಕ ನಾನು ಸಮಾಜ ಸೇವೆ ಮಾಡಲೆಂದು ಮದುವೆ ಬ್ರೋಕರ್ ಕೆಲಸ ಮಾಡಲು ಆರಂಭಿಸಿದೆ. 32 ವರ್ಷ ವಯಸ್ಸಿನ ನಿಮ್ಮ ಮಗನಿಗೆ ನೀವು ಹೆಣ್ಣು ಹುಡುಕುತ್ತಿದ್ದೀರಿ ಎಂದು ನನಗೆ ಪರಿಚಯಸ್ಥರಿಂದ ತಿಳಿಯಿತು. ನನ್ನ ಬಳಿ ಕೆಲವು ಜನರ ವಿವರಗಳಿವೆ. ನಾನು ನಿಮ್ಮ ಮಗನಿಗೆ ಯಾವುದಾದರೂ ಹೆಣ್ಣನ್ನು ಸೂಚಿಸಬಹುದೇ?’ ಎಂದು ಕೇಳಿದಳು.

ರಾಮಚಂದ್ರ ಮತ್ತು ಸುಷ್ಮಾಗೆ ಸ್ವರ್ಗವೇ ಕೈಗೆ ಸಿಕ್ಕಂತಾಯಿತು. ‘ದೇವರು ಬಂದಂತೆ ಇಂದು ನಮ್ಮ ಮನೆ ಬಾಗಿಲಿಗೆ ಬಂದಿರಿ, ಖಂಡಿತಾ ಯಾವುದಾದರೂ ಒಳ್ಳೆಯ ಹೆಣ್ಣಿದ್ದರೆ ಬೇಗನೆ ತಿಳಿಸಿ, ಲಗ್ನ ಮಾಡುವೆ’ ಎಂದರು. ‘ಆಗಲಿ, ನಾನು ಊರಿಗೆ ಹೋಗಿ ವಿಚಾರಿಸುವೆ. ಯಾವುದಾದರೂ ಹೆಣ್ಣು ಸಿಕ್ಕರೆ ಖಂಡಿತಾ ನಿಮಗೆ ಫೋನ್ ಮಾಡುವೆ’ ಎಂದು ಹೇಳಿ ಹೊರಟುಹೋದಳು.

ಇದಾದ ಒಂದು ವಾರದ ನಂತರ ಸುಭದ್ರಾ ಫೋನ್ ಮೂಲಕ ರಾಮಚಂದ್ರರನ್ನು ಸಂರ್ಪಸಿ ‘ನಿಮ್ಮ ಅದೃಷ್ಟ ಚೆನ್ನಾಗಿದೆ, ನಮ್ಮ ಊರಿಗೆ ಹತ್ತಿರವಿರುವ ಗ್ರಾಮವೊಂದರಲ್ಲಿ ತೀರಾ ಬಡ ಕುಟುಂಬದ ಒಬ್ಬ ಸ್ಪುರದ್ರೂಪಿ ಕನ್ಯೆಯಿದ್ದಾಳೆ. ಚಿಕ್ಕವಯಸ್ಸಿನಲ್ಲೇ ಅವಳ ಮಾತಾಪಿತರು ಆಕ್ಸಿಡೆಂಟ್ ಒಂದರಲ್ಲಿ ವಿಧಿವಶರಾದ್ದರಿಂದ ಆಕೆಯನ್ನು ಅವಳ ಚಿಕ್ಕಪ್ಪ, ಚಿಕ್ಮಮ್ಮನೇ ನೋಡಿಕೊಳ್ಳುತ್ತಾ ಇದ್ದಾರೆ. ಅವಳಿಗೆ 26 ವರ್ಷ ವಯಸ್ಸಾಗಿದೆ. ಎಸ್.ಎಸ್.ಎಲ್.ಸಿ. ವರೆಗೆ ಓದಿದ್ದಾಳೆ. ಅವಳನ್ನು ನಿಮ್ಮ ಕುಟುಂಬವು ಪರಿಗಣಿಸಬಹುದೇ? ನಿಮ್ಮಂತಹ ಶ್ರೀಮಂತ ಕುಟುಂಬಕ್ಕೆ ಬಡಕನ್ಯೆಯೊಬ್ಬಳನ್ನು ಸೂಚಿಸುತ್ತಿರುವೆನೆಂದು ಬೇಸರ ಪಟ್ಟುಕೊಳ್ಳಬೇಡಿ’ ಎಂದು ಹೇಳಿದಳು. ಸಂತಸಗೊಂಡ ರಾಮಚಂದ್ರ, ‘ಆಗಲಿ, ಅವರನ್ನು ಇಲ್ಲಿಗೆ ಕರೆತನ್ನಿ, ನಾನೇ ಬೇಕಾದರೆ ಬಸ್ ಚಾರ್ಜನ್ನು ಕೊಡುವೆ, ನಮ್ಮ ಮಗ ಅವಳನ್ನೊಮ್ಮೆ ನೋಡಲಿ’ ಎಂದುತ್ತರಿಸಿದರು. ‘ಸಾಹೇಬರೇ, ಒಂದೇ ಒಂದು ತೊಂದರೆಯಿದೆ. ಕನ್ಯೆಯು ಬಡ ಕುಟುಂಬಕ್ಕೆ ಸೇರಿದವಳು. ಅವಳ ಪೋಷಕರಿಗೆ ಅವಳ ಮದುವೆ ಮಾಡಿಕೊಡಲು ಹಣವೇ ಇಲ್ಲ. ಹೀಗಾಗಿ ಮದುವೆ ಖರ್ಚನ್ನು ನೀವೇ ನೋಡಿಕೊಳ್ಳಬೇಕು. ಮದುವೆಯಾದ ನಂತರ ಅವಳ ಚಿಕ್ಕಮ್ಮ ಮತ್ತು ಚಿಕ್ಕಪ್ಪ ವರ್ಷಕ್ಕೊಮ್ಮೆ ತಮ್ಮ ಮಗಳನ್ನು ನೋಡಿಕೊಂಡು ಹೋಗಲು ಬರುತ್ತಾರೆ’ ಎಂದಳು.

‘ಆಗಲಿ, ಮೊದಲು ಹೆಣ್ಣನ್ನು ಕರೆತನ್ನಿ ನೋಡೋಣ’ ಎಂದರು ರಾಮಚಂದ್ರ. ಮುಂದಿನ ವಾರವೇ ಬ್ರೋಕರ್ ಸುಭದ್ರಾ ತನ್ನ ಜೊತೆ 26 ವರ್ಷ ವಯಸ್ಸಿನ ಯುವತಿ ಸುಜಾತಾ ಹಾಗೂ ಆಕೆಯ ಚಿಕ್ಕಪ್ಪ ನಾಗರಾಜ, ಚಿಕ್ಕಮ್ಮ ಕೋಮಲಾರನ್ನು ರಾಮಚಂದ್ರರ ಮನೆಗೆ ಕರೆತಂದಳು. ರಾಮಚಂದ್ರ ಮತ್ತವರ ಪತ್ನಿ ಅವರೊಡನೆ ಮಾತನಾಡಿದ ನಂತರ ಶ್ರೇಯಸ್ ಸಹ ಸುಜಾತಾಳನ್ನು ನೋಡಿ ಅವಳನ್ನು ಲಗ್ನವಾಗಲು ಒಪ್ಪಿದ. ಆನಂತರ ಬ್ರೋಕರ್ ಸುಭದ್ರಾ, ‘ಸಾಹೇಬರೇ, ಸುಜಾತಾ ಮತ್ತವಳ ಕುಟುಂಬಕ್ಕೆ ಊರಿಗೆ ಹೋಗಿ ಮತ್ತೆ ಇಲ್ಲಿಗೆ ಲಗ್ನಕ್ಕೆ ಬರುವುದೆಂದರೆ ತುಂಬಾ ಖರ್ಚಾಗುತ್ತದೆ, ಇನ್ನೊಂದು ವಾರ ಹತ್ತು ದಿನಗಳಲ್ಲಿ ಮಹೂರ್ತವಿಡಿಸಿದರೆ ಈಗಲೇ ಲಗ್ನ ಮಾಡಿಕೊಟ್ಟು ಹೊರಟುಹೋಗುತ್ತಾರೆ’ ಎಂದಳು.

ಬಂದ ಸಂಬಂಧವನ್ನು ಬಿಟ್ಟರೆ ಮುಂದೆ ಏನಾಗುವುದೋ ಏನೋ ಎಂದು ಯೋಚಿಸಿದ ರಾಮಚಂದ್ರ ದಂಪತಿ ಬಂದಿದ್ದ ನಾಲ್ಕೂ ಜನರಿಗೆ ಹೊಟೆಲ್ ಒಂದರಲ್ಲಿ ಕೋಣೆಗಳನ್ನು ಬುಕ್ ಮಾಡಿಸಿದರು. ತಮ್ಮ ಕುಟುಂಬದ ಜ್ಯೋತಿಷಿಯನ್ನು ಸಂರ್ಪಸಿ ಶ್ರೇಯಸ್ ಮತ್ತು ಸುಜಾತಾಳ ಜಾತಕವನ್ನು ತೋರಿಸಿದರು. ಜಾತಕಗಳು ಕೂಡುತ್ತವೆಂದ ಆ ಜ್ಯೋತಿಷಿ ‘ಮುಂದಿನ ವಾರವೇ ಲಗ್ನವನ್ನು ಮಾಡಬಹುದು’ ಎಂದ. ಆ ಮೇರೆಗೆ ಮುಂದಿನ ವಾರವೇ ರಾಮಚಂದ್ರ ತಮ್ಮೂರಿನಲ್ಲಿಯೇ ಮಗನ ವಿವಾಹವನ್ನು ಅದ್ಧೂರಿಯಾಗಿ ಮಾಡಿದರು. ವಿವಾಹದಲ್ಲಿ ಸೊಸೆಗೆ 10 ತೊಲಕ್ಕಿಂತ ಹೆಚ್ಚು ತೂಕದ ಬಂಗಾರದ ಆಭರಣಗಳನ್ನು, ಸಾಕಷ್ಟು ಸೀರೆಗಳನ್ನು ತೆಗೆಸಿಕೊಟ್ಟರು. ಮದುವೆಯಾದ ಎರಡೇ ದಿನಗಳ ನಂತರ ವಧುವಿನ ಚಿಕ್ಕಪ್ಪ ರಾಮಚಂದ್ರರನ್ನು ಭೇಟಿ ಮಾಡಿ, ‘ಸಾಹೇಬರೇ ನಮ್ಮ ಕುಲದ ಸಂಪ್ರದಾಯದಂತೆ ನಾವು ಮಗಳನ್ನು ಎರಡು ದಿನ ನಮ್ಮ ಮನೆಗೆ ಕರೆದುಕೊಂಡು ಹೋಗಿ ಬರಬೇಕಾಗುತ್ತದೆ. ನೀವು ಒಪ್ಪಿದರೆ ಅವಳನ್ನು ನಮ್ಮೂರಿಗೆ ಕರೆದುಕೊಂಡು ಹೋಗಿ ಮುಂದಿನ ವಾರವೇ ಇಲ್ಲಿಗೆ ಕರೆತಂದು ಬಿಡುತ್ತೇವೆ’ ಎಂದ. ರಾಮಚಂದ್ರ ಒಪ್ಪಿದರು. ಸುಜಾತಾ ತನ್ನ ಚಿಕ್ಕಪ್ಪ, ಚಿಕ್ಕಮ್ಮಳೊಂದಿಗೆ ತನ್ನೂರಿಗೆ ಹೊರಟುಹೋದಳು. ಹೋಗುವಾಗ ತನಗೆ ಮದುವೆಯ ಸಮಯದಲ್ಲಿ ಕೊಟ್ಟಿದ್ದ ಎಲ್ಲ ಒಡವೆಗಳನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿಕೊಂಡು ಹೋದಳು.

ಒಂದು ವಾರದ ನಂತರವೂ ಸುಜಾತಾ ಮನೆಗೆ ಮರಳದಿದ್ದಾಗ ಗಾಬರಿಯಾದ ರಾಮಚಂದ್ರ ಬ್ರೋಕರ್ ಸುಭದ್ರಾಳಿಗೆ ಕರೆ ಮಾಡಿದರು. ಅವಳ ಫೋನ್ ಸ್ವಿಚ್ ಆಫ್ ಆಗಿತ್ತು. ದಿನವಿಡೀ ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಸುಜಾತಳಾಗಲೀ, ಅವಳ ಚಿಕ್ಕಪ್ಪ/ಚಿಕ್ಕಮ್ಮನಾಗಲೀ ಸೆಲ್ ಫೋನ್ ಹೊಂದಿರಲಿಲ್ಲ. ಅವರ ವಿಳಾಸ ಇಲ್ಲವೇ ಸಂಪರ್ಕ ವಿವರಗಳು ಯಾವುವೂ ರಾಮಚಂದ್ರರ ಬಳಿ ಇರಲಿಲ್ಲ. ಆಕೆಯ ಊರು ಕರ್ನಾಟಕ ರಾಜ್ಯದ ಗಡಿಪ್ರದೇಶ ಎಂದು ತಿಳಿದಿತ್ತೇ ಹೊರತು ಮದುವೆ ಮಾಡುವ ಭರದಲ್ಲಿ ಬೇರೆ ಯಾವ ವಿವರಗಳನ್ನೂ ರಾಮಚಂದ್ರ ತಿಳಿದುಕೊಂಡಿರಲಿಲ್ಲ. ಹೀಗಾಗಿ ಯಾರನ್ನು ವಿಚಾರಿಸುವುದು ಎಂದೇ ಅವರಿಗೆ ತಿಳಿಯಲಿಲ್ಲ. ಸುಮಾರು ಹತ್ತು ದಿನಗಳು ಕಾದ ನಂತರ ರಾಮಚಂದ್ರ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಸುಜಾತಾ ಕಾಣೆಯಾಗಿದ್ದಾಳೆ ಎಂದು ದೂರು ನೀಡಿ ಅವಳ ಹಾಗೂ ಅವಳ ಚಿಕ್ಕಪ್ಪ ಚಿಕ್ಕಮ್ಮನ ಭಾವಚಿತ್ರವನ್ನೂ ಕೊಟ್ಟರು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಮ್ಮ ಹಾಗೂ ನೆರೆಯ ರಾಜ್ಯಗಳ ಪೊಲೀಸ್ ಠಾಣೆಗಳಿಗೆ ಆ ಮೂರು ಭಾವಚಿತ್ರಗಳನ್ನೂ ರವಾನಿಸಿದರು. ಸುಭದ್ರ್ರಾಳ ಫೋನ್ ಟ್ರ್ಯಾಕ್ ಮಾಡಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಸುಮಾರು ಒಂದು ವರ್ಷವಾದರೂ ಯಾವುದೇ ಮಾಹಿತಿ ಸಿಗಲಿಲ್ಲ.

ಏತನ್ಮಧ್ಯೆ ನಾಶಿಕ್ ಪೊಲೀಸ್ ಠಾಣೆಯಲ್ಲಿದ್ದ ಇನ್ಸ್​ಪೆಕ್ಟರ್ ಬೇರೊಂದು ಜಿಲ್ಲೆಯ ಪೊಲೀಸ್ ಠಾಣೆಗೆ ವರ್ಗವಾಗಿದ್ದರು. ಒಂದು ದಿನ ಅವರ ಮುಂದೆ ನಾಮದೇವ ಎಂಬ ಹೆಸರಿನ ಸುಮಾರು ನಲವತ್ತು ವರ್ಷದ ವಿಧುರ ದೂರೊಂದನ್ನು ತಂದ. ತನಗೆ ಮರುಮದುವೆಯನ್ನು ಮಾಡಿಸುತ್ತೇನೆ ಎಂದು ಹೇಳಿಕೊಂಡು ಬಂದ ಬ್ರೋಕರ್ ಒಬ್ಬಳು ಶ್ರೀದೇವಿ ಎನ್ನುವ ಕನ್ಯೆಯನ್ನು ತನಗೆ ತೋರಿಸಿದಳೆಂದೂ ತಾನು ಶ್ರೀದೇವಿಯನ್ನು ಲಗ್ನವಾದದ್ದಾಗಿಯೂ ತಿಳಿಸಿದ. ಮದುವೆಯಾದ ಮಾರನೆಯ ದಿನವೇ ಶ್ರೀದೇವಿ ತನ್ನ ಚಿಕ್ಕಮ್ಮ ಚಿಕ್ಕಪ್ಪನ ಜತೆ ತನ್ನ ಮನೆಯಿಂದ ಸುಮಾರು ಆರು ಲಕ್ಷ ರೂ.ಗಳ ಒಡವೆಗಳನ್ನು ತೆಗೆದುಕೊಂಡು ಪರಾರಿಯಾದಳೆಂದು ತಿಳಿಸಿದ. ದೂರುದಾರರಿಂದ ನಾಲ್ಕೂ ಆರೋಪಿಗಳ ಫೋಟೋಗಳನ್ನು ಪಡೆದ ಇನ್ಸ್​ಪೆಕ್ಟರ್, ಇದೇ ಆರೋಪಿತರೇ ಈ ಹಿಂದೆ ನಾಶಿಕ್​ನ ಅಪರಾಧವನ್ನು ಮಾಡಿದ್ದಿರಬಹುದೆಂದು ಸಂಶಯಿಸಿದರು. ಅವರು ನಾಶಿಕ್​ನಿಂದ ಆರೋಪಿಗಳ ಫೋಟೋಗಳನ್ನು ತರಿಸಿ ನಾಮದೇವನಿಗೆ ತೋರಿಸಿದರು. ಆತ ಅವರನ್ನೇ ಆರೋಪಿಗಳೆಂದು ಗುರುತಿಸಿದ. ನಾಮದೇವನಿಗೆ ಮದುವೆ ಬ್ರೋಕರ್ ಕೊಟ್ಟಿದ್ದ ಮೊಬೈಲ್ ನಂಬರ್​ಗೆ ಕಾಲ್ ಮಾಡಿದಾಗ ಅದು ಸ್ವಿಚ್ ಆಫ್ ಆಗಿತ್ತು. ಆ ಫೋನ್ ಚಾಲೂ ಆದ ಕೂಡಲೇ ವಿವರಗಳನ್ನು ಕೊಡಬೇಕೆಂದು ತನಿಖಾಧಿಕಾರಿ ಸೆಲ್ ಫೋನ್ ಕಂಪನಿಗೆ ಮನವಿ ಮಾಡಿದರು.

ನಾಲ್ಕೈದು ವಾರಗಳ ನಂತರ ಬ್ರೋಕರ್​ಳ ಫೋನ್ ಕೊಲ್ಹಾಪುರದಲ್ಲಿ ಚಾಲನೆಗೆ ಬಂದಿದೆ ಎಂಬ ಮಾಹಿತಿ ಬಂತು. ತಡಮಾಡದೇ ಪೊಲೀಸರು ಅಲ್ಲಿಗೆ ಹೋಗಿ ಫೋನ್ ಟವರ್ ಲೊಕೇಷನ್ ಮೇರೆಗೆ ಬ್ರೋಕರ್​ಳನ್ನು ಪತ್ತೆ ಮಾಡಿದರು. ಆಕೆ ತನ್ನ ಹೆಸರನ್ನು ಮಂಗಳಾ ಎಂದು ತಿಳಿಸಿ ವಧುವಾಗಿ ನಟಿಸುತ್ತಿದ್ದವಳು ತನ್ನ ಮಗಳೇ ಆದ ಶ್ಯಾಮಲಾ ಎಂದಳು. ಅವಳ ಚಿಕ್ಕಪ್ಪ- ಚಿಕ್ಕಮ್ಮನೆಂದು ನಟಿಸಿದವರು ತನ್ನ ಅಣ್ಣ-ಅತ್ತಿಗೆ ಎಂದಳು. ಇದೇ ರೀತಿಯ ನಾಟಕವಾಡಿ ತಾವು ಐದು ಜನರಿಗೆ ಮೋಸ ಮಾಡಿರುವುದಾಗಿ ತಿಳಿಸಿದಳು. ಅವಳ ಮಾಹಿತಿಯ ಮೇರೆಗೆ ಇತರ ಎಲ್ಲ ಆರೋಪಿಗಳನ್ನೂ ಬಂಧಿಸಲಾಯಿತು. ಮುಂದೆ ಅವರೆಲ್ಲರ ವಶದಿಂದ ಸುಮಾರು ನಾಲ್ಕು ಲಕ್ಷ ರೂ. ಬೆಲೆಯ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು. ನಾಮದೇವನಿಗೆ ಮೋಸ ಮಾಡಿದ ಪ್ರಕರಣದಲ್ಲಿ ಎಲ್ಲರಿಗೂ ಐದು ವರ್ಷ ಜೈಲು ಶಿಕ್ಷೆಯಾಯಿತು. ಉಳಿದ ಮೂರು ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿವೆ. 17ನೆಯ ಶತಮಾನದ ಇಂಗ್ಲಿಷ್ ನಾಟಕಕಾರ, ಕವಿ ವಿಲಿಯಂ ಕಾಂಗ್ರೀವ್ ತನ್ನ ಹಾಸ್ಯ ನಾಟಕ ‘ಓಲ್ಡ್ ಬ್ಯಾಚಲರ್’ನಲ್ಲಿ ಹೇಳಿರುವ ಈ ಮಾತುಗಳು ಇಂದಿಗೂ ಪ್ರಸ್ತುತವಲ್ಲವೇ? ಸುಖದ ಬೆನ್ನಲ್ಲೇ ಆವರಿಸುವುದು ದುಃಖ; ಆತುರದಲ್ಲಿ ಲಗ್ನವಾದವ ಪಡುವುದು ವಿರಾಮದ ಪಶ್ಚಾತ್ತಾಪ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net