ಭಕ್ತಿಸಾಮ್ರಾಟ ಶ್ರೀ ಚೈತನ್ಯರ ದಕ್ಷಿಣ ಭಾರತ ದಿಗ್ವಿಜಯ

Chaitanya Jayanti
Published on

ಶ್ರೀ ಚೈತನ್ಯ ಮಹಾಪ್ರಭುಗಳು ನಮ್ಮ ದೇಶದ ಮಹಾನ್ ಸಂತರ ಶ್ರೇಣಿಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಯುಗಾವತಾರಿ. ದೇವರ ಕುರಿತು ಎಣೆಯಿಲ್ಲದ ಪ್ರೀತಿ, ಮಧುರ ಭಾವನೆಗಳನ್ನು ಇಟ್ಟುಕೊಳ್ಳುವುದು ಮುಖ್ಯ ಎಂದು ಅವರು ಸಾರಿದರು. ಕಾಲದ ಪ್ರಭಾವದಿಂದ ಈ ಭಕ್ತಿಮಾರ್ಗದಲ್ಲಿ ಗಾಢ ಅಂಧಕಾರ ಕವಿದಿತ್ತು. ಚೈತನ್ಯರು ಆ ಪಥದ ಕತ್ತಲು ಸರಿಸಿದರು, ಬೆಳಕು ಹರಿಸಿದರು.

|ಡಾ. ಚಿಂತಾಮಣಿ ಕೊಡ್ಲೆಕೆರೆ

chintamani Kodlekere1
ಶ್ರೀ ಚೈತನ್ಯರು ಜನಿಸಿದ್ದು ಫಾಲ್ಗುಣ ಮಾಸದ ಪೌರ್ಣಮಿಯಂದು. (8.3. 1486 ಫೆಬ್ರವರಿ 18). ಬಂಗಾಳದ ನವದ್ವೀಪ ನಗರದ ಶ್ರೀಧಾಮ ಮಾಯಾಪುರದಲ್ಲಿ ಚೈತನ್ಯರು ಜನಿಸಿದರು. ತಂದೆ ಜಗನ್ನಾಥ ಮಿಶ್ರಾ ಪಂಡಿತರು, ತಾಯಿ ಶಚೀದೇವಿ. ಚೈತನ್ಯರು ಜೀವಿಸಿದ್ದುದು ಕೇವಲ ನಲವತ್ತೆಂಟು ವರ್ಷಗಳ ಕಾಲ. ತಮ್ಮ ಊರಿನಲ್ಲಿ ಅವರು ಹದಿನಾರನೇ ವಯಸ್ಸಿಗೇ ಚತುಷ್ಪಾಠಿ (ಹಳ್ಳಿಯ ಶಾಲೆ) ಆರಂಭಿಸಿದರು! ಅವರ ಶಿಷ್ಯ ಶ್ರೀಲ ಜೀವಗೋಸ್ವಾಮಿಯವರು ಹರಿನಾಮಾಮೃತ ವ್ಯಾಕರಣ ರಚಿಸಿದರು. ಅದರಲ್ಲಿ ವ್ಯಾಕರಣದ ನಿಯಮಗಳನ್ನು ಭಗವಂತನ ದಿವ್ಯನಾಮ ಬಳಸಿ ವಿವರಿಸಲಾಗಿದೆ. ಚೈತನ್ಯರ ಪಾಠದಲ್ಲಿ ಶ್ರೀ ಕೃಷ್ಣ ಮತ್ತೆ ಮತ್ತೆ ಅವತರಿಸುತ್ತಿದ್ದ ಎಂದು ಬೇರೆ ಹೇಳಬೇಕಿಲ್ಲ. ನವದ್ವೀಪದಲ್ಲಿ ಅವರು ನಾಮ ಸಂಕೀರ್ತನೆಯ ಮೂಲಕ ಲೋಕ ಶಿಕ್ಷಣವನ್ನೂ ಆರಂಭಿಸಿದರು. ಇಪ್ಪತ್ತನಾಲ್ಕನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದರು. ತಮ್ಮ ಮೂವತ್ತನೇ ವರ್ಷದವರೆಗೂ ಪ್ರಭುಗಳು ದೇಶ ಪರ್ಯಟನೆ ಗೈದರು. ಮುಂದೆ ಅವರು ನಾಮ ಸಂಕೀರ್ತನೆ ಗೈಯುತ್ತಾ ಜಗನ್ನಾಥಪುರಿಯಲ್ಲಿಯೇ ಉಳಿದರು. ಆರು ವರ್ಷಗಳ ದೇಶ ಪರ್ಯಟನೆಯ ಕಾಲದಲ್ಲಿ ಅವರು ದಕ್ಷಿಣ ಭಾರತದ ವಿವಿಧ ಕ್ಷೇತ್ರಗಳಿಗೆ ಬಂದಿದ್ದಿದೆ. ಈ ಲೇಖನದಲ್ಲಿ ಆ ಕುರಿತು ಸಂಗ್ರಹವಾಗಿ ತಿಳಿಯೋಣ.

ನಾಮ ಸಂಕೀರ್ತನವು ಚೈತನ್ಯರ ಜೀವಿತ ಕಾಲದಲ್ಲಿಯೇ ಒಂದು ಚಳವಳಿಯಂತೆ ಹಬ್ಬತೊಡಗಿತು. ಶ್ರೀಲ ನಿತ್ಯಾನಂದ ಪ್ರಭು, ಠಾಕುರ ಹರಿದಾಸ, ಅದೈತ ಪ್ರಭು, ಶ್ರೀನಿವಾಸ ಠಾಕುರ ಮುಂತಾಗಿ ಅನೇಕರು ಚೈತನ್ಯರ ಜೊತೆ ಕೈ ಜೋಡಿಸಿದರು. ಆರು ಗೋಸ್ವಾಮಿಗಳು ಹಾಗೂ ಇನ್ನೂ ಕೆಲವು ಶಿಷ್ಯರನ್ನು ಸಂಕೀರ್ತನ ಪ್ರಚಾರಕ್ಕೆ ಪ್ರಭುಗಳು ನಿಯೋಜಿಸಿದರು. ಸ್ವತಃ ಚೈತನ್ಯರು ದೇಶದೆಲ್ಲೆಡೆ ಸಂಚರಿಸಿ ಹರಿನಾಮ ಸುಧೆ ಹರಿಸಿದರು. ಈ ಪ್ರವಾಸವನ್ನು ಏಕಾಂಗಿಯಾಗಿ ಮಾಡಬೇಕು ಎಂಬುದು ಅವರ ಆಸೆಯಾಗಿತ್ತು. ದೈವೋನ್ಮಾದದಿಂದ ಸ್ಮೃತಿ ತಪ್ಪುವ ಅವರ ರಕ್ಷಣೆಗಾಗಿ ಕೃಷ್ಣದಾಸನೆಂಬ ಒಬ್ಬ ಭಕ್ತನನ್ನಾದರೂ ಅವರು ಕರೆದುಕೊಂಡು ಹೋಗಬೇಕು ಎಂದು ಭಕ್ತರೆಲ್ಲರೂ ಆಗ್ರಹಿಸಿ ಒಪ್ಪಿಸಿದರು. ತಮ್ಮ ಪ್ರವಾಸದಲ್ಲಿ ಗೋದಾವರಿ ನದಿ ತಟದಲ್ಲಿರುವ ವಿದ್ಯಾನಗರ ಪಟ್ಟಣದಲ್ಲಿರುವ ರಾಮಾನಂದರಾಯ ಎಂಬ ಅಧಿಕಾರಿಯನ್ನು ಭೇಟಿ ಮಾಡುವಂತೆ ಸಾರ್ವಭೌಮ ಭಟ್ಟಾಚಾರ್ಯರು ವಿನಂತಿಸಿದರು. ಚೈತನ್ಯರು ಅದಕ್ಕೆ ಒಪ್ಪಿಕೊಂಡರು.

ತಾವು ಭೇಟಿಯಿತ್ತ ಹಳ್ಳಿ ಹಳ್ಳಿಗಳಲ್ಲೂ ಪ್ರಭುಗಳು 'ಹರಿ', 'ಹರಿ' ಎಂದು ಉಚ್ಚರಿಸುವಂತೆ ಭಕ್ತರಿಗೆ ಹೇಳುತ್ತಿದ್ದರು. ಚೈತನ್ಯರ ಮಾಧುರ್ಯಪೂರ್ಣ ಮಾತುಗಳಿಂದ ಪ್ರಭಾವಿತರಾದವರೆಲ್ಲರೂ ಅವರ ಅನುಯಾಯಿಗಳಾಗಿ ವಿಷ್ಣು ಭಕ್ತರಾದರು. ಭಾರತದ ಮೂಲೆ ಮೂಲೆಯಲ್ಲೂ ಅವರು ಭಕ್ತರ ತಂಡವನ್ನೇ ಹುಟ್ಟುಹಾಕಿದರು. ಅವರು ಸಂದರ್ಶಿಸಿದ ಕೆಲವು ಊರುಗಳನ್ನು ಮಾತ್ರ ಈ ಲೇಖನದಲ್ಲಿ ಪ್ರಸ್ತಾಪಿಸಿದೆ. ಇಲ್ಲಿರುವ ಊರುಗಳ ಹೆಸರುಗಳು ಆ ಕಾಲದವು. ಆರಂಭದಲ್ಲಿ ಮಹಾಪ್ರಭುಗಳು ಭೇಟಿ ನೀಡಿದ ಊರುಗಳಲ್ಲಿ ಕೂರ್ಮಕ್ಷೇತ್ರ ಮುಖ್ಯವಾದುದು. ಇದು ರಾಮಾನುಜಾಚಾರ್ಯರಿಂದ ಪುನರ್ ಪ್ರತಿಷ್ಠಾಪನೆಗೊಂಡಿರುವ ಪುಣ್ಯಕ್ಷೇತ್ರ. ದೈವೀ ಅನುಭೂತಿಯಿಂದ ನೃತ್ಯ ಮಾಡುವ ಶ್ರೀ ಚೈತನ್ಯ ಮಹಾಪ್ರಭುಗಳಿಂದ ಎಲ್ಲರೂ ಪ್ರಭಾವಿತಗೊಂಡರು. ಭಕ್ತರೆಲ್ಲರೂ ಪ್ರೇಮಪರವಶತೆಯಿಂದ ನರ್ತಿಸಲಾರಂಭಿಸಿದರು. ತಾವು ತಂಗಿದ ಮನೆಗಳಲ್ಲಿ ಪ್ರಸಾದ ಸ್ವೀಕರಿಸಿದ ಬಳಿಕ ಶ್ರೀ ಚೈತನ್ಯರು ನಾಮ ಸಂಕೀರ್ತನೆ ಮಾಡುವಂತೆ ಬೋಧಿಸುತ್ತಿದ್ದರು. ಶ್ರೀಕೃಷ್ಣ ಆಂದೋಲನದ ಮಹತ್ವವನ್ನು ವಿವರಿಸುತ್ತಿದ್ದರು. ಪರ್ಯಟನೆಯಲ್ಲಿ ರಾತ್ರಿ ದೇವಾಲಯದಲ್ಲೋ, ಮರದ ನೆರಳಲ್ಲೇ ತಂಗುತ್ತಿದ್ದರು. ಪುರಿಗೆ ಹಿಂತಿರುಗುವವರೆಗೂ ಪ್ರಭುಗಳು ಧರ್ಮಪ್ರಸಾರವನ್ನು ಇದೇ ರೀತಿಯಾಗಿ ಮುಂದುವರಿಸಿದರು. ಕುಷ್ಠದಿಂದ ಬಳಲುತ್ತಿದ್ದ ವಾಸುದೇವನೆಂಬ ಭಕ್ತನನ್ನು ಅವರು ಆಲಿಂಗನದಿಂದ ಗುಣಪಡಿಸಿದರು. ಆತನಿಗೂ ಹರೇ ಕೃಷ್ಣ ಮಂತ್ರವನ್ನು ಉಪದೇಶಿಸಿದರು. ಮುಂದೆ ವಿಶಾಖಪಟ್ಟಣದ ಹತ್ತಿರದ 'ಜಿಯಡ ನೃಸಿಂಹ' ಎಂಬ ಪುಣ್ಯ ಕ್ಷೇತ್ರಕ್ಕೆ ಹೋದರು. ಅಲ್ಲಿಂದ ಮುಂದೆ ಗೋದಾವರಿ ನದಿ ತಟದ ಊರುಗಳಿಗೆ ಹೋದರು. ಗೋದಾವರಿ ನದಿಯನ್ನು ನೋಡಿದ ಚೈತನ್ಯ ಪ್ರಭುಗಳಿಗೆ ಅದು ಯಮುನಾ ನದಿಯನ್ನು ನೋಡಿದಂತೆಯೇ ಅನಿಸಿ ಭಾವಾವಿಷ್ಟರಾದರು. ವಿದ್ಯಾನಗರದಲ್ಲಿ ರಾಮಾನಂದರಾಯರ ಭೇಟಿಯಾಯಿತು. 'ಹರೇ ರಾಮ ಹರೇ ಕೃಷ್ಣ' ಇವರಿಬ್ಬರಿಗೂ ಮೂಲ ಮಂತ್ರ. ಶ್ರೀ ರಾಮಾನಂದರಾಯರು ಚೈತನ್ಯರ ಪಾದಗಳಿಗೆ ಎರಗಿ ‘ನಾನು ನಿಮ್ಮ ದಾಸ' ಎಂದು ಹೇಳಿದರು. ಪ್ರಭುಗಳು ಅವರನ್ನು ಅಪ್ಪಿಕೊಂಡರು. 'ಇಂಥ ಶ್ರೇಷ್ಠ ಸನ್ಯಾಸಿಗಳು ಸಾಮಾನ್ಯರಾದ ರಾಮಾನಂದರಾಯರಿಗೆ ಅಪ್ಪುಗೆಯಿಂದ ಪ್ರೀತಿ ತೋರಿಸುವುದೇ' ಎಂದು ಚೈತನ್ಯರ ನಡವಳಿಕೆಯನ್ನು ಕೆಲ ಭಕ್ತರು ಆಕ್ಷೇಪಿಸಿದರು. ಚೈತನ್ಯ ಪ್ರಭುಗಳು ಹೇಳಿದರು- 'ಜಾತಿ ಅಲ್ಲ, ಕೃಷ್ಣ ಪ್ರಜ್ಞೆ ಮುಖ್ಯ'. ತದನಂತರ ಇಬ್ಬರೂ ಅನೇಕ ಸಲ ಭೇಟಿ ಮಾಡಿ ಸಂವಾದ ನಡೆಸಿದರು. ಶ್ರೀ ಕೃಷ್ಣನ ಸನ್ನಿಧಿ ಸೇರುವುದಕ್ಕೆ ಮಾಧುರ್ಯಭಾವ ಸಹಕರಿಸುತ್ತದೆ, ಇಂಥ ಪ್ರೇಮ ತೋರುವ ಭಕ್ತನಿಗೆ ಶ್ರೀಕೃಷ್ಣ ಒಲಿಯುತ್ತಾನೆ ಎಂದು ರಾಯರು ಅರಿತರು. ಪುರಿಯಲ್ಲಿ ಈ ಕುರಿತು ಇನ್ನಷ್ಟು ಚರ್ಚಿಸೋಣ ಎಂದು ರಾಯರಿಗೆ ಹೇಳಿ ಅಲ್ಲಿಯ ಹನುಮಂತನ ದೇವಾಲಯಕ್ಕೆ ಭೇಟಿ ನೀಡಿ ಚೈತನ್ಯರು ಪ್ರವಾಸ ಮುಂದುವರಿಸಿದರು.

ದಕ್ಷಿಣ ಭಾರತಕ್ಕೆ ಪ್ರಭುಗಳು ಭೇಟಿ ನೀಡುವ ಮುನ್ನ ಇಲ್ಲಿ ಅನೇಕ ಕಡೆ ಇತರ ತತ್ವಜ್ಞಾನ, ಧರ್ಮಗಳದ್ದೇ ಪ್ರಾಬಲ್ಯ ಇತ್ತು. ತಮ್ಮ ಮೃದು ವಚನಗಳಿಂದ ಚೈತನ್ಯರು ಇಲ್ಲೆಲ್ಲ ಪರಿವರ್ತನೆ ಸಾಧಿಸಿದರು. ರಾಜಮಹೇಂದ್ರಿ ನಗರದ ಎದುರಿನ ಗೌತಮಿ ಗಂಗಾ ನದಿಯಲ್ಲಿ ಸ್ನಾನಗೈದು, ಅಲ್ಲಿ ಹಿಂದೆ ನೆಲೆಸಿದ್ದ ಗೌತಮರನ್ನು ನೆನೆದು, ಮಲ್ಲಿಕಾರ್ಜುನ ತೀರ್ಥಕ್ಕೆ ಹೋಗಿ ಶಿವದರ್ಶನ ಮಾಡಿದರು. ಮುಂದೆ ಅಹೋಬಲ ನೃಸಿಂಹನ ದೇವಾಲಯಕ್ಕೆ ಹೋದರು. ಅದಕ್ಕೂ ಮುಂದೆ ಸಿದ್ಧವಟಾಗೆ ಭೇಟಿ ನೀಡಿ ಶ್ರೀ ರಾಮಚಂದ್ರನ ವಿಗ್ರಹವನ್ನು ಕಂಡರು. ಹೀಗೇ ಪ್ರವಾಸ ಮುಂದುವರಿಸಿ ಅವರು ವೃದ್ಧ ಕಾಶಿಗೆ ಬಂದು ಶಿವನ ಗುಡಿ ಸಂದರ್ಶಿಸಿದರು. ಅದೇ ಈಗ ವೃದ್ಧಾಚಲಂ ಆಗಿದೆ. ವಿತಂಡವಾದ ಮಂಡಿಸಲು ಬಂದವರನ್ನು ಚರ್ಚೆಯಲ್ಲಿ ಪರಾಜಯಗೊಳಿಸಿ, ಕೃಷ್ಣ ಪ್ರಜ್ಞೆಯನ್ನು ಪುನರುತ್ಥಾನ ಮಾಡುತ್ತಾ ಚೈತನ್ಯರು ಮುಂದುವರಿದರು. ಮುಂದೆ ಅವರು ತಿರುಪತಿ ತಿರುಮಲನ ದರ್ಶನ ಪಡೆದರು. ಬಳಿಕ ಪಾನಕ ನೃಸಿಂಹ ದೇವಾಲಯಕ್ಕೆ ಭೇಟಿ ನೀಡಿದರು. ಇದು ಕಾಂಚಿಯಿಂದ ಐದು ಮೈಲಿ ದೂರದಲ್ಲಿದೆ. ವಿಷ್ಣುಕಂಚಿಯಲ್ಲಿ ಎರಡು ದಿನ ತಂಗಿದ್ದ ಪ್ರಭುಗಳು ಅಲ್ಲಿ ದೈವೋನ್ಮಾದದಿಂದ ನರ್ತಿಸಿದರು. ತ್ರಿಕಾಲಹಸ್ತಿ, ಪಕ್ಷಿತೀರ್ಥ, ವೃದ್ಧಕೋಲ, ಶಿಯಾಲಿ ಭೈರವಿ, ಅಮೃತಲಿಂಗ ದೇವಾಲಯ, ಕುಂಭಕರ್ಣ ಕಪಾಲದ ವಿಶಾಲ ಸರೋವರ, ಶಿವಕ್ಷೇತ್ರ, ಪಾಪನಾಶದಲ್ಲಿರುವ ವಿಷ್ಣು ದೇವಾಲಯ... ಮುಂತಾದ ಕಡೆ ಭೇಟಿ ನೀಡಿ ಅಲ್ಲಿಯ ಭಕ್ತರನ್ನೆಲ್ಲಾ ವೈಷ್ಣವರನ್ನಾಗಿ ಪರಿವರ್ತಿಸಿದರು. ಮುಂದೆ ತಮಿಳುನಾಡಿನ ಮಧುರೈ ಜಿಲ್ಲೆಯ ವೃಷಭ ಪರ್ವತದಲ್ಲಿರುವ ಶ್ರೀಮನ್ನಾರಾಯಣನ ದೇವಾಲಯಕ್ಕೆ ಬಂದರು. ಬಳಿಕ ಚೈತನ್ಯರು ಶ್ರೀಶೈಲಕ್ಕೆ ಭೇಟಿ ನೀಡಿದರು. ತದನಂತರ ಕಾಮಕೋಷ್ಠಿಪುರಿಗೆ ತೆರಳಿ ಅಲ್ಲಿಂದ ದಕ್ಷಿಣ ಮಧುರೆಗೆ ಹೋದರು. ಮುಂದೆ ಅವರು ಪಾಂಡ್ಯದೇಶಕ್ಕೆ (ಕೇರಳ) ತೆರಳಿದರು. ಕೇರಳದ ವಿವಿಧ ಜಾಗಗಳಿಗೂ ಭೇಟಿ ನೀಡಿದರು, ಕನ್ಯಾಕುಮಾರಿಯನ್ನು ಕಂಡರು, ಮುಂದೆ ಮಲ್ಲಾರಕ್ಕೆ ಭೇಟಿ ಕೊಟ್ಟರು (ದಕ್ಷಿಣ ಕನ್ನಡ). ಅಲ್ಲಿ ಅವರು ಅಲೆಮಾರಿ ಭಟ್ಟಾದ್ರಿಗಳೊಂದಿಗೆ ಉಂಟಾದ ಸಮಸ್ಯೆಯನ್ನು ಹರೇಕೃಷ್ಣ ಮಂತ್ರದಿಂದಲೇ ಜೈಸಿದರು. ಅನಂತಪದ್ಮನಾಭ, ಪಯಸ್ವಿನಿ ನದಿ ದಂಡೆಯಲ್ಲಿರುವ ಶಂಕರನಾರಾಯಣನ ಗುಡಿಗಳನ್ನು ಸಂದರ್ಶಿಸಿ ಶೃಂಗೇರಿ ಮಠಕ್ಕೆ ಪಯಣ ಬೆಳೆಸಿದರು. ಅಲ್ಲಿಂದ ಉಡುಪಿಗೆ ಭೇಟಿ ನೀಡಿದರು. ಚೆಲುವ ಕೃಷ್ಣ ಮೂರ್ತಿಯನ್ನು ಕಂಡು ಅವರಿಗೆ ಭಕ್ತಿಯ ಉದ್ರೇಕವೇ ಉಂಟಾಯಿತು. ಅವರು ಪ್ರೇಮಾದರದಿಂದ ನರ್ತಿಸುತ್ತಾ ಭಜಿಸಿದರು. ಮುಂದೆ ಗೋಕರ್ಣಕ್ಕೂ ಭೇಟಿ ಇತ್ತರು. ಅಲ್ಲಿಂದ ಮುಂದೆ ಮಹಾರಾಷ್ಟ್ರಕ್ಕೆ ಹೋದರು. ಅಲ್ಲಿಯೂ ಅನೇಕ ಕ್ಷೇತ್ರಗಳನ್ನು ದರ್ಶಿಸಿ, ಭಕ್ತಿಪಂಥ ಬಲಪಡಿಸಿ ಜಗನ್ನಾಥಪುರಿಗೆ ಮರುಪ್ರಯಾಣ ಬೆಳೆಸಿದರು. ಇದು ಚೈತನ್ಯರ ದಕ್ಷಿಣ ಭಾರತ ಪ್ರವಾಸದ ಕಿರುವಿವರ.

ದೈನಿಕ ವ್ಯಾವಹಾರಿಕ ಬದುಕಿನಲ್ಲಿದ್ದೂ ಭಗವಂತನನ್ನು ಹೊಂದುವ ಭಕ್ತಿಯ ಮಾರ್ಗವನ್ನು ಗೌಡೀಯ ವೈಷ್ಣವ ಪದ್ಧತಿ ತೋರಿಸಿಕೊಟ್ಟಿತು. ಒಣತರ್ಕರಹಿತ ಶುದ್ಧನಂಬಿಕೆ, ನಮ್ರತೆ, ಮುಗ್ಧತೆಗಳೇ ಸಾಕ್ಷಾತ್ಕಾರಕ್ಕೆ ಸಾಕು ಎಂದು ಚೈತನ್ಯರ ಅನಿಸಿಕೆ. ಮಾಧುರ್ಯ ಭಕ್ತಿಗೊಂದು ನಿತ್ಯ ನೀಲಾಂಜನ ಚೈತನ್ಯ ಚರಿತೆ. ಕೃಷ್ಣಭಕ್ತಿಯನ್ನು ಎಲ್ಲೆಡೆ ಪ್ರಚುರಪಡಿಸಲು ಚೈತನ್ಯರು ದಣಿವಿಲ್ಲದೆ ದುಡಿದರು, ಮೈಮರೆತು ಕುಣಿದರು. ಅವರು ಪ್ರವಾಸದಲ್ಲಿದ್ದಾಗ ನಡೆದ ಹಾಸ್ಯಮಯ ಸಂದರ್ಭ ಹೇಳಿ ಈ ಬರಹ ಮುಗಿಸಬಹುದು.

ಒಬ್ಬ ಅನಕ್ಷರಸ್ಥ ಬ್ರಾಹ್ಮಣ ನಿತ್ಯವೂ ಭಗವದ್ಗೀತೆ ಓದುತ್ತಿದ್ದನಂತೆ! ಅದೆಂತು ಸಾಧ್ಯ? ಪುಸ್ತಕವನ್ನೇ ತಿರುವು ಮುರುವಾಗಿ ಇಟ್ಟುಕೊಂಡು ಓದುತ್ತಿದ್ದ! ಅವನನ್ನು ಕಂಡವರು ನಗುತ್ತಿದ್ದರು. 'ನೀನು ಏನು ಓದುತ್ತಿರುವೆ?' ಎಂದು ಚೈತನ್ಯರು ಕೇಳಿದರು. 'ಭಗವದ್ಗೀತೆಯನ್ನು!' ಅವನ ಉತ್ತರ. 'ನನ್ನ ಗುರುಗಳು ಪ್ರತಿದಿನ ಭಗವದ್ಗೀತೆಯನ್ನು ಓದಬೇಕು ಎಂದು ಆದೇಶಿಸಿದ್ದಾರೆ. ಆದರೆ ನನಗೆ ಓದಲು ಬಾರದು. ಹೌದು, ಅದು ಗೊತ್ತಿದ್ದೂ ಗುರುಗಳು ನಿತ್ಯವೂ ಗೀತೆ ಪಠಣ ಮಾಡಲು ಹೇಳಿದ್ದಾರೆ' ಎಂದನು. ಓದಲು ಬಾರದಿದ್ದರೂ ಬ್ರಾಹ್ಮಣನು ತನ್ನ ಗುರುಗಳ ಆದೇಶವನ್ನು ದೃಢಶ್ರದ್ಧೆಯಿಂದ ಸ್ವೀಕರಿಸಿ ಆಚರಣೆ ನಡೆಸಿದ್ದ. 'ನಿನ್ನ ಕಣ್ಣುಗಳಲ್ಲಿ ನೀರೇಕೆ?' ಚೈತನ್ಯರು ಕೇಳಿದರು. 'ಹೌದು ಸ್ವಾಮಿ, ಭಗವದ್ಗೀತೆಯನ್ನು ಎತ್ತಿಕೊಂಡ ತಕ್ಷಣ ಪಾರ್ಥಸಾರಥಿಯ ಚಿತ್ರ ಕಣ್ಣ ಮುಂದೆ ಕಟ್ಟಿದಂತಾಗುತ್ತದೆ. ಪ್ರಭು ಎಂಥ ಕರುಣಾಳು! ತನ್ನ ಭಕ್ತನಿಗೇ ದಾಸನಾಗಿದ್ದಾನೆ. ಅವನ ಆ ಉದಾತ್ತ ಭಾವವನ್ನು ಸ್ಮರಿಸಿ ಕಣ್ಣೀರು ಕರೆಯುತ್ತಿರುವೆ.' ಈ ಮಾತು ಕೇಳಿ ಚೈತನ್ಯರ ಕಣ್ಣುಗಳು ತುಂಬಿಬಂದವು. ಅವರು ಅವನನ್ನು ತಬ್ಬಿಕೊಂಡು 'ನಿನ್ನ ಗೀತಾ ಪಠಣ ಪರಿಪೂರ್ಣವಾಗಿದೆ' ಎಂದರು. ಚೈತನ್ಯರು ಬಯಸಿದ್ದು ಇಂಥ ನಿರ್ಮಲ, ಪ್ರಾಂಜಲ, ಶುದ್ಧ ಭಕ್ತಿಯನ್ನು. ಸರಳ ಹೃದಯಗಳಲ್ಲಿ ಭಕ್ತಿ ಉಳಿಯುವುದು, ಬೆಳೆಯುವುದು ಹಾಗೆ. ಅಂಥ ಭಕ್ತಿಯನ್ನು ಒಂದು ಪಂಥವಾಗಿ ಬೆಳೆಸಿದ ಪ್ರಭುಗಳ ಸ್ಮರಣೆಯಿಂದ ಈ ದಿನ ಸಾರ್ಥಕ, ಸಂಪನ್ನ

ಲೇಖಕರು ಹಿರಿಯ ಸಾಹಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net