ಸೈಕಲ್ ಸವಾರಿ... ಆರೋಗ್ಯಕ್ಕೆ ಸಹಕಾರಿ

ವಿಜಯವಾಣಿ (2)
Published on

(ಲೇಖಕರು ಧರ್ವಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ)

ದೇಹಕ್ಕೆ ಯಾವ ರೀತಿಯಲ್ಲೂ ವ್ಯಾಯಾಮ ದೊರೆಯದೇ ಇದ್ದಾಗ ಸಹಜವಾಗಿ ಬೊಜ್ಜು ಬಂದೇ ಬರುತ್ತದೆ. ಹಾಗಾಗಿ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಹಾಲು ತರಲು, ಪೇಪರ್ ತರಲು, ಅಂಗಡಿಗೆ ಹೋಗಲು ಇತ್ಯಾದಿಗಳಿಗೆಲ್ಲ ಕಾರ್, ಬೈಕ್​ನಲ್ಲಿ ಹೋಗುವ ಬದಲು ಸೈಕಲ್ ಬಳಸಿದರೆ ದೈಹಿಕ ವ್ಯಾಯಾಮದ ಜೊತೆಗೆ ವಾಯು ಮಾಲಿನ್ಯ ನಿಯಂತ್ರಣಕ್ಕೂ ಕೊಡುಗೆ ನೀಡಿದಂತಾಗುತ್ತದೆ. ಸೈಕಲ್​ಗೆ ಪೆಟ್ರೊಲ್, ಡೀಸೆಲ್ ಇತ್ಯಾದಿ ಇಂಧನ ಅಗತ್ಯವಿಲ್ಲದಿರುವುದರಿಂದ ಹಣದ ಉಳಿತಾಯವೂ ಆದಂತಾಗುತ್ತದೆ.

ಅದೊಂದು ಕಾಲವಿತ್ತು. ಸೈಕಲ್ ಇರುವ ಮನೆ ಶ್ರೀಮಂತರ ಮನೆ, ಸೈಕಲ್ ಇರುವವರು ಅನುಕೂಲಸ್ಥರು ಎಂದು ಹೇಳಲಾಗುತ್ತಿತ್ತು. ಸೈಕಲ್​ನಲ್ಲಿ ಸವಾರಿ ಮಾಡುವುದೇ ಆಗ ಹೆಮ್ಮೆಯ ವಿಚಾರವಾಗಿತ್ತು. ಅದೇನೋ ರಾಜ ಗಾಂಭೀರ್ಯ. ಚಿಕ್ಕ ಮಗುವಿಗೆ ಮುಂದಿನ ಚಿಕ್ಕ ಸೀಟು, ಹಿಂಬದಿ ಒಂದು ಸೀಟು, ಇಬ್ಬರನ್ನೋ, ಮೂವರನ್ನೋ ಕುಳ್ಳಿರಿಸಿಕೊಂಡು ಸೈಕಲ್ ಪೆಡಲ್ ತುಳಿದು ಸವಾರಿ ಹೊರಟರೆ ಅದರ ಆನಂದವೇ ಬೇರೆ. ‘ಅವರಿಗೇನು, ಸೈಕಲ್ ಇದೆ, ನಾವು ನಡೆದುಕೊಂಡೇ ಹೋಗಬೇಕು’ ಎಂದು ಜನ ಆಡಿಕೊಳ್ಳುತ್ತಿದ್ದರು. ಸೈಕಲ್ ಸವಾರಿಯೇ ಆಗಿನ ಕಾಲಕ್ಕೆ ಅಚ್ಚರಿಯ ಸಂಗತಿಯಾಗಿತ್ತು. ಈಗಿನ ಕಾರ್, ಬೈಕ್​ಗಳಲ್ಲಿ ಇರುವಂತೆ ಸೈಕಲ್​ಗಳಲ್ಲೂ ಹಲವು ಬ್ರ್ಯಾಂಡ್​ಗಳಿದ್ದವು. ಹರ್ಕಲೆಸ್, ಹೀರೋ ಇತ್ಯಾದಿ. ಅದರಲ್ಲೂ ಸಾಕಷ್ಟು ವಿನ್ಯಾಸಗಳಿದ್ದವು. ಬದುಕಿನ ಎಲ್ಲಾ ಸಮಯದಲ್ಲೂ ಸೈಕಲ್ ಜೊತೆಯಾಗಿತ್ತು. ಪ್ರಯಾಣಕ್ಕೆ ಮಾತ್ರವಲ್ಲದೆ ಸರಕು ಸಾಗಾಣಿಕೆಗೂ ಹೆಚ್ಚಾಗಿ ಬಳಕೆಯಲ್ಲಿತ್ತು. ಯಾವುದೇ ರೀತಿಯ ಇಂಧನ ಅಗತ್ಯವಿರದ ಸೈಕಲ್ ಮಾನವ ಶಕ್ತಿಯಿಂದಲೇ ಕಾರ್ಯ ನಿರ್ವಹಿಸುವಂಥದ್ದು. ಬೈಕ್​ನ ಅನ್ವೇಷಣೆಗೆ ಮೂಲ ಸೈಕಲ್ ಎಂಬುದರಲ್ಲಿ ಎರಡು ಮಾತಿಲ್ಲ.

ರಿಕ್ಷಾ ಹಾಗೂ ಬಾಡಿಗೆ ಕಾರುಗಳು ಚಾಲ್ತಿಗೆ ಬರುವ ಮುನ್ನ ಹಲವು ಪಟ್ಟಣಗಳಲ್ಲಿ ಕುದುರೆ ಟಾಂಗಾಗಳಂತೆ ಸೈಕಲ್ ರಿಕ್ಷಾಗಳೇ ಹೆಚ್ಚಾಗಿ ಬಳಕೆಯಲ್ಲಿದ್ದವು. ಅನಂತರ ಪೆಟ್ರೋಲ್- ಡೀಸೆಲ್ ವಾಹನಗಳಲ್ಲಿ ಸಾಕಷ್ಟು ಸುಧಾರಣೆಗಳಾದ ಬಳಿಕ ಸೈಕಲ್ ರಿಕ್ಷಾಗಳ ಬಳಕೆ ಕಡಿಮೆಯಾಯಿತು. ಈಗ ಬೆರಳೆಣಿಕೆಯ ಕಡೆಗಳಲ್ಲಿ ಸೈಕಲ್ ರಿಕ್ಷಾಗಳು ಬಳಕೆಯಲ್ಲಿರಬಹುದು. ಇದರಿಂದ ವಾಯುಮಾಲಿನ್ಯ ಸೇರಿದಂತೆ ಯಾವುದೇ ರೀತಿಯ ಪರಿಸರ ಮಾಲಿನ್ಯವಾಗುವುದಿಲ್ಲ. ಜೊತೆಗೆ ಸೈಕಲ್ ತುಳಿಯುವುದರಿಂದ ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲೂ ಸಹಕಾರಿಯಾಗಿದೆ. ವಾಟ್ಸಾಪ್​​ನಲ್ಲಿ ಸಣ್ಣ ಸಂದೇಶವೊಂದು ಹರಿದಾಡುತ್ತಿತ್ತು. ಅದೇನೆಂದರೆ ‘ಸೈಕಲ್ ಓಡಿಸುವಾಗ ಜನರು ಆರೋಗ್ಯವಂತರಾಗಿದ್ದರು. ನಂತರ ಸೈಕಲ್ ಬಿಟ್ಟು ಬೈಕ್​ನಲ್ಲಿ ತಿರುಗಾಡುವಾಗ ಆರೋಗ್ಯ ಅಷ್ಟಿಷ್ಟು ಇತ್ತು. ಬೈಕ್ ಬಿಟ್ಟು ಕಾರಿನಲ್ಲಿ ಓಡಾಡಲು ಶುರು ಮಾಡಿದ ಮೇಲೆ ಬೊಜ್ಜು ಬರತೊಡಗಿತು.

ಹಾಗಾಗಿ ಈಗ ಬೊಜ್ಜು ಕರಗಿಸಲು ಕಾರ್​ನಲ್ಲೇ ಜಿಮ್​ಗೆ ಹೋಗಿ ಅಲ್ಲಿ ಸೈಕ್ಲಿಂಗ್ ವ್ಯಾಯಾಮ ಮಾಡುವವರು ಇದ್ದಾರೆ’ ಎಂದು. ದೇಹಕ್ಕೆ ಯಾವ ರೀತಿಯಲ್ಲೂ ವ್ಯಾಯಾಮ ದೊರೆಯದೇ ಇದ್ದಾಗ ಸಹಜವಾಗಿ ಬೊಜ್ಜು ಬಂದೇ ಬರುತ್ತದೆ. ಹಾಗಾಗಿ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಹಾಲು ತರಲು, ಪೇಪರ್ ತರಲು, ಅಂಗಡಿಗೆ ಹೋಗಲು ಇತ್ಯಾದಿಗಳಿಗೆಲ್ಲ ಕಾರ್, ಬೈಕ್​ನಲ್ಲಿ ಹೋಗುವ ಬದಲು ಸೈಕಲ್ ಬಳಸಿದರೆ ದೈಹಿಕ ವ್ಯಾಯಾಮದ ಜೊತೆಗೆ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕೊಡುಗೆ ನೀಡಿದಂತಾಗುತ್ತದೆ. ಸೈಕಲ್​ಗೆ ಪೆಟ್ರೊಲ್, ಡೀಸೆಲ್ ಇತ್ಯಾದಿ ಇಂಧನ ಅಗತ್ಯವಿಲ್ಲದಿರುವುದರಿಂದ ಹಣದ ಉಳಿತಾಯವೂ ಆದಂತಾಗುತ್ತದೆ.

ನಾವು ಚಿಕ್ಕವರಿದ್ದ ಕಾಲವನ್ನು ಒಮ್ಮೆ ಮೆಲುಕು ಹಾಕಿದಾಗ ಮೊದಲಿಗೆ ನೆನಪಾಗುವುದು 10 ಪೈಸೆ, 20 ಪೈಸೆ ಕೊಟ್ಟು ಸೈಕಲನ್ನು ಬಾಡಿಗೆಗೆ ಪಡೆದು ಓಡಿಸುತ್ತಿದ್ದ ದಿನಗಳು. ಆಗ ಪೇಟೆಯಲ್ಲಿ, ಬೀದಿಯ ಕೊನೆಯಲ್ಲಿ ‘ಇಲ್ಲಿ ಬಾಡಿಗೆಗೆ ಸೈಕಲ್ ದೊರೆಯುತ್ತದೆ’ ಎಂಬ ಬೋರ್ಡ್​ಗಳು ಕಾಣಸಿಗುತ್ತಿದ್ದವು. ಹಿರಿಯರು, ಕಿರಿಯರು ಎನ್ನದೆ ಸೈಕಲನ್ನು ಬಾಡಿಗೆ ಪಡೆದು ಓಡಿಸುತ್ತಿದ್ದರು. ಮುಂಗಡ ಬುಕ್ಕಿಂಗ್ ವ್ಯವಸ್ಥೆಯೂ ಲಭ್ಯವಿತ್ತು. ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಒಂದು ಗಂಟೆಗೆ ಸೈಕಲ್ ಪಡೆದು ತೆರಳುವವರ ಸಂಖ್ಯೆ ಹೆಚ್ಚಿತ್ತು. ಮತ್ತು ಅಲ್ಲಲ್ಲಿ ಸೈಕಲ್ ಪಂಚರ್ ಅಂಗಡಿಗಳು ಲಭ್ಯವಿದ್ದವು.

ಬಾಲ್ಯದಲ್ಲಿ ನಾನು ಕೂಡ ಸಾಕಷ್ಟು ಸಲ ಬಾಡಿಗೆ ಸೈಕಲನ್ನು ಓಡಿಸಿದ್ದೇನೆ. ರಜಾ ಸಮಯದಲ್ಲೆಲ್ಲ ಪಡುಬಿದ್ರೆಯಲ್ಲಿರುವ ಅಜ್ಜನ ಮನೆಗೆ ಹೋಗುತ್ತಿದ್ದೆ. ಅಜ್ಜನ ಮನೆಯಿಂದ 5 ಕಿ.ಮೀ. ದೂರದಲ್ಲಿದ್ದ ಥಿಯೇಟರ್​ಗೆ ಕೆಲವೊಮ್ಮೆ ಸಿನೆಮಾ ನೋಡಲು ಹೋಗುತ್ತಿದ್ದೆ. ಆಗೆಲ್ಲ ಬಾಡಿಗೆ ಸೈಕಲ್​ನ್ನು ಪಡೆದು ಸಿನೆಮಾ ನೋಡಿಕೊಂಡು ಬರುತ್ತಿದ್ದೆ. ಬಾಡಿಗೆ ಸೈಕಲ್ ಪಡೆದು ಸುತ್ತಾಡುವ ಖುಷಿಯ ಜೊತೆಗೆ ಹೇಳಿದ ಸಮಯಕ್ಕೆ ಸರಿಯಾಗಿ ಅದನ್ನು ಮರಳಿಸುವ ಜವಾಬ್ದಾರಿಯೂ ಇತ್ತು. ಮಕ್ಕಳ ಕೈಗೆ ಸೈಕಲ್ ಸಿಕ್ಕರೆ ಅವರಿಗೆ ಅದೇ ದೊಡ್ಡ ಪ್ರಪಂಚವಾಗಿತ್ತು. ಊಟ, ತಿಂಡಿ, ನಿದ್ರೆ ಏನೂ ಬೇಡವಾಗಿತ್ತು. ಸೈಕಲ್​ನಿಂದ ಇಳಿಯದೆ, ನೆಲಕ್ಕೆ ಕಾಲನ್ನು ತಾಗಿಸದೆ ತಮ್ಮೆಲ್ಲ ಶಕ್ತಿ ಬಳಸಿ ಪೆಡಲ್ ತುಳಿದು ಏರು ರಸ್ತೆಯನ್ನು ಹತ್ತಿಸುವುದೇ ಆಗಿನ ಸಾಹಸ. ಮಕ್ಕಳಿಗೆ ಅದೇ ಆಟವೂ ಆಗಿತ್ತು. ‘ನಾನು ಒಂದೇ ಬಾರಿಗೆ ಆ ಎತ್ತರದ ರಸ್ತೆಯನ್ನು ಹತ್ತಿಸಿದ್ದೇನೆ, ಒಮ್ಮೆಯೂ ಕಾಲು ನೆಲಕ್ಕೆ ಇಡಲಿಲ್ಲ’ ಎಂಬುದು ಮಕ್ಕಳ ಪಾಲಿಗೆ ಒಂದು ಹೆಮ್ಮೆಯ ವಿಚಾರವಾಗಿತ್ತು. ಒಟ್ಟಿನಲ್ಲಿ ಸೈಕಲ್ ಆಗ ಎಲ್ಲರಿಗೂ ಪ್ರೀತಿ ಪಾತ್ರವಾಗಿತ್ತು.

ಬೈಕ್, ಕಾರು, ಬಸ್ ಹೀಗೆ ಸಾರಿಗೆ ವ್ಯವಸ್ಥೆಗಳ ಆರಂಭ ಕಾಲದಲ್ಲಿ ಸೈಕಲ್​ಗಳೇ ಹೆಚ್ಚಾಗಿದ್ದವು. ಆಗೆಲ್ಲ ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಹಾಗೂ ಉತ್ತರ ಕರ್ನಾಟಕದ ಮತ್ತು ನಾಡಿನ ವಿವಿಧ ಪ್ರದೇಶಗಳಿಂದ ಸೈಕಲ್​ನಲ್ಲೇ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುತ್ತಿದ್ದರು. ಐದು, ಹತ್ತು, ಇಪ್ಪತ್ತು ಜನರ ತಂಡಗಳನ್ನಾಗಿ ಮಾಡಿಕೊಂಡು ಕ್ಷೇತ್ರ ದರ್ಶನ ಮಾಡುತ್ತಿದ್ದರು. ‘ಕಳೆದ 10 ವರ್ಷಗಳಿಂದ ನಾನು ಸೈಕಲ್​ನಲ್ಲೇ ಶ್ರೀ ಕ್ಷೇತ್ರಕ್ಕೆ ಬರುತ್ತಿದ್ದೇನೆ ಸ್ವಾಮಿ’ ಎಂದು ನನ್ನನ್ನು ಭೇಟಿಯಾಗಿ ತಮ್ಮ ಸೈಕಲ್ ಯಾತ್ರೆಯ ಅನುಭವವನ್ನು ಹೇಳಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಒಂದಷ್ಟು ಯುವಕರು ದೂರದ ಊರಿನಿಂದ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದರು. ಅವರನ್ನು ಕಂಡು ಮಾತನಾಡಿಸಿ, ಸಂತೋಷಪಟ್ಟೆ. ಹೀಗೆ ವರುಷಕ್ಕೊಂದು ಬಾರಿ ಶ್ರೀ ಕ್ಷೇತ್ರಕ್ಕೆ ಸೈಕಲ್ ಸವಾರಿ ಮಾಡುವ ಗುಂಪುಗಳನ್ನು ನಾನೂ ಗಮನಿಸುತ್ತಾ ಬಂದಿದ್ದೇನೆ. ಅವರ ಈ ಕಾರ್ಯವನ್ನು ಶ್ಲಾಘಿಸಿದ್ದೇನೆ.

ಕ್ಷೇತ್ರ ದರ್ಶನ ಮಾತ್ರವಲ್ಲದೆ ವಿವಿಧ ಪ್ರವಾಸಿ ತಾಣಗಳಿಗೂ ಯುವ ಜನರು ಸೈಕಲ್​ನಲ್ಲಿ ಪ್ರವಾಸ ಕೈಗೊಳ್ಳುವುದು ಈಗೀಗ ಹೆಚ್ಚಾಗಿದೆ. ಭಾರತದ ದಕ್ಷಿಣದಿಂದ ಉತ್ತರಕ್ಕೆ ಹಾಗೂ ದೇಶದ ಬೇರೆ ಬೇರೆ ಭಾಗಗಳಿಗೆ ಸೈಕಲ್​ನಲ್ಲಿ ಸಾಹಸ ಯಾತ್ರೆ ಕೈಗೊಳ್ಳುವ ಅನೇಕ ಉತ್ಸಾಹಿ ಜನರಿದ್ದಾರೆ. ಅವರೆಲ್ಲರ ಸಾಹಸ ಮೆಚ್ಚುವಂಥದ್ದು. ಈಗ ದ್ವಿಚಕ್ರ ವಾಹನ ಸವಾರರಿಗೆ ಆರ್.ಸಿ. ಬುಕ್ ಇಲ್ಲ, ಡ್ರೈವಿಂಗ್ ಲೈಸೆನ್ಸ್ ಇಲ್ಲ ಎಂದೆಲ್ಲ ಪೊಲೀಸರು ಕೇಸು ದಾಖಲಿಸುವಂತೆ ಹಿಂದಿನ ಕಾಲದಲ್ಲಿ ಸೈಕಲ್​ನಲ್ಲಿ ರಾತ್ರಿ ಸಂಚಾರ ಸಮಯದಲ್ಲಿ ಲೈಟ್ ಇರದಿದ್ದರೆ ಅಥವಾ ಹಿಂದಿನ ಕ್ಯಾರಿಯರ್​ನಲ್ಲಿ ಎರಡು ಮೂರು ಜನರನ್ನು ಕುಳ್ಳಿರಿಸಿದ್ದರೆ ಸಣ್ಣ- ಪುಟ್ಟ ಕೇಸುಗಳನ್ನು ದಾಖಲಿಸಿಕೊಳ್ಳುತ್ತಿದ್ದರು. ಕೇಸಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಪೊಲೀಸರನ್ನು ಕಂಡಾಕ್ಷಣ ಸೈಕಲ್​ನಿಂದ ಅವಸರವಸರವಾಗಿ ಇಳಿದು, ಅವರ ಎದುರಿನಲ್ಲಿ ತಳ್ಳಿಕೊಂಡು ಹೋಗಿ, ಅವರು ಕಣ್ಣಿಗೆ ಕಾಣದಾದಾಗ ಮತ್ತೆ ಹತ್ತಿಕೊಂಡು ಹೋಗುತ್ತಿದ್ದರು.

ಈಗ ದೇಶ-ವಿದೇಶಗಳಲ್ಲಿ ಅಂತಾರಾಷ್ಟ್ರೀಯ ಕಂಪೆನಿಗಳು ಐಟಿ- ಬಿಟಿ ಹಬ್ ಎಂದು ಎಕರೆಗಟ್ಟಲೆ ಜಾಗದಲ್ಲಿ ತಮ್ಮ ಸಂಕೀರ್ಣವನ್ನೇ ನಿರ್ವಿುಸಿಕೊಂಡಿವೆ. ತಮ್ಮ ಉದ್ಯೋಗಿಗಳಿಗೆ ಒಂದು ಕಡೆಯಿಂದ ಮತ್ತೊಂದು ಕಡೆ ತೆರಳಲು ಸೈಕಲ್​ಗಳನ್ನು ಒದಗಿಸುತ್ತವೆ. ಇದು ಆರೋಗ್ಯ ದೃಷ್ಟಿ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲೂ ಉತ್ತಮ. ಗೂಗಲ್, ಮೈಕ್ರೋಸಾಫ್ಟ್, ಆಪಲ್ ಹೀಗೆ ಟೆಕ್ ದಿಗ್ಗಜ ಕಂಪನಿಗಳು ಈ ಸೂತ್ರವನ್ನು ಅಳವಡಿಸಿಕೊಂಡಿವೆ. ಇನ್ನು ಕೆಲವು ದೇಶಗಳಲ್ಲಿ ಸಾರ್ವಜನಿಕರಿಗೆ ಓಡಾಡಲು ಉಚಿತ ಸೈಕಲ್​ಗಳನ್ನು ಒದಗಿಸಲಾಗುತ್ತಿದೆ. ಅವನ್ನು ಬಳಸಿದ ಬಳಿಕ ಸ್ವಸ್ಥಾನದಲ್ಲಿ ಅಥವಾ ನಿಗದಿತ ಸ್ಥಳದಲ್ಲಿ ಇರಿಸಿ ಹೋಗಬೇಕು. ಇನ್ನು ಕೆಲವು ದೇಶಗಳು ಸೈಕಲ್ ಸವಾರರಿಗಾಗಿಯೇ ರಸ್ತೆಯಲ್ಲಿ ಲೇನ್​ಗಳನ್ನು ಮೀಸಲಿರಿಸಿವೆ. ಇವು ಸೈಕ್ಲಿಂಗ್​ನ್ನು ಪ್ರೇರೇಪಿಸುವ ಜೊತೆಗೆ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡ ಪರಿಹಾರ ಕ್ರಮಗಳೂ ಹೌದು. ಪಾಶ್ಚಾತ್ಯ ದೇಶಗಳಲ್ಲಿ ಸೈಕಲ್ ಕ್ರೇಝ್​ ಹೆಚ್ಚಾಗುತ್ತಿದೆ. ಎಷ್ಟೆಂದರೆ ತಮ್ಮ ಕಾರುಗಳ ಹಿಂಬದಿಯಲ್ಲಿ ಅಥವಾ ಟಾಪ್​ಗಳಲ್ಲಿ ಸೈಕಲ್​ನ್ನು ಇರಿಸಿಕೊಂಡೇ ಸಾಗುತ್ತಾರೆ. ಕಾರು, ಬೈಕ್​ಗಳ ಬಳಕೆ ಜೊತೆ ಸೈಕಲ್ ಬಳಕೆ ಜಾಸ್ತಿಯಾಗುತ್ತಿದೆ.

ಭಾರತದಲ್ಲೂ ಸೈಕಲ್ ರ್ಯಾಲಿಗಳ ಮೂಲಕ ಆರೋಗ್ಯ ಹಾಗೂ ಪರಿಸರ ರಕ್ಷಣೆಯ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಸೈಕಲ್ ಸವಾರಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಬಹಳಷ್ಟು ನೆರವಾಗುತ್ತದೆ. ಜಿಮ್ಲ್ಲಿ ಮಾಡುವ ಎಲ್ಲಾ ರೀತಿಯ ವ್ಯಾಯಾಮ ಸೈಕಲ್ ಓಡಿಸುವುದರಿಂದ ದೊರೆಯುತ್ತದೆ. ಪ್ರತಿನಿತ್ಯ ಬೆಳಿಗ್ಗೆ ಅಥವಾ ಸಂಜೆಯ ವೇಳೆ ಒಂದು ಅರ್ಧ ತಾಸಾದರೂ ಸೈಕಲ್ ಸವಾರಿ ಮಾಡುವುದರಿಂದ ದೇಹದ ಎಲ್ಲ ಅಂಗಾಂಗಗಳಿಗೆ ಚಟುವಟಿಕೆ ದೊರೆತಂತಾಗುತ್ತದೆ. ಮನೆಯ ಹತ್ತಿರ, ಸುತ್ತಮುತ್ತಲ ಪ್ರದೇಶಗಳಿಗೆ ಸೈಕಲ್​ನಲ್ಲಿ ಸವಾರಿ ಮಾಡಿದರೆ ದೇಹಕ್ಕೆ ಅದಕ್ಕಿಂತ ಉತ್ತಮ ವ್ಯಾಯಾಮ ಮತ್ತೊಂದಿಲ್ಲ. ಆಟವಾಗಿಯೂ ಸೈಕಲ್ ಬಲು ಪ್ರಸಿದ್ಧಿಯಾಗಿದೆ. ಬೈಕ್ ರೇಸ್, ಕಾರ್​ರೇಸ್​ಗಳಂತೆಯೂ ಸೈಕಲ್ ರೇಸ್​ಗಳೂ ಅಲ್ಲಲ್ಲಿ ಆಯೋಜನೆಗೊಳ್ಳುತ್ತಿದ್ದ ಕಾಲವಿತ್ತು. ಅದರಲ್ಲಿ ಸ್ಪೀಡ್ ಸೈಕಲ್ ಮಾತ್ರವಲ್ಲದೆ ಸ್ಲೋ ಸೈಕಲ್ ರೇಸ್ ಜನಮನ್ನಣೆ ಪಡೆದಿತ್ತು. ಈಗಲೂ ಅಲ್ಲಲ್ಲಿ ಆಡಿಸಲಾಗುತ್ತದೆ. ಮಾತ್ರವಲ್ಲದೆ ಒಲಿಂಪಿಕ್ಸ್​ನಲ್ಲಿ ಟ್ರಾ್ಯಕ್ ಸೈಕ್ಲಿಂಗ್ ಸ್ಪರ್ಧೆ ಆಯೋಜನೆಗೊಳ್ಳುತ್ತದೆ. ಹಾಗೆಯೇ ಗುಡ್ಡಗಾಡು ಮುಂತಾದ ಹಲವು ಬಗೆಯ ಸೈಕ್ಲಿಂಗ್ ಸ್ಪರ್ಧೆಗಳು ಆಯೋಜನೆಗೊಳ್ಳುತ್ತವೆ.

ಎರಡು ಚಕ್ರ ಇರುವ ಸೈಕಲ್​ನ್ನು ಓಡಿಸಲು ಹರಸಾಹಸ ಮಾಡಬೇಕಾಗಿರುವಾಗ ಸರ್ಕಸ್ ಕಂಪೆನಿಗಳಲ್ಲಿ ಒಂದೇ ಚಕ್ರದಲ್ಲಿ ಸೈಕಲ್ ಬ್ಯಾಲೆನ್ಸ್ ಮಾಡುವುದನ್ನು ನೋಡಿ ನನಗೆ ಆಶ್ಚರ್ಯವಾಗುತ್ತದೆ. ಆಗ ಸೈಕಲ್ ಸರ್ಕಸ್ ಪ್ರದರ್ಶನಗಳು ಹಳ್ಳಿಹಳ್ಳಿಗಳಲ್ಲಿ ನಡೆಯುತ್ತಿದ್ದವು. ಅದನ್ನು ನೋಡಿದ ಹುಡುಗರು ಮನೆಯಲ್ಲೂ ಸೈಕಲ್ ಬ್ಯಾಲೆನ್ಸ್ ಮಾಡಲು ಹೋಗಿ ಬಿದ್ದು ಮನೆಯವರಿಂದ ಬೈಯಿಸಿಕೊಳ್ಳುತ್ತಿದ್ದರು. ಹಿಂದಿನ ಕಾಲದಲ್ಲಿ ವಯಸ್ಕರ, ಅಂದರೆ ದೊಡ್ಡ ಸೈಕಲ್​ಗಳು ಹೆಚ್ಚಿದ್ದವು. ಅವರ ಸೈಕಲ್​ನಲ್ಲೇ ಮಕ್ಕಳೆಲ್ಲ ಸೈಕಲ್ ಓಡಿಸುವುದನ್ನು ಕಲಿಯುತ್ತಿದ್ದರು. ಕಾಲು ನೆಲಕ್ಕೆ ಎಟುಕದಿದ್ದರೂ ಅಡ್ಡ ಇರುವ ಸರಳಿನಡಿಯಲ್ಲಿ ಕಾಲು ತೂರಿಸಿ ಸೈಕಲ್ ಹೊಡೆಯುತ್ತಿದ್ದರು. ಈಗ ಹಾಗಲ್ಲ, ನಾನಾ ರೀತಿಯ ಸೈಕಲ್​ಗಳು ಬಂದಿವೆ. ದೊಡ್ಡವರಿಗೆ, ಕಾಲೇಜು ಹುಡುಗರಿಗೆ, ಶಾಲಾ ಮಕ್ಕಳಿಗೆ, ಪುಟಾಣಿ ಮಕ್ಕಳಿಗೂ ನಾನಾ ಬಗೆಯ ಸೈಕಲ್​ಗಳಿವೆ. ಸೈಕಲ್ ಬಿಡಲು ಕಲಿಯುವ ಮಕ್ಕಳಿಗೆ ಸುಲಭವಾಗುವಂತೆ ಸೈಕಲ್​ನ ಹಿಂಬದಿಯ ಟೈರ್​ನ ಎರಡೂ ಕಡೆಗಳಲ್ಲೂ ಸಣ್ಣ ಚಕ್ರವನ್ನು ಜೋಡಿಸಿರುತ್ತಾರೆ. ಇದರಿಂದ ಕಲಿಯುವುದು ಸುಲಭವಾಗುತ್ತದೆ. ಹೀಗೆ ಸೈಕಲ್​ನೊಂದಿಗಿನ ಬಾಂಧವ್ಯ, ಕತೆಗಳು ಬಹುತೇಕರಲ್ಲಿ ಇವೆ.

ಸೈಕಲ್ ಚಲಾಯಿಸಲು ಕಲಿಯುವುದು ಬಲು ಕಷ್ಟ. ಸೈಕಲ್ ಜೊತೆಗೆ ದೇಹವನ್ನು ಬ್ಯಾಲೆನ್ಸ್ ಮಾಡಿಕೊಂಡು ಚಲಾಯಿಸಬೇಕಾಗುತ್ತದೆ. ಪೆಡಲ್ ತುಳಿಯುವುದು, ಬ್ರೇಕ್ ಹಿಡಿಯುವುದು, ಓರೆ ಮಾಡುವುದು ಹೀಗೆ ಎಲ್ಲವನ್ನೂ ಒಮ್ಮೆಲೇ ನಿಭಾಯಿಸಲು ಹೆಚ್ಚಿನ ಗಮನ ಬೇಕಾಗಿರುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಬ್ಯಾಲೆನ್ಸ್ ತಪ್ಪಿ ನೆಲಕ್ಕೆ ಬೀಳಬೇಕಾಗುತ್ತದೆ. ಒಂದು ರೀತಿಯಲ್ಲಿ ಬದುಕು ಕೂಡ ಸೈಕಲ್ ಬ್ಯಾಲೆನ್ಸ್​ನಂತೆ. ಕೋಪ-ತಾಪ, ಕಷ್ಟ-ಸುಖ, ಮನೆ-ಕಚೇರಿ, ಬೇಕು-ಬೇಡ ಹೀಗೆ ಎಲ್ಲವನ್ನೂ ಬ್ಯಾಲೆನ್ಸ್ ಮಾಡಿದರೆ ಮಾತ್ರ ಮುಂದೆ ಸಾಗಬಹುದು. ಇಲ್ಲವಾದಲ್ಲಿ ಹಿಡಿತ ತಪ್ಪಿದ ಸೈಕಲ್​ನ ಪರಿಸ್ಥಿತಿಯಂತೇ ನಮ್ಮ ಬದುಕು ಕೂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net