ಅಮೆರಿಕದಲ್ಲಿ ಶಾಪಗ್ರಸ್ತ ಅಪ್ಸರೆ

Vij 1
Published on

ಇತ್ತೀಚೆಗೆ ಕನ್ನಡ ರಂಗಭೂಮಿಯಲ್ಲಿ ಒಂದು ಮಹತ್ತರ ಪ್ರಯೋಗವಾಯಿತು. ಅಮೆರಿಕದ ರಂಗ ತಂಡ ‘ನಾಟಕ ಚೈತ್ರ’ದ ದಶಮಾನೋತ್ಸವದಲ್ಲಿ ನಿರ್ದೇಶಕಿ, ನಟಿ, ಗಾಯಕಿ ಬಿ. ಜಯಶ್ರೀ ನಿರ್ದೇಶಿಸಿದ ‘ಜಸ್ಮಾ ಓಡನ್’ ಮೂರು ಪ್ರದರ್ಶನ ಕಂಡಿತು. ಒಂದು ತಿಂಗಳು ಬಿ. ಜಯಶ್ರೀ ಅಲ್ಲೇ ಉಳಿದಿದ್ದರು. ವೇಷ-ಭೂಷಣಗಳನ್ನು ಗುಜರಾತ್​ನಿಂದ ಕೊಂಡೊಯ್ದಿದ್ದರು. ಆ ಬಗ್ಗೆ ಅಮೆರಿಕನ್ನಡಿಗರೇ ಬರೆದ ವಿಮರ್ಶೆ ಇಲ್ಲಿದೆ.

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ಆಧುನಿಕ ತಂತ್ರಜ್ಞಾನದ ತವರೂರು ಮಾತ್ರ ಅಲ್ಲ, ಸಾಂಸ್ಕೃತಿಕ ಪ್ರದೇಶವೂ ಕೂಡ. ಸಹಸ್ರಾರು ಸಂಖ್ಯೆಯಲ್ಲಿ ಇಲ್ಲಿ ನೆಲೆಸಿರುವ ಭಾರತ ಮೂಲದ ಪ್ರತಿಭಾವಂತ ತಂತ್ರಜ್ಞರು, ಉದ್ಯಮಿಗಳು, ವೈದ್ಯರು ಮತ್ತು ಇತರ ವೃತ್ತಿಪರರು ಪ್ರದೇಶದ ಸಂಸ್ಕೃತಿಯಂತೆ ಕಲಾಕಾರರು ಮತ್ತು ಕಲಾಪ್ರೇಮಿಗಳು. ಇಲ್ಲಿನ ನೂರಾರು ಭಾರತೀಯ ಸಂಗೀತ ಮತ್ತು ನೃತ್ಯಶಾಲೆಗಳು, ಕಲಾತಂಡಗಳು, ಆಧ್ಯಾತ್ಮಿಕ, ಯೋಗ ಮತ್ತು ಆಯುರ್ವೆದ ಸಂಸ್ಥೆಗಳು ಭಾರತೀಯ ಸಂಸ್ಕೃತಿಯನ್ನು ಮೆರೆಯುತ್ತಿವೆ. ಸ್ಥಳೀಯರಿಗೆ ಭಾರತದ ಸೊಗಡನ್ನು ಪರಿಚಯಿಸುತ್ತಿವೆ.

‘ನಾಟಕ ಚೈತ್ರ’ ಇಂತಹ ಗತಿಶೀಲ ಮತ್ತು ಉಲ್ಲಾಸಿ ಪರಿಸರದಲ್ಲಿ ಅರಳುತ್ತಿರುವ ಬೇ ಏರಿಯಾದ ಕನ್ನಡ ನಾಟಕ ತಂಡ. ಈ ವರ್ಷ ‘ನಾಟಕ ಚೈತ್ರ’ದ ಹತ್ತನೇ ಹುಟ್ಟುಹಬ್ಬ. ಭಾರತದ ಪ್ರಸಿದ್ಧ ರಂಗಕರ್ವಿು ಬಿ. ಜಯಶ್ರೀ ಅವರ ನಿರ್ದೇಶನದಲ್ಲಿ ಖ್ಯಾತ ಕನ್ನಡ ಜಾನಪದ ನಾಟಕ, ಭವಾಯಿ ಶೈಲಿಯ ‘ಜಸ್ಮಾ ಓಡನ್’ನ ಪ್ರದರ್ಶನಗಳು ಫೆ. 8,9ರಂದು ಸಾಂಟಾ ಕ್ಲಾರಾ ನಗರದಲ್ಲಿ ಮತ್ತು ಫೆ. 15ರಂದು ಲಾಸ್​ಏಂಜಲೀಸ್​ನಲ್ಲಿ ಯಶಸ್ವಿಯಾಗಿ ನಡೆದವು. ಪ್ರೇಕ್ಷಕರಿಗೆ ರಸದೌತಣವನ್ನಿತ್ತವು.

‘ಜಸ್ಮಾ ಓಡನ್’ ಗುಜರಾತಿನ ಒಂದು ಜನಪ್ರಿಯ ಜಾನಪದ ಕಥೆ. ಒಬ್ಬ ಶಾಪಗ್ರಸ್ತ ಅಪ್ಸರೆ, ಭೂಮಿಯಲ್ಲಿ ಜಸ್ಮಾ ಎಂಬ ಹೆಣ್ಣಾಗಿ ಹುಟ್ಟಿ, ಅಲೆಮಾರಿ ಬುಡಕಟ್ಟಿನ ರೂಪಾಲ ಎಂಬವನೊಂದಿಗೆ ಮದುವೆಯಾಗಿರುತ್ತಾಳೆ. ಆ ಪ್ರಾಂತದ ರಾಜ ಜಸ್ಮಾಳ ಸೌಂದರ್ಯಕ್ಕೆ ಮರುಳಾಗಿ, ಅವಳನ್ನು ಮದುವೆಯಾಗಲು ಪೀಡಿಸುತ್ತಿರುತ್ತಾನೆ. ಆ ಕಾಮುಕ ದುಷ್ಟ ರಾಜನ ದುರಾಸೆ ಮತ್ತು ಜಸ್ಮಾಳ ಪತಿಪ್ರೇಮವೇ ನಾಟಕದ ಕಥೆ.

ಪ್ರೇಕ್ಷಕರೊಬ್ಬರಿಗೆ ಈ ಶೈಲಿಯ ನಾಟಕ ಭಾರತೀಯ ಸಂಸ್ಕೃತಿಯನ್ನು ಪರಿಪೂರ್ಣವಾಗಿ ಪ್ರತಿನಿಧಿಸುವ ಪ್ರಕಾರವಾಯಿತು. ಕನ್ನಡ ಬಾರದ ಅವರ ಮಕ್ಕಳಿಬ್ಬರು ನಾಟಕದಲ್ಲಿ ಪೂರ್ಣ ತಲ್ಲೀನರಾಗಿ, ಕುರ್ಚಿಯ ತುದಿಯಲ್ಲೇ ಕೂತಿದ್ದರಂತೆ.

ಇನ್ನೊಬ್ಬ ಪ್ರೇಕ್ಷಕರಿಗೆ, ಇಡೀ ನಾಟಕ ಒಂದು ಪೇಂಟಿಂಗ್ ತರಹ ಕಂಡಿತು. ಚಿತ್ರಕಲೆಯನ್ನು ಹೋಲುವ ವೇಷಭೂಷಣಗಳ ಬಣ್ಣ ಸಂಯೋಜನೆ, ನಿಂತಲ್ಲಿ ನಿಲ್ಲದೆ ಕುಂಚದ ರೀತಿಯಲ್ಲಿ ರಂಗದ ಮೇಲೆಲ್ಲಾ ಓಡಾಡುವ ನಟರು ಮತ್ತು ಅವರ ಮುಖದ ಭಾವನೆಗಳು, ಸಭಾಂಗಣದಲ್ಲಿ ಪ್ರೇಕ್ಷಕರ ಮಧ್ಯದಿಂದ ಬರುವ ನಟರ ಚಾಕಚಕ್ಯತೆ ಎಲ್ಲರನ್ನು ಹಿಡಿದಿಟ್ಟಿತ್ತು.

ನಾಟಕವನ್ನು ನೋಡಲು ಬಂದ ಅಮೆರಿಕನ್ ಸ್ನೇಹಿತರಿಬ್ಬರಿಗೆ ನಾಟಕದ ಹಾಡುಗಳು, ತಾಳಕ್ಕೆ ತಕ್ಕ ಕುಣಿತ, ಗುಜರಾತಿನ ಸಾಂಪ್ರದಾಯಿಕ ವೇಷಭೂಷಣಗಳು ವಿಸ್ಮಯಕಾರಿಯಾಗಿ ಕಂಡವು. ನಗುವ ಸಂದರ್ಭಗಳಲ್ಲಿ ನಕ್ಕು, ಅಳುವ ದೃಶ್ಯಗಳಲ್ಲಿ ಕಣ್ಣಂಚಿನಲ್ಲಿ ನೀರು ತುಂಬಿ, ನಾಟಕದಲ್ಲಿ ಒಂದಾಗಿ ಹೋಗಿದ್ದರು. ವಿದೇಶಿ ಭಾಷೆಯಲ್ಲಿದ್ದ ಈ ನಾಟಕ ಹೇಗೆ ಅರ್ಥವಾಯಿತು ಎಂದು ಕೇಳಿದರೆ, ‘ನಾಟಕಗಳು ಭಾಷಾತೀತ ಮತ್ತು ಸೀಮಾರಹಿತ’ ಎಂಬುದು ಅವರ ಉತ್ತರವಾಗಿತ್ತು.

ಆದರೆ ಒಂದು ದೃಶ್ಯದ ಬಗ್ಗೆ ಅವರಿಗೆ ಅನುಮಾನ. ರೂಪಾಲನಿಗೆ ಮನಸೋತ ಜಸ್ಮಾ, ಅನನುಕೂಲ ಸಂದರ್ಭಗಳನ್ನು ಎದುರಿಸಿ ಮದುವೆ ಆಗುತ್ತಾಳೆ. ಮದುವೆಯ ನಂತರ ಜಸ್ಮಾಳನ್ನು ಬೀಳ್ಕೊಡುವ ದೃಶ್ಯ, ಜಯಶ್ರೀಯವರ ಆಳವಾದ ಕಂಚಿನ ಕಂಠದಲ್ಲಿ ಹಾಡಿದ ‘‘ಹೊರಟಾಳೋ ಚಂದದ ಸುಹಾಸಿನಿ ಮನೆತುಂಬಲು...’’ ಸಭಾಂಗಣದಲ್ಲೆಲ್ಲ ಮೊಳಗಿ ಪ್ರೇಕ್ಷಕರನ್ನು ಭಾವಪೂರ್ಣವಾಗಿಸಿತ್ತು. ನಾಟಕದಲ್ಲಿ ಜಸ್ಮಾ ಮತ್ತು ಅವಳ ಕಡೆಯವರೆಲ್ಲ ಅಳುತ್ತಿದ್ದಾರೆ. ನಮ್ಮಅಮೆರಿಕನ್ ಸ್ನೇಹಿತರ ಗಂಟಲು ಒಣಗಿದ್ದರೂ, ಅವರಿಗೆ ಅರ್ಥ ಆಗದೇ ಇದ್ದದ್ದು, ಜಸ್ಮಾ ಅಷ್ಟೆಲ್ಲಾ ಕಷ್ಟಪಟ್ಟು ತನ್ನ ಪ್ರಿಯಕರನನ್ನು ಕೊನೆಗೂ ಮದುವೆಯಾಗಿ, ಈಗ ಯಾಕೆ ಅಳುತ್ತಿದ್ದಾಳೆ ಅಂತ. ನಾಟಕದ ಆನಂತರ ಅವರಿಗೆ ಹೆಣ್ಣನ್ನು ಬೀಳ್ಕೊಡುವ ಪದ್ಧತಿಯನ್ನು ವಿವರಿಸಿದಾಗ, ಅವರಿಗಾದ ವಿಸ್ಮಯ ಅಷ್ಟಿಷ್ಟಲ್ಲ. ಈ ರೀತಿಯ ಎಷ್ಟೋ ಭಾವಪೂರ್ಣ ಪದ್ಧತಿಗಳನ್ನು ಕಳೆದುಕೊಳ್ಳುತ್ತಿರುವ ಇಂದಿನ ಭಾರತಕ್ಕೆ ಜಾನಪದ ಕಲೆಯೇ ನೆನಪಿನ ಭಂಡಾರ.

ಭವಾಯಿ ಶೈಲಿಯ ಮಹತ್ವ, ಗಹನವಿಲ್ಲದ ಸರಳ ಕಥೆಯನ್ನು ಭಾವಪೂರ್ಣವಾಗಿ, ಹಾಡು, ಕುಣಿತ ಮತ್ತು ಸರಳ ಸಂವಾದದಲ್ಲಿ ಮನ ಮುಟ್ಟುವ ರೀತಿಯಲ್ಲಿ ಹೇಳುವುದು. ಇದಕ್ಕೆ ಕೂಡಿದ ಬಿ. ಜಯಶ್ರೀ ಅವರ ನಾಟಕದ ವಿನ್ಯಾಸ, ಹಾಡಿನ ಮೇಳ, ಬೆಂಗಳೂರಿನಿಂದ ಬಂದಿದ್ದ ಸ್ಪಂದನ ತಂಡದ ರಾಘವೇಂದ್ರ ಕೃಷ್ಣಮೂರ್ತಿಯವರ ಡೋಲಕ್, ಪ್ರೇಕ್ಷಕರನ್ನು ಯಾವುದೋ ಮಾಂತ್ರಿಕ ಲೋಕಕ್ಕೆ ಕರೆದೊಯ್ದಿತ್ತು. ಹಿರಿಯರು- ಕಿರಿಯರು, ಆಧುನಿಕ- ಸಾಂಪ್ರದಾಯಿಕ ಮನಸ್ಥಿತಿ ಉಳ್ಳವರು, ಸಂಗೀತ ಬಲ್ಲವರು - ಕೇಳದೇ ಇದ್ದವರು, ಭಾಷಾ ಪಂಡಿತರು - ಬರದೇ ಇದ್ದವರು, ಹೀಗೆ ಎಲ್ಲರ ಮನಸೂರೆಗೊಂಡಿತು ಜಸ್ಮಾ ಓಡನ್. ಜತೆಗೆ ಜೀವನದ ಒಂದೆರಡು ಮೌಲ್ಯಗಳನ್ನೂ ಕಲಿಸಿತು.

‘ನಾಟಕ ಚೈತ್ರ’ ಸ್ಯಾನ್​ಫ್ರಾನ್ಸಿಸ್ಕೋ ಬೇ ಏರಿಯಾದ ಸಮುದಾಯಪೋಷಿತ, ಹವ್ಯಾಸಿ ಕನ್ನಡ ನಾಟಕ ತಂಡ. ಇದರ ರೂವಾರಿಗಳು ಶರ್ವಿುಳಾ ವಿದ್ಯಾಧರ, ಅಶೋಕ ಉಪಾಧ್ಯ, ವಿಕ್ರಮ್ ಹೊಳ್ಳ ಮತ್ತು ಸುರೇಶ ಭಟ್. 2010ರಲ್ಲಿ ಸ್ಥಾಪನೆಯಾದ ‘ನಾಟಕ ಚೈತ್ರ’, ಸ್ವಯಂಸೇವಕರ ಮತ್ತು ಸ್ಥಳೀಯ ಕನ್ನಡಿಗರ ಬೆಂಬಲದಿಂದ ಉತ್ತಮ ಗುಣಮಟ್ಟದ ಕನ್ನಡ ನಾಟಕಗಳನ್ನು ಬೇ ಏರಿಯಾದ ಮತ್ತು ಅಮೆರಿಕದ ಸುಸಂಸ್ಕೃತ ಮತ್ತು ಉಲ್ಲಾಸಿ ಕನ್ನಡಿಗರಿಗೆ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದೆ. ಇದುವರೆಗೂ 15 ನಾಟಕಗಳ ನಲವತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ಅಮೆರಿಕದ ನಾನಾ ಕಡೆ ಪ್ರದರ್ಶಿಸಿದೆ.

| ವಿಕ್ರಮ್ ಹೊಳ್ಳ

(ಲೇಖಕರು ವೃತ್ತಿಯಿಂದ ಸಾಫ್ಟ್​ವೇರ್ ಡೆವಲಪರ್; ಪ್ರವೃತ್ತಿಯಿಂದ ರಂಗಭೂಮಿ ನಟ ಮತ್ತು ಬರಹಗಾರ.)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net