ಮಿದುಳಿನಿಂದ ಪಾದದವರೆಗೆ ಉಪಕಾರಿ ಜೀರಿಗೆ

Jeera
Published on
ಬಹುಶಃ ಅಡುಗೆ ಮನೆಯಲ್ಲಿ ಇರುವ ಔಷಧೀಯ ವಸ್ತುಗಳಿಗೆ ರ್ಯಾಂಕ್ ಕೊಡುವುದಾದರೆ ಮೊದಲನೇ ರ್ಯಾಂಕ್ ಜೀರಿಗೆಗೇ ಸಿಗುತ್ತದೆ. ಅಷ್ಟರ ಮಟ್ಟಿಗೆ ಅದು ಹಲವಾರು ಕಾಯಿಲೆಗಳಲ್ಲಿ ಆಬಾಲ ವೃದ್ಧರಾದಿಯಾಗಿ ಎಲ್ಲರಿಗೂ ಉಪಕಾರಿ ಔಷಧಾಹಾರ. ಮಿದುಳಿನ ಶಕ್ತಿಯನ್ನು ಹೆಚ್ಚು ಮಾಡುವುದರಿಂದ ಹಿಡಿದು ಪಾದದ ಉಗುರಿನ ಸಮಸ್ಯೆ ಯವರೆಗೆ ಇದು ಉಪಯೋಗಿ. ಹೌದು, ಇದು ನಮ್ಮ ಬುದ್ಧಿ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಎಂದು ಆಯುರ್ವೆದ ಹೇಳು ತ್ತದೆ. ಹಾಗಾಗಿ ಇದರ ಬಗ್ಗೆ ವಿವರಿಸುವಾಗ ಮೇಧ್ಯ ಎಂದು ಕೂಡ ಹೇಳಿದ್ದಾರೆ. ಹಾಗಾಗಿ ಚಿಕ್ಕ ಮಕ್ಕಳಿಗೆ ಕೊಡುವ ಆಹಾರ ಪದಾರ್ಥಗಳಲ್ಲಿ ಜೀರಿಗೆಯನ್ನು ಚೆನ್ನಾಗಿ ಬಳಸಬೇಕು.

ಜೀರ್ಣಕ್ರಿಯೆ ಸುಲಭ: ಜೀರಿಗೆಯ ನಿಯಮಿತ ಬಳಕೆಯಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುವುದಲ್ಲದೇ ತಿಂದ ಆಹಾರ ದೇಹಕ್ಕೆ ಚೆನ್ನಾಗಿ ಹೀರಿಕೊಳ್ಳುವಲ್ಲಿಯೂ ಅನುಕೂಲವಾಗುತ್ತದೆ. ಈ ಕಾರಣಕ್ಕಾಗಿಯೇ ಜೀರಿಗೆ ಐಬಿಎಸ್ ಸಮಸ್ಯೆ ಇರುವವರಿಗೆ ಅತಿ ಉಪಯೋಗಿ. ಒಂದಿಷ್ಟು ಜೀರಿಗೆ, ಅದರ ಅರ್ಧದಷ್ಟು ಶುಂಠಿ ಮತ್ತು ಶುಂಠಿಯ ಅರ್ಧದಷ್ಟು ಸೈಂಧವ ಲವಣವನ್ನು ಸೇರಿಸಿ ಚೆನ್ನಾಗಿ ಪುಡಿ ಮಾಡಿ ಒಂದು ಡಬ್ಬಿಯಲ್ಲಿ ಹಾಕಿ ಇಟ್ಟುಕೊಳ್ಳಬೇಕು. ಅರ್ಧ ಚಮಚದಷ್ಟು ಈ ಪುಡಿಯನ್ನು ಊಟ ಪ್ರಾರಂಭ ಮಾಡುವಾಗ ಬಿಸಿ ಅನ್ನಕ್ಕೆ ಒಂದು ತುತ್ತಿಗೆ ಹಾಕಿ, ಅರ್ಧ ಚಮಚ ತುಪ್ಪ ದೊಂದಿಗೆ ಸೇವಿಸಿ, ಮುಂದಿನ ಊಟ ಮಾಡುವುದರಿಂದ ಹೊಟ್ಟೆಯುಬ್ಬರ, ಅಜೀರ್ಣದಂತಹ ತೊಂದರೆ ಗುಣವಾಗುತ್ತವೆ.

ಹೊಟ್ಟೆ ನೋವು ಹತೋಟಿ: ಹೆಣ್ಣು ಮಕ್ಕಳಲ್ಲಿ ಮುಟ್ಟಿನ ಸಮಯದ ಹೊಟ್ಟೆ ನೋವು ಹತೋಟಿಗೆ ತರಲು ಜೀರಿಗೆ ತುಂಬಾ ಅನುಕೂಲಕಾರಿ. ಏಕೆಂದರೆ ಇದು ಗರ್ಭಾಶಯವನ್ನು ಶುದ್ಧ ಮಾಡುವ ಗುಣವನ್ನು ಹೊಂದಿದೆ; ಹಾಗಾಗಿ ರಕ್ತಸ್ರಾವ ಸುಲಭವಾಗಿ ಆಗಿ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಜೀರಿಗೆಯನ್ನು ಪುಡಿ ಮಾಡಿ ಅದರ ಅರ್ಧದಷ್ಟು ಪ್ರಮಾಣದಲ್ಲಿ ಸಾವಯವ ಬೆಲ್ಲವನ್ನು ಸೇರಿಸಿ ಇಟ್ಟುಕೊಳ್ಳ ಬೇಕು. ಮುಟ್ಟಿನ ಸಮಯ ಹತ್ತಿರ ಬಂದಾಗ ಒಂದೆರಡು ದಿನ ಎರಡೆರಡು ಟೀ ಚಮಚದಷ್ಟು ಈ ಪುಡಿಯನ್ನು ಬೆಳಗ್ಗೆ ಮತ್ತು ರಾತ್ರಿ ಊಟದ ಮೊದಲು ಸೇವಿಸಬೇಕು. ಜೀರಿಗೆ ವೃಷ್ಯವೂ, ಬಲ್ಯವೂ ಆಗಿದೆ ಎಂದು ಆಯುರ್ವೆದ ಹೇಳುತ್ತದೆ. ಅಂದರೆ ಲೈಂಗಿಕ ಶಕ್ತಿಯನ್ನು ಹೆಚ್ಚು ಮಾಡುವ ಮತ್ತು ದೇಹದ ಬಲವನ್ನು ಹೆಚ್ಚಿಸುವ ಶಕ್ತಿ ಜೀರಿಗೆಗೆ ಇದೆ ಎಂದರ್ಥ. ಜೀರಿಗೆಗೆ ವಾತ, ಕಫವನ್ನು ನಿಯಂತ್ರಿಸುವ ಗುಣ ಇದೆ. ಹಾಗಾಗಿ ದೇಹದ ಯಾವುದೇ ಭಾಗದಲ್ಲಿ ನೋವು, ಬಿಗಿತ, ನರಸಂಬಂಧಿ ಸಮಸ್ಯೆಗಳು, ಕಫದ ತೊಂದರೆಗಳು ಇರುವಾಗ ಜೀರಿಗೆಯ ಸೇವನೆ ಸಹಕಾರಿ. ಇದು ಜೀರ್ಣಕಾರಿಯಾದ ಕಾರಣದಿಂದ ಪದೇಪದೆ ವಾಂತಿ ಅಥವಾ ಭೇದಿ ಆಗುವವರು ನಿತ್ಯವೂ ಸೇವಿಸಬೇಕು. ಇದರ ಜತೆಗೆ ಸ್ವಲ್ಪ ಶುಂಠಿ ಮತ್ತು ಕೊತ್ತಂಬರಿ ಕಾಳನ್ನು ಸೇರಿಸಿ ಕಷಾಯಮಾಡಿ ನಿತ್ಯವೂ ಸೇವಿಸಿದರೆ ಹೆಚ್ಚು ಅನುಕೂಲಕರ.

ಮೂತ್ರಾಂಗ ವ್ಯೂಹಕ್ಕೂ ಸಹಕಾರಿ: ಇದು ಮೂತ್ರಾಂಗ ವ್ಯೂಹದ ಮೇಲೆ ಕೂಡ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ಮೂತ್ರದ ಕಲ್ಲು, ಮೂತ್ರ ತಡೆ, ಮೂತ್ರಕೋಶದ ಉರಿಯೂತ ಇರುವಾಗ ಔಷಧಗಳ ಜೊತೆಗೆ ಜೀರಿಗೆ ಕಷಾಯವನ್ನು ಕುಡಿಯುತ್ತಿದ್ದರೆ ಸಮಸ್ಯೆ ಬೇಗ ವಾಸಿಯಾಗುತ್ತದೆ. ಚಿಕ್ಕ ಮಕ್ಕಳು ಸರಿಯಾಗಿ ಊಟ ಮಾಡದೆ ಇದ್ದಾಗ ಜೀರಿಗೆ ಕಷಾಯವನ್ನು ಕೊಡುವುದರಿಂದ ಬಾಯಿರುಚಿ ಹೆಚ್ಚಾಗಿ ಚೆನ್ನಾಗಿ ಊಟ ಮಾಡುತ್ತಾರೆ. ಬಾಣಂತಿಯರಿಗೆ ಜೀರಿಗೆ ಕಷಾಯವನ್ನು ಕುಡಿಸುವುದರಿಂದ ಎದೆಹಾಲು ಹೆಚ್ಚುತ್ತದೆ. ಶಾರೀರ ಶುದ್ಧಿ ತುಂಬಾ ಮಾತನಾಡುವ ವೃತ್ತಿಯಲ್ಲಿರುವವರು ಅಥವಾ ಹಾಡುಗಾರರಿಗೆ ಶಾರೀರ ಅಥವಾ ಧ್ವನಿಯ ಸಮಸ್ಯೆಯಾಗುವುದು ಸಹಜ. ಅಂಥವರು ಸ್ವಲ್ಪ ಜೀರಿಗೆ ಮತ್ತು ಜ್ಯೇಷ್ಠಮಧುವಿನ ಮಿಶ್ರಣವನ್ನು ಬಾಯಲ್ಲಿಟ್ಟು ಜಗಿಯುತ್ತಿದ್ದರೆ ಧ್ವನಿ ಸುಧಾರಿಸುತ್ತದೆ ಮತ್ತು ಧ್ವನಿಗೆ ಸಂಬಂಧಿಸಿದ ಸಮಸ್ಯೆ ಬರದಂತೆ ಇದು ತಡೆಯುತ್ತದೆ. ಒಟ್ಟಿನಲ್ಲಿ ನಿತ್ಯವೂ ಜೀರಿಗೆಯನ್ನು ಸೇವಿಸುವುದರಿಂದ ದೇಹದ ಆರೋಗ್ಯ ಕಾಪಾಡಿ ಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net