

| ಡಾ. ರಕ್ಷಾ ಯು.ರಾವ್
ಕೋವಿಡ್ನಿಂದ ಗರ್ಭಿಣಿಯರ ಮೇಲಾಗುವ ಪರಿಣಾಮಗಳ ಕುರಿತು ಸದ್ಯಕ್ಕೆ ಯಾವುದೇ ಅಧಿಕೃತ ಸಂಶೋಧನೆ ನಡೆದಿಲ್ಲ. ಗರ್ಭಪಾತದ ಅಪಾಯ ಅಥವಾ ಭ್ರೂಣಕ್ಕೆ ಆಗುವ ತೊಂದರೆ ಈವರೆಗೆ ಅಧಿಕೃತವಾಗಿ ಸಾಬೀತಾಗಿಲ್ಲದಿದ್ದರೂ, ಅಲ್ಲಲ್ಲಿ ಪ್ರಕರಣ ವರದಿಯಾಗಿವೆ. ಎರಡನೇ ಅಲೆಯಲ್ಲಿ ಹಲವು ತಜ್ಞರು ಗಮನಿಸಿರುವಂತೆ, ಕಾರಣವಿಲ್ಲದ ಗರ್ಭಪಾತ, ಅವಧಿಪೂರ್ಣ ಹೆರಿಗೆ, ಗರ್ಭದೊಳಗೆ ಮಗುವಿನ ಸಾವಿನ ಪ್ರಮಾಣ ಕ್ರಮೇಣ ಹೆಚ್ಚುತ್ತಿದೆ. ಕೊನೇ ಮೂರು ತಿಂಗಳಲ್ಲಿ ಬಂದ ಸೋಂಕಿಗೆ ಗರ್ಭಾವಸ್ಥೆಯಲ್ಲಿ ತೀವ್ರ ನಿಗಾ ಇಡಬೇಕು. ಮೊದಲ 3 ತಿಂಗಳ ಗರ್ಭಿಣಿಗೆ ಸೋಂಕು ಬಂದರೆ ಅದು ಗರ್ಭಪಾತ ಮಾಡಿಸಲು ಸೂಚನೆಯಲ್ಲ. ಗರ್ಭಪಾತಕ್ಕೆ ಕೋವಿಡ್ ಒಂದೇ ಕಾರಣವಾಗಿರಬಾರದು.
ಗರ್ಭಿಣಿ, ಸ್ತನ್ಯಪಾನ ಮಾಡುವ ಮಾತೆಯರ ವ್ಯಾಕ್ಸಿನೇಷನ್: ಸಾಮಾನ್ಯವಾಗಿ ಗರ್ಭಿಣಿಯರಿಗೆ ಯಾವುದೇ ಜೀವಿತ -ವೈರಾಣು ಲಸಿಕೆ ಕೊಡಬಾರದು. ಜಾಗತಿಕವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಕೋವಿಡ್ ಲಸಿಕೆಗಳು ಲೈವ್-ಅಟೆನುಯೇಟೆಡ್ ಆಗಿಲ್ಲ. ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಎರಡು ಲಸಿಕೆಗಳು, ಹೈದರಾಬಾದ್ನ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಹಾಗೂ ಯುಕೆ ಅಸ್ಟ್ರಾಜೆನ್ಕಾ ಆಧಾರಿತ ಪುಣೆಯ ಸೀರಮ್ ಇನ್ಸಿಟ್ಯೂಟ್ನ ಕೋವಿಶೀಲ್ಡ್ ಲಸಿಕೆ. ಕೋವ್ಯಾಕ್ಸಿನ್ ಸಂಪೂರ್ಣ ವೈರಸ್-ಕೊಲ್ಲಲ್ಪಟ್ಟ ಲಸಿಕೆ ಕೋವಿಶೀಲ್ಡ್ ವೈರಲ್ ವೆಕ್ಟರ್ ಲಸಿಕೆ. ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಮಾರ್ಗಸೂಚಿ ಬಿಡುಗಡೆಯಾಗಿರುವುದರಿಂದ ಎಲ್ಲ ಮಹಿಳೆಯರು ಆತಂಕ ಬದಿಗಿಟ್ಟು ಲಸಿಕೆಗೆ ಮುಂದೆ ಬಂದು ಕೋವಿಡ್ ವಿರುದ್ಧ ಸಮರದಲ್ಲಿ ಪಾಲ್ಗೊಳ್ಳಬೇಕಿದೆ.
ಕೋವಿಡ್ ಪಾಸಿಟಿವ್ ತಾಯಿಯಿಂದ ಸ್ತನ್ಯಪಾನ: ಗರ್ಭದಿಂದ ಮಗುವಿಗೆ ಸೋಂಕು ಸಾಬೀತಾಗಿದ್ದರೂ, ಹುಟ್ಟಿದ ಮಕ್ಕಳಲ್ಲಿ ಶೇಕಡ 6 ಪ್ರಮಾಣದಲ್ಲಿ ಕೋವಿಡ್ ಕಂಡುಬಂದಿದೆ. ಹೆರಿಗೆ ನಂತರ ತಾಯಿ ಹಾಗೂ ಮಗುವನ್ನು ನಿಕಟವಾಗಿರಿಸಿದ್ದು ಇದಕ್ಕೆ ಕಾರಣ ಎನ್ನಬಹುದೇ ಹೊರತು, ಸ್ತನ್ಯಪಾನ ಕಾರಣವಲ್ಲ. ರೋಗಲಕ್ಷಣವುಳ್ಳ ತಾಯಿ 6 ಅಡಿ ಅಂತರದಲ್ಲಿ ಮಗುವನ್ನು ಇರಿಸಬೇಕು. ಹಾಲುಣಿಸುವಾಗ ಮುಖಗವಸು ಧರಿಸಬೇಕು.
ಗರ್ಭಧಾರಣೆಗೆ ಪ್ರಯತ್ನ, ಕೋವಿಡ್ ಸಂಕಷ್ಟ: ಗರ್ಭಿಣಿಯರಾಗಲು ಹಂಬಲಿಸುತ್ತಿರುವವರು, ಕೋವಿಡ್ ಕಾರಣದಿಂದ ಅದನ್ನು ಮುಂದೂಡುವ ಅಗತ್ಯವಿಲ್ಲ. ಪ್ರಯತ್ನ ಮುಂದುವರಿಸಬಹುದು. ವ್ಯಾಕ್ಸಿನೇಷನ್ ಪಡೆಯಲು ಯಾವುದೇ ಅಡ್ಡಿ ಇಲ್ಲ.
(ಲೇಖಕರು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರು, ಶಿವಮೊಗ್ಗ)