

| ಡಾ. ಸಿದ್ದಲಿಂಗ ರಾಠೋಡ್
ವಾಣಿಜ್ಯ ಶಾಸ್ತ್ರ ಜನಪ್ರಿಯ ಕೋರ್ಸ್ ಅಷ್ಟೇ ಅಲ್ಲ, ಉಪಯುಕ್ತವೂ ಹೌದು. ಬ್ಯಾಚುಲರ್ ಆಫ್ ಕಾಮರ್ಸ್(ಬಿ.ಕಾಂ) ವಿಶೇಷವಾಗಿ ವಾಣಿಜ್ಯ ಅಥವಾ ಕಾರ್ಪೆರೇಟ್ ವಲಯದಲ್ಲಿ ವೃತ್ತಿ ಜೀವನವನ್ನು ಮುಂದುವರಿಸಲು ಬಯಸುವವರಿಗೆ, ಇತರ ಹಲವು ಜನಪ್ರಿಯ ಕೋರ್ಸ್ಗಳಿದ್ದರೂ, ಕಾರ್ಪೆರೇಟ್ ಜಗತ್ತನ್ನು ನಿಭಾಯಿಸಲು ಜ್ಞಾನ, ಕೌಶಲ ಮತ್ತು ತರಬೇತಿಯನ್ನು ಪಡೆಯುವ ವ್ಯಾಪ್ತಿಯು ಇತರ ಕೋರ್ಸ್ಗಳಿಗಿಂತ ಸಂಪೂರ್ಣವಾಗಿ ಭಿನ್ನ ಮತ್ತು ವಿಸõತವೂ ಆಗಿದೆ. ಬಿ.ಕಾಂ ಹೆಚ್ಚು ವೃತ್ತಿ ಕೇಂದ್ರಿತವಾಗಿದ್ದು, ವಿದ್ಯಾರ್ಥಿಗಳಿಗೆ ವಾಣಿಜ್ಯ ಮತ್ತು ಉದ್ಯಮಶೀಲತೆಯ ವಿವಿಧ ಅಂಶಗಳಲ್ಲಿ ತರಬೇತಿ ನೀಡಲಾಗುತ್ತದೆ. ಆದ್ದರಿಂದ, ಅನೇಕ ಶೈಕ್ಷಣಿಕ ಕಾರ್ಯಕ್ರಮಗಳಂತೆ, ಅಭ್ಯರ್ಥಿಗಳು ಸವಾಲುಗಳನ್ನು ಎದುರಿಸಲು ಮತ್ತು ಕ್ಷೇತ್ರದಲ್ಲಿ ಹೊಸ ದೃಷ್ಟಿಕೋನವನ್ನು ಒದಗಿಸಲು ಇಲ್ಲಿ ತರಬೇತಿ ಸಿಗುತ್ತದೆ. ವಾಣಿಜ್ಯ ಎಂಬುದು ಉತ್ಪನ್ನಗಳು ಮತ್ತು ಸೇವೆಗಳನ್ನು ಖರೀದಿ ಮತ್ತು ಮಾರಾಟ ಮಾಡುವ ವಿಸõತ ಮತ್ತು ಪ್ರಜ್ಞಾಪೂರ್ವಕ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಖರೀದಿ ಮಾರಾಟದ ಈ ಪ್ರಕ್ರಿಯೆಯು ಸಾಮಾನ್ಯವಾಗಿ ದೊಡ್ಡ ಪ್ರಮಾಣದಲ್ಲಿರುತ್ತದೆ.
ವಾಣಿಜ್ಯಶಾಸ್ತ್ರ ವಿಷಯವು ವಿದ್ಯಾರ್ಥಿಗಳ ಪಾಲಿಗೆ ಸಾಕಷ್ಟು ಆಯ್ಕೆಗಳನ್ನು ತೆರೆದು ಬಿಡುತ್ತದೆ. ಇದು ಬ್ಯಾಂಕಿಂಗ್, ವಿಮೆ, ಅಕೌಂಟೆಂಟ್, ಚಾರ್ಟರ್ಡ್ ಅಕೌಂಟೆಂಟ್, ಕಾಸ್ಟ್ ಅಕೌಂಟೆಂಟ್, ಫೈನಾನ್ಶಿಯಲ್ ಅನಲಿಸ್ಟ್ ಇತ್ಯಾದಿ, ವೃತ್ತಿ ಆಯ್ಕೆಗಳನ್ನು ತೆರೆಯುತ್ತದೆ. ಹೀಗೆ ಬ್ಯಾಚುಲರ್ ಆಫ್ ಕಾಮರ್ಸ್ ತುಂಬಾ ವಿಶಿಷ್ಟವಾಗಿದೆ.
ವೃತ್ತಿಪರ ಮಾರ್ಗದರ್ಶನ: ಬಿ.ಕಾಂ. ಪದವೀಧರರಿಗೆ ಉದ್ಯಮ ಜ್ಞಾನ, ವೃತ್ತಿಪರ ಮಾರ್ಗದರ್ಶನಕ್ಕೆ ಕೊರತೆ ಇಲ್ಲ. ಬಹುತೇಕ ಎಲ್ಲ ಪ್ರಾಧ್ಯಾಪಕರು, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ಸಾಕಷ್ಟು ರೀತಿಯಲ್ಲಿ ನೆರವಾಗುತ್ತಾರೆ. ಈ ಮೂಲಕ ವಿದ್ಯಾರ್ಥಿಗಳ ಸಂವಹನ ಕೌಶಲಗಳನ್ನು ಅಭಿವೃಧಿ್ಧ ಪಡಿಸಲು ಅಗತ್ಯವಾದ ವಾತಾವರಣವನ್ನು ಸೃಷ್ಟಿಸುತ್ತಾರೆ. 12 ನೇ ತರಗತಿ ಪರೀಕ್ಷೆಗಳನ್ನು ಮುಗಿಸಿದ ನಂತರ, ಈ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಸಹಾಯ ಆಗುತ್ತದೆ. ಪ್ರತಿಯೊಬ್ಬರೂ ತಮಗೆ ಭರವಸೆಯ ಉದ್ಯೋಗವಕಾಶಗಳನ್ನು ನೀಡುವ ವೃತ್ತಿ ಆಯ್ಕೆಯನ್ನು ಆರಿಸುವ ಗುರಿಯನ್ನು ಹೊಂದಿದ್ದಾರೆ. ಅದೇ ಮನಸ್ಸಿನಲ್ಲಿಟ್ಟುಕೊಂಡು, ಇಂದು ಅನೇಕ ವಿದ್ಯಾರ್ಥಿಗಳು ವಾಣಿಜ್ಯವನ್ನು ವೃತ್ತಿಯಾಗಿ ಆಯ್ಕೆ ಮಾಡುತ್ತಿದ್ದಾರೆ. ಆದಾಗ್ಯೂ, ಈ ಪದವಿಗೆ ದಾಖಲಾಗುವ ಮೊದಲು ವಿದ್ಯಾರ್ಥಿಗಳು ಅದರಿಂದ ತಾವು ಪಡೆಯುವ ಪ್ರಯೋಜನಗಳ ಬಗ್ಗೆ ಸ್ಪಷ್ಟವಾದ ಕಲ್ಪನೆಯನ್ನು ಹೊಂದಿದ್ದರೆ ಕಲಿಕೆಯೂ ನಿಖರವಾಗಿರುತ್ತದೆ.
ಉದ್ಯಮಿ ಅಥವಾ ಉದ್ಯೋಗಿ: ಬಿ.ಕಾಂ ಪದವಿ ಹೊಂದಿರುವ ವಿದ್ಯಾರ್ಥಿಯು ಕಾರ್ಪೆರೇಟ್ ಉದ್ಯೋಗಿಯಾಗಿ ಅಥವಾ ಉದ್ಯಮಿಯಾಗಿ ಮುಂದುವರಿಯಬಹುದು. ವಿದ್ಯಾರ್ಥಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ಪ್ರಪಂಚದ ಮಾರುಕಟ್ಟೆ-ಸಂಬಂಧಿತ ಅಂಶಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ವಾಣಿಜ್ಯಶಾಸ್ತ್ರವು ನೀಡುತ್ತದೆ. ಕಾಮರ್ಸ್ ಪದವಿ ಅಧ್ಯಯನ ಮಾಡುವುದರಿಂದ ವಿದ್ಯಾರ್ಥಿಗಳನ್ನು ಉದ್ಯೋಗಾವಕಾಶ ಮತ್ತು ಸ್ವಯಂ ಉದ್ಯೋಗಿ ಮಾಡುವ ಗುರಿಯನ್ನು ಹೊಂದಿದೆ. ಇದು ಖಾತೆಗಳ ಪುಸ್ತುಕಗಳ ಬರವಣಿಗೆ ಮತ್ತು ವ್ಯಾಖ್ಯಾನವನ್ನು ಕಲಿಯುವಂತೆ ಮಾಡುವುದು, ಅರ್ಥಿಕ ಪರಿಸರದೊಂದಿಗೆ ಸಂಭಾಷಣೆ ನಡೆಸುವುದು ಮತ್ತು ವ್ಯವಹಾರವನ್ನು ನಿರ್ವಹಿಸಲು ಅಗತ್ಯವಿರುವ ನಿರ್ವಹಣಾ ಕೌಶಲಗಳನ್ನು ಪಡೆದುಕೊಳ್ಳುವ ಗುರಿಯನ್ನು ಹೊಂದಿದೆ. ಕಾಮರ್ಸ್ ಪದವಿ ಮೌಖಿಕ ಮತ್ತು ಲಿಖಿತ ಸಂವಹನ, ಮಾಹಿತಿ ತಂತ್ರಜ್ಞಾನ ಮತ್ತು ಸಂಖ್ಯಾಶಾಸ್ತ್ರೀಯ ಕೌಶಲ ಹಾಗು ಕಾನೂನು ಜ್ಞಾನವನ್ನು ನೀಡುವುದು ಮತ್ತು ಅಭಿವೃಧಿ್ಧಡಿಸುವುದನ್ನು ಒಳಗೊಂಡಿದೆ. ಸ್ವಯಂ ಉದ್ಯೋಗದ ಮಹತ್ವವನ್ನು ಪರಿಗಣಿಸಿ, ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಕೌಶಲಗಳನ್ನು ಅಭಿವೃಧಿ್ಧಡಿಸುವ ಮತ್ತು ಬೆಳೆಸುವ ಗುರಿಯನ್ನು ಹೊಂದಿದೆ. ಒಟ್ಟಾರೆಯಾಗಿ, ಕೋರ್ಸ್ಗೆ ದಾಖಲಾಗುವ ವಿದ್ಯಾರ್ಥಿಗಳನ್ನು ಹೆಚ್ಚು ಉತ್ಪಾದಕ, ಸ್ವಾವಲಂಬಿ, ಸ್ವಯಂ ಉದ್ಯೋಗ ಮತ್ತು ಸಮಾಜದ ಪ್ರಯೋಜನಕ್ಕಾಗಿ ರಚನಾತ್ಮಕವಾಗಿಸಲು ಕೆಲಸ ಮಾಡುವ ಗುರಿಯನ್ನು ಹೊಂದಿದೆ.
ಪ್ರಾಯೋಗಿಕ ಅನುಭವಕ್ಕೆ ಹಲವು ದಾರಿ: ವ್ಯವಹಾರದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಂಶಗಳನ್ನು ಅರ್ಥಮಾಡಿಕೊಳ್ಳಲು ಉತ್ತಮ ಮಾರ್ಗಗಳಿವೆ. ಉಪನ್ಯಾಸಗಳು, ವಿಚಾರ ಸಂಕಿರಣಗಳು ಮತ್ತು ಗುಂಪು ಚರ್ಚೆ ಮುಂತಾದವುಗಳು ಪ್ರಾಯೋಗಿಕ ಅನುಭವವನ್ನು ಪಡೆಯಲು ಅನುಕೂಲವಾಗಿದೆ. ಇದಲ್ಲದೆ, ಇಂಟರ್ನ್ಷಿಪ್, ಕೆಲಸದ ನಿಯೊಜನೆಯ ಅವಕಾಶಗಳೂ ಹೇರಳ. ಸಾಂಪ್ರದಾಯಿಕ ವೃತ್ತಿಪರ ಅನುಭವದಲ್ಲಿ ಇರುವ ಕೊರತೆಯನ್ನು ಈ ಪದವಿಯ ಮೂಲಕ ಸರಿದೂಗಿಸುವುದಕ್ಕೆ ಅವಕಾಶವಿದೆ.
(ಲೇಖಕರು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆಂಭಾವಿ, ಸುರಪುರ)