ಸಂಸ್ಕೃತ ಕಲಿಕೆಗಾಗಿರುವ ಅನ್ಯಾಯ ಸರಿಪಡಿಸಿ: ಜನಮತ

Janamatha1
Published on

ದೇಶದಲ್ಲಿ ಶಿಕ್ಷಣಕ್ಕೆ ಹೆಚ್ಚು ಸೌಲಭ್ಯಗಳನ್ನು, ಅವಕಾಶಗಳನ್ನು ಕಲ್ಪಿಸಿ ಶೈಕ್ಷಣಿಕ ಕ್ರಾಂತಿ ಮಾಡಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿ ತರುವುದು ನ್ಯಾಯವೂ, ಶ್ಲಾಘನೀಯವೂ ಆಗಿದೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯದಲ್ಲಿ ಸಹ ಅನುಷ್ಠಾನ ಮಾಡುತ್ತಿರುವುದು ಪ್ರಶಂಸನೀಯ. ಆದರೆ ಪೂರ್ವಸಿದ್ಧತೆ, ವಿಚಾರ ವಿನಿಮಯ, ಸಾಧಕ ಬಾಧಕಗಳ ಚಿಂತನ ಮಂಥನವನ್ನು ಶೈಕ್ಷಣಿಕ ವಲಯದಲ್ಲಿ ಮಾಡದೇ ಇದೇ ಶೈಕ್ಷಣಿಕ ವರ್ಷದಿಂದಲೇ ಪದವಿ ಹಂತದಲ್ಲಿ ಆರಂಭ ಮಾಡುತ್ತಿರುವುದು ಸೂಕ್ತವೆನಿಸುತ್ತಿಲ್ಲ. ಈ ನೀತಿಯನ್ನು ಕೆಳಹಂತದಲ್ಲಿ (ಪ್ರಾಥಮಿಕ ಹಂತದಿಂದ) ಒಂದೊಂದಾಗಿ ಅನುಷ್ಠಾನಗೊಳಿಸುವುದು ಸರಿಯಾದ ಕ್ರಮವಲ್ಲವೇ?. ಒಂದು ವೇಳೆ ಆರಂಭಿಸಲೇಬೇಕಾಗಿದ್ದರೆ ಅವುಗಳಲ್ಲಿ ದೋಷ, ವಿವಾದಗಳಿಲ್ಲದೆ ಅನುಷ್ಠಾನಗೊಳಿಸುವುದು ಸರಿಯಲ್ಲವೇ?. ಏಕೆಂದರೆ ಪದವಿ ಹಂತದಲ್ಲಿ ಭಾಷೆಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿರುವುದು ಸೂಕ್ತವಲ್ಲ.

ಸಂಸ್ಕೃತ ಭಾಷೆ ಕಲಿಯಲು ಬಯಸುವ ವಿದ್ಯಾರ್ಥಿಗಳ ಅವಕಾಶಗಳನ್ನು ಕಸಿಯಲಾಗಿದೆ. ನೂತನ ಶಿಕ್ಷಣ ನೀತಿಯಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಗೆ ಹೆಚ್ಚು ಒತ್ತನ್ನು ನೀಡಿದ್ದಾರೆ. ಹೀಗಿರುವಾಗ ಪದವಿ ತರಗತಿಗಳಲ್ಲಿ ಸಂಸ್ಕೃತವನ್ನು ಭಾಷೆಯಾಗಿ ಓದ ಬಯಸುವ ವಿದ್ಯಾರ್ಥಿಗಳ ಆಸೆಗೆ ತಣ್ಣೀರು ಎರಚುವ ಕಾರ್ಯ, ಈಗ ಆದೇಶ ಮಾಡಿರುವ ಭಾಷಾ ನೀತಿಯಿಂದ ಆಗಿದೆ ಎಂದು ಹೇಳಲು ದುಃಖವಾಗುತ್ತದೆ. ಪ್ರಸ್ತುತ ಕನ್ನಡದೊಂದಿಗೆ ಸಂಸ್ಕೃತ ಅಧ್ಯಯನಕ್ಕೆ ಯಾವ ಅವಕಾಶವಿದೆಯೋ ಅದೇ ಇದ್ದಿದ್ದರೆ ಏನು ಸಮಸ್ಯೆ ಆಗುತ್ತಿತ್ತು? ಪದವಿ ಹಂತದ ವಿದ್ಯಾರ್ಥಿಗಳಿಗೆ ಮೊದಲು ಇರುವಂತೆಯೇ ಭಾಷಾ ಸಂಯೋಜನೆಗೆ ಅವಕಾಶವಿದ್ದರೆ ಸಂಸ್ಕೃತದ ಅಧ್ಯಯನವಾಗಿ ಆ ಸಂಮೃದ್ಧ ಭಾಷೆಯ ಸತ್ತ್ವ ಯುವಜನಾಂಗದಲ್ಲಿ ಪಸರಿಸುತ್ತಿತ್ತು. ಅಂತಯೇ ಸಂಸ್ಕೃತ ಉಪನ್ಯಾಸಕ ವೃಂದದ ಬದುಕು ಹಾಳಾಗದು. ಆದುದರಿಂದ ಈಗ ಇರುವಂತೆಯೇ ಪದವಿ ಹಂತದಲ್ಲಿ ಕನ್ನಡದೊಂದಿಗೆ ಇತರ ಭಾಷೆಗಳು ಮತ್ತು ಇಂಗ್ಲಿಷ್ ಭಾಷೆಯ ಅಧ್ಯಯನಕ್ಕೆ ಯಾವ ಅವಕಾಶಗಳಿವೆಯೋ ಅವುಗಳನ್ನು ಸೂಕ್ತ ತಿದ್ದುಪಡಿಗಳೊಂದಿಗೆ ಜಾರಿಗೆ ತರುವುದು ಉತ್ತಮ. ಸಂಸ್ಕೃತ ಭಾಷೆಯ ಅಧ್ಯಯನಕ್ಕೆ ಮಾರಕವಾಗಿರುವ ಆದೇಶವನ್ನು ಹಿಂಪಡೆದು, ಸಂಸ್ಕೃತ ಭಾಷಾ ಕಲಿಕೆಗೆ ಪೋ›ತ್ಸಾಹ ನೀಡಬೇಕಾಗಿ ಉನ್ನತ ಶಿಕ್ಷಣ ಸಚಿವರಲ್ಲಿ ಕೋರಿಕೆ.

| ಪ್ರೊ. ಕೆ. ಕೃಷ್ಣಮೂರ್ತಿ ಮಯ್ಯ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net