

ಬೆಂಗಳೂರು: ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಕರೋನಾ ಸೋಂಕು ಮತ್ತೊಮ್ಮೆ ಆತಂಕ ಸೃಷ್ಟಿಸಿದೆ. ಅಮೆರಿಕಾ, ಚೀನಾ ಬಳಿಕ ಇದೀಗ ನಮ್ಮ ನೆರೆಯ ಕೇರಳದಲ್ಲಿ ಕರೋನಾ ರೂಪಾಂತರಿ ಜೆಎನ್.1 ಪ್ರಕರಣ ಪತ್ತೆಯಾಗಿ ಭಾರತಕ್ಕೂ ಈ ಹೊಸ ರೂಪಾಂತರಿ ವೈರಸ್ ಕಾಲಿಟ್ಟಿದೆ. ಹೀಗಾಗಿಯೇ ಮತ್ತೊಮ್ಮೆ ಕರ್ನಾಟಕ ಸೇರಿದಂತೆ ಇಡೀ ದೇಶದ ಜನರಲ್ಲಿ ಭಯ ಮನೆಮಾಡಿದೆ.
ರೋಗ ಲಕ್ಷಣಗಳೇನು?: ವಿಪರೀತವಾದ ಶೀತ, ಗಂಟಲು ನೋವು, ಜ್ವರ, ಮೈಕೈ ಮತ್ತು ತಲೆನೋವು ಈ ಹೊಸ ರೂಪಾಂತರಿಯ ಪ್ರಮುಖ ರೋಗಲಕ್ಷಣಗಳು.
ಶರವೇಗದಲ್ಲಿ ಹರಡುತ್ತದೆ ವೈರಸ್: ಸೋಂಕು ಶರವೇಗದಲ್ಲಿ ಹರಡುವುದರಿಂದ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಕೈಗಳನ್ನು ಶುಭ್ರಗೊಳಿಸುವುದು ಅತ್ಯಗತ್ಯವಾಗಿದೆ. ಇದರ ರೋಗಲಕ್ಷಣ ಸೌಮ್ಯವಾಗಿರುತ್ತದೆ ಎಂದು ಹೇಳಲಾಗುತ್ತಿದ್ದು, ಸೋಂಕು ಕಾಣಿಸಿಕೊಂಡರೆ ಆಸ್ಪತ್ರೆಗೆ ದಾಖಲಾಗಲೇಬೇಕೆಂದೇನೂ ಇಲ್ಲ. ಮನೆಯಲ್ಲೇ ಕ್ವಾರಂಟೈನ್ ಆಗಿ ರೋಗವನ್ನು ಕಡಿಮೆ ಮಾಡಿಕೊಳ್ಳಬಹುದು. ಹೀಗಾಗಿ, ಈ ಹೊಸ ರೂಪಾಂತರಿಯ ಲಕ್ಷಣಗಳು, ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕಾದುದು ಅಗತ್ಯ.
ಯಾರೆಲ್ಲ ಮುನ್ನೆಚ್ಚರಿಕೆ ವಹಿಸಬೇಕು?: ಕರೋನಾ ರೂಪಾಂತರಿ ಜೆಎನ್.1 ಹೆಚ್ಚಿನ ಟ್ರಾನ್ಸ್ಮಿಸಿಬಿಲಿಟಿ ಮತ್ತು ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಇದು ಹಿಂದಿನ ಒಮಿಕ್ರಾನ್ ತಳಿಯದ್ದೇ ರೋಗಲಕ್ಷಣಗಳನ್ನು ಹೊಂದಿದ್ದರೂ ದುರ್ಬಲ ಆರೋಗ್ಯ ಸ್ಥಿತಿ ಹೊಂದಿರುವವರು, ಗರ್ಭಿಣಿಯರು, ವೃದ್ಧರು ಮತ್ತು ಮಕ್ಕಳಿಗೆ ಈ ಸೋಂಕಿನ ಅಪಾಯ ಹೆಚ್ಚು.
ರೋಗ ತಡೆಗಟ್ಟುವುದು ಹೇಗೆ?: ಈ ರೋಗ ಹರಡದಂತೆ ಮಾಸ್ಕ್ ಧರಿಸುವುದು, ಗ್ಲೌಸ್ಗಳನ್ನು ಹಾಕಿಕೊಳ್ಳುವುದು, ನೈರ್ಮಲ್ಯ ಕಾಪಾಡಿಕೊಳ್ಳುವುದು ಅಗತ್ಯ. ಹಾಗೇ, ಮುನ್ನೆಚ್ಚರಿಕಾ ಕ್ರಮವಾಗಿ ಬೂಸ್ಟರ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ತಜ್ಞರು ಸಲಹೆ ನೀಡಿದ್ದಾರೆ.
ಭಾರತದಲ್ಲಿ ಹೆಚ್ಚಿದ ಆತಂಕ: ಈ ವೈರಸ್ ಮೊದಲ ಬಾರಿಗೆ ಅಮೆರಿಕಾದಲ್ಲಿ ಸೆಪ್ಟೆಂಬರ್‌ನಲ್ಲಿ ಪತ್ತೆ ಹಚ್ಚಲಾಗಿತ್ತು. ಬಳಿಕ ಚೀನಾದಲ್ಲಿ ಡಿಸೆಂಬರ್ 15ರಂದು 7 ಪ್ರಕರಣಗಳು ಕಂಡುಬಂದದವು. ಇದು ಈ ಸೋಂಕಿನ ಹರಡುವಿಕೆಯ ಬಗ್ಗೆ ಕಳವಳಕ್ಕೆ ಕಾರಣವಾಗಿದೆ. ಕರೋನಾ -19 ಮತ್ತು ಇನ್ಫ್ಲುಯೆನ್ಸದ ತಾಜಾ ಪ್ರಕರಣಗಳು ಅಮೆರಿಕದ ಆರೋಗ್ಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಎಚ್ಚರಿಸಿದೆ. ಇನ್ನು ಕರೋನಾ ರೂಪಾಂತರಿ ಜೆಎನ್.1 ವೈರಸ್ ಅಮೆರಿಕಾದ ಶೇ. 15ರಿಂದ ಶೇ. 29ರಷ್ಟು ಜನರಲ್ಲಿ ಪತ್ತೆಯಾಗಿದೆ. ಕರೋನಾ ರೂಪಾಂತರಿ ಜೆಎನ್.1 ವೈರಸ್ ಡಿಸೆಂಬರ್ 8ರಂದು ಕೇರಳದ ತಿರುವನಂತಪುರಂ ಜಿಲ್ಲೆಯ 79 ವರ್ಷದ ಮಹಿಳೆಯಲ್ಲಿ ಕಂಡುಬಂದಿತ್ತು.