ಅಪ್ಪ-ಮಗಳಿಂದ ಕರೊನಾ ಜಾಗೃತಿ; ಅದಕ್ಕೆಂದೇ ಕಿರುಪುಸ್ತಕ, ಅನಿಮೇಷನ್..

Putani 2nd
Published on

ಕರೊನಾ ಮೊದಲ ಮತ್ತು ಎರಡನೇ ಅಲೆಯಲ್ಲಿ ಲಕ್ಷಾಂತರ ಜನರ ಜೀವ-ಜೀವನ ತರಗೆಲೆಯಂತೆ ಉದುರಿದೆ. ಸಂಭವನೀಯ ಮೂರನೇ ಅಲೆಗೆ ಮಕ್ಕಳೇ ಟಾರ್ಗೆಟ್ ಎಂಬ ಸುದ್ದಿ ಆತಂಕ ಮೂಡಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೊನ್ನಾವರದ ತಂದೆ-ಮಗಳ ಜೋಡಿ ಮಕ್ಕಳಿಗಾಗಿ ಕರೊನಾ ಜಾಗೃತಿ ಮೂಡಿಸುವ ಕಿರು ಪುಸ್ತಕ ಮತ್ತು ಅನಿಮೇಟೆಡ್ ವಿಡಿಯೋ ಸಿದ್ಧಪಡಿಸಿದೆ.

| ಕಿರಣ್ ಮಾದರಹಳ್ಳಿ

ಅದೊಂದು ಸುಂದರ ಊರು. ಅಲ್ಲಿ ಮಕ್ಕಳು ಶಾಲೆಗೆ ಹೋಗುತ್ತಾ, ಸ್ವಿಮ್ಮಿಂಗ್ ಮಾಡುತ್ತಾ, ಆಟವಾಡುತ್ತಾ ಮಜವಾಗಿ ಇದ್ದರು. ಪುಟ್ಟ ಬಾಲಕ ರಾಜು ಮುಂದಿನ ವಾರ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವ ಕಾತರದಲ್ಲಿದ್ದ. ಅಷ್ಟರಲ್ಲಿ ಕರೊನಾ ಉಲ್ಬಣಿಸಿ ಲಾಕ್​ಡೌನ್ ಘೋಷಿಸಲಾಯಿತು. ರಾಜುವಿನ ಕನಸೆಲ್ಲಾ ನುಚ್ಚು ನೂರಾಯಿತು. ಸಂಶೋಧನೆ ಆರಂಭಿಸಿದ ವಿಜ್ಞಾನಿಗಳು ಮತ್ತು ವೈದ್ಯರಿಗೆ ತಿಳಿದದ್ದು ಕರೊನಾ ಸೋಂಕು ತಡೆಯುವ ತಂತ್ರ. ಅದೇನು ಗೊತ್ತಾ...

ಹೀಗೊಂದು ಕಥೆಗೆ ಹೊನ್ನಾವರದ ಅನಿಮೇಟರ್ ಶಿವ ಹೆಗಡೆ ಮತ್ತು ಅವರ 10 ವರ್ಷದ ಮಗಳು ವರ್ಷಾ ದೃಶ್ಯರೂಪ ಕೊಟ್ಟಿದ್ದಾರೆ (ಅನಿಮೇಷನ್). ಜತೆಗೆ 9 ಪುಟಗಳ ಕಿರುಪುಸ್ತಕದ ಪಿಡಿಎಫ್ ಸಿದ್ಧಪಡಿಸಿದ್ದಾರೆ. ಸುಮಾರು ಒಂದೂವರೆ ತಿಂಗಳ ಶ್ರಮದಿಂದ ಈ 5 ನಿಮಿಷದ ಅನಿಮೇಟೆಡ್ ವಿಡಿಯೋ ತಯಾರಾಗಿದೆ. ಸೋಂಕು ತಡೆಗಟ್ಟಲು ಪಾಲಿಸಬೇಕಾದ ಚಿತ್ರಗಳನ್ನು ವರ್ಷಾ ಬಿಡಿಸಿದ್ದಾಳೆ. ‘ಮಕ್ಕಳಲ್ಲಿ ಕರೊನಾ ಅರಿವು’ ಮೂಡಿಸುವ ದೃಷ್ಟಿಯಿಂದ ಇದನ್ನು ತಯಾರಿಸಲಾಗಿದ್ದು, ಕೆಲವು ನಿಯಮಗಳನ್ನು ಅನುಸರಿಸಬೇಕೆಂದು ಸಲಹೆ ನೀಡಿದೆ.

ಪ್ರತಿದಿನ ಹಲ್ಲುಜ್ಜಿ, ಸ್ನಾನ ಮಾಡಿ; ಸ್ವಚ್ಛವಾದ ಬಟ್ಟೆ ಧರಿಸಿ; ತಪ್ಪದೇ ಮಾಸ್ಕ್ ಧರಿಸಿ; ಅಪರಿಚಿತ ವ್ಯಕ್ತಿಗಳಿಂದ ಅಥವಾ ಕೋವಿಡ್ ಸೋಂಕಿತರಿಂದ ಕನಿಷ್ಠ 6 ಅಡಿ ಅಂತರ ಕಾಪಾಡಿಕೊಳ್ಳಿ; ಆಗಾಗ ಮಾಸ್ಕ್ ತೊಳೆದು ಸ್ವಚ್ಛಗೊಳಿಸಿ; ಅನಗತ್ಯವಾಗಿ ಬಾಯಿ, ಮೂಗು, ಕಣ್ಣು ಮುಟ್ಟಿಕೊಳ್ಳಬೇಡಿ; ಆಗಾಗ ಕೈಗಳನ್ನು ತೊಳೆದುಕೊಳ್ಳುತ್ತಿರಿ; ಸುಮ್ಮನೆ ಯಾವುದೇ ವಸ್ತುಗಳನ್ನು ಮುಟ್ಟಬೇಡಿ; ಹೊರಗಡೆಯಿಂದ ಬಂದ ಕೂಡಲೇ ನಿಮ್ಮ ಮುಖ, ಕೈ ಕಾಲು ತೊಳೆದುಕೊಳ್ಳಿ; ಧರಿಸುವ ಬಟ್ಟೆಯನ್ನು ಪ್ರತಿದಿನ ಸ್ವಚ್ಛವಾಗಿ ತೊಳೆದುಕೊಳ್ಳಬೇಕು; ತುಂಬಾ ಜನ ಸೇರುವ ಜಾಗಕ್ಕೆ ಹೋಗಬೇಡಿ; ಹೊರಗಡೆ ತಿಂಡಿ ತಿನ್ನದಿರಿ; ಮನೆಯಲ್ಲೇ ಮಾಡಿರುವ ತಿಂಡಿ ತಿನ್ನಿ; ದಿನವೂ ವ್ಯಾಯಾಮ ಮಾಡಿ... ಇತ್ಯಾದಿ. ಮಕ್ಕಳೇ ಈ ನಿಯಮಗಳನ್ನು ನೀವು ಪಾಲಿಸಿದರೆ ಕರೊನಾ ಬಾರದಂತೆ ತಡೆಗಟ್ಟಬಹುದು. ಮತ್ತೆ ರಾಜು ಕೂಡ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬಹುದು ಎಂದು ಹೇಳುವ ಮೂಲಕ ಕಥೆ ಮುಕ್ತಾಯಗೊಳ್ಳುತ್ತದೆ.

ಆಶಾ ಕಾರ್ಯಕರ್ತೆಯರಿಂದ ಜಾಗೃತಿ

‘‘ಕೋವಿಡ್ ಜಾಗೃತಿ ಕುರಿತ ಈ ವಿಡಿಯೋ ಮತ್ತು ಪಿಡಿಎಫ್​ನಲ್ಲಿರುವ ಕಥಾ ಪುಸ್ತಕವನ್ನು ಜನರ ಮೊಬೈಲ್​ಗಳಿಗೆ ಆಶಾ ಕಾರ್ಯಕರ್ತೆಯರು ಕಳುಹಿಸಿ ಮಕ್ಕಳಲ್ಲಿ ಅರಿವು ಮೂಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ರವಾನೆಯಾಗಿ ಬಂದ ಈ ಸಂದೇಶವನ್ನು ನನಗೆ ಗೊತ್ತಿರುವ ಪಾಲಕರಿಗೂ ಕಳುಹಿಸಿ ತಮ್ಮ ಮಕ್ಕಳಿಗೆ ವಿಡಿಯೋ ನೋಡಲು ಅಥವಾ ಕಥೆಯನ್ನು ಓದಲು ಹೇಳಿ ಎಂದು ಸಲಹೆ ನೀಡುತ್ತಿದ್ದೇನೆ’’ ಎನ್ನುತ್ತಾರೆ ಮಹಾಂತಾಳಪುರದ ಆಶಾ ಕಾರ್ಯಕರ್ತೆ ಜಿ. ರಾಣಿ.

ಕಾರ್ಟೂನ್​ಗಳನ್ನು ಹೆಚ್ಚಾಗಿ ನೋಡುವ ಮಕ್ಕಳಿಗೆ ಅದರ ಮೂಲಕವೇ ಕರೊನಾ ಬಗ್ಗೆ ಜಾಗೃತಿ ಮೂಡಿಸಬೇಕು ಎನಿಸಿತು. ಅದಕ್ಕಾಗಿ ವಿಡಿಯೋ ಮತ್ತು ಕಥೆಯ ಪಿಡಿಎಫ್ ಸಿದ್ಧಪಡಿಸಿದೆವು. ಇದನ್ನು ನೋಡಿದ ಮಕ್ಕಳು ಕರೊನಾ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಖಚಿತ.

| ಶಿವ ಹೆಗಡೆ ಅನಿಮೇಟರ್, ಹೊನ್ನಾವರ

ಕೋವಿಡ್ ಬಾರದಂತೆ ಮುಂಜಾಗ್ರತೆ ವಹಿಸಬೇಕಾದ ಕುರಿತು ಚಿತ್ರಗಳನ್ನು ಬಿಡಿಸಿದ್ದೇನೆ. ಕರೊನಾ ಹರಡದಿರಲು ನಾವೆಲ್ಲರೂ ಪಾಲಿಸಬೇಕಾದ ನಿಯಮಗಳು ಚಿತ್ರಗಳಲ್ಲಿವೆ.

| ವರ್ಷಾ ಹೆಗಡೆ ಹೊನ್ನಾವರ

ಅನಿಮೇಟೆಡ್ ವಿಡಿಯೋ ನೋಡಲು ಈ ಲಿಂಕ್ ಅನುಸರಿಸಿ: https://bit.ly/35vcCHI

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net