ಬಾಣಂತಿಗೆ ಕಾಡುವ ಗೀಳು; ಅರ್ಥಹೀನ ಯೋಚನೆಗೆ ಬೇಕು ಕಡಿವಾಣ

Lalitha
Published on

ನಾನೇಕೆ ಹೀಗೆ ಯೋಚಿಸುತ್ತಿದ್ದೇನೆ? ಇಷ್ಟು ಆಸೆಯಿಂದ ಮಗು ಮಾಡಿಕೊಂಡಿದ್ದೇನೆ. ಮಗುವಿಗೆ ಏನಾದರೂ ಕೆಟ್ಟದು ಮಾಡಿಬಿಡುತ್ತೇನೆಂಬ ಯೋಚನೆ ಬರುತ್ತಿದೆಯಲ್ಲಾ, ನನಗೇನಾಗಿದೆ? ಎಂಬ ಗಿಲ್ಟ್ ಓಸಿಡಿ ಇರುವ ತಾಯಂದಿರಿಗೆ ಕಾಡುತ್ತದೆ. ನಾನೇ ನನ್ನ ಮಗುವನ್ನು ಸಾಯಿಸುವಷ್ಟು ಕೆಟ್ಟವಳೇ? ನಾನೇ ಅಪರಾಧಿಯೇ? ಎಂದು ಮನಸ್ಸು ನಿರಾಶವಾಗುತ್ತದೆ. ಎಲ್ಲರೂ ಎಷ್ಟು ಸಹಜವಾಗಿ ತಾಯಿಯ ಜವಾಬ್ದಾರಿ ನಿಭಾಯಿಸುತ್ತಾರೆ, ಮಗುವಿನೊಂದಿಗೆ ಪ್ರೀತಿಯಿಂದ ಇರುತ್ತಾರೆ. ನನಗೆ ಮಾತ್ರ ಈ ತಾಯ್ತನದ ಪ್ರೀತಿ ಬರುತ್ತಿಲ್ಲವಲ್ಲ ಎಂದು ಖಿನ್ನರಾಗುತ್ತಾರೆ. ಇದನ್ನೇ ಗೀಳು ಎನ್ನುತ್ತೇವೆ. ಇದರಿಂದ ಹೊರಬರುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ...

| ಡಾ. ಕೆ.ಎಸ್. ಶುಭ್ರತಾ ಮನೋವೈದ್ಯೆ, ಶಿವಮೊಗ್ಗ

ಪಾಪುವಿಗೆ ಮೂರು ತಿಂಗಳು. ಮಕ್ಕಳ ವೈದ್ಯರ ಬಳಿ ಪ್ರತಿ ನಾಲ್ಕು ದಿನಗಳಿಗೊಮ್ಮೆ ಹೋಗುತ್ತಿದ್ದಾರೆ ಪಾಪು ಮತ್ತು ಪಾಪುವಿನ ತಾಯಿ ರಶ್ಮಿ. ರಶ್ಮಿಗೆ ಪಾಪು ಸರಿಯಾಗಿ ಹಾಲು ಕುಡಿಯುತ್ತಿಲ್ಲ, ತೇಗುತ್ತಿಲ್ಲ ಎಂದು ಸದಾ ಚಿಂತೆ. ಮೊದಲ ಬಾರಿ, ತನಗೆ ಬರುವ ಹಾಲು ಪಾಪುವಿಗೆ ಸಾಕಾಗುತ್ತಿಲ್ಲ, ಬಂದಷ್ಟನ್ನೂ ಅದು ಸರಿಯಾಗಿ ಕುಡಿಯುತ್ತಿಲ್ಲ ಎಂದು ರಶ್ಮಿ ತನ್ನ ಅಪ್ಪ-ಅಮ್ಮನ ಬಳಿ ಹೇಳಿದಾಗ, ಅವರಿಗೂ ಚಿಂತೆಯಾಯಿತು. ಮಕ್ಕಳ ವೈದ್ಯರಲ್ಲಿ ತಾಯಿಯೇ ರಶ್ಮಿ ಮತ್ತು ಪಾಪುವನ್ನು ಕರೆದೊಯ್ದರು. ಅವರು ಎಲ್ಲವನ್ನೂ ಪರೀಕ್ಷಿಸಿ, ಪಾಪು ಆರೋಗ್ಯ ಚೆನ್ನಾಗಿದೆ ಎಂದರು. ‘ತೂಕ ಏರುತ್ತಿದೆ, ಚುರುಕಾಗಿದೆ, ಕುತ್ತಿಗೆ ನಿಂತಿದೆ, ಮಲ-ಮೂತ್ರ ಮಾಡುತ್ತಿದೆ, ಚಿಂತಿಸಬೇಡಿ’ ಎಂದು ತಿಳಿಹೇಳಿದರು. ವಾಪಸ್ ಮನೆಗೆ ಬಂದರು. ನಾಲ್ಕು ದಿನಗಳ ಬಳಿಕ ಮತ್ತೆ ರಶ್ಮಿಯ ಚಿಂತೆ, ‘ಮಗು ಯಾಕೋ ಸರಿಯಾಗಿ ಹಾಲು ಕುಡಿಯುತ್ತಿಲ್ಲ’ ಎಂದು. ಗಂಡನನ್ನು ಕರೆಸಿದಳು. ‘ನನ್ನ ಮಗು ಹಾಲು ಸರಿಯಾಗಿ ಕುಡಿಯದೇ ಏನಾದರೂ ಕಾಯಿಲೆ ಬಂದು ಬಿಟ್ಟರೆ, ಗ್ಲೂಕೋಸ್ ಪ್ರಮಾಣ ಕಡಿಮೆಯಾದರೆ’ ಎಂದು ಅಳಹತ್ತಿದಳು. ಮತ್ತೆ ಮಕ್ಕಳ ವೈದ್ಯರ ಭೇಟಿ. ಅವರು ಸಾಂತ್ವನ ಹೇಳಿ ಕಳಿಸಿದರು. ಇನ್ನೆರಡು ದಿನಗಳಾಗುವಷ್ಟರಲ್ಲಿ ರಶ್ಮಿಯ ಗಾಬರಿ ಜಾಸ್ತಿಯಾಯಿತು. ಮತ್ತೆ ಮಕ್ಕಳ ವೈದ್ಯರ ಬಳಿ ಹೋದರೆ, ಅವರು ಮಗುವನ್ನು ಪರೀಕ್ಷಿಸದೆ, ‘ರಶ್ಮಿಗೇ ಆತಂಕದ ಸಮಸ್ಯೆ ಇರಬಹುದು, ಮನೋವೈದ್ಯರಿಗೆ ತೋರಿಸಿ’ ಎಂದರು. ಮನೋವೈದ್ಯರ ಬಳಿ ತೋರಿಸಿ ಚಿಕಿತ್ಸೆ ತೆಗೆದುಕೊಂಡ ಮೇಲೆ ರಶ್ಮಿ ಆರಾಮಾಗಿದ್ದಾಳೆ. ರಶ್ಮಿಗೆ ಆಗಿರುವುದು ಆತಂಕದ ಸಮಸ್ಯೆಗಳು. ಮನೋವೈದ್ಯರಲ್ಲಿ ತೋರಿಸಿದಾಗ, ಚಿಕಿತ್ಸೆ ತೆಗೆದುಕೊಂಡಾಗ, ಅವಳು ಆರಾಮಾದಳೆನ್ನುವುದು ಸಂತಸದ ವಿಷಯ.

ಸಹಜ ಆತಂಕ ಗೀಳು: ಮೊದಲ ಬಾರಿ ತಾಯಿಯಾಗಿದ್ದಾಳೆ. ಡೆಲಿವರಿಯಾಗಿ ವಾರದ ನಂತರ ತವರುಮನೆಗೆ ಬಂದಿದ್ದಾಳೆ. ತಾಯಿ-ಮಗುವಿನ ರೂಮಿರುವುದು ಮೊದಲನೇ ಮಹಡಿಯಲ್ಲಿ. ಮೊದಲೆರಡು ಬಾರಿ ಮೆಟ್ಟಿಲು ಇಳಿಯುವಾಗ, ಪಾಪು ಎತ್ತಿಕೊಂಡು, ‘ಎಲ್ಲಿ ಬೀಳಿಸುತ್ತೇವೋ’ ಎಂದು ಭಯ ಪಡುವುದು ಸಹಜ. ನಿಧಾನ ವಾಗಿ ಹೆಜ್ಜೆ ಹಾಕುತ್ತಾ, ರೇಲಿಂಗ್ಸ್​ಗೆ ಒರಗಿ ಇಳಿದಿರೋ, ಓಕೆ. ಅದೇ, ಹೀಗೆ ಭಯವಾಗುತ್ತದೆಂದು ಮೆಟ್ಟಿಲಿಳಿಯುವುದನ್ನೇ ನಿಲ್ಲಿಸಿದರೆ, ಸಮಸ್ಯೆಯೇ. ರಾತ್ರಿ ಮಲಗುವಾಗ, ತಾನು ಹೊರಳಿ, ಮಗು ಉಸಿರು ಗಟ್ಟಿದರೆ ಎಂದು ಮೊದಲ ಬಾರಿ ಆತಂಕ ಆಗಬಹುದು. ಅದಕ್ಕಾಗಿ ತೊಟ್ಟಿಲಿನಲ್ಲಿ ಮಲಗಿಸುವುದು, ಜತೆಗೆ ಮಲಗುವಾಗ ಆಚೀಚೆ ದಿಂಬು ಇಡುವುದು ಸಹಜ. ಅದೇ ಈ ಆತಂಕದಿಂದಾಗಿ ವಾರಗಟ್ಟಲೇ, ರಾತ್ರಿ ಜಾಗ್ರತೆಯಿದ್ದು ಪಾಪು ಮಲಗಿದ್ದನ್ನು ನೋಡುತ್ತಾ ಕೂಡುವುದು ಅಸಹಜ.

ಮಗು ಹುಟ್ಟಿದಾಗ ತಾಯಿಯೂ ಹುಟ್ಟುತ್ತಾಳೆ!: ಮನೆಯಲ್ಲಿ ಮಗುವಿನ ಜನನ ಅತ್ಯಂತ ಖುಷಿಯ ಕ್ಷಣ. ಜೀವನಚಕ್ರದಲ್ಲಿ, ಜನನ ಹೇಗೆ ಪ್ರಮುಖ ಪಾತ್ರ ವಹಿಸುತ್ತದೋ, ಹಾಗೆ ಪ್ರತಿ ಮಹಿಳೆಗೆ ಈ ಜನನ, ಒಂದು ಮಹತ್ವದ ಘಟ್ಟ. ಮಗುವಿನ ಜನನದ ಜತೆಗೆ ತಾಯಿಯ ಜನನವಾಗುತ್ತದೆ. ತಾಯಿಯಾಗುವ ಕ್ಷಣಗಳು, ಮನಸ್ಸಿಗೆ ಸಂತಸವನ್ನು ತಂದರೂ, ಅದೇ ಹೊರೆಯಾಗಿಯೂ ಕಾಡಬಹುದು. ಒಂಬತ್ತು ತಿಂಗಳು ಹೊತ್ತು, ಹೆತ್ತದ್ದು, ದೇಹದಲ್ಲಾದ ಬದಲಾವಣೆಗಳು, ಹಾಮೋನ್ ಏರುಪೇರು ಹಾಗೂ ಥಟ್ಟನೆ ಒಬ್ಬರನ್ನು ನೋಡಿಕೊಳ್ಳುವ ಜಾಗದಲ್ಲಿ ಇಬ್ಬರನ್ನು ನೋಡಿಕೊಳ್ಳುವ ಜವಾಬ್ದಾರಿ; ಈ ಎಲ್ಲವೂ ಒತ್ತಡವಾಗಿ ಪರಿಣಮಿಸಬಹುದು. ಈ ಸಮಯದಲ್ಲಿ ಮಾನಸಿಕವಾಗಿ ಹಲವಾರು ಸಮಸ್ಯೆ ಎದುರಿಸಬೇಕಾಗಬಹುದು. ಅವುಗಳಲ್ಲಿ ಒಂದು, ಬಾಣಂತಿ ಸಮಯದ ಗೀಳು. ಹೆರಿಗೆಯಾದ ಕೆಲವೇ ದಿನಗಳಲ್ಲಿ, ಕೆಲವರಿಗೆ ಮನಸ್ಸಿಗೆ ಬೇಸರ, ಉದ್ವೇಗ, ನಿದ್ರಾಹೀನತೆ, ಭಯ ಹೀಗೆ ವಿವಿಧ ಭಾವನೆಗಳು ಕಾಡುತ್ತವೆ. ಶೇ.60-80 ತಾಯಂದಿರಿಗೆ ಕಾಡುವ ಈ ಸಮಸ್ಯೆಗೆ ‘ಬ್ಲೂಸ್’ ಎನ್ನುತ್ತೇವೆ. ಸಾಮಾನ್ಯವಾಗಿ 3ರಿಂದ 4ನೇ ದಿನ ಪ್ರಾರಂಭವಾಗಿ ಹತ್ತನೆಯ ದಿನದ ಹೊತ್ತಿಗೆ, ಕುಟುಂಬದವರ ಬೆಂಬಲ ಚೆನ್ನಾಗಿದ್ದರೆ ಕಡಿಮೆಯಾಗಿಬಿಡುತ್ತದೆ. ಇನ್ನು ಬಾಣಂತಿ ಸಮಯದಲ್ಲಿ ತೀವ್ರ ಖಿನ್ನತೆ, ಸನ್ನಿ ಕೂಡ ಆಗಬಹುದು. ಇವೆಲ್ಲಕ್ಕೂ ಚಿಕಿತ್ಸೆ ಲಭ್ಯವಿದೆ. ಬಾಣಂತಿ ಸಮಯದ ಗೀಳು ಮಾತ್ರ ಇವೆಲ್ಲಕ್ಕಿಂತ ಬೇರೆಯದಾಗಿ ಇರುತ್ತದೆ ಮತ್ತು ಅದನ್ನು ಬೇರೆಯದಾಗಿ ಕೂಡ ಅರ್ಥಮಾಡಿಕೊಂಡರೆ, ಚಿಕಿತ್ಸೆಯೂ ಪರಿಣಾಮಕಾರಿ.

ಏನಿದು ಬಾಣಂತಿ ಸಮಯದ ಗೀಳು?: ಪದೇ ಪದೆ ಕಾಡುವ, ಅರ್ಥಹೀನ ಯೋಚನೆ ಗಾಬರಿಪಡಿಸುತ್ತವೆ. ಕೆಲಸಗಳಲ್ಲಿ ತೊಡಗಿಸಲು ಕೊಡುವುದಿಲ್ಲ. ಈ ಯೋಚನೆಗಳಿಗೆ ’ಣಚಿಠಛಿಠಠಜಿಟ್ಞ’ ಎನ್ನುತ್ತೇವೆ. ಈ ಯೋಚನೆಗಳಿಂದಾದ ಗಾಬರಿಯನ್ನು ಕಡಿಮೆ ಮಾಡಲು, ಕೆಲವು ಕೆಲಸಗಳಲ್ಲಿ ಮತ್ತೆ ಮತ್ತೆ ತೊಡಗಿಸಿಕೊಳ್ಳುತ್ತಾರೆ. ಅವುಗಳಿಗೆ ’ಇಟಞಟ್ಠ್ಝಜಿಟ್ಞಠ’ ಎನ್ನುತ್ತೇವೆ. ಕೈತೊಳೆಯುವುದು, ಹೆಚ್ಚು ಹೊತ್ತು ಸ್ನಾನ ಮಾಡುವುದು, ಗ್ಯಾಸ್ ಸ್ಟೌ ಆಫ್ ಆಗಿದೆಯೇ ಎಂದು ಪದೇ ಪದೆ ನೋಡುವುದು, ಸಾಮಾನ್ಯವಾಗಿ ಗೀಳಿನ ಲಕ್ಷಣವಾದರೂ, ಬಾಣಂತಿ ಸಮಯದ ಗೀಳಿನ ಕಾಯಿಲೆಯಲ್ಲಿ ಕೆಲವು ವಿಶೇಷ ಲಕ್ಷಣಗಳಿರುತ್ತವೆ.

ಮಗುವಿನ ಸುರಕ್ಷತೆ ಬಗ್ಗೆ ಕಾಡುವ ಚಿಂತೆಗಳು: ‘ನಾನು ಮಗುವನ್ನು ಬೀಳಿಸಿಬಿಟ್ಟರೆ?’ ‘ಸ್ನಾನ ಮಾಡಿಸುವಾಗ, ಕೈಯಿಂದ ಸ್ಲಿಪ್ ಆದರೆ?’, ‘ರಾತ್ರಿ ಮಲಗಿದಾಗ, ನಾನು ಮಗುವಿನ ಮೇಲೆ ಹೊರಳಿಬಿಟ್ಟರೆ?’, ‘ಮಗು ಥಟ್ಟನೆ ಉಸಿರಾಡುವುದನ್ನು ನಿಲ್ಲಿಸಿದರೆ’ ‘ಊಟ ಮಾಡಿಸುವಾಗ/ಹಾಲೂಡಿಸುವಾಗ ಗಂಟಲು ಸಿಕ್ಕಿಹಾಕಿಕೊಂಡು ಉಸಿರಾಡುವುದಕ್ಕೆ ಕಷ್ಟವಾದರೆ?’ ಹೀಗೆ ಮಗುವಿನ ಸುರಕ್ಷತೆಯ ಬಗ್ಗೆ ಹತ್ತಾರು ಯೋಚನೆಗಳು.

ಮಗುವಿನ ಆಹಾರ ಸೇವನೆ / ಹಾಲೂಡಿಸುವಿಕೆ ಬಗ್ಗೆ ಚಿಂತೆಗಳು: ‘ಮಗುವಿಗೆ ಹಾಲು ಸಾಕಾಗುತ್ತಿಲ್ಲವೇನೋ!’ ‘ನಾನು ಸರಿಯಾಗಿ ಕುಡಿಸುತ್ತಿಲ್ಲ’ ‘ಮಗುವಿನ ತೂಕ ಏರುತ್ತಿಲ್ಲ’ ಎಂಬ ಯೋಚನೆಗಳು ಬಂದು, ಪದೇ ಪದೆ ಮಕ್ಕಳ ವೈದ್ಯರಲ್ಲಿ ಹೋಗಬಹುದು. ನಾನೇ ಮಗುವಿಗೆ ಹಾನಿ ಮಾಡಿದರೆ? ಎಂಬ ಯೋಚನೆ ಬಂದು, ತಾಯಂದಿರು ಪಶ್ಚಾತ್ತಾಪದ ಭಾವನೆಗಳಿಗೆ ಒಳಪಡುತ್ತಾರೆ. ನಾನು ಮಲಗಿದಾಗ, ಮಗುವಿನ ಮೇಲೆ ಹೊರಳಿ, ಅದು ಉಸಿರುಗಟ್ಟಿ ಸತ್ತುಹೋದರೆ? ಈ ರೀತಿಯ ಯೋಚನೆಗಳು ಕಾಡಹತ್ತಿದಾಗ, ಮಾಡಬಾರದ ತಪ್ಪು ಮಾಡಿದವರಂತೆ ಖಿನ್ನತೆಗೆ ಹೋಗಿಬಿಡುತ್ತಾರೆ.

ಗೀಳು ಬರಲು ಕಾರಣವೇನು?: ಗೀಳು ಕಾಯಿಲೆ ಮಿದುಳಿಗೆ ಸಂಬಂಧಪಟ್ಟ ಮಾನಸಿಕ ಕಾಯಿಲೆ. ನಮ್ಮ ಪ್ರತಿಯೊಂದು ಭಾವನೆ ಸರಿಯಾದ ಪ್ರಮಾಣದಲ್ಲಿ /ಸಂದರ್ಭದಲ್ಲಿ ಪ್ರಕಟವಾಗಲು ಮಿದುಳಿನಲ್ಲಿ ನರವಾಹಕಗಳು ಸ್ರವಿಸಬೇಕು. ಅಂದರೆ ರಿಮೋಟ್ ಕಂಟ್ರೋಲ್ ಸ್ವಿಚ್ ಇರುವುದು ಮಿದುಳಿನಲ್ಲಿ. ಸೆರೆಟೋನಿನ್ ಎಂಬ ನರವಾಹಕದ ಏರುಪೇರಿನಿಂದಲೇ ಈ ಗೀಳಿನ ಯೋಚನೆಗಳು, ಅಸಹಜವಾದ ಆತಂಕ ಕಾಡುತ್ತದೆ. ಬಾಣಂತನದಲ್ಲಂತೂ, ಮೊದಲೇ ಮಗುವಿನ ಬಗ್ಗೆ ಆತಂಕ/ಕಾಳಜಿ ಇರುತ್ತದಷ್ಟೇ? ಈ ಮಿದುಳಿನ ಸಮಸ್ಯೆ ಸೇರಿ ಕಾಯಿಲೆಯ ಸ್ವರೂಪ ಪಡೆಯುತ್ತದೆ.

ಪರಿಹಾರ ಇದೆ

  • ಅರಿವೇ ಗುರು. ಈ ಸಮಸ್ಯೆಯ ಬಗ್ಗೆ ತಿಳಿವಳಿಕೆ ಇರುವುದು ಮುಖ್ಯ. ಅಜ್ಞಾನದ ಅಂಧಕಾರ ಕವಿದಾಗ, ಈ ಯೋಚನೆಗಳಿಂದಾಗುವ ಗಿಲ್ಟ್ ಹೆಚ್ಚು. ನನಗೇನಾಗುತ್ತಿದೆ ಎಂಬುದಕ್ಕೆ ಒಂದು ಹೆಸರು ಇದೆ ಎಂದು ತಿಳಿದರೆ, ಸ್ವಲ್ಪ ಮಟ್ಟಿಗೆ ಸಮಾಧಾನ ಎನ್ನಿಸಬಹುದು. ಇದು ಒಂದು ಮಿದುಳಿಗೆ ಸಂಬಂಧಪಟ್ಟ ಕಾಯಿಲೆ, ನನಗೊಬ್ಬಳಿಗೇ ಅಲ್ಲ, ಹತ್ತಾರು ಜನಕ್ಕೆ ಇದೇ ರೀತಿ ಆಗುತ್ತದೆ ಮತ್ತು ಚಿಕಿತ್ಸೆ ಇದೆ ಎಂದು ಗೊತ್ತಾದರೆ ಮತ್ತಷ್ಟು ರಿಲೀಫ್ ಸಿಗುತ್ತದೆ.
  • ತಾಯಂದಿರು ಈ ಯೋಚನೆಗಳು ಕಾಡತೊಡಗಿದಾಗ, ಕುಟುಂಬದ ಇತರ ಸದಸ್ಯರಲ್ಲಿ ಮನಬಿಚ್ಚಿ ಹೇಳಿಕೊಳ್ಳಬೇಕು. ಮನೆಯಲ್ಲಿನ ಹಿರಿಯರ ಸಾಂತ್ವನ, ಗಂಡನ ಬೆಂಬಲ ಇದ್ದರೆ, ಸೌಮ್ಯ ತರಹದ ಆತಂಕ ತನ್ನಿಂತಾನೇ ಕಡಿಮೆ ಆಗುತ್ತದೆ.
  • ಯಾವಾಗ ಗೀಳು ಯೋಚನೆಗಳು, ಜಾಸ್ತಿಯಾಗಿ ತಾಯಿಯ ವರ್ತನೆ/ಭಾವನೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಾರಂಭಿಸುತ್ತದೋ, ಆಗ ಮನೋವೈದ್ಯರನ್ನು ಕಾಣಲೇಬೇಕು. ಅವಶ್ಯಕತೆ ಇದ್ದರೆ ಮಾತ್ರೆ ಮತ್ತು ಆಪ್ತ ಸಮಾಲೋಚನೆಯನ್ನು ಕೇಸ್​ಗೆ ಅನುಗುಣವಾಗಿ ಮನೋವೈದ್ಯರು ಸೂಚಿಸುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net