

ಹೈದರಾಬಾದ್: ತೆಲಂಗಾಣ ಚುನಾವಣೆಗೆ ಕಾಂಗ್ರೆಸ್ ಕರ್ನಾಟಕದಿಂದ ಹಣ ಹರಿಸುತ್ತಿದೆ ಎಂದು ಆ ರಾಜ್ಯದ ಐಟಿ ಸಚಿವ ಮತ್ತು ಭಾರತೀಯ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕ ಕೆ.ತಾರಕ ರಾಮರಾವ್(ಕೆಟಿಆರ್) ಆರೋಪಿಸಿದ್ದಾರೆ
ಕರ್ನಾಟಕದಲ್ಲಿ ಶುಕ್ರವಾರ ನಡೆದ ಐಟಿ ರೇಡ್ನಲ್ಲಿ ಕೋಟ್ಯಂತರ ರೂ. ಪತ್ತೆಯಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ X(ಎಕ್ಸ್)ನಲ್ಲಿ ಟ್ವೀಟ್ ಮಾಡಿರುವ ಅವರು ಕಾಂಗ್ರೆಸ್ ಅಲ್ಲ, ಅದು ಸ್ಕ್ಯಾಂಗ್ರೆಸ್ ಎಂದು ಕರೆದಿರುವ ಅವರು ತೆಲಂಗಾಣದಲ್ಲಿ ನೆಲೆ ಕಳೆದುಕೊಂಡಿರುವ ಈ ಪಕ್ಷ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎಂದು ದುಡ್ಡು ಹರಿಸುವುದು, ಇಲ್ಲಸಲ್ಲದ, ಅಸಾಧ್ಯವಾದ ಭರವಸೆಗಳನ್ನು ನೀಡುವುದನ್ನು ಮಾಡುತ್ತಿದೆ. ಅಷ್ಟೇ ಅಲ್ಲ ಕರ್ನಾಟಕದಿಂದ ಹಣ ಸಂಗ್ರಹಿಸುತ್ತಿದೆ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯಲ್ಲಿ ಕೋಟ್ಯಂತರ ರೂ. ನಗದು ಪತ್ತೆಯಾದ ನಂತರ ಟ್ವೀಟ್ ಮಾಡಿರುವ ಕೆಟಿಆರ್, “ಬೌದ್ಧಿಕವಾಗಿ ದಿವಾಳಿಯಾಗಿರುವ ಕಾಂಗ್ರೆಸ್ ಮತ್ತು ಅದರ ನಾಯಕತ್ವವು ತೆಲಂಗಾಣದಲ್ಲಿ ಮತಗಳನ್ನು ಖರೀದಿಸಲು ಕರ್ನಾಟಕದಿಂದ ನೂರಾರು ಕೋಟಿ ರೂಪಾಯಿಗಳನ್ನು ಹರಿಸಲು ಮುಂದಾಗಿದೆ. ಪಿಸಿಸಿ ಅಧ್ಯಕ್ಷ ವೋಟ್ ಫಾರ್ ನೋಟ್ ಹಗರಣದಲ್ಲಿ ಕ್ಯಾಮೆರಾಗೆ ಸಿಕ್ಕಿಬಿದ್ದವನು. ಈಗ ಈ ಕ್ರಿಮಿನಲ್ ದರೋಡೆಕೋರರ ಗುಂಪನ್ನು ಮುನ್ನಡೆಸುತ್ತಿರುವುದರಿಂದ, ಇದನ್ನು ನಿರೀಕ್ಷಿಸಲಾಗಿತ್ತು. ತೆಲಂಗಾಣದಲ್ಲಿ ಸ್ಕ್ಯಾಮ್‌ಗ್ರೆಸ್‌ಗೆ ಜಾಗವಿಲ್ಲ ಎಂದು ಹೇಳೋಣ ಎಂದು ಬರೆದುಕೊಂಡಿದ್ದಾರೆ.
ಕೈ ವಿರುದ್ಧ ವಾಗ್ದಾಳಿ: ತೆಲಂಗಾಣ ಆರೋಗ್ಯ ಸಚಿವ ಹರೀಶ್ ರಾವ್ ಅವರು ಸಹ ಕರ್ನಾಟಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. 50ಪರ್ಸೆಂಟ್ ಕಮಿಷನ್ ಸರ್ಕಾರ ಕರ್ನಾಟಕದಲ್ಲಿದೆ. ಕರ್ನಾಟಕದಲ್ಲಿ ಮೊದಲು 40 ಪರ್ಸೆಂಟ್ ಕಮಿಷನ್ ಸರ್ಕಾರ ಇತ್ತು. ಈಗ ಅಲ್ಲಿನ ಜನ ಕಾಂಗ್ರೆಸ್ ಗೆ ಮತ ಹಾಕಿದ ನಂತರ 10 ಪರ್ಸೆಂಟ್ ಕಮಿಷನ್ ಏರಿಸಿಕೊಂಡಿರುವ ಸರ್ಕಾರವಾಗಿದೆ ಎಂದು ಮಾಧ್ಯಮಗಳೊಂದಿಗೆ ಮಾತನಾಡಿ ಟೀಕಿಸಿದ್ದಾರೆ.
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಖರ್ಚು ಮಾಡಲು ಕರ್ನಾಟಕದಲ್ಲಿನ ಬಿಲ್ಡರ್‌ಗಳು, ಚಿನ್ನದ ವ್ಯಾಪಾರಿಗಳು ಮತ್ತು ಗುತ್ತಿಗೆದಾರರಿಂದ ಕಾಂಗ್ರೆಸ್ ಸುಮಾರು 1500 ಕೋಟಿ ರೂ.ಸಂಗ್ರಹಿಸಿದೆ. ಅವರು ಬೆಂಗಳೂರಿನಿಂದ ಚೆನ್ನೈ ಮೂಲಕ ಹೈದರಾಬಾದ್‌ಗೆ ಹಣವನ್ನು ತರುವ ಯೋಜನೆಯನ್ನು ರೂಪಿಸಿದ್ದಾರೆ ಎಂದು ಆರೋಪಿಸಿದರು.
119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ 2023ರ ನವೆಂಬರ್ 30 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ (ಇಸಿಐ) ಸೋಮವಾರ ಪ್ರಕಟಿಸಿದೆ. ಅಭ್ಯರ್ಥಿಯ ನಾಮಪತ್ರ ಸಲ್ಲಿಸಲು ನ.10 ಕೊನೆಯ ದಿನವಾಗಿರುತ್ತದೆ. ಉಮೇದುವಾರಿಕೆಯನ್ನು ಹಿಂಪಡೆಯಲು ನ.15ಕೊನೆಯ ದಿನವಾಗಿದೆ ಡಿ.3ರಂದು ಮತಗಳ ಎಣಿಕೆ ನಡೆಯಲಿದೆ.