ಕೃಷ್ಣೆ ಮೇಲೆ ಸಂಕಲ್ಪ ಮಾಡಿ ಸಿಕ್ಕ ಅಧಿಕಾರ, ನುಡಿದಂತೆ ನಡೆಯದ ಕಾಂಗ್ರೆಸ್ ಸರ್ಕಾರ

Krishna 2
Published on

| ಪರಶುರಾಮ ಭಾಸಗಿ ವಿಜಯಪುರ 
ಉತ್ತರ ಕರ್ನಾಟಕದ ಜೀವ ನದಿ ಕೃಷ್ಣೆಯ ಮೇಲೆ ಆಣೆ ಪ್ರಮಾಣ ಮಾಡಿ 2013ರಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಪಕ್ಷವು ಬಳಿಕ 2023ರಲ್ಲೂ ಅದೇ ಕೃಷ್ಣೆಯ ಮೇಲೆ ಸಂಕಲ್ಪ ಮಾಡಿ ಅಧಿಕಾರ ಗಿಟ್ಟಿಸಿಕೊಂಡಿದೆ. ಆದರೆ, ಅಧಿಕಾರಕ್ಕೆ ಬರುತ್ತಿದ್ದಂತೆ ಕೃಷ್ಣಾ ಕೊಳ್ಳದ ನೀರಾವರಿ ವಿಷಯದಲ್ಲಿ ದಿವ್ಯ ನಿರ್ಲಕ್ಷ್ಯ ತಾಳಿದೆ ಎಂಬುದಕ್ಕೆ ಪ್ರಸಕ್ತ ಸಾಲಿನ ಆಯವ್ಯಯವೇ ಸಾಕ್ಷಿ!

ಹೌದು, ಚುನಾವಣೆ ಪೂರ್ವ ಕೃಷ್ಣಾ ಜಲಾಂದೋಲನ ನಡೆಸಿದ್ದ ಕಾಂಗ್ರೆಸ್ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ವಾಗ್ದಾನ ಮಾಡಿತ್ತು. 2022 ಡಿಸೆಂಬರ್ 30ರಂದು ನಡೆದ ಕೃಷ್ಣಾ ಜಲಾಂದೋಲನದಲ್ಲಿ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆ ಪೂರ್ಣಗೊಳಿಸಲು 75 ಸಾವಿರ ಕೋಟಿ ರೂ. ಅನುದಾನ ಮೀಸಲಿಡುವ ವಾಗ್ದಾನ ಮಾಡಿತ್ತು. ಆದರೆ, ಗ್ಯಾರಂಟಿ ಯೋಜನೆಗಳ ಭರಾಟೆಯಲ್ಲಿ ಕೃಷ್ಣೆಯನ್ನು ಕಡೆಗಣಿಸಿದೆ ಎಂಬ ಆಕ್ರೋಶ ಭಾವ ವಿಜಯಪುರ-ಬಾಗಲಕೋಟೆ ಜನರಲ್ಲಿ ಮೂಡಿದೆ.

2023ರಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ 2 ಲಕ್ಷ ಕೋಟಿ ರೂಪಾಯಿ ಹಣವನ್ನು ನೀರಾವರಿಗೆ ಮೀಸಲಿಡುವುದಾಗಿ ಸಿದ್ದರಾಮಯ್ಯ ಸಂಕಲ್ಪ ಮಾಡಿದ್ದರು. ‘2023ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ರಾಜ್ಯದ ನೀರಾವರಿಗಾಗಿ ವರ್ಷಕ್ಕೆ 40 ಸಾವಿರ ಕೋಟಿ ರೂಪಾಯಿಗಳಂತೆ ಒಟ್ಟು -ಠಿ;2 ಲಕ್ಷ ಕೋಟಿ ಖರ್ಚು ಮಾಡಲಿದ್ದು, ಇದರಲ್ಲಿ ಕೃಷ್ಣಾ ನದಿ ಯೋಜನೆಗಳಿಗೆ -ಠಿ;75 ಸಾವಿರ ಕೋಟಿ ವ್ಯಯಿಸುತ್ತೇವೆ. ನಮ್ಮನ್ನು ನಂಬಿ, ನಮ್ಮ ಮೇಲೆ ವಿಶ್ವಾಸ ಇಡಿ. ನುಡಿದಂತೆ ನಡೆಯುತ್ತೇವೆ’ ಎಂದಿದ್ದರು ಸಿದ್ದರಾಮಯ್ಯ.

ಪರಿಷ್ಕೃತ ಆಯವ್ಯಯದಲ್ಲಿ ಸಿಕ್ಕಿದ್ದೇನು?

2022-23ನೇ ಸಾಲಿನ ಆಯವ್ಯಯದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿ ಭೂ ಸ್ವಾಧೀನ ಹಾಗೂ ಪುನರ್ವಸತಿ ಮತ್ತು ಪುನರ್ನಿರ್ವಣ ಕಾಮಗಾರಿಗೆ (ಯೋಜನಾ ಕಾಮಗಾರಿಗಳು ಒಳಗೊಂಡಂತೆ) 5 ಸಾವಿರ ಕೋಟಿ ರೂ.ಅನುದಾನ ಒದಗಿಸುವುದಾಗಿ ಘೊಷಿಸಿದ್ದು, ವಾಸ್ತವವಾಗಿ 2 ಸಾವಿರ ಕೋಟಿ ರೂ.ಅನುದಾನ ನೀಡಲಾಗಿದೆ. ಆ ಪೈಕಿ ವಾರ್ಷಿಕ ಸಾಲಿನ ಅಂತ್ಯಕ್ಕೆ 1577.56 ಕೋಟಿ ರೂ.ವೆಚ್ಚವಾಗಿತ್ತು. ಪ್ರಸಕ್ತ ಸಾಲಿನ 2023-24ನೇ ಸಾಲಿನ ಪರಿಷ್ಕೃತ ಆಯವ್ಯಯದಲ್ಲಿ ಭೂ ಸ್ವಾಧೀನ ಹಾಗೂ ಪುನರ್ವಸತಿ ಮತ್ತು ಪುನರ್ನಿರ್ವಣ ಕಾಮಗಾರಿಗೆ 1200 ಕೋಟಿ ರೂ.ಅನುದಾನ ಒದಗಿಸಿದ್ದಾಗಿ ಸರ್ಕಾರ ತಿಳಿಸಿದೆ. ಇದರ ಹೊರತಾಗಿ ನೀರಾವರಿ ಯೋಜನೆಗಳಿಗೆ ಯಾವುದೇ ಅನುದಾನ ಮೀಸಲಿಡದಿರುವುದು ಸರ್ಕಾರದ ನಿರ್ಲಕ್ಷ್ಯ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸದ್ಯದ ಸ್ಥಿತಿಗತಿ

ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿ ಲಕ್ಷಾಂತರ ಜನ-ಜಾನುವಾರುಗಳಿಗೆ, ರೈತರು ಹಾಗೂ ಪಶು ಪಕ್ಷಿಗಳಿಗೆ ಜೀವನ ಆಧಾರ ಸ್ತಂಭವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿ ಉತ್ತರ ಕರ್ನಾಟಕದ ಏಳು ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಕಲಬುರಗಿ, ರಾಯಚೂರು, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಡಿ ಒಟ್ಟಾರೆ 5.94 ಲಕ್ಷ ಹೆಕ್ಟೇರ್ (14.67 ಲಕ್ಷ ಎಕರೆ) ಅಚ್ಚುಕಟ್ಟು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿದೆ. ಈ ಯೋಜನೆಯಡಿ 9 ಉಪ ಯೋಜನೆಗಳಿದ್ದು, ಬಹುತೇಕ ಕಾಮಗಾರಿಗಳು ಆಮೆ ವೇಗದಲ್ಲಿ ಸಾಗಿವೆ. ಕೃಷ್ಣಾ ನ್ಯಾಯಾಧಿಕರಣ -2ರ ತೀರ್ಪು ಅನ್ವಯ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರಡಿ ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ರಿಂದ 524.256 (ಹೆಚ್ಚಳದ ಪ್ರಮಾಣ 4.656ಮೀ.) ಮೀಟರ್​ಗೆ ಹೆಚ್ಚಿಸಬೇಕಿದೆ. ಇದರಿಂದ ಹೆಚ್ಚುವರಿಯಾಗಿ 100 ಟಿಎಂಸಿ ನೀರು ಸಂಗ್ರಹಣೆಯಾಗಲಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರಡಿ 9 ಉಪಯೋಜನೆಗಳ ಮೂಲಕ ಉತ್ತರ ಕರ್ನಾಟಕದ 7 ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಡಿ ಒಟ್ಟಾರೆ 5.94 ಲಕ್ಷ ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net