

ಯುಪಿಎ ಆಡಳಿತಾವಧಿಯ ಹತ್ತು ವರ್ಷಗಳ (2004-2014) ಆರ್ಥಿಕ ವೈಫಲ್ಯ ಮತ್ತು ಹಗರಣಗಳ ಕುರಿತು ಗುರುವಾರ ಲೋಕಸಭೆಯಲ್ಲಿ ಶ್ವೇತಪತ್ರ ಮಂಡಿಸಿದ ಕೇಂದ್ರ ಸರ್ಕಾರವು ಯುಪಿಎ ಮಾಡಿದ ತಪ್ಪುಗಳನ್ನು ಸರಿಪಡಿಸಲು ಎನ್ಡಿಎ ಅವಧಿಯಲ್ಲಿ ಕೈಗೊಂಡ ಕ್ರಮಗಳ ಕುರಿತೂ ಅದರಲ್ಲಿ ವಿವರಣೆ ನೀಡಿದೆ.
59 ಪುಟಗಳ ಶ್ವೇತಪತ್ರದಲ್ಲಿ ಹಲವು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ‘2014ರಲ್ಲಿ ದೇಶದ ಆರ್ಥಿಕತೆ ತೀರಾ ದುರ್ಬಲ ಸ್ಥಿತಿಯಲ್ಲಿತ್ತು. ಸಾರ್ವಜನಿಕ ಹಣಕಾಸು ಸಂಸ್ಥೆಗಳು ಶೋಚನೀಯ ಪರಿಸ್ಥಿತಿ ಎದುರಿಸುತ್ತಿದ್ದವು. ಆರ್ಥಿಕ ದುರುಪಯೋಗ, ಹಣಕಾಸಿನ ಬಳಕೆಯಲ್ಲಿ ಅಶಿಸ್ತು ಮತ್ತು ಭ್ರಷ್ಟಾಚಾರ ತಾಂಡವವಾಡುತ್ತಿದ್ದವು. ಸರ್ಕಾರದ ಬೊಕ್ಕಸಕ್ಕೆ ಕಲ್ಲಿದ್ದಲು ಹಗರಣದಿಂದ 1.86 ಲಕ್ಷ ಕೋಟಿ ರೂಪಾಯಿ ಮತ್ತು 2ಜಿ ತರಂಗಾಂತರ ಹಂಚಿಕೆ ಹಗರಣದಿಂದ 1.76 ಲಕ್ಷ ಕೋಟಿ ರೂ. ನಷ್ಟವಾಯಿತು. ಆರ್ಥಿಕ ಚಟುವಟಿಕೆ ಸುಗಮಗೊಳಿಸಲು ಯುಪಿಎ ಸರ್ಕಾರ ಸಂಪೂರ್ಣ ವಿಫಲವಾಗಿತ್ತು ಮತ್ತು ಆಗಿನ ಸರ್ಕಾರ ಸೃಷ್ಟಿಸಿದ ಕೆಲ ಅಡೆತಡೆಯಿಂದಾಗಿ ಆರ್ಥಿಕತೆಯ ಹಿಮ್ಮುಖ ಚಲನೆ ಆರಂಭಗೊಂಡಿತ್ತು. ಇಂಥ ಸಂಕಷ್ಟದ ಸ್ಥಿತಿಯಲ್ಲಿ, ಹಂತ-ಹಂತವಾಗಿ ದೇಶದ ಆರ್ಥಿಕತೆಯನ್ನು ಮತ್ತು ಆಡಳಿತ ಯಂತ್ರವನ್ನು ಉತ್ತಮ ಸ್ಥಿತಿಗೆ ತರಲು ತುಂಬ ಪ್ರಯತ್ನಗಳನ್ನು ಮಾಡಲಾಯಿತು ಮತ್ತು ಉತ್ತಮ ಆರ್ಥಿಕತೆಗಾಗಿ ಕೆಲ ಕಠಿಣ ನಿಯಮಗಳನ್ನು ರೂಪಿಸಲಾಯಿತು’ ಎಂದು ಅಂಕಿಸಂಖ್ಯೆಗಳೊಂದಿಗೆ ವಿವರಿಸಲಾಗಿದೆ.
ಸರ್ಕಾರ ಶ್ವೇತಪತ್ರ ಹೊರಡಿಸುವುದು ಗೊತ್ತಾಗುತ್ತಿದ್ದಂತೆಯೇ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಕೂಡ ಗುರುವಾರವೇ ‘ಎನ್ಡಿಎ ಸರ್ಕಾರದ 10 ವರ್ಷಗಳ ವೈಫಲ್ಯದ ಕುರಿತಂತೆ ಕಪು್ಪಪತ್ರ’ ಹೊರಡಿಸಿದೆ. ನಿರುದ್ಯೋಗದಂಥ ಸಮಸ್ಯೆಯನ್ನು ಸರ್ಕಾರ ನಿರ್ಲಕ್ಷಿಸಿದ್ದು, ವೈಫಲ್ಯಗಳನ್ನು ಮುಚ್ಚಿಟ್ಟಿದೆ ಎಂದು ಆರೋಪಿಸಿದೆ.
ಇಂಥ ಹೊತ್ತಲ್ಲಿ ರಾಜಕೀಯವನ್ನು ಸಂಪೂರ್ಣವಾಗಿ ಬದಿಗೆ ಇರಿಸಬೇಕು. ಏಕೆಂದರೆ, ದೇಶದ ಆರ್ಥಿಕತೆ ಎಂಬುದು ತುಂಬ ಗಂಭೀರ ವಿಷಯ. ಕಾಂಗ್ರೆಸ್ ಇಷ್ಟು ದಿನಗಳ ಕಾಲ ಆರೋಪ ಮಾಡುತ್ತಲೇ ಇತ್ತು - ಸರ್ಕಾರಿ ಸ್ವಾಮ್ಯದ ಕೈಗಾರಿಕೆ, ಸಂಸ್ಥೆಗಳನ್ನು ಎನ್ಡಿಎ ಸರ್ಕಾರ ಮುಚ್ಚುತ್ತಿದೆ, ನಿರುದ್ಯೋಗ ಹೆಚ್ಚುತ್ತಿದೆ ಎಂದೆಲ್ಲ ಹೇಳಿತ್ತು. ಆದರೆ ಸರ್ಕಾರ ಮಂಡಿಸಿರುವ ಶ್ವೇತಪತ್ರವು ವಾಸ್ತವಾಂಶಗಳನ್ನು ಅನಾವರಣಗೊಳಿಸಿದ್ದು, 2004ರಿಂದ 2014ರವರೆಗಿನ ಆರ್ಥಿಕ ಪಥವನ್ನು ಮತ್ತು ಕಳೆದ ಒಂದು ದಶಕದ ಆರ್ಥಿಕ ಸುಧಾರಣೆಗಳನ್ನು ತೆರೆದಿಟ್ಟಿದೆ. ವಿದೇಶಿ ಬಂಡವಾಳ ಹೂಡಿಕೆ, ಜಿಡಿಪಿ ಹೆಚ್ಚಳಗೊಂಡ ನಿದರ್ಶನಗಳು ಕಣ್ಣೆದುರೇ ಇವೆ. ಬಜೆಟ್ ಕುರಿತಾದ ಆರೋಪ, ಅನುಮಾನಗಳ ಬಗ್ಗೆಯೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಉತ್ತರ ನೀಡಿದ್ದಾರೆ. ‘ನ್ಯಾಯ ಕಾಲ, ಅನ್ಯಾಯ ಕಾಲ, ಕರ್ತವ್ಯ ಕಾಲ’ದ ಕುರಿತು ಚರ್ಚೆ ಗರಿಗೆದರಿರುವಾಗಲೇ, ಈ ಶ್ವೇತಪತ್ರ ಕುರಿತಾಗಿ ಸವಿವರವಾದ ಉತ್ತರ ನೀಡಬೇಕಾದ ಹೊಣೆಗಾರಿಕೆ ಈಗ ಕಾಂಗ್ರೆಸ್ ಪಕ್ಷದ ಮೇಲಿದೆ.