ಅಲ್ಪವಿರಾಮ, ಸ್ವಲ್ಪವಿರಾಮವಿಲ್ಲದ ದೂರ ಪರಿಕ್ರಮ!

Virat Cook Sachin
Published on
Savyasachi
ದೀರ್ಘಕಾಲ ಬಾಳಿಕೆ...

ಐದಲ್ಲ, ಹತ್ತಲ್ಲ, ಐವತ್ತಲ್ಲ... 2006ರ ಮೇ ತಿಂಗಳಿಂದ 2018ರ ಸೆಪ್ಟೆಂಬರ್ ತಿಂಗಳವರೆಗೆ ಸತತವಾಗಿ 159 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಪ್ರತಿನಿಧಿಸಿ ತಡೆರಹಿತವಾಗಿ ಆಡಿದವರು ಅಲಸ್ಟೇರ್ ಕುಕ್.

12 ವರ್ಷ ಎನ್ನುವುದು ಬಹಳ ಸುದೀರ್ಘ ಕಾಲ. ರಾತ್ರಿ ಮಲಗಿದವರು ಬೆಳಗ್ಗೆ ಎದ್ದೇಳುವ ಖಾತರಿಯೇ ಇಲ್ಲದ, ನಿದ್ರೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ ಎಂಬಂಥ ಬದುಕಿನಲ್ಲಿ ಇಂದು ಮಾಡಿದ್ದನ್ನೇ ನಾಳೆ, ನಾಡಿದ್ದು, ಇನ್ನೂ ಹನ್ನೆರಡು ವರ್ಷವಾದರೂ ಮಾಡುತ್ತಲೇ ಇರುವಂಥ ನಿರಂತರತೆ ಕಾಪಾಡಿಕೊಳ್ಳುವುದು ಮನುಷ್ಯದುರ್ಲಭವಾದ ಕೆಲಸ.

ಸಂತೋಷ-ದುಃಖ, ಸಿಹಿ-ಕಹಿ, ಏರು-ಪೇರುಗಳ ಜೀವನಚಕ್ರದಲ್ಲಿ ದಿನೇದಿನೇ ಅನುಭವಗಳೊಂದಿಗೆ ಮಾಗುತ್ತೇವೆ, ಕಷ್ಟಗಳೊಂದಿಗೆ ಏಗುತ್ತೇವೆ. ಬದುಕು ಬಂದಂತೆ ಮುಂದೆ ಸಾಗುತ್ತೇವೆ. ಈ ಪಯಣದ ಆರಂಭದ ಬಿಂದುವಿನಲ್ಲಿ ಜತೆಗಿದ್ದವರು ಕೊನೆಯವರೆಗೂ ಇರಲಾರರು. ಅವರವರ ನಿಲ್ದಾಣ ಬಂದಾಗ ಪ್ರತಿಯೊಬ್ಬರೂ ಇಳಿದುಹೋಗಲೇ ಬೇಕು. ಹೊಸಬರು ಜತೆಯಾಗಲೇಬೇಕು. ಹುಟ್ಟು-ಸಾವು, ರೋಷ-ದ್ವೇಷ, ಸಂಭ್ರಮ- ದಿಗ್ಭŠಮೆಗಳ ಬದುಕಿನ ತಿರುಗಣೆಯಲ್ಲಿ, ಗೊತ್ತುಗುರಿಯಿಲ್ಲದ ತಿರುಗಾಟದಲ್ಲಿ, ದಿಢೀರನೆ ಕಾಡುವ ಅಪಘಾತ, ಆಘಾತ, ಅನಾರೋಗ್ಯಗಳ ಜಂಜಾಟದಲ್ಲಿ, ಮದುವೆ-ಮಕ್ಕಳು, ಹೊಸ ಬಾಳಿನ ಹೊಸಿಲಿಗೆ ಕಾಲಿಡುವ ಸಂಭ್ರಮದ ಕ್ಷಣಗಳಲ್ಲಿ... ಬದುಕು ಕೊಡುವ ಎಲ್ಲ ಬಾಂಧವ್ಯಗಳು, ಸುಖ-ದುಃಖಗಳನ್ನು ಅನುಭವಿಸುತ್ತ, ಅರಗಿಸಿಕೊಳ್ಳುತ್ತ ನಮ್ಮ ಬದುಕಿನ ದಿನಗಳನ್ನು ಅವುಗಳಿಗಾಗಿ ಮೀಸಲಿಡುತ್ತಿರುವಾಗಲೂ ಯಾವುದೋ ಒಂದು ನಿರ್ದಿಷ್ಟ ಕೆಲಸವನ್ನು ಎಂದೂ ತಪ್ಪಿಸದಂತೆ, ತಪಸ್ಸಿನಂತೆ, ಹೋರಾಟದಂತೆ, ಛಲಬಿಡದ ತ್ರಿವಿಕ್ರಮನಂತೆ ಮಾಡುತ್ತಲೇ ಇರುತ್ತೇನೆ ಎನ್ನುವುದು ಎಲ್ಲರಿಂದ ಸಾಧ್ಯವಾಗುವಂಥದ್ದಲ್ಲ.

ಹೀಗಿರುವಾಗ ಮದುವೆ, ಮಕ್ಕಳ ಜನನ, ಆಪ್ತರ ಮರಣ, ಅನಾರೋಗ್ಯ, ಕಳಪೆ ಫಾಮರ್್​ನಂಥ ಅಡಚಣೆಗಳನ್ನು ಮೀರಿ ಕುಕ್ ನಿರಂತರವಾಗಿ 12 ವರ್ಷ ಇಂಗ್ಲೆಂಡ್ ಪರ ಸತತವಾಗಿ 159 ಟೆಸ್ಟ್ ಪಂದ್ಯ ಆಡುತ್ತಾರೆಂದರೆ ಅದೊಂದು ದೊಡ್ಡ ಸಾಧನೆಯೇ ಸರಿ. ಒಂದು ಸಣ್ಣ ವಸ್ತು ಖರೀದಿಸುವಾಗಲೂ ಎಷ್ಟು ದಿನ, ಎಷ್ಟು ತಿಂಗಳು ಬಾಳಿಕೆ ಬರಬಹುದೆಂದು ಲೆಕ್ಕ ಹಾಕುವ ಈ ಜಗತ್ತಿನಲ್ಲಿ ಒಬ್ಬ ಬ್ಯಾಟರ್ ದಶಕ ಕಾಲ ನಿರಂತರತೆ ಕಾಪಾಡಿಕೊಳ್ಳುವುದನ್ನು ಮೆಚ್ಚಬೇಕಾದ್ದೇ. ಕುಕ್ ಮಾತ್ರವೇ ಅಲ್ಲ, ಆಸ್ಟ್ರೇಲಿಯಾದ ಮಾಜಿ ನಾಯಕ ಆಲನ್ ಬಾರ್ಡರ್ 1979ರಿಂದ 1994ರವರೆಗೆ 15 ವರ್ಷ ಕಾಲ ಸತತವಾಗಿ 153 ಟೆಸ್ಟ್ ಪಂದ್ಯಗಳಲ್ಲಿ ಒಮ್ಮೆಯೂ ತಪ್ಪಿಸದಂತೆ ಆಡಿದ್ದರು. ಆಸ್ಟ್ರೇಲಿಯಾದ ಮಾರ್ಕ್ ವಾ 107, ಭಾರತದ ದಿಗ್ಗಜ ಸುನಿಲ್ ಗಾವಸ್ಕರ್ 106, ನ್ಯೂಜಿಲೆಂಡ್​ನ ಬ್ರೆಂಡನ್ ಮೆಕ್ಕಲಂ 101, ಮತ್ತೋರ್ವ ಆಸ್ಸೀ ನಾಥನ್ ಲಿಯೊನ್ 100 ಟೆಸ್ಟ್​ಗಳನ್ನು ಸತತವಾಗಿ ಆಡಿದ್ದಾರೆ. ರಾಹುಲ್ ದ್ರಾವಿಡ್ ಸತತವಾಗಿ 93 ಟೆಸ್ಟ್ ಆಡಿದ್ದರು.

ಇಂಥ ನಿರಂತರತೆಯ ಉದಾಹರಣೆ ಏಕೆಂದರೆ, ಆಧುನಿಕ ಕ್ರಿಕೆಟ್​ನಲ್ಲಿ ಎಲ್ಲವೂ ಫಾಸ್ಟ್... ನಡುನಡುವೆ ಕಟ್.. ಕಟ್.. ಕಟ್... ಅಂದರೆ, ಇಂದಿನ ವೈವಿಧ್ಯಮಯ, ಸ್ಪರ್ಧಾತ್ಮಕ ಕ್ರಿಕೆಟ್​ನ ಸವಾಲುಗಳ ನಡುವೆ ಓರ್ವ ಆಟಗಾರ ನಿರಂತರವಾಗಿ ತನ್ನ ದೇಶ ಪ್ರತಿನಿಧಿಸಿ, ಎಲ್ಲೂ ಅಲ್ಪವಿರಾಮ, ಸ್ವಲ್ಪವಿರಾಮ, ದೀರ್ಘ ವಿರಾಮವಿಲ್ಲದೆ ಆಡುವುದನ್ನು ನೋಡುವುದಕ್ಕೇ ಸಿಗುತ್ತಿಲ್ಲ. ಹಿಂದೆಲ್ಲ ಟೆಸ್ಟ್​ಗಳು, ಏಕದಿನಗಳು ಮಾತ್ರವೇ ಇದ್ದ ಕಾಲದಲ್ಲಿ ಕ್ರಿಕೆಟಿಗರು ಆಟದ ವೇಳಾಪಟ್ಟಿಗೆ ಅನುಗುಣವಾಗಿ ತಮ್ಮ ವೈಯಕ್ತಿಕ ಜೀವನದ ಆಗುಹೋಗುಗಳನ್ನು ಪ್ಲಾ್ಯನ್ ಮಾಡಲು ಅವಕಾಶವಾಗುತ್ತಿತ್ತು. ಆದರೆ, ಸದ್ಯ ಆಟಗಾರರಿಗೆ ವರ್ಷಪೂರ್ತಿ ಟೆಸ್ಟ್, ಏಕದಿನ, ಟಿ20 ಸರಣಿ-ಟೂರ್ನಿಗಳ ನಡುನಡುವೆ ಐಪಿಎಲ್​ನಂಥ ಲೀಗ್​ಗಳ ಆಕರ್ಷಣೆ- ಒತ್ತಡಗಳಿಂದ ಬಿಡುವು ಮಾಡಿಕೊಳ್ಳುವುದೇ ಕಷ್ಟವಾಗುತ್ತಿದೆ. ನಡುವೆ ಗಾಯ, ಅನಾರೋಗ್ಯ, ಮಾನಸಿಕ ಜಡತ್ವ, ಖಾಸಗಿ ಕಾರಣಗಳಿಂದಾಗಿ ಕ್ರಿಕೆಟ್ ತಂಡಗಳಿಗೆ ಮಹತ್ವದ ಟೂರ್ನಿ-ಸರಣಿಗಳಲ್ಲಿ ಪ್ರಮುಖ ಆಟಗಾರರ ಲಭ್ಯತೆಯೂ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಭಾರತದ ನಂ.1 ವೇಗಿ ಜಸ್​ಪ್ರೀತ್ ಬುಮ್ರಾ 2022-23ರ ಅವಧಿಯಲ್ಲಿ ಸುಮಾರು 16 ತಿಂಗಳು ಗಾಯದಿಂದಾಗಿ ಹೊರಗುಳಿದರು. ಹೀಗಾಗಿ 2022ರ ಟಿ20 ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್ ಫೈನಲ್ ಪಂದ್ಯಗಳಿಗೂ ಅವರ ಲಭ್ಯತೆ ಇರದೆ ತಂಡ ಪರದಾಡುವಂತಾಯಿತು. 2023ರ ಏಕದಿನ ವಿಶ್ವಕಪ್​ನ ಅತ್ಯುತ್ತಮ ವೇಗಿ ಮೊಹಮ್ಮದ್ ಶಮಿ ತದನಂತರ ಗಾಯದಿಂದ ವಿಶ್ರಾಂತಿಗೆ ಜಾರಿದವರು ಇನ್ನೂ ತಂಡಕ್ಕೆ ಮರಳಿಲ್ಲ. ಭಾರತ ಗೆದ್ದ ಟಿ20 ವಿಶ್ವಕಪ್​ಗೂ

ಅವರು ಲಭ್ಯರಿರಲಿಲ್ಲ. ಹಾಲಿ ಆಸ್ಟ್ರೇಲಿಯಾ ಪ್ರವಾಸದ ಕೊನೆಯ ಎರಡು ಟೆಸ್ಟ್​ಗಳಿಗೆ ಅವರ ಲಭ್ಯತೆ ನಿರೀಕ್ಷೆ ಇದ್ದರೂ, ಮರಳಿದ ಮೇಲಷ್ಟೇ ಗ್ಯಾರಂಟಿ. ಆಸೀಸ್ ಪ್ರವಾಸ ಆರಂಭದಲ್ಲೇ ನಾಯಕ ರೋಹಿತ್ ಶರ್ಮ ಗೈರಿನಲ್ಲಿ ಭಾರತ ಪರ್ತ್ ಟೆಸ್ಟ್​ನಲ್ಲಿ ಕಣಕ್ಕಿಳಿಯುವಂತಾಯಿತು. 2ನೇ ಬಾರಿ ಮಗುವಿನ ತಂದೆಯಾಗಿರುವ ರೋಹಿತ್ ಶರ್ಮ ಕುಟುಂಬದೊಂದಿಗಿರಲು ಆ ಪಂದ್ಯದಿಂದ ಹಿಂದೆ ಸರಿದಿದ್ದರು. 2019-20ರ ಆಸೀಸ್ ಪ್ರವಾಸದ ಸಂದರ್ಭದಲ್ಲಿ ಆಗಿನ ನಾಯಕ ವಿರಾಟ್ ಕೊಹ್ಲಿ ಮಗು ಜನನದ ಕಾರಣಕ್ಕೆ ಮೊದಲ ಟೆಸ್ಟ್ ಪಂದ್ಯದ ಬಳಿಕ ತವರಿಗೆ ಮರಳಿದ್ದರು. 2023ರ ಏಕದಿನ ವಿಶ್ವಕಪ್ ಹಾಗೂ ಕಳೆದ ವರ್ಷದ ಟಿ20 ವಿಶ್ವಕಪ್ ಬಳಿಕ ವಿರಾಟ್, ರೋಹಿತ್ ಸಹಿತ ಕೆಲವರು ವಿಶ್ರಾಂತಿ ಮೊರೆ ಹೋಗಿದ್ದರಿಂದ ಆಯ್ಕೆಗಾರರಿಗೆ ತಂಡ ಆಯ್ಕೆ ಮಾಡುವುದೇ ಕಠಿಣ ಸವಾಲೆನಿಸಿತ್ತು. ಇಂಥ ಸಮಸ್ಯೆ ಭಾರತಕ್ಕೆ ಮಾತ್ರವೇ ಅಲ್ಲ, ಎಲ್ಲ ತಂಡಗಳಿಗೂ ಒಂದಲ್ಲ ಒಂದು ಹಂತದಲ್ಲಿ ಕಾಡಿದೆ.

ಅನಾರೋಗ್ಯ ಹಾಗೂ ಗಾಯಗಳಿಂದಾಗಿ ತಲೆದೋರುವ ಅಲಭ್ಯತೆಯನ್ನು ತಪ್ಪಿಸುವುದು ಸಾಧ್ಯವಿಲ್ಲ. ಅದರ ಹೊರತಾಗಿ 8 ರಿಂದ 12 ವರ್ಷಗಳ ಸರಾಸರಿ ವೃತ್ತಿಜೀವನದಲ್ಲಿ ಕ್ರಿಕೆಟಿಗರು ಒಂದೂ ಪಂದ್ಯ ತಪ್ಪಿಸದಂತೆ ಆಡುವ ಬದ್ಧತೆಯನ್ನೂ ಪ್ರದರ್ಶಿಸಲಿ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಾರೆ. ಹಿಂದೆ ವಿರಾಟ್ ಕೊಹ್ಲಿ ತಂದೆಯ ನಿಧನದ ಸಂದರ್ಭದಲ್ಲೂ ರಣಜಿ ಪಂದ್ಯ ತಪ್ಪಿಸಿರಲಿಲ್ಲ. ಸಚಿನ್ ತೆಂಡುಲ್ಕರ್ ತಂದೆಯ ನಿಧನದ ದುಃಖದಲ್ಲೇ ವಿಶ್ವಕಪ್​ನಲ್ಲಿ ಆಡಿದ್ದರು. ಎಂಎಸ್ ಧೋನಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದ್ದ ಏಕದಿನ ವಿಶ್ವಕಪ್ ಸಂದರ್ಭದಲ್ಲಿ ಮಗಳು ಜನಿಸಿದರೂ, ಟೂರ್ನಿಯನ್ನು ಅರ್ಧದಲ್ಲೇ ಬಿಟ್ಟು ತವರಿಗೆ ಮರಳಲು ಒಪ್ಪಿರಲಿಲ್ಲ. ಸೌರವ್ ಗಂಗೂಲಿ ನಾಯಕರಾಗಿದ್ದಾಗಲೂ ಕ್ರಿಕೆಟ್ ಪ್ರವಾಸದ ಸಲುವಾಗಿ ಮಗಳ ಜನನದ ಸಂದರ್ಭದಲ್ಲಿ ಕುಟುಂಬದ ಜತೆಗಿರುವ ಅವಕಾಶ ತಪ್ಪಿಸಿಕೊಂಡಿದ್ದರು. ಖಾಸಗಿ ಅನಿವಾರ್ಯಗಳಲ್ಲಿ ತಂಡದ ಜತೆ ಇರುವುದು ಅಥವಾ ಬಿಡುವು ಪಡೆಯುವುದು ಆಯಾ ಆಟಗಾರರು ತೆಗೆದುಕೊಳ್ಳಬೇಕಾದ ವ್ಯಕ್ತಿಗತ ನಿರ್ಧಾರ. ಪ್ರತಿಯೊಬ್ಬರ ಖಾಸಗಿತನ ಗೌರವಿಸುವುದು ಮನುಷ್ಯ ಧರ್ಮ. ಆದರೆ, ಕೆಲವು ಆಟಗಾರರಿಗೆ ಇಂಥ ಸೌಲಭ್ಯವೂ ಇರುವುದಿಲ್ಲ.

ಏಕೆಂದರೆ, ಭಾರತ ತಂಡಕ್ಕೆ ಆಯ್ಕೆಯಾಗುವುದೇ ‘ವಿರಳ’ ಸಾಧನೆ ಆಗಿರುವಾಗ ಅವಕಾಶ ಬಿಟ್ಟುಕೊಟ್ಟರೆ ಮತ್ತೊಮ್ಮೆ ಸ್ಥಾನ ಸಿಗುವ ಖಾತರಿಯೂ ಇರುವುದಿಲ್ಲ. ಎಷ್ಟೋ ಆಟಗಾರರಿಗೆ ಸೆಂಚುರಿ ಬಾರಿಸಿದ ಮಾರನೇ ಪಂದ್ಯದಲ್ಲಿ ಆಡುವ ಅವಕಾಶವೇ ಸಿಕ್ಕಿರುವುದಿಲ್ಲ. ಕರುಣ್ ನಾಯರ್ ಅವಕಾಶ ಪಡೆದ ಕೇವಲ 3ನೇ ಟೆಸ್ಟ್ ಇನಿಂಗ್ಸ್​ನಲ್ಲೇ ತ್ರಿಶತಕ ಬಾರಿಸಿ ಪಂದ್ಯಶ್ರೇಷ್ಠರೆನಿಸಿದರೂ, ಮುಂದಿನ ಟೆಸ್ಟ್ ಪಂದ್ಯದಲ್ಲಿ ತಂಡದಲ್ಲೇ ಇರಲಿಲ್ಲ. ಅವರ ಅಂತಾರಾಷ್ಟ್ರೀಯ ವೃತ್ತಿಜೀವನವೇ ಅಕಾರಣವಾಗಿ ಮೊಟಕುಗೊಂಡಿತು. ಭಾರತ ತಂಡದ ಖಾಯಂ ಸದಸ್ಯರೆನಿಸಿ, ಉಪನಾಯಕರೂ ಆಗಿದ್ದ ಕೆ.ಎಲ್. ರಾಹುಲ್ ಗಾಯದ ಸಲುವಾಗಿ ಸುದೀರ್ಘ ವಿಶ್ರಾಂತಿ ಪಡೆದು ಮತ್ತೆ ತಂಡಕ್ಕೆ ಮರಳಿದಾಗ ಹಳೆಯ ಪ್ರಾಮುಖ್ಯ ಸಿಗದೆ ಪರದಾಡಬೇಕಾಯಿತು. ನ್ಯೂಜಿಲೆಂಡ್ ವಿರುದ್ಧ ತವರಿನ ಸರಣಿಯಲ್ಲಿ ಹೊಸ ಮುಖ ಸರ್ಫ್ರಾಜ್ ಖಾನ್ ಸಲುವಾಗಿ ರಾಹುಲ್ ಸ್ಥಾನ ಬಿಟ್ಟುಕೊಡಬೇಕಾಯಿತು. ಹಾಲಿ ಆಸೀಸ್ ಪ್ರವಾಸದಲ್ಲಿ ರೋಹಿತ್ ಅನುಪಸ್ಥಿತಿಯಲ್ಲಿ ಬುಮ್ರಾ ನಾಯಕತ್ವದಲ್ಲಿ ಭಾರತ ಪರ್ತ್ ಟೆಸ್ಟ್ ಗೆದ್ದರೆ, ಅಡಿಲೇಡ್​ನ 2ನೇ ಟೆಸ್ಟ್​ನಲ್ಲಿ ರೋಹಿತ್ ನಾಯಕತ್ವದಲ್ಲಿ ಭಾರತ ಸೋತುಹೋಯಿತು. ಹೀಗೆ ಒಂದು ಟೆಸ್ಟ್ ತಪ್ಪಿಸಿಕೊಂಡಿದ್ದು, ರೋಹಿತ್​ರ ಬ್ಯಾಟಿಂಗ್ ಕ್ರಮಾಂಕದ ಮೇಲಷ್ಟೇ ಅಲ್ಲ, ನಾಯಕತ್ವದ ಮೇಲೂ ಪ್ರಶ್ನೆ ಮೂಡುವಂತಾಯಿತು. ಇದನ್ನೆಲ್ಲ ಗಮನಿಸುವಾಗ ಎಂಥ ಸಂದರ್ಭದಲ್ಲೂ ಒಂದೂ ಟೆಸ್ಟ್ ಪಂದ್ಯ ತಪ್ಪಿಸಿಕೊಳ್ಳದೆ ಸುದೀರ್ಘ ಕಾಲ ಪ್ರಸ್ತುತತೆ ಉಳಿಸಿಕೊಂಡ ಅಲಸ್ಟೇರ್ ಕುಕ್​ರಂಥವರ ಆಟದ ಮಹತ್ವ ಗೊತ್ತಾಗುತ್ತದೆ.

ಆಟಗಾರರ ದೀರ್ಘಕಾಲೀನತೆಯಲ್ಲಿ ಅವರ ಫಿಟ್​ನೆಸ್ ಮತ್ತು ಮನೋಭಾವದ ಜತೆಗೆ ಫಾಮ್ರ್ ಕೂಡ ಮುಖ್ಯವಾಗುತ್ತದೆ. 1989-2013ರ ಅವಧಿಯಲ್ಲಿ ಸುದೀರ್ಘ 24 ವರ್ಷ ಕ್ರಿಕೆಟ್ ಆಡಿದ ಸವ್ಯಸಾಚಿ ಸಚಿನ್ ತೆಂಡುಲ್ಕರ್ ಫಿಟ್​ನೆಸ್ ಅಥವಾ ವ್ಯಕ್ತಿಗತ ಕಾರಣಕ್ಕೆ ಹಲವು ಪಂದ್ಯ ತಪ್ಪಿಸಿಕೊಂಡಿದ್ದಿದೆ. ಆದರೆ, ಕಳಪೆ ಫಾಮರ್್​ನಿಂದಾಗಿ ಅವರನ್ನು ತಂಡದಿಂದ ಕೈಬಿಡುವ ಸಂದರ್ಭ ಒಮ್ಮೆಯೂ ಬರಲಿಲ್ಲ. ಅಂಥ ಆಗ್ರಹಗಳು ಯಾರಿಂದ ಬರುವುದಕ್ಕೂ ಸಚಿನ್ ಅವಕಾಶ ಕೊಡಲಿಲ್ಲ. ಇದು ಎಲ್ಲರಿಂದ ಸಾಧ್ಯವಾಗುವಂಥದ್ದಲ್ಲ. ಕಳೆದ ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್​ಗಳಲ್ಲಿ ತಮ್ಮ ಪ್ರಚಂಡ ಬ್ಯಾಟಿಂಗ್ ಮೂಲಕವೇ ಭಾರತದ ರನ್ನರ್​ಅಪ್ ಹಾಗೂ ಚಾಂಪಿಯನ್ ಸಾಧನೆಗೆ ಅಡಿಪಾಯ ಹಾಕಿದ ನಾಯಕ ರೋಹಿತ್ ಶರ್ಮ, ಇತ್ತೀಚಿನ 10 ಟೆಸ್ಟ್ ಇನಿಂಗ್ಸ್​ಗಳಲ್ಲಿ ವಿಫಲರಾಗಿರುವುದಕ್ಕೆ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳೆದ್ದಿವೆ.

ಅದರಲ್ಲೂ ಸೋಷಿಯಲ್ ಮೀಡಿಯಾ ಪ್ರಾಬಲ್ಯದ ಈ ಕಾಲದಲ್ಲಿ ಕ್ರಿಕೆಟ್ ತಾಂತ್ರಿಕತೆಯ ಗಂಧಗಾಳಿ ಗೊತ್ತಿಲ್ಲದವರೂ ಎಕ್ಸ್​ಪರ್ಟ್​ಗಳಂತೆ ತೀರ್ಪು ಕೊಟ್ಟುಬಿಡುತ್ತಾರೆ. ಓರ್ವ ಬ್ಯಾಟರ್ ಶತಕ ಬಾರಿಸಿದಾಗ ಆತನೇ ಸರ್ವಶ್ರೇಷ್ಠ ಎಂದು ಕೊಂಡಾಡುವ, ಒಂದೇ ಇನಿಂಗ್ಸ್​ನಲ್ಲಿ ವಿಫಲನಾದಾಗ ಈತ ತಂಡದಲ್ಲಿರಲೇ ಅಯೋಗ್ಯ ಎಂದು ನಿಕೃಷ್ಟವಾಗಿ ತೇಜೋವಧೆ ಮಾಡುವ ವಸ್ತುನಿಷ್ಠತೆಯಿಲ್ಲದ ಮಾಯಾಕನ್ನಡಿಯಂತೆ ಸಾಮಾಜಿಕ ಮಾಧ್ಯಮಗಳು ಬೆಳೆದುನಿಂತಿವೆ. ಹತ್ತು ವರ್ಷಗಳ ಹಿಂದೆ ಈ ರೀತಿ ಅಭಿಪ್ರಾಯ ಹೇರುವ ಮಾಧ್ಯಮಗಳಿರಲಿಲ್ಲ. ಆದರೆ, ಸದ್ಯ 24 ಗಂಟೆ, 365 ದಿನ, 360 ಡಿಗ್ರಿ ವಿಚಕ್ಷಣೆ ಮಾಡುವ ಸೋಷಿಯಲ್ ಮೀಡಿಯಾದ ಭೂತಕನ್ನಡಿಗಳ ನಡುವೆ ಕ್ರಿಕೆಟಿಗರು ದೀರ್ಘಕಾಲೀನತೆ ಕಾಪಾಡಿಕೊಳ್ಳುವುದು ಬಹುದೊಡ್ಡ ಸವಾಲು. ಹೊಸ ನೀರಿನ ಅಬ್ಬರದಲ್ಲಿ ಹಳೆ ನೀರು ಕಳೆದುಹೋಗುವುದು ಸಹಜ ಪ್ರಕ್ರಿಯೆ. ಆದರೆ, ಆಯ್ಕೆಗಾರರಿಗೆ ನಿರ್ಧಾರದ ಅವಕಾಶ ಕೊಡದೆ ತಮ್ಮ ಲಭ್ಯತೆ, ಉಪಸ್ಥಿತಿ ಖಾತರಿ ಪಡಿಸುವ ‘ಅಧಿಕಾರವನ್ನು’ ಕೆಲವು ದಿಗ್ಗಜ ಆಟಗಾರರು ಮಾತ್ರ ಹೊಂದಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಅಂಥ ಸುಭದ್ರ ಸ್ಥಿತಿಯಲ್ಲಿದ್ದಾರೆ. ಹದಿನೈದು ವರ್ಷಗಳ ವೃತ್ತಿಜೀವನದಲ್ಲಿ ಆಯ್ಕೆಗಾರರು ಕೈಬಿಡುವಂಥ ಪರಿಸ್ಥಿತಿಯನ್ನು ಕೊಹ್ಲಿ ಎದುರಿಸಿಲ್ಲ. ಆದರೆ, ಹಾಲಿ ಆಸ್ಟ್ರೇಲಿಯಾ ಪ್ರವಾಸದ ಬಾಕಿ ಮೂರು ಟೆಸ್ಟ್​ಗಳಲ್ಲಿ ಎಚ್ಚೆತ್ತುಕೊಳ್ಳದಿದ್ದಲ್ಲಿ ಅಂಥ ಸಂದರ್ಭವೂ ಎದುರಾಗಬಹುದು.

ಕೊಹ್ಲಿ ಸಮಕಾಲೀನರಾದ, 19 ವಯೋಮಿತಿ ವಿಶ್ವಕಪ್​ನಲ್ಲಿ ಅವರೊಂದಿಗೇ ಆಡಿದ್ದ, ಅಸಾಧಾರಣ ಪ್ರತಿಭಾವಂತ ಮನೀಷ್ ಪಾಂಡೆ ಪಾಲಿಗೆ ಕರ್ನಾಟಕ ತಂಡ ಇತ್ತೀಚೆಗಷ್ಟೇ ಬಾಗಿಲು ಮುಚ್ಚಿದೆ. ಹಾಲಿ ಋತುವಿನ ರಣಜಿ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗಳಲ್ಲಿ ನೀರಸ ಪ್ರದರ್ಶನದ ಬಳಿಕ ವಿಜಯ್ ಹಜಾರೆ ಟ್ರೋಫಿಗೆ ತಂಡದಿಂದ ಅವರನ್ನು ಕೈಬಿಡಲಾಗಿದೆ. ಆಟಗಾರನಾಗಿ ಇನ್ನು ಆಯ್ಕೆ ಮಾಡುವುದಿಲ್ಲ, ಕೋಚಿಂಗ್ ಸೇರಿದಂತೆ ಬೇರೆ ಅವಕಾಶಗಳು ಮುಕ್ತವಾಗಿವೆ ಎಂದು ಪಾಂಡೆಗೆ ಆಯ್ಕೆಗಾರರು ನೇರವಾಗಿಯೇ ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕೊಹ್ಲಿ 81 ಶತಕ ಬಾರಿಸಿ 100ರ ಕನಸು ಕಾಣುತ್ತಿದ್ದರೆ, ಪಾಂಡೆಗೆ ಭಾರತ ಪರ 81 ಪಂದ್ಯ ಆಡುವ ಅವಕಾಶವೂ ದೊರೆಯಲಿಲ್ಲ. ಅವರಿಗೆ ಗಾಡ್​ಫಾದರ್​ಗಳು, ಅದೃಷ್ಟ ಕೈಹಿಡಿಯಲಿಲ್ಲ ಎನ್ನುವುದು ನಿಜವಾದರೂ, ದೊರೆತ 68 ಅವಕಾಶಗಳಲ್ಲಿ ಕೈಬಿಡಲು ಸಾಧ್ಯವೇ ಇಲ್ಲ ಎಂಬಂಥ ಪ್ರಚಂಡ ಪ್ರದರ್ಶನವನ್ನೂ ನೀಡಲಿಲ್ಲ ಎನ್ನುವುದೂ ಅಷ್ಟೇ ಸತ್ಯ. ಪಾಂಡೆ ಒಬ್ಬರೇ ಅಲ್ಲ, ಬಂಗಾಳದ ಮನೋಜ್ ತಿವಾರಿ, ಆಂಧ್ರದ ಅಂಬಟಿ ರಾಯುಡು, ನಮ್ಮಕರ್ನಾಟಕದ ವಿಜಯ್ ಭಾರದ್ವಾಜ್, ಮಯಾಂಕ್ ಅಗರ್​ವಾಲ್... ಹೀಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ನಿರೀಕ್ಷೆಗಳ ಎತ್ತರಕ್ಕೆ ಬೆಳೆಯದ ಪ್ರತಿಭಾವಂತರ ಸಂಖ್ಯೆ ಸಾವಿರ. ಇದನ್ನೆಲ್ಲ ಗಮನಿಸುವಾಗ ಕುಕ್, ತೆಂಡುಲ್ಕರ್, ಕೊಹ್ಲಿಯಂಥ ಕೆಲವೇ ಆಟಗಾರರು ಅಷ್ಟು ದೀರ್ಘ ಕಾಲ ಪ್ರಸ್ತುತತೆ ಕಾಪಾಡಿಕೊಂಡು ಆಡುವುದು ಹೇಗೆ ಸಾಧ್ಯವಾಯಿತು ಎಂಬ ಮೆಚ್ಚುಗೆ ಮೂಡುತ್ತದೆ, ಅಭಿಮಾನ ಹೆಚ್ಚುತ್ತದೆ.

ಕೊನೆಯದಾಗಿ: ಬೇರೆಯವರ ಮುಖ ನೋಡಿ ವಯಸ್ಸು ಅಂದಾಜಿಸುವ ಮನುಷ್ಯ, ತನ್ನ ವಯಸ್ಸನ್ನು ಮರೆಯುತ್ತಾನೆ. ಜೀವನದಲ್ಲಿ 35 ನಡುವಯಸ್ಸಾದರೂ, ಕ್ರೀಡಾಪಟುಗಳ ಪಾಲಿಗದು ಇಳಿವಯಸ್ಸು. 35 ದಾಟಿದ ಮೇಲೆ ಸೆಹ್ವಾಗ್​ರಂಥ ಪ್ರಚಂಡ ಆಟಗಾರನಿಗೆ ಮನಸೋಇಚ್ಛೆ ಚೆಂಡನ್ನು ದಂಡಿಸುವ ಸಾಮರ್ಥ್ಯ ಕುಗ್ಗಿತ್ತು. ಕೆಲವೇ ವರ್ಷ ಕೆಳಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡರೂ ಸಿಕ್ಸರ್ ಚಚ್ಚುವ ಛಾತಿ ಹೊಂದಿದ್ದ ಕೊಹ್ಲಿ, ರೋಹಿತ್ ಇದೀಗ 35, 36ನೇ ವಯಸ್ಸಿನಲ್ಲಿ ಸಾಧಾರಣ ಎಸೆತಗಳಿಗೂ ಔಟಾಗುವುದನ್ನು ಕಂಡಾಗ ಕಣ್ಣು ಮತ್ತು ಕೈಗಳ ಸಮೀಕರಣ ಮೊದಲಿನಂತಿಲ್ಲ ಎನ್ನುವುದು ನೋಡುವವರಿಗೆ ಅರ್ಥವಾಗುತ್ತಿದೆ. ಆದರೆ, ಆಟಗಾರರಾಗಿ ಇಂಥ ಸಂಗತಿ ಗಳನ್ನು ಗ್ರಹಿಸುವುದು, ಅರಗಿಸಿಕೊಳ್ಳುವುದು ಕಷ್ಟದ ಕೆಲಸ. ಕ್ರಿಕೆಟ್​ನಲ್ಲಿ ಒಂದು ಹಂತ ದಾಟಿದ ಮೇಲೆ ಅಲ್ಪವಿರಾಮ ಇರುವುದಿಲ್ಲ, ಮತ್ತೇನಿದ್ದರೂ ಪೂರ್ಣ ವಿರಾಮವೇ. ಈ ವಿರಾಮಗಳ ನಡುವಿನ ಕ್ರಿಕೆಟ್ ಸಂಭ್ರಮವೇ ಆಟಗಾರರ ಬಾಳಿಕೆಯ ಅಳತೆಗೋಲು.

(ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net