

ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿಗೆ ಏರ್ಪಡಿಸಿದ್ದ ಪೂರ್ಣಾವಧಿ ‘ಜನಸ್ಪಂದನ’ ಕಾರ್ಯಕ್ರಮಕ್ಕೆ ಸೋಮವಾರ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಂದ ಜನರು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು. ಇವರಲ್ಲಿ ಹಿರಿಯರು, ಮಹಿಳೆಯರು, ವೃದ್ಧರು, ಅಂಗವಿಕಲರು, ಯುವಜನರು ಸೇರಿದ್ದರು. ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಜನರು ದೂರು-ದುಮ್ಮಾನ ಹೇಳಿಕೊಳ್ಳಲು ಬಂದಿದ್ದರು. 3,812 ಅರ್ಜಿಗಳು ಅಧಿಕೃತವಾಗಿ ಸ್ವೀಕೃತವಾಗಿವೆ. ಅವರೆಲ್ಲರ ಕುಂದುಕೊರತೆಗಳಿಗೆ ಸಿಎಂ ಅತ್ಯಂತ ಸಮಾಧಾನದಿಂದ ಸ್ಪಂದಿಸಿ, ಸಾಧ್ಯವಾದಷ್ಟು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಿದರು. ಕಾರ್ಯಕ್ರಮದಲ್ಲಿ ಸ್ವೀಕೃತವಾದ ಅರ್ಜಿಗಳ ವಿಲೇವಾರಿಗೆ 15 ದಿನಗಳ ಗಡುವನ್ನು ಸಿಎಂ ವಿಧಿಸಿದ್ದಾರೆ. ಕಾನೂನು ಪರಿಧಿಯಲ್ಲಿ ಬಗೆಹರಿಸಲು ಸೂಚಿಸಿರುವುದು, ಅಸಾಧ್ಯವೆಂದಾದರೆ ಲಿಖಿತವಾಗಿ ಜನರಿಗೆ ತಿಳಿಸಿ, ಮುಖ್ಯಮಂತ್ರಿ ಕಚೇರಿಗೆ ಕಾರಣಗಳನ್ನು ತಿಳಿಸಲು ಹೇಳಿದ್ದಾರೆ. ಜತೆಗೆ ಮೂರು ತಿಂಗಳ ನಂತರ ಮತ್ತೊಮ್ಮೆ ಏರ್ಪಡಿಸುವ ಜನಸ್ಪಂದನ ಕಾರ್ಯಕ್ರಮಕ್ಕೆ ಸ್ಥಳೀಯ ಸಮಸ್ಯೆಗಳೊಂದಿಗೆ ಜನರು ಬಂದರೆ ಶಿಸ್ತಿನ ಕ್ರಮ ಕೈಗೊಳ್ಳುವೆ ಎಂದು ತಳಮಟ್ಟದ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ರಾಜಕೀಯ ಸಭೆ, ಸಮಾರಂಭಗಳಾದರೆ ಜನಸಂದಣಿಯೇ ಅಳತೆಗೋಲು. ಅಲ್ಲಿ ಹೆಚ್ಚು ಜನ ಸೇರಿದರೆ ನಾಯಕರು ಸಂತೋಷಪಡಬಹುದು. ಆದರೆ ಸಾರ್ವಜನಿಕರು ಸಿಎಂ ಜನಸ್ಪಂದನಕ್ಕೆ ಅಭೂತಪೂರ್ವ ರೀತಿಯಲ್ಲಿ ಜನ ಆಗಮಿಸಿದ್ದು ಹೆಮ್ಮೆ ಪಡುವಂಥ ವಿಷಯ ಅಲ್ಲ. ಇದನ್ನು ಸೂಕ್ಷ್ಮವಾಗಿ ಗ್ರಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ಮಾತುಗಳಲ್ಲಿ ಅಧಿಕಾರಿಗಳಿಗೆ ತಿಳಿ ಹೇಳಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಬಗೆಹರಿಯಬೇಕಾದ ಸಮಸ್ಯೆಗಳನ್ನು ಹೊತ್ತ ಜನರು ದುಡ್ಡು ಖರ್ಚು ಮಾಡಿಕೊಂಡು ಬೆಂಗಳೂರಿನವರೆಗೂ ಬಂದಿದ್ದಾರೆ ಎಂದರೆ ಅಧಿಕಾರಿಗಳ ವೈಫಲ್ಯ ಎದ್ದುಕಾಣುತ್ತದೆ ಎಂದು ಚಾಟಿ ಬೀಸಿದ್ದಾರೆ. ಇದು ಪ್ರಜ್ಞಾವಂತ ಜನರ ಅನಿಸಿಕೆ ಕೂಡ ಹೌದು. ಯಾವುದೇ ಒಬ್ಬ ಸಾಮಾನ್ಯ ವ್ಯಕ್ತಿಯ ಸಮಸ್ಯೆ ಸ್ಥಳೀಯ ಹಂತದಲ್ಲೇ ಬಗೆಹರಿಯಬೇಕು. ಯಾರಾದರೂ ಸಮಸ್ಯೆ ಇದೆಯೆಂದು ಸಿಎಂವರೆಗೆ ಬಂದರೆ ಅದು ಸ್ಥಳೀಯ ಅಧಿಕಾರಿಗಳ ವೈಫಲ್ಯ ಎಂದೇ ಅರ್ಥ. ಅಷ್ಟರಮಟ್ಟಿಗೆ ಅದು ಆಡಳಿತ ಯಂತ್ರದ, ಅಧಿಕಾರಶಾಹಿಯ ನಿರ್ಲಕ್ಷ್ಯ್ಕೆ ನಿದರ್ಶನ.
ಶಾಸಕರು, ಮಂತ್ರಿಗಳು, ಹೆಜ್ಜೆಹೆಜ್ಜೆಗೂ ಸರ್ಕಾರಿ ಅಧಿಕಾರಿಗಳು-ಸಿಬ್ಬಂದಿ ಇದ್ದರೂ ಜನರ ಸಮಸ್ಯೆಗಳು ವರ್ಷಗಳಿಂದ ಬಗೆಹರಿಯದೇ ಹಾಗೆಯೇ ಉಳಿಯುತ್ತವೆ ಎಂದರೆ ಏನರ್ಥ? ಇದೇ ಮಾತನ್ನು ಮುಖ್ಯಮಂತ್ರಿ ಕೂಡ ಹೇಳಿರುವುದು ಸ್ವಾಗತಾರ್ಹ. ಅದರ ಅರ್ಥವನ್ನು ಅಧಿಕಾರಿ ವರ್ಗ ಇನ್ನಾದರೂ ಅರಿತುಕೊಳ್ಳಬೇಕು.