ಸಂಕ್ರಾಂತಿ.. ಪರಂಪರೆ ಸಂಸ್ಕೃತಿಯ ಶಕ್ತಿ: ಕ್ಲಬ್​ಹೌಸ್​ನಲ್ಲಿ ಗ್ರಾಮೀಣ ಭಾವಲಹರಿ

Clubhouse
Published on
ಸಂಕ್ರಾಂತಿ ಸಡಗರ ಎಂದ ಕೂಡಲೇ ಮನಸ್ಸಿನಲ್ಲಿ ಅನೇಕ ಭಾವನೆಗಳು ಗರಿಗೆದರುತ್ತವೆ. ನಮ್ಮ ಸಂಸ್ಕೃತಿಯ ಬೇರುಗಳು ಈ ಸಂಕ್ರಾಂತಿಯಲ್ಲಿವೆ. ಭೂತಕಾಲದ ಗೋವಿನ ಹಾಡಿನ ಮೂಲಕ ಭವಿಷ್ಯದ ಪೀಳಿಗೆಯಲ್ಲಿ ನೈತಿಕತೆ ಮೂಡಿಸಬಹುದು ಎನ್ನುವವರೆಗೆ ವಿಸ್ತಾರವಾದ ನೆಲೆಗಟ್ಟಿನ ಸಂವಾದವನ್ನು ಖ್ಯಾತ ವಾಗ್ಮಿ, ಲೇಖಕ ಪ್ರೊ. ಕೃಷ್ಣೇಗೌಡರು ಶನಿವಾರ ನಡೆಸಿಕೊಟ್ಟರು. ‘ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್’ ಕ್ಲಬ್​ಹೌಸ್ ಸಂವಾದದಲ್ಲಿ ಹೀಗಿತ್ತು ಕೃಷ್ಣೇಗೌಡರ ವಾಗ್ಝರಿ.

ಬಾಲ್ಯದ ಸಡಗರ

ಮಂಡ್ಯ ಜಿಲ್ಲೆಯಲ್ಲಿ ಭತ್ತ, ಕಬ್ಬು ಬೆಳೆಯುತ್ತೇವೆ. ಭತ್ತದ ಸುಗ್ಗಿ ಆದ ಕೂಡಲೇ ಸಂಕ್ರಾಂತಿ ಬರುತ್ತದೆ. ಸಂಕ್ರಾಂತಿಗೆ ನಾಯಕ ಸೂರ್ಯ, ನಾಯಕಿ ಭೂಮಿತಾಯಿ. ಕೃಷಿಗೆ ಸಹಾಯ ಮಾಡಿದ ಎತ್ತುಗಳು, ಹಾಲುಕೊಟ್ಟ ಹಸು, ಎಮ್ಮೆಗಳಿಗೆ ಪೂಜೆ ಮಾಡಿ ಕೃತಜ್ಞತೆ, ಗೌರವ ಸಲ್ಲಿಸುವ ಹಬ್ಬ ಇದು. ಬೇರೆ ದಿನಗಳಲ್ಲಿ ಎಳ್ಳನ್ನು ಕೊಡುವುದು ಹಾಗೂ ಪಡೆದುಕೊಳ್ಳುವುದು ಅಷ್ಟು ಶುಭ ಎಂದು ಪರಿಗಣಿಸುವುದಿಲ್ಲ. ಎಳ್ಳು ಎನ್ನುವುದು ಋಣಾನುಬಂಧದ ಸಂಕೇತ. ಆದರೆ ಸಂಕ್ರಾಂತಿಯಲ್ಲಿ ಎಳ್ಳನ್ನು ಹಂಚಿ ಸಂಭ್ರಮಿಸುತ್ತೇವೆ. ಗಂಗೆ ಭೂಮಿಗೆ ಬಂದ ದಿನ, ಶರಶಯ್ಯೆಯಲ್ಲಿದ್ದ ಭೀಷ್ಮ ಪ್ರಾಣತ್ಯಾಗ ಮಾಡಿದ್ದು, ಶಿವ-ಪಾರ್ವತಿ ವಿವಾಹವಾಗಿದ್ದು ಸೇರಿ ಸಂಕ್ರಾಂತಿಗೆ ಅನೇಕ ಪೌರಾಣಿಕ ವಿಶೇಷತೆಗಳಿವೆ. ಸೂರ್ಯ ಪಥ ಬದಲಾಯಿಸುವುದು ಮತ್ತೊಂದು ವಿಶೇಷ. ಇವೆಲ್ಲ ಪೌರಾಣಿಕ, ಧಾರ್ವಿುಕ ವಿಚಾರಗಳ ಜತೆಗೆ ಸಂಕ್ರಾಂತಿಗೆ ಮತ್ತೂ ಅನೇಕ ವಿಶೇಷತೆಗಳಿವೆ.

ಭತ್ತ ಕಟಾವಿನ ನಂತರ ಅಲ್ಲಿದ್ದ ಭತ್ತದ ಕೂಳೆಗಳನ್ನು ಮಗುಚಿ, ನೀರನ್ನು ಬಸಿದು, ಚೆನ್ನಾಗಿ ದಮ್ಮಸ್ ಮಾಡಿ ಸಮತಟ್ಟು ಮಾಡಿ, ಒಣಗಿದ ಮೇಲೆ ಸಗಣಿ ಬಳಿಯುವುದೇ ಒಂದು ರೋಚಕ ಅನುಭವ. ಒಂದು ಗುಂಡಿಯೊಳಗೆ ಒಂದು ಎತ್ತಿನ ಗಾಡಿಯಷ್ಟು ಸಗಣಿ ತುಂಬಿ, ನೀರು ಬೆರೆಸಿ ಅದರಲ್ಲಿ ಆಟವಾಡುತ್ತಿದ್ದೆವು. ಸಗಣಿಗೆ ಒಂದು ಅದ್ಭುತವಾದ ಪರಿಮಳ ಇರುತ್ತದೆ. ಅದು ದುರ್ವಾಸನೆ ಎಂದು ಯಾರಾದರೂ ಹೇಳಿದರೆ ಅದರ ಅನುಭವ ಅವರಿಗಿಲ್ಲ ಎಂದರ್ಥ. ಆಟವಾಡುತ್ತ ಸಗಣಿ ಕಲೆಸಿದ ನಂತರ ಕಣಕ್ಕೆ ಸುರಿಯುವುದು. ಸೊಪ್ಪುಗಳನ್ನು ಸೇರಿಸಿ ಕಟ್ಟಿದ ಸಾಣೆಯನ್ನು ದಾರದ ಮೂಲಕ ಎಳೆಯುವುದು. ಕಣದಲ್ಲಿ ಬೂದಿ ಬಳಸಿ ವಿಭೂತಿ, ತ್ರಿಶೂಲ ಬರೆಯುತ್ತಿದ್ದೆವು. ಭತ್ತದ ರಾಶಿಯಲ್ಲಿ ವಿಭೂತಿ ಬರೆಯುತ್ತಿದ್ದೆವು. ಅದು ನಮಗೆ ದೈವದ ಸಮಾನ. ಭಕ್ತಿಯಿಂದ ರಾಶಿಯ ಪ್ರದಕ್ಷಿಣೆ ನಮಸ್ಕಾರ ಮಾಡಿ, ಭೂಮಿಗೆ ಮಾವಿನ ಸೊಪ್ಪನ್ನು ಹಾಕಿ ಕೃತಜ್ಞತೆ ಸಲ್ಲಿಸುತ್ತಿದ್ದೆವು. ನಮ್ಮ ಕಣದಲ್ಲಿ ಕೆಲಸ ಮಾಡಲು ಮರಿಯಣ್ಣ ಎನ್ನುವವರೊಬ್ಬರು ಪಕ್ಕದ ಊರಿನಿಂದ ಬರೋರು. ಅವರೇ ನಮ್ಮ ಕಣ ಕಾಯುತ್ತಿದ್ದರು. ಅವರನ್ನು ನಂಬಿ ಎಲ್ಲ ಫಸಲನ್ನು ಬಿಟ್ಟು ಮನೆಗೆ ಹೋಗುತ್ತಿದ್ದೆವು. ಒಂದು ದಿನವೂ ಅವರು ನಂಬಿಕೆಗೆ ದ್ರೋಹ ಮಾಡಿದ್ದನ್ನು ನಾವು ಕಂಡಿಲ್ಲ. ಇಷ್ಟು ಕಷ್ಟಪಟ್ಟರೂ ಸುಗ್ಗಿ ಸಮಯದಲ್ಲಿ ಯಾವ ರೈತರಿಗೂ ಆಯಾಸ ಆಗುವುದಿಲ್ಲ. ತಮ್ಮ ಶ್ರಮ ಫಲವಾಗುವ ಕಾಲದಲ್ಲಿ ಎಲ್ಲರೂ ‘ಕಿ ಹಿ ಹೀ’ ಹಾಡುಗಳನ್ನು ಹಾಡುತ್ತ ಸಂಭ್ರಮಿಸುತ್ತಿದ್ದರು. ರೈತರ ಮಕ್ಕಳಾಗಿ ನನ್ನ ಭಾವಕೋಶದಲ್ಲಿರುವ ಈ ನೆನಪುಗಳನ್ನು ಮರೆಯಲು ಸಾಧ್ಯವೇ ಇಲ್ಲ.

ಎತ್ತುಗಳೊಂದಿಗಿನ ಸಂಭ್ರಮ

ಸಂಕ್ರಾಂತಿಯಲ್ಲಿ ಎತ್ತು-ಹಸುಗಳನ್ನು ಸಿಂಗಾರ ಮಾಡುವುದೇ ಅದ್ಭುತ ಅನುಭವ. ಕೋಡುಗಳಿಗೆ ಬಣ್ಣ, ಬಲೂನು, ಕಿತ್ತಳೆ ಹಣ್ಣು ಕಟ್ಟುವುದು, ಕೊರಳಿಗೆ ಬಣ್ಣಬಣ್ಣದ ಹಾರ ಹಾಕುವುದು, ಹೆಗಲಿಗೆ ಬಟ್ಟೆ ಹಾಕುವುದು, ಮೆರವಣಿಗೆಗೆ ಕರೆದುಕೊಂಡು ಹೋಗುವುದು. ಬೇರೆ ದಿನಗಳಲ್ಲಿ ಎತ್ತು, ಎಮ್ಮೆ, ಹಸುಗಳನ್ನು ಬಾಯಿಗೆ ಬಂದಂತೆ ರೈತರು ಬೈಯುತ್ತಾರೆ. ಆದರೆ ಅವುಗಳಿಗೆ ಕೃತಜ್ಞರಾಗಿರುತ್ತಾರೆ. ಮೂರು ಸಾಲಿನಲ್ಲಿ ರಾಶಿ ತರಗು ಹಾಕಿ ಬೆಂಕಿ ಹಚ್ಚುತ್ತಿದ್ದರು. ಎತ್ತುಗಳ ಕಿಚ್ಚು ಹಾಯಿಸುವ ಕಾರ್ಯಕ್ರಮ ನಡೆಯುತ್ತಿತ್ತು. ಎತ್ತುಗಳನ್ನು ಕಾಡುವ ಕ್ರಿಮಿಕೀಟಗಳ ನಿವಾರಣೆಗೆ ಹೀಗೆ ಮಾಡುತ್ತಾರೆ ಎಂಬ ವೈಜ್ಞಾನಿಕ ಕಾರಣಗಳನ್ನು ನೀಡಲು ಅನೇಕರು ಪ್ರಯತ್ನಿಸುತ್ತಾರೆ. ಅವೆಲ್ಲ ಇರಲಿಕ್ಕಿಲ್ಲ. ಇದೊಂದು ಸಂಭ್ರಮದ ವಿಚಾರ. ಯಾರ ಎತ್ತುಗಳು ಹೇಗೆ ಹಾರಿದವು? ಯಾರು ಮೊದಲು ಹಾಯಿಸಿದರು? ಎನ್ನುವುದೆಲ್ಲ ಅದ್ಭುತವಾದ ನೆನಪುಗಳ ಸರಮಾಲೆ ಇದರಲ್ಲಿರುತ್ತದೆ.

ಗೋವಿನ ಹಾಡನ್ನು ನಮ್ಮ ಮಕ್ಕಳಿಗೆ ಓದಿಸಬೇಕು. ಈ ಪದ್ಯವನ್ನೂ ವಿರೋಧಿಸುವವರಿದ್ದಾರೆ ಎನ್ನುವುದು ನನಗೆ ಸೋಜಿಗ ಎನಿಸುತ್ತದೆ. ಬುದ್ಧಿಯ ಆಧಾರದಲ್ಲಿ ಈ ರೀತಿ ಆಟಾಟೋಪಗಳು ನಡೆಯುತ್ತಿರುತ್ತವೆ. ಆದರೆ ನಮಗನ್ನಿಸಿದ್ದನ್ನು ಹೇಳಲೇಬೇಕು. | ಪ್ರೊ.ಕೃಷ್ಣೇಗೌಡ

ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಿ: ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡು ಎನ್ನುತ್ತಾರೆ. ನಮ್ಮ ಜೀವನದಲ್ಲಿ ಎದುರಾಗುವ ಶೇಕಡ 20 ಕಷ್ಟಗಳು ತಾವಾಗಿಯೇ ಬಂದರೆ, ಉಳಿದ ಶೇ.80 ಸಮಸ್ಯೆಗಳನ್ನು ನಾವೇ ತಂದುಕೊಳ್ಳುತ್ತೇವೆ. ನಾವು ಸಂಬಂಧಿಕರನ್ನು ಆಯ್ಕೆ ಮಾಡಿಕೊಳ್ಳಲು ಆಗುವುದಿಲ್ಲ. ಸಂಬಂಧಿಗಳಲ್ಲಿ ಯಾರ ಬಳಿ ಎಷ್ಟು ಸಂಬಂಧ ಇರಿಸಿಕೊಳ್ಳಬೇಕು ಎಂದು ನಿರ್ಧರಿಸಿಕೊಂಡು ಸಂತೋಷವಾಗಿರಬಹುದು. ಆದರೆ ಸಂತೋ ಷವಾಗಿರಬೇಕು ಎಂದರೆ ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನಮ್ಮ ಕೈಯಲ್ಲೇ ಇದೆ. ತುಂಬ ಜನ ಸ್ನೇಹಿತರಿರಲಿ ಎನ್ನುವ ಅವಶ್ಯಕತೆಯೂ ಇಲ್ಲ. ಸ್ನೇಹಿತರಿಂದ ಯಾವ ಪರಿವರ್ತನೆಯೂ ಆಗುವುದಿಲ್ಲ. ಆದರೆ ಸ್ನೇಹಿತ ನನ್ನಲ್ಲಿರುವ ಗುಣಾವಗುಣಗಳನ್ನು ಸಹಿಸಿಕೊಳ್ಳುತ್ತಾನೆ, ಸ್ವೀಕರಿಸುತ್ತಾನೆ.

ಹಳ್ಳಿ ಸೊಗಡು ಕಾಣೆಯಾಗುತ್ತಿದೆ: ಹಳ್ಳಿಯ ಜನರಿಗೆ ಕಣ, ಕೊಮ್ಮೆ, ಕಣಜ ಎಂಬ ವಿಚಾರಗಳನ್ನು ತಿಳಿಸಿಕೊಡುವ ಪರಿಸ್ಥಿತಿ ಇದೆ. ಅವುಗಳನ್ನು ತಿಳಿಸಿಕೊಡುವುದಕ್ಕಿಂತಲೂ ಹೆಚ್ಚಾಗಿ ನೀತಿ, ನಿಯತ್ತು ಎಂದರೆ ಏನು ಎಂದು ಹೇಳಿಕೊಡಬೇಕಿದೆ. ಹಿಂದೆಲ್ಲ ಹಳ್ಳಿಗಳೇ ನಗರಗಳನ್ನು ಸಾಕುತ್ತಿದ್ದವು. ಆದರೆ ಇಂದು ಹಳ್ಳಿಯ ಜನಗಳು ಸರ್ಕಾರದ ಹಣಕ್ಕಾಗಿ ಕೈಯೊಡ್ಡಿ ನಿಲ್ಲುವಂತೆ ಈ ವ್ಯವಸ್ಥೆ ಮಾಡಿದೆ. ‘ಜೀವನದಲ್ಲೊಂದು ಸ್ಪರ್ಧೆಯಿದೆ, ಮುನ್ನುಗ್ಗಬೇಕು’ ಎಂದು ಹೇಳಿಕೊಡುತ್ತಿರುವುದು ಮಕ್ಕಳ ಮನಸ್ಸಿನಲ್ಲಿ ಅಪ್ರತ್ಯಕ್ಷವಾದ ಕ್ರೌರ್ಯವನ್ನು ಸೃಷ್ಟಿಸುತ್ತಿದೆ. ಈ ಸ್ಪರ್ಧೆಗಳ ಮೂಲಕ ತಾನು ಶ್ರೀಮಂತನಾಗಬೇಕು ಎಂದು ಹೇಳಿಕೊಡುತ್ತಿದ್ದೇವೆ. ಇಡೀ ಜಗತ್ತೇ ಒಂದು ಕಡೆ ಹೋಗುತ್ತಿರುವಾಗ ನಮ್ಮ ಮಕ್ಕಳಿಗೆ ನೈತಿಕತೆ, ಪ್ರಾಮಾಣಿಕತೆಯನ್ನು ಹೇಳಿಕೊಟ್ಟು ಅವರು ದಡ್ಡರಾದರೆ ಏನು ಎಂಬ ಆತಂಕ ಅನೇಕ ಪಾಲಕರಿಗೆ ಅಗುತ್ತಿದೆ. ಆದರೆ ಈಗಲೂ, ಈ ಕಾಲದಲ್ಲೂ ಅನೇಕರು ಅವರ ಪಾಡಿಗೆ ಅವರು ಕೆಲಸ ಮಾಡುತ್ತಿರುತ್ತಾರೆ. ಅವರು ಎಲ್ಲೂ ಕಾಣುವುದಿಲ್ಲ, ಹೊರಜಗತ್ತಿನಲ್ಲಿ ನಡೆಯುತ್ತಿರುವುದಕ್ಕೆ ಅವರು ಸಂಬಂಧವಿಲ್ಲದೆ ಜೀವಿಸುತ್ತಿದ್ದಾರೆ. ನೈತಿಕತೆ, ಪ್ರಾಮಾಣಿಕತೆಯ ಭಾವಗಳು ಎಂದಿಗೂ ಅಪ್ರಸ್ತುತವಾಗುವುದಿಲ್ಲ.

ಬದಲಾವಣೆ ಪಯಣ ನಿರಂತರ: ಬದಲಾವಣೆಯೇ ಶಾಶ್ವತ ಎನ್ನುವ ಮಾತಿದೆ. ಹಾಗಾಗಿ, ಈಗಾಗಲೇ ಆಗಿರುವ ಬದಲಾವಣೆಯನ್ನು ತಪ್ಪಿಸಲು ನಮ್ಮಿಂದ ಆಗುವುದಿಲ್ಲ. ಹಳೆಯದರ ಬಗ್ಗೆ ಭಾವಕೋಶ ಇದ್ದರೆ, ಹೊಸದನ್ನು ವಿಭಿನ್ನ ರೀತಿಯಲ್ಲಿ ಪಡೆದುಕೊಳ್ಳುತ್ತೇವೆ. ಆ ಭಾವಕೋಶ ಇಲ್ಲದಿದ್ದರೆ ಎಲ್ಲವನ್ನೂ ಬಾಚಿಕೊಳ್ಳುತ್ತೇವೆ.

ಮಕ್ಕಳು ಗೋವಿನ ಹಾಡು ಕಲಿಯಲಿ: ಸಂಕ್ರಾಂತಿ ಹಬ್ಬದ ದಿನ ತಪ್ಪದೆ ಗೋವಿನ ಹಾಡು ಓದುವುದು ನಮ್ಮ ಮನೆಯಲ್ಲಿ ನಡೆದುಬಂದಿತ್ತು. ನನಗಿಂತ ಮೊದಲು ನಮ್ಮ ತಂದೆ ಓದುತ್ತಿದ್ದರು, ನಂತರ ನಾನು ಓದುತ್ತಿದ್ದೆ. ಕಾಳಿಂಗನ ಹೆಸರಿನಲ್ಲಿ ಆರಂಭವಾಗುವ ಕಥೆ, ಪುಣ್ಯಕೋಟಿ ಮತ್ತು ಅರ್ಬುದ ಎಂಬ ಹುಲಿಯ ಕಥೆಯಾಗಿ ಮಾರ್ಪಡುತ್ತದೆ. ಮಕ್ಕಳ ಮನದ ಮೇಲೆ ಅಗಾಧ ಪರಿಣಾಮ ಬೀರುವ ಪದ್ಯ ಅದು. ಪದ್ಯ ಓದುವಾಗ ಅನೇಕ ಬಾರಿ ಕಣ್ಣೀರು ಬರುತ್ತಿತ್ತು. ಈ ಪದ್ಯವನ್ನು ನಿಮ್ಮ ಮಕ್ಕಳ ಮುಂದೆ ಓದಿ, ಮಕ್ಕಳು ಭಾವುಕರಾಗಲಿಲ್ಲ ಎಂದರೆ ಅವರಿಗೆ ಭಾವುಕತೆಯಲ್ಲಿ ತೊಂದರೆ ಇದೆ ಎಂದು ನಾನು ತಮಾಷೆ ಮಾಡುತ್ತಿರುತ್ತೇನೆ. ಗಿಡಮರಗಳ ಜತೆಗೆ ಪ್ರಾಣಿಪಕ್ಷಿಗಳು, ಸೊಪು್ಪ ತರಕಾರಿಗಳ ಅಗಾಧ ಕನ್ನಡ ಪದಕೋಶ ನಮ್ಮಲ್ಲಿ ಬೆಳೆಯಿತು. ಹಳ್ಳಿಗಳಲ್ಲಿ ಅನೇಕರು ಹಸುಗಳಿಗೆ ಗಂಗೆ, ಗೌರಿ ಎಂದೇ ಹೆಸರಿಡುತ್ತಿದ್ದರು.

ಗೋವಿನ ಹಾಡು ಬರೆದವರಾರು?: ಚನ್ನಪಟ್ಟದ ವಾಸುದೇವಯ್ಯನವರು ಇದನ್ನು ಬರೆದವರು ಎಂದು ಇತ್ತೀಚೆಗೆ ವಾಟ್ಸ್​ಆಪ್​ನಲ್ಲಿ ಹರಿದಾಡುತ್ತಿದೆ. ಬಹುಶಃ ಇದು ಸತ್ಯವಲ್ಲ. ಏಕೆಂದರೆ ಚನ್ನಪಟ್ಟದ ವಾಸುದೇವಯ್ಯನವರ ಕುರಿತು ಡಿವಿಜಿ ಸೇರಿ ಅನೇಕರು ಬರೆದಿದ್ದಾರೆ, ಎಲ್ಲಿಯೂ ಗೋವಿನ ಹಾಡನ್ನು ಉಲ್ಲೇಖಿಸಿಲ್ಲ. ಬಹುಶಃ ಮದ್ದೂರಿನ ಬಳಿಯ ಕವಿ ಬರೆದಿರಬೇಕು.

ಭಾರತೀಯ ಮಾನಸಿಕತೆಯ ಕಥೆ: ಗೋವಿನ ಹಾಡು ಭಾರತದ ಸಂಸ್ಕೃತಿಯ ಕಥೆ. ಕೆಟ್ಟವರು ವಿಜೃಂಭಿಸುವ ಕತೆಗಳು ಇತ್ತೀಚೆಗೆ ಬರುತ್ತಿವೆ. ಸಜ್ಜನರು ನಶಿಸಿ, ದುರ್ಜನರು ವಿಜೃಂಭಿಸುತ್ತಾರೆ ಎಂದು ನಮ್ಮ ಕವಿಗಳಿಗೂ ಈಗ ಎನ್ನಿಸುತ್ತಿರಬೇಕು. ಆದರೆ ಕೆಟ್ಟವರೆಲ್ಲ ಹಾಳಾಗಿ ಒಳ್ಳೆಯವರೆಲ್ಲ ಸಂಭ್ರಮಿಸುವುದೇ ಭಾರತೀಯ ಕಥೆ. ಸತ್ಯ ಹರಿಶ್ಚಂದ್ರನ ಕಥೆ ಕೇಳಿ ಕಣ್ಣೀರು ಹಾಕುವವರೆಲ್ಲ ಸತ್ಯ ಹೇಳುವುದಿಲ್ಲ. ಆದರೂ ಕತೆಯಲ್ಲಿ ಹರಿಶ್ಚಂದ್ರನ ಪರವಾಗಿರುತ್ತೇವೆ. ಅಂದರೆ, ನಮ್ಮ ಒಳಮನಸ್ಸು ಒಳಿತಿನ ಪರವಾಗಿಯೇ ಇರುತ್ತದೆ, ಇದು ಭಾರತೀಯತೆ.

ಹೊಸ ಅಕ್ಕಿ: ಸಂಕ್ರಾಂತಿ ಹಬ್ಬದ ದಿನವೇ ನಮ್ಮಲ್ಲಿ ಹೊಸ ಅಕ್ಕಿ ಬಳಸುತ್ತಿದ್ದರು. ಹೊಸ ಅಕ್ಕಿಯಲ್ಲಿ ಅನ್ನ ಅಷ್ಟು ಚೆನ್ನಾಗಿ ಆಗುವುದಿಲ್ಲ. ಅದರಲ್ಲಿ ಕಿಚಡಿ ಅನ್ನ, ಬೆಲ್ಲದ ಪೊಂಗಲ್ ಮಾಡಿ, ಆಗಸೆ ಕಾಯಿ, ಗೆಣಸಿನ ಪಲ್ಯ ಮಾಡುವರು. ಇದು ಸಂಕ್ರಾಂತಿ ಹಬ್ಬದ ಊಟ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net