

ನವೆಂಬರ್ ಬಂದೊಡನೆ ಮೊದಲು ಕರ್ನಾಟಕ ರಾಜ್ಯೋತ್ಸವದ ಸಂಭ್ರಮ. ತದನಂತರ ಮಕ್ಕಳ ದಿನಾಚರಣೆ. ಅಂದಹಾಗೆ ಮಕ್ಕಳ ದಿನಾಚರಣೆ ಆಚರಿಸಲ್ಪಡುವ 14ನೇ ತಾರೀಖು ಅಂತಾರಾಷ್ಟ್ರೀಯ ಸಕ್ಕರೆ ಕಾಯಿಲೆಯ ದಿನ ಕೂಡ ಹೌದು. 1922ರಲ್ಲಿ ಸಕ್ಕರೆ ಕಾಯಿಲೆಯ ಚಿಕಿತ್ಸೆಗೆ ಅತ್ಯವಶ್ಯವಾಗಿರುವ ಇನ್ಸುಲಿನ್ ಔಷಧಿಯನ್ನು ಕಂಡು ಹಿಡಿದ ಇಬ್ಬರು ವೈದ್ಯರಲ್ಲಿ ಒಬ್ಬರಾಗಿದ್ದ ಕೆನಡಾ ಮೂಲದ ವೈದ್ಯ ಫ್ರೆಡ್ರಿಕ್ ಬಾಂಟಿಂಗ್ ಅವರ ಜನುಮದಿನ ನ. 14 ಆಗಿರುವ ಕಾರಣಕ್ಕೆ ಸಕ್ಕರೆ ಕಾಯಿಲೆಯ ದಿನವನ್ನಾಗಿ ಆಚರಿಸಲಾಗುತ್ತದೆ. ನವೆಂಬರ್ ಎರಡನೇ ವಾರ ಅಂದರೆ 8ರಿಂದ 14ರವರೆಗೆ ಜಗತ್ತಿನಾದ್ಯಂತ ಸಕ್ಕರೆ ಕಾಯಿಲೆಯ ಕುರಿತು ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ವರ್ಷವೂ ಒಂದೊಂದು ಹೊಸ ಘೊಷವಾಕ್ಯದೊಡನೆ ಆಚರಿಸಲಾಗುವ ಸಕ್ಕರೆ ಕಾಯಿಲೆಯ ದಿನದ ಪ್ರಸಕ್ತ ವರ್ಷದ ಘೊಷವಾಕ್ಯ ‘ಸಕ್ಕರೆ ಕಾಯಿಲೆಯ ಮೇಲೆ ಆರಂಭಿಕ ಕ್ರಿಯೆ’.
ನಮ್ಮ ದೇಹದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದು ಮೇದೋಜೀರಕ ಗ್ರಂಥಿ. ನಾವು ಸೇವಿಸಿದ ಆಹಾರ ಜೀರ್ಣವಾಗುತ್ತಿದ್ದಂತೆಯೇ ಅದರಲ್ಲಿರುವ ಸಕ್ಕರೆಯ ಕಾರಣ ನಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣವೂ ಏರುತ್ತದೆ. ಇದನ್ನು ಗ್ರಹಿಸುವ ಮೇದೋಜೀರಕ ಗ್ರಂಥಿಯೊಳಗಿನ ಬೀಟಾ ಕೋಶಗಳು ಇನ್ಸುಲಿನ್ ಎಂಬ ಹಾರ್ವೇನುಗಳನ್ನು ಸ್ರವಿಸುತ್ತವೆ. ಆ ಹಾರ್ವೇನುಗಳು ರಕ್ತದೊಳಗಿನ ಸಕ್ಕರೆಯನ್ನು ನಮ್ಮ ದೇಹದ ಜೀವಕೋಶಗಳಲ್ಲಿ ಕೂಡಿಟ್ಟುಕೊಳ್ಳುವಂತೆ ಪ್ರೇರೇಪಿಸುತ್ತವೆ. ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹತೋಟಿಗೆ ಬರುತ್ತದೆ. ಈಗ ಆಹಾರವು ಸಂಪೂರ್ಣ ಜೀರ್ಣವಾದ ನಂತರದ ಅಂದರೆ ಉದಾಹರಣೆಯಾಗಿ ರಾತ್ರಿ ಊಟವಾದ ಕೆಲವು ಘಂಟೆಗಳ ನಂತರದ ಸನ್ನಿವೇಶವನ್ನೊಮ್ಮೆ ಯೋಚಿಸೋಣ. ಆ ಸನ್ನಿವೇಶದಲ್ಲಿ ಸಹಜವಾಗಿಯೇ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಕಡಿಮೆಯಾಗುತ್ತದೆ. ಇದನ್ನರಿತ ಮತ್ತದೇ ಮೇದೋಜೀರಕ ಗ್ರಂಥಿಯೊಳಗಿನ ಬೀಟಾ ಕೋಶಗಳು ಗ್ಲುಕಾಗೋನ್ ಹಾರ್ವೇನುಗಳನ್ನು ಸ್ರವಿಸಿ ಲಿವರ್ಗೆ ತನ್ನಲ್ಲಿನ ಸಕ್ಕರೆ (ಗ್ಲೈಕೋಜನ್) ಅನ್ನು ಬಿಡುಗಡೆ ಮಾಡಲು ಸೂಚನೆ ನೀಡುತ್ತದೆ. ಒಟ್ಟಿನಲ್ಲಿ ಮೇದೋಜೀರಕ ಗ್ರಂಥಿಯು ಈ ಇನ್ಸುಲಿನ್ ಮತ್ತು ಗ್ಲುಕಾಗೋನ್ ಎಂಬ ಎರಡು ಹಾರ್ವೇನುಗಳನ್ನು ಸಂದರ್ಭಕ್ಕನುಸಾರವಾಗಿ ಸ್ರವಿಸಿ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಬ್ಯಾಲೆನ್ಸ್ ಮಾಡುತ್ತದೆ.
ಸಕ್ಕರೆ ಕಾಯಿಲೆಯಲ್ಲಿ ಟೈಪ್ 1 ಮತ್ತು ಟೈಪ್ 2 ಎನ್ನಲಾಗುವ ಎರಡು ವಿಧಗಳಿವೆ. ಟೈಪ್ 1 ಎಂಬ ಮೊದಲ ವಿಧದಲ್ಲಿ ನಮ್ಮ ದೇಹದ ರೋಗನಿರೋಧಕ ಶಕ್ತಿಯ ಎಡವಟ್ಟಿನಿಂದಾಗಿ ಮೇದೋಜೀರಕ ಗ್ರಂಥಿಯಲ್ಲಿ ಉತ್ಪಾದಿಸಲಾಗುವ ಇನ್ಸುಲಿನ್ ಹಾರ್ವೇನಿನ ಪ್ರಮಾಣವು ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಟೈಪ್ 1 ಸಕ್ಕರೆ ಕಾಯಿಲೆ ಮಕ್ಕಳನ್ನು ಬಾಧಿಸುವ ಸಾಧ್ಯತೆ ಹೆಚ್ಚು. ಹಾಗೂ ಇದು ರೋಗಿಗಳಲ್ಲಿ ಯಾವುದೇ ಮುನ್ಸೂಚನೆಯಿಲ್ಲದೇ ಕಾಣಿಸಿಕೊಳ್ಳುತ್ತದೆ. ಆದರೆ ಒಂದೇ ಸಮಾಧಾನದ ವಿಷಯವೇನೆಂದರೆ ಟೈಪ್ 1 ಸಕ್ಕರೆ ಕಾಯಿಲೆಯ ರೋಗಿಗಳ ಪ್ರಮಾಣ ಒಟ್ಟಾರೆ ರೋಗಿಗಳ ಶೇಕಡಾ ಐದರಿಂದ ಎಂಟರಷ್ಟಿದ್ದು ಕಾಡುವ ಸಾಧ್ಯತೆ ಸ್ವಲ್ಪ ಕಡಿಮೆಯೇ.
ಸಕ್ಕರೆ ಕಾಯಿಲೆಯಿಂದ ಬಳಲುವ ರೋಗಿಗಳಲ್ಲಿ ಟೈಪ್ 2 ವಿಧದ ರೋಗಿಗಳದ್ದೇ ಸಿಂಹಪಾಲು. ಒಟ್ಟಾರೆ ರೋಗಿಗಳ ಶೇಕಡ ತೊಂಭತ್ತಕ್ಕೂ ಹೆಚ್ಚು ಪ್ರತಿಶತ ರೋಗಿಗಳನ್ನು ಕಾಡುವ ಈ ರೋಗವು ಎರಡು ರೀತಿಯಲ್ಲಿ ಉಂಟಾಗುತ್ತದೆ. ಮೊದಲನೆಯ ಪೈಕಿಯಲ್ಲಿ ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಹಾರ್ವೇನು ಉತ್ಪಾದನೆಯಾದರೂ ಜೀವಕೋಶಗಳು ಅದಕ್ಕೆ ಸರಿಯಾಗಿ ಸ್ಪಂದಿಸುವುದಿಲ್ಲ. ಎರಡನೇ ಪೈಕಿಯಲ್ಲಿ ಇನ್ಸುಲಿನ್ ಹಾರ್ವೇನಿನ ಪ್ರಮಾಣವೇ ಕುಂಠಿತವಾಗುತ್ತ ಹೋಗುತ್ತದೆ. ಟೈಪ್ 1 ರೋಗವು ಎಳವೆಯಲ್ಲಿ ಕಾಡುವ ಸಾಧ್ಯತೆ ಹೆಚ್ಚಿದ್ದು ಅದಕ್ಕೆ ಕಾರಣವನ್ನು ಸ್ಪಷ್ಟವಾಗಿ ಹೇಳುವುದು ಕಷ್ಟ. ಮತ್ತೊಂದೆಡೆ ಟೈಪ್ 2 ನಲವತ್ತು ವರ್ಷಕ್ಕೂ ಹೆಚ್ಚಿನ ಪ್ರಾಯದವರಿಗೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು ಜೀವನಶೈಲಿ, ಆನುವಂಶೀಯತೆ ಮತ್ತು ಆಹಾರ ಅದರ ಹಿಂದಿನ ಮುಖ್ಯ ಕಾರಣಗಳು.
ಸಕ್ಕರೆ ಕಾಯಿಲೆಯನ್ನು ದೂರವಿಡುವ ನಿಟ್ಟಿನಲ್ಲಿ ಪರಿಣತರು ಸೂಚಿಸುವ ಪ್ರಮುಖ ಸೂತ್ರಗಳೆಂದರೆ ದೇಹದ ತೂಕದ ಮಿತಿ, ನಿಯಮಿತ ವ್ಯಾಯಾಮ, ಏಳರಿಂದ ಎಂಟು ಘಂಟೆ ನಿದ್ರೆ, ಸಾಕಷ್ಟು ನೀರು ಮತ್ತು ಹೆಚ್ಚು ನಾರಿನಂಶವುಳ್ಳ ಆಹಾರದ ಸೇವನೆ. ಇವೆಲ್ಲವುದರ ಜೊತೆಗೆ ಮೂಲಕಾರಣವನ್ನೇ, ಅಂದರೆ ಸಕ್ಕರೆಯನ್ನು ಸೇವಿಸುವ ಪ್ರಮಾಣವನ್ನೇ ಮೊಟಕುಗೊಳಿಸುವ ಉಪಾಯ ಇನ್ನೂ ಸರಳವಲ್ಲವೇ? ಇದು ಖಂಡಿತ ಎಲ್ಲರೂ ಒಪ್ಪುವಂತಹ ಮಾತು. ಜೊತೆಗೆ ಸಕ್ಕರೆಯ ಅನಿಯಮಿತ ಸೇವನೆಯು ಹಲವು ಕಾಯಿಲೆಗಳಿಗೆ ಮೂಲವೆಂಬುದೂ ಸಹ ಬಹುರ್ಚಚಿತ ವಿಷಯ. ಅದನ್ನು ಮತ್ತಷ್ಟು ಆಳವಾಗಿ ಅಭ್ಯಸಿಸಲು ಇತಿಹಾಸದ ಪುಟಗಳಲ್ಲಿ ದಾಖಲೆಗೊಂಡ ಘಟನೆಯೊಂದರ ಹಿಂದೆ ವಿಜ್ಞಾನಿಗಳ ಸಂಶೋಧನಾ ತಂಡಗಳು ಬೆನ್ನುಹತ್ತಿದ್ದು ಅಲ್ಲಿಂದ ಹೊಸ ಹೊಸ ಜಿಜ್ಞಾಸೆಗಳು ಹೊರಹೊಮ್ಮುತ್ತಿವೆ.
ಅದು ಎರಡನೇ ಮಹಾಯುದ್ಧದ ಸಂದರ್ಭ. ಬ್ರಿಟನ್ಅನ್ನು ಸೋಲಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದ ಜರ್ಮನಿಗೆ ಬ್ರಿಟಿಷರು ತಮ್ಮ ಹೆಚ್ಚಿನ ದವಸಧಾನ್ಯಗಳಿಗೆ ಹೊರದೇಶಗಳ ಮೇಲೆ ಅವಲಂಬಿತವಾಗಿರುವುದು ಗೊತ್ತಿತ್ತು. ಹೀಗಾಗಿ ತಮ್ಮ ಯುದ್ಧತಂತ್ರದ ಅನುಸಾರ ಈ ಸರಕುಗಳನ್ನು ಹೊತ್ತು ತರುತ್ತಿದ್ದ ಹಡಗುಗಳನ್ನು ಮಾರ್ಗಮಧ್ಯದಲ್ಲೇ ತಡೆಹಿಡಿದರು. ಇದರಿಂದಾಗಿ ಬ್ರಿಟನ್ನಿನಲ್ಲಿ ದಿನಸಿ ಸಾಮಾನುಗಳ ಅಭಾವ ಉಂಟಾಯಿತು. ವ್ಯವಸ್ಥೆಯನ್ನು ತಹಬದಿಗೆ ತರಲು ಹೆಣಗಾಡಿ ಕೊನೆಗದು ನಿಯಂತ್ರಣ ಮೀರಿ ಹೋಗುತ್ತಿರುವುದನ್ನರಿತ ಸರ್ಕಾರವು ಅವಶ್ಯ ಕಿರಾಣಿ ಸಾಮಾನುಗಳ ದಾಸ್ತಾನನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಪಡಿತರ ವ್ಯವಸ್ಥೆಯ ಮೂಲಕ ಹಂಚುವ ವ್ಯವಸ್ಥೆಯನ್ನು ಜಾರಿಗೆ ತಂದಿತು. ಈ ವ್ಯವಸ್ಥೆಯಲ್ಲಿ ದಿನಸಿ ವಸ್ತುಗಳನ್ನು ಬಡವ ಶ್ರೀಮಂತನೆಂಬ ಭೇದವಿಲ್ಲದೇ ತಲೆಗಿಷ್ಟು ಎಂಬ ಲೆಕ್ಕದಲ್ಲಿ ಹಂಚಲಾಗುತ್ತಿತ್ತು.
ಹೀಗೆ ಹಂಚಲಾಗುತ್ತಿದ್ದ ದಿನಸಿ ವಸ್ತುಗಳ ಪಟ್ಟಿಯಲ್ಲಿ ಸಕ್ಕರೆಯೂ ಇತ್ತು. 1940ರ ಜನವರಿಯಲ್ಲಿ ಜಾರಿಗೆ ಬಂದ ಈ ವ್ಯವಸ್ಥೆಯ ವಸ್ತುಗಳ ಮೊದಲ ಪಟ್ಟಿಯಲ್ಲಿ ಸೇರಿಕೊಂಡಿದ್ದ ಸಕ್ಕರೆಯು 1953ರ ಸೆಪ್ಟೆಂಬರ್ನಲ್ಲಿ ನಿರ್ಬಂಧಗಳು ತೆರವುಗೊಂಡು ಪರಿಸ್ಥಿತಿ ತಿಳಿಗೊಳ್ಳುವವರೆಗೂ ಹಾಗೆಯೇ ಇತ್ತು. ಸುಮಾರು 13 ವರ್ಷಗಳ ಕಾಲ ಪಡಿತರ ವ್ಯವಸ್ಥೆಯ ಮೂಲಕ ಹಂಚಲಾಗುತ್ತಿದ್ದ ಸಕ್ಕರೆಯ ಪ್ರಮಾಣ ವಯಸ್ಕರಿಗೆ 40 ಗ್ರಾಂ ಅಂದರೆ ಸುಮಾರು 3 ದೊಡ್ಡ ಚಮಚದಷ್ಟು ಮತ್ತು ಕಿರಿಯರಿಗೆ ಅದರರ್ಧ. ಮಜವೆಂದರೆ 1953ರಲ್ಲಿ ನಿರ್ಬಂಧಗಳು ತೆರವುಗೊಂಡ ಮೇಲೆ ಮುಂದಿನ ಒಂದೇ ವರ್ಷದಲ್ಲಿ ಜೈಲಿನಿಂದ ಹೊರಬಂದಂತಹ ಮನೋಸ್ಥಿತಿಯಲ್ಲಿದ್ದ ಸ್ಥಳೀಯರ ಸಕ್ಕರೆಯ ಸೇವನೆಯ ಪ್ರಮಾಣ ಮೊದಲಿನ 40 ಗ್ರಾಂನ ದುಪ್ಪಟ್ಟಾಯಿತು.
ವಿಶ್ವ ಆರೋಗ್ಯ ಸಂಸ್ಥೆಯು ದಿನಬಳಕೆಯ ಸಕ್ಕರೆಯ ಬಳಕೆಯ ಮಿತಿಯನ್ನು 25 ಗ್ರಾಂಗೆ ನಿಗದಿಪಡಿಸಿದೆ. ಆದರೆ ನೈಜ ಪರಿಸ್ಥಿತಿ ಅದಕ್ಕಿಂತ ಬೇರೆಯೇ ಆಗಿದೆ. ಭಾರತೀಯನೊಬ್ಬನ ಸರಾಸರಿ ಸಕ್ಕರೆಯ ದಿನಬಳಕೆಯ ಬಳಕೆಯ ಪ್ರಮಾಣ ಈ ಮಿತಿಯ ಬರೋಬ್ಬರಿ ದುಪ್ಪಟ್ಟು. ಕೆಲ ಮೂಲಗಳ ಪ್ರಕಾರ ಆ ಅಂಕಿಯೂ ಕೇವಲ ಚಹಾ ಮತ್ತು ಕಾಫಿಯಂತಹ ಪೇಯಗಳ ಮೂಲಕ ನಮ್ಮ ದೇಹವನ್ನು ಸೇರುವ ಸಕ್ಕರೆಯ ಪ್ರಮಾಣವಾಗಿದ್ದು ಭಾರತೀಯರ ಬಾಯಿಚಪಲಕ್ಕೆ ಸಿಹಿಖಾದ್ಯಗಳ ಮೂಲಕ ಎಂಟ್ರಿ ಕೊಡುವ ಸಕ್ಕರೆಯ ಪ್ರಮಾಣವನ್ನು ಸೇರಿಸಿದರೆ ಅಸಲಿಯತ್ತು ಬೇರೆಯೇ ಇದೆ. ಅಂದ ಹಾಗೆ ಈ ಸಕ್ಕರೆ ಚಪಲ ಕೇವಲ ಭಾರತೀಯರಿಗಷ್ಟೇ ಸೀಮಿತವಾಗಿರದೇ ಜಾಗತಿಕ ಚಟವಾಗಿದೆ. ಅಮೆರಿಕನ್ನರು ಈ ವಿಷಯದಲ್ಲೂ ಮುಂದಿದ್ದು ದಿನಕ್ಕೆ 126 ಗ್ರಾಂ, ಜರ್ಮನಿ ಮತ್ತು ನೆದರ್ಲ್ಯಾಂಡ್ನವರು 102 ಗ್ರಾಂ, ಐರ್ಲ್ಯಾಂಡ್ನವರು 97 ಗ್ರಾಂ ಸಕ್ಕರೆಯನ್ನು ಸೇವಿಸುತ್ತಾರೆ.
ಮತ್ತೆ ಬ್ರಿಟನ್ನಿನ ಸಕ್ಕರೆಯ ರೇಷನ್ನಿನ ವಿಷಯಕ್ಕೆ ಬರೋಣ. 1940ರ ಜನವರಿಯಿಂದ 1953ರ ಸೆಪ್ಟೆಂಬರ್ವರೆಗಿನ ಸಮಯದಲ್ಲಿ ಹುಟ್ಟಿದ ಬ್ರಿಟನ್ನಿನ ಪೀಳಿಗೆಯು ರೇಷನ್ ವ್ಯವಸ್ಥೆಯಲ್ಲಿ ಸಕ್ಕರೆಯನ್ನು ಬಳಸುವ ಸಂದರ್ಭದಲ್ಲಿ ಭೂಲೋಕಕ್ಕೆ ಎಂಟ್ರಿ ಕೊಟ್ಟ ಕಾರಣ ಎಳವೆಯಲ್ಲಿ ಅತಿ ಕಡಿಮೆ ಸಕ್ಕರೆಯನ್ನು ಸೇವಿಸಿ ಬೆಳೆದ ಪೀಳಿಗೆಯೆಂಬ ಖ್ಯಾತಿಗೆ ಪಾತ್ರವಾಯಿತು. ಹೀಗಾಗಿ ಆ ಪೀಳಿಗೆಯು ವಿಜ್ಞಾನಿಗಳ ಪಾಲಿಗೊಂದು ಅಧ್ಯಯನದ ವಸ್ತು. ತಮ್ಮ ಹುಟ್ಟಿನ ಮೊದಲ ಸಾವಿರ ದಿನಗಳನ್ನು ಸಕ್ಕರೆ ಸೇವಿಸದೇ ಅಥವಾ ಅತಿ ಕಡಿಮೆ ಸಕ್ಕರೆಯನ್ನು ಸೇವಿಸಿ ಬೆಳೆದು ಇದೀಗ 75 ವರ್ಷಗಳ ಆಸುಪಾಸಿನಲ್ಲಿರುವ ಬ್ರಿಟನ್ನಿನ ಆ ಪೀಳಿಗೆಯನ್ನು ವಿಜ್ಞಾನಿಗಳ ಹಲವು ತಂಡಗಳು ಬೇರೆ ಬೇರೆ ಆಯಾಮಗಳಿಂದ ಅಭ್ಯಸಿಸಿ ಇದೀಗ ತಮ್ಮ ಸಂಶೋಧನಾ ವರದಿಗಳನ್ನು ಮಂಡಿಸುತ್ತಿವೆ. ಅಂತಹ ಕೆಲ ವರದಿಗಳು ಪ್ರಕಟಗೊಂಡು ಹಲವು ಕುತೂಹಲಕರ ವಿಚಾರಗಳನ್ನು ಹೊರಹಾಕಿವೆ.
ಒಂದೆರಡು ವರ್ಷಗಳ ಹಿಂದೆ ಕ್ಯಾಲಿಫೋರ್ನಿಯಾ ಮೂಲದ ವಿಶ್ವವಿದ್ಯಾಲಯದ ತಂಡವೊಂದು ಪ್ರಕಟಿಸಿದ ವರದಿಯಂತೆ ತಮ್ಮ ಜೀವನದ ಮೊದಲ ಸಾವಿರ ದಿನಗಳನ್ನು ಸಕ್ಕರೆ ಸೇವಿಸದೇ ಅಥವಾ ಅತಿ ಕಡಿಮೆ ಸಕ್ಕರೆ ಬಳಸಿ ಬೆಳೆದವರಿಗೆ ಬೇರೆಯವರಿಗಿಂತ ಟೈಪ್ 2 ಡಯಾಬಿಟಿಸ್ ಕಾಡುವ ಸಾಧ್ಯತೆ ಶೇಕಡ 35ರಷ್ಟು ಹಾಗೂ ಅಧಿಕ ರಕ್ತದೊತ್ತಡದ ಸಾಧ್ಯತೆ ಶೇಕಡ 20ರಷ್ಟು ಕಡಿಮೆಯಂತೆ. ಹಾಂಗ್ಕಾಂಗ್ ವಿಶ್ವವಿದ್ಯಾಲಯದ ತಂಡವೊಂದು ಸಹ ಇತ್ತೀಚೆಗೆ ತನ್ನ ಅಧ್ಯಯನ ವರದಿಯನ್ನು ಮಂಡಿಸಿದೆ. ಸುಮಾರು 65 ಸಾವಿರ ಜನರನ್ನು ಸಮೀಕ್ಷೆಗೊಳಪಡಿಸಿ ಸಿದ್ಧಪಡಿಸಿದ ಆ ವರದಿಯ ಪ್ರಕಾರ, ಮೊದಲ ಸಾವಿರ ದಿನಗಳನ್ನು ಕಡಿಮೆ ಸಕ್ಕರೆ ಸೇವಿಸಿ ಬೆಳೆದ ಮಕ್ಕಳಲ್ಲಿ ಇತರರಿಗಿಂತ ಬುದ್ಧಿಮಾಂದ್ಯತೆ ಕಾಡುವ ಸಾಧ್ಯತೆ ಶೇಕಡ 23ರಷ್ಟು ಕಡಿಮೆ.
ಹಾಗಿದ್ದಲ್ಲಿ ಮಕ್ಕಳಿಗೆ ಅವರ ಮೊದಲ ಸಾವಿರ ದಿನಗಳಲ್ಲಿ ಕಡಿಮೆ ಸಕ್ಕರೆ ಸೇವನೆಯಿಂದ ನಿಜಕ್ಕೂ ರೋಗಗಳು ಕಾಡುವ ಸಾಧ್ಯತೆ ಕಡಿಮೆಯಾಗುತ್ತದೆಯೇ? ಈ ಪ್ರಶ್ನೆಗೆ ತಕ್ಷಣವೇ ಉತ್ತರ ಕೊಡುವುದು ಕಷ್ಟ. ಹಿರಿಯ ವಿಜ್ಞಾನಿಗಳ ಅಭಿಪ್ರಾಯದಂತೆ ಈ ಎಲ್ಲ ವರದಿಗಳು ಇನ್ನೂ ಅನುಮೋದನೆಯಾಗದ ಅವಲೋಕನಗಳಷ್ಟೇ. ಹೀಗಾಗಿ ಅವುಗಳನ್ನಾಧರಿಸಿ ಮಕ್ಕಳಿಗೆ ಇಂತಿಷ್ಟೇ ಸಕ್ಕರೆಯ ಪ್ರಮಾಣವು ಆರೋಗ್ಯಕರವೆಂದು ನಿಗದಿಪಡಿಸಲು ಸಾಧ್ಯವಿಲ್ಲ. ಆದರೆ ಬಾಣಂತನದ ಸಮಯದಲ್ಲಿ ತಾಯಿಯು ಸೇವಿಸುವ ಆಹಾರ, ನಂತರ ಮಕ್ಕಳು ಬೆಳೆದು ದೊಡ್ಡವರಾಗುವತನಕ ರೂಢಿಸಿಕೊಳ್ಳುವ ಆಹಾರ ಪದ್ಧತಿಯು ಅವರ ಒಟ್ಟಾರೆ ಬೆಳವಣಿಗೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೆಂಬುದು ಸಾರ್ವಕಾಲಿಕ ಸತ್ಯ. ಹೀಗಾಗಿ ಸಕ್ಕರೆಯೂ ಸೇರಿದಂತೆ ಎಲ್ಲ ಜಂಕ್ ಆಹಾರಗಳಿಂದ ಆದಷ್ಟು ದೂರವಿರುವುದರಲ್ಲಿಯೇ ಆರೋಗ್ಯವಂತ ಜೀವನದ ಗುಟ್ಟು ಅಡಗಿದೆ. ಈ ವರ್ಷದ ಸಕ್ಕರೆ ಕಾಯಿಲೆ ದಿನದ ಘೊಷವಾಕ್ಯವೂ ಅದನ್ನೇ ಹೇಳುತ್ತದೆ. ಹಾಗಾಗಿ ಈಗಿನಿಂದಲೇ ಸ್ವಲ್ಪ ಕಡಿಮೆ ಸಕ್ಕರೆ ಸೇವಿಸಿ ಮುಂದಿನ ಜೀವನವನ್ನು ಸಿಹಿಯಾಗಿಸಿಕೊಳ್ಳೋಣ. ಅಲ್ಲವೇ?
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)