ಮಕ್ಕಳು ಟಿವಿಯಲ್ಲಿ ಏನು ನೋಡಬೇಕು?; ನ.21 ವಿಶ್ವ ಟೆಲಿವಿಷನ್ ದಿನ

Putani Feature
Published on

ಕರೊನಾ ಹಿನ್ನೆಲೆಯಲ್ಲಿ ಮನೆ ಮಂದಿಯೆಲ್ಲ ಟಿವಿ ವೀಕ್ಷಿಸುವ ಸಮಯ ಹೆಚ್ಚಿದೆ. ಎಲ್ಲ ವಯೋಮಾನದವರನ್ನು ಸೆಳೆಯುವ ಟೆಲಿವಿಷನ್ ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ‘ಅತಿಯಾದರೆ ಅಮೃತವೂ ವಿಷ’ ಎಂಬಂತೆ, ಟಿವಿ ವೀಕ್ಷಣೆಯಲ್ಲಿ ಮಿತಿ ಅವಶ್ಯ. ಮಕ್ಕಳು ಟಿವಿಯನ್ನು ಎಷ್ಟು ಹೊತ್ತು ನೋಡಬೇಕು, ಯಾವ ಮಾದರಿಯ ಕಾರ್ಯಕ್ರಮ ನೋಡಿದರೆ ಒಳಿತು, ಯಾವೆಲ್ಲ ಅಂಶ ಸ್ವೀಕರಿಸಬೇಕು ಇತ್ಯಾದಿ ಬಗ್ಗೆ ತಜ್ಞರ ಅಭಿಪ್ರಾಯ ಇಲ್ಲಿದೆ.

ಆಧುನಿಕತೆ ಬೆಳೆದ ಹಾಗೆ ನಮ್ಮ ಆಲೋಚನೆ, ಚಿಂತನೆ, ಕೆಲಸ-ಕಾರ್ಯ, ಅಭಿರುಚಿ ಎಲ್ಲವೂ ಬದಲಾಗುತ್ತಿದೆ. ಅದೇ ಮಾದರಿಯಲ್ಲಿ ಟಿವಿಯಲ್ಲಿ ಬರುವ ಕಾರ್ಯಕ್ರಮಗಳೂ ಬದಲಾಗುತ್ತಿವೆ. ಮಹಿಳೆಯರಿಗಾಗಿ, ವಯಸ್ಸಾದವರಿಗಾಗಿ, ಯುವಕರಿಗಾಗಿ, ಪುರುಷರಿಗಾಗಿ, ಅಷ್ಟೇ ಏಕೆ ಮಕ್ಕಳಿಗಾಗಿಯೂ ವಿಶೇಷ ಕಾರ್ಯಕ್ರಮ, ರಿಯಾಲಿಟಿ ಶೋಗಳು ಬಂದಿವೆ. ಇದರಲ್ಲಿ ಮಕ್ಕಳು ಯಾವುದನ್ನು ಆರಿಸಿಕೊಳ್ಳಬೇಕು? ಅಪ್ಪ-ಅಮ್ಮ ಅಥವಾ ಅಜ್ಜ-ಅಜ್ಜಿ ನೋಡುವ ಕಾರ್ಯಕ್ರಮವನ್ನೇ ನೋಡಬೇಕೆ..? ಅಥವಾ ಬೇರೆಯದನ್ನೊ? ಮಕ್ಕಳ ಚಾನಲ್​ಗಳಲ್ಲಿ ಪೌರಾಣಿಕ ಕಥೆ, ನೀತಿಕಥೆ, ಜ್ಞಾನ ಹೆಚ್ಚಿಸುವ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಕೆಲ ಕಾರ್ಟೂನ್ ಚಾನಲ್​ಗಳಲ್ಲಿ ಪೌರಾಣಿಕ ಕಥೆಗಳ ಹೆಸರಿನಲ್ಲಿ ಕಾಲ್ಪನಿಕ ಕಥೆ ರೂಪದಲ್ಲಿ ಹೊಡೆದಾಡುವ ದೃಶ್ಯಾವಳಿಗಳನ್ನು ತೋರಿಸಲಾಗುತ್ತಿದೆ. ಇದನ್ನು ನೋಡಿದ ಮಕ್ಕಳು ಮನೆ-ಮಂದಿ ಮೇಲೂ ಬಾಣಪ್ರಯೋಗ, ಗದಾಪ್ರಹಾರ ನಡೆಸುವುದೂ ಉಂಟು! ಹಾಗಾದರೆ ಮಕ್ಕಳಿಗೆ ಟಿವಿಯಲ್ಲಿ ಏನನ್ನು ತೋರಿಸಬೇಕು ಎಂಬ ಪ್ರಶ್ನೆ ಮತ್ತೆ ಎದುರಾಗುತ್ತದೆ. ಜ್ಞಾನಾರ್ಜನೆಗೆ ಸಹಾಯವಾಗುವ ಅನಿಮಲ್ ಪ್ಲಾನೆಟ್ (ಕೇವಲ ಚಿತ್ರ ನೋಡಿದರೆ ಸಾಲದು, ಕಾಮೆಂಟರಿಯನ್ನು ಕೇಳಿಸಿಕೊಳ್ಳಬೇಕು), ನ್ಯಾಷನಲ್ ಜಿಯಾಗ್ರಫಿ, ಹಿಸ್ಟರಿ, ಸಂಗೀತ, ನೃತ್ಯ ಕಾರ್ಯಕ್ರಮ, ವರ್ಲ್ಡ್ ಟೂರ್ ಹೀಗೆ ಹಲವು ಕಾರ್ಯಕ್ರಮಗಳನ್ನು ಮಕ್ಕಳಿಗೆ ಪರಿಚಯಿಸಬಹುದು. ಆರಂಭದಲ್ಲಿ ರಾಗ ಎಳೆಯುವ ಮಕ್ಕಳು ನಂತರ ತಾವೇ ಅಭ್ಯಾಸ ಮಾಡಿಕೊಳ್ಳುತ್ತಾರೆ.

ದೈಹಿಕ ಚಟುವಟಿಕೆ ಮುಖ್ಯ

ಮಕ್ಕಳ ಅತಿಯಾದ ಟಿವಿ ವೀಕ್ಷಣೆ ಮಾನಸಿಕ, ದೈಹಿಕ ಹಾಗೂ ದೃಷ್ಟಿ ಸಮಸ್ಯೆಗೂ ಕಾರಣವಾಗುತ್ತಿದೆ. ಆದ್ದರಿಂದ ಮಕ್ಕಳನ್ನು ಹೆಚ್ಚು ಹೊರಾಂಗಣ ಆಟಗಳಲ್ಲಿ ತೊಡಗಿಕೊಳ್ಳಲು ಹಾಗೂ ಸ್ನೇಹಿತರೊಂದಿಗೆ ಬೆರೆಯಲು ಅವಕಾಶ ಕಲ್ಪಿಸಬೇಕು. ಮನರಂಜನೆಗಾಗಿ ಕೆಲ ಸಮಯ ಕಾರ್ಟೂನ್, ರಾಮಾಯಣ, ಮಹಾಭಾರತ ಕಾರ್ಯಕ್ರಮ ನೋಡಬಹುದು. ಹಾಗೆಂದು ದಿನಪೂರ್ತಿ ನೋಡುವುದು ಸರಿಯಲ್ಲ. ಇವಲ್ಲದೆ ಪಠ್ಯಕ್ಕೆ ಹಾಗೂ ಜ್ಞಾನವೃದ್ಧಿಗೆ ಪೂರಕವಾಗಿ ಪರಿಸರ, ವಿಜ್ಞಾನ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಬಹುದು. ಮನೆಯವರು ಹೆಚ್ಚು ಟಿವಿ ನೋಡಿದರೆ ಮಕ್ಕಳು ಅದನ್ನೇ ಅನುಸರಿಸುತ್ತಾರೆ. ಹಾಗಾಗಿ ಮಕ್ಕಳೊಂದಿಗೆ ಆಟದಲ್ಲಿ ತೊಡಗಿಕೊಳ್ಳುವುದರ ಜತೆಗೆ ಅವರಿಗೆ ದೈಹಿಕ ಚಟುವಟಿಕೆಗೆ ಅವಕಾಶ ಮಾಡಿಕೊಡಬೇಕು. ಜನರಿಗೆ ಮಾಹಿತಿ ತಿಳಿಸುವ ಜತೆಗೆ ಜನರಿಗೆ ಉಪಯೋಗ ಆಗುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಮಾಧ್ಯಮಗಳ ಕರ್ತವ್ಯ. ವೀಕ್ಷಕರಲ್ಲಿ ಆತಂಕ ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ಪದೇಪದೆ ಪ್ರಸಾರ ಮಾಡಬಾರದು.

| ಡಾ. ಪ್ರತಿಮಾ ಮೂರ್ತಿ ನಿಮ್ಹಾನ್ಸ್ ನಿರ್ದೇಶಕಿ

ಜೀವನಶೈಲಿ ರೂಪಣೆ ಪಾಲಕರ ಹೊಣೆ

ಆಧುನಿಕತೆ ಬೆಳೆದಂತೆ ಮಕ್ಕಳು ಟಿವಿ ಹಾಗೂ ಸೋಷಿಯಲ್ ಮೀಡಿಯಾದ ದಾಸರಾಗುತ್ತಿದ್ದಾರೆ. ಮಕ್ಕಳನ್ನು ನಾವು ಹೇಗೆ ಮೌಲ್ಡ್ ಮಾಡುತ್ತೇವೋ ಹಾಗೆ ಬೆಳೆಯುತ್ತಾರೆ. ನಮ್ಮ ಕೆಲಸ ಆಗಬೇಕು ಎಂದಾಗ ಮಕ್ಕಳಿಗೆ ಟಿವಿ ಹಾಕಿಕೊಡುವುದು ಅಥವಾ ಮೊಬೈಲ್ ನೀಡುವುದನ್ನು ಬಿಡಬೇಕು. ಬೆಳಗ್ಗೆ ಎದ್ದ ತಕ್ಷಣ ‘ಕರಾಗ್ರೆ ವಸತೇ ಲಕ್ಷ್ಮೀ..’ ಎನ್ನುವ ಬದಲು ಮೊಬೈಲ್ ತೆರೆಯುತ್ತಿದ್ದೇವೆ. ಅತಿಯಾದ ಟಿವಿ ವೀಕ್ಷಣೆಯಿಂದ ಮಕ್ಕಳು ಖಿನ್ನತೆಗೆ ಒಳಗಾಗುತ್ತಿದ್ದು, ಆತ್ಮಹತ್ಯೆಯಂತಹ ಘಟನೆಗಳನ್ನೂ ನೋಡಿದ್ದೇವೆ. ಆದ್ದರಿಂದ ಮಕ್ಕಳು ಆಟ, ಪಾಠ ಜತೆ ಮನೆಯ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಪಾಲಕರು ಅದನ್ನು ಅಭ್ಯಾಸ ಮಾಡಿಸಬೇಕು. ಟಿವಿ ನೋಡಲು ಮಕ್ಕಳಿಗೆ ಒಂದು ಸಮಯ ನಿರ್ಧರಿಸಿ, ಆ ಸಮಯದಲ್ಲಿ ಜ್ಞಾನಾಧಾರಿತ, ಮನೋಲ್ಲಾಸ ನೀಡುವ ಕಾರ್ಯಕ್ರಮಗಳನ್ನು ತೋರಿಸಬೇಕು. ಕೆಲ ಕಾರ್ಟೂನ್​ಗಳನ್ನು ನೋಡುವುದರಿಂದ ಮಕ್ಕಳು ವೈಲೆಂಟ್ ಆಗುತ್ತಿದ್ದಾರೆ. ಅಂತಹವನ್ನು ತೋರಿಸದಿದ್ದರೆ ಒಳಿತು. ಮಕ್ಕಳು ಚಿಕ್ಕವರಿದ್ದಾಗಿನಿಂದಲೇ ಪೌರಾಣಿಕ, ಇತಿಹಾಸ, ನೀತಿ ಕಥೆಗಳ ಚಿತ್ರಣದ ಜೊತೆ ಅಜ್ಜ-ಅಜ್ಜಿಯ ಕಥೆ, ಮಾರ್ಗದರ್ಶನದಲ್ಲಿ ಬೆಳೆದರೆ ಮಾದರಿ ಮಕ್ಕಳಾಗುತ್ತಾರೆ. ಪಾಲಕರು ಯಾವ ಮಾದರಿಯಲ್ಲಿ ಜೀವನಶೈಲಿ ರೂಪಿಸುತ್ತಾರೆ ಎನ್ನುವುದರ ಮೇಲೆ ಮಕ್ಕಳ ಭವಿಷ್ಯ ನಿಂತಿರುತ್ತದೆ.

| ವಿಜಯ ರಾಘವೇಂದ್ರ ನಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net