ಮಕ್ಕಳ ಕಥೆ: ಈ ಮೂವರಲ್ಲಿ ಯಾರು ಶ್ರೇಷ್ಠರು?

Makkala Kathe
Published on
ಅದೊಂದು ಸುಂದರವಾದ ಹೂತೋಟ. ಅಲ್ಲಿ ಮಿಂಚುಹುಳ, ಚಿಟ್ಟೆ ಮತ್ತು ಜೇನುಹುಳ ಒಳ್ಳೆಯ ಗೆಳೆಯರಾಗಿ ವಾಸಿಸುತ್ತಿದ್ದವು. ಹೀಗಿರಲು ಒಂದು ದಿನ ಮೂವರಲ್ಲಿ ಯಾರು ಶ್ರೇಷ್ಠರು? ಎಂಬ ವಿಷಯದಲ್ಲಿ ಚರ್ಚೆ ನಡೆಯಿತು. ಇದೆಲ್ಲವನ್ನೂ ಅಲ್ಲೇ ಪಕ್ಕದಲ್ಲಿದ್ದು ಗಮನಿಸುತ್ತಿದ್ದ ಮಾವಿನಮರವು, ‘ಗೆಳೆಯರೇ ಜಗಳವಾಡಬೇಡಿ. ನಿಮ್ಮ ಈ ಸಮಸ್ಯೆಯನ್ನು ನಾನು ಪರಿಹರಿಸುತ್ತೇನೆ. ನಿಮ್ಮಲ್ಲಿರುವ ಗುಣ ಮತ್ತು ಅವಗುಣಗಳನ್ನು ಒಬ್ಬೊಬ್ಬರಾಗಿ ತಿಳಿಸಿ’ ಎಂದಿತು. ಕೂಡಲೇ ಮಿಂಚುಹುಳ ‘ನಾನು ಬೆಳಕನ್ನು ಕೊಡುತ್ತೇನೆ. ಕತ್ತಲಲ್ಲಿ ಮಿನುಗುವ ನಾನೆಂದರೆ ಎಲ್ಲರಿಗೂ ಬಲು ಇಷ್ಟ. ಆದರೆ ನಾನು ಮಳೆಗಾಲದಲ್ಲಿ ಮಾತ್ರಾ ಕಾಣಸಿಗುತ್ತೇನೆ’ ಎಂದು ಬೇಸರದಲ್ಲಿ ನುಡಿಯಿತು.

ನಂತರದ ಸರದಿ ಚಿಟ್ಟೆಯದು. ಬಣ್ಣ ಬಣ್ಣಗಳಿಂದ ಕೂಡಿದ ನನ್ನನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಕಂಬಳಿಹುಳದ ರೂಪದಲ್ಲಿರುವಾಗ ಮುಟ್ಟಲು ಬರುವುದಿಲ್ಲ ಎಂದಿತು ಬೇಸರದಲ್ಲಿ.

ಕೊನೆಯದಾಗಿ ಜೇನುಹುಳವು, ‘ನಾನು ಬಗೆಬಗೆಯ ಹೂಗಳ ಮಕರಂದದಿಂದ ತಯಾರಿಸುವ ಜೇನೆಂದರೆ ಪ್ರತಿಯೊಬ್ಬರಿಗೂ ತುಂಬಾ ಇಷ್ಟ. ಆದರೆ ನಾನು ನನ್ನ ಸೂಜಿಯಿಂದ ಚುಚ್ಚುವೆನೆಂದು ನನ್ನ ಬಳಿಗೆ ಬರುವುದಿಲ್ಲ’ ಎಂದಿತು ದುಃಖದಲ್ಲಿ.

ಇದೆಲ್ಲವನ್ನೂ ಕೇಳಿದ ಮಾವಿನ ಮರವು ‘ನೀವೇ ಹೇಳಿದ ಹಾಗೇ ಪ್ರತಿಯೊಬ್ಬರೂ ಅವರವರ ಕೆಲಸಗಳಲ್ಲಿ ಶ್ರೇಷ್ಠರೇ. ಹಾಗಾಗಿ ಎಲ್ಲರೂ ಸಮಾನರೇ. ಜಗಳವಾಡದೇ ಸ್ನೇಹಿತರಾಗಿರಿ’ ಎಂದಿತು.

ಮೂವರೂ ತಮ್ಮ ವಾದವನ್ನು ನಿಲ್ಲಿಸಿ ಸಂತಸದಿಂದ ಬಾಳಿದರು.

ನೀತಿ: ತಮ್ಮ ತಮ್ಮ ಕೆಲಸಗಳಲ್ಲಿ ಎಲ್ಲರೂ ಶ್ರೇಷ್ಠರೇ.

| ಸ್ಫೂರ್ತಿ ಆರ್. ಭಟ್ 3ನೇ ತರಗತಿ, ನವಚೇತನ ಆಂಗ್ಲ ಮಾಧ್ಯಮ ಶಾಲೆ, ವೇಣೂರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net