

ಒಂದು ಊರಿನಲ್ಲಿ ಮೂವರು ಮಿತ್ರರಿದ್ದರು. ಮೊದಲನೆಯವನ ಹೆಸರು ಚಿಕ್ಕಯ್ಯ, ಎರಡನೆಯವನ ಹೆಸರು ರಾಘವೇಂದ್ರ, ಮೂರನೆಯವ ಗಣೇಶ. ಗಣೇಶನಿಗೆ ತಾಮ್ರ, ರಾಘವೇಂದ್ರನಿಗೆ ಬೆಳ್ಳಿ, ಚಿಕ್ಕಯ್ಯನಿಗೆ ಚಿನ್ನ ಬೇಕಾಗಿತ್ತು. ಮೂವರೂ ಮಿತ್ರರು ಕಾಡಿಗೆ ಹೋದರು. ಸ್ವಲ್ಪ ದೂರ ನಡೆದ ನಂತರ ಅವರಿಗೆ ಬಾಯಾರಿಕೆ ಆಯಿತು. ಅಲ್ಲೇ ಇದ್ದ ಋಷಿಯ ಗುಡಿಸಲಿನಲ್ಲಿ ನೀರು ಕುಡಿಯಲು ಹೋದರು. ಋಷಿಯನ್ನು ನೋಡಿದ ಈ ಮಿತ್ರರು ನೀರು ಕೇಳುವ ಬದಲು ಋಷಿಯ ಸೇವೆ ಮಾಡಿದರು. ಋಷಿಯು ಪ್ರಸನ್ನರಾಗಿ ಅವರ ಆಸೆ ಕೇಳಿದರು.
ಚಿಕ್ಕಯ್ಯ ತನಗೆ ಚಿನ್ನ ಬೇಕೆಂದು ಹೇಳಿದರೆ, ರಾಘವೇಂದ್ರ ಬೆಳ್ಳಿ ಬೇಕೆಂದು ಮತ್ತು ಗಣೇಶ ತಾಮ್ರ ಬೇಕೆಂದು ಹೇಳಿದರು. ಋಷಿಯು ಒಂದು ಜಾಗವನ್ನು ಸೂಚಿಸಿ ಅಲ್ಲಿ ಹೋಗಿ ಹೊಂಡ ತೋಡಲು ಹೇಳಿದರು. ಮೂವರೂ ಮಿತ್ರರು ನೀರು ಕುಡಿದು ಆ ಜಾಗಕ್ಕೆ ಹೋಗಿ ಹೊಂಡ ತೋಡಿದರು. ಗಣೇಶನಿಗೆ ತಾಮ್ರ ಸಿಕ್ಕಿತು. ಅಷ್ಟಕ್ಕೆ ತೃಪ್ತನಾಗಿ ಅವನು ಮನೆ ಕಡೆಗೆ ಹೆಜ್ಜೆ ಹಾಕಿದ. ಹೊಂಡ ತೋಡುತ್ತ ತೋಡುತ್ತ ರಾಘವೇಂದ್ರನಿಗೆ ಬೆಳ್ಳಿ ಸಿಕ್ಕಿತು. ಅವನೂ ಮನೆ ಕಡೆಗೆ ಹೆಜ್ಜೆ ಹಾಕಿದ. ಸ್ವಲ್ಪ ಹೊತ್ತಿನ ನಂತರ ಚಿಕ್ಕಯ್ಯನಿಗೆ ಚಿನ್ನ ಸಿಕ್ಕಿತು. ಅವನು ಚಿನ್ನವನ್ನು ನೋಡಿ ತುಂಬಾ ಖುಷಿಪಟ್ಟ. ಇನ್ನೂ ಆಳಕ್ಕೆ ಹೊಂಡ ತೋಡಿದರೆ ವಜ್ರ ಸಿಗಬಹುದು ಎಂಬ ಆಸೆಯಿಂದ ಇನ್ನೂ ಸ್ವಲ್ಪ ತೋಡಿದ. ಅಲ್ಲಿ ಅವನಿಗೆ ವಜ್ರದ ಬದಲಾಗಿ ಚೇಳು ಮತ್ತು ಹಾವು ಕಂಡವು. ಆ ಚೇಳು ಮತ್ತು ಹಾವುಗಳು ಅವನನ್ನು ಕಚ್ಚಿ ಸಾಯಿಸಿಬಿಟ್ಟವು.
ನೀತಿ: ಅತಿ ಆಸೆ ಪ್ರಾಣವನ್ನೂ ತೆಗೆಯಬಹುದು.
ಸೂಚನೆ: ಕಥೆ ಕಳುಹಿಸುವ ಪುಟಾಣಿಗಳು ತಮ್ಮ ಹೆಸರು, ಭಾವಚಿತ್ರ, ತರಗತಿ, ಶಾಲೆ ಹಾಗೂ ನಗರದ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು.
ಕಥೆ ಕಳುಹಿಸಬೇಕಾದ ಇಮೇಲ್ ಐಡಿ: http://putani.vijayavani@gmail.com