

ಮಕ್ಕಳು ತಮ್ಮ ಅಗತ್ಯಗಳನ್ನು ಅಮ್ಮನ ಮೂಲಕ ಅಪ್ಪನಿಗೆ ರವಾನಿಸುತ್ತಾರೆ. ಆದರೂ ಬೇಸರ ಮಾಡದೆ, ಮರು ಮಾತಿಲ್ಲದೆ ಅವನ್ನು ಪೂರೈಸಿಕೊಡುವವನು ಅಪ್ಪನೇ. ಕಷ್ಟ ಬಿದ್ದಾದರೂ ಸರಿಯೇ, ಸಾಲ ಮಾಡಿಯಾದರೂ ಸರಿಯೇ, ಮಕ್ಕಳು ತನಗಿಂತಲೂ ಹೆಚ್ಚು ಓದಬೇಕೆಂದು ಪ್ರಾಮಾಣಿಕವಾಗಿ ಬಯಸಿದವ ಅಪ್ಪ. ಮಕ್ಕಳಿಗೆ ಅಪ್ಪನ ಈ ನಿಟ್ಟುಸಿರು ಕೇಳಿಸಲಿಲ್ಲ. ಕಾರಣ ಕೇಳಿಸದ ಹಾಗೆ ಉಸಿರು ಕಟ್ಟಿ, ಅಪ್ಪ ಮಕ್ಕಳ ಭವ್ಯ ಭವಿಷ್ಯದ ನೊಗ ಹೊತ್ತಿದ್ದ. ತನ್ನ ಪಂಚೆ ಹರಿದು ಹೋಗಿದ್ದರೂ, ಮಕ್ಕಳಿಗೆ ಹೊಸಬಟ್ಟೆ ಕೊಡಿಸಿದ ಪುಣ್ಯಾತ್ಮ ಈತ. ತನ್ನ ಹುಟ್ಟುಹಬ್ಬವನ್ನು ಆಚರಿಸದಿದ್ದರೂ, ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಲು ಮರೆತವನಲ್ಲ! ನಾವು ಹುಟ್ಟುವಾಗ ಹೀಗೆಯೇ ಬೆಳೆಯಬೇಕೆಂಬ ಸಲಹಾ ಪುಸ್ತಕ ಇರುವುದಿಲ್ಲ. ಅವನ್ನು ತಿಳಿಸಲೆಂದೇ ಅಪ್ಪ ಇರುತ್ತಾನೆ. ಈ ಜಗತ್ತು ಇರೋದೇ ಹೀಗೆ ಎಂದು ತಿಳಿದುಕೊಂಡವನು ಅಪ್ಪ. ಆದುದರಿಂದಲೇ ಬಾಲ್ಯದಲ್ಲಿ ಕಷ್ಟಗಳನ್ನು ಪರಿಚಯಿಸಿದ. ಏಕೆಂದರೆ ಬಡತನದಲ್ಲಿ ಬೆಳೆಯಬೇಕು. ಹಿರಿತನದಲ್ಲಿ ಬಾಳಬೇಕು ಮತ್ತು ಹಿರಿತನದಲ್ಲಿ ಸಾಯಬೇಕು ಎಂಬುದೇ ಇವನ ಸಿದ್ಧಾಂತ. ಆದುದರಿಂದ ಓದುವಾಗ ಅವಶ್ಯಕತೆಗಳನ್ನು ನೀಡಿದನೇ ಹೊರತು ಐಷಾರಾಮಿ ಸೌಕರ್ಯಗಳನ್ನಲ್ಲ! ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಶಿಸ್ತನ್ನು ಹೇರಿದ ಸದಭಿರುಚಿಯ ಹವ್ಯಾಸಗಳನ್ನು ಹುಟ್ಟು ಹಾಕಿದ, ಹಾಗೂ ಅನೇಕಾನೇಕ ಸಾಧು ಸಂತರ ಮಹಾತ್ಮ ಮಹಾನ್ ವ್ಯಕ್ತಿಗಳ ಕತೆಗಳನ್ನು ಹೇಳಿದ; ಶಿಕ್ಷಣದ ಜೊತೆ ಸಂಸ್ಕಾರವನ್ನು ತುಂಬಿದ. ವರುಷದ 365 ದಿನಗಳಲ್ಲೂ ಮಕ್ಕಳ ಶ್ರೇಯಸ್ಸನ್ನೇ ಬಯಸಿದ. ತಪ್ಪುಗಳನ್ನು ಮಾಡಿದಾಗ, ಅಪ್ಪ ಮಕ್ಕಳಿಗೆ ಹೊಡೆಯಬಹುದು, ಆದರೆ ಮತ್ತೆ ಸಂತೈಸುವವನೂ ತಂದೆಯೇ.
ತಂದೆಯಿಂದ ಏನನ್ನೂ ಕಲಿತಿಲ್ಲವೆಂದು ಹೇಳುವ ಮಕ್ಕಳೇ ಇಲ್ಲ. ತನಗೆ ಹತ್ತು ವರುಷಗಳಾದಾಗ ಈ ನನ್ನ ಅಪ್ಪನಿಗೆ ಎಷ್ಟೆಲ್ಲ ಗೊತ್ತು ಎಂದು ಅಂದುಕೊಂಡಿದ್ದ ಮಗ ತನಗೆ 20 ವರುಷಗಳಾದಾಗ ಅಪ್ಪನ ಬುದ್ಧಿ ಮಾತುಗಳು ಅವನಿಗೆ ಅಷ್ಟಾಗಿ ಹಿಡಿಸಲಿಲ್ಲ. 30ನೇ ವಯಸ್ಸಿನಲ್ಲಿ ಅಪ್ಪನಿಗೆ ಅಷ್ಟೊಂದು ಗೊತ್ತಿಲ್ಲವೆಂದು ತಿಳಿಯಲಾರಂಭಿಸಿದ ಮಗ, 40ನೇ ವಯಸ್ಸಿನಲ್ಲಿ ಅಪ್ಪನಿಗೆ ಗೊತ್ತಿರುವಷ್ಟು ನನಗೂ ಗೊತ್ತು ಎಂದು ಭಾವಿಸಲಾರಂಭಿಸಿದ; ಆದರೆ 50 ವರುಷಗಳಾಗುತ್ತಿದ್ದಂತೆ, ಅಪ್ಪನಿಗೆ ನನಗಿಂತಲೂ ಹೆಚ್ಚು ಗೊತ್ತು ಎಂದು ಮನವರಿಕೆಯಾದ ಮಗನಿಗೆ, 60ನೇ ವಯಸ್ಸಿನಲ್ಲಿ ಅಪ್ಪ ಹೇಳುತ್ತಿದ್ದೆಲ್ಲಾ ಸರಿ ಎಂದೆನಿಸತೊಡಗಿತು. ಒಟ್ಟಿನಲ್ಲಿ ಅಪ್ಪನನ್ನು ತಿಳುದುಕೊಳ್ಳಲು 60 ವರುಷಗಳೇ ಬೇಕಾಯಿತು ಈ ಮಗನಿಗೆ. ಬೆಳೆದು ದೊಡ್ಡವರಾದ ಮೇಲೂ, ಮಕ್ಕಳು ಅಪ್ಪನ ಸಲಹೆ ಮಾರ್ಗದರ್ಶನಕ್ಕಾಗಿ ಹಾತೊರೆಯುತ್ತಿದ್ದಾರೆ ಎಂದರೆ ಅದಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ. ನಾನು ಏರದ ಎತ್ತರವನ್ನು ನೀವು ಏರಬೇಕು ಮಕ್ಕಳೆ ಎಂದು ಹೇಳುವ ವ್ಯಕ್ತಿ ನಿಮ್ಮಪ್ಪನೇ ಆಗಿರಬೇಕು. ಆದುದರಿಂದಲೇ ಈ ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು. ಆದರೆ ಕೆಟ್ಟ ತಾಯಿ ಮಾತ್ರವಲ್ಲ ಕೆಟ್ಟ ಅಪ್ಪನೂ ಇರಲು ಸಾಧ್ಯವೇ ಇಲ್ಲ.
ಪ್ರತಿ ಗಂಡಸಿಗೆ ತಂದೆಯಾಗೋದು ಸಂಭ್ರಮದ ಕ್ಷಣ. ಆದರೆ ಮಕ್ಕಳು ಹೆಮ್ಮಪಡುವಂತಹ ಅಪ್ಪನಾಗೋದು ಒಂದು ಸವಾಲು. ಹಿರಿತನ ಬರೇ ತಂದೆಯಾಗೋದರಿಂದ ಇಲ್ಲವೇ ವಯಸ್ಸಿನಿಂದ ಮಾತ್ರ ಬರೋದಿಲ್ಲ. ತಮ್ಮ ಆಚಾರ ವಿಚಾರದಲ್ಲಿ, ನಡೆ-ನುಡಿಯಲ್ಲಿ ಅಪ್ಪನೂ ಎತ್ತರದ ಸ್ಥಾನದಲ್ಲಿರಬೇಕಾಗುತ್ತದೆ. ನುಡಿದಂತೆ ನಡೆಯಬೇಕು; ನಡೆದಂತೆ ನುಡಿಯಬೇಕು. ಅಪ್ಪ ಓರ್ವ ಯೋಗ್ಯ ವ್ಯಕ್ತಿ ಆಗಿರದಿದ್ದಲ್ಲಿ ಮಕ್ಕಳಿಗೆ ಬುದ್ದಿವಾದ ಹೇಳುವ ನೈತಿಕತೆಯನ್ನು ಕಳೆದುಕೊಳ್ಳುತ್ತಾನೆ. ಅಂತೆಯೇ ಯಾರು ತನ್ನ ಹೆತ್ತವರಿಗೆ ಒಳ್ಳೆಯ ಮಗನಾಗಿರುತ್ತಾನೋ, ಅವನು ಮಾತ್ರ ತನ್ನ ಮಕ್ಕಳಿಗೆ ಒಳ್ಳೆಯ ಅಪ್ಪನಾಗಲು ಸಾಧ್ಯ. ಮಕ್ಕಳನ್ನ ದೂರ ಮಾಡಿಕೊಂಡ ತಂದೆ ನೆಮ್ಮದಿಯಾಗಿ ಇರಲಾರ. ಮಕ್ಕಳು ಬೆಳೆಯುತ್ತಿದ್ದಂತೆ, ಅಪ್ಪ ಚಿಕ್ಕವನಾಗುತ್ತಾ ಹೋಗಬೇಕು, ತಂದೆತನವನ್ನು ಬಿಡುತ್ತಾ ಹೋಗಬೇಕು, ಗೆಳೆತನವನ್ನು ಸಂಪಾದಿಸಿಕೊಳ್ಳಬೇಕು!