

ಛತ್ರಪತಿ ಶಿವಾಜಿ! ಅವರ ಜೀವಿತ ಕಾಲದಲ್ಲಿನ ಹಿಂದುಸ್ಥಾನದ ಕ್ಷಿತಿಜದಲ್ಲಿ (ನಾಲ್ಕು ನೂರು ವರ್ಷಗಳ ಹಿಂದೆ) ವಿದೇಶಿ ಸಂತತಿಯ ಕ್ರೂರ ಆಡಳಿತ ನಗ್ನರೂಪ ಧರಿಸಿತ್ತು. ಆ ಮಧ್ಯೆಯೂ ಶಿವಾಜಿಯದು ಮಿರು-ಮಿರುಗುವ ವ್ಯಕ್ತಿತ್ವ, ದಬ್ಬಾಳಿಕೆ ದಮನಗಳಿಂದ ಕೂಡಿದ್ದ ಹಗಲು, ರಾತ್ರಿಗಳದ್ದೇ ಅಂದಿನ ಕಾರುಬಾರು. ಹಿಂದು ದೇಶದ ಇಂಚಿಂಚು ಕಣಕಣದಲ್ಲೂ ಹಿಂದು ಸಮಾಜವು ಎದುರಿಸಬೇಕಾಗಿದ ಘೊರ ಅಪಸವ್ಯ. ಕ್ರೂರ ಗೋಹತ್ಯೆ, ಅಪವಿತ್ರಗೊಂಡ ದೇವಮಂದಿರಗಳು, ಲೂಟಿ, ವಿಗ್ರಹಧ್ವಂಸ, ಮಾತಾ ಮಾನಾಪಹರಣ ಇವುಗಳದ್ದೇ ಮಹಾಪೂರ. ಒಂದು ನೆಲದ ಮೇಲೂ ಧರ್ಮರಕ್ಷಕ ಆಡಳಿತಗಾರರ ಸುಳಿವೇ ಕಾಣದು. ನ್ಯಾಯ ಆಡಳಿತವನ್ನು ಅಂದಿನ ಸಮಾಜ ಕಂಡೇ ಇರಲಿಲ್ಲ. ಕೈಮೈಗಳನ್ನು ಮೊದಲಿಗೆ ಹಿಡಿದ ಮದುಮಕ್ಕಳು ವಿವಾಹ ಮಂಟಪದಿಂದ ಮನೆಯತ್ತ ಕ್ಷೇಮವಾಗಿ ತೆರಳಿಯಾರೆಂಬ ನಿರೀಕ್ಷೆಯೂ ಅತ್ತತ್ತವೇ. ಇಡೀ ದೇಶ ಸ್ವಾತಂತ್ರ್ಯವೆಂಬ ಬೆಳಕಿನಿಂದ ವಂಚಿತವಾಗಿ ಕತ್ತಲು, ಕತ್ತಲಿನತ್ತಲೇ ಧಾವಿಸುತ್ತಿತ್ತು.
ಶಿವಾಜಿ ಜನಿಸಿದ ಮೇಲೆ ಯಾವುದೋ ನೈಸರ್ಗಿಕ ಬೆಳವಣಿಗೆ ಕಂಡುಬಂದಿತೆಂದು ಸಾವರಕರರು ಬರೆಯುತ್ತಾರೆ. ‘‘19-2-1630ರಂದು ಶಿವಾಜಿ ಹುಟ್ಟಿಬಂದದ್ದೇ ತಡ, ಹಿಮಾಲಯದಿಂದ ದಕ್ಷಿಣದ ಮಹಾಸಾಗರದವರೆಗೆ ಇದ್ದ ದಯನೀಯ ಸ್ಥಿತಿ ಸಾಕಷ್ಟು ಬದಲುಗೊಂಡಿತು. ಅದು ಹಿಂದುಗಳಿಗೆ ಜಯಪ್ರದ ಸೂಚನೆ: ಜನಾಂಗವೊಂದು ಅನುಭವಿಸುತ್ತಿದ್ದ ಪಾಪದ ಶಾಪವು ಕೊನೆಗೊಂಡು, ತಿರುಗುಮುರುಗು ವಾತಾವರಣ ಕಂಡುಬಂತು. ಶತ್ರುಗಳ ಕೈಕೆಳಗಾಯಿತು. ‘ಹರ ಹರ ಮಹದೇವ’ ಘೊಷಣೆಗಳಿಗೆ ಇಂಬು ದೊರಕಿತು. ಎಲ್ಲೆಲ್ಲೂ ಹಿಂದು ಪರಾಕ್ರಮ ವಿಜೃಂಭಿಸಿತು. ಹಿಂದುಗಳು ಒಟ್ಟುಗೂಡಿ ಧೈರ್ಯ ತಾಳಿ ಜೀವನ ಸಾಗಿಸತೊಡಗಿದರು. ಈ ಬದಲಾವಣೆ ಪರ್ವ ಉದಿಸಿಬಂದದ್ದು ಶಿವಾಜಿಯ ಜನನದ್ದೇ ಪ್ರಭಾವ. ಶಿವಾಜಿಗೆ ವಿಕ್ರಮಾದಿತ್ಯ, ಶಾಲಿವಾಹನರಂತಹ ಯುಗನಿರ್ವಿುತಿ ಕೆಲಸದ ಮಹತ್ವಾಕಾಂಕ್ಷೆ ತುಂಬಿ ಬಂದಿದ್ದುದೇ ಇದಕ್ಕೆ ಕಾರಣ’.
ಶಿವಾಜಿಯ ತೀರ್ಥರೂಪರು, ಶಹಾಜಿ. ಅವರು ಶಿವಾಜಿಯನ್ನು ಬಿಜಾಪುರದ ಬಾದಶಹನ ದರ್ಬಾರಿಗೆ ಕರೆದೊಯ್ದಿದ್ದರು. ಅಲ್ಲಿ ಸರ್ವರೂ, ಸಾಮಂತರು, ಸರದಾರರೂ ಸೇರಿದಂತೆ ಬಾದಶಹನ ಬಳಿಸಾರಿ ಮೂರು ಬಾರಿ ಕುರ್ನೀಸಾತ - ತಲೆಬಗ್ಗಿ ನಮಸ್ಕಾರ ಮಾಡಿಯೇ ತಂತಮ್ಮ ಜಾಗಗಳಿಗೆ ತೆರಳುವರು. ಶಹಾಜಿಯು, ‘ಮಗೂ, ಎಲ್ಲರಂತೆಯೇ ನಮಸ್ಕಾರ ಮಾಡು’ ಎಂದರು. ಅವರ ಮನಸ್ಸಿನಲ್ಲಿ ಇದು ಶಿವಾಜಿಗೆ ಸೌಭಾಗ್ಯದ ಘಳಿಗೆ ಎಂದೇ ಅನ್ನಿಸಿತ್ತು. ಆತನ ಇನ್ನೊಂದು ಮನಸ್ಸಿನ ಆಳ ಇಂತಿರಲೂ ಸಾಕು. ಕ್ಷುದ್ರ ಪರಕೀಯನಿಗೆ ತಲೆಬಾಗುವೆಯಾ? ರಾಮಕೃಷ್ಣರ, ಭೀಮ, ಅಭಿಮನ್ಯುಗಳ ಕಥೆ ಕೇಳಿರುವ ನೀನು ತಂದೆಯಾದ ನನ್ನನ್ನು ನಮಿಸು: ಜೀಜಾಮಾತೆಯ ಮನದಾಸೆ ತಿಳಿದ ನೀನು ತುಳಜಾಭವಾನಿಯ ಆರಾಧಕ, ಸಾರ್ವಭೌಮನಾಗು ಎಂದು ಆಕೆ ನಿನಗೆ ಆಶೀರ್ವಸಿದ್ದಾಳೆ- ಎಂದು ಒಂದು ಮನಸ್ಸು ಹೇಳಿದಂತೆ ಭಾಸವಾಯಿತು. ಮತ್ತೊಮ್ಮೆ ಶಿವಾಜಿ ಈಗ ನಮಸ್ಕರಿಸುವುದು ತುಳಜಾ ಭವಾನಿಯನ್ನೋ? ಬಾದಶಹನಿಗೋ, ಸ್ವಾತಂತ್ರ್ಯ ದೇವತೆಗೋ, ದಾಸ್ಯತೆಗೋ, ಎಂಬ ದ್ವಂದ್ವ ಶಹಜಿಯನ್ನು ಆವರಿಸಿದ್ದಿರಬಹುದು. ಆಗ, ‘ಪಿತಾಜಿ, ನಿಮಗೆ ನಮಸ್ಕರಿಸುತ್ತೇನೆ, ಈತನಿಗೆ ಅಲ್ಲ’ ಎಂದ, ಶಿವಾಜಿ. 10-12ರ ಬಾಲಕನ ಧೈರ್ಯದ ಕರ್ತವ್ಯ ಪೂರೈಕೆಯ ಮಾತು ಇದು!
ಬಿಜಾಪುರ ಅಲಕ್ಷಿಸಿದ್ದ ತೋರಣಗಡವು ಶಿವಾಜಿಯತ್ತ ದೃಷ್ಟಿ ಬೀರಿತು. ’ಹರ ಹರ ಮಹದೇವ’ ಘೊಷಣೆಯೊಡನೆ ಶಿವಾಜಿಯ ಆಪ್ತಮಿತ್ರರು ದುರ್ಗವನ್ನು ದುರಸ್ತಿ ಮಾಡಿದಾಗ ಹಣ ದೊರಕಿತು. ಅದು ಸ್ವರಾಜ್ಯದ ಮೊದಲ ನಿಧಿ. ತೋರಣಗಡದ ಮೇಲೂ ಕಾವಿಧ್ವಜ ಹಾರಿತು. ಅದರ ನಿರಂತರ ರಕ್ಷಣೆ ಆರಂಭಗೊಂಡಿತು. ಆಗ 10ರ ಪೋರ ಶಿವಾಜಿ ತನ್ನ ರಾಜ್ಯಕ್ಕೆ ಅದು ಆರಂಭದ ಗಳಿಕೆ ಎಂದು ಘೊಷಿಸಿದ!
ಮಾವಳ ಪ್ರದೇಶದ ದೇಶಮುಖ, ದೇಶಪಾಂಡೆಯರು ಹೊಸ ಸ್ವರಾಜ್ಯಕ್ಕೆ ತಮ್ಮ ಕಾಣಿಕೆ ಸಲ್ಲಿಸತೊಡಗಿದರು. ಸ್ವಲ್ಪ ದಿನ ಕಳೆಯಿತು. ಇದುವರೆಗೆ ಆತಂಕ ಇರದಿದ್ದ ಬಿಜಾಪುರದ ಸುಲ್ತಾನ ಆತಂಕಗೊಂಡ. ಆತ ಫರ್ವನು ಹೊರಡಿಸಿದ: ಅದು ದೇಶಮುಖ, ದೇಶಪಾಂಡೆಯವರನ್ನು ಕುರಿತಾಗಿದ್ದು: ‘ಶಿವಾಜಿಯು ಕೆಲವು ಕಿಲ್ಲೆಗಳನ್ನು ವಶಮಾಡಿಕೊಂಡಿರುವನೆಂದೂ, ಅವನಿಗೆ ನೀವು ಕುಮ್ಮಕ್ಕು ನೀಡುತ್ತಿದ್ದೀರೆಂದೂ ವರದಿ ಬಂದಿದೆ. ಇದುವರೆಗಿನ ಬಿಜಾಪುರದ ನಿಷ್ಠೆಯನ್ನು ಕಾಯ್ದುಕೊಳ್ಳದಿದ್ದಲ್ಲಿ ನಿಮ್ಮನ್ನು ಬಿಜಾಪುರದ ದರ್ಬಾರಿಗೆ ಎಳೆತಂದು ತಲೆ ಹೊಯ್ಯಲಾಗುತ್ತದೆ’. ದಾದಾಜಿ ನರಸಪ್ರಭು (ಬಾಲ ಸರದಾರ) ಮತ್ತು ಅವನ ವೃದ್ಧ ತಂದೆಗೂ ಈ ಫರ್ವನು ತಲುಪಿತು. ಅವನ ಕಣ್ಣು ಕತ್ತಲುಗೂಡಿತು. ಬರಲಿರುವ ಆಘಾತ ನಖಶಿಖಾಂತ ಅರಿವಾಯಿತು. ಆತ ತಲೆ ಮರೆಸಿಕೊಂಡ. ಅವನ ಮಗ ಗಾಬರಿಗೊಳ್ಳದೆ ಶಿವಾಜಿಗೆ ಈ ವಿಷಯ ತಿಳಿಸಿದ. ಶಿವಾಜಿ ಉತ್ತರ ಇದಾಗಿತ್ತು,‘ ನಾವು ಬಂಡುಕೋರರಂತೆ ನಡೆದುಕೊಂಡಿಲ್ಲ, ರೋಹಿಲೇಶ್ವರನ ಭಕ್ತರಾದ ನಾವು ಅವನೆದುರು ನಿಂತು ಭಗವಂತನಿಗೂ ಆಪ್ಯಾಯಮಾನವಾದ ಸ್ವರಾಜ್ಯ ನಿರ್ವಣದ ಆಕಾಂಕ್ಷೆಯನ್ನು ಪಾಲಿಸುತ್ತಿದ್ದೇವೆ. ಇದು ಅವನಾಜ್ಞೆ ಅದನ್ನು ಪಾಲಿಸಬೇಕು’. ಶಿವಾಜಿ ಬರೆದಂತೆಯೇ ಎಲ್ಲವೂ ಆಯಿತು. ಅಂತಹ ಧೈರ್ಯ ಅವನ ಹಿಂಬಾಲಕರದ್ದು.
ಇಸವಿ 1658: ಸ್ವರಾಜ್ಯ ಪತಾಕೆ ಆಗ ಹಾರಾಡಿದ್ದು ಕೊಂಡಾಣಾ ಜಿಲ್ಲೆಯ ಮೇಲೆ. ಸಾಗರದ ಒಡೆತನದ ಕನಸು ಶಿವಾಜಿಗೆ ಬಿತ್ತು. ಬಿಳಿಯರ ನಯ-ಗೌರವಗಳ ನಕಲಿ ವ್ಯವಹಾರಕ್ಕೆ ದಿಲ್ಲಿಯ ಬಾದಶಹ, ಬಿಜಾಪುರದ ಸುಲ್ತಾನರು ಮರುಳಾಗಿದ್ದವರೇ. ಸ್ವತಂತ್ರ ನೌಕಾಬಲದ ಹಿರಿಮೆ ತಿಳಿದ ಶಿವಾಜಿ, ವಿಜಯನಗರ, ಸುವರ್ಣದುರ್ಗ, ಕಲ್ಯಾಣದುರ್ಗಗಳಲ್ಲಿ ಸ್ವಂತಿಕೆ ಹೊಂದಿದರು. ಅದೇ ರೀತಿ ಜಾವಳಿ ಅರಣ್ಯದಲ್ಲಿನ ಪ್ರತಾಪಗಡವೂ ಸ್ವರಾಜ್ಯದ ತೆಕ್ಕೆಗೆ ಬಂತು.
ಇಡೀ ದೇಶದ ರಾಜ್ಯ ವ್ಯವಸ್ಥೆಯಲ್ಲಿ ಕ್ರಮೇಣ ವಿರುಪೇರಾಯಿತು. ಆಗ ಬಿಜಾಪುರಕ್ಕೆ ಶಿವಾಜಿಯೇ ಏಕಮಾತ್ರ ಶತ್ರು. ಹೀಗಾಗಿ ಆತ ಪುಣೆಯತ್ತ ದಾಳಿ ಮಾಡಿಯಾನು ಎಂಬ ಶಂಕೆ ಎದ್ದಿದ್ದು ಸಹಜ, ಆಗ ಶಿವಾಜಿ ಕರ್ನಾಟಕದ ಮೇಲೆ ದಾಳಿಯ ನೆಪಹೂಡಿ 1676ರ ವಿಜಯದಶಮಿಯಂದು ಭಾಗಾನಗರದ (ಹೈದರಾಬಾದ್) ಯುದ್ಧ ಯಾತ್ರೆ ಕೈಗೊಂಡರು. ಅವರನ್ನು ಕುತುಬ್ರಹ ಸ್ವಾಗತಿಸಿದ. ಶಿವಾಜಿಯವರ ಶ್ರೀಶೈಲದರ್ಶನ ಮುಗಿಯಿತು. ಏಕೋ ಹೇಗೋ, ತನ್ನ ಶಿರಕಮಲದಿಂದಲೇ ಶಿವಾರ್ಚನೆ ಮಾಡಬೇಕೆಂಬ ಉತ್ಕಟ ಇಚ್ಛೆ ರಾಜಾ ಶಿವಾಜಿಗೆ ಆಗ ಸ್ಪುರಿಸಿತು. ಕಣ್ಣು ಮುಚ್ಚಿ ಕುಳಿತಾಗ, ‘ಈ ಕೆಲಸ ಈಗ ಬೇಡ, ಇನ್ನೂ ಆಗಾಧ ಕರ್ತವ್ಯ ಬಾಕಿ ಉಂಟು’ ಎಂಬ ಸಂದೇಶ ಅವರ ದೇಹ, ಬುದ್ಧಿ, ಮನಸ್ಸು ಆತ್ಮಗಳಲ್ಲಿ ಒಮ್ಮೆಗೇ ಸ್ಪುರಿಸಿತು. ತೀರ್ಥಯಾತ್ರೆ ಮೊದಲಿಗೆ, ಜಿಂಜಿಕೋಟೆ ಹಿಡಿಯುವ ಸಮರ ಯಾತ್ರೆ ನಂತರ ಆರಂಭಗೊಂಡಿತು. ತಿರುವಣ್ಣಾಮಲೈ ಮತ್ತು ಸಮೋತ್ತರ ಪೆರುಮಾಳ ಎಂಬಲ್ಲಿ ಮಸೀದಿಗಳಾಗಿದ್ದ ಎರಡು ದೇವಾಲಯಗಳ ಪುನರ್ ಪ್ರತಿಷ್ಠೆ ಆಯಿತು.
ನೀವು ಉತ್ತರ ಪ್ರದೇಶದ ಪ್ರಯಾಗ ರಾಜಕ್ಕೆ ತೀರ್ಥಯಾತ್ರೆ ಹೋಗುತ್ತೀರಿ. ಅಲ್ಲಿನವರ ಸೂಚನೆಯಂತೆ ನದಿಯ ದಡದಲ್ಲಿರುವ ವಿಶಾಲ ವಟವೃಕ್ಷವನ್ನು ದರ್ಶಿಸಿ ಕೈ ಮುಗಿಯುತ್ತೀರಿ. ಆ ವೃಕ್ಷದ ಕಥೆ ಗೊತ್ತೇ? ಜಹಂಗೀರನು ಹಿಂದು ಜನರು ಅದರ ಮೇಲೆ ಇಟ್ಟಿದ್ದ ಭಕ್ತಿಯನ್ನು ಕಂಡು ಆಶ್ಚರ್ಯಪಟ್ಟ, ಅದರ ಬೇರುಗಳ ಮೇಲೆ ಸೀಸದ (ಲೋಪ) ಕಾಯಿಸಿದ ಪದರವನ್ನು ಯಥೇಚ್ಛ ಸುರಿಸಿದ. ಅದು ಇನ್ನು ಅನವಶ್ಯಕ ಎಂಬುದು ಅವನ ಊಹೆ ಮತ್ತು ಇಚ್ಛೆ, ಆದರೆ ಪವಾಡ. ಈಗಲೂ ಆ ಮರ ಜೀವಂತವಿದೆ. ಬೆಳೆಯುತ್ತಿದೆ. ಈ ಕಥೆಯನ್ನು ಇತಿಹಾಸಕಾರ ಜಯನಾಥ ಸರದಾರರು ವರ್ಣಿಸಿರುವುದು ಹೀಗೆ: ‘ಶಿವಾಜಿಯ ಜೀವನ ಸಾಧನೆಗೆ ಈ ಮರ ಪ್ರತ್ಯಕ್ಷ ಸಾಕ್ಷಿ. ಆ ವಟವೃಕ್ಷವು ದಮನದ ಭಾರಕ್ಕೆ ಸಿಕ್ಕಿಯೂ ಬದುಕುಳಿದಿದೆ. ಮತ್ತೊಮ್ಮೆ ಅದು ಚಿಗುರೊಡೆಯಿತು. ಸೀಸದ ಪದರಗಳು ಚೆಲ್ಲಾಪಿಲ್ಲಿ ಆದವು. ಸೀಸದ ಪದರುಗಳು ಅದುಮಿಟ್ಟರೂ ಹೊರಬಂದಂತೆ. ದಾಸ್ಯದ ಪದರುಗಳು ನುಗ್ಗಿ ಹೊರಬಂದು, ಮರ ಹೆಮ್ಮರವಾಗಿ ಬೆಳೆಯುತ್ತದೆ ಎಂಬುದನ್ನು ಇದು ಸಿದ್ಧಪಡಿಸಿ ತೋರಿಸಿದೆ’.
ನೋಡಿದತ್ತಲೆಲ್ಲ ಆತ್ಮಕ್ರೖೆಬ್ಯ... ಶಹಾಜಿ ಒಮ್ಮೆ ದೆಹಲಿಯ ಆಕ್ರಮಣದಿಂದ ಬಿಜಾಪುರವನ್ನು ರಕ್ಷಿಸಿ, ಮುಸಲ್ಮಾನನೋರ್ವನನ್ನೇ ಗಾದಿಗೇರಿಸಿದ್ದ. ಆದರೆ ತಾನು ಗಾದಿ ಏರಲು ಮಾತ್ರ ಅಸಮರ್ಥನಾದ. ಆದರೆ ಅವನ ಮಗನು ಬಿಜಾಪುರ ಸಿಂಹಾಸನದ ಬುಡವನ್ನೇ ಅಲ್ಲಾಡಿಸಿದ. ದೆಹಲಿಯ ಬಾದಶಹನ ಹೃದಯದಲ್ಲೂ ಕಂಪನ ಎಬ್ಬಿಸಿದ. ಈ ಸುದ್ದಿ ಇರಾನ್ ದೇಶದ ಶಹಾ ಅಬ್ಬಾಸನಿಗೂ ತಲುಪಿತು. ಆತನು ನೀನು ಸ್ವತಃ ಬಾದಶಹನೆಂದು ಹೇಳಿಕೊಳ್ಳುವೆ. ಆದರೆ ಓರ್ವ ಸರದಾರನ ಮಗನನ್ನು ಹತೋಟಿಗೆ ತರುವಲ್ಲಿ ಮಾತ್ರ ವಿಫಲನಾಗಿರುವೆ. ಬಾದಶಹ ಯಾರು, ಹೇಗೆ ಎಂಬುದನ್ನು ನಿನಗೆ ನಾನು ಕಲಿಸಿಕೊಡಬಲ್ಲೆ ಎಂದು ಔರಂಗಜೇಬನಿಗೆ ವ್ಯಂಗ್ಯಪತ್ರ ಬರೆದಿದ್ದ.
ನಾಳೆ ಕೃತಿ ಲೋಕಾರ್ಪಣೆ: ಛತ್ರಪತಿ ಶಿವಾಜಿ ಮಹಾರಾಜರ ಸ್ವತಂತ್ರ ಹಿಂದು ಸಿಂಹಾಸನಾರೋಹಣದ (07-06-1674) ಸವಿನೆನಪಿಗಾಗಿ ಹಿರಿಯ ಲೇಖಕರಾದ ಕಾ.ಶ್ರೀ.ನಾಗರಾಜ ಅವರು ರಚಿಸಿರುವ ‘ವಿಜಯೀ ಮಹಾರಾಜಾಧಿರಾಜ’ ಕೃತಿಯ ಲೋಕಾರ್ಪಣೆ ಜ.17ರಂದು ನಡೆಯಲಿದೆ. ಶಂಕರಪುರಂನ ವಿಶ್ವ ಹಿಂದು ಪರಿಷತ್ ಕಚೇರಿ ಧರ್ಮಶ್ರೀಯಲ್ಲಿ ಸಂಜೆ 6.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಕೃತಿ ಲೋಕಾರ್ಪಣೆಯಾಗಲಿದೆ. ರವಿ ಜೋಷಿ ಮುಖ್ಯ ಅತಿಥಿಗಳಾಗಿದ್ದು, ಸಾಹಿತಿ ಡಾ.ಜಿ.ಬಿ.ಹರೀಶ್ ಅವರು ಶಿವಾಜಿಯ ವಿಜಯೀ ಸಾಧನೆಗಳು ಕುರಿತಾಗಿ ಮಾತನಾಡಲಿದ್ದಾರೆ. ಎಸ್.ಎನ್.ಚಂದ್ರಶೇಖರ್, ಸಿ.ವಿ.ವೆಂಕಟಕೃಷ್ಣ ಮತ್ತು ಲೇಖಕ ಕಾ.ಶ್ರೀ.ನಾಗರಾಜ ಉಪಸ್ಥಿತರಿರಲಿದ್ದಾರೆ. 400 ಪುಟಗಳ ಈ ಗ್ರಂಥವು ಛತ್ರಪತಿ ಶಿವಾಜಿಯವರ ಬಾಲ್ಯ, ಹೋರಾಟ, ಸ್ವರಾಜ್ಯ ಸ್ಥಾಪನೆ, ಸಿಂಹಾಸನಾರೋಹಣ, ವೈರಿಗಳ ಮೂಲೋತ್ಪಾಟನೆ, ಅಖಂಡ ಭಾರತದಲ್ಲಿ ಸ್ವಾತಂತ್ರ್ಯದ ಸವಿಗಾಳಿಯ ಸುಗಂಧ ಹಬ್ಬಿದ ವಿವರಗಳನ್ನು ಒಳಗೊಂಡಿದ್ದು, ಹಿಂದುಗಳು ಎಚ್ಚೆತ್ತುಕೊಂಡ ಬಗೆಯನ್ನು ವಿಶ್ಲೇಷಿಸಲಾಗಿದೆ.
(ವಿಜಯೀ ಮಹಾರಾಜಾಧಿರಾಜ ಕೃತಿಯ ಆಯ್ದ ಭಾಗ)