

ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಕೌಶಿಕ್ ಎಂಬ 30 ವರ್ಷದ ವ್ಯಕ್ತಿಯಿದ್ದ. ಚಿಕ್ಕಂದಿನಿಂದಲೂ ಆತ ಸಿನಿಮಾಗಳ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ. ತಾನೂ ಒಂದು ದಿನ ಸಿನಿಮಾದಲ್ಲಿ ನಟಿಸಬೇಕೆಂದು ಆಸೆ ಪಡುತ್ತಿದ್ದ. ಕಟ್ಟುಮಸ್ತಿನ ದೇಹವನ್ನು ಹೊಂದಿ ಸುಂದರವದನನಾಗಿದ್ದ ಆತ ಆಕರ್ಷಕ ಧ್ವನಿಯನ್ನೂ ಹೊಂದಿದ್ದ. ಹೊಸ ಸಿನಿಮಾಗಳು ಬಿಡುಗಡೆಯಾದ ಮೊದಲ ದಿನ ಮೊದಲನೇ ಷೋದಲ್ಲಿಯೇ ಕೌಶಿಕ್ ಅವನ್ನು ನೋಡುತ್ತಿದ್ದ. ದೇವ್ ಆನಂದ್ನ ಅಭಿಮಾನಿಯಾಗಿದ್ದ ಆತ ತನ್ನ ಮೆಚ್ಚಿನ ನಟನನ್ನು ಸದಾಕಾಲವೂ ಅನುಕರಣೆ ಮಾಡುತ್ತಿದ್ದ. ಹೀಗಾಗಿ ಅವನ ಗೆಳೆಯರೆಲ್ಲರೂ ಅವನಿಗೆ ಜ್ಯೂನಿಯರ್ ದೇವ್ ಆನಂದ್ ಎಂದೇ ಕರೆಯುತ್ತಿದ್ದರು. ಶಾಲೆ ಮತ್ತು ಕಾಲೇಜುಗಳಲ್ಲಿ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿ ನಾಟಕಗಳಲ್ಲಿ ಮುಖ್ಯ ಪಾತ್ರಗಳನ್ನು ವಹಿಸುತ್ತಿದ್ದ ಕೌಶಿಕ್ನಿಗೆ ಮೂರನೆಯ ವರ್ಷದ ಬಿ.ಎ ಪದವಿಗೆ ಬಂದಾಗ ಸಿನಿಮಾದಲ್ಲಿ ನಟಿಸುವ ಆಸೆ ಎಷ್ಟು ಬಲವಾಯಿತೆಂದರೆ ಆತ ವಿದ್ಯಾಭ್ಯಾಸವನ್ನು ತೊರೆದು ಮುಂಬೈಗೆ ಓಡಿ ಹೋದ.
ಸಿನಿಮಾದಲ್ಲಿ ಪಾತ್ರ ಕೊಡಿಸುವೆವೆಂದು ಹೇಳಿಕೊಂಡು ಓಡಾಡುವ ಹಲವು ಮಧ್ಯವರ್ತಿಗಳ ಬಲೆಗೆ ಸಿಕ್ಕಿ ತನ್ನ ಹಣವನ್ನೆಲ್ಲ ಕಳೆದುಕೊಂಡರೂ ಕೌಶಿಕ್ ಅಧೀರನಾಗಲಿಲ್ಲ. ಹೋಟೆಲ್ ಒಂದರಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡಿಕೊಂಡೇ ಮುಂಬೈನ ಹಲವಾರು ನಿರ್ಮಾಪಕರು, ನಿರ್ದೇಶಕರನ್ನು ಭೇಟಿಯಾದ. ತನಗೆ ಒಂದು ಸಣ್ಣ ಪಾತ್ರವನ್ನು ಕೊಡಲು ಮನವಿ ಮಾಡಿದ. ಅವನನ್ನು ಆಡಿಷನ್ಗೆ ಕೆಲವು ನಿರ್ದೇಶಕರು ಕರೆದರಾದರೂ ಸಣ್ಣ ಪಾತ್ರಗಳನ್ನೇ ಕೊಟ್ಟರು. ತಾನು ಸುಂದರನಾಗಿದ್ದು ಆಕರ್ಷಕ ಧ್ವನಿ ಹೊಂದಿರುವ ಕಾರಣ ತನಗೆ ಹೀರೋ ಪಾತ್ರವು ಸಿಕ್ಕೇ ಸಿಗುತ್ತದೆ ಎನ್ನುವ ಭರವಸೆಯಿಂದ ಕೌಶಿಕ್ ಮುಂಬೈನಲ್ಲಿಯೇ ಎರಡು ವರ್ಷಗಳ ಕಾಲ ಉಳಿದ. ಅವನ ದುರಾದೃಷ್ಟಕ್ಕೆ ಅವನಿಗೆ ಯಾವುದೇ ಉತ್ತಮ ಪಾತ್ರಗಳು ಸಿಗದಾದವು. ಕೊನೆಗಾತ ಖಿನ್ನತೆಯಿಂದ ತನ್ನ ಊರಿಗೆ ಮರಳಿದ.
ಮೀರತ್ಗೆ ಮರಳಿದ ಕೌಶಿಕ್ ವ್ಯಾಪಾರಿಯೊಬ್ಬನ ಮಗಳನ್ನು ಮದುವೆಯಾದ. ತನ್ನ ಮಾವನ ಆರ್ಥಿಕ ಸಹಾಯದಿಂದ ಒಂದು ಸಣ್ಣ ಬಿಜಿನೆಸ್ ನಡೆಸಲಾರಂಭಿಸಿದ. ಆರಂಭದಲ್ಲಿ ಆ ವ್ಯಾಪಾರ ಚೆನ್ನಾಗಿ ನಡೆಯಿತಾದರೂ ಕೆಲವು ದಿನಗಳ ನಂತರ ನಷ್ಟದಲ್ಲಿ ಹೋಗತೊಡಗಿತು. ಮುಂದೇನು ಮಾಡುವುದು ಎಂದು ತೋಚದಾದಾಗ ಜನರಿಗೆ ಟೋಪಿ ಹಾಕಿ ಹಣ ಗಳಿಸುವ ಯೋಜನೆಯೊಂದನ್ನು ಕೌಶಿಕ್ ರೂಪಿಸಿದ. ಮುಂಬೈ ಚಿತ್ರರಂಗದಲ್ಲಿ ತನಗೆ ಎಷ್ಟೋ ಮಂದಿ ಪರಿಚಯವಿದ್ದಾರೆ, ತಾನು ಸ್ಥಳೀಯರಿಗೆ ಚಿತ್ರರಂಗದಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ಹೇಳಿಕೊಂಡು ಯುವಕ-ಯುವತಿಯರನ್ನು ಸಂರ್ಪಸಲಾರಂಭಿಸಿದ.
ಅವನ ಮಾತಿಗೆ ಮರುಳಾದ ಅನೇಕ ಯುವಕ-ಯುವತಿಯರಿಗೆ ಆತ ಒಂದು ತಿಂಗಳ ಕಾಲ ತರಬೇತಿ ನೀಡಿ ತಾನು ಹಿಂದಿ ಸಿನಿಮಾಗಳಲ್ಲಿ ಅವರಿಗೆ ಅವಕಾಶ ಕೊಡಿಸುವುದಾಗಿ ಹೇಳಿ ಅವರಿಂದ ತಲಾ 2 ರಿಂದ 5 ಲಕ್ಷ ರೂ. ವಸೂಲಿ ಮಾಡುತ್ತಿದ್ದ. ಮುಂಬೈನಲ್ಲಿ ತನ್ನ ಪರಿಚಯದ ಏಜೆಂಟರಿಗೆ ಕರೆ ಮಾಡಿ ಅವರನ್ನು ಅಲ್ಲಿಗೆ ಕಳುಹಿಸುತ್ತಿದ್ದ. ಅವರುಗಳಲ್ಲಿ ಬಹುತೇಕ ಜನರಿಗೆ ಸಮೂಹ ನೃತ್ಯ ಇಲ್ಲವೇ ಗುಂಪುಗಳ ಸೀನ್ ಮುಂತಾದವಲ್ಲಿ ನಟಿಸುವ ಅವಕಾಶ ಸಿಕ್ಕಿತೇ ಹೊರತು ಉತ್ತಮ ಪಾತ್ರಗಳು ಸಿಗುತ್ತಿರಲಿಲ್ಲ. ಆದರೆ ಕೌಶಿಕ್ಗೆ ಏನೂ ಸಮಸ್ಯೆಯಾಗಲಿಲ್ಲ. ಏಕೆಂದರೆ ಆತ ಈ ದಂಧೆಯಿಂದ ವರ್ಷಕ್ಕೆ 15 ರಿಂದ 20 ಲಕ್ಷ ರೂ. ಗಳಿಸುತ್ತಿದ್ದ.
ಕಡೆಗೆ ಆ ಆದಾಯವೂ ಸಾಲದೆ ಬಂದಾಗ ತಾನು ಬೇರೆ ಯಾವುದಾದರೂ ರೀತಿಯಲ್ಲಿ ಹಣವನ್ನು ಗಳಿಸಬೇಕೆಂಬ ಯೋಚನೆ ಕೌಶಿಕ್ಗೆ ಬಂದಿತು. ಅದೇ ಸಮಯಕ್ಕೆ ಮೀರತ್ನಲ್ಲಿ ರಾಮಲೀಲಾ ಉತ್ಸವ ಆಯೋಜನೆಗೊಂಡಿತ್ತು. ಆ ಉತ್ಸವದ ಸ್ಥಳೀಯ ಆಯೋಜಕನನ್ನು ಭೇಟಿಮಾಡಿದ ಕೌಶಿಕ್ ತಾನು ಆ ಉತ್ಸವಕ್ಕೆ ಮುಂಬೈ ಸಿನಿಮಾ ನಟ, ನಟಿಯರನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಅವರನ್ನೊಪ್ಪಿಸಿದ. ಅವರಿಂದ ಕಮಿಷನ್ ಪಡೆದು ಮುಂಬೈಗೆ ಬಂದು ಕೆಲವು ನಟ, ನಟಿಯರನ್ನು ಸಂರ್ಪಸಿ ಮೀರತ್ಗೆ ಬರಹೇಳಿದ. ಅವರಲ್ಲಿ ಮೂವರು ಜನರು ಒಪ್ಪಿದರು. ಅವರನ್ನು ತನ್ನ ಜತೆಗೆ ಕರೆದುಕೊಂಡು ಬಂದು ರಾಮಲೀಲಾ ಉತ್ಸವದಲ್ಲಿ ಭಾಗವಹಿಸುವಂತೆ ಮಾಡಿದ.
ಅದಾದ ನಂತರ ಮೀರತ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಯುವ ಮದುವೆ ಮತ್ತು ಇತರ ಸಮಾರಂಭಗಳು, ಹೊಸ ವರ್ಷದ ಸಂಭ್ರಮಾಚರಣೆಗಳು ಮುಂತಾದವುಗಳಿಗೂ ಮುಂಬೈನಿಂದ ನಟ, ನಟಿಯರನ್ನು ಕರೆದುಕೊಂಡು ಬರತೊಡಗಿದ. ತನ್ನ ಸೇವೆಗಾಗಿ ಆಯೋಜಕರಿಂದ 50 ರಿಂದ 60 ಸಾವಿರ ರೂ. ಕಮಿಷನ್ ಪಡೆಯುತ್ತ ಹಣ ಮಾಡತೊಡಗಿದ. ಕೆಲಸ ಕಡಿಮೆಯಿರುವ ಕೆಲವು ನಟ, ನಟಿಯರಿಗೆ ಮುಂಬೈನಿಂದ ಮೀರತ್ಗೆ ಹೋಗಿಬರುವ ವೆಚ್ಚ, ವಸತಿ ಮತ್ತು ಸಂಭಾವನೆಯನ್ನೂ ಕೌಶಿಕ್ ಕೊಡುತ್ತಿದ್ದ ಕಾರಣ ಅವರು ಸುಲಭವಾಗಿ ಮೀರತ್ಗೆ ಬರಲೊಪ್ಪುತ್ತಿದ್ದರು. ಈ ದಂಧೆಯಿಂದಲೂ ತನ್ನ ಆದಾಯ ಸಾಲದೆ ಹೋದಾಗ ಕೌಶಿಕ್ನಿಗೆ ಇನ್ನೊಂದು ಯೋಚನೆ ಹುಟ್ಟಿತು. ಮೀರತ್ನಲ್ಲಿ ಮ್ಯೂಸಿಕಲ್ ನೈಟ್ ಒಂದನ್ನು ಆಯೋಜಿಸುವೆ ಎಂದು ಹೇಳಿಕೊಂಡು ಮುಂಬೈಗೆ ಬಂದ ಕೌಶಿಕ್ ಹೆಸರಾಂತ ಸಿನಿಮಾ ನಟನೊಬ್ಬನನ್ನು ಭೇಟಿಯಾಗಿ ಅವನನ್ನು ಮೀರತ್ಗೆ ಬರಲೊಪ್ಪಿಸಿದ. ಅವನಿಗೆ 50 ಸಾವಿರ ರೂ. ಮುಂಗಡ ಹಣವನ್ನು ಕೊಟ್ಟು, ಮುಂಬೈನಿಂದ ದೆಹಲಿಯವರೆಗಿನ ವಿಮಾನದ ಟಿಕೆಟ್ ಕೊಡಿಸಿದ.
ಆ ನಟ ದೆಹಲಿಗೆ ಬಂದ ಕೂಡಲೇ ಅವನನ್ನು ವಿಮಾನ ನಿಲ್ದಾಣದಲ್ಲಿಯೇ ಭೇಟಿಯಾದ ಕೌಶಿಕ್ ಮೀರತ್ಗೆ ಹೋಗಲು ಅವನನ್ನು ಒಂದು ಕಾರಿನಲ್ಲಿ ಕರೆದುಕೊಂಡು ಹೊರಟ. ಅದೇ ಕಾರಿನಲ್ಲಿಯೇ ಕೌಶಿಕ್ನ ಇಬ್ಬರು ಸಹಚರರೂ ಇದ್ದರು. ಮಾರ್ಗಮಧ್ಯದಲ್ಲಿ ವಿಶ್ರಾಂತಿ ಪಡೆಯೋಣವೆಂದು ಆ ನಟನಿಗೆ ಹೇಳಿದ ಕೌಶಿಕ್ ಪೂರ್ವನಿಯೋಜನೆಯಂತೆ ಹಾದಿಯಲ್ಲಿದ್ದ ಪಟ್ಟಣವೊಂದಕ್ಕೆ ಹೋಗಿ ಅಲ್ಲಿದ್ದ ಮನೆಯೊಂದರಲ್ಲಿ ನಟನನ್ನು ಇಳಿಸಿದ. ಕೆಲಸಮಯದ ನಂತರ ಕೌಶಿಕ್ನ ಸಹಚರರು ನಟನ ಬಳಿ ಬಂದು, ‘ನೀನು ಜೀವಂತವಾಗಿ ಇಲ್ಲಿಂದ ಹೊರಗೆ ಹೋಗಬೇಕಾದರೆ ನಿನ್ನ ಎಟಿಎಂ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಅವೆರಡರ ಪಿನ್ ನಂಬರ್ ಕೂಡಲೇ ಕೊಡು’ ಎಂದರು. ಹೆದರಿದ ನಟ ಅವರು ಹೇಳಿದಂತೆಯೇ ಮಾಡಿದ. ಎರಡೂ ಕಾರ್ಡಗಳನ್ನುಪಯೋಗಿಸಿದ ಆ ದುರುಳರು ನಟನ ಸುಮಾರು ಹನ್ನೆರಡು ಲಕ್ಷ ರೂಪಾಯಿ ಲಪಟಾಯಿಸಿದರು. ಆನಂತರ ಈ ವಿಷಯವನ್ನು ಯಾರಿಗಾದರೂ ಹೇಳಿದರೆ, ‘ನಿನ್ನನ್ನು ಇಲ್ಲೇ ಕೊಲೆಮಾಡಿ ನಿನ್ನ ಶವವನ್ನು ನದಿಗೆ ಎಸೆಯುತ್ತೇವೆ’ ಎಂದು ಬೆದರಿಸಿದರು. ತೀರಾ ಹೆದರಿದ ಆ ನಟನನ್ನು ದೆಹಲಿಯವರೆಗೆ ಕರೆದೊಯ್ದ ಕೌಶಿಕ್ನ ಸಹಚರರು ಮಹಾನಗರದ ಸರಹದ್ದಿನಲ್ಲಿ ಅವನನ್ನು ಬಿಟ್ಟು, ‘ಇಲ್ಲಿಂದ ನೀನು ಮುಂಬೈಗೆ ಹೋಗು, ಯಾರಿಗಾದರೂ ಈ ಸುದ್ದಿ ಹೇಳಿದರೆ ಮುಂಬೈನಲ್ಲಿರುವ ನಮ್ಮ ಜನರೇ ನಿನ್ನನ್ನು ಕೊಲೆ ಮಾಡುತ್ತಾರೆ, ಹುಷಾರ್’ ಎಂದು ಬೆದರಿಸಿ ಕಳಿಸಿದರು.
ಮುಂದಿನ ಒಂದು ವರ್ಷದಲ್ಲಿ ಕೌಶಿಕ್ ಇದೇ ರೀತಿ ನಾಲ್ವರು ನಟರನ್ನು ಸುಲಿಗೆ ಮಾಡಿದ. ಯಾರ ಎ.ಟಿ.ಎಂ ಮತ್ತು ಕ್ರೆಡಿಟ್ ಕಾರ್ಡಗಳಲ್ಲಿ ಕಡಿಮೆ ಹಣ ಇದ್ದವೋ ಅವರನ್ನು ತಮ್ಮ ಬಂಧು-ಮಿತ್ರರನ್ನು ಸಂರ್ಪಸಿ ಹಣ ತರಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದ. ತಾನು ಹೇಳಿದ ಬ್ಯಾಂಕ್ ಅಕೌಂಟಿಗೆ ಅವರ ಹಣ ಸಂದಾಯವಾದ ನಂತರವೇ ಅವರನ್ನು ಬಂಧಮುಕ್ತಗೊಳಿಸುತ್ತಿದ್ದ. 2022ರ ಒಂದು ದಿನ ಇದೇ ರೀತಿ ಮುಂಬೈನ ಒಬ್ಬ ನಟನನ್ನು ಕೌಶಿಕ್ ಮತ್ತು ಸಹಚರರು ಅಪಹರಿಸಿ ಅವನನ್ನು ದೆಹಲಿ ಮೀರತ್ ನಡುವೆ ಇರುವ ಒಂದು ಸಣ್ಣ ಹೊಟೇಲ್ನಲ್ಲಿ ಇರಿಸಿದರು. ಅವನ ಬಿಡುಗಡೆಗಾಗಿ ಐದು ಲಕ್ಷ ರೂ. ಕೊಡಲು ಹೇಳಿದರು. ತನ್ನ ಬಳಿ ಹಣವಿಲ್ಲವೆಂದು ಹೇಳಿದ ಆತ, ‘ನನ್ನನ್ನು ಬಿಡುಗಡೆ ಮಾಡಿದರೆ ನಾನು ಮುಂಬೈಗೆ ಹೋಗಿ ನೀವು ಕೇಳಿದಷ್ಟು ಹಣ ಕಳುಹಿಸುತ್ತೇನೆ’ ಎಂದ. ಇದಕ್ಕೊಪ್ಪದ ಕೌಶಿಕ್ ಅವನ ಎಟಿಎಂ ಕಾರ್ಡ್ ತೆಗೆದುಕೊಂಡು ಅದರಲ್ಲಿ ಎಷ್ಟು ಹಣವಿದೆ ಎಂದು ಪರಿಶೀಲಿಸಲು ಸನಿಹದಲ್ಲಿದ್ದ ಎ.ಟಿ.ಎಂಗೆ ಹೋದ. ತನ್ನ ಅನುಯಾಯಿಯೊಬ್ಬನನ್ನು ನಟನ ಕಾವಲಿಗೆ ನಿಲ್ಲಿಸಿದ್ದ.
ಹದಿನೈದು ನಿಮಿಷಗಳ ತರುವಾಯ ಆ ನಟ ತಾನು ಜರೂರಾಗಿ ಶೌಚಗೃಹಕ್ಕೆ ಹೋಗಬೇಕೆಂದು ತನ್ನ ಜತೆಯಲ್ಲಿದ್ದ ಕಾವಲುಗಾರನಿಗೆ ತಿಳಿಸಿ ಆ ಹೋಟೆಲ್ನ ಹೊರಗಡೆ ಇದ್ದ ಶೌಚಗೃಹಕ್ಕೆ ಹೋಗಿ ಬಾಗಿಲು ಹಾಕಿಕೊಂಡ. ನಂತರ ಆ ಶೌಚಗೃಹದ ಕಿಟಕಿ ಮೂಲಕ ಹೊರಕ್ಕೆ ಧುಮುಕಿ ಅಲ್ಲಿಂದ ಪರಾರಿಯಾದ. ಆ ನಟ ಇಷ್ಟಕ್ಕೇ ಸುಮ್ಮನಾಗಲಿಲ್ಲ. ಸ್ಥಳೀಯ ಯುವಕನೊಬ್ಬನ ಸಹಾಯದಿಂದ ಹತ್ತಿರದ ಪೊಲೀಸ್ ಠಾಣೆಗೆ ಹೋದ. ತನ್ನ ಅಪಹರಣದ ಬಗ್ಗೆ ದೂರು ನೀಡಿ ತನ್ನನ್ನು ಬಂಧಿಯಾಗಿಟ್ಟಿದ್ದ ಸ್ಥಳಕ್ಕೆ ಪೊಲೀಸರನ್ನು ಕರೆದುಕೊಂಡು ಬಂದ. ಅಷ್ಟರಲ್ಲಾಗಲೇ ಕೌಶಿಕ್ ಮತ್ತವನ ಸಹಚರರು ತಪ್ಪಿಸಿಕೊಂಡು ಹೋಗಿದ್ದ ನಟನನ್ನು ಹುಡುಕಲು ಹೋಗಿದ್ದರು. ಅವರ ಮೇಲೆ ಅಪಹರಣ ಮತ್ತು ಸುಲಿಗೆಯ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡರು.
ಕೌಶಿಕ್ನ ವಿವರಗಳು ಆ ನಟನ ಬಳಿ ಇದ್ದ ಕಾರಣ ಪೊಲೀಸರು ಮೀರತ್ನಲ್ಲಿದ್ದ ಅವನ ಮನೆಗೇ ಹೋದರು. ಆದರೆ ಆತ ಸಿಗಲಿಲ್ಲ. ಆದರೆ ಅವನ ಐದಾರು ಅನುಯಾಯಿಗಳು ಸಿಕ್ಕಿಬಿದ್ದರು. ಅವರ ಮಾಹಿತಿಯ ಮೇರೆಗೆ ಪೊಲೀಸರು ಕೌಶಿಕ್ನನ್ನು ಗಾಜಿಯಾಬಾದ್ನಲ್ಲಿ ಬಂಧಿಸಿದರು. ತಾನು 13 ಸಿನಿಮಾ ನಟ, ನಟಿಯರಿಗೆ ಮೋಸ ಮಾಡಿದ್ದು ಅವರಿಂದ ಒಂದು ಕೋಟಿ ರೂ.ಗೂ ಹೆಚ್ಚು ಹಣವನ್ನು ವಸೂಲಿ ಮಾಡಿರುವ ಬಗ್ಗೆ ಆತ ತಿಳಿಸಿ ಆ ಹಣವನ್ನು ತನ್ನ ಅನುಯಾಯಿಗಳೊಡನೆ ಹಂಚಿಕೊಂಡಿದ್ದೇನೆ ಎಂದ. ತನ್ನ ಪಾಲನ್ನು ಕೌಶಿಕ್ ಸಂಪೂರ್ಣವಾಗಿ ಖರ್ಚು ಮಾಡಿದ್ದ ಕಾರಣ ಅವನಿಂದ ಸ್ವಲ್ಪ ಹಣವನ್ನೂ ವಶಪಡಿಸಿಕೊಳ್ಳಲಾಗಲಿಲ್ಲ.
ಆದರೂ ಲಭ್ಯ ಸಾಕ್ಷ್ಯಾಧಾರಗಳ ಮೇಲೆ ಕೌಶಿಕ್ ಮತ್ತು ಅವನ ಐವರು ಮಿತ್ರರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು. ನ್ಯಾಯಾಧೀಶರು ಕೌಶಿಕ್ಗೆ ಏಳು ವರ್ಷ ಹಾಗೂ ಇತರರಿಗೆ ಐದು ವರ್ಷ ಸಜೆಯನ್ನು ನೀಡಿದರು. ‘ಜೈಲಿಗೆ ಹೋಗಲು ತಯಾರಿರದಿದ್ದರೆ ಅಪರಾಧಕ್ಕೆ ಕೈಹಾಕಬೇಡ’ ಎನ್ನುವ ಅಮೆರಿಕನ್ ನಾಣ್ಣುಡಿಯೊಂದಿದೆ. ಪ್ರಾಯಶಃ ಕೌಶಿಕ್ಗೆ ಇದರ ಅರಿವಿತ್ತೇನೋ. ಹಾಗಾಗಿಯೇ ಆತ ಸುಲಿಗೆಯಿಂದ ಗಳಿಸಿದ್ದ ಅಷ್ಟೂ ಹಣವನ್ನು ಜೈಲಿಗೆ ಹೋಗುವ ಮೊದಲೇ ಖರ್ಚುಮಾಡಿದ್ದ.