

ಫರ್ದಿನಾಂಡ್ ಮಾಗೆಲ್ಲನ್ನ ಮೊದಲ ದಂಡಯಾತ್ರೆ ಮುಗಿದು ಹಲವು ಶತಮಾನಗಳೇ ಮುಗಿದು ಹೋಗಿವೆ. ನವತಾಂತ್ರಿಕತೆಯ ಭರಾಟೆಗೆ ಆತ ಮೂರು ವರ್ಷ ತೆಗೆದುಕೊಂಡಿದ್ದ ಸಂಪರ್ಕ ಸಮಯ ಈಗ ಸೆಕೆಂಡುಗಳಿಗಿಳಿದಿದೆ. ಆದರೆ ಮಾನವನ ಅನ್ವೇಷಣೆಯ ಹಸಿವು ಮಾತ್ರ ಇನ್ನೂ ಮುಗಿಯದೇ ಅದೀಗ ಭೂಮಿಯನ್ನು ದಾಟಿ ಅಂತರಿಕ್ಷಕ್ಕೆ ವಿಸ್ತರಿಸಿದೆ. ಅಂದು ಸಾಂಬಾರ ಪದಾರ್ಥಗಳಿಗಾಗಿ ಶುರುವಾದ ಕಾರಣವಿಂದು ಖನಿಜಗಳಿಗಾಗಿ ಬದಲಾಗಿದೆ. ತಮ್ಮ ಕಾಲು ಚಾಚಲು ಭೂಮಿ ಚಿಕ್ಕದಾಗುತ್ತಿದೆಯೆಂದು ಅರ್ಥೈಸಿಕೊಂಡ ದೇಶಗಳು ಹೊಸ ನೆಲೆಯನ್ನು ಹುಡುಕುತ್ತ ಗ್ರಹಗಳತ್ತ ತಮ್ಮ ಚಿತ್ತ ಹರಿಸಿವೆ. ಅಂತರಿಕ್ಷಕ್ಕೆ ಏಣಿ ಹಾಕುವ ಈ ಹೊಸ ಟ್ರೆಂಡಿಗೆ ವರ್ಷದಿಂದ ವರ್ಷಕ್ಕೆ ಹೊಸ ಹೊಸ ದೇಶಗಳು ಸೇರ್ಪಡೆಯಾಗುತ್ತಿದ್ದು ಮುಂಬರುವ ವರ್ಷಗಳಲ್ಲಿ ಈ ಹುಚ್ಚು ಹೆಚ್ಚಾಗುವ ಲಕ್ಷಣಗಳು ಕಾಣತೊಡಗಿವೆ. ಇವೆಲ್ಲವುದರ ಪರಿಣಾಮ ಇಷ್ಟು ದಿನಗಳಿಂದ ನೆಮ್ಮದಿಯಿಂದಿದ್ದ ಗ್ರಹಗಳ ಗ್ರಹಗತಿ ಬದಲಾಗುವ ಸೂಚನೆಗಳು ಗೋಚರಿಸುತ್ತಿವೆ.
2023 ಬಾಹ್ಯಾಕಾಶ ಕ್ಷೇತ್ರದ ಇತಿಹಾಸದಲ್ಲಿ ನೆನಪಿಡುವಂತಹ ವರ್ಷ. 2016ರ ಸೆಪ್ಟೆಂಬರ್ ತಿಂಗಳಿನಲ್ಲಿ ಉಡಾಯಿಸಲಾದ ನಾಸಾದ ಒಸಿರೀಸ್ ರೆಕ್ಸ್ ಭೂಮಿಯ ಸಮೀಪದ ಕ್ಷುದ್ರಗ್ರಹ ಬೆನ್ನುವನ್ನು ಬೆನ್ನಟ್ಟಿ ಹೋಗಿ ಅಲ್ಲಿನ ಮಣ್ಣನ್ನೆತ್ತಿಕೊಂಡು 2023ರ ಸೆಪ್ಟೆಂಬರ್ನಲ್ಲಿ ಭೂಮಿಗೆ ತಲುಪಿಸಿದರೆ ನಮ್ಮ ಇಸ್ರೋದ ಚಂದ್ರಯಾನ 3 ಚಂದ್ರನ ದಕ್ಷಿಣ ಧ್ರುವವನ್ನು ತಲುಪುವ ಪ್ರಥಮವನ್ನು ಸಾಧಿಸಿದ ವಿಕ್ರಮ ಮತ್ತಷ್ಟು ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಜಾಗತಿಕವಾಗಿ ಪ್ರೇರೇಪಣೆ ನೀಡಿದೆ. ಇದರ ಪರಿಣಾಮ ಚಂದ್ರನ ಮೇಲೆ ಸೂರು ಕಟ್ಟಲು ಆಗಲೇ ತಯಾರಿ ಶುರುವಾಗಿದೆ. ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವೊಂದು ಇತ್ತೀಚೆಗೆ ಸ್ಟಾರ್ ಕ್ರೀಟ್ ಎಂಬ ಹೊಸ ಬಂಧಕ ವಸ್ತುವಿನ ಆವಿಷ್ಕಾರವನ್ನು ಮಾಡಿರುವುದಾಗಿ ಘೊಷಿಸಿದ್ದು ಇದು ಕಾಂಕ್ರೀಟ್ನ ಪರ್ಯಾಯವಾಗಿದೆ. ಈ ಬಂಧಕದ ವಿನ್ಯಾಸವನ್ನು ಚಂದ್ರ ಮತ್ತು ಮಂಗಳನ ಮಣ್ಣನ್ನು ಬಳಸಿ ಕಟ್ಟಡಗಳನ್ನು ನಿರ್ವಿುಸಲು ಉಪಯೋಗವಾಗುವಂತೆ ರೂಪಿಸಲಾಗಿದ್ದು ಆ ಗ್ರಹಗಳಲ್ಲಿ ನಿರೀಕ್ಷಿಸಲಾಗಿರುವ ಕಡಿಮೆ ಒತ್ತಡ, ಹೆಚ್ಚಿನ ವಿಕಿರಣ, ಆಗಾಗ ಜರುಗುವ ಉಲ್ಕಾಪಾತ ಮತ್ತು ಅನಿರೀಕ್ಷಿತ ಹವಾಮಾನ ಬದಲಾವಣೆಗಳನ್ನು ಸಮರ್ಥವಾಗಿ ಎದುರಿಸಲಿದೆ.
ಭೂಮಿಯ ಪರ್ಯಾಯ ನೆಲೆಯಾಗುವ ಸಾಧ್ಯತೆಯಿರುವ ಗ್ರಹಗಳಲ್ಲಿ ಚಂದ್ರಗ್ರಹ ಮುಂಚೂಣಿಯಲ್ಲಿದೆ. ಹೀಗಾಗಿ ಹೆಚ್ಚಿನ ಸಂಶೋಧನೆಗಳು ಚಂದ್ರನ ಮೇಲೆಯೇ ನಡೆಯುತ್ತಿವೆ. ನಾಸಾ ಚಂದ್ರನ ಅಧ್ಯಯನಕ್ಕಾಗಿ ಅರ್ಟಿಮಿಸ್ ಸರಣಿಯನ್ನೇ ಘೊಷಿಸಿದ್ದು, ಆ ಯೋಜನೆಯಂತೆ ಮಾನವರಹಿತ ಅರ್ಟಿಮಿಸ್ 1 ನೌಕೆ ಈಗಾಗಲೇ ಚಂದ್ರನಿಗೊಂದು ಸುತ್ತು ಹಾಕಿ ವಾಪಸ್ಸು ಬಂದಿದೆ. ಸರಣಿಯ ಎರಡನೇ ಕಂತು ಅರ್ಟಿಮಿಸ್ 2 ಮಾನವಸಹಿತ ಅಭಿಯಾನವಾಗಿದ್ದು ನಾಲ್ವರು ಅಂತರಿಕ್ಷಯಾನಿಗಳನ್ನು ಚಂದ್ರನಲ್ಲಿಗೆ ಕರೆದೊಯ್ಯುವ ಈ ಸವಾರಿ 2025ರ ಸೆಪ್ಟೆಂಬರ್ನಲ್ಲಿ ಉಡಾವಣೆಗೊಳ್ಳಲಿದೆ. ಮಾನವನನ್ನು ಚಂದ್ರನ ದಕ್ಷಿಣ ಧ್ರುವದಲ್ಲಿಳಿಸುವ ಮಹಾತ್ವಾಕಾಂಕ್ಷಿ ಯೋಜನೆಯಾಗಿರುವ ಅರ್ಟಿಮಿಸ್ 3 ನಭಕ್ಕೆ 2026ರಲ್ಲಿ ಹಾರಲಿದೆ. ಇವೆಲ್ಲವುದರ ಜೊತೆಗೆ ನಾಸಾ 2024ರ ಕೊನೆಯಲ್ಲಿ ಚಂದಿರನ ವಾತಾವರಣದಲ್ಲಿ ನೀರು, ಇಂಗಾಲದ ಡೈ ಆಕ್ಸೈಡ್ನಂತಹ ಆವಿಯಾಗುವ ಅನಿಲಗಳನ್ನು ಪತ್ತೆ ಮಾಡಲು ರೋವರ್ ವೈಪರ್ನ್ನು ದಕ್ಷಿಣ ಧ್ರುವದಲ್ಲಿ ಇಳಿಸಲಿದ್ದರೆ ಟ್ರೇಲ್ ಬ್ಲೇಜರ್ ಎಂಬ ನೌಕೆ ಇದೇ ಕೆಲಸಕ್ಕೆ ಉಪಗ್ರಹದ ಸುತ್ತ ಗಿರಕಿ ಹೊಡೆಯಲಿದೆ. ಈ ಯೋಜನೆಗಳೆಲ್ಲ ಚಂದಿರನ ಮೇಲೆ ಮಾನವನ ನೆಲೆಯ ಸಾಧ್ಯತೆಯ ಕುರಿತು ಪೂರಕ ಮಾಹಿತಿ ನೀಡಲಿದ್ದು ಅವುಗಳ ಫಲಿತಾಂಶಕ್ಕಾಗಿ ಇಡೀ ವೈಜ್ಞಾನಿಕ ಸಮೂಹ ಕಾದು ಕುಳಿತಿದೆ.
‘ನೀರೇನೋ ಓಕೆ, ಉಸಿರಾಡೋದು ಹೇಗೆ?’ ಎಂಬ ಪ್ರಶ್ನೆ ಇಲ್ಲಿ ಸಹಜ. ಅದಕ್ಕೂ ಇನ್ನೊಂದೆಡೆ ತಯಾರಿ ನಡೆದಿದೆ. ಚಂದಿರನ ಮೇಲ್ಮೈಯಲ್ಲಿರುವ ಕಬ್ಬಿಣ ಮತ್ತು ಟೈಟಾನಿಯಮ್ ಆಕ್ಸೈಡ್ ಸಮೃದ್ಧವಾಗಿರುವ ಧೂಳನ್ನು ಇಲೆಕ್ಟ್ರಾಲಿಸಿಸ್ ಅರ್ಥಾತ್ ವಿದ್ಯುತ್ ವಿಭಜನೆಯ ತಂತ್ರಜ್ಞಾನವನ್ನು ಬಳಸಿ ಸಂಸ್ಕರಿಸಿ ಅದರಿಂದ ಆಮ್ಲಜನಕವನ್ನು ತಯಾರಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದು ಇದು ಬರುವ ದಿನಗಳಲ್ಲೊಂದು ಗೇಮ್ ಚೇಂಜರ್ ಆಗಲಿದೆ. ಇದರ ಜೊತೆಜೊತೆಗೆ ಚಂದ್ರನಲ್ಲಿ ವಿದ್ಯುದೀಕರಣಕ್ಕೂ ಸ್ಕೆಚ್ ರೆಡಿಯಾಗಿದೆ. ಭೂಮಿಯಲ್ಲಿ ಅತ್ಯಂತ ವಿರಳವಾಗಿರುವ ಹಾಗೂ ಚಂದ್ರನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕಂಡು ಬರುವ ಹೀಲಿಯಮ್ 3 ಧಾತುವನ್ನು ಬಳಸಿ ಅಲ್ಲಿ ವಿದ್ಯುತ್ ತಯಾರಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆದಿವೆ. ಅಂದ ಹಾಗೆ ಈ ಹೀಲಿಯಮ್ 3 ಫರ್ದಿನಾಂಡ್ ಮಾಗೆಲ್ಲನ್ ಕಾಲದ ಸಾಂಬಾರ್ ಪದಾರ್ಥ ಹಾಗೂ ಈಗಿನ ಕಾಲದ ತೈಲಗಳಂತೆ ಮುಂದಿನ ದಿನಗಳ ಬ್ರಹ್ಮಾಸ್ತ್ರವಾಗಿದ್ದು ಅದರ ಮೇಲೆ ಹಿಡಿತ ಸಾಧಿಸಲು ಈಗಲೇ ದೊಡ್ಡಣ್ಣರ ಜಂಗೀಕುಸ್ತಿ ಶುರುವಾಗಿದೆ.
ಹೀಲಿಯಮ್ 3 ಅತ್ಯಂತ ಅಮೂಲ್ಯ ಹಾಗೂ ಭೂಮಿಯ ಮೇಲೆ ಅತ್ಯಂತ ಅಪರೂಪದ ಧಾತುವಾಗಿದ್ದು ಇದು ಚಂದ್ರನ ಮೇಲೆ ಹೇರಳವಾಗಿ ಲಭ್ಯವಿದೆ. ಈ ಧಾತುವನ್ನು ರಾಕೆಟ್ಟುಗಳಲ್ಲಿ ಇಂಧನವಾಗಿ ಬಳಸುವ ಜೊತೆಗೆ ಕ್ಷಕಿರಣಗಳ ಬದಲಿಯಾಗಿಯೂ ಬಳಸಬಹುದಾಗಿದೆ. ಆದರೆ ಇದೆಲ್ಲವುದಕ್ಕಿಂತ ಮುಖ್ಯವಾಗಿ ಇದು ನ್ಯೂಕ್ಲಿಯರ್ ಫ್ಯೂಷನ್ ಅರ್ಥಾತ್ ಅಣು ಜೋಡಣಾ ಪರಿವರ್ತಕಗಳಲ್ಲಿ ಶಕ್ತಿಯ ಮೂಲವಾಗಿ ಬಳಸಬಹುದಾಗಿದ್ದು ಇದು ಸೂರ್ಯನಲ್ಲಿ ನಡೆಯುತ್ತಿರುವ ಚಟುವಟಿಕೆಯ ರೀತಿಯಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದ ಇಂಧನದಲ್ಲಿ ಅತಿ ಹೆಚ್ಚು ಶಕ್ತಿಯನ್ನು ತಯಾರಿಸುವ ಸಾಧ್ಯತೆಯನ್ನು ನೀಡುತ್ತದೆ. ಒಂದು ಅಂದಾಜಿನ ಪ್ರಕಾರ ಚಂದ್ರನಲ್ಲಿ ಹತ್ತು ಲಕ್ಷ ಟನ್ನಷ್ಟು ಹೀಲಿಯಮ್ ಲಭ್ಯವಿದ್ದು ಇದು ಮನುಜರ ಮುಂದಿನ 10 ಸಾವಿರ ವರ್ಷಗಳವರೆಗಿನ ವಿದ್ಯುತ್ ಬೇಡಿಕೆಯನ್ನು ಪೂರೈಸಲಿದೆ. ಆದರೆ ಇದೆಲ್ಲ ಹೇಳಿಕೇಳಿದಷ್ಟು ಸುಲಭವಲ್ಲ.
ಭೂಮಿಯ ಮೇಲೆ ಅಣು ಜೋಡಣಾ ಪರಿವರ್ತಕಗಳ ತಾಂತ್ರಿಕತೆಯ ಮೇಲೆ ಹಿಡಿತವಿನ್ನೂ ಯಾರೂ ಸಾಧಿಸಿಲ್ಲ. ಇನ್ನು ಚಂದಿರನ ಮೇಲ್ಮೈಯಿಂದ ಮಣ್ಣನ್ನು ತೆಗೆದು ಅದರಿಂದ ಹೀಲಿಯಮ್ 3 ಹೊರತೆಗೆಯಲು ಸದ್ಯದ ತಂತ್ರಜ್ಞಾನದ ಪ್ರಕಾರ ಭಾರಿ ಪ್ರಮಾಣದ ಶಕ್ತಿ ವ್ಯಯವಾಗುತ್ತದೆ. ಜೊತೆಗೆ ಅದನ್ನು ಭೂಮಿಗೆ ಸುರಕ್ಷಿತವಾಗಿ ಸಾಗಿಸುವ ಜೊತೆಗೆ ಆರ್ಥಿಕವಾಗಿಯೂ ಸರಿತೂಗಿಸುವಂತಹ ವಾಹನದ ಜರೂರತ್ತೂ ಇದೆ. ಇವೆಲ್ಲ ಖಂಡಿತ ಸವಾಲೊಡ್ಡುವ ವಿಷಯಗಳೇ ಹೌದಾದರೂ ಇವನ್ನೆಲ್ಲ ಮೆಟ್ಟಿ ನಿಲ್ಲಬಲ್ಲ ದೇಶವೇ ಮುಂದಿನ ದೊಡ್ಡಣ್ಣನೆಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಾಗಿ ಈ ಚಕೋರರಿಗೆ ಚಂದ್ರಮನ ಮಣ್ಣಿನಾ ಚಿಂತೆ ಶುರುವಾಗಿದೆ. ಈಗಾಗಲೇ ಹಲವು ದೇಶಗಳು ಬೇರೆ ಬೇರೆ ಅಭಿಯಾನದ ಹೆಸರಿನಲ್ಲಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಬಗ್ಗೆ ಗುಸುಗುಸು ವಿಜ್ಞಾನಿಗಳ ಪಡಸಾಲೆಯಿಂದ ಕೇಳಿ ಬರುತ್ತಿದೆ.
ಒಂದಂತೂ ನಿಜ. ಹೆಚ್ಚು ಹೆಚ್ಚು ಬಗೆದಷ್ಟೂ ಚಂದ್ರ ನಮ್ಮ ವಿಜ್ಞಾನಿಗಳ ಪಾಲಿಗೆ ಮತ್ತಷ್ಟು ಆಕರ್ಷಕವಾಗಿ ಕಾಣತೊಡಗಿದ್ದಾನೆ. ಇವರೆಲ್ಲ ಮುಂದಿನ ದಿನಗಳಲ್ಲಿ ಚಂದ್ರನನ್ನೇ ಭೂಮಿಗಿಳಿಸಲಿದ್ದಾರೆಯೋ ಅಥವಾ ಭೂಮಿಯನ್ನೇ ಚಂದ್ರನ ಮೇಲೆ ಕೊಂಡೊಯ್ಯುವರೋ ಕಾದುನೋಡಬೇಕಿದೆ.
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)