

1) ಮಗನಿಗೆ ಮದುವೆಯಾಗಿ ನಾಲ್ಕು ವರ್ಷವಾಗಿದ್ದು, ಹೆಂಡತಿ ಅವನೊಂದಿಗೆ ಇದುವರೆಗೂ ಸೇರಲಿಲ್ಲ. ಅಪ್ಪ-ಅಮ್ಮನ ಬಲವಂತಕ್ಕೆ ಮದುವೆಯಾಗಿದ್ದೇನೆ, ನನಗೆ ಇಷ್ಟ ಇರಲಿಲ್ಲ ಎನ್ನುತ್ತಿದ್ದಾಳೆ. ಮದುವೆಯಾದ ಎರಡು ತಿಂಗಳ ನಂತರ ಇಬ್ಬರು ಅಮೆರಿಕಕ್ಕೆ ಹೋಗಿದ್ದರೂ ಒಟ್ಟಿಗೆ ಇರಲಿಲ್ಲ. ಅವಳಿಗೆ ವಿಪರೀತ ಕೋಪ. ಕೈಗೆ ಸಿಕ್ಕದ್ದನ್ನೆಲ್ಲ ಎಸೆಯುತ್ತಿದ್ದಳು. ನನ್ನ ಮಗ ಅವಳಿಗಾಗಿ ಏನು ಮಾಡಿದರೂ ಅವಳಿಗೆ ಸಮಾಧಾನವಿಲ್ಲ. ಮದುವೆಗೆ ಒಪ್ಪಿಗೆ ಕೊಟ್ಟಿದ್ದೇ ಹೆಚ್ಚು ಎನ್ನುವಂತೆ ಇದ್ದಳು. ಮದುವೆಯೂ ಇಷ್ಟವಿಲ್ಲ, ವಿಚ್ಛೇದನವನ್ನೂ ಕೊಡುವುದಿಲ್ಲ ಎಂದು ಮಗನಿಗೆ ಹೇಳಿದ್ದಾಳೆ. ಈಗ ಸಂಬಂಧಿಕರ ಮದುವೆಗೆಂದು ಬಂದವಳು ತವರಿನಲ್ಲಿಯೇ ಇದ್ದಾಳೆ. ಕೆಲಸಕ್ಕೂ ಸೇರಿಕೊಂಡಿದ್ದಾಳೆ. ಅವಳ ತಂದೆ ತಾಯಿ ಮಗಳನ್ನು ಕರೆದುಕೊಂಡು ಹೋಗಿ ಎನ್ನುತ್ತಿದ್ದಾರೆ. ನನ್ನ ಮಗನೀಗ ವಿಚ್ಛೇದನ ಪಡೆಯಬೇಕು ಎಂದು ಕೊಂಡಿದ್ದಾನೆ. ಅವನು ಅಮೆರಿಕದಲ್ಲೇ ವಿಚ್ಛೇದನಕ್ಕೆ ಅರ್ಜಿ ಹಾಕಬಹುದೇ? ಇಲ್ಲಿ ಹಾಕಿದರೆ ಅವನು ಬಂದು ಹೋಗಲು ಕಷ್ಟ. ನಾವು ಬೇರೆ ತಾಲ್ಲೂಕಿನಲ್ಲಿ, ಸೊಸೆ ಬೇರೆ ತಾಲ್ಲೂಕಿನಲ್ಲಿ ಇದ್ದಾಳೆ. ಮದುವೆ ಆಗಿರುವುದು ಇನ್ನೊಂದು ತಾಲೂಕಿನಲ್ಲಿ. ಏನು ಮಾಡಬೇಕೆಂದು ದಯಮಾಡಿ ತಿಳಿಸಿ.
2) ಮದುವೆಯಾಗಿ ಎಂಟು ವರ್ಷಗಳಾಗಿವೆ. ನಮಗೆ ಮಕ್ಕಳಿಲ್ಲ. ಮಗುವನ್ನು ದತ್ತು ತೆಗೆದುಕೊಳ್ಳಲು ಪತಿ ಒಪ್ಪುತ್ತಿಲ್ಲ. ನಮ್ಮ ಯಜಮಾನರು ಹೊರ ದೇಶದಲ್ಲಿ ಆರು ತಿಂಗಳು , ನಮ್ಮ ದೇಶದಲ್ಲಿ ಆರು ತಿಂಗಳು ಇರುತ್ತಾರೆ. ನನ್ನ ತಂಗಿಗೆ ಒಂದು ಮಗು ಇದೆ. ಅವಳಿಗೆ ಆ ಮಗುವಿನ ಮೇಲೆ ಮನಸ್ಸಿಲ್ಲ. ಅವಳ ಗಂಡ ಅವಳನ್ನು ಬಿಟ್ಟು ಊರು ಬಿಟ್ಟೇ ಹೋಗಿದ್ದಾನೆ. ನನ್ನ ಮಗುವನ್ನೇ ದತ್ತು ತೆಗೆದುಕೋ ಎನ್ನುತ್ತಿದ್ದಾಳೆ. ನಮ್ಮ ಯಜಮಾನರು ಇದಕ್ಕೆ ಒಪ್ಪುವುದಿಲ್ಲ. ನಮ್ಮ ಯಜಮಾನರು ಇಲ್ಲಿ ಇಲ್ಲದಾಗ ನಾನು ಮಾತ್ರ ಆ ಮಗುವನ್ನು ದತ್ತು ತೆಗದುಕೊಳ್ಳಬಹುದೇ?
ನಿಮ್ಮ ಪತಿ ಬದುಕಿರುವಾಗ ನೀವು ಮಾತ್ರ ದತ್ತುಪಡೆದುಕೊಳ್ಳುವ ಹಾಗಿಲ್ಲ. ಪತಿ ಪತ್ನಿ ಇಬ್ಬರು ಸೇರಿಯೇ ದತ್ತು ಸ್ವೀಕಾರ ಮಾಡಬೇಕು. ಹಾಗೆಯೇ ನಿಮ್ಮ ತಂಗಿಯೂ ಒಬ್ಬಳೇ ಮಗುವನ್ನು ದತ್ತುಕೊಡಲು ಬರುವುದಿಲ್ಲ. ಪತಿ ಪತ್ನಿ ಇಬ್ಬರೂ ಒಪ್ಪಿದಾಗ ಮಾತ್ರ ದತ್ತು ಕೊಡಬಹುದು.
3) ಮದುವೆಯಾಗಿ ಎಂಟು ವರ್ಷ. ಮೂರು ಆಸ್ತಿಗಳನ್ನು ಸ್ವಂತ ದುಡಿಮೆಯಿಂದ ಖರೀದಿಸಿದ್ದೇನೆ. ಎಲ್ಲ ಆಸ್ತಿಗಳಲ್ಲೂ ಖರೀದಿ ಪತ್ರ ಮಾಡುವಾಗ ನನ್ನ ಗಂಡನ ಹೆಸರನ್ನೂ ಸೇರಿಸಿದ್ದೇನೆ. ನನ್ನ ಗಂಡ ಮೊದಲನೆಯ ಆಸ್ತಿಗೆ -ಠಿ; 2 ಲಕ್ಷ ಮಾತ್ರ ಕೊಟ್ಟಿದ್ದರು. ಆ ಆಸ್ತಿಯ ಲೋನ್ ಸಹ ನಾನೇ ತೀರಿಸಿದ್ದೇನೆ. ಈಗ ಎರಡು ಆಸ್ತಿಗಳ ಮೇಲೆ ಲೋನ್ ಇದೆ. ನಾನೇ ತೀರಿಸುತ್ತಿದ್ದೇನೆ. ಎಲ್ಲ ಸಾಲವನ್ನೂ ನಾನೂ ಸಮವಾಗಿ ತೀರಿಸುತ್ತೇನೆ ಎಂದು ಮೊದಲಿಗೆ ನನ್ನನ್ನು ಅವರು ನಂಬಿಸಿದ್ದರು. ಆದರೆ ಒಂದು ರೂಪಾಯಿಯೂ ಕೊಟ್ಟಿಲ್ಲ. ಈಗ ನನಗೂ ನನ್ನ ಗಂಡನಿಗೂ ತೀರಾ ಜಗಳವಾಗುತ್ತಿದೆ. ಅವರ ಹಿಂಸೆ ತಡೆಯಲು ನನಗೆ ಆಗುತ್ತಿಲ್ಲ. ಒಪ್ಪಿಗೆಯಿಂದ ವಿಚ್ಛೇದನ ಪಡೆಯೋಣ ಎಂದರೆ ಎರಡು ಆಸ್ತಿ ಬಿಟ್ಟುಕೊಟ್ಟರೆ ವಿಚ್ಛೇದನ ಕೊಡುತ್ತೇನೆ ಎನ್ನುತ್ತಿದ್ದಾರೆ. ನನಗೆ ಇಬ್ಬರು ಮಕ್ಕಳಿದ್ದಾರೆ. ಈವರೆಗೂ ನನ್ನ ಗಂಡ ಮನೆ ಖರ್ಚಿಗೂ ಒಂದು ರೂಪಾಯಿಯೂ ಕೊಟ್ಟಿಲ್ಲ. ಆಸ್ತಿ ಉಳಿಸಿಕೊಳ್ಳಲು ನಾನು ಏನು ಮಾಡಬೇಕು?
ಮದುವೆಯಾದ ಹೊಸತರಲ್ಲಿ ಆಸ್ತಿಗಳನ್ನು ಖರೀದಿ ಮಾಡುವಾಗ, ಜವಾಬ್ದಾರಿಗಳನ್ನು ಸಮಾನವಾಗಿ ಹಂಚಿಕೊಳ್ಳಲು ಸಿದ್ಧವಿದ್ದಾರೆಯೇ ಇಲ್ಲವೇ ಎಂದು ಖಚಿತ ಪಡಿಸಿಕೊಳ್ಳಬೇಕು. ಹಾಗೆ ಮಾಡದೇ, ಜಂಟಿಯಾಗಿ ಕ್ರಯಪತ್ರ ಮಾಡಿಸಿಕೊಂಡರೆ , ಎಲ್ಲ ಜವಾಬ್ದಾರಿಗಳನ್ನೂ ಒಬ್ಬರೇ ನಿಭಾಯಿಸಿ ಮುಂದೆ ಹೀಗೆಲ್ಲ ಕಷ್ಟಪಡಬೇಕಾಗಬಹುದು. ಬೇನಾಮಿ ವ್ಯವಹಾರಗಳ ಕಾಯ್ದೆ ಈಗ ಇಲ್ಲದೇ ಇರುವುದರಿಂದ, ಆಸ್ತಿ ಖರೀದಿ ಪತ್ರದಲ್ಲಿ ನಿಮ್ಮ ಮತ್ತು ನಿಮ್ಮ ಪತಿಯ ಇಬ್ಬರ ಹೆಸರೂ ಇದ್ದರೆ, ಸಾಮಾನ್ಯವಾಗಿ ನ್ಯಾಯಾಲಯ, ನೀವಿಬ್ಬರೂ ಆಸ್ತಿಗೆ ಸಮಾನ ಪಾಲುದಾರರು ಎಂಬ ನಿರ್ಣಯಕ್ಕೆ ಬರುವ ಸಾಧ್ಯತೆ ಹೆಚ್ಚು. ನೀವು ಎಲ್ಲ ಸಂದರ್ಭಗಳನ್ನೂ ವಿವರಿಸಿ ಆಸ್ತಿಯ ಸಂಪೂರ್ಣ ಮಾಲೀಕಳು ನಾನೇ ಎನ್ನುವ ಹಕ್ಕು ಘೊಷಣೆಯನ್ನು ಕೇಳಿ ದಾವೆ ಸಲ್ಲಿಸಬಹುದು. ಅದೇ ದಾವೆಯಲ್ಲಿಯೇ ನ್ಯಾಯಾಲಯ ಪರ್ಯಾಯವಾಗಿ ಬೇರೆ ಸೂಕ್ತ ಆದೇಶವನ್ನೂ ಮಾಡಬಹುದೆಂದು ನೀವು ಕೇಳಿಕೊಳ್ಳಬಹುದು. ಆಗ ಆಸ್ತಿಗಳನ್ನು ಗಳಿಸಲು ನೀವು ಕೊಟ್ಟ ಹಣದ ಲೆಕ್ಕವನ್ನೂ , ಆಸ್ತಿಗೆ ಸಂಬಂಧಿಸಿದಂತೆ ನೀವು ಖರ್ಚು ಮಾಡಿರುವ ಹಣವನ್ನೂ , ಆಸ್ತಿಗಳ ಮೇಲೆ ಇರುವ ಸಾಲವನ್ನೂ ಗಮನದಲ್ಲಿಟ್ಟುಕೊಂಡು ನ್ಯಾಯಾಲಯ ಸೂಕ್ತ ಆದೇಶವನ್ನು ಮಾಡಬಹುದು. ಪ್ರಕರಣವನ್ನು ದಾಖಲಿಸಿದ ನಂತರ ಎದುರುದಾರರಿಗೆ ನೋಟಿಸ್ ಹೋದ ಮೇಲೆ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ಕೇಳಿಕೊಳ್ಳಿ. ಅಲ್ಲಿ ಮಧ್ಯಸ್ಥಿಕೆಗಾರರ ಸಹಾಯದಿಂದ ನೀವಿಬ್ಬರೂ ಒಂದು ರಾಜಿ ಸೂತ್ರಕ್ಕೆ ಬರಬಹುದು. ನಿಮ್ಮ ಪತಿ ರಾಜಿ ಸೂತ್ರಕ್ಕೆ ಒಪ್ಪದೇ ಹೋದರೆ ನ್ಯಾಯಾಲಯದಿಂದ ಎಲ್ಲ ಆಸ್ತಿಗಳಲ್ಲಿಯೂ, ಸಾಲಗಳಲ್ಲಿಯೂ ಇಬ್ಬರಿಗೂ ಅರ್ಧ ಭಾಗ ಆಗುವಂತೆ ಆದೇಶ ಸಿಗಬಹುದು.