ಶ್ರೀಸಾಮಾನ್ಯರ ಹೃದಯದಲ್ಲಿ ಕೃಷ್ಣಪ್ರಜ್ಞೆ ಸ್ಥಾಪಿಸಿದ ಚೈತನ್ಯರು

Krishna Pragne
Published on

ಭಕ್ತಿಗೆ ಎಂಥ ಮಹೋನ್ನತ ಶಕ್ತಿಯಿದೆ ಎಂಬುದನ್ನು ದರ್ಶಿಸಿದ ಶ್ರೀಕೃಷ್ಣ ಚೈತನ್ಯ ಮಹಾಪ್ರಭುಗಳು ಭಗವಂತನನ್ನು ಕಾಣಬೇಕಾದರೆ ಭಕ್ತಿಯ ಮಾರ್ಗದಲ್ಲೇ ಸಾಗಬೇಕು ಎಂದು ಹೇಳಿ, ಜನಸಮೂಹವನ್ನು ಆ ಪಥದಲ್ಲಿ ಕೊಂಡೊಯ್ದರು. ಎಲ್ಲಾ ವರ್ಗಗಳ ಉನ್ನತಿಗಾಗಿ ಶ್ರಮಿಸಿದರು. ಹರಿನಾಮ ಸಂಕೀರ್ತನೆ ಮೂಲಕ ಲೋಕೋದ್ಧಾರದ ಪಥವನ್ನು ವಿಶಾಲಗೊಳಿಸಿದರು.

ಜರೂರ್​ ಮಾತು
ಶ್ರೀಕೃಷ್ಣಲೋಕವೆಂದರೆ ಅದು ವಿಶಿಷ್ಟ, ವಿಶಾಲ ಮತ್ತು ಮಾಧುರ್ಯದ ತ್ರಿವೇಣಿ ಸಂಗಮ. ಈ ಜಗತ್ತು ಯಾವುದಕ್ಕೆ ತಹತಹಿಸುತ್ತಿದೆಯೋ ಅದೆಲ್ಲವೂ ಅಲ್ಲಿದೆ. ಏಕೆಂದರೆ ಕೃಷ್ಣ ಲೋಕೋದ್ಧಾರಕ, ಲೋಕಪಾಲಕ! ಪ್ರೀತಿ, ಮಮತೆ, ಅಂತಃಕರಣ, ಕ್ಷಮಾಗುಣ, ಹೃದಯವೈಶಾಲ್ಯ, ಆಹ್ಲಾದ, ಮಾಧುರ್ಯ, ಪ್ರೇಮಲೋಕ, ಆತ್ಮಾನಂದ, ತತ್ತ ್ವಜ್ಞಾನದ ಜತೆಗೆ ಉದ್ಧಾರದ ಮಾರ್ಗ... ಹೀಗೆ ಶ್ರೀಕೃಷ್ಣಪ್ರಜ್ಞೆ ಎಲ್ಲವನ್ನೂ ಒಳಗೊಂಡಿರುವಂಥದ್ದು. ಸುಂದರ ಉದ್ಯಾನದಲ್ಲಿ ಬಗೆಬಗೆಯ ಪುಷ್ಪಗಳು ಕಣ್ಮನ ಸೆಳೆಯುವಂತೆ ಕೃಷ್ಣಪ್ರಜ್ಞೆ ಹೃದಯವನ್ನು ತಂಪಾದ ಬೆಳದಿಂಗಳಾಗಿ ಆವರಿಸಿಕೊಳ್ಳುತ್ತದೆ. ಬಾಲ್ಯದಲ್ಲಿ ತುಂಟಾಟದಲ್ಲೇ ತಾಯಿ ಯಶೋಧೆಗೆ ಬ್ರಹ್ಮಾಂಡ ದರ್ಶನ ಮಾಡಿಸಿದ ಕೃಷ್ಣ, ಯೌವನದಲ್ಲಿ ರಾಸಲೀಲೆಯ ಮೂಲಕ ಪ್ರೇಮಕ್ಕೆ ಹೊಸ ಪಲ್ಲವಿಯನ್ನು ಬರೆದ. ಈ ಮೂಲಕ ಶುದ್ಧಪ್ರೇಮ, ದಿವ್ಯಪ್ರೇಮದ ದರ್ಶನ ಮಾಡಿಸಿದ. ಧರ್ಮ ಸಂಸ್ಥಾಪನೆಗಾಗಿ ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಸಾರಥಿಯಾದ, ಭಗವದ್ಗೀತೆ ಬೋಧಿಸಿದ. ಆ ಗೀತೆಯಲ್ಲಿ ಲೋಕದ ಎಲ್ಲ ಪ್ರಶ್ನೆ, ತಳಮಳ, ಅನುಮಾನಗಳನ್ನು ಪರಿಹರಿಸಿ, ಅಜ್ಞಾನದ ಗಾಢ ಅಂಧಕಾರವನ್ನು ಕಳೆದು ಚೇತೋಹಾರಿ ಬೆಳಕನ್ನು ನೀಡಿದ.

ಕಾಲದ ಓಟದಲ್ಲಿ ಜಗತ್ತು ಇದನ್ನು ಮರೆಯುತ್ತದೆ ಅಥವಾ ಮರೆತಂತೆ ನಟಿಸುತ್ತದೆ. ಆಗ ಮತ್ತೆ ಪಥಭ್ರಷ್ಟ ಸಮಾಜವನ್ನು ಸರಿದಾರಿಗೆ ತರಲು ಭಕ್ತಿ ಎಂಬ ಅಮೃತದೊಂದಿಗೆ ಅವತರಿಸುವ ಮಹಾಪುರುಷರು ಲೋಕಕ್ಕೆ ನೀಡುವ ಅಧ್ಯಾತ್ಮ ದರ್ಶನ ಅಸಾಧಾರಣ. ಹೀಗೆ ಹರಿನಾಮ ಸಂಕೀರ್ತನೆಯ ಮೂಲಕ ಭಗವಂತನನ್ನು ತಲುಪುವ ಬಗೆಯನ್ನು ಹೇಳಿಕೊಟ್ಟು, ಭಕ್ತಿ ಚಳವಳಿಯನ್ನು ದೇಶದಾದ್ಯಂತ ಹಬ್ಬಿಸಿದ ಮಹಾನ್ ಸಂತರೂ, ಕೃಷ್ಣನ ಅಂಶ, ಕೃಷ್ಣತತ್ತ ್ವುಳ್ಳ ಮಹಾನ್ ಸಾಧಕರೂ ಆದ ಶ್ರೀಕೃಷ್ಣ ಚೈತನ್ಯ ಪ್ರಭುಗಳು (ಭಕ್ತರು ಪ್ರೀತಿಯಿಂದ ಚೈತನ್ಯ ಮಹಾಪ್ರಭುಗಳು ಎಂದೇ ಕರೆದು, ಸಂಭ್ರಮಿಸುತ್ತಾರೆ) ಅಧ್ಯಾತ್ಮದ ದೊಡ್ಡ ವಿಸ್ಮಯ ಮಾತ್ರವಲ್ಲ, ಅಧ್ಯಾತ್ಮದ ದೊಡ್ಡ ಶಕ್ತಿಯೂ ಹೌದು. ಅವರು ಮುನ್ನಡೆಸಿದ ಭಕ್ತಿ ಆಂದೋಲನ, ಹರಿನಾಮ ಸಂಕೀರ್ತನೆಯು ಶ್ರೀಸಾಮಾನ್ಯರ ಹೃದಯಮಂದಿರಗಳಲ್ಲಿ ಕೃಷ್ಣಪ್ರಜ್ಞೆಯನ್ನು ಸ್ಥಾಪಿಸಿಬಿಟ್ಟಿತು. ವಿಶೇಷವೆಂದರೆ ಆ ಭಕ್ತಿ ಪರಂಪರೆ ಇನ್ನಷ್ಟು ಸತ್ವಯುತವಾಗಿ ಬೆಳೆದು ಈಗಲೂ ಮನುಷ್ಯನಲ್ಲಿನ ದೈವತ್ವವನ್ನು ಜಾಗೃತಗೊಳಿಸುತ್ತಿದೆ. ಜಾತಿ, ಮತ, ಪಂಥಗಳ ಗೋಡೆಯನ್ನು ಒಡೆದು ಎಲ್ಲ ವರ್ಗದವರ ಉನ್ನತಿಗಾಗಿ ಚೈತನ್ಯರು ತೋರಿದ ಕಾಳಜಿ ಎಂದೆಂದಿಗೂ ಮಾದರಿ.

ಪಶ್ಚಿಮ ಬಂಗಾಳದ ನವದ್ವೀಪ ನಗರದ ಶ್ರೀಧಾಮ ಮಾಯಾಪುರದಲ್ಲಿ ಜಗನ್ನಾಥ ಮಿಶ್ರಾ ಪಂಡಿತರು, ಶಚೀದೇವಿಯ ಸುಪುತ್ರರಾಗಿ ಫಾಲ್ಗುಣ ಮಾಸದ ಪೌರ್ಣಮಿಯಂದು (ಕ್ರಿ.ಶ. 1486 ಫೆಬ್ರವರಿ 18) ‘ವಿಶ್ವಂಭರ’ (ಜಗತ್ತನ್ನು ರಕ್ಷಿಸಿ, ಪೋಷಿಸುವವನು) ನಾಗಿ ಚೈತನ್ಯರು ಜನಿಸಿದರು. ಕೃಷ್ಣನಿಗೆ ಸಹಸ್ರ ಹೆಸರುಗಳಿರುವಂತೆ ವಿಶ್ವಂಭರನಿಗೆ ನಿಮಾಯ್, ಗೌರಾಂಗ್, ಗೌರಚಂದ್ರ, ಗೌರಾ... ಹಲವು ಹೆಸರುಗಳು. ಕೃಷ್ಣನಂತೆ ಬಾಲ್ಯಲೀಲೆ ತೋರಿದ ವಿಶ್ವಂಭರ ಸರ್ಪದ (ಅನಂತಶೇಷ) ಜತೆ ಆಟವಾಡಿದ, ಮೆತ್ತನೆ ಹಾಸಿಗೆ ಎಂಬಂತೆ ಅದರ ಮೇಲೆ ಮಲಗಿದ, ಗೋಪಾಲನ ಪೂಜೆ ಮಾಡಲು ಜಗನ್ನಾಥ ಮಿಶ್ರಾರ ಮನೆಗೆ ಬಂದ ಬ್ರಾಹ್ಮಣರೊಬ್ಬರಿಗೆ, ‘ನೀವು ಪೂಜೆ ಮಾಡಿ, ನೈವೇದ್ಯ ಅರ್ಪಿಸುತ್ತಿರುವ ಗೋಪಾಲ ನಾನೇ’ ಎಂದು ದರ್ಶನ ನೀಡಿದ, ಹದಿನಾರನೇ ವಯಸ್ಸಿಗೇ ಚತುಷ್ಪಾಠಿ (ಹಳ್ಳಿಯ ಶಾಲೆ) ಆರಂಭಿಸಿದ ವಿಶ್ವಂಭರ ವಿದ್ಯಾಭ್ಯಾಸ ಮುಗಿಸಿ ವೇದ-ಶಾಸ್ತ್ರ ಪಾರಂಗತನಾದ. ನವದ್ವೀಪ ಪ್ರದೇಶವನ್ನು ಶ್ರೀಕೃಷ್ಣ ನಾಮಸ್ಮರಣೆಯೊಂದಿಗೆ ದಿವ್ಯ, ಭವ್ಯಗೊಳಿಸಿದ, ಭಕ್ತಿ ಚಳವಳಿಗೆ ಹೊಸ ದಿಕ್ಕು ನೀಡಿದ ‘ವಿಶ್ವಂಭರ’ 24ನೇ ವಯಸ್ಸಿಗೆ ಸಂನ್ಯಾಸ ಸ್ವೀಕರಿಸುವ ಮೂಲಕ ಚೈತನ್ಯ ಮಹಾಪ್ರಭುಗಳಾದರು. ಪಶ್ಚಿಮ ಬಂಗಾಳದಲ್ಲಿ ಜನಿಸಿ, ಒಡಿಶಾದಲ್ಲಿ ನೆಲೆಸಿ, ಭಾರತದಾದ್ಯಂತ ಸಂಚರಿಸಿದ ಚೈತನ್ಯರು ಬದುಕಿನ ಸತ್ಯಗಳನ್ನು ಅನಾವರಣಗೊಳಿಸಿ, ಸಾಕ್ಷಾತ್ಕಾರದ ಸರಳ ದಾರಿಯನ್ನೂ ತೋರಿಸಿಕೊಟ್ಟರು.

ಶ್ರೀಚೈತನ್ಯ ಮಹಾಪ್ರಭುಗಳ ಒಟ್ಟು ಜೀವಿತಾವಧಿ ಬರೀ ನಲವತ್ತೆಂಟು ವರ್ಷ. ಇಷ್ಟು ಸಣ್ಣ ಅವಧಿಯಲ್ಲೇ ವ್ಯಕ್ತಿಗಳನ್ನು, ಸಮಾಜವನ್ನು ಉದ್ಧರಿಸಿದ್ದಲ್ಲದೆ, ಲೋಕಕ್ಕೆ ಮುಕ್ತಿಯ ಮಾರ್ಗವನ್ನು ತೋರಿಸಿಕೊಟ್ಟರು. ಮೌಢ್ಯಗಳನ್ನು ಮೀರಿದರು, ನಾಸ್ತಿಕರ ವಿರುದ್ಧ ಅಸಹಕಾರ ಚಳವಳಿ ನಡೆಸಿ, ಅವರ ಮನಸುಗಳಲ್ಲಿಯೂ ಭಕ್ತಿಯ ದೀಪವನ್ನು ಬೆಳಗಿಸಿ ದರು. ಜಲ, ವಾಯು, ಭೂಮಿ, ದೇವಸ್ಥಾನ, ಗೋವುಗಳ ಕೊಟ್ಟಿಗೆ, ಬೆಟ್ಟಗುಡ್ಡ ಹೀಗೆ ಎಲ್ಲೆಲ್ಲೂ ಕೃಷ್ಣನನ್ನು ಕಂಡರು, ಭಾವಸಡಗರದಿಂದ ಆರಾಧಿಸಿದರು. ಭಾವೋತ್ಕರ್ಷದ ಮಹಾ ಎತ್ತರವನ್ನು ತಲುಪಿ ಶ್ರೀಕೃಷ್ಣ, ರಾಧಾರಾಣಿ, ಗೋಪಿಕೆಯರ ಭಾವ ಅನುಭವಿಸಿದರು. ಆಹಾ! ಅದೆಂಥ ಭಕ್ತಿ. ಆ ಶುದ್ಧ ಭಕ್ತಿಯ ಪ್ರವಾಹಕ್ಕೆ ಸಮಾಜ ಬರೀ ಬೆರಗಾಗಲಿಲ್ಲ, ನತಮಸ್ತಕವಾಯಿತು. ಅದಕ್ಕೆಂದೆ ಚೈತನ್ಯರಿಗೆ ದೊಡ್ಡ ಭಕ್ತಗಣವೇ ಹುಟ್ಟಿಕೊಂಡಿತು.

ಕೃಷ್ಣಪ್ರಜ್ಞೆಯನ್ನು ಶ್ರೀಸಾಮಾನ್ಯರಿಗೂ, ಪಂಡಿತರಿಗೂ ಮನದಟ್ಟು ಮಾಡಿಕೊಟ್ಟರು. 24ರಿಂದ 30ನೇ ವಯಸ್ಸಿನವರೆಗೂ ಭಾರತದಾದ್ಯಂತ ಸಂಚರಿಸಿದರು. ಇದೇ ಅವಧಿಯಲ್ಲಿ ಎರಡು ವರ್ಷಗಳ ಕಾಲ ದಕ್ಷಿಣ ಭಾರತ ಯಾತ್ರೆ ಮಾಡಿದರು. ‘ಹರಿಬೋಲ್’ ಮಂತ್ರ ದಕ್ಷಿಣ ಭಾರತದಾದ್ಯಂತ ಅನುರಣಿಸಿತು. ಕೂರ್ಮಕ್ಷೇತ್ರ, ಶ್ರೀರಂಗಂ, ಶ್ರೀಶೈಲ, ತಿರುಪತಿ ತಿರುಮಲ, ಕಾಳಹಸ್ತಿ, ವಿದ್ಯಾನಗರ, ಶೃಂಗೇರಿಗೆ ಭೇಟಿ ನೀಡಿದ ಚೈತನ್ಯರು ಉಡುಪಿ ಕೃಷ್ಣನನ್ನು ಭೇಟಿ ಮಾಡಿ ಭಾವೋತ್ಕರ್ಷಕ್ಕೆ ಸಾಗಿದರು. ಆನಂದದಿಂದ ಕುಣಿದಾಡುತ್ತ ಕೃಷ್ಣನನ್ನು ಪ್ರಾರ್ಥಿಸಿದರು, ಮುದ್ದಿಸಿದರು, ಆರಾಧಿಸಿದರು! ಗೋದಾವರಿ ನದಿತೀರದ ವಿದ್ಯಾನಗರದಲ್ಲಿ ನೆಲೆಸಿದ್ದ ಶ್ರೀಕೃಷ್ಣನ ಪರಮಭಕ್ತ ರಾಮಾನಂದರಾಯರನ್ನು ಇದೇ ಪರ್ಯಟನೆ ವೇಳೆ ಭೇಟಿಯಾದರು. ಇದು ಎಷ್ಟು ಅನನ್ಯ ಭೇಟಿಯೆಂದರೆ ಚೈತನ್ಯರು ಮತ್ತು ರಾಮಾನಂದರಾಯರು ಹತ್ತು ದಿನಗಳ ಕಾಲ ಕೃಷ್ಣಪ್ರಜ್ಞೆಯ ಬಗ್ಗೆ ರ್ಚಚಿಸುತ್ತ ಧನ್ಯತೆ ಅನುಭವಿಸಿದರು. ದಕ್ಷಿಣ ಭಾರತ ಯಾತ್ರೆ ಮುಗಿಸಿ ಜಗನ್ನಾಥಪುರಿಗೆ ಮರಳುವಾಗ ಮತ್ತೆ ವಿದ್ಯಾನಗರಕ್ಕೆ ಭೇಟಿ ಕೊಟ್ಟ ಚೈತನ್ಯರು ರಾಮಾನಂದರಾಯರಿಗೆ ‘ನೀವು ನನ್ನ ಜತೆ ಪುರಿಗೆ ಬಂದು ನೆಲೆಸಬೇಕು’ ಎಂದರು. ಅವರ ಆಹ್ವಾನವನ್ನು ಒಪ್ಪಿ ಜಗನ್ನಾಥಪುರಿಗೆ ಬಂದ ರಾಮಾನಂದರಾಯರು ಚೈತನ್ಯರ ಅವತಾರ ಸಮಾಪ್ತಿಯವರೆಗೂ, ಅವರ ಒಡನಾಟದಲ್ಲಿ ಇದ್ದರು.

31ರಿಂದ 48ನೇ ವಯಸ್ಸಿನವರೆಗೆ ಪುರಿಯಲ್ಲಿ ನೆಲೆಸಿ, ಹರಿನಾಮ ಸಂಕೀರ್ತನೆಯಲ್ಲಿ ಮುಳುಗಿದ ಚೈತನ್ಯ ಮಹಾಪ್ರಭುಗಳು ಶ್ರೀ ಜಗನ್ನಾಥನನ್ನು ಕೊಳಲು ಹಿಡಿದ ಕೃಷ್ಣನಾಗಿ, ಕುರುಕ್ಷೇತ್ರದಲ್ಲಿ ನಿಂತ ಕೃಷ್ಣನಾಗಿ, ಯಮುನೆ ತೀರದಲ್ಲಿ ವಿಹರಿಸುತ್ತಿರುವ ಕೃಷ್ಣನಾಗಿ ಹೀಗೆ ವಿವಿಧ ಭಾವಗಳಲ್ಲಿ ಕಂಡರು, ಆ ಕೃಷ್ಣಪ್ರಜ್ಞೆಯಲ್ಲೇ ಜೀವನದ ಪ್ರತಿ ಕ್ಷಣವನ್ನೂ ಕಳೆದರು. ಇಂದಿಗೂ ಕಾಡುವ, ಮತ್ತೆ ಮತ್ತೆ ಮುನ್ನೆಲೆಗೆ ಬರುವ ಪ್ರಶ್ನೆಗಳಿಗೆ ಚೈತನ್ಯರು ಆಗಲೇ ಉತ್ತರ ಕೊಟ್ಟರು.

ದೇವರು ಇದ್ದಾನೆಯೇ?

ಹೌದು, ಎಲ್ಲ ಕಡೆ ಇದ್ದಾನೆ, ಕೃಷ್ಣನೇ ಜಗತ್ತನ್ನು ಆವರಿಸಿದ್ದಾನೆ.

ನಾವು ದೇವರನ್ನು ನೋಡಬಹುದೆ?

-ನೋಡಬಹುದು, ಅವನ ಜತೆ ಒಡನಾಡಬಹುದು, ಗೋಪಿಕೆಯರಂತೆ ನಾವೂ ಕೃಷ್ಣನ ಜತೆ ನೃತ್ಯ ಮಾಡಬಹುದು.

ದೇವರನ್ನು ತಲುಪುವ ದಾರಿ ಯಾವುದು?

-ಹರಿನಾಮ ಸಂಕೀರ್ತನೆ. ಇದರಿಂದಲೇ ಭಾವಜಾಗೃತಿ ಹಾಗೂ ಆತ್ಮೋದ್ಧಾರ. ಚೈತನ್ಯರು ಕೃಷ್ಣಪ್ರಜ್ಞೆ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತ ರಾಮಾನಂದರಾಯರಿಂದ ಹೊರಡಿಸಿದ ಉತ್ತರಗಳು ಹಲವು ಸಂದೇಶ ನೀಡುತ್ತವೆ.

ಎಲ್ಲ ವಿದ್ಯೆಗಳಲ್ಲಿ ಅತ್ಯಂತ ಮುಖ್ಯವಾದದ್ದು ಯಾವುದು?

-ಕೃಷ್ಣನಿಗೆ ಸಲ್ಲಿಸುವ ದಿವ್ಯಭಕ್ತಿ.

ದೃಷ್ಟಿಯಲ್ಲಿ ಅತ್ಯಂತ ಪ್ರಸಿದ್ಧ ವ್ಯಕ್ತಿ ಯಾರು?

-ಕೃಷ್ಣನ ನಿಷ್ಠಭಕ್ತನೇ ಸೃಷ್ಟಿಯ ಅತಿ ಪ್ರಸಿದ್ಧ ವ್ಯಕ್ತಿ.

ಶ್ರೀಮಂತರಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು?

-ರಾಧಾ ಮತ್ತು ಕೃಷ್ಣರಲ್ಲಿ ಅತಿಹೆಚ್ಚು ಪ್ರೀತಿ ಹೊಂದಿರುವವನೇ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ.

ಎಲ್ಲ ಬಗೆಯ ದುಃಖಗಳಲ್ಲಿ ಅತ್ಯಂತ ಯಾತನಾಮಯವಾದದ್ದು ಯಾವುದು?

-ಕೃಷ್ಣಭಕ್ತರನ್ನು ಅಗಲುವುದು.

ಎಲ್ಲ ಮುಕ್ತಾತ್ಮರ ಮಧ್ಯೆ ಯಾರು ಅತ್ಯುನ್ನತರು?

-ಕೃಷ್ಣನ ಬಗ್ಗೆ ಅತ್ಯುನ್ನತ ಪ್ರೀತಿ ಉಳ್ಳವರು.

ಎಲ್ಲ ಮಂಗಳಕರ ಚಟುವಟಿಕೆಗಳಲ್ಲಿ ಜೀವಿಗೆ ಅತಿ ಮಂಗಳಕರವಾದದ್ದು ಯಾವುದು?

-ಕೃಷ್ಣನ ಶುದ್ಧಭಕ್ತರ ಸಂಗ.

ಜೀವಿಯು ಸದಾಕಾಲ ಸ್ಮರಿಸಬೇಕಾದದ್ದು ಏನು?

-ಕೃಷ್ಣನ ನಾಮ, ಲೀಲೆಗಳು ಮತ್ತು ಗುಣಗಳು.

ಪೂಜ್ಯ ವಸ್ತುಗಳಲ್ಲೆಲ್ಲ ಅತಿಮುಖ್ಯವಾದದ್ದು ಯಾವುದು?

-ರಾಧಾಕೃಷ್ಣರ ಪವಿತ್ರನಾಮ ಅಥವಾ ಹರೇಕೃಷ್ಣ ಮಹಾಮಂತ್ರವೇ ಅತಿ ಮುಖ್ಯವಾದ ಪೂಜ್ಯವಸ್ತು.

ಅದಕ್ಕೆಂದೆ, ಚೈತನ್ಯರು ಮುಂದೆ ಒಂದು ಶ್ಲೋಕದಲ್ಲಿ ಹೇಳುತ್ತಾರೆ. ‘ನಾನು ಬ್ರಾಹ್ಮಣನಲ್ಲ, ಕ್ಷತ್ರಿಯನಲ್ಲ, ವೈಶ್ಯನಲ್ಲ, ಶೂದ್ರನಲ್ಲ. ನಾನು ಬ್ರಹ್ಮಚಾರಿಯೂ ಅಲ್ಲ, ಗೃಹಸ್ಥ, ವಾನಪ್ರಸ್ಥ ಅಥವಾ ಸಂನ್ಯಾಸಿಯೂ ಅಲ್ಲ. ನಾನು ಯಾರು? ನಾನು, ಸೃಷ್ಟಿಯ ಸಕಲ ಆಧ್ಯಾತ್ಮಿಕ ಆನಂದದ ಮೂಲಕಾರಣನಾದ ಭಗವಾನ್ ಶ್ರೀಕೃಷ್ಣನ ಪಾದಕಮಲಗಳ ದಾಸನ ದಾಸನ, ನಿತ್ಯದಾಸನು’.

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ |

ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ||

ಇದುವೇ ಕಲಿಯುಗದ ಮಹಾಮಂತ್ರವೆಂದು ಬೋಧಿಸಿ, ಹರಿನಾಮ ಸಂಕೀರ್ತನೆಯ ಮೂಲಕ ಚೈತನ್ಯರು ತಂದ ಬದಲಾವಣೆ ನಿಜಕ್ಕೂ ಅಗಾಧ. ತಾವು ಹೋದಲ್ಲೆಲ್ಲ ಜನಸಮುದಾಯಕ್ಕೆ ಕೃಷ್ಣಮಂತ್ರವನ್ನು ನೀಡಿದರು, ಹರಿನಾಮ ಸಂಕೀರ್ತನೆಯನ್ನು ಮಾಡಿಸಿದರು. ಇದರಿಂದ ಜನರು ಅದೆಂಥ ಆಂತರಿಕ ಶಾಂತಿಯನ್ನು ಅನುಭವಿಸಿದರೆಂದರೆ, ಚೈತನ್ಯರು ಹೋದಲ್ಲೆಲ್ಲ ಭಕ್ತರ ದೊಡ್ಡಸ ಮೂಹವೇ ಉಪಸ್ಥಿತವಿದ್ದು, ಕೃಷ್ಣನಾಮದ ಅನುಭೂತಿಯನ್ನು ತನ್ನದಾಗಿಸಿಕೊಂಡಿತು.

ಚೈತನ್ಯರು ಹೇಳಿಕೊಟ್ಟ ಹರಿನಾಮ ಸಂಕೀರ್ತನೆಯು ಲೌಕಿಕ ಜನರಿಗೆ ಅಧ್ಯಾತ್ಮದ ಮಹಾದ್ವಾರವನ್ನು ತೆರೆಯಿತು. ಸಮಾಜದಲ್ಲಿನ ಭೇದಭಾವಗಳು, ಉಚ್ಚ-ನೀಚ ಎಂಬ ತಾರತಮ್ಯಗಳಿಗೆ ಕಡಿವಾಣ ಬಿದ್ದಿತು. ಪ್ರಾಪಂಚಿಕ ಆಸೆ, ಕಾಮನೆಗಳಿಗಾಗಿ ದೇವರ ಪೂಜೆ ಮಾಡುತ್ತಿದ್ದ ಲೌಕಿಕರು ಕೃಷ್ಣನಾಮದ ಸವಿಯನ್ನು ಅರಿತು ಆತ್ಮೋದ್ಧಾರಕ್ಕಾಗಿ ಹರಿನಾಮ ಸಂಕೀರ್ತನೆ ಮಾಡತೊಡಗಿದರು. ಇದು ಖಂಡಿತವಾಗಿಯೂ ಸಾಮಾಜಿಕ ಕ್ರಾಂತಿಯೇ. ಅಧ್ಯಾತ್ಮವನ್ನು ಸರಳವಾಗಿ ಜನರ ಮನೆಬಾಗಿಲಿಗೆ, ಹೃದಯದ ಅಂಗಳಕ್ಕೆ ಹೇಗೆ ತಲುಪಿಸಬೇಕು ಎಂಬ ಕ್ಲಿಷ್ಟ ಪ್ರಶ್ನೆಗೆ ಚೈತನ್ಯ ಮಹಾಪ್ರಭುಗಳ ಹರಿನಾಮ ಸಂಕೀರ್ತನೆ ಉತ್ತರವಾಯಿತು. ಇಂದಿಗೂ ವಿದೇಶಿಗರು ಭಾರತೀಯ ಅಧ್ಯಾತ್ಮ ಸಂಸ್ಕೃತಿಗೆ ಶರಣಾಗುತ್ತಿರುವುದು ಈ ನಾಮಸ್ಮರಣೆಯ ಮಹಿಮೆಯಿಂದಲೇ. ‘ಹರೇ ಕೃಷ್ಣ’ ಹೇಳುತ್ತಲೇ ಮನದ ಶೋಕ ಕಳೆಯುತ್ತದೆ, ಮಡುಗಟ್ಟಿದ ದುಃಖ ನಿವಾರಣೆಯಾಗಿ, ಸಮಾಧಾನದ ಸೆಲೆ ಹುಟ್ಟಿಕೊಳ್ಳುತ್ತದೆ. ಹೃದಯದಲ್ಲಿ ಕಾಣಿಸಿಕೊಂಡ ಆನಂದದ ಅಲೆ, ಮುಖದಲ್ಲಿ ಮಂದಹಾಸವಾಗಿ ಬೆಳಗುತ್ತದೆ. ಜೀವನದ ಉದ್ದೇಶ ಏನು ಎಂಬುದನ್ನು ಅರ್ಥ ಮಾಡಿಸುವ ಜತೆಗೆ, ಬೇಡದ, ಅನರ್ಥ ಚರ್ಚೆ, ವಾಗ್ವಾದ, ಸ್ವಾರ್ಥ, ಚಿಂತೆ, ದುಗುಡಗಳು ದೂರವಾಗುತ್ತವೆ. ಕೃಷ್ಣನಾಮದಿಂದ, ಕೃಷ್ಣಪ್ರಜ್ಞೆಯಿಂದ ಮನುಷ್ಯ ಹರ್ಷಿತನಾಗುತ್ತಾನೆ, ಪುಳಕಿತನಾಗುತ್ತಾನೆ, ಆಂತರ್ಯದೊಂದಿಗೆ ಸಂಪರ್ಕ ಸಾಧಿಸಿ, ಅಧ್ಯಾತ್ಮದ ದಿವ್ಯಸುಧೆಯೊಂದಿಗೆ ಒಂದಾಗುತ್ತಾನೆ. ಜೀವನದಲ್ಲಿ ಮಹತ್ತರ ಪರಿವರ್ತನೆಯ ತಿರುವು ಇದಕ್ಕಿಂತ ಬೇರೊಂದು ಇರಲಾರದು.

ಹಾಗಾಗಿಯೇ, ಚೈತನ್ಯ ಮಹಾಪ್ರಭುಗಳು ಮತ್ತು ಅವರ ಕೊಡುಗೆಗಳನ್ನು ಸ್ಮರಿಸಿಕೊಂಡರೆ ನಮ್ಮ ಭಾವ ಅಧ್ಯಾತ್ಮಚೇತನದಿಂದ ಆವರಿಸಿಕೊಳ್ಳುತ್ತದೆ, ಮನಸ್ಸು ಜೀವನದ ಗಮ್ಯದೆಡೆಗೆ ಮುಖ ಮಾಡುತ್ತದೆ. ಚೈತನ್ಯರು ಮಹಾಜಡತ್ವವನ್ನು ಕಳೆದರು, ಮೂಢತೆಯ ಕತ್ತಲನ್ನು ಹೊಗಲಾಡಿಸಿದರು. ನಾಮಾಮೃತದ ಸವಿಯನ್ನು ಹಂಚಿದರು. ಆದ್ದರಿಂದಲೇ, ಚೈತನ್ಯರನ್ನು, ಅವರ ಬದುಕನ್ನು, ತತ್ತ ್ವಳನ್ನು, ಭಕ್ತಿವೇದಾಂತವನ್ನು ತಿಳಿದುಕೊಳ್ಳಬೇಕೆಂಬ ಜಿಜ್ಞಾಸುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಬಂಗಾಳಿ, ಸಂಸ್ಕೃತ ಮತ್ತು ಆಂಗ್ಲ ಭಾಷೆಗೆ ಸೀಮಿತವಾಗಿದ್ದ ಚೈತನ್ಯರ ಬಗೆಗಿನ ಸಾಹಿತ್ಯವನ್ನು ಕನ್ನಡಕ್ಕೆ ತರುವಲ್ಲಿ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ಬೆಂಗಳೂರು ಗಮನಾರ್ಹ ಕೆಲಸ ಮಾಡಿದೆ. ಈ ನಿಟ್ಟಿನಲ್ಲಿ 2024ರಲ್ಲಿ ಪ್ರಕಟವಾಗಿರುವ ಶ್ರೀ ಚೈತನ್ಯ ಮಹಾಪ್ರಭುಗಳ ಜೀವನಾಧರಿತ ಕಾದಂಬರಿ ‘ವಿಶ್ವಂಭರ’ ಮಹತ್ವದ್ದಾಗಿದೆ. ಹಿರಿಯ ಸಾಹಿತಿ, ಕಾದಂಬರಿಕಾರರಾದ ಡಾ.ನಾ.ಮೊಗಸಾಲೆಯವರು 640 ಪುಟಗಳ ಈ ಬೃಹತ್ ಕಾದಂಬರಿಯನ್ನು ರಚಿಸಿದ್ದಾರೆ. ಇದರಲ್ಲಿ ಚೈತನ್ಯ ಮಹಾಪ್ರಭು ಗಳ ಜೀವನದರ್ಶನವು ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆಯಾಮಗಳೊಂದಿಗೆ ಬೆಸೆದುಕೊಂಡಿದೆ. ಭಕ್ತಿಯ ಭಾವ ಎಷ್ಟು ಎತ್ತರದಲ್ಲಿ ಇರಬೇಕು, ಕೃಷ್ಣನನ್ನು ಸಖನಾಗಿ, ಭಗವಂತನಾಗಿ ಹೇಗೆ ನಮ್ಮ ಬದುಕಿಗೆ ಬರಮಾಡಿಕೊಳ್ಳಬೇಕು ಎಂಬುದಕ್ಕೆ ಚೈತನ್ಯ ಮಹಾಪ್ರಭುಗಳ ಬದುಕು ಮತ್ತು ಅವರ ಸಂದೇಶ ಹಾಗೂ ಅವರು ಹಾಕಿಕೊಟ್ಟ ಹರಿನಾಮ ಸಂಕೀರ್ತನೆ ಎಂದೆಂದಿಗೂ ಬತ್ತದ ಭರವಸೆಯ ಬೆಳಕು. ಚೈತನ್ಯರ ಮೂಲಕ ಕೃಷ್ಣಲೋಕವನ್ನು ಕಾಣುವ, ಆ ಭಾವಲೋಕವನ್ನು ನಮ್ಮದಾಗಿಸಿ ಕೊಳ್ಳುವ ಪರಿಯೇ ಅನನ್ಯ. ಬದುಕಿನಲ್ಲಿ ಏನೇ ಕಷ್ಟ, ದುಃಖ, ನೋವು ಬರಲಿ ಕೃಷ್ಣನ ನಾಮಬಲ ನಮ್ಮೊಂದಿಗಿದೆ ಎಂದರಿತರೆ ಎಲ್ಲ ತಲ್ಲಣಗಳಿಂದ ಮುಕ್ತಿ. ಅದಕ್ಕೆ ‘ಹರೇ ಕೃಷ್ಣ’ ನಮ್ಮ ಬದುಕನ್ನು ಆವರಿಸಿಕೊಳ್ಳಲಿ. ಮತ್ತೊಮ್ಮೆ ಭಕ್ತಿಮಾರ್ಗವು ವಿಜೃಂಭಿಸಲಿ.

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net