ಟೆಕ್ಕಿಗಳ ಅಮೆರಿಕ ಕನಸಿಗೆ ಕೊಳ್ಳಿ

american-dream
american-dream
Published on
ಬೆಂಕಿ ಬಸಣ್ಣ, ನ್ಯೂಯಾರ್ಕ್​
ಇಷ್ಟು ವರ್ಷಗಳವರೆಗೆ ನವೆಂಬರ್​&ಡಿಸೆಂಬರ್​ ತಿಂಗಳು ಬಂದರೆ ಅಮೆರಿಕದಲ್ಲಿರುವ ಭಾರತೀಯರಿಗೆ ಸ್ವದೇಶಕ್ಕೆ ಹೋಗಿ ಕ್ರಿಸ್​ಮಸ್​ ರಜೆಯನ್ನು ತಮ್ಮ ಸಂಬಂಧಿಕರೊಂದಿಗೆ ಖುಷಿಯಿಂದ ಕಳೆದು ಮರಳಿ ಬರುವ ಸಮಯವಾಗಿತ್ತು. ಆದರೆ ಈ ವರ್ಷದ ಕ್ರಿಸ್​ಮಸ್​ ರಜೆ ಅವರಿಗೆಲ್ಲ ಶಾಪವಾಗಿ ಪರಿಣಮಿಸಿದೆ. ಕಾರಣ, ಎಚ್​1ಬಿ ಮತ್ತು ಎಚ್​4 ವೀಸಾ ಸಂದರ್ಶನಗಳಿಗೆ ಅಮೆರಿಕ ಸರ್ಕಾರ ಜಾರಿಗೆ ತಂದಿರುವ ಹೊಸ "ಸೋಷಿಯಲ್​ ಮೀಡಿಯಾ ವೆಟ್ಟಿಂಗ್​' ನಿಯಮ.
ಈ ಹೊಸ ನಿಯಮದ ಪ್ರಕಾರ ಎಚ್​1ಬಿ ವೀಸಾಗೆ ಹೋಗುವವರು ಕಡ್ಡಾಯವಾಗಿ ತಮ್ಮ ಸೋಷಿಯಲ್​ ಮೀಡಿಯಾ ಪ್ರೊಫೈಲ್​ಗಳನ್ನು ಅಂದರೆ ಫೇಸ್​ಬುಕ್​, ಇನ್​ಸ್ಟಾಗ್ರಾಮ್​, ಎಕ್ಸ್​, ಟಿಕ್​ಟಾಕ್​ ಮುಂತಾದ ಅಕೌಂಟ್​ಗಳಲ್ಲಿರುವ ಪ್ರೈವೆಸಿ ಸೆಟ್ಟಿಂಗ್​ಅನ್ನು "ಪಬ್ಲಿಕ್​' ಮಾಡಿಡಬೇಕು. ಅದರಲ್ಲಿ ಮೂಡಿರುವ ಅಭ್ಯರ್ಥಿಗಳ ಸೋಷಿಯಲ್​ ಮೀಡಿಯಾ ಜಗತ್ತಿನ ಫುಟ್​ ಪ್ರಿಂಟ್​ಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಅಮೆರಿಕ ಸರ್ಕಾರದ ವಿರುದ್ಧ ಅಥವಾ ಅಮೆರಿಕದ ಹಿತಾಸಕ್ತಿಯ ವಿರುದ್ಧ ಯಾವುದೋ ಸಂದರ್ಭದಲ್ಲಿ ಪೋಸ್ಟ್​ಗಳನ್ನು ಹಾಕಿದ, ಕಮೆಂಟ್​ ಮಾಡಿದ ಅಭ್ಯರ್ಥಿಗಳಿಗೆ ವೀಸಾ ಸಿಗುವುದು ಇನ್ನು ಮುಂದೆ ತುಂಬಾ ಕಷ್ಟ. ಅಭ್ಯರ್ಥಿಗಳ ಸೋಷಿಯಲ್​ ಮೀಡಿಯಾ ಪರಿಶೀಲನೆಗೆ ತುಂಬಾ ಸಮಯ ಬೇಕಾಗಿರುವುದರಿಂದ ವೀಸಾ ಅಪಾಯಿಂಟ್​ಮೆಂಟ್​ ದಿನಾಂಕಗಳನ್ನು ಹಲವಾರು ತಿಂಗಳುಗಳ ಕಾಲ ಮುಂದೂಡಲಾಗಿದೆ.

ತಕ್ಷಣದ ಜಾರಿ, ಸಂಕಷ್ಟಗಳ ಸರಮಾಲ

ಟ್ರಂಪ್​ ಆಡಳಿತ ಈ ಹೊಸ ನಿಯಮವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿರುವುದರಿಂದ ಅಮೆರಿಕದಲ್ಲಿರುವ ಸಾಫ್ಟ್​ವೇರ್​ ಇಂಜಿನಿಯರುಗಳಿಗೆ ಬಹಳಷ್ಟು ಅನಿರೀಕ್ಷಿತ ಸಂಕಷ್ಟಗಳು ಎದುರಾಗಿವೆ. ಭಾರತಕ್ಕೆ ರಜೆಗೆ ಹೋದ ಸಾಫ್ಟ್​ವೇರ್​ ಇಂಜಿನಿಯರ್​ಗಳ ಡಿಸೆಂಬರ್​ನಲ್ಲಿದ್ದ ವೀಸಾ ಅಪಾಯಿಂಟ್​ಮೆಂಟ್​ಗಳು ಮುಂದಿನ ವರ್ಷದ ಮಧ್ಯ ಅಥವಾ ಕೊನೆಯ ಭಾಗಕ್ಕೆ ಮುಂದೂಡಲ್ಪಟ್ಟಿವೆ. ಕೆಲವರದ್ದು ನಾಲ್ಕು ತಿಂಗಳು ಮುಂದೂಡಲ್ಪಟ್ಟಿದ್ದರೆ, ಮತ್ತೆ ಕೆಲವರದ್ದು 10&11 ತಿಂಗಳುಗಳ ಕಾಲ ಮುಂದಕ್ಕೆ ಹೋಗಿವೆ. ಈಗ ಅವರು ಅಮೆರಿಕಕ್ಕೆ ವಾಪಸ್​ ಬರಲು ಸಾಧ್ಯವಾಗದ ಕಾರಣ ಈವರೆಗೆ ಮಾಡುತ್ತಿದ್ದ ಉದ್ಯೋಗವನ್ನೇ ಕಳೆದುಕೊಳ್ಳುವ ಭಯ ಎದುರಾಗಿದೆ. ಅಷ್ಟು ದೀರ್ ಕಾಲ ರಿಮೋಟ್​ ವರ್ಕಿಂಗ್​ಗೆ ಅವಕಾಶ ಕೊಡುವುದಕ್ಕೆ ಅಂತಾರಾಷ್ಟ್ರೀಯ ಕಾನೂನಿನಲ್ಲಿ ಹಲವಾರು ತೊಡಕುಗಳಿವೆ. ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ಅವರು ಅಮೆರಿಕದಲ್ಲಿರುವ ತಮ್ಮ ಗೃಹ ಸಾಲದ, ಕಾರುಗಳ ಸಾಲದ ಮಾಸಿಕ ಕಂತುಗಳನ್ನು (ಇಎಂಐ) ಹೇಗೆ ಕಟ್ಟಬೇಕು ಎಂಬ ಚಿಂತೆಯಲ್ಲಿದ್ದಾರೆ. ಇನ್ನು ಕೆಲವು ಪ್ರಕರಣಗಳಲ್ಲಿ ಗಂಡ ಒಬ್ಬನೇ ಭಾರತಕ್ಕೆ ಬಂದು ಸಿಕ್ಕಿ ಹಾಕಿಕೊಂಡಿದ್ದು, ಹೆಂಡತಿ ಮತ್ತು ಮಕ್ಕಳು ಅಮೆರಿಕದಲ್ಲಿ ಪರದಾಡುತ್ತಿದ್ದಾರೆ. ಈ ಹೊಸ ನಿಯಮ ಬರುತ್ತಿದ್ದಂತೆ, ಇನ್ನೂ ವೀಸಾ ಮಾನ್ಯತೆ ಇದ್ದವರು ತಮ್ಮ ರಜೆಗಳನ್ನು ಮೊಟಕುಗೊಳಿಸಿ ಮರಳಿ ಅಮೆರಿಕಕ್ಕೆ ಧಾವಿಸಿದ್ದಾರೆ. ಭಾರತಕ್ಕೆ ಹೋಗಿ ರಜೆ ಕಳೆಯಬೇಕೆಂದು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡವರು ಕೊನೆಯ ಗಳಿಗೆಯಲ್ಲಿ ತಮ್ಮ ವಿಮಾನ ಪ್ರಯಾಣದ ಟಿಕೆಟ್​ ಕ್ಯಾನ್ಸಲ್​ ಮಾಡಿ ಬಹಳಷ್ಟು ಹಣ ಕಳೆದುಕೊಂಡಿರುವ ಉದಾಹರಣೆಗಳೂ ಸಾಕಷ್ಟಿವೆ.

ದಿಗ್ಗಜ ಕಂಪನಿಗಳಿಂದ ಟೆಕ್ಕಿಗಳಿಗೆ ಸೂಚನೆ

ಟ್ರಂಪ್​ ಸರ್ಕಾರ ತರುತ್ತಿರುವ ದಿನಕ್ಕೊಂದು ವಿಚಿತ್ರ ಹೊಸ ನಿಯಮಗಳಿಂದ ಸಾಫ್ಟ್​ವೇರ್ ಇಂಜಿನಿಯರ್​ಗಳ ಪರಿಸ್ಥಿತಿ ತ್ರಿಶಂಕು ಸ್ಥಿತಿ ಆಗಿದೆ. ಎಲ್ಲರಲ್ಲಿಯೂ ಅನಿಶ್ಚಿತತೆಯ, ಭವಿಷ್ಯದ ಭಯದ ವಾತಾವರಣ ಕಾಣುತ್ತಿದೆ. ಅಮೆರಿಕದಲ್ಲಿರುವ ದಿಗ್ಗಜ ಕಂಪನಿಗಳಾದ ಗೂಗಲ್​, ಮೈಕ್ರೋಸಾಫ್ಟ್​, ಆ್ಯಪಲ್​ ಮುಂತಾದವು ತಮ್ಮ ಎಚ್​1ಬಿ ಉದ್ಯೋಗಿಗಳಿಗೆ ಭಾರತದ ಪ್ರಯಾಣವನ್ನು ಮುಂದೂಡಬೇಕೆಂದು ಈಗಾಗಲೇ ಸೂಚನೆ ಕೊಟ್ಟಿವೆ.

ಎಚ್​1 ಬಿ ವೀಸಾ ಅವಧಿ

ಒಮ್ಮೆ ನೀಡಿದ ಎಚ್​1 ಬಿ ವೀಸಾ ಅವಧಿ ಸಾಮಾನ್ಯವಾಗಿ 3 ವರ್ಷಗಳವರೆಗೆ ಇರುತ್ತದೆ. ಈ ಅವಧಿಯನ್ನು ವಿಸ್ತರಿಸಬಹುದಾದರೂ ಅದು 6ವರ್ಷಗಳನ್ನು ಮೀರುವಂತಿಲ್ಲ. ಅಧಿಕೃತ ವಾಸ್ತವ್ಯದ ಅಂತ್ಯದ ಮೊದಲು ಉದ್ಯೋಗವನ್ನು ಕೊನೆಗೊಳಿಸಿದರೆ, ಉದ್ಯೋಗದಾತರು ಮತ್ತು ಪ್ರಾಯೋಜಕರು ಹಿಂದಿರುಗುವ ಸಾರಿಗೆ ವೆಚ್ಚ ಭರಿಸಬೇಕಾಗುತ್ತದೆ. ಒಂದು ವೇಳೆ ಎಚ್​1 ಬಿ ವೀಸಾದಲ್ಲಿರುವ ವಿದೇಶಿ ಉದ್ಯೋಗಿ ರಾಜೀನಾಮೆ ನೀಡಿದರೆ ಅಥವಾ ಉದ್ಯೋಗ ಕಳೆದುಕೊಂಡರೆ ಅಂಥವರಿಗೆ 60 ದಿನಗಳ ಗ್ರೇಸ್​ ಅವಧಿಯಲ್ಲಿ ಎರಡು ಆಯ್ಕೆ ಇರುತ್ತದೆ. ಅವರು ಮತ್ತೊಂದು ವಲಸೆರಹಿತ ಸ್ಥಾನಮಾನಕ್ಕೆ ಅರ್ಜಿ ಸಲ್ಲಿಸಬೇಕು ಮತ್ತು ಸ್ಥಾನಮಾನವನ್ನು ಬದಲಾಯಿಸಬೇಕು ಅಥವಾ ಬೇರೆ ಉದ್ಯೋಗದಾತರನ್ನು ಹುಡುಕಿಕೊಳ್ಳಬೇಕು ಇಲ್ಲವೇ ಆ ದೇಶವನ್ನು ತೊರೆಯಬೇಕು.

ಈಗಂತೂ ಅದೃಷ್ಟ ಬೇಕು!

ಇತ್ತೀಚಿನವರೆಗೂ ಎಚ್​1 ಬಿ ವೀಸಾ ಪಡೆಯಲು ಕಾನೂನು, ಫೈಲಿಂಗ್​ ಮತ್ತು ಸಂಸ್ಕರಣಾ ಶುಲ್ಕಗಳನ್ನು ಅವಲಂಬಿಸಿ $900ರಿಂದ 5 ಸಾವಿರ ಡಾಲರ್​ ಅಂದರೆ ಸುಮಾರು 78 ಸಾವಿರದಿಂದ 4.3 ಲಕ್ಷ ರೂ.ವರೆಗೆ ಖರ್ಚಾಗುತ್ತಿತ್ತು. ಇವುಗಳಲ್ಲಿ ಹೆಚ್ಚಿನವು ಉದ್ಯೋಗದಾತರಿಂದ ಭರಿಸಲ್ಪಡುತ್ತಿದ್ದವು. ಆದರೆ ಇತ್ತೀಚೆಗೆ ಎಚ್​1 ಬಿ ವೀಸಾ ನೀಡಿಕೆಗೆ ಬದಲಾವಣೆ ತರಲಾಗಿದ್ದು, ಲಾಟರಿ ಪದ್ಧತಿ ಅಳವಡಿಸಲಾಗಿದೆ. ಹೀಗಾಗಿ ಈ ವರ್ಷದ ಸೆಪ್ಟೆಂಬರ್​ 21ರ ನಂತರ ಸಲ್ಲಿಸಲಾದ ಪ್ರತಿಯೊಂದು ಹೊಸ ಎಚ್​1 ಬಿ ವೀಸಾ ಅರ್ಜಿ ಜತೆ $1 ಲಕ್ಷ ಡಾಲರ್​ (ಅಂದಾಜು 83 ಲಕ್ಷ ರೂ.) ಶುಲ್ಕ ಪಾವತಿಸಬೇಕು. ಹೀಗಾಗಿ ಇದೀಗ ವೀಸಾ ಸಿಗುವುದಕ್ಕೆ ಭಾರಿ ಮೊತ್ತ ಮಾತ್ರವಲ್ಲ, ಅಪರಿಮಿತ ಅದೃಷ್ಟವೂ ಇರಬೇಕು ಎಂಬಂತಾಗಿದೆ.

ಸರಸ್ವತಿ ಬೇಕಿಲ್ಲ ಲಕ್ಷ್ಮೀ ಇದ್ದರೆ ಸಾವು!

ಅವಶ್ಯಕತೆ ಬಂದರೆ ಅನುಮಾನಾಸ್ಪದ ವ್ಯಕ್ತಿಗಳಿಗೆ ಈಗಾಗಲೇ ಕೊಟ್ಟಿರುವ ಗ್ರೀನ್​ ಕಾರ್ಡ್​ಗಳನ್ನು ಮತ್ತು ಪೌರತ್ವವನ್ನು (ಸಿಟಿಜನ್​ ಶಿಪ್​) ಕೂಡ ರದ್ದು ಮಾಡಬೇಕೆಂದು ಟ್ರಂಪ್​ ಸರ್ಕಾರ ಚಿಂತನೆ ಮಾಡುತ್ತಿದೆ. ಇದರಿಂದ ಭಾರತೀಯರ ವಲಯದಲ್ಲಿ ಭಾರಿ ಸಂಚಲನ ಉಂಟಾಗಿದೆ. ಮುಂದಿನ ವರ್ಷದಿಂದ ಹೊಸ ಎಚ್​1ಬಿ ವೀಸಾಗಳಿಗೆ ಅನ್ವಯವಾಗುವಂತೆ ಘೋಷಿಸಿರುವ ಒಂದು ಲಕ್ಷ ಡಾಲರ್​ (ಸುಮಾರು 90 ಲಕ್ಷ ರೂಪಾಯಿ) ಶುಲ್ಕದಿಂದಾಗಿ ಭಾರತದಲ್ಲಿರುವ ಸಾಫ್ಟ್​ವೇರ್ ಇಂಜಿನಿಯರ್​ಗಳಿಗೆ "ಅಮೆರಿಕ ಕನಸು' ಇನ್ನು ಮುಂದೆ ಕನಸಾಗಿಯೇ ಉಳಿಯುವ ಸಾಧ್ಯತೆ ಇದೆ. ಒಂದು ಮಿಲಿಯನ್​ ಡಾಲರ್​ (ಸುಮಾರು 9 ಕೋಟಿ ರೂಪಾಯಿ) ಹಣವನ್ನು ಅಮೆರಿಕದಲ್ಲಿ ಹೂಡಿಕೆ ಮಾಡುವವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ರ ಗೋಲ್ಡ್​ ಕಾರ್ಡ್​ (ಅಂದರೆ ಶ್ರೀಮಂತರ ಗ್ರೀನ್​ ಕಾರ್ಡ್​) ಅತಿ ಸುಲಭವಾಗಿ ಸಿಗಲಿದೆ. ಇನ್ಮುಂದೆ ಅಮೆರಿಕಕ್ಕೆ ಬರಲು ನಿಮಗೆ ಪ್ರತಿಭೆ (ಸರಸ್ವತಿ) ಇರುವ ಅವಶ್ಯಕತೆ ಇಲ್ಲ , ಬರೀ ದುಡ್ಡು (ಲಕ್ಷ್ಮೀ) ಇದ್ದರೆ ಸಾಕು. ಇಷ್ಟು ವರ್ಷಗಳ ಕಾಲ ದುಡ್ಡು ಗಳಿಸಲು ಅಮೆರಿಕಕ್ಕೆ ಹೋಗುತ್ತಿದ್ದವರು ಇನ್ನು ಮುಂದೆ ದುಡ್ಡು ಕೊಟ್ಟು ಅಮೆರಿಕಕ್ಕೆ ಹೋಗಬೇಕು, ಎಂತಹ ವಿಚಿತ್ರ

ಶೇ. 70 ಭಾರತೀಯರು

ಇತ್ತೀಚಿನ ಮಾಹಿತಿ ಪ್ರಕಾರ ಅಮೆರಿಕದಲ್ಲಿ ಎಚ್​1ಬಿ ವೀಸಾ ಹೊಂದಿರುವ ಒಟ್ಟು ವಿದೇಶಿಗರ ಸಂಖ್ಯೆ ಅಂದಾಜು 7.3 ಲಕ್ಷ. ಆ ಪೈಕಿ ಶೇ. 70ರಷ್ಟು ಮಂದಿ ಅಂದರೆ 5.11 ಲಕ್ಷದಷ್ಟು ಜನ ಭಾರತೀಯರು. ಜತೆಗೆ ಎಚ್​1ಬಿ ಹೊಂದಿರುವ ಉದ್ಯೋಗಿಗಳ ಸಂಗಾತಿಗಳು ಹಾಗೂ ಅವರ 21 ವರ್ಷದ ಒಳಗಿನ ಅವಿವಾಹಿತ ಮಕ್ಕಳಿಗೆ ನೀಡಲಾದ ಎಚ್​&4 ವೀಸಾಗಳು ಸುಮಾರು 5 ಲಕ್ಷದಷ್ಟಿವೆ.

ಏನಿದು ಎಚ್​1ಬಿ ವೀಸಾ?

ಅಮೆರಿಕದಲ್ಲಿರುವ ಕಂಪನಿಗಳಿಗೆ ಹೆಚ್ಚು ವಿಶೇಷವಾದ ಜ್ಞಾನದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅನ್ವಯದ ಅಗತ್ಯವಿರುವ ವೃತ್ತಿಗಳಲ್ಲಿ ವಿದೇಶಿ ಕಾರ್ಮಿಕರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಅನುವು ಮಾಡಿಕೊಡುವುದಕ್ಕಾಗಿ ನೀಡುವಂಥದ್ದೇ ಎಚ್​1ಬಿ ವೀಸಾ.

ಯಾರು ಅರ್ಜಿ ಸಲ್ಲಿಸಬಹುದು?

ಎಚ್​1 ಬಿ ವೀಸಾಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿಶೇಷ ಕ್ಷೇತ್ರದಲ್ಲಿ ಸ್ನಾತಕ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು. ಎಚ್​1 ಬಿ ಉದ್ಯೋಗಗಳಲ್ಲಿ ವಿಜ್ಞಾನ, ಇಂಜಿನಿಯರಿಂಗ್​, ಉನ್ನತ ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನದಂಥ ಕ್ಷೇತ್ರಗಳು ಸೇರಿವೆ. ಅಮೆರಿಕ ಭಾರತಕ್ಕೆ ಒಂದು ವರ್ಷದಲ್ಲಿ ಸುಮಾರು 85 ಸಾವಿರ ಎಚ್​1 ಬಿ ವೀಸಾಗಳನ್ನು ನೀಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net