ಸನಾತನ ಭೂಮಿಯಲ್ಲಿ ಬಾಳುತ್ತಿರುವ ನಾವೇ ಧನ್ಯರು!

ವಿಜಯವಾಣಿ (1)
Published on

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

ಬದುಕಿನಲ್ಲಿ ಕಷ್ಟ, ನಷ್ಟ, ನೋವುಗಳನ್ನುಂಡಾಗ ಮಾತ್ರ ಸುಂದರವಾದ ಬದುಕನ್ನು ಹೊಂದಲು ಸಾಧ್ಯ. ನಮಗೆ ಯಾವಾಗ ಏನು ಕೊಡಬೇಕು, ಹೇಗೆ ಕೊಡಬೇಕು ಎಂದು ಭಗವಂತನಿಗೆ ಚೆನ್ನಾಗಿ ತಿಳಿದಿದೆ ಎಂಬ ಭಾವನೆಯಿಂದ ಫಲವನ್ನು ನಿರೀಕ್ಷೆ ಮಾಡದೆ ನಾವು ನಮ್ಮ ನಮ್ಮ ಕರ್ಮಗಳನ್ನು ಮಾಡುತ್ತ ಮುಂದುವರಿಯಬೇಕು. ಭಗವಂತನಲ್ಲಿ ಭಕ್ತಿ ಸ್ಥಿರವಾಗಿರಬೇಕು.

ಈ ಜಗತ್ತು ಮುನ್ನಡೆಯುತ್ತಿರುವುದು ನಂಬಿಕೆಯ ತಳಹದಿ ಮೇಲೆ. ಹುಟ್ಟಿನಿಂದ ನಾವೆಲ್ಲ ಬೆಳೆದು ಬರುವ ಕುಟುಂಬ, ಮನೆ, ಸಮಾಜಗಳ ಪರಿಸರ, ಲೋಕಜ್ಞಾನ ಇತ್ಯಾದಿಗಳೆಲ್ಲವೂ ವ್ಯಕ್ತಿಯ ನಂಬಿಕೆಯನ್ನು ರೂಪುಗೊಳಿಸುವಂಥ ವಿಷಯಗಳಾಗಿವೆ. ನಂಬಿಕೆಯು ನಾನಾ ರೀತಿಯಲ್ಲಿ ಅಭಿವ್ಯಕ್ತವಾಗುತ್ತವೆ. ನಂಬಿಕೆ ಎಷ್ಟು ಇದೆಯೋ ಅಷ್ಟೇ ಅರೆ ನಂಬಿಕೆ ಮತ್ತು ಅಪನಂಬಿಕೆಗಳೂ ಇವೆ. ಉದಾಹರಣೆಗೆ ‘ದೇವರು ಇದ್ದಾನೆ’ ಎಂದು ನಂಬುವವರು ಒಂದು ಕಡೆಯಾದರೆ ‘ದೇವರು ಇಲ್ಲ’ ಎಂದು ಹೇಳುವವರು ಇನ್ನೊಂದು ಕಡೆ. ಇನ್ನು ಕೆಲವರು ‘ದೇವರು ಇರಲೂ ಬಹುದು, ಇಲ್ಲದಿರಲೂಬಹುದು’ ಎಂದು ಅರೆ ನಂಬಿಕೆಯನ್ನು ಹೊಂದುತ್ತಾರೆ. ಹೀಗೆ ಅವರವರ ಆಲೋಚನೆ, ಭಾವಕ್ಕೆ ತಕ್ಕಂತೆ ನಂಬುಗೆಯನ್ನು ಹೊಂದುತ್ತಾರೆ. ನಂಬಿಕೆಗೆ ಭಕ್ತಿ ಸೇರಿದಾಗ ಅದು ಅಧ್ಯಾತ್ಮ ಮಾರ್ಗದಲ್ಲಿ ಸಾಗುತ್ತದೆ.

ನಮ್ಮ ಸನಾತನ ಧರ್ಮವು ನಂಬಿಕೆಗಳ ಆಗರವೇ ಆಗಿದೆ. ದೇವರು ಇದ್ದಾನೆ ಎಂಬ ವಿಚಾರದಿಂದ ಒಳಗೊಂಡು ನಮ್ಮೊಳಗೂ ದೇವರಿದ್ದಾನೆ ಎಂದು ನಂಬುತ್ತೇವೆ. ಇಡೀ ಪ್ರಪಂಚವೇ ದೇವರ ಸೃಷಿ ಎನ್ನುತ್ತ ಅದರ ಅಣು-ಅಣುಗಳಲ್ಲಿಯೂ ದೇವರನ್ನು ಕಾಣುವವರು ನಾವು. ಹೀಗಿರುವಾಗ ದೇವರಿಗೆ ದೇವಸ್ಥಾನ ನಿರ್ವಿುಸಿ, ಗರ್ಭಗುಡಿಯಲ್ಲಿಟ್ಟು ಪೂಜಿಸುವುದು ಏಕೆ ಎಂಬ ಭಾವ ಕೆಲವರನ್ನಾದರೂ ಕಾಡದೇ ಇರದು. ದೇವರು ಸರ್ವಾಂತರ್ಯಾಮಿಯಾದರೂ, ದೇವರನ್ನು ಕಂಡುಕೊಳ್ಳಲು, ಭಕ್ತಿಯ ಅನುಭೂತಿ ಹೊಂದಲು ಇರುವ ಸುಲಭ ಮಾರ್ಗವೆಂದರೆ ಶ್ರದ್ಧಾಕೇಂದ್ರಗಳೇ ಆಗಿವೆ. ನಮ್ಮ ಸುತ್ತಮುತ್ತಲೂ ರೇಡಿಯೋ ತರಂಗಗಳು ಸದಾ ಹರಿದಾಡುತ್ತಲೇ ಇರುತ್ತವೆ. ಅವುಗಳ ಇರುವಿಕೆಯ ಬಗ್ಗೆ ಒಂಚೂರು ಅರಿವಾಗುವುದಿಲ್ಲ. ತಾಂತ್ರಿಕ ಉಪಕರಣಗಳ ಮೂಲಕ ಮಾತ್ರ ಅವುಗಳ ಇರುವಿಕೆಯನ್ನು ಗ್ರಹಿಸಬಹುದು. ಆದರೆ ರೇಡಿಯೋ ಚಾಲೂ ಮಾಡಿದಾಗ ರೇಡಿಯೋ ತರಂಗಗಳು ಟ್ರಾನ್ಸಿಸ್ಟರ್ ಮೂಲಕ ಪರಿವರ್ತನೆಗೊಂಡು ಸಂದೇಶಗಳನ್ನು ಪಡೆಯಬಹುದಾಗಿದೆ. ಕಾರ್ಯಕ್ರಮಗಳನ್ನು ಕೇಳಬಹುದಾಗಿದೆ.

ರೇಡಿಯೋ ಮಾತ್ರವಲ್ಲದೆ ಟಿ.ವಿ., ಮೊಬೈಲ್ ಫೋನ್ ನೆಟ್​ವರ್ಕ್ ಎಲ್ಲವೂ ಇದೇ ರೀತಿಯಾಗಿ ಕಾರ್ಯ ನಿರ್ವಹಿಸುವಂಥದ್ದು. ಹಾಗೆಯೇ ಪ್ರಕೃತಿಯಲ್ಲಿರುವ ಭಗವಂತನ ಇರುವಿಕೆಯನ್ನು ಕಂಡುಕೊಳ್ಳಲು ದೇವಸ್ಥಾನಗಳು ಟ್ರಾನ್ಸಿಸ್ಟರ್​ನಂತೆ ಕಾರ್ಯ ನಿರ್ವಹಿಸುತ್ತವೆ ಎನ್ನಬಹುದು. ಹೇಗೆಂದರೆ ದೇವಾಲಯದಲ್ಲಿ ಶಾಸ್ತ್ರೆೊಕ್ತವಾಗಿ ಭಗವಾನ್ ಸಾನಿಧ್ಯವನ್ನು ನೆಲೆಗೊಳಿಸಿ ನಿತ್ಯಪೂಜೆ, ವಿಶೇಷ ಪೂಜೆಗಳಲ್ಲದೆ 12 ವರ್ಷಗಳಿಗೊಮ್ಮೆ ಬ್ರಹ್ಮಕಲಶಾಭಿಷೇಕ ಮಾಡಲಾಗುತ್ತದೆ. ಆ ಮೂಲಕ ದೇವಾಲಯದಲ್ಲಿ ಸಾನ್ನಿಧ್ಯ ಶಕ್ತಿಯು ಸದಾ ಜಾಗೃತಿಯಿಂದ ಇರುವಂತೆ ನೋಡಿಕೊಳ್ಳಲಾಗುತ್ತದೆ. ಇಷ್ಟು ಮಾಡಿದರೆ ಸಾಲದು. ಭಕ್ತರು ಹೆಚ್ಚು ಹೆಚ್ಚು ಭೇಟಿ ನೀಡಿ ಪೂಜೆ-ಪುನಸ್ಕಾರ, ಧಾರ್ವಿುಕ ಕಾರ್ಯಗಳಲ್ಲಿ ತೊಡಗಿಕೊಂಡಷ್ಟು ಗುಡಿ, ಮಂದಿರ, ದೇವಸ್ಥಾನಗಳ ಸಾನ್ನಿಧ್ಯ ವೃದ್ಧಿಯಾಗಿ ಊರಿಗೆ, ನಾಡಿಗೆ ಒಳಿತಾಗುವುದು.

ಬಹುಶಃ ದೇವಸ್ಥಾನಕ್ಕೆ ಭೇಟಿ ನೀಡುವವರ ಅನುಭವಕ್ಕೆ ಬಂದಿರಬಹುದು. ಮನದಲ್ಲಿ ಅದೆಷ್ಟೇ ದುಃಖ, ನೋವು, ಹತಾಶೆ, ಕಷ್ಟ, ನಷ್ಟಗಳಿರಲಿ ದೇವಸ್ಥಾನಕ್ಕೆ ಹೋಗಿ ದೇವರ ಬಳಿ ಎಲ್ಲ ನಿವೇದಿಸಿಕೊಂಡರೆ ಸಾಕು ಮನಸ್ಸಿಗೆ ನೆಮ್ಮದಿಯಾಗುತ್ತದೆ. ತಲೆಯ ಮೇಲಿದ್ದ ಭಾರವೆಲ್ಲ ಕಡಿಮೆಯಾದಂತೆ ಭಾಸವಾಗುತ್ತದೆ. ಯಾಕೆಂದರೆ ನಮ್ಮೆಲ್ಲ ಕಷ್ಟ-ನಷ್ಟಗಳನ್ನು ಪರಿಹರಿಸಲು ಭಗವಂತನಿದ್ದಾನೆ ಎಂಬ ನಂಬಿಕೆ. ಇನ್ನೂ ಮುಂದುವರಿದು ಕಷ್ಟಗಳೆಲ್ಲ ಪರಿಹಾರವಾದರೆ ಮುಡಿ ಕೊಡುತ್ತೇನೆ, ಸೇವೆ ಮಾಡುತ್ತೇನೆ ಎಂಬಿತ್ಯಾದಿಯಾಗಿ ಹರಕೆಯನ್ನು ಹೇಳಿಕೊಳ್ಳುವವರೂ ಇದ್ದಾರೆ. ಇನ್ನು ಕೆಲವರು ನಮಗೆ ದೇವರು ಸಾಕಷ್ಟು ಕರುಣಿಸಿದ್ದಾನೆ. ಹಾಗಾಗಿ ನಮ್ಮಿಂದಾಗುವ ಭಕ್ತಿಯ ಕಾಣಿಕೆ ಎಂದು ದೇವಸ್ಥಾನಗಳಿಗೆ ಅಥವಾ ಸಾರ್ವಜನಿಕವಾಗಿ ದಾನ ಧರ್ಮಾದಿ ಕಾರ್ಯಗಳನ್ನು ನಡೆಸುತ್ತಾರೆ.

ಇದೀಗ ಮಹಾ ಶಿವರಾತ್ರಿಯ ಪರ್ವಕಾಲ. ಜಗತ್ತಿನಾದ್ಯಂತ ಇರುವ ಶಿವನ ಆರಾಧಕರು ಈಶ್ವರನನ್ನು ವಿಶೇಷವಾಗಿ ಪೂಜಿಸುತ್ತಾರೆ, ಆರಾಧಿಸುತ್ತಾರೆ. ನಮ್ಮ ಧರ್ಮಸ್ಥಳ ಕ್ಷೇತ್ರದಲ್ಲೂ ವಿಶೇಷವಾಗಿ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ವರ್ಷಪ್ರತೀ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆಯಲ್ಲಿ ಆಗಮಿಸಿ, ಅಹೋರಾತ್ರೆ ಜಾಗರಣೆ ಮಾಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡುತ್ತಾರೆ. ರಾತ್ರಿಯಿಡೀ ಶಿವ ಪಂಚಾಕ್ಷರಿ ಪಠಣ, ಭಜನೆ, ಸತ್ಸಂಗ ಕಾರ್ಯಕ್ರಮಗಳು ನಡೆದು ಶ್ರೀಸ್ವಾಮಿಯ ವೈಭವದ ಮಹಾರಥೋತ್ಸವ ನೆರವೇರುತ್ತದೆ. ಕ್ಷೇತ್ರಕ್ಕೆ ಪಾದಯಾತ್ರೆಯಲ್ಲಿ ಬರುವ ಅನೇಕ ಭಕ್ತರು ತಮ್ಮ ಅನುಭವ, ಅನಿಸಿಕೆಗಳನ್ನು ನನ್ನನ್ನು ಭೇಟಿಯಾದಾಗ ಹಂಚಿಕೊಳ್ಳುತ್ತಾರೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರು, ‘ಸ್ವಾಮಿಗೆ ಹರಕೆ ಹೊತ್ತುಕೊಂಡಿದ್ದೆ, ಕಷ್ಟಗಳು ನಿವಾರಣೆಯಾಯಿತು, ಕಾಯಿಲೆ ಗುಣಮುಖವಾಯಿತು, ಉದ್ಯಮ ಕೈ ಹಿಡಿಯಿತು’ ಎಂದೆಲ್ಲ ಮನಃಪೂರ್ವಕವಾಗಿ ಹೇಳಿಕೊಂಡು ಸಂತೋಷ ವ್ಯಕ್ತಪಡಿಸುತ್ತಾರೆ.

ಹೀಗೆ ಭಗವಂತನ ಸಾಮೀಪ್ಯಕ್ಕೊಳಾಗಾಗಿ ಅನುಭೂತಿಯನ್ನು ಪಡೆದುಕೊಳ್ಳುತ್ತಾರೆ. ಭಕ್ತಿಯೊಂದಿಗೆ ಬದುಕಿನಲ್ಲಿ ಆತ್ಮವಿಶ್ವಾಸ, ಚಾರಿತ್ರ್ಯ, ನಂಬಿಕೆ-ನಡವಳಿಕೆ, ಆದರ್ಶ ಇತ್ಯಾದಿಗಳೆಲ್ಲ ಇದ್ದಾಗ ಭಗವಂತನ ಕೃಪೆ ಸದಾ ಇದ್ದೇ ಇರುತ್ತದೆ. ಪಾದಯಾತ್ರಿಗಳು ಕಾಲ್ನಡಿಗೆಯಲ್ಲೇ ಆಗಮಿಸುವ ಮೂಲಕ ಸ್ವಾಮಿಗೆ ಭಕ್ತಿಯ ಅರ್ಪಣೆ ಮಾಡಿಕೊಳ್ಳುತ್ತಾರೆ. ದೇವರ ದರ್ಶನ ಮಾಡಬೇಕು ಎಂಬ ಉತ್ಸಾಹದಿಂದ, ಭಕ್ತಿಯ ಪ್ರೇರಣೆಯಿಂದ ಅದಮ್ಯ ಶಕ್ತಿಯನ್ನು ಹೊಂದಿ, ದಿನವೂ ಹತ್ತಾರೂ ಕಿಲೋಮೀಟರ್​ಗಳನ್ನು ನಡೆಯುತ್ತ ನೂರಾರು ಕಿ.ಮೀ ದೂರ ಕ್ರಮಿಸಿ, ಭಜನೆ, ಶಿವನಾಮ ಸ್ಮರಣೆ ಮಾಡುತ್ತ ಆಗಮಿಸುತ್ತಾರೆ. ನೇತ್ರಾವತಿಯಲ್ಲಿ ಮಿಂದು ದೇವರ ದರ್ಶನ ಮಾಡಿ ಧನ್ಯರಾಗುತ್ತಾರೆ. ಈ ಕ್ಷಣವು ಅವರಲ್ಲಿ ಸಾರ್ಥಕ ಭಾವವನ್ನು ಉಂಟು ಮಾಡುತ್ತದೆ. ಬದುಕಿನಲ್ಲಿ ಕಷ್ಟವನ್ನು ಎದುರಿಸಬಲ್ಲೆ, ಮುಂದೆ ಬರಲಿರುವ ದಿನಗಳು ಒಳ್ಳೆಯದನ್ನು ಉಂಟು ಮಾಡಲಿವೆ, ಕನಸುಗಳು ನನಸಾಗುತ್ತವೆ...

ಹೀಗೆ ಬದುಕಿಗೆ ಭರವಸೆ ದೊರೆತು ಉಲ್ಲಾಸ ಮೂಡುತ್ತದೆ. ಕಷ್ಟದ ಸಂದರ್ಭದಲ್ಲಿ ಆತ್ಮೀಯರು ಜೊತೆಗೆ ಇರುವಾಗ ಎಷ್ಟು ಧೈರ್ಯವಾಗುತ್ತದೋ ಅದೇ ಬದುಕಿನ ಏಳು-ಬೀಳುಗಳಲ್ಲಿ ದೇವರಿದ್ದಾನೆ ಎಂಬ ನಂಬುಗೆ ನಮ್ಮೆಲ್ಲರನ್ನೂ ಮುನ್ನಡೆಸುವ ಶಕ್ತಿಯಾಗಿದೆ. ನಡೆಯುತ್ತ ಹೋದ ಹಾಗೆ ದೇವರಿಗೆ ಹತ್ತಿರವಾಗುವಂತೆ, ಪ್ರಯತ್ನಿಸುತ್ತ, ಶ್ರಮ ಪಡುತ್ತ ಹೋದರೆ ಯಶಸ್ವಿ ಬದುಕು ನಮ್ಮದಾಗುವುದು. ಭಕ್ತಿಯಲ್ಲಿ ನಾನಾ ವಿಧಗಳಿವೆ. ನವವಿಧ ಭಕ್ತಿಯ ಮೂಲಕ ಭಗವಂತನನ್ನು ಪ್ರಸನ್ನಗೊಳಿಸಲು, ಕೃಪೆಯನ್ನು ಪಡೆಯಲು ಸಾಧ್ಯ ಎಂಬ ಬಗ್ಗೆ ಹಲವು ಗ್ರಂಥಗಳಲ್ಲಿ ಉಲ್ಲೇಖವಿದೆ. ಭಕ್ತಿ ಮತ್ತು ಪ್ರೀತಿಗೆ ಉತ್ತಮ ಉದಾಹರಣೆಯೆಂದರೆ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳ. ಇದುವರೆಗೂ 60 ಕೋಟಿಗೂ ಅಧಿಕ ಜನರು ಪುಣ್ಯಸ್ನಾನ ಮಾಡಿದ್ದಾರೆ. ವಿದೇಶಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಭಾರತದ ಸನಾತನ ಧರ್ಮದ ಅನುಭೂತಿಯನ್ನು ಪಡೆದಿದ್ದಾರೆ ಎಂಬುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಭಕ್ತಿಯೆಂದರೆ ಹಾಗೆಯೇ ಮಲಗಿದ್ದವನನ್ನು ಬಡಿದೆಬ್ಬಿಸಿ ಜಾಗೃತಗೊಳಿಸುತ್ತದೆ. ಅಶಕ್ತ ಕೈ ಕಾಲುಗಳಲ್ಲಿ ಚೈತನ್ಯ ತುಂಬಿ ನಡೆಯಲು ಶಕ್ತಿ ನೀಡುತ್ತದೆ, ಭಕ್ತಿಯ ಜೊತೆ ಇಚ್ಛಾಶಕ್ತಿ ಮತ್ತು ಪ್ರಯತ್ನವು ಜೊತೆಗೂಡಿದಾಗ ಮಹಾ ಸಾಧನೆಯನ್ನೇ ಮಾಡಲು ಕಾರಣವಾಗುತ್ತದೆ.

ದೇವರನ್ನು ನಂಬಲು ಹಲವಾರು ಕಾರಣಗಳಿವೆ. ದೇವರು ಸರ್ವಶಕ್ತ. ಆತನ ಮೇಲೆ ನಂಬಿಕೆಯಿರಿಸಿದರೆ ಅಸಾಧ್ಯವನ್ನೂ ಸಾಧ್ಯವಾಗಿಸುತ್ತಾನೆ. ನಮ್ಮೆಲ್ಲ ಆಸೆ-ಆಕಾಂಕ್ಷೆಗಳನ್ನು ಈಡೇರಿಸುತ್ತಾನೆ ಎಂಬ ಅದಮ್ಯ ಭರವಸೆ ಇರುತ್ತದೆ. ನಮ್ಮ ಹುಟ್ಟಿಗೆ ಕಾರಣಕರ್ತ ಭಗವಂತನೇ ಆಗಿದ್ದಾನೆ. ಹಾಗಿರುವಾಗ ಭಗವಂತ ನಮ್ಮನ್ನು ಕೈ ಬಿಡಲಾರ. ಆತನಿಗೆ (ಭೂತ, ವರ್ತಮಾನ, ಭವಿಷ್ಯ) ಎಲ್ಲವೂ ತಿಳಿದಿದ್ದು ಆಗುವುದೆಲ್ಲ ಒಳ್ಳೆಯದಕ್ಕೇ ಎಂಬಂತೆ ನಮ್ಮನ್ನೆಲ್ಲ ನಡೆಸುತ್ತಾನೆ ಎಂಬ ಭಾವನೆ ದೇವರನ್ನು ನಂಬುವಂತೆ ಮಾಡುತ್ತದೆ. ಕಬ್ಬಿಣವು ಬೆಂಕಿಯ ಕುಲುಮೆಯಲ್ಲಿ ಕಾದು, ಸುತ್ತಿಗೆಯ ಪೆಟ್ಟು ತಿಂದಾಗ ಮಾತ್ರ ಸುಂದರವಾದ ಆಕೃತಿ ಪಡೆಯಲು ಸಾಧ್ಯ. ಹಾಗೆಯೇ ಬದುಕಿನಲ್ಲಿ ಕಷ್ಟ, ನಷ್ಟ, ನೋವುಗಳನ್ನುಂಡಾಗ ಮಾತ್ರ ಸುಂದರವಾದ ಬದುಕನ್ನು ಹೊಂದಲು ಸಾಧ್ಯ. ನಮಗೆ ಯಾವಾಗ ಏನು ಕೊಡಬೇಕು, ಹೇಗೆ ಕೊಡಬೇಕು ಎಂದು ಭಗವಂತನಿಗೆ ಚೆನ್ನಾಗಿ ತಿಳಿದಿದೆ ಎಂಬ ಭಾವನೆಯಿಂದ ಫಲವನ್ನು ನಿರೀಕ್ಷೆ ಮಾಡದೆ ನಾವು ನಮ್ಮ ನಮ್ಮ ಕರ್ಮಗಳನ್ನು ಮಾಡುತ್ತ ಮುಂದುವರಿಯಬೇಕು.

ಭಗವಂತನಷ್ಟು ಆತ್ಮೀಯರು ಮತ್ತೊಬ್ಬರು ಇರಲಾರರು. ಎಲ್ಲವನ್ನೂ ಆತನಲ್ಲೇ ಹೇಳಿಕೊಂಡು ನಿರುಮ್ಮಳವಾಗುವುದು. ಅತ್ತದ್ದು, ನಕ್ಕಿದ್ದು ಎಲ್ಲವನ್ನೂ ಮಗು ತಾಯಿಯಲ್ಲಿ ಹೇಳುವಂತೆ ಕಷ್ಟ ಬಂದಾಗಲೂ, ಸುಖ ಸಿಕ್ಕಾಗಲೂ, ಏನೇ ಆದರೂ ಓಡೋಡಿ ಬರುವುದು ಭಗವಂತನ ಸಾನ್ನಿಧ್ಯಕ್ಕೆ. ಹಳ್ಳಿಯ ಅಜ್ಜಿಯೊಬ್ಬಳು ತನ್ನ ಎಮ್ಮೆ ಕಾಣುತ್ತಿಲ್ಲ, ಬೆಳಕು ಹರಿಯೋ ಮುನ್ನ ಎಮ್ಮೆ ಮನೆಗೆ ಬಂದ್ರೆ ಸಂಕ್ರಾಂತಿಗೆ ತುಪ್ಪದ ದೀಪ ಹಚ್ಚುತ್ತೇನೆ ಎಂದು ದೇವರನ್ನು ಬೇಡುತ್ತಾಳೆ. ಮರುದಿನ ಬೆಳಗಾಗೋವಷ್ಟರಲ್ಲೇ ಎಮ್ಮೆಅಂಗಳದಲ್ಲಿತ್ತು. ‘ದೇವರು ಇದ್ದಾನಪ್ಪಾ’ ಎಂದು ಮುಂದಿನ ಸಂಕ್ರಾಂತಿಗೆ ತುಪ್ಪದ ದೀಪವನ್ನು ಮರೆಯದೇ ಹಚ್ಚುತ್ತಾಳೆ. ಇನ್ನೊಮ್ಮೆ ಎಮ್ಮೆ ಕರು ಹಾಕುವಾಗ ಏನೋ ತೊಂದರೆಯಾಗಿ ಕರು ಸತ್ತು ಹೋಗುತ್ತದೆ. ಆಗ ಆಕೆಯೇ ‘ದೇವರೇ ನೀನು ಪಾಪಿ, ನಮ್ಮ ಎಮ್ಮೆಯ ಕರುವನ್ನು ಯಾಕೆ ಬದುಕಿಸಿ ಕೊಡಲಿಲ್ಲ. ನಿನಗೆ ದೀಪವೂ ಹಚ್ಚೊಲ್ಲ, ಕೈನೂ ಮುಗಿಯೊಲ್ಲ’ ಎಂದು ತನ್ನಷ್ಟಕ್ಕೇ ಗೊಣಗುತ್ತ ಕಣ್ಣೀರಿಡುತ್ತಾಳೆ. ಒಂದಷ್ಟು ದಿನಗಳ ನಂತರ ಹಟ್ಟಿಯಲ್ಲಿದ್ದ ಆಡು ನಾಲ್ಕು ಮರಿಗಳಿಗೆ ಜನ್ಮ ನೀಡಿದಾಗ ಹಾಲು ಪಾಯಸ ಮಾಡಿಕೊಂಡು ದೇವರ ಗುಡಿಗೆ ಖುಷಿಯಿಂದ ಓಡೋಡಿ ಬರುತ್ತಾಳೆ. ಹೀಗೆ ಎಲ್ಲರ ಕಷ್ಟ-ಸುಖಗಳಲ್ಲಿ ದೇವರು ಪಾಲು ಪಡೆಯುತ್ತಾರೆ.

ನಮ್ಮ ದೇಶ ಧಾರ್ವಿುಕ ತಳಹದಿಯಲ್ಲೇ ಬೆಳೆದು ಬಂದಿದೆ. ಜನರ ಪ್ರತಿ ನಡೆ, ನುಡಿ ಮಾತ್ರವಲ್ಲದೆ ಜೀವನಶೈಲಿಯಲ್ಲೂ ಭಕ್ತಿಯನ್ನು ಕಾಣಲು ಸಾಧ್ಯ. ರೈತನು ಬೆಳಗ್ಗೆ ಏಳುತ್ತಲೇ ಭೂಮಿಗೆ ನಮಸ್ಕರಿಸಿ ‘ದೇವರೇ ಮಳೆ ಬೆಳೆ ಚೆನ್ನಾಗಿರಲಪ್ಪಾ’ ಎಂದು ಬೇಡಿಕೊಳ್ಳುತ್ತಾನೆ. ಪ್ರಕೃತಿಯ ಪ್ರತಿಯೊಂದು ವಸ್ತುವಿನಲ್ಲೂ ದೇವರನ್ನು ಕಾಣುವ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವೇ ಅಂತಹದ್ದು. ವಿದೇಶಿಯರೂ ಸನಾತನ ಧರ್ಮದ ಬಗ್ಗೆ ಆಸಕ್ತರಾಗಿ ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡು ನೆಮ್ಮದಿಯನ್ನು ಕಾಣುತ್ತಿದ್ದಾರೆ. ಯೋಗ, ಧ್ಯಾನಗಳನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆಸ್ತಿ, ಪಾಸ್ತಿ, ಐಶ್ವರ್ಯ, ಅಂತಸ್ತುಗಳಲ್ಲಿ ದೊರೆಯದ ಆತ್ಮತೃಪ್ತಿ, ಸಮಾಧಾನ, ನೆಮ್ಮದಿ ಸನಾತನ ಧರ್ವಚರಣೆಗಳಲ್ಲಿ ದೊರೆಯುತ್ತಿದೆ ಎಂಬುದನ್ನು ಕಂಡುಕೊಳ್ಳುತ್ತಿದ್ದಾರೆ. ಅಂತಹ ಸನಾತನ ಭೂಮಿಯಲ್ಲಿ ಬಾಳುತ್ತಿರುವ ನಾವೇ ಧನ್ಯರು.

ಪಾರ್ವತಿ ಮತ್ತು ಪರಶಿವನನ್ನು ಪ್ರಕೃತಿ ಮತ್ತು ಪುರುಷರೆಂದು ಆರಾಧಿಸುತ್ತೇವೆ. ಶಿವರಾತ್ರಿಯು ನಮ್ಮೆಲ್ಲರನ್ನು ಪೊರೆಯುವ ಪ್ರಕೃತಿ-ಪುರುಷನ ಆರಾಧನೆಯೇ ಆಗಿದೆ. ನಮ್ಮಲ್ಲಿರುವ ಪ್ರತಿಯೊಂದು ಹಬ್ಬಗಳೂ ಒಂದೊಂದು ಸಂದೇಶವನ್ನು ಸಾರುತ್ತ ಧಾರ್ವಿುಕ ಮಹತ್ವದ ಅರಿವು ಮೂಡಿಸುತ್ತವೆ. ಶಿವರಾತ್ರಿಯು ಆಧ್ಯಾತ್ಮಿಕತೆ ಮಾತ್ರವಲ್ಲ ಆರೋಗ್ಯ, ವಿಜ್ಞಾನ, ಜ್ಞಾನ ಹೀಗೆ ಎಲ್ಲ ಕ್ಷೇತ್ರಗಳ ಸಾರದ ಸಮ್ಮಿಳಿತವಾದ ಆಚರಣೆಯಾಗಿದ್ದು, ಆರೋಗ್ಯಕರ ಜೀವನಕ್ಕೆ ತಳಹದಿಯಾಗಿದೆ. ಶಿವನ ಆರಾಧನೆಯ ಮೂಲಕ ನಮ್ಮನ್ನು ನಾವು ಕಂಡುಕೊಳ್ಳಲು ಇರುವ ಸಾಧನಾ ಪಥವಾಗಿದೆ. ಹಬ್ಬಗಳು ಕೇವಲ ಮನೋರಂಜನೆ, ಆಚರಣೆಗೆ ಸೀಮಿತವಾಗದೆ ಜನರ ಬದುಕಾಗಿದೆ. ಭಾವನೆಯಾಗಿದೆ, ಜೀವನ ಧರ್ಮವಾಗಿದೆ ಎಂದರೆ ಅತಿಶಯವಾಗದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net