

ಜನರು ಬೇರೆ ಬೇರೆ ಕಾರಣಕ್ಕೆ ಪ್ರಯಾಣ ಮಾಡುತ್ತಾರೆ. ಅನ್ವೇಷಕರು ಸಾಹಸ ಮೆರೆಯಲು ಅಥವಾ ವಿಷಯ ತಿಳಿಯಲು ಪ್ರಯಾಣ ಮಾಡುತ್ತಾರೆ. ಅಲೆಮಾರಿಗಳು ಪ್ರಯಾಣ ಮಾಡುತ್ತಾರೆ ಏಕೆಂದರೆ ಅವರಿಗೆ ಮನೆ ಸಹ್ಯವಾಗುವುದಿಲ್ಲ. ಪ್ರವಾಸಿಗರಿಗಂತೂ ಪ್ರಯಾಣ ಖಂಡಿತ ಬೇಕು. ಏಕೆಂದರೆ ಅವರಿಗೆ ಕೆಲಸದಿಂದ ಅಥವಾ ಕುಟುಂಬದವರಿಂದ ಬಿಡುಗಡೆ ಬೇಕಾಗಿದೆ! ಆದರೆ ತೀರ್ಥಯಾತ್ರೆ ಭಿನ್ನವಾದುದು. ಜನ ಪ್ರವಾಸ ಹೋಗುತ್ತಾರೆ, ಚಾರಣಗೈಯುತ್ತಾರೆ ಹಾಗೂ ಪರ್ವತಾರೋಹಣ ಮಾಡುತ್ತಾರೆ. ಏಕೆಂದರೆ ಅವರು ಏನನ್ನಾದರೂ ಸಾಧಿಸಬೇಕೆಂದು ಬಯಸುತ್ತಾರೆ ಅಥವಾ ಜೀವನದ ಗುಣಮಟ್ಟವನ್ನು ವೃದ್ಧಿಸಲು ಬಯಸುತ್ತಾರೆ. ಆದರೆ ತೀರ್ಥಯಾತ್ರೆಯ ಉದ್ದೇಶ ನಮ್ಮನ್ನು ನಾವು ವಿನೀತರನ್ನಾಗಿ ಮಾಡುವುದು.
2005ನೇ ಇಸವಿಯಿಂದ ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ನಾವು ಈಶಾದಿಂದ ಹಿಮಾಲಯದ ಕೈಲಾಸ ಪರ್ವತಕ್ಕೆ ತೀರ್ಥಯಾತ್ರೆ ಮಾಡುತ್ತಿದ್ದೇವೆ. ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ಹಿಮಾಲಯ ಯಾತ್ರೆ ಮಾಡುತ್ತ ಬಂದಿದ್ದಾರೆ, ಏಕೆಂದರೆ ಈ ಹಿಮಾಲಯ ಪರ್ವತದೆದುರು ನೀವು ಕುಬ್ಜರಾದ ಭಾವನೆ ಬರದೇ ಇರಲು ಸಾಧ್ಯವೇ ಇಲ್ಲ, ತೀರ್ಥಯಾತ್ರೆಯ ಉದ್ದೇಶ ಕೂಡ ಅದೇ: ಈ ಅಸ್ತಿತ್ವದಲ್ಲಿ ನಮ್ಮ ಸ್ಥಾನ ಏನೆಂದು ತಿಳಿಯಲು; ಈ ಬ್ರಹ್ಮಾಂಡದಲ್ಲಿ ನಾವೊಂದು ಸಣ್ಣ ಧೂಳಿನ ಕಣ ಎಂದು ತಿಳಿಯಲು. ಅದು ಕಿರಿತನವನ್ನು ಕೊಂಡಾಡಲು ಕೂಡ. ಮಾನವಜೀವಿ ಈ ಅಸ್ತಿತ್ವದಲ್ಲಿ ಒಂದು ಸಣ್ಣ ಕಣ ಅಷ್ಟೆ, ಆದಾಗ್ಯೂ ಮನಸ್ಸು ಮಾಡಿದರೆ ಇಡೀ ಅಸ್ತಿತ್ವವನ್ನೇ ನಾವು ಒಳಗೂಡಿಸಿಕೊಳ್ಳಬಹುದು. ಒಬ್ಬ ವ್ಯಕ್ತಿ ತಾನೆಷ್ಟು ಚಿಕ್ಕವನು ಎಂದು ತಿಳಿದುಕೊಳ್ಳದಿದ್ದರೆ ಅವನು ತನ್ನೊಳಗೆ ಎಲ್ಲವನ್ನೂ ಸೇರಿಸಿಕೊಳ್ಳಲಾರ. ಮನುಷ್ಯರು ತಾವು ದೊಡ್ಡವರೆಂದು ಭಾವಿಸಿದರೆ ಅವರು ಚಿಕ್ಕವರಾಗುತ್ತಾರೆ. ಆದರೆ ತಾವೆಷ್ಟು ಚಿಕ್ಕವರು ಎಂದು ಅರಿತರೆ, ಅಪರಿಮಿತರಾಗುತ್ತಾರೆ. ಅದೇ ಮನುಷ್ಯನಾಗಿರುವುದರ ಸೊಗಸು.
ಅದೇ ಮಾನವರ ಹೋರಾಟ ಕೂಡ. ದೊಡ್ಡವರಾಗಬೇಕೆಂಬ ಯತ್ನದಲ್ಲಿ ಮನುಷ್ಯರು ಅಲ್ಪರಾಗಿಬಿಡುತ್ತಾರೆ. ತೀರ್ಥಯಾತ್ರೆ, ನಿಮ್ಮ ಸಣ್ಣತನವನ್ನು ಅರಿತುಕೊಳ್ಳಲು ಸಹಾಯ ಮಾಡುವ ಒಂದು ಪ್ರಕ್ರಿಯೆ. ನೀವು ಎಷ್ಟೆಷ್ಟು ಸ್ವಇಚ್ಛೆಯಿಂದ ಸಣ್ಣವರಾಗುತ್ತೀರೋ, ನೀವು ಎಷ್ಟೆಷ್ಟು ಸ್ವಇಚ್ಛೆಯಿಂದ ನಾನೇನೂ ಅಲ್ಲ ಎಂದು ನಿಮ್ಮನ್ನು ಕಿರಿದಾಗಿಸಿಕೊಳ್ಳುತ್ತೀರೊ ಅಷ್ಟು ನೀವು ದೊಡ್ಡವರಾಗುತ್ತೀರಿ. ಎಲ್ಲರೂ ಎಲ್ಲೆಯಿಲ್ಲದವರಾಗಬೇಕೆಂದು ಬಯಸುತ್ತಾರೆ. ಆ ಉದ್ದೇಶದಲ್ಲಿ ಏನೂ ತಪ್ಪಿಲ್ಲ; ವಿಷಯ ಏನೆಂದರೆ ಎಲ್ಲರೂ ತಪ್ಪಾದ ದಿಕ್ಕಿನಲ್ಲಿ ಗಮನ ಹರಿಸಿದ್ದಾರೆ! ನಾನು ಕರಗಿಹೋದರಷ್ಟೆ ನಾನು ಎಲ್ಲೆ ಇಲ್ಲದವನಾಗಬಹುದು ಎಂದು ತಿಳಿಯಲು ತುಂಬ ಅರಿವು ಬೇಕು. ಇದನ್ನು ತಿಳಿಯಲು, ದುರದೃಷ್ಟವಶಾತ್, ಹೆಚ್ಚಿನವರು ಅನೇಕ ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ.
ಯಾರಿಗಿಂತ ಯಾರು ದೊಡ್ಡವರು, ಅದೇ ಯಾವಾಗಲೂ ಸಮಸ್ಯೆ. ಯಾವಾಗ ಜನರು ದೊಡ್ಡವರಾಗಬೇಕು ಎಂದು ಪ್ರಯತ್ನಿಸುತ್ತಾರೊ, ಆಗ ಅವರು ಅಲ್ಪರಾಗುತ್ತ ಹೋಗುತ್ತಾರೆ. ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವರ ದಕ್ಷತೆ ಅದ್ಭುತ, ಆದರೆ ನಮ್ಮ ತಂತ್ರಜ್ಞಾನ ಎಷ್ಟು ಕಿರಿದು ಎಂದು ಉನ್ನತಮಟ್ಟದ ವಿಜ್ಞಾನಿಗಳಿಗೆ ಗೊತ್ತಿದೆ. ಕೇವಲ ತಂತ್ರಜ್ಞಾನ ಉಪಯೋಗಿಸುವವರಷ್ಟೆ ತಾವು ದೊಡ್ಡವರೆಂದು ನಂಬುತ್ತಾರೆ.
ಒಬ್ಬ ಯಾತ್ರಿ ಮತ್ತು ಒಬ್ಬ ಪ್ರವಾಸಿಗರ ನಡುವೆ ತುಂಬ ವ್ಯತ್ಯಾಸ ಇದೆ. ಒಬ್ಬ ಯಾತ್ರಿಯ ಗುರಿ ನಿಗದಿಯಾಗಿರುತ್ತದೆ. ಬದುಕು ಇಲ್ಲ ಸಾವು ಎದುರಾಗುತ್ತದೊ ಅದು ಮುಖ್ಯವಲ್ಲ, ಅವರ ಗುರಿ ನಿಚ್ಚಳ, ಅವರಿಗೆ ಗೊತ್ತು ತಾನು ಎಲ್ಲಿಗೆ ಹೋಗುತ್ತಿದ್ದೇನೆಂದು. ಪ್ರವಾಸಿಗ ಹಾಗಲ್ಲ; ಅವರು ಆರಾಮದಾಯಕ ಸ್ಥಳಗಳಿಗೆ ಮಾತ್ರ ಹೋಗುತ್ತಾರೆ. ಅದರಲ್ಲೇನೂ ತಪ್ಪಿಲ್ಲ. ಆದರೆ ನಾವು ಕೆಲವು ಇತಿಮಿತಿಯಲ್ಲಿ ಬದುಕಿದಾಗ, ಬದುಕು ಕೂಡ ಹಲವು ಮಿತಿಯನ್ನು ಹೇರುತ್ತದೆ. ನೀವು ಯಾವಾಗ ನಿಮ್ಮೊಳಗೆ ಯಾವುದೇ ಇತಿಮಿತಿಯಿಲ್ಲದೆ ಬದುಕುತ್ತೀರೋ ಆಗ ಬದುಕು ತನ್ನ ಭಂಡಾರವನ್ನು ನಿಮಗೆ ತೆಗೆಯುತ್ತದೆ.
ಹಿಮಾಲಯ ಪರ್ವತ ಶ್ರೇಣಿ ಭೂಮಿಯ ಮೇಲಿನ ಅತಿ ಕಿರಿಯ, ಅತಿ ನೂತನ, ಅತಿ ದುರ್ಬಲ ಶ್ರೇಣಿ. ಮತ್ತು ಹಲವು ರೀತಿಯಲ್ಲಿ ಈ ಪರ್ವತ ಶ್ರೇಣಿ ಬೆಳೆಯಲು ನಡೆಸುವ ಹೋರಾಟ ಮಾನವ ಜೀವನಕ್ಕೆ ತೀರಾ ಸಾಂಕೇತಿಕವಾಗಿದೆ. ಹಿಮಾಲಯದ ತಪ್ಪಲಿನಲ್ಲಿ ನೀವು ಕಾಲಿಟ್ಟ ಕೂಡಲೇ, ಭೂಮಿಯ ಮೇಲಿನ ಅತಿ ಕಿರಿಯ ಜೀವಿ, ಅಂದರೆ ನೀವು, ಹಾಗೂ ಅತಿ ಕಿರಿಯ ಪರ್ವತ ಶ್ರೇಣಿ- ಹಿಮಾಲಯ, ಈ ಇಬ್ಬರ ನಡುವೆ ಒಂದು ರೀತಿಯ ಪ್ರಣಯ ಶುರುವಾಗುತ್ತದೆ. ಇಬ್ಬರೂ ಇನ್ನೂ ಹೋರಾಡುತ್ತಿದ್ದಾರೆ, ಇನ್ನೂ ವಿಕಸನಗೊಳ್ಳುತ್ತಿದ್ದಾರೆ, ಇನ್ನೂ ತಮ್ಮ ಗರಿಷ್ಠ ಮಟ್ಟ ಮುಟ್ಟಲು ಬಯಸುತ್ತಿದ್ದಾರೆ. ಆದರೆ ಗರಿಷ್ಠ ಮಟ್ಟ ಮುಟ್ಟುವುದು ಹಿಮಾಲಯಕ್ಕೆ ಸುಲಭದಲ್ಲಿ ದಕ್ಕುವುದಿಲ್ಲ. ತನ್ನ ಬೆಳೆಯುವ ಪ್ರಯತ್ನದಲ್ಲಿ ಅದು ನಿತ್ಯ ತನ್ನನ್ನೇ ತಾನು ಕಳಚಿಕೊಳ್ಳುತ್ತದೆ. ಅಲ್ಲಿ ಭಾರಿ ಪ್ರಮಾಣದ ಭೂಕುಸಿತ ಮತ್ತು ಹಿಮಪಾತ ಹಾಗೂ ಸ್ಥಿತ್ಯಂತರವಾಗುತ್ತಿರುತ್ತದೆ. ಈ ಎಲ್ಲ ಮೇಲ್ನೋಟಕ್ಕೆ ಕಾಣುವ ಅವ್ಯವಸ್ಥೆ ಏಕೆಂದರೆ ಪರ್ವತ ಶ್ರೇಣಿ ಬೆಳೆದು ತನ್ನ ಅಂತಿಮ ಎತ್ತರ ತಲುಪಲು ಪ್ರಯತ್ನಿಸುತ್ತಿದೆ.
ಅದೇ ರೀತಿ ಮನುಷ್ಯರ ಜೀವನ ಸಹ. ನಾವು ಬೆಳೆಯಲು ಶ್ರಮಿಸಿದಾಗ, ನಮ್ಮ ಜೀವನದಲ್ಲಿ ಭೂಕಂಪ, ಭೂಕುಸಿತ ಎಲ್ಲ ನಡೆಯುತ್ತಿರುತ್ತದೆ. ಯಾರ ಜೀವನ ನಿಂತ ನೀರಿನಂತಿರುತ್ತದೋ ಅದು ಸ್ಥಿರ ಹಾಗೂ ಭದ್ರವಾಗಿ ಇರುವಂತಿರುತ್ತದೆ. ಅದು ಒಳ್ಳೆಯದಿರುವಂತೆ ಕಾಣುತ್ತದೆ, ಆದರೆ ನಿರ್ಜೀವವಾಗಿರುತ್ತದೆ. ಯಾರು ಬೆಳೆಯಬೇಕೆಂದು ಶ್ರಮಿಸುತ್ತಾರೋ ಅವರ ಜೀವನದಲ್ಲಿ ಭಾರೀ ಪ್ರಮಾಣದ ಅಲ್ಲೋಲಕಲ್ಲೋಲವಾಗುತ್ತದೆ. ಆದರೆ ಒಂದು ಸಣ್ಣ ಪ್ರಮಾಣದ ಬೆಳವಣಿಗೆ ಮಾನವನಲ್ಲಿ ನಡೆದರೆ ಆ ಎಲ್ಲ ಅಲ್ಲೋಲಕಲ್ಲೋಲ ಸಾರ್ಥಕ. ಮೊದಲ ಹೊಡೆತವು ಸುಮಾರು ಐವತ್ತು ದಶಲಕ್ಷ ವರ್ಷಗಳ ಹಿಂದೆ ಹಿಮಾಲಯದಲ್ಲಿ ಸಂಭವಿಸಿತು ಮತ್ತು ನಿಧಾನವಾಗಿ ಇದು ವರ್ಷಕ್ಕೆ ಕೆಲವು ಮಿಲಿಮೀಟರ್ ದರದಲ್ಲಿ ಏರುತ್ತಿದೆ. ಖಂಡದ ಸಮತಲ ಚಲನೆಯು ವರ್ಷಕ್ಕೆ ಐದು ಸೆಂಟಿಮೀಟರ್ ಆಗಿದ್ದರೂ, ಲಂಬ ಏರಿಕೆ ವರ್ಷಕ್ಕೆ ಐದು ಮಿಲಿಮೀಟರ್ ಮಾತ್ರ ಎಂದು ಹೇಳಲಾಗುತ್ತದೆ. ನೀವು ಭೌತಿಕ ಯೋಗಕ್ಷೇಮವನ್ನು ಬಯಸುತ್ತಿರಲಿ ಅಥವಾ ವಿಶೇಷವಾಗಿ ಆಧ್ಯಾತ್ಮಿಕ ಯೋಗಕ್ಷೇಮವಾಗಲಿ, ಇದು ಯಾವಾಗಲೂ ಜೀವನದೊಂದಿಗೂ ಹೀಗೆಯೇ ಇರುತ್ತದೆ. ನೀವು ಅಗಾಧ ಪ್ರಮಾಣದ ಸಮತಲ ಚಟುವಟಿಕೆಯನ್ನು ಹಾಕಿದರೆ, ಸ್ವಲ್ಪ ಲಂಬ ಚಲನೆ ಸಂಭವಿಸುತ್ತದೆ. ಆದ್ದರಿಂದ ಹಿಮಾಲಯದ ಹೋರಾಟಗಳು ಮತ್ತು ಮಾನವರ ಹೋರಾಟಗಳು ಬಹಳ ಆಳವಾದ ಸಂಪರ್ಕ ಹೊಂದಿವೆ.
ಹೆಚ್ಚಿನ ಜನರು-ನನ್ನ ಅನುಭವದಲ್ಲಿ ಹೇಳುವುದಾದರೆ, 99.9% ಜನರು-ಬೆಳೆಯಲು ಹೋರಾಡುತ್ತಾರೆ. ಹೋರಾಟವಿಲ್ಲದೆ ಬೆಳೆಯಲಿಕ್ಕೆ ಸಾಧ್ಯವಿಲ್ಲ ಎಂದಲ್ಲ. ಆದರೆ ಅದಕ್ಕೆ ತುಂಬ ಅರಿವು ಬೇಕು, ಅಥವಾ ಸಂಪೂರ್ಣ ವಿಶ್ವಾಸ ಬೇಕು-ಇವೆರೆಡೇ ದಾರಿಗಳು. ಇಲ್ಲವೆಂದರೆ ಹೋರಾಟ ಅನಿವಾರ್ಯ. ಹಿಮಾಲಯ ಶ್ರೇಣಿಗಳು ಇದೇ ಕಾರಣಕ್ಕೆ ಹೋರಾಡುತ್ತಿವೆ. ಅದು ಬೆಳೆಯಲು ಹೋರಾಡುವ ಕಾರಣಕ್ಕಾಗಿಯೇ ದೊಡ್ಡ ಪ್ರಮಾಣದ ಪರ್ವತದ ಭಾಗ ಅದರ ಸುತ್ತವೇ ಕುಸಿಯುತ್ತದೆ. ಅದು ಜಡವಾಗಿ ಬಿಟ್ಟರೆ ಈ ಭೂಕಂಪ ಮತ್ತು ಈ ಭೂ ಕುಸಿತ ಸಂಭವಿಸುವುದಿಲ್ಲ. ಆದರೆ ಅದು ತನ್ನ ಸುರಕ್ಷತೆಯ ಬಲಿ ಕೊಟ್ಟಾದರೂ ಬೆಳೆಯ ಬಯಸುತ್ತದೆ. ಹೆಚ್ಚಿನ ಜನರ ಬೆಳವಣಿಗೆ ನಡೆಯುವುದೂ ಇದೇ ರೀತಿಯಲ್ಲಿ. ನನ್ನಲ್ಲಿ ಹಲವು ಬಾರಿ ಕೇಳುತ್ತಾರೆ, ‘ತೀರ್ಥಯಾತ್ರೆಯಿಂದ ನಾವು ಗರಿಷ್ಠ ಲಾಭ ಪಡೆಯುವುದು ಹೇಗೆ?’ ಯಾತ್ರಿ ಅಥವಾ ಅನ್ವೇಷಕನಾಗುವ ಒಂದು ಸರಳ ವಿಧಾನವೆಂದರೆ ಈ ಲೆಕ್ಕಾಚಾರವನ್ನು ಬಿಟ್ಟುಬಿಡುವುದು, ಏನು ಲಾಭ? ನಿಮಗೇನು ಸಿಗಬೇಕಾಗಿಲ್ಲ.
ಬರೀ ಒಂದಷ್ಟು ಸಮಯ ಹಾಳು ಮಾಡುವುದನ್ನು ಕಲಿಯಿರಿ. ಏನೂ ಆಗಬೇಕಾಗಿಲ್ಲ. ಇದು ಆರೋಗ್ಯವಂತರಾಗುವುದಕ್ಕೋ, ಸಾಕ್ಷಾತ್ಕಾರ ಪಡೆಯಲೋ ಅಥವಾ ಸ್ವರ್ಗಸೇರುವುದರ ಬಗ್ಗೆಯೋ ಅಲ್ಲ. ಇದು ಒಂದಿಷ್ಟು ಸಮಯವನ್ನು ಸಾರ್ಥಕವಾಗಿ ಕಳೆಯಲು ಅಷ್ಟೇ. ಯಾವಾಗ ನೀವು ಏನೋ ಆಗುವುದಕ್ಕೆ ಪ್ರಯತ್ನಿಸುವುದಿಲ್ಲವೋ, ಎಲ್ಲೋ ಸೇರಲು ಪ್ರಯತ್ನಿಸುವುದಿಲ್ಲವೋ, ಆಗ ಕೇವಲ ನಿಮ್ಮ ಅಸ್ತಿತ್ವ ಇರುತ್ತದೆ. ನಿಮಗೆ ನಿಜವಾದ ವಿಷಯ ಬೇಕಾದಲ್ಲಿ ‘ಲಾಭ ಏನು’ ಎನ್ನುವ ವ್ಯವಹಾರ ಬಿಡಿ. ಏನೂ ಆಗಬೇಕಾಗಿಲ್ಲ. ಆದರೆ ಜನರಿಗೆ ಸುಮ್ಮನೆ ‘ಇರಲು’ ಬೇಕಾದ ಅರಿವು ಇಲ್ಲದಿರುವುದರಿಂದ ಪರ್ಯಾಯವಾಗಿ ಪ್ರೀತಿಯಿಂದಿರಲು ಸೂಚಿಸಲಾಯಿತು. ಇದು ಏಕೆಂದರೆ, ಪ್ರೀತಿ ಒಂದು ಸ್ಥಿತಿ, ಸ್ವಲ್ಪ ಮಟ್ಟಿಗೆ, ನೀವು ಅಲ್ಲಿ ಲಾಭದ ಬಗ್ಗೆ ಯೋಚಿಸುವುದಿಲ್ಲ. ಆದರೂ ಸಾಮಾನ್ಯವಾಗಿ ಆಳವಾದ ಪ್ರೀತಿ, ಕರುಣೆ ಬೆಳೆಸುವ ಈ ಎಲ್ಲ ಮಾತು ಕೇವಲ, ‘ನನಗೇನು ಸಿಗುತ್ತದೆ?’ ಎನ್ನುವ ನಿರೀಕ್ಷೆಯನ್ನು ತೆಗೆಯುವುದೇ ಆಗಿದೆ. ಅದು ತುಂಬ ಸರಳ. ನೀವು ಇದೊಂದು ಲೆಕ್ಕಾಚಾರ ಬಿಟ್ಟುಬಿಟ್ಟರೆ 90% ಕೆಲಸ ಮುಗಿಯಿತು. ಉಳಿದ 10% ತನ್ನಿಂದ ತಾನೇ ಆಗುತ್ತದೆ.
ಹಿಮಾಲಯ ಯಾತ್ರೆಯ ಉದ್ದೇಶ ನಿಮ್ಮನ್ನು ಶೂನ್ಯವಾಗಿಸುವುದು. ನೀವು ಭಾರಿ ದೊಡ್ಡ ವ್ಯಕ್ತಿಯ ಹಾಗೆ ಜೀವನವನ್ನು ಎದುರುಗೊಂಡರೆ, ಅಸಹನೀಯ ವ್ಯಕ್ತಿಯಾಗುತ್ತೀರಿ. ನೀವು ನಿಮ್ಮ ಬಗ್ಗೆಯೇ ತುಂಬ ಯೋಚನೆ ಮಾಡಿಕೊಂಡು ಜೀವನ ಸವೆಸಿದರೆ ವಿಧ್ವಂಸಕರಾಗುತ್ತೀರಿ. ಪ್ರತಿಯೊಂದು ಹೆಜ್ಜೆಯನ್ನೂ ಕೃತಜ್ಞತೆಯಿಂದ ಇಟ್ಟಿರಾದರೆ, ನೀವು ಎಷ್ಟು ಕಿರಿಯ ಎಂದು ಮನಗಂಡರೆ, ಈ ಭೂಮಿಯ ಮೇಲೆ ಯಾತ್ರಿಯ ಥರ ಸೌಮ್ಯವಾಗಿ ನಡೆಯುತ್ತೀರಿ. ಈ ಜೀವನವೇ ನಿಮ್ಮ ತೀರ್ಥಯಾತ್ರೆಯಾಗಬಹುದು.