

ತುಂಬಾ ಮುಗ್ಧನಾಗಿದ್ದ ಹಳ್ಳಿಯ ಹೈದನೊಬ್ಬ ಒಮ್ಮೆ ವೈದ್ಯರ ಬಳಿ ಹೋಗಿ, ‘ಸ್ವಾಮಿ ನನಗೆ ಈಗ ಕೆಲವು ದಿನಗಳಿಂದ ತಲೆನೋವು ತಡೆಯಲು ಸಾಧ್ಯವೇ ಇಲ್ಲ. ಏನಾದರೂ ಔಷಧಿ ಕೊಡಿ’ ಎಂದು ಕೇಳಿದ. ಅವನನ್ನು ಪರೀಕ್ಷಿಸಿ ನೋಡಿದ ವೈದ್ಯರು ಒಂದು ಚೀಟಿಯಲ್ಲಿ ಔಷಧಿಯನ್ನು ಬರೆದುಕೊಟ್ಟು, ‘ಇದನ್ನು ಏಳು ಭಾಗ ಮಾಡಿ ದಿನಾಲೂ ಬೆಳಗ್ಗೆ ಒಂದರಂತೆ ಒಂದು ವಾರ ತೆಗೆದುಕೊಳ್ಳಿ. ನಂತರ ಒಂದು ವಾರ ಬಿಟ್ಟು ಬಂದು ಹೋಗಿ’ ಎಂದು ಹೇಳಿದರು. ರೋಗಿ ಒಂದು ವಾರ ಬಿಟ್ಟು ವೈದ್ಯರ ಹತ್ತಿರ ಹೋಗಿ, ‘ಸ್ವಾಮಿ, ನಿಮ್ಮ ಔಷಧಿಯಿಂದ ನನ್ನ ತಲೆನೋವು ಪೂರ್ಣ ಮಾಯವಾಗಿ ಹೋಯಿತು’ ಎಂದು ಸಂತೋಷದಿಂದ ಹೇಳಿದ. ಆಗ ವೈದ್ಯರು ತಾವು ಬರೆದುಕೊಟ್ಟ ಚೀಟಿ ಕೊಡು ಎಂದು ಆತನನ್ನು ಕೇಳಿದಾಗ ಆತ ಆ ಚೀಟಿಯನ್ನೇ ಏಳು ಭಾಗ ಮಾಡಿ ಒಂದೊಂದು ಭಾಗವನ್ನು ದಿನಕ್ಕೊಂದರಂತೆ ಒಂದು ವಾರ ತಿಂದು ಮುಗಿಸಿದ್ದ ವಿಷಯ ಹೊರಬಂತು. ವೈದ್ಯರು ಆತನ ಪೆದ್ದುತನ ನೋಡಿ ನಕ್ಕರು. ತಾವು ಕೊಟ್ಟ ಔಷಧಿ ತೆಗೆದುಕೊಳ್ಳದಿದ್ದರೂ ಆತನ ತಲೆನೋವು ಮಾಯವಾದದ್ದು ಹೇಗೆ ಎಂದು ಅವರಿಗೆ ಅಚ್ಚರಿಯಾಯಿತು. ವೈದ್ಯರ ಮೇಲಿನ ದೃಢ ನಂಬಿಕೆಯಿಂದ ಆತನ ತಲೆನೋವು ಕಡಿಮೆಯಾಗಿತ್ತು.
ನಾವು ನಾಳೆ ಬೆಳಗ್ಗೆ ಏಳುತ್ತೇವೆ ಎನ್ನುವ ನಂಬಿಕೆಯಿಂದಲೇ ಇಂದು ರಾತ್ರಿ ಮಲಗುತ್ತೇವೆ. ಬ್ಯಾಂಕಿನಲ್ಲಿ ಹಣ ಸುರಕ್ಷಿತವಾಗಿರುತ್ತದೆ ಎನ್ನುವ ನಂಬಿಕೆಯಿಂದಲೇ ಬ್ಯಾಂಕಿನಲ್ಲಿ ಹಣ ಇಡುತ್ತೇವೆ. ಬಸ್ಸಿನಲ್ಲಿ ನಾವು ಸುರಕ್ಷಿತವಾಗಿ ಎಲ್ಲಿಗೆ ಹೋಗಬೇಕು ಅಲ್ಲಿಗೆ ಹೋಗಿ ತಲುಪುತ್ತೇವೆ ಎನ್ನುವ ನಂಬಿಕೆಯಿಂದಲೇ ಬಸ್ ಹತ್ತುತ್ತೇವೆ.
ಹೀಗೆ ಪ್ರತಿಯೊಂದು ಹಂತದಲ್ಲೂ ಮನುಷ್ಯ ನಂಬಿಕೆಯಿಂದಲೇ ಜೀವನ ಸಾಗಿಸುತ್ತಾ ಹೋಗುತ್ತಾನೆ. ‘ಸಂಶಯದಿಂದ ಇರುವವನು ಅಳಿದು ಹೋಗುತ್ತಾನೆ’ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ. ನಂಬಿ ಕೆಟ್ಟವರಿಲ್ಲ ಎಂದು ದಾಸವಾಣಿ ಹೇಳುತ್ತದೆ. ಆಂಟನಿ ರಾಬಿನ್ಸ್ ಹೇಳುವಂತೆ ನಂಬಿಕೆಗಿಂತ ಶಕ್ತಿಶಾಲಿಯಾದ, ಪರಿಣಾಮಕಾರಿಯಾದ ಅಸ್ತ್ರ ಬೇರೊಂದಿಲ್ಲ. ಅದು ನಮ್ಮನ್ನು ನಮ್ಮ ಗುರಿಯತ್ತ ಸಾಗಲು ತುಂಬಾ ನೆರವಾಗುತ್ತದೆ.
ಮಹಾತ್ಮ ಗಾಂಧಿಯವರು ಅಹಿಂಸೆಯ ಮೂಲಕವೇ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುತ್ತೇನೆ ಎಂಬ ಅಚಲವಾದ ನಂಬಿಕೆ ಹೊಂದಿದ್ದರು. ಎಷ್ಟೋ ಜನರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ಗಾಂಧೀಜಿ ಮಾತ್ರ ತಮ್ಮ ಅಹಿಂಸೆ ಹೋರಾಟ ಕೈಬಿಡದೆ ಸ್ವಾತಂತ್ರ್ಯ ತಂದುಕೊಡುವುದರಲ್ಲಿ ಸಫಲರಾದರು. ನಂಬಿಕೆಯಲ್ಲಿ ಮೂರು ವಿಧ. ಮೊದಲನೆಯದು, ನಮ್ಮ ಮೇಲೆ ನಮಗೆ ನಂಬಿಕೆ ಬೇಕು. ಇಲ್ಲದಿದ್ದರೆ ನಮ್ಮಲ್ಲಿ ನಕಾರಾತ್ಮಕ ಚಿಂತನೆಗಳು ಬೇರೂರಿ ನಾವು ಯಾವ ಕೆಲಸ ಮಾಡಲೂ ಅಸಮರ್ಥರಾಗುತ್ತೇವೆ. ಎರಡನೆಯದಾಗಿ, ನಾವು ನಮ್ಮ ಸಮಾಜದಲ್ಲಿ ನಂಬಿಕೆಗೆ ಉಳ್ಳವರು ಆಗಿರಬೇಕು. ಮೂರನೆಯದು, ದೈವತ್ವದಲ್ಲಿ ನಮಗೆ ನಂಬಿಕೆ ಬೇಕು. ಇದರಿಂದ ನಾವು ವಿಕಾಸಗೊಳ್ಳಲು ಸಾಧ್ಯವಾಗುತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)