ವಯಸ್ಸಾಗುವ ಮುನ್ನವೇ ವಿವೇಕವಂತರಾಗಿ ಬಾಳಿ...

Untitled design (7)
Published on

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

ನಾವು ಒಳ್ಳೆಯದೆಂದು ಭಾವಿಸಿದ ಅನೇಕ ಸಂಗತಿಗಳು ಒಳ್ಳೆಯದಲ್ಲವೆಂದು ಅರಿಯಲು ಬಹಳಷ್ಟು ಜೀವನಾನುಭವ ಬೇಕಾಗುತ್ತದೆ. ಕೃಷ್ಣನನ್ನು ‘ಸತ್ಯದ ಸ್ವಭಾವವೇನು?’ ಎಂದು ಕೇಳಿದಾಗ, ಅವನು ‘ವಿಷವಾಗಿ ತೋರುವುದು ಅಮೃತವಾಗಿರುತ್ತದೆ, ಅಮೃತವೆಂದು ರುಚಿಸುವುದು ವಿಷವಾಗಿರುತ್ತದೆ’ ಎಂದು ಉತ್ತರಿಸಿದ. ಇದನ್ನು ಅರಿಯಲು ಜೀವನದ ಅನುಭವ ಸಾಕಷ್ಟು ಪಡೆದಿರಬೇಕು. ಹೆಚ್ಚು ನೋವು ಪಡೆಯದೆ ಈ ಹಂತಕ್ಕೆ ಬರುವವರು ಬಹಳ ಕಡಿಮೆ. ಬಹುತೇಕ ಜನರಿಗೆ ಈ ಅರಿವು ಬರುವಷ್ಟರಲ್ಲಿ ಕಾಲ ಮೀರಿರುತ್ತದೆ.

ಅರ್ಥಾತ್ ಅವರ ಜೀವನದಲ್ಲಿ ಹೆಚ್ಚಿಗೆ ಏನೂ ವ್ಯತ್ಯಾಸ ಇರುವುದಿಲ್ಲ. ಆದ್ದರಿಂದ ನೀವು ಆದಷ್ಟು ಬೇಗ ಜೀವನವನ್ನು ಅನುಭವಿಸುವುದು ಒಳ್ಳೆಯದು. ಏಕೆಂದರೆ, ನೀವು ಮಹತ್ವದ ಸಂಗತಿಯೆಂದು ಯೋಚಿಸಿದ್ದುದು ಅಷ್ಟೇನೂ ಮಹತ್ವದ್ದಲ್ಲ ಎಂಬ ಸತ್ಯವನ್ನು ಬೇಗನೆ ಅರಿಯುವಿರಿ. ನಿಮಗೆ ಇದು ಅನುಭವಕ್ಕೆ ಬಂದಿದೆಯೇ? ಹದಿನಾರರ ವಯಸ್ಸಿನಲ್ಲಿ ಅಥವಾ ಮೂವತ್ತನೇ ವಯಸ್ಸಿನಲ್ಲಿ ಮಹತ್ವದ್ದಾಗಿ ತೋರಿದುದು ಈಗ ನಿಜವಾಗಿ ಮಹತ್ವವಿಲ್ಲದ್ದಾಗಿ ಅರಿವಿಗೆ ಬರುತ್ತದೆ. ಈ ಅರಿವು ಮೂವತ್ತರ ಹೊತ್ತಿಗೆ ಬರದಿದ್ದರೆ ಅರವತ್ತಕ್ಕೆ ಬರುತ್ತದೆ. ಹೀಗಾದರೆ ಜೀವನವೇ ವ್ಯರ್ಥವಾಗುತ್ತದೆ.

ದಂಪತಿ ಒಮ್ಮೆ ಬೈಕ್ ಮೇಲೆ ಹೋಗುತ್ತಿದ್ದರು. ಮಾಮೂಲಿನಂತೆ, ಏನೋ ಚಿಕ್ಕ ಜಗಳ ಶುರುವಾಯಿತು. ಪತಿ ಉದ್ವಿಗ್ನನಾಗಿ, ವಾಹನವನ್ನು ನಿಯಂತ್ರಿಸಲಾಗದೆ ರಸ್ತೆ ಮಧ್ಯದ ಡಿವೈಡರ್​ಗೆ ಡಿಕ್ಕಿ ಹೊಡೆದಾಗ ವಾಹನ ಮಗುಚಿಕೊಂಡಿತು. ನಂತರ, ಅವರಿಬ್ಬರೂ ಸ್ವರ್ಗದ ಬಾಗಿಲಲ್ಲಿ ನಿಂತಿದ್ದರು. ಒಳಗಡೆ ಹೋಗಿ ನೋಡಿದಾಗ, ಅಲ್ಲೊಂದು ಅದ್ಭುತ ಗಾಲ್ಪ್ ಕೋರ್ಸ್ ಇತ್ತು. ಬೇರೆ ಯಾರೂ ಅಲ್ಲಿ ಇರಲಿಲ್ಲ. ಆತ ಪತ್ನಿಯನ್ನು ಉದ್ದೇಶಿಸಿ ‘ಏನು ಹೇಳುವೆ? ನಾವೇ ಆಡೋಣವೇ?’ ಎಂದು ಕೇಳಿದ. ಪತ್ನಿ ಸಮ್ಮತಿಸಿದಳು. ಅವರು ಆಟ ಆರಂಭಿಸಿ ಹಸಿರು ಹಾಸಿನ ಬಳಿಗೆ ಬಂದರು. ಆತ ಚೆಂಡು ಹೊಡೆಯುವಷ್ಟರಲ್ಲಿ ಸುತ್ತಲಿನ ಸುಂದರ ದೃಶ್ಯವನ್ನು ನೋಡುತ್ತಲೇ ಏಕೋ ಉದ್ವಿಗ್ನನಾಗಿ ಹತಾಶೆಗೊಳಗಾದ. ಆಕೆ ‘ಈಗೇನಾಯಿತು?’ ಎಂದಳು. ಅವನು ‘ನಿನ್ನ ಸ್ಟುಪಿಡ್ ಹೆಲ್ದಿ ಫುಡ್ ಇಲ್ಲದಿದ್ದರೆ ನಾವು ಇಲ್ಲಿಗೆ ಬಹಳ ಮುಂಚೆಯೇ ಬರಬಹುದಾಗಿತ್ತು’ ಎಂದ.

ವಿವೇಕದ ಸುರಿಮಳೆ: ದೇಹ ಮತ್ತು ಮನಸ್ಸು ದೈನಂದಿನ ಆಧಾರದ ಮೇಲೆ ನಡೆಸುವ ಅನೇಕ ತಂತ್ರಗಳು ಆ ಕ್ಷಣದಲ್ಲಿ ‘ಇದಷ್ಟೇ ಇನ್ನೇನೂ ಇಲ್ಲ’ ಎಂಬಂತೆ ತೋರುತ್ತವೆ. ಸ್ವಲ್ಪ ಸಮಯದ ನಂತರ, ಹಿಂತಿರುಗಿ ನೋಡಿದಾಗ, ಅವು ವಾಸ್ತವವಾಗಿ ಅಷ್ಟೇನು ಒಳ್ಳೆಯದಲ್ಲ ಎಂಬುದನ್ನು ಗಮನಿಸುತ್ತೀರಿ. ಅವುಗಳಿಲ್ಲದೆಯೇ ಇನ್ನೂ ಚೆನ್ನಾಗಿರಬಹುದಿತ್ತು. ಈ ರೀತಿಯ ಅನೇಕ ವಿಷಯಗಳಿವೆ. ಮತ್ತು ಬೇರೆ ಇನ್ನೇನನ್ನೂ ಗಮನಿಸದೆ ಮೊದಲ ಬಾರಿಗೆ ಮಾಡುವ ಪ್ರತಿಯೊಂದರ ಬಗ್ಗೆ ಸಂತೋಷ ಹೊಂದಬೇಕು ಎಂಬಂತೆ ದೊಡ್ಡ ಸಾಮಾಜಿಕ ನಿರೀಕ್ಷೆಯನ್ನು ಸೃಷ್ಟಿಸಿಕೊಂಡಿದ್ದೀರಿ. ಯಾರೋ ಹೇಳಿರುವಂತೆ, ಅನುಭವವು ‘ನಿಮ್ಮ ಕೂದಲೆಲ್ಲ ಉದುರಿಹೋದ ಮೇಲೆ ಬಾಚಣಿಗೆ ಸಿಕ್ಕಂತೆ’, ಅಥವಾ ‘ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಸಿಕ್ಕಾಗ ಹಲ್ಲಿಲ್ಲ’ ಎಂಬ ಗಾದೆಯಂತೆ.

ನಿಮ್ಮನ್ನು ಹೂಳಲು ಕುಳಿ ತೆಗೆಯುವಾಗ ವಿವೇಕದ ಆಣಿಮುತ್ತುಗಳು ನಿಮ್ಮ ಮೇಲೆ ಸುರಿಯುತ್ತವೆ. ಇಲ್ಲ, ಅವು ಈಗಲೇ ಸುರಿಯಬೇಕು. ನೀವು ಯುವಕರಿದ್ದಾಗ, ಆರೋಗ್ಯವಂತರಾಗಿದ್ದಾಗ, ಜೀವನವು ನಿಮ್ಮ ಮುಂದಿರುವಾಗಲೇ ಬರೀ ಆಣಿಮುತ್ತುಗಳಲ್ಲ, ವಿವೇಕದ ಸುರಿಮಳೆಯೇ ನಿಮ್ಮ ಮೇಲೆ ಸುರಿಯಬೇಕು. ಇದು ಆಗಬೇಕಾದರೆ, ನಿಮ್ಮ ಗ್ರಹಿಕೆಗೆ ಸ್ಪಷ್ಟತೆ ತಂದುಕೊಳ್ಳದೆ ಬೇರೆ ದಾರಿಯಿಲ್ಲ. ಗ್ರಹಿಕೆಗೆ ಸ್ಪಷ್ಟತೆ ತರಲು ಸಾಕಷ್ಟು ಶ್ರಮ ವಹಿಸದಿದ್ದರೆ ವಿವೇಕ ಒಂದು ಆಕಸ್ಮಿಕ ಅಷ್ಟೇ. ಗ್ರಹಿಕೆಯಲ್ಲಿ ಸ್ಪಷ್ಟತೆ ಇಲ್ಲದಿದ್ದರೆ ಸಂಗತಿಗಳನ್ನು ಅವು ಇದ್ದಂತೆಯೇ ಗ್ರಹಿಸಲಾರಿರಿ. ಒಮ್ಮೆ ನಿಮ್ಮದು ಈ ರೀತಿಯ ತಪ್ಪು ಗ್ರಹಿಕೆಯಾದರೆ, ನಿಮಗೆ ಗೊತ್ತಿಲ್ಲದೆಯೇ ಹಾಸ್ಯಾಸ್ಪದವಾಗಿ ಜೀವನ ನಡೆಸುವಿರಿ. ನಿಮ್ಮೊಂದಿಗೆ ಹತ್ತು ಜನ ಸೇರಿರಬಹುದು, ಎಲ್ಲರದೂ ಅದೇ ಹಾಸ್ಯಾಸ್ಪದ ವರ್ತನೆ, ಎಲ್ಲರೂ ಅದೇ ಸರಿಯಾದ್ದು ಎನ್ನುವವರು- ಆದರೆ, ಒಂದು ದಿನ ನಿಮಗೇ ಅರಿವಾಗುತ್ತದೆ. ಅರಿವಾಗುವ ಆ ದಿನವೇ ನಿಮ್ಮ ಜೀವನದ ಕಡೆಯ ದಿನ ಆಗಬಾರದು ಎನ್ನುವುದು ನನ್ನ ಆಶಯ. ನಿಮ್ಮ ಜೀವನದ ಕಡೆಯ ಮೂರು ದಿನಗಳಾದರೂ ಸರಿ, ಅವುಗಳನ್ನು ವಿವೇಕದಿಂದ ಕಳೆದು ಜೀವನವನ್ನು ಆನಂದಿಸಬಹುದು.

ಜೀವನದ ವಿರುದ್ಧ ನಿಮ್ಮನ್ನು ಸಮರ್ಥಿಸಿಕೊಳ್ಳಬೇಡಿ: ಜನರು ಅನುಭವವನ್ನು ‘ಗಳಿಸಲು’ ಪ್ರಯತ್ನಿಸುತ್ತಿರುತ್ತಾರೆ. ಅನುಭವವನ್ನು ‘ಗಳಿಸುವುದಕ್ಕೆ ಆಗುವುದಿಲ್ಲ’. ಯಾವುದೇ ನಿರ್ಬಂಧವಿಲ್ಲದ ಜೀವನ ನಡೆಸಿದರೆ, ಅನುಭವ ತಾನಾಗಿಯೇ ಆಗುತ್ತದೆ. ಸುತ್ತಲೂ ಗೋಡೆಗಳನ್ನು ಕಟ್ಟಿಕೊಂಡು ಜೀವಿಸಿದರೆ ಜೀವನಾನುಭವ ಆಗಲಾರದು. ಮುಕ್ತವಾಗಿ ಜೀವಿಸಿದರೆ ಮಾತ್ರ ಜೀವನವು ಅನುಭವದ ರಾಶಿಯಾಗುತ್ತದೆ. ಚಿಕ್ಕ ಚಿಕ್ಕ ಸಂಗತಿಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುತ್ತಿದ್ದರೆ, ರಕ್ಷಣೆಯ ಅನುಭವವಲ್ಲದೆ ಬೇರಾವುದೂ ಸಿಗುವುದಿಲ್ಲ. ಯಾವುದರಿಂದ ರಕ್ಷಣೆ? ಜೀವನದ ವಿರುದ್ಧವೇ ನಿಮ್ಮನ್ನು ನೀವು ರಕ್ಷಿಸಿಕೊಳ್ಳುತ್ತಿದ್ದೀರಿ. ನೀವು ಇಲ್ಲಿಗೆ ಜೀವಿಸಲು ಬಂದಿಲ್ಲವಾದರೆ ಇದು ಉತ್ತಮ ಉಪಾಯ. ಆದರೆ ನೀವು ಜೀವನದ ಒಂದು ತುಣುಕು. ಅದರರ್ಥ ನೀವಿಲ್ಲಿ ಜೀವಿಸಲು ಬಂದಿದ್ದೀರಿ.

ನಿಮ್ಮಲ್ಲಿ ಯಾರು ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡಿದಿರಿ? ಸಂಗಾತಿಯೊಡನೆ ಜಗಳವಾಡಿದಿರಿ? ನಿಮ್ಮಲ್ಲಿ ಯಾರಿಗೆ ಸಾಯಬೇಕೆನಿಸಿದೆ? ಅಂಥವರು ಎರಡು ನಿಮಿಷ ಬಾಯಿ ಮುಚ್ಚಿಕೊಂಡು, ಮೂಗು ಬಿಗಿಹಿಡಿಯಿರಿ. ಸುಮ್ಮನೆ ತೀರ್ವನಿಸಬೇಡಿ. ಪ್ರಯತ್ನಿಸಿ ನೋಡಿ. ಅನುಭವ ಎನ್ನುವುದು ಇದೆ. ನಿಮ್ಮ ಮನಸ್ಸು ಹೇಳಿದುದನ್ನು ಮಾಡಬೇಡಿ, ನಾನು ಹೇಳಿದುದನ್ನೂ ಮಾಡಬೇಡಿ, ನಿಮ್ಮೊಳಗಿನ ಜೀವ ಹೇಳಿದಂತೆ ಮಾಡಿ. ಅದೇನು ಹೇಳುತ್ತದೆ? ಈ ಜೀವ ಬದುಕಲು ಇಚ್ಛಿಸುತ್ತದೆ. ನಿಮ್ಮ ಮನಸ್ಸು ಯೋಚಿಸುತ್ತಿರುವ ಅಸಂಬದ್ಧವೇ ವಾಸ್ತವವಲ್ಲ. ಈ ಜೀವ ಬದುಕಲು ಬಯಸುತ್ತದೆ. ಅಂದರೆ, ಇದು ಜೀವನದ ಪ್ರಕ್ರಿಯೆಯನ್ನು ಅನುಭವಿಸಲು ಬಯಸುತ್ತದೆ, ಆ ಮೂಲಕ ನೀವು ಜೀವನವನ್ನು ಅರಿತು, ಅದನ್ನು ಮೀರಿ ಹೋಗಲು ಸಾಧ್ಯ.

ಜೀವನವನ್ನು ಅರಿಯದೆ ಅದನ್ನು ಮೀರಿಹೋಗಲು ಸಾಧ್ಯವಿಲ್ಲ. ಅದರ ಪ್ರಕ್ರಿಯೆಯಲ್ಲೇ ಸಿಲುಕಿಕೊಳ್ಳುತ್ತೀರಿ, ಇಲ್ಲವೇ ಪ್ರಕ್ರಿಯೆಯನ್ನೇ ತಡೆಯುತ್ತೀರಿ. ಇವೆರಡೂ ಸಂಗತಿಗಳು ಮುಕ್ತಿಗೆ ಮಾರ್ಗವಲ್ಲ. ಜೀವನದ ಪ್ರಕ್ರಿಯೆಯನ್ನು ಅರಿತಾಗ ಮಾತ್ರ ಮುಕ್ತಿ ಸಾಧ್ಯವಾಗುತ್ತದೆ. ಜನರು ಅಂದುಕೊಳ್ಳುವಂತೆ, ನಿಮಗೆ ಅರವರತ್ತರ ವಯಸ್ಸಿನಲ್ಲಿ ಸಿಗುವ ವಿವೇಕವು ನಿಮಗೆ ಹದಿಹರೆಯದಲ್ಲೇ ಸಿಕ್ಕರೆ ನೀವು ನಿಜವಾಗಿಯೂ ಏನನ್ನಾದರೂ ಸಾಧಿಸುತ್ತೀರಿ. ಇದರರ್ಥ, ಜೀವನದ ಪ್ರಕ್ರಿಯೆಯನ್ನು ಅರಿತುಕೊಳ್ಳುತ್ತೀರಿ. ನಿರರ್ಥಕವಾದುದನ್ನು ಅನುಭವಿಸಬೇಕಿಲ್ಲ- ಅದನ್ನು ಮೀರಿಹೋಗುತ್ತೀರಿ. ಅಂದರೆ, ನೀವು ಮುಕ್ತಿಗೆ ಅರ್ಹರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net