ಶೋಆಫ್​ಗೆ ಮುನ್ನ ಸಾವಧಾನ; ಪ್ರಾಣಕ್ಕೇ ಕುತ್ತು ತಂದೀತು ಪ್ರದರ್ಶನ

Lalitha 2nd
Published on

ಹೆಣ್ಣುಮಕ್ಕಳಿಗೆ ಅಲಂಕಾರದ ಮೇಲೆ ಪ್ರೀತಿ ನಿಜ. ಹಾಗೆಂದು ತಿಜೋರಿಯಲ್ಲಿರುವ ವಸ್ತುಗಳನ್ನು ಪ್ರದರ್ಶಿಸಿದಾಗ ಇಲ್ಲವೇ ಮನದಲ್ಲಿರುವ ಮಾತುಗಳನ್ನು ಆಡುವಾಗ ಸುತ್ತಮುತ್ತ ಯಾರಿದ್ದಾರೆ ಎನ್ನುವುದನ್ನು ಗಮನಿಸದಿದ್ದರೆ ಪ್ರಾಣಕ್ಕೇ ಕಂಟಕವಾಗಬಹುದು, ಜೋಪಾನ!

| ಗೀತಾ ಕುಂದಾಪುರ

ತಮ್ಮಲ್ಲಿರುವ ಬಟ್ಟೆ, ಆಭರಣ, ಆಸ್ತಿಯ ಬಗ್ಗೆ ಎಲ್ಲರೊಡನೆ ಹೇಳಿಕೊಳ್ಳುವುದೆಂದರೆ ಪ್ರೀತಿ. ಅವುಗಳನ್ನು ಪ್ರದರ್ಶಿಸಿದರಷ್ಟೇ, ಪ್ರದರ್ಶಿಸಿ ಮೆರೆದಾಡಲೆಂದೇ ಖರೀದಿಸುವವರೂ ಇದ್ದಾರೆ, ಕೊನೆಯ ಪಕ್ಷ ಜಾಲತಾಣದಲ್ಲಿ ಫೋಟೋಗಾದರೂ ಪೋಸ್ ಕೊಟ್ಟು ಇತರರನ್ನು ಮೆಚ್ಚಿಸುವುದಕ್ಕಾಗಿಯೇ ಕೊಳ್ಳುವವರೂ ಅಥವಾ ಬೇರೆಯವರಿಂದ ಸ್ವಲ್ಪ ಸಮಯದವರೆಗೆ ಕಡ ಪಡೆಯುವವರೂ ಇದ್ದಾರೆ. ಆದರೆ ಪರಿಚಿತರು, ಅಪರಿಚಿತರು, ಸ್ನೇಹಿತರು, ಅಕ್ಕಪಕ್ಕದವರು, ಕಡೆಗೆ ಕೆಲಸದವರ ಮುಂದೂ ಅರಿತೋ, ಅರಿಯದೆಯೋ ತಮ್ಮಲ್ಲಿರುವ ಶ್ರೀಮಂತಿಕೆಯ ಬಗ್ಗೆ ಹೇಳಿಕೊಂಡರೆ ಇಲ್ಲವೇ ಪ್ರದರ್ಶನ ಮಾಡಿದರೆ ಅದು ಜೀವಕ್ಕೂ ಮುಳುವಾಗಬಹುದು ಎನ್ನುವುದು ನೆನಪಿರಲಿ.

ಮೊಬೈಲ್​ಫೋನ್​ನಲ್ಲಿ ನೆಟ್​ವರ್ಕ್ ಸರಿಯಾಗಿಲ್ಲವೆಂದು ಮನೆಯ ಹೊರಗೆ ಬಂದೋ, ಬಾಲ್ಕನಿಯಲ್ಲೋ, ಪೋರ್ಟಿಕೊದಲ್ಲೋ ನಿಂತು ಮಾತನಾಡುತ್ತೇವೆ, ಹೊರಗೆ ನಿಂತು ಆಡಿದ ಮಾತುಗಳು ಸ್ವಲ್ಪ ದೂರದವರೆಗೂ ಕೇಳಿಸುತ್ತದೆ, ಇದರಿಂದ ಮನೆಯ ಸಣ್ಣ, ದೊಡ್ಡ ವಿಷಯಗಳು ಜಗಜ್ಜಾಹೀರಾಗುತ್ತವೆ ಎಂಬುದೂ ತಲೆಯಲ್ಲಿರಲಿ. ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ನಡೆದ ಘಟನೆ ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ. 26 ವರ್ಷದ ರಂಜಿತಾ ಎನ್ನುವವರು ತಮ್ಮ ಸಂಬಂಧಿಕರ ಸುಮಾರು 40 ಗ್ರಾಂ ಚಿನ್ನದ ಸರ ಹಾಕಿಕೊಂಡು ಫೋಟೋ ತೆಗೆಸಿಕೊಂಡರು. ಈ ಫೋಟೋ ಎಲ್ಲೆಡೆ ಹರಿದಾಡಿತು. ಈ ಒಡವೆ ಪರಿಚಯದವಳೇ ಆದ ಇಂದ್ರಮ್ಮ ಎನ್ನುವವಳ ಕಣ್ಣು ಕುಕ್ಕಿತ್ತು. ಅಷ್ಟೇ... ರಂಜಿತಾ ಕೊಲೆಯಾದರು. ಅದು ಬೇರೆಯವರ ಸರವಾಗಿದ್ದ ಕಾರಣ, ಕೊಲೆ ಮಾಡಿದವರಿಗೆ ಸರ ಸಿಗಲಿಲ್ಲ. ಆದರೆ ಅಷ್ಟರಲ್ಲಿಯೇ ರಂಜಿತಾ ಪ್ರಾಣಪಕ್ಷಿ ಹಾರಿಹೋಗಿತ್ತು!

ಗಲ್ಲಿ ಗಲ್ಲಿಗಳಲ್ಲಿ ಒಡವೆಗಳ ಕಳ್ಳತನದ ಘಟನೆಗಳು ದಿನನಿತ್ಯ ನಡೆಯುತ್ತಲೇ ಇದೆ. ಅದರಲ್ಲಿಯೂ ಕರೊನಾ, ಲಾಕ್​ಡೌನ್ ಹಿನ್ನೆಲೆಯಲ್ಲಿ ಕೆಲಸ ಇಲ್ಲದ ಹಲವರು ಕಳ್ಳತನವನ್ನೇ ದಂಧೆ ಮಾಡಿಕೊಂಡಿದ್ದಾರೆ. ಇದು ಒಂದಾದರೆ ಇನ್ನೊಂದು ಇನ್ನೂ ಆಘಾತಕಾರಿ ಘಟನೆ. ಗೋಡೆಗಳಿಗೂ ಕಿವಿ ಇದೆ ಎನ್ನುವ ಗಾದೆ ಎಲ್ಲರಿಗೂ ಗೊತ್ತಿದ್ದದ್ದೇ, ಆದರೂ ಮೈ ಮರೆತು ಆಡಿ ಬಿಡುತ್ತೇವೆ, ಇದರಿಂದ ದೊಡ್ಡ ಬೆಲೆ ತೆರಬೇಕಾಗಬಹುದು. ಇತ್ತೀಚೆಗೆ ನಡೆದ ಮತ್ತೊಂದು ಘಟನೆ ನಮಗೆ ಸಾವಧಾನದ ಪಾಠ ಹೇಳುತ್ತಿದೆ. ವಿಶಾಲ ಗಾಣಿಗ ದುಬೈಯಿಂದ 7 ವರ್ಷದ ಮಗಳೊಂದಿಗೆ ಬ್ರಹ್ಮಾವರಕ್ಕೆ ಆಸ್ತಿ ವ್ಯವಹಾರಕ್ಕೆ ಸಹಿ ಹಾಕಲು ಬಂದಿದ್ದರು. ಬ್ಯಾಂಕ್ ವ್ಯವಹಾರ ಅದೂ, ಇದೂ ಎನ್ನುತ್ತಾ ಸುಮಾರು 75 ಕಿ.ಮೀ. ಒಂದೇ ರಿಕ್ಷಾದಲ್ಲಿ ಪ್ರಯಾಣಿಸಿದರು. ಬ್ಯಾಂಕ್ ಲಾಕರಿನಿಂದ ಚಿನ್ನವನ್ನೂ ತಂದಿದ್ದರು. ಅವರು ಮನೆಗೆ ಹೋಗಿ ತಲುಪಿದ ಸ್ವಲ್ಪ ಹೊತ್ತಿನಲ್ಲಿಯೇ ಪಾಲಕರು ಬಂದು ನೋಡಿದಾಗ ವಿಶಾಲ ಅವರ ಕೊಲೆಯಾಗಿತ್ತು! ಚಿನ್ನವೂ ನಾಪತ್ತೆಯಾಗಿತ್ತು. ಕೊನೆಗೆ ತಿಳಿದದ್ದು ಅವರು ಆಟೋದಲ್ಲಿ ಪ್ರಯಾಣದುದ್ದಕ್ಕೂ ಕುಟುಂಬದವರೊಡನೆ ಮೊಬೈಲಿನಲ್ಲಿ ಆಸ್ತಿ ವಿಚಾರ ಅಷ್ಟೇ ಅಲ್ಲದೇ ಬ್ಯಾಂಕ್​ನಿಂದ ಸರ ತೆಗೆದದ್ದು ಸೇರಿದಂತೆ ಹಲವು ವಿಷಯ ಮಾತನಾಡಿದ್ದರು. ಆಟೋ ಚಾಲಕನ ಮೇಲೆಯೇ ಬಲವಾದ ಸಂದೇಹ ಬಂದಿದ್ದು ಇದರ ವಿಚಾರಣೆ ನಡೆಯುತ್ತಿದೆ. ತುಟಿ ಮೀರಿ ಬಂದ ಮಾತುಗಳು, ಧರಿಸಿದ್ದ ಆಭರಣಗಳಿಂದಾಗಿ ವಿಶಾಲ ಪ್ರಾಣ ಕಳೆದುಕೊಳ್ಳಬೇಕಾಗಿ ಬಂತು.

ಜೀವಕ್ಕೆ ಕುತ್ತಾಗದಿರಲಿ: ಮನೆಯ ನಾಲ್ಕು ಗೋಡೆಯ ಮಧ್ಯದಲ್ಲಿರಬೇಕಾದ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳುವುದು ಅಭ್ಯಾಸವಾಗಿಬಿಟ್ಟಿದೆ, ಒಡವೆಗಳ ಫೋಟೋ, ಪ್ರವಾಸಕ್ಕೆ ಹೋಗಿರುವ ಫೋಟೋ, ಮನೆಯಲ್ಲಿ ಯಾರೂ ಇಲ್ಲದ ಕಾರಣ ಒಂಟಿತನ ಕಾಡುತ್ತಿದೆ ಎಂದು ಹೇಳಿಕೆ ನೀಡುವ ಮೆಸೇಜ್​ಗಳು... ಇವು ಎಲ್ಲವೂ ಆಪತ್ತಿಗೆ ಆಹ್ವಾನ ನೀಡಿದಂತೆ.

ಆಪತ್ತುಗಳಿಂದ ದೂರವಿರಬೇಕಾದರೆ

  • ಆಭರಣ ಆಪತ್ತಿನ ಕಾಲಕ್ಕಿರಲಿ, ಅದರ ಅನಗತ್ಯ ಪ್ರದರ್ಶನ ಬೇಡ. 
  • ಕಂಡಕಂಡವರ ಬಳಿ ಆಸ್ತಿ, ಆಭರಣಗಳ ವಿವರ ಕೊಡಬೇಡಿ 
  • ಮೊಬೈಲಿನಲ್ಲಿ ಮಾತನಾಡುವಾಗ ಸುತ್ತಮುತ್ತ ಯಾರಿದ್ದಾರೆ, ಧ್ವನಿ ಎಲ್ಲಿಯವರೆಗೆ ಕೇಳಿಸಬಹುದು ಎನ್ನುವ ಅಂದಾಜಿರಲಿ.
  • ಜಾಲತಾಣದಲ್ಲಿ ವೈಯಕ್ತಿಕ ವಿಚಾರ ಬೇಡ.
  • ಫೈಂಡ್ ಮೈ ಫ್ರೆಂಡ್ಸ್, ಫೈಂಡ್ ಮೈ ಫ್ಯಾಮಿಲಿ ಆಪ್​ಗಳಿಂದ ನೀವೆಲ್ಲಿದ್ದೀರಿ ಎಂದು ಟ್ರ್ಯಾಕ್ ಮಾಡಬಹುದು, ಇದನ್ನು ಮೊಬೈಲ್​ನಲ್ಲಿ ಇರಲಿ.
  • ಕ್ಯಾಬ್​ಗಳಲ್ಲಿ ಒಬ್ಬರೇ ಹೋಗಬೇಕಿದ್ದರೆ ವಾಪಸ್ ಬರುವ ವೇಳೆಯನ್ನು ಯಾರಿಗಾದರೂ ಹೇಳಿಡಿ. ಪ್ರಯಾಣಿಸುವಾಗ ಅನುಮಾನ ಬಂದರೆ ಮನೆಯವರೊಡನೆ ಮೊಬೈಲ್​ನಲ್ಲಿ ಮಾತನಾಡುತ್ತಿರಿ. 
  • ಒಂಟಿಯಾಗಿ ಹೆದರಿಕೊಂಡಂತೆ ಕಾಣಿಸುವುದು, ಪದೇಪದೆ ಬ್ಯಾಗನ್ನು ಮುಟ್ಟಿ ನೋಡಿಕೊಳ್ಳುವುದು ತರವಲ್ಲ.
  • ಹತ್ತಿರದ ಪೊಲೀಸ್ ಸ್ಟೇಷನ್ ನಂಬರ್, ಬೆಂಗಳೂರಿನಲ್ಲಾದರೆ ಮಹಿಳೆ ಯರ ಸಹಾಯಕ್ಕಾಗಿ ಇರುವ ಹೊಯ್ಸಳ ಪಡೆಯ ನಂಬರ್ ಸದಾ ಇರಲಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net