ಹರೆಯ ಹುಷಾರು; ಆ ಕ್ಷಣ ಅಂಕಣ...

Aa kshana
Published on
ಹದಿಮೂರು ವರ್ಷದ ರೀಟಾ (ಇಲ್ಲಿ ಬರುವ ಯಾವವೂ ನಿಜ ಹೆಸರಲ್ಲ) ಎಂಟನೆಯ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ಆಕೆಯ ಮಾತಾಪಿತರಿಬ್ಬರೂ ಸಾಫ್ಟ್್ಟೇರ್ ಇಂಜಿನಿಯರ್​ಗಳಾಗಿದ್ದು, ಒಬ್ಬಳೇ ಮಗಳಾಗಿದ್ದ ರೀಟಾಳನ್ನು ನಗರದ ಹೆಸರಾಂತ ಶಾಲೆಗೆ ಡೊನೇಷನ್ ಕೊಟ್ಟು ಸೇರಿಸಿದ್ದರು. ಅಪಾರ್ಟ್ ಮೆಂಟ್ ಸಮುಚ್ಚಯವೊಂದರಲ್ಲಿದ್ದ ಅವರು ಮನೆಕೆಲಸಕ್ಕೆಂದು ಮಧ್ಯವಯಸ್ಕ ಹೆಣ್ಣುಮಗಳೊಬ್ಬಳನ್ನು ನೇಮಿಸಿಕೊಂಡಿದ್ದರು. ಆಕೆ ಬೆಳಗ್ಗೆಯೇ ಕೆಲಸಕ್ಕೆ ಬಂದು ರೀಟಾಳ ಮಾತಾಪಿತರಲ್ಲೊಬ್ಬರು ವಾಪಸಾಗುವತನಕ ಇರುತ್ತಿದ್ದು, ನಂತರ ಹೋಗುತ್ತಿದ್ದಳು.

ರೀಟಾಳ ಮನೆಯ ಸಮೀಪದಲ್ಲಿಯೇ ಆಟದ ಮೈದಾನವೊಂದಿತ್ತು. ಅವಳ ಮನೆಯ ಬಾಲ್ಕನಿಯಿಂದ ಈ ಆಟದ ಮೈದಾನವು ಕಾಣುತ್ತಿತ್ತು. ತನ್ನ ಸಹಪಾಠಿ ಭಾರದ್ವಾಜ್ ಮತ್ತವನ ಸೋದರ ಋಷಿಕೇಶ್ ಶಾಲೆ ಬಿಟ್ಟ ನಂತರ ಆ ಮೈದಾನಕ್ಕೆ ಪ್ರತಿದಿನವೂ ಬಂದು ಆಟವಾಡುತ್ತಿದ್ದು, ಕತ್ತಲಾದ ನಂತರ ಮನೆಗೆ ಹೋಗುತ್ತಿದ್ದುದನ್ನು ರೀಟಾ ಗಮನಿಸಿದ್ದಳು. ಒಂದು ಸಂಜೆ ತಾನು ಸಹಪಾಠಿಗಳನ್ನು ನೋಡಲು ಹೋಗುತ್ತೇನೆ ಎಂದು ಮನೆಯ ಕೆಲಸದಾಕೆಗೆ ತಿಳಿಸಿದ ರೀಟಾ ಆಟದ ಮೈದಾನಕ್ಕೆ ಹೋದಳು. ಭಾರದ್ವಾಜ್ ಇನ್ನೊಬ್ಬ ವಿದ್ಯಾರ್ಥಿಯ ಜತೆ ಬೆಂಚಿನ ಮೇಲೆ ಕುಳಿತು ಮೊಬೈಲ್​ನಲ್ಲಿ ಏನನ್ನೋ ನೋಡುತ್ತಿದ್ದ. ರೀಟಾಳನ್ನು ನೋಡಿ ಅಲ್ಲಿಗೆ ಬಂದ ಕಾರಣ ಕೇಳಿದ. ‘ಇಂದು ಫಿಸಿಕ್ಸ್ ತರಗತಿಯಲ್ಲಿ ಕೊಟ್ಟ ನೋಟ್ಸ್ ನನ್ನಿಂದ ಬರೆದುಕೊಳ್ಳಲಾಗಲಿಲ್ಲ, ನಿನ್ನ ಬಳಿಯಿದ್ದರೆ ಕೊಡುವಿಯಾ?’ ಎಂದು ಕೇಳಿದಳು ರೀಟಾ. ಆಗಲಿ ಎಂದಾತ ರೀಟಾಳನ್ನು ತನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ತಿಳಿಸಿ ಮೊಬೈಲ್ ನೋಡುವುದರಲ್ಲಿಯೇ ತಲ್ಲೀನನಾದ. ಕೆಲ ಸಮಯದ ನಂತರ ಆತ, ‘ನಾನು ಹತ್ತು ನಿಮಿಷಗಳ ಕಾಲ ಆಟವಾಡಿ ಬಂದು ನಿನಗೆ ನೋಟ್ಸ್ ಕೊಡುವೆ, ಅಲ್ಲಿಯವರೆಗೆ ನೀನೂ ಈ ವಿಡಿಯೋ ನೋಡುತ್ತಿರು, ಸಕತ್ತಾಗಿದೆ’ ಎಂದು ಹೇಳಿ ಅವಳಿಗೆ ತನ್ನ ಮೊಬೈಲ್ ಕೊಟ್ಟ.

ಭಾರದ್ವಾಜ್​ನ ಮೊಬೈಲ್​ನಲ್ಲಿದ್ದ ವಿಡಿಯೋವನ್ನು ನೋಡಲಾರಂಭಿಸಿದ ಕೂಡಲೇ ಆಕೆಗೆ ಮೈ ಜುಮ್ಮೆಂದಿತು. ಅದು ನೀಲಿಚಿತ್ರವೊಂದರ ವೀಡಿಯೋವಾಗಿತ್ತು. ರೀಟಾಳಿಗೆ ಅದನ್ನು ನೋಡಲು ಹೇಸಿಗೆಯುಂಟಾಗಿ ನೋಡುವುದನ್ನು ನಿಲ್ಲಿಸಿದಳು. ಆದರೆ, ಕೆಲ ನಿಮಿಷಗಳ ನಂತರ ಮುಂದೇನಾಗುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲದಿಂದ ಕ್ಲಿಪ್ ಮುಗಿಯುವವರೆಗೆ ಆಕೆ ಮಂತ್ರಮುಗ್ಧಳಾಗಿ ಆ ವಿಡಿಯೋವನ್ನು ನೋಡಿದಳು. ಆಕೆಗೆ ಅದೊಂದು ವಿಶಿಷ್ಟ ರೀತಿಯ ಅನುಭವವಾಗಿತ್ತು. ಅಷ್ಟರಲ್ಲಿ ಆಟ ಮುಗಿಸಿ ವಾಪಸಾದ ಭಾರದ್ವಾಜ್​ಗೆ ಫೋನ್ ಮರಳಿಸುತ್ತಾ, ‘ಇಂತಹ ಚಿತ್ರಗಳನ್ನು ನೋಡಲು ನಿನಗೆ ನಾಚಿಕೆಯಾಗುವುದಲ್ಲವೇ?’ ಎಂದು ರೀಟಾ ಕೇಳಿದಳು. ‘ಖಂಡಿತ ಇಲ್ಲ. ಸೆಕ್ಸ್ ಎಲ್ಲರೂ ಮಾಡುವ ಕ್ರಿಯೆ, ನಾಚಿಕೆ ಏಕೆ ಆಗಬೇಕು?’ ಎಂದವನು ಮರುಪ್ರಶ್ನೆ ಹಾಕಿದ. ‘ಇನ್ನಷ್ಟು ವಿಡಿಯೋಗಳನ್ನು ತೋರಿಸುವೆ, ನೋಡುವೆಯಾ?’ ಎಂದು ಭಾರದ್ವಾಜ್ ಕೇಳಿದಾಗ ನಾಚಿಕೊಂಡ ರೀಟಾ ನೋಟ್ಸನ್ನು ಪಡೆದು ಮನೆಗೆ ವಾಪಸ್ಸಾದಳು. ಆ ರಾತ್ರಿಯೆಲ್ಲ ತಾನು ಮೊಬೈಲ್​ನಲ್ಲಿ ನೋಡಿದ ವಿಡಿಯೋ ದೃಶ್ಯಗಳೇ ರೀಟಾಳ ಮನಸ್ಸನ್ನು ಆಕ್ರಮಿಸಿಕೊಂಡಿದ್ದವು. ಹದಿಹರೆಯಕ್ಕೆ ಬಂದಿದ್ದ ಅವಳಿಗೆ ಆ ವೀಡಿಯೋ ಒಂದು ರೀತಿಯ ಥ್ರಿಲ್ ಕೊಟ್ಟಿತ್ತು. ಮಾರನೆಯ ದಿನವೂ ಕುತೂಹಲ ತಡೆಯಲಾಗದ ರೀಟಾ ಮತ್ತೊಮ್ಮೆ ಆಟದ ಮೈದಾನಕ್ಕೆ ಹೋಗಿ ಭಾರದ್ವಾಜ್​ನನ್ನು ಸಂರ್ಪಸಿದಳು. ‘ಏಕೆ ಬಂದೆ?’ ಎಂದು ಆತ ಕೇಳಿದಾಗ ನಿನ್ನ ಫೋನಿನಲ್ಲಿರುವ ಇನ್ನಷ್ಟು ವಿಡಿಯೋಗಳನ್ನು ನೋಡಬೇಕೆನ್ನಿಸಿತು, ಅದಕ್ಕೇ, ಎಂದಳು. ನಸುನಕ್ಕ ಭಾರದ್ವಾಜ್ ಅವಳಿಗೆ ಇನ್ನಷ್ಟು ವಿಡಿಯೋಗಳನ್ನು ಆ ದಿನ ತೋರಿಸಿದ.

ಹೀಗೆಯೇ ರೀಟಾಳಿಗೆ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುವ ಚಟ ಬೆಳೆಯಿತು. ಒಂದು ತಿಂಗಳ ನಂತರ ರೀಟಾಳ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಕೆ ರಜೆ ಹೋಗಿದ್ದಳು. ಆ ಸಂದರ್ಭವನ್ನು ಉಪಯೋಗಿಸಿಕೊಂಡ ರೀಟಾ ಆಟದ ಮೈದಾನಕ್ಕೆ ಹೋಗಿ ಭಾರದ್ವಾಜ್​ನನ್ನು ಸಂರ್ಪಸಿದಳು. ‘ನಮ್ಮ ಮನೆಯಲ್ಲಿ ಈಗ ಯಾರೂ ಇಲ್ಲ, ನಿನ್ನ ಮೊಬೈಲಿನಲ್ಲಿರುವ ವಿಡಿಯೋಗಳನ್ನು ನಮ್ಮ ಮನೆಯ 72 ಇಂಚಿನ ಟಿ.ವಿ ಪರದೆಯ ಮೇಲೆ ಹಾಕಿ ನೋಡೋಣ, ಮಜಾ ಬರುತ್ತದೆ’ ಎಂದಳು. ‘ನಾನೊಬ್ಬನೆ ಬರಲು ಸಾಧ್ಯವಿಲ್ಲ. ನನ್ನ ಜತೆಯಲ್ಲಿರುವವರೆಲ್ಲರನ್ನೂ ನಿನ್ನ ಮನೆಗೆ ಕರೆತರಲು ಒಪ್ಪಿದರೆ ಬರುವೆ’ ಎಂದ ಭಾರದ್ವಾಜ್. ರೀಟಾ ಒಪ್ಪಿದಾಗ ಭಾರದ್ವಾಜ್ ತನ್ನ ನಾಲ್ಕು ಸ್ನೇಹಿತರೊಡನೆ ಅವಳ ಮನೆಗೆ ಬಂದ.

ಬಂದ ಅತಿಥಿಗಳಿಗೆ ತಂಪು ಪಾನೀಯ ಕೊಟ್ಟ ರೀಟಾ ಮನೆಯ ದೊಡ್ಡ ಟಿ.ವಿ ಪರದೆಯ ಮೇಲೆ ಮೊಬೈಲಿನಲ್ಲಿದ್ದ ವಿಡಿಯೋ ಹಾಕಿದಳು. ಅವರೆಲ್ಲರೂ ಚಿತ್ರದ ದೃಶ್ಯಗಳನ್ನು ನೋಡುತ್ತಿದ್ದಂತೆ, ಉದ್ರೇಕಗೊಂಡ ಭಾರದ್ವಾಜ್ ಈ ಚಿತ್ರದಲ್ಲಿನ ಸೀನ್​ನಲ್ಲಿರುವಂತೆ ನಾವೂ ಮಾಡಿದರೆ ಇನ್ನಷ್ಟು ಮಜಾ ಬರುತ್ತದೆ ಎಂದು ಹೇಳಿ ರೀಟಾಳನ್ನು ಬಿಗಿದಪ್ಪಿಕೊಂಡು ಆಕೆಯನ್ನು ಬಲವಂತವಾಗಿ ಚುಂಬಿಸಿದ. ಆನಂತರ ಮನೆಗೆ ಬಂದಿದ್ದ ಬಾಲಕರು ಅವಳನ್ನು ವಿವಸ್ತ್ರಳನ್ನಾಗಿ ಮಾಡಿ ಅವಳ ಮೇಲೆ ಹಸಿದ ತೋಳಗಳಂತೆ ಎರಗಿದರು. ತಮ್ಮ ಬಳಿ ಕಾಂಡಂ ಇಲ್ಲವೆಂದು ಒಬ್ಬ ಬಾಲಕ ಮನಗಂಡು ಇತರ ಬಾಲಕರಿಗೆ ಎಚ್ಚರದಿಂದಿರಲು ಸೂಚಿಸಿದ. ವಾಂಛೆಯನ್ನು ತೀರಿಸಿಕೊಂಡ ನಂತರ ಅವರೆಲ್ಲ ರೀಟಾಳ ಮನೆಯಿಂದ ನಿರ್ಗಮಿಸಿದರು.

ರೀಟಾಳಿಗೆ ಅದೇ ಮೊದಲ ಲೈಂಗಿಕ ಅನುಭವವಾಗಿದ್ದ ಕಾರಣ ಆಕೆ ತಲ್ಲಣಗೊಂಡಿದ್ದಳು. ಆಕೆಯ ಮೈಮನಗಳೆರಡೂ ಘಾಸಿಗೊಂಡಿದ್ದವು. ಮುಂದೇನು ಮಾಡುವುದೆಂದು ಅವಳಿಗೆ ತೋಚದಾಯಿತು. ಕೂಡಲೇ ಆಕೆ ಗೆಳತಿಯೊಬ್ಬಳಿಗೆ ಫೋನ್ ಮಾಡಿ ನಡೆದ ವಿಷಯ ತಿಳಿಸಿದಳು. ಸಮಾಧಾನ ಹೇಳಿದ ಆ ಗೆಳತಿ ನಡೆದದ್ದನ್ನು ತಂದೆ ತಾಯಿಗೆ ತಿಳಿಸಬೇಡ ಎಂದು ತಾಕೀತು ಮಾಡಿದಳು.

ಮುಂದಿನ ಕೆಲವು ದಿನಗಳು ರೀಟಾ ಏನೂ ಆಗದಂತೆಯೇ ವರ್ತಿಸುತ್ತಿದ್ದಳು. ಸಹಪಾಠಿ ಭಾರದ್ವಾಜನಿಂದ ಆದಷ್ಟು ದೂರವೇ ಉಳಿದಳು. ಸುಮಾರು ಒಂದು ತಿಂಗಳ ನಂತರ ಭಾರದ್ವಾಜನ ಜತೆ ರೀಟಾಳ ಮನೆಗೆ ಬಂದಿದ್ದ ಸುಂದರ್ ಎನ್ನುವ ಬಾಲಕ ಅವಳನ್ನು ಶಾಲೆಯಲ್ಲಿ ಸಂರ್ಪಸಿ, ‘ನನ್ನ ಬಳಿ ಒಂದು ಬೊಂಬಾಟ್ ವಿಡಿಯೋ ಇದೆ, ನೋಡಲು ಬರುವೆಯಾ?’ ಎಂದು ಕೇಳಿದ. ಅವನೊಡನೆ ಹೋಗಲು ಮನಸ್ಸಿಲ್ಲದಿದ್ದರೂ ವಿಡಿಯೋ ನೋಡುವ ಆಸೆಯಿಂದ ರೀಟಾ ಒಪ್ಪಿದಾಗ ಆತ ಅವಳನ್ನು ತನ್ನ ಮನೆಗೆ ಕರೆದುಕೊಂಡು ಹೋದ. ಅಲ್ಲಿ ಭಾರದ್ವಾಜ್ ಸಹ ಇದ್ದ. ವಿಡಿಯೋ ನೋಡಿ ಮುಗಿದ ಬಳಿಕ ಸುಂದರ್ ಮತ್ತು ಭಾರದ್ವಾಜ್ ರೀಟಾಳನ್ನು ಒಬ್ಬರ ನಂತರ ಒಬ್ಬರಂತೆ ರೇಪ್ ಮಾಡಿದರು.

ರೀಟಾ ತಡವಾಗಿ ಮನೆಗೆ ಬಂದದ್ದಲ್ಲದೆ ನೋವಿನಿಂದ ನರಳುತ್ತಿರುವುದನ್ನು ಗಮನಿಸಿದ ಮನೆಯ ಕೆಲಸದಾಕೆ ಏನಾಯಿತೆಂದು ವಿಚಾರಿಸಿದಳು. ರೀಟಾ ಉತ್ತರಿಸದೆ ಅಳತೊಡಗಿದಳು. ಕೆಲಸದಾಕೆ ರೀಟಾಳ ತಾಯಿಗೆ ಕರೆ ಮಾಡಿ ಮನೆಗೆ ಬರಹೇಳಿದಳು. ರೀಟಾ ನಡೆದ ವಿಷಯವನ್ನು ತಾಯಿಗೆ ವಿವರಿಸಿ ಈ ಹಿಂದೆ ತಮ್ಮ ಮನೆಯಲ್ಲಿ ನಡೆದ ಘಟನೆಯನ್ನೂ ಮರೆಮಾಚದೆ ತಿಳಿಸಿದಳು. ರೀಟಾಳ ಮಾತಾಪಿತರು ಪೊಲೀಸರಿಗೆ ದೂರು ಕೊಡುವ ಮುನ್ನ ಸುಂದರ್ ಮತ್ತು ಭಾರದ್ವಾಜರ ಮಾತಾಪಿತರೊಡನೆ ರ್ಚಚಿಸಬೇಕೆಂದು ತೀರ್ವನಿಸಿ ಅವರಿಬ್ಬರ ಮನೆಗೆ ಹೋದರು. ಆದರೆ, ಅವರು ತಮ್ಮ ಮಕ್ಕಳು ಸಂಭಾವಿತರೆಂದು ವಾದಿಸಿ ರೀಟಾಳ ನಡತೆಯನ್ನೇ ದೂಷಿಸಿದರು. ‘ನಿಮ್ಮ ಮಗಳಿಂದ ಇಡೀ ಶಾಲೆ ಕೆಡುತ್ತಿದೆ, ಮೊದಲು ಅವಳಿಗೆ ಬುದ್ಧಿ ಕಲಿಸಿ’ ಎಂದರು.

ಇನ್ನು ಪೊಲೀಸರಿಗೆ ದೂರು ಕೊಡದೆ ವಿಧಿಯಿಲ್ಲ ಎಂದು ಗೀತಾಳ ಮಾತಾಪಿತರು ಯೋಚಿಸುತ್ತಿರುವಾಗ ಇನ್ನೊಂದು ಘಟನೆ ನಡೆಯಿತು. ಸುಂದರ್ ತಾನು ಮತ್ತು ಭಾರದ್ವಾಜ್ ರೀಟಾಳ ಮೇಲೆ ನಡೆಸಿದ್ದ ಅತ್ಯಾಚಾರದ ವಿಡಿಯೋವನ್ನು ಮಾಡಿಕೊಂಡಿದ್ದು ಅದನ್ನು ವಾಟ್ಸಪ್ ಮೂಲಕ ತನ್ನ ಖಾಸಾ ಗೆಳೆಯರಿಗೆ ಕಳುಹಿಸಿದ್ದ. ಅದು ರೀಟಾಳ ಗೆಳತಿ ಪ್ರಿಯಾಳಿಗೂ ಮುಟ್ಟಿತು. ಅವಳು ಅದನ್ನು ರೀಟಾಗೆ ಫಾರ್ವರ್ಡ್ ಮಾಡಿದಳು. ಈ ವಿಡಿಯೋ ನೋಡಿದ ರೀಟಾಗೆ ಆಕಾಶವೇ ಕಳಚಿಬಿದ್ದಂತಾಯಿತು. ಅವಳದನ್ನು ತನ್ನ ಮಾತಾಪಿತರಿಗೆ ತೋರಿಸಿದಳು. ಇನ್ನು ಸುಮ್ಮನಿದ್ದರೆ ಫಲವಿಲ್ಲವೆಂದು ರೀಟಾಳ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದರು.

ದೂರು ಪಡೆದ ಪೊಲೀಸರು ರೀಟಾಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು. ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರವಾದ ಬಗ್ಗೆ ಸಾಬೀತಾಯಿತು. ಪೊಲೀಸರು ಪೋಕ್ಸೋ ಕಾನೂನಿನ ಅಡಿ ಎರಡು ಬೇರೆ ಬೇರೆ ಪ್ರಕರಣಗಳನ್ನು ದಾಖಲಿಸಿದರು. ರೀಟಾಳ ಮನೆಯಲ್ಲಿ ನಡೆದ ಮೊದಲ ಪ್ರಕರಣದಲ್ಲಿ ಐದು ಜನರನ್ನೂ ಸುಂದರ್​ನ ಮನೆಯಲ್ಲಿ ನಡೆದ ಎರಡನೆಯ ಪ್ರಕರಣದಲ್ಲಿ ಇಬ್ಬರನ್ನೂ ಆರೋಪಿಗಳನ್ನಾಗಿ ಮಾಡಲಾಯಿತು. ಆರೋಪಿ ಬಾಲಕರು ಬೇರೆ ಬೇರೆ ಶಾಲೆಗಳಲ್ಲಿ 8 ರಿಂದ 10ನೆಯ ತರಗತಿಗಳ ವಿದ್ಯಾರ್ಥಿಗಳಾಗಿದ್ದು ಅವರ್ಯಾರಿಗೂ ಹದಿನಾರು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಲಿಲ್ಲ. ಪೊಲೀಸರು ಐದೂ ಜನರ ಮನೆಗಳಿಗೆ ಹೋಗಿ ಆ ಬಾಲಕರು ಬಳಸುತ್ತಿದ್ದ ಮೊಬೈಲ್ ಫೋನುಗಳನ್ನು ವಶಪಡಿಸಿಕೊಂಡರು. ಪ್ರತಿಯೊಬ್ಬರ ಪೋನಿನಲ್ಲಿಯೂ ಅಶ್ಲೀಲ ಫೋಟೋಗಳೂ, ವಿಡಿಯೋಗಳೂ ಇದ್ದುವಲ್ಲದೆ, ಸುಂದರ್​ನ ಫೋನಿನಲ್ಲಿ ರೀಟಾಳ ಮೇಲಾಗಿದ್ದ ಅತ್ಯಾಚಾರದ ದೃಶ್ಯಗಳು ಇದ್ದವು. ಎಲ್ಲರನ್ನೂ ಬಾಲನ್ಯಾಯಾಲಯದಲ್ಲಿಯೇ ವಿಚಾರಣೆಗೊಳಪಡಿಸಲಾಯಿತು. ಏತನ್ಮಧ್ಯೆ ಆ ಬಾಲಕರನ್ನು ಶಾಲೆಯಿಂದ ಹೊರಹಾಕಲಾಯಿತು. ಎರಡೂ ಪ್ರಕರಣಗಳಲ್ಲಿ ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ವನಿಸಲಾಗಿ ತಲಾ ಮೂರು ವರ್ಷಗಳ ಕಾಲ ಬಾಲಗೃಹದಲ್ಲಿರಲು ಆದೇಶಿಸಲಾಯಿತು. ಎರಡೂ ಶಿಕ್ಷೆಗಳನ್ನು ಒಟ್ಟಾರೆಯಾಗಿ ಅನುಭವಿಸುವಂತೆ ಹೇಳಲಾಯಿತು.

ಇತ್ತೀಚಿಗೆ ಶಾಲೆಯೊಂದರಲ್ಲಿ ಬಾಲಕ ಬಾಲಕಿಯರ ಬ್ಯಾಗುಗಳನ್ನು ತಪಾಸಣೆ ಮಾಡಿದಾಗ ಅಶ್ಲೀಲ ಪುಸ್ತಕಗಳು, ವಿಡಿಯೋಗಳು, ಕಾಂಡಂ, ಗರ್ಭ ನಿರೋಧಕ ಮಾತ್ರೆಗಳು, ಸಿಗರೇಟ್, ಮಾದಕ ವಸ್ತುಗಳು ಮುಂತಾದವು ದೊರಕಿರುವುದು ಪೋಷಕರಲ್ಲಿ ಆತಂಕ ಹುಟ್ಟಿಸಿದೆ. ಹದಿಹರೆಯದ ಸಮಯದಲ್ಲಿ ಬಾಲಕ ಬಾಲಕಿಯರನ್ನು ಎಚ್ಚರದಿಂದ ನೋಡಿಕೊಳ್ಳಬೇಕು. ಅವರ ವಿದ್ಯಾಭ್ಯಾಸವಲ್ಲದೆ ಇತರ ಚಟುವಟಿಕೆಗಳೇನು ಎನ್ನುವುದನ್ನೂ ಸೂಕ್ಷ್ಮವಾಗಿ ಗಮನಿಸಬೇಕು. ಮೊಬೈಲ್ ಗೀಳನ್ನು ಬಿಡಿಸಿ ಬೇರಿತರ ಚಟುವಟಿಕೆಗಳಲ್ಲಿ ಅವರ ಆಸಕ್ತಿ ಹೆಚ್ಚುವಂತೆ ಮಾಡಬೇಕು. ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಕೊಡುವ ಬಗ್ಗೆ ಗಮನಹರಿಸಬೇಕು. ‘ತೃಪ್ತಿಯರಿಯದ ವಾಂಛೆ, ಜೀರ್ಣಿಸದ ಭುಕ್ತಿವೊಲು, ಗುಪ್ತದಲಿ ಕೊಳೆಯುತ್ತೆ ವಿಷಬೀಜವಾಗಿ. ಪ್ರಾಪ್ತಿಗೊಳಿಪುದು ಜೀವಕುನ್ಮಾದ ತಾಪಗಳ ಸುಪ್ತವಹುದೆಂತಿಚ್ಛೆ? ಮಂಕುತಿಮ್ಮ’ ಎನ್ನುವುದು ನೆನಪಿರಲಿ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net