

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)
ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶಕ್ಕೆ ನಿತ್ಯ ನೂರಾರು-ಸಾವಿರಾರು ಬಸ್ಸುಗಳು ಜನರನ್ನು ತುಂಬಿಕೊಂಡು ಬರುತ್ತವೆ. ಬಸ್ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಜನರೆಲ್ಲ ಸರಸರನೆ ಎಲ್ಲಿಗೋ ಸಾಗುತ್ತಾರೆ. ಬ್ಯಾಗು ಬೆನ್ನಿಗೇರಿಸಿಕೊಂಡ ಯುವಕ-ಯುವತಿಯರು, ಚೀಲ ಹಿಡಿದ ವಯಸ್ಕರು, ತಲೆಮೇಲೆ ಗಂಟು ಇರಿಸಿಕೊಂಡು ಪುಟ್ಟ ಮಕ್ಕಳನ್ನು ಎತ್ತಿಕೊಂಡ ತಾಯಂದಿರು... ಹೀಗೆ ಎಲ್ಲ ವಯೋಮಾನದವರು ಕಾಣಸಿಗುತ್ತಾರೆ. ರೈಲು ನಿಲ್ದಾಣದಲ್ಲಿ ಕೂಡ ಇದೇ ಸನ್ನಿವೇಶ. ಇದು ಒಂದೆರಡು ದಿನದ ಮಾತಲ್ಲ. ನಿತ್ಯದ ನೋಟ. ಇವರೆಲ್ಲ ಎಲ್ಲಿಂದ ಬರುವವರು? ಗಮ್ಯ ಯಾವುದು? ಇಲ್ಲಿ ಏನು ಮಾಡುತ್ತಾರೆ?
2031ರ ಹೊತ್ತಿಗೆ ಬೆಂಗಳೂರು ಜನಸಂಖ್ಯೆ 1.5 ಕೋಟಿ ಆಗಬಹುದು ಎಂದು ಆರ್ಥಿಕ ಮತ್ತು ಅಂಕಿ ಅಂಶಗಳ ನಿರ್ದೇಶನಾಲಯ (ಡಿಇಎಸ್) ಅಂದಾಜಿಸಿದೆ. 2021ರ ವೇಳೆಗೆ 1.22 ಕೋಟಿ ಇದ್ದುದು 10 ವರ್ಷದಲ್ಲಿ 1.47 ಕೋಟಿಗೆ ಏರಲಿದೆ ಎಂಬುದು ಈ ಸಂಸ್ಥೆಯ ಅಂದಾಜು. ಇನ್ನು ಒಟ್ಟಾರೆಯಾಗಿ ಅಂಕಿಅಂಶಗಳನ್ನು ನೋಡುವುದಾದರೆ, 2021ರಲ್ಲಿ ರಾಜ್ಯದ ಜನಸಂಖ್ಯೆಯಲ್ಲಿ ಬೆಂಗಳೂರು ಪಾಲು ಶೇಕಡ 18.2 ಇದ್ದರೆ 2031ರ ವೇಳೆಗೆ ಶೇಕಡ 20.7ಕ್ಕೆ ಹೆಚ್ಚಲಿದೆ ಎಂದು ಡಿಇಎಸ್ ಅಂದಾಜು ಮಾಡಿದೆ. ಅಂದರೆ ರಾಜ್ಯದ ಜನಸಂಖ್ಯೆಯ ಪೈಕಿ ಹತ್ತಿರ ಹತ್ತಿರ ಕಾಲು ಭಾಗ ಜನರು ರಾಜಧಾನಿಯಲ್ಲಿ ಇರುತ್ತಾರೆ. ನಗರ ವಲಸೆ ಬೆಂಗಳೂರು ಮಾತ್ರ ಅಲ್ಲ ಜಾಗತಿಕವಾಗಿ ಎಲ್ಲ ದೇಶಗಳಲ್ಲೂ ಕಂಡುಬರುವ ಪ್ರಕ್ರಿಯೆ. ಕರ್ನಾಟಕದಲ್ಲಿ ಸಹ ಇತರ ಕಡೆಯೂ ನಗರ ವಲಸೆ ಟ್ರೆಂಡ್ ಇದ್ದು 2021ರ ಸಮಯಕ್ಕೆ ಶೇಕಡ 43.9 ಇದ್ದ ನಗರ ಜನಸಂಖ್ಯೆ ಪ್ರಮಾಣ 2031ರ ಹೊತ್ತಿಗೆ ಶೇಕಡ 47.8 ಆಗಲಿದೆ ಎಂದು ಈ ವರದಿ ಹೇಳಿದೆ. ಅಂದರೆ ಜನಸಂಖ್ಯೆಯ ಸುಮಾರು ಅರ್ಧ ಭಾಗ ನಗರಗಳಲ್ಲಿ ನೆಲೆಸಿರುತ್ತದೆ.
2011ರ ಜನಗಣತಿ ಪ್ರಕಾರ ಬೆಂಗಳೂರು ಜನಸಂಖ್ಯೆ 84 ಲಕ್ಷ ಇತ್ತು. 2021ರಲ್ಲಿ ಜನಗಣತಿ ನಡೆಯಬೇಕಿತ್ತು. ಆದರೆ ಕರೊನಾ ಕಾರಣಕ್ಕೆ ನಡೆದಿಲ್ಲ. ಕೇಂದ್ರ ಸರ್ಕಾರ ಈಗ ಜನಗಣತಿ ನಡೆಸಲು ವೇಳಾಪಟ್ಟಿ ಪ್ರಕಟ ಮಾಡಿದೆ. ಎರಡು ಹಂತದಲ್ಲಿ ಗಣತಿ ನಡೆಯಲಿದ್ದು 2027ರ ವೇಳೆಗೆ ಖಚಿತ ಚಿತ್ರಣ ಸಿಗಬಹುದಾಗಿದೆ. ಹಿಂದಿನ ವರ್ಷಗಳ ಜನಸಂಖ್ಯಾ ಬೆಳವಣಿಗೆ ದೃಷ್ಟಿಯಲ್ಲಿಟ್ಟುಕೊಂಡು, 2025ರಲ್ಲಿ ಬೆಂಗಳೂರಿನ ಜನಸಂಖ್ಯೆ ಒಂದೂಕಾಲು ಕೋಟಿಯಷ್ಟಿರಬಹುದೆಂದು ಅಂದಾಜಿದೆ. ಹಿಂದಿನ ಅಂಕಿಅಂಶ ಗಮನಿಸುವುದಾದರೆ, 1941ರಲ್ಲಿ ಬೆಂಗಳೂರಿನ ಜನಸಂಖ್ಯೆ 4 ಲಕ್ಷ ಇದ್ದರೆ 1951ರ ಹೊತ್ತಿಗೆ ಏಳೂ ಮುಕ್ಕಾಲು ಲಕ್ಷಕ್ಕೆ ಏರಿತ್ತು. 1961ರಲ್ಲಿ 12 ಲಕ್ಷ ಇದ್ದುದು 1971ರ ವೇಳೆಗೆ 16 ಲಕ್ಷ ಆಗಿತ್ತು. 1981ರ ಹೊತ್ತಿಗೆ 29 ಲಕ್ಷ ಇತ್ತು. ಅದಾದ ಹತ್ತು ವರ್ಷಗಳ ಅವಧಿಯಲ್ಲಿ 41 ಲಕ್ಷ ಆಯಿತು. 2001ರಲ್ಲಿ 51 ಲಕ್ಷ ಮತ್ತು 2011ರಲ್ಲಿ 84 ಲಕ್ಷ ದಾಟಿತು. 2040-41ರ ವೇಳೆಗೆ ಜನಸಂಖ್ಯೆ ಎರಡು ಕೋಟಿ ಆಗಲಿದೆ ಎಂದು, ರಾಜ್ಯ ಸರ್ಕಾರದ ಮಾಸ್ಟರ್ ಪ್ಲಾ್ಯನ್ನಲ್ಲಿ ಅಂದಾಜಿಸಲಾಗಿದೆ. ಇನ್ನೊಂದು ಆಸಕ್ತಿದಾಯಕ ಸಂಗತಿ ಎಂದರೆ, ಸರಿಸುಮಾರು ಜನಸಂಖ್ಯೆಯಷ್ಟೇ ವಾಹನಗಳು ಬೆಂಗಳೂರಿನಲ್ಲಿವೆ. 2025ರಲ್ಲಿ, ಎಲ್ಲ ಬಗೆಯ ವಾಹನಗಳು ಸೇರಿ 1.23 ಕೋಟಿಯಷ್ಟಿದೆ. ಟ್ರಾಫಿಕ್ ಜಾಮ್ ಆಗದೆ ಇದ್ದೀತೆ! ಈಚಿನ ವರ್ಷಗಳಲ್ಲಂತೂ ಬೆಂಗಳೂರು ನಿರೀಕ್ಷೆ ಮೀರಿ ಬೆಳೆಯುತ್ತಲೇ ಇದೆ. ಹೀಗೆ ಬೃಹದಾಕಾರವಾಗಿ ಬೆಳೆಯುತ್ತ ಬೆಳೆಯುತ್ತ ಆಳುಗರಿಗೆ ಸವಾಲುಗಳನ್ನು ಮುಂದೊಡ್ಡುತ್ತಲೇ ಇದೆ.
ಹಾಗಾದರೆ ಬೆಂಗಳೂರು ಈ ಪಾಟಿ ಜನರನ್ನು ಆಕರ್ಷಿಸಲು ಕಾರಣ ಏನಿರಬಹುದು? ನಗರ ಯೋಜನಾ ತಜ್ಞರ ಪ್ರಕಾರ, ಇಲ್ಲಿ ಇರುವ ಅಪಾರ ಉದ್ಯೋಗ ಅವಕಾಶ ಮುಖ್ಯ ಕಾರಣ. ಬೇರೆ ಬೇರೆ ಉದ್ಯಮಗಳು, ಐಟಿ ಬಿಟಿಯಂತಹ ಅಧುನಿಕ ತಂತ್ರಜ್ಞಾನ ವಲಯಗಳು, ಖಾಸಗಿ ವಲಯ, ಬಹುರಾಷ್ಟ್ರೀಯ ಸಂಸ್ಥೆಗಳು, ಜೊತೆಗೆ ಸ್ವಯಂ ಉದ್ಯೋಗದ ಅವಕಾಶಗಳು ಕೂಡ ಈ ಮಹಾನಗರದತ್ತ ಜನರು ಹೆಜ್ಜೆ ಹಾಕುವಂತೆ ಮಾಡುತ್ತದೆ. ಐತಿಹಾಸಿಕವಾಗಿ ನೋಡಿದರೆ, ದೂರದೃಷ್ಟಿ ಹೊಂದಿದ್ದ ಕೆಂಪೇಗೌಡರು ಬೆಂಗಳೂರನ್ನು 1537ರಲ್ಲಿ ನಿರ್ವಿುಸಿದರು. ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಾಗದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಸ್ತಿತ್ವಕ್ಕೆ ಬಂದಿದೆ. ಇದರ ಅನ್ವಯ ಐದು ಪಾಲಿಕೆಗಳನ್ನು ರಚಿಸಲಾಗಿದೆ. ಇವಕ್ಕೆ ಚುನಾವಣೆ ನಡೆದು ಜನಪ್ರತಿನಿಧಿಗಳು ಆರಿಸಿ ಬರಬೇಕಿದೆ. ಅಲ್ಲಿಯವರೆಗೆ ಅಧಿಕಾರಿಗಳದೇ ಜವಾಬ್ದಾರಿ.
ಎಲ್ಲರಿಗೂ ಆಶ್ರಯ: ರಾಜ್ಯದ ಬೇರೆ ಬೇರೆ ಭಾಗಗಳ ಜನರು ಊರಿನಲ್ಲಿ ಕೆಲಸದ ಋತು ಇಲ್ಲದಿದ್ದಾಗ ತಾತ್ಕಾಲಿಕವಾಗಿ ಇತ್ತ ಬರುವುದು ಸಾಮಾನ್ಯ. ಇನ್ನು, ಐಟಿ ವಲಯವನ್ನು ತೆಗೆದುಕೊಂಡರೆ 25 ಲಕ್ಷಕ್ಕಿಂತ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಗಾರ್ವೆಂಟ್ ಕ್ಷೇತ್ರದಲ್ಲಿ 4-5 ಲಕ್ಷ ಜನರು ಇದ್ದಾರೆ. ಇಲ್ಲಿ ಬಹುತೇಕ ಮಹಿಳೆಯರೇ ಕೆಲಸ ಮಾಡುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವ ಕ್ಷೇತ್ರಗಳಲ್ಲಿ ಇದು ಕೂಡ ಒಂದು. ನಿರ್ಮಾಣ ವಲಯ ಸಹ ಅಪಾರ ಪ್ರಮಾಣದಲ್ಲಿ ಕೆಲಸಗಳನ್ನು ಒದಗಿಸುತ್ತದೆ. ನಮ್ಮ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಜನರ ಜೊತೆಗೆ ನೆರೆಯ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ಮುಂತಾದ ರಾಜ್ಯಗಳಿಂದ ಕೂಡ ದೊಡ್ಡ ಸಂಖ್ಯೆಯ ಜನರು ಬೆಂಗಳೂರಿನತ್ತ ಮುಖ ಮಾಡುತ್ತಾರೆ.
ರಾಜ್ಯದ ಒಟ್ಟಾರೆ ಆರ್ಥಿಕತೆಗೆ ಬೆಂಗಳೂರಿನ ಕೊಡುಗೆ ದೊಡ್ಡದು. 2023ರಲ್ಲಿ ಬೆಂಗಳೂರು ಮಹಾನಗರ ವ್ಯಾಪ್ತಿಯ ಒಟ್ಟಾರೆ ಜಿಡಿಪಿ 359 ಶತಕೋಟಿ ಡಾಲರ್ ಇತ್ತು. ಆ ಮೂಲಕ ಹೆಚ್ಚು ಉತ್ಪಾದಕತೆ ಹೊಂದಿದ ಮಹಾನಗರಗಳ ಸಾಲಿನಲ್ಲಿ ಬೆಂಗಳೂರು ಸಹ ಮುಂಚೂಣಿಯಲ್ಲಿ ಇತ್ತು. ಐಟಿಬಿಟಿ ಹಾಗೂ ಇತರ ಕೈಗಾರಿಕೆಗಳು ಹೆಚ್ಚಿಗೆಯಿರುವುದರಿಂದ ರಾಜ್ಯದಲ್ಲಿ ಸಂಗ್ರಹವಾಗುವ ತೆರಿಗೆಯಲ್ಲಿ ದೊಡ್ಡ ಪಾಲು ಈ ನಗರದಿಂದ ಆಗುತ್ತದೆ. ಸಾರ್ವಜನಿಕ ವಲಯದ ಅಂದರೆ ಸರ್ಕಾರಿ ಸ್ವಾಮ್ಯದ ಅನೇಕ ದೊಡ್ಡ ಸಂಸ್ಥೆಗಳಿಗೆ ಈ ನಗರ ನೆಲೆಯಾಗಿದೆ. ಜೊತೆಗೆ ಮ್ಯಾನುಫ್ಯಾಕ್ಚರಿಂಗ್ ಹಬ್ ಎನಿಸಿಕೊಂಡಿದೆ.
ಅಭಿವೃದ್ಧಿ ಚಟುವಟಿಕೆಗಳು ಬೆಂಗಳೂರಿನಲ್ಲಿ ಮಾತ್ರ ಕೇಂದ್ರೀಕೃತ ಆಗದೆ ರಾಜ್ಯದ ಬೇರೆ ಬೇರೆ ಕಡೆಗೂ ವಿಸ್ತರಿಸಬೇಕು. ಅಂದಾಗ ಇಲ್ಲಿಗೆ ವಲಸೆ ಪ್ರಮಾಣ ತುಸು ಕಡಿಮೆ ಆಗುತ್ತದೆ. ನಗರದ ಮೇಲಿನ ಒತ್ತಡ ಸಹ ತಗ್ಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ. ಕಾಲಕಾಲಕ್ಕೆ ಸರ್ಕಾರಗಳು ಈ ವಿಚಾರದಲ್ಲಿ ಯೋಜನೆ ರೂಪಿಸುತ್ತಿವೆ. ಇತರ ಭಾಗಗಳಲ್ಲಿ ಉದ್ಯಮ ಸ್ಥಾಪಿಸಿದರೆ ವಿವಿಧ ಪೋ›ತ್ಸಾಹಕಗಳನ್ನು, ರಿಯಾಯಿತಿಗಳನ್ನು ನೀಡಲಾಗುತ್ತದೆ. ಬೆಂಗಳೂರು ಹೊರತುಪಡಿಸಿ ಇತರ ನಗರಗಳಲ್ಲಿಯೂ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಹಾಲಿ ಸರ್ಕಾರ ‘ಲೀಪ್’ (Local Economy Acceleator Program) ಎಂಬ ಯೋಜನೆಯನ್ನು ಬಜೆಟ್ಟಿನಲ್ಲಿ ಘೋಷಿಸಿದ್ದು, ಪ್ರಸಕ್ತ ವರ್ಷಕ್ಕೆ 200 ಕೋಟಿ ರೂ. ಅನುದಾನವನ್ನು ಒದಗಿಸಿದೆ. ಮೈಸೂರು, ಮಂಗಳೂರು-ಉಡುಪಿ-ಮಣಿಪಾಲ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿಗಳಲ್ಲಿ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದೂ ಸರ್ಕಾರ ಹೇಳಿದೆ. ಆದರೆ ಇತರ ಕಡೆಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಬಂಡವಾಳ ಹರಿದು ಹೋಗುತ್ತಿಲ್ಲ ಮತ್ತು ಅಂದುಕೊಂಡ ಮಟ್ಟಿಗೆ ಉದ್ಯಮಗಳು ಸ್ಥಾಪನೆ ಆಗುತ್ತಿಲ್ಲ ಎಂಬುದು ಈವರೆಗಿನ ಅನುಭವ. ಬೆಂಗಳೂರಿನಲ್ಲಿ ಉದ್ಯಮಕ್ಕೆ ಪೂರಕ ವಾತಾವರಣವಿದೆ (ಇಕೋ ಸಿಸ್ಟಂ); ಎಲ್ಲೆಡೆಯಿಂದ ಸಂಪರ್ಕ ಸುಲಭವಿದೆ; ಕೌಶಲಯುತ ಮಾನವ ಸಂಪನ್ಮೂಲ ಬೇರೆಡೆಗೆ ಸಿಗುವುದು ಕಷ್ಟ - ಎಂಬಿತ್ಯಾದಿ ವಾದಗಳನ್ನು ಉದ್ಯಮಿಗಳು ಮುಂದಿಡುತ್ತಾರೆ.
ಬೆಳವಣಿಗೆ ಸವಾಲುಗಳು: ಯಾವುದೇ ನಗರ ಬೆಳೆಯುತ್ತ ಹೋದಂತೆ ಅಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸುವುದು ಆಡಳಿತಗಾರರಿಗೆ ದೊಡ್ಡ ಸವಾಲೇ ಸರಿ. ಬಹುಸಂಸ್ಕೃತಿಯ ನಗರವೆಂಬುದು ಹೇಗೆ ಹೆಗ್ಗಳಿಕೆ ವಿಚಾರವೋ ಅದರಿಂದ ಉಂಟಾಗುವ ಸವಾಲುಗಳು ಕೂಡ ಅಷ್ಟೇ ಇರುತ್ತವೆ. ವಿವಿಧ ಬಗೆಯ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು ದೊಡ್ಡ ಹೊಣೆಗಾರಿಕೆ. ಜಾಗತಿಕ ಮಟ್ಟದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ಸಹ ಅಗ್ರಸ್ಥಾನದಲ್ಲಿದೆ. ಹೀಗಾಗಿಯೇ ಇಲ್ಲಿನ ರಸ್ತೆ, ಟ್ರಾಫಿಕ್, ಕಸ ಇವೆಲ್ಲ ವಿಶ್ವದ ಮಾಧ್ಯಮಗಳು ಮತ್ತು ಜನರ ಗಮನ ಸೆಳೆಯುತ್ತದೆ. ಈಚೆಗೆ ಉದ್ಯಮಿಯೊಬ್ಬರು ಇಲ್ಲಿನ ಟ್ರಾಫಿಕ್ ಜಂಜಾಟ ಉಲ್ಲೇಖಿಸಿ, ಬೇರೆ ಕಡೆ ಹೋಗುವ ಇಂಗಿತ ವ್ಯಕ್ತಪಡಿಸಿದ್ದು ದೊಡ್ಡ ಸುದ್ದಿಯಾಯಿತು. ಒಬ್ಬ ವಿದೇಶಿ ಉದ್ಯಮಿ ತಾನು ಬೀದಿನಾಯಿ ಕಡಿತಕ್ಕೆ ಒಳಗಾದ ವಿಚಾರವನ್ನು ಹೇಳಿಕೊಂಡ ವಿಡಿಯೋ ಲಕ್ಷಗಟ್ಟಲೆ ವೀಕ್ಷಣೆಯಾಗಿ ಚರ್ಚೆಯಾಯಿತು. ಉದ್ಯಮಿಗಳಾದ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಷಾ ಮುಂತಾದವರು ಇಲ್ಲಿನ ರಸ್ತೆ ಗುಂಡಿ, ಟ್ರಾಫಿಕ್, ಇತರ ಮೂಲ ಸವಲತ್ತುಗಳ ಬಗ್ಗೆ ಮಾತಾಡಿದಾಗ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತದೆ; ಸರ್ಕಾರದ ಮುಖ್ಯಸ್ಥರ ಗಮನ ಸೆಳೆಯುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೆಂಗಳೂರು ಉಸ್ತುವಾರಿಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಚೆಗೆ ಈ ಬಗ್ಗೆ ವಿವರಣೆಯನ್ನೂ ನೀಡಿದರು. ಈ ನಿಟ್ಟಿನಲ್ಲಿ ಸರ್ಕಾರಗಳು ಏನೂ ಪ್ರಯತ್ನ ಮಾಡುವುದಿಲ್ಲ ಎಂದು ಸಾರಾಸಗಟು ಷರಾ ಬರೆಯಲು ಆಗುವುದಿಲ್ಲ. ಹಾಗಂತ ಸರ್ಕಾರಗಳನ್ನು ಎಚ್ಚರಿಸುವ ಕೆಲಸ ನಡೆಯುತ್ತಲೇ ಇರಬೇಕಾಗುತ್ತದೆ. ರಚನಾತ್ಮಕ ಟೀಕೆ, ಸಲಹೆಗಳನ್ನು ಸ್ವೀಕರಿಸಿ ಅದಕ್ಕೆ ತಕ್ಕಂತೆ ನೀತಿ, ನಿಯಮ ರೂಪಿಸುವುದು ಸರ್ಕಾರಗಳ ಕರ್ತವ್ಯ ಕೂಡ ಹೌದು.
ವೇರಿ ನದಿಯಿಂದ ಇಲ್ಲಿಗೆ ನೀರು ಪೂರೈಕೆ ಆಗಬೇಕು. ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಲೇ ಇರುವ ನಗರಕ್ಕೆ ರಸ್ತೆ, ನೀರು, ನಾಗರಿಕ ಸೇವೆ, ಆರೋಗ್ಯ ಸೇವೆ, ಶಿಕ್ಷಣ ಇತ್ಯಾದಿ ಮೂಲ ಸೌಕರ್ಯಗಳನ್ನು ಒದಗಿಸುವುದು, ಕೊಳೆಗೇರಿ ನಿಮೂಲನೆ - ಇವೆಲ್ಲ ದೊಡ್ಡ ಸವಾಲು ಮತ್ತು ಇದಕ್ಕೆಲ್ಲ ಅಪಾರ ಸಂಪನ್ಮೂಲ ಬೇಕಾಗುತ್ತದೆ. ಇದಲ್ಲದೆ ನಗರದ ಅಂಚಿನಲ್ಲಿ ಇರುವ ಪ್ರದೇಶಗಳು ಕ್ರಮೇಣ ನಗರದ ವ್ಯಾಪ್ತಿಗೆ ಬರುವುದರಿಂದ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಮತ್ತಷ್ಟು ಕಷ್ಟವಾಗುತ್ತದೆ.
ಕೆಲವರಿಗೆ ಜೀವನದ ಅನಿವಾರ್ಯತೆ ನಗರದತ್ತ ಬರುವಂತೆ ಮಾಡುತ್ತದೆ. ಊರಿನಲ್ಲಿ ಕೆಲಸದ ಅವಕಾಶ ಇರುವುದಿಲ್ಲ. ಇನ್ನು ಕೆಲವರಿಗೆ ಓದಿಗೆ ತಕ್ಕಂತೆ ಕೆಲಸ ಮಾಡುವುದಕ್ಕೆ ಇದೇ ಸೂಕ್ತ ಸ್ಥಳ. ಇನ್ನು ಕೆಲವರಿಗೆ ನಗರ ಜೀವನದ ಆಕರ್ಷಣೆ. ಕಾರಣ ಬೇರೆ ಬೇರೆ ಇದ್ದರೂ ಬೆಂಗಳೂರಿನ ಒಡಲು ಮತ್ತು ಕರುಣೆ ದೊಡ್ಡದು. ತನ್ನನ್ನು ನಂಬಿ ಬಂದವರನ್ನು ಪೊರೆಯುವ ದೊಡ್ಡ ಗುಣ ಇದಕ್ಕಿದೆ. ಅದೇ ಹೊತ್ತಿಗೆ, ನಗರಗಳಲ್ಲಿ ದೊಡ್ಡ ಸಂಬಳ ಇದ್ದರೆ ಪರವಾಗಿಲ್ಲ. ಸಣ್ಣ ಸಂಬಳದಲ್ಲಿ ಜೀವನ ಸಾಗಿಸುವ ಪಾಡು ಗೊತ್ತಿದ್ದವರಿಗಷ್ಟೇ ಗೊತ್ತು ಎಂಬುದನ್ನೂ ಮರೆಯಲಾಗದು. ಮನೆ ಬಾಡಿಗೆ, ಶಿಕ್ಷಣ, ಆರೋಗ್ಯದ ವೆಚ್ಚ... ಹೀಗೆ ಖರ್ಚಿನ ಯಾದಿ ಸಾಗುತ್ತದೆ.
ಕೊನೇ ಮಾತು: ನನ್ನ ಒಬ್ಬ ಪರಿಚಿತರು ಒಮ್ಮೆ ಹೇಳುತ್ತಿದ್ದರು: ‘ಕೆಲವು ಕೆಲಸ ಕಾರ್ಯಗಳಿಗೆ ಬೆಂಗಳೂರಿಗೆ ಬರಲೇಬೇಕಾಗುತ್ತದೆ. ಕೆಲಸ ಮುಗಿಸಿಕೊಂಡು ಯಾವಾಗ ಊರಿಗೆ ವಾಪಸ್ ಹೋಗುತ್ತೇನೋ ಎನಿಸುತ್ತದೆ. ಇಲ್ಲಿನ ಟ್ರಾಫಿಕ್, ವಾಹನ ದಟ್ಟಣೆ, ಜನರ ಗಡಿಬಿಡಿ ಬದುಕು... ಇವೆಲ್ಲ ನೋಡಿದರೆ ನಮ್ಮಂಥವರಿಗೆ ಅಚ್ಚರಿಯಾಗುತ್ತದೆ.’ ಆದರೆ ಇಲ್ಲಿಗೆ ಬಂದು ಕೆಲ ಕಾಲ ಉಳಿದವರಲ್ಲಿ
ಎಷ್ಟು ಮಂದಿ ತಿರುಗಿ ಊರಿಗೆ ಹೋಗಲು ಮನಸ್ಸು ಮಾಡುತ್ತಾರೆ ಎಂಬುದು ಅಧ್ಯಯನಕ್ಕೆ ಯೋಗ್ಯವಾದ ವಿಷಯ. ಇದೇನೇ ಇದ್ದರೂ, ಬೆಂಗಳೂರಿನ ಅಯಸ್ಕಾಂತಶಕ್ತಿ ದೊಡ್ಡದು.