ತಾಯಿಯ ದುಷ್ಕೃತ್ಯ: ಆ ಕ್ಷಣ ಅಂಕಣ..

Child Abuse
Published on

ಜಿಲ್ಲಾ ಕೇಂದ್ರವೊಂದರಿಂದ ವಲಸೆ ಬಂದಿದ್ದ ಸಂಧ್ಯಾ ಮತ್ತು ಸುಕುಮಾರ್ ದಂಪತಿ ಮಹಾನಗರದಲ್ಲಿ ವಾಸಿಸುತ್ತಿದ್ದರು. ಆತ ಗಾರೆ ಕೆಲಸ ಮಾಡಿಕೊಂಡಿದ್ದ. ಮದುವೆಯಾದ ಎರಡೇ ವರ್ಷಗಳ ಬಳಿಕ ಪತಿ-ಪತ್ನಿಯರಲ್ಲಿ ವಿರಸ ಮೂಡಿತು. ಸುಕುಮಾರ್ ಕುಟುಂಬವನ್ನು ತೊರೆದು ಉತ್ತರ ಭಾರತದ ರಾಜ್ಯವೊಂದಕ್ಕೆ ಹೊರಟುಹೋದ. ಕೆಲ ದಿನಗಳ ನಂತರ ಸಂಧ್ಯಾ ಗಂಡು ಮಗುವಿಗೆ ಜನ್ಮ ನೀಡಿದಳು. ಸುಕುಮಾರನ ತಾಯಿ ಅವಳಿಗೆ ಬಾಣಂತನ ಮಾಡಿ ತನ್ನ ಮನೆಯಲ್ಲಿಯೇ ಬಂದಿರಲು ಕರೆದಳು. ಸಂಧ್ಯಾ ಒಪ್ಪದೆ ನಗರಕ್ಕೆ ವಾಪಸಾಗಿ ಒಂದು ಸಣ್ಣ ಬಾಡಿಗೆ ಕೋಣೆಯಲ್ಲಿ ಮಗನೊಡನೆ ವಾಸಿಸತೊಡಗಿದಳು. ಇತರರ ಮನೆಗಳಲ್ಲಿ ಮನೆಗೆಲಸ ಮಾಡಿಕೊಂಡು ಸಂಸಾರ ದೂಡತೊಡಗಿದಳು. ಸಂಧ್ಯಾಳ ಮಗ ಅಜ್ಜಿಯನ್ನು (ತಂದೆಯ ತಾಯಿ) ಬಹಳವಾಗಿ ಹಚ್ಚಿಕೊಂಡಿದ್ದ ಕಾರಣ ಸಂಧ್ಯಾ ಅವನನ್ನು ಆಗಾಗ ಅಜ್ಜಿಯ ಮನೆಗೆ ಕಳುಹಿಸುತ್ತಿದ್ದಳು.

ಆದಾಯ ಸಾಲದಾದಾಗ ಸಂಧ್ಯಾ ಬೀದಿಯಲ್ಲಿ ತರಕಾರಿ ಮಾರಾಟ ಮಾಡಲಾರಂಭಿಸಿದಳು. ಆಗ ಅವಳಿಗೆ ಅದೇ ಬಡಾವಣೆಯಲ್ಲಿದ್ದ ಸುಂದರ್ ಎನ್ನುವ ರೌಡಿ ಎದುರಾದ. ಆತ ಬೀದಿ ವ್ಯಾಪಾರಿಗಳನ್ನು ಬೆದರಿಸಿ ಹಣ ಕೀಳುತ್ತಿದ್ದ. ಹಣ ಕೊಡುವಂತೆ ಆತ ಪೀಡಿಸಿದಾಗ ಸಂಧ್ಯಾ ತನ್ನ ಕಷ್ಟವನ್ನು ಹೇಳಿಕೊಂಡು ಕಾಡದಿರಲು ಕೋರಿದಳು. ಅವಳ ಪೂರ್ವಾಪರಗಳನ್ನು ವಿಚಾರಿಸಿದ ಸುಂದರ್ ಅವಳ ಮೇಲೆ ಸಹಾನುಭೂತಿ ತೋರಿಸಿ ಸಹಾಯಕ್ಕೆ ನಿಂತ. ಕಾಲಕ್ರಮೇಣ ಆಕೆ ಅವಿವಾಹಿತನಾಗಿದ್ದ ಅವನ ಜತೆಗೆ ದೈಹಿಕ ಸಂಬಂಧ ಬೆಳೆಸಿದಳು. ಸುಂದರ್​ನ ಸಹಾಯದಿಂದ ಸಂಧ್ಯಾ ಮಗನನ್ನು ಹಾಸ್ಟೆಲ್ ಒಂದರಲ್ಲಿಟ್ಟು ತಾನು ಅವನದೇ ಅಪಾರ್ಟ್​ವೆುಂಟಿನಲ್ಲಿ ವಾಸಮಾಡತೊಡಗಿದಳು.

ಕೋವಿಡ್ ರೋಗದ ಅಲೆಯಿಂದಾಗಿ ಹಾಸ್ಟೆಲ್ ಮುಚ್ಚಿದಾಗ ಆ ಬಾಲಕ ಸುಂದರ್​ನ ಮನೆಗೇ ಬಂದು ತಾಯಿಯೊಡನೆ ವಾಸಿಸತೊಡಗಿದ. ಆತನಿಗೆ ತನ್ನ ತಾಯಿ ಸುಂದರ್​ನೊಡನೆ ಅಕ್ರಮ ಸಂಬಂಧ ಬೆಳೆಸಿರುವುದು ತಿಳಿಯಿತು. ಆತ ತಾಯಿಯನ್ನು ತರಾಟೆಗೆ ತೆಗೆದುಕೊಂಡು ಅನೈತಿಕ ಸಂಬಂಧಕ್ಕೆ ಆಕ್ರೋಶ ವ್ಯಕ್ತಪಡಿಸಿದ. ಇದರಿಂದ ಕ್ರೋಧಗೊಂಡ ಸಂಧ್ಯಾ ಮಗನನ್ನು ಗದರಿ ತಾನು ತನ್ನ ಮನಸ್ಸಿಗೆ ಬಂದದ್ದನ್ನು ಮಾಡುವೆ ಎಂದಳು. ಮಗನ ಆಕ್ಷೇಪಣೆಗೆ ಕ್ಯಾರೇ ಎನ್ನಲಿಲ್ಲ. ಆದರೆ ಆ ಬಾಲಕ ತನ್ನದೇ ವಿಶಿಷ್ಟ ರೀತಿಯಲ್ಲಿ ತಾಯಿಯ ಕೃತ್ಯಕ್ಕೆ ರೋಷ ವ್ಯಕ್ತಪಡಿಸುತ್ತಿದ್ದ. ಸುಂದರ್​ನ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಹಾಳುಮಾಡುತ್ತಿದ್ದ. ಸುಂದರ್ ರಾತ್ರಿ ಮನೆಗೆ ವಾಪಸಾದಾಗ ಬೇಕೆಂತಲೇ ಮುಂಬಾಗಿಲನ್ನು ತೆರೆಯುತ್ತಿರಲಿಲ್ಲ.

ಏತನ್ಮಧ್ಯೆ ಸುಂದರ್ ಸುಮಿತ್ರಾ ಎನ್ನುವವಳೊಂದಿಗೂ ಅಕ್ರಮ ಸಂಬಂಧ ಬೆಳೆಸಿದ್ದ. ಈ ವಿಷಯ ಸಂಧ್ಯಾಗೂ ತಿಳಿದಿತ್ತು. ಒಮ್ಮೆ ಸುಮಿತ್ರಾ ಸುಂದರ್​ನ ಮನೆಗೆ ಬಂದಾಗ ಮನೆಯಲ್ಲಿದ್ದ ಆ ಬಾಲಕ ಮನೆಗೆ ಬರಬಾರದೆಂದು ಅವಳಿಗೆ ತಾಕೀತು ಮಾಡಿದ. ಕೋಪಗೊಂಡ ಸುಮಿತ್ರಾ ಬಾಲಕನ ಬಗ್ಗೆ ಸಂಧ್ಯಾಳಿಗೆ ದೂರಿದಳು. ಆಗ ಸಂಧ್ಯಾ ತರಾಟೆಗೆ ತೆಗೆದುಕೊಂಡಾಗ ‘ನಿನ್ನ ವ್ಯವಹಾರದ ಬಗ್ಗೆ ಅಜ್ಜಿಗೆ ತಿಳಿಸುವೆ’ ಎಂದು ಬೆದರಿಸಿದ. ಇದರಿಂದ ಸಂಧ್ಯಾ ಗಾಬರಿಗೊಂಡು ಮಗನಿಗೆ ಹೊಡೆದು ಕೋಣೆಯಲ್ಲಿ ಕೂಡಿಹಾಕಿದಳು. ಮಾರನೆಯ ದಿನ ಸುಂದರ್, ಸುಮಿತ್ರಾ ಮತ್ತು ಸಂಧ್ಯಾ ಬಾಲಕ ಕೊಡುತ್ತಿರುವ ಕಿರಿಕಿರಿಯ ಬಗ್ಗೆ ಚರ್ಚೆ ನಡೆಸಿದರು.

ಎಷ್ಟೇ ಹೊಡೆದು ಬಡಿದರೂ ಬಾಲಕ ಸುಮ್ಮನಾಗುತ್ತಿಲ್ಲದ ಕಾರಣ ಬೇರೆ ಉಪಾಯ ಮಾಡಬೇಕೆಂದು ನಿರ್ಧರಿಸಿದರು. ಬಾಲಕ ತಮ್ಮೊಡನೆ ಒಂದೇ ಸೂರಿನಲ್ಲಿರುವುದರಿಂದಲೇ ತೊಂದರೆಯಾಗುತ್ತಿದೆ ಎಂದು ಭಾವಿಸಿ ಅವನನ್ನು ಹಾಸ್ಟೆಲ್​ಗೆ ಕಳುಹಿಸುವುದೇ ಸೂಕ್ತವೆಂದು ತೀರ್ವನಿಸಿದರು. ಮುಂದಿನ ಶೈಕ್ಷಣಿಕ ವರ್ಷದವರೆವಿಗೂ ಹಾಸ್ಟೆಲನ್ನು ಪುನರಾರಂಭ ಮಾಡುವುದಿಲ್ಲವೆಂದು ತಿಳಿದಾಗ ಬಾಲಕನನ್ನು ಅವನ ಅಜ್ಜಿಯ ಮನೆಗೆ ಕಳಿಸಲು ಯೋಚಿಸಿದರು. ಆದರೆ ಆತ ಸಂಧ್ಯಾಳ ಅನೈತಿಕ ಸಂಬಂಧದ ಬಗ್ಗೆ ಅಜ್ಜಿಗೆ ತಿಳಿಸಬಹುದೆಂದು ಹೆದರಿ ಆ ಯೊಜನೆಯನ್ನು ಕೈಬಿಟ್ಟರು. ಈ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ ಅವನನ್ನು ಕೊಲ್ಲುವುದೊಂದೇ ಮಾರ್ಗ ಎಂದ ಸುಂದರ್. ಸುಮಿತ್ರಾ ಈ ಸಲಹೆಗೆ ಒಪ್ಪಿದಳು. ಆದರೆ ಸಂಧ್ಯಾ ಒಪ್ಪಲಿಲ್ಲ. ಬಾಲಕನನ್ನು ಕೊಂದರೆ ಮಾತ್ರ ನೀನು ಸುಖವಾಗಿರಬಹುದು ಎಂದು ಇಬ್ಬರೂ ಮನವರಿಕೆ ಮಾಡಿಕೊಟ್ಟಾಗ ಆಕೆಯೂ ತನ್ನ ಮಗನ ಕೊಲೆಗೆ ಒಪ್ಪಿದಳು.

ಒಂದು ಅಮಾವಾಸ್ಯೆಯ ರಾತ್ರಿ ಬಾಲಕ ಮಲಗಿದ್ದಾಗ ಅಜ್ಜಿಯ ಮನೆಗೆ ಕರೆದೊಯ್ಯುವುದಾಗಿ ಹೇಳಿ ಸಂಧ್ಯಾ ಅವನನ್ನೆಬ್ಬಿಸಿದಳು. ಸುಂದರ್​ನ ಕಾರಿನಲ್ಲಿ ಮಗನನ್ನು ಕೂರಿಸಿ ತಾನೂ ಅವನ ಪಕ್ಕ ಕುಳಿತಳು. ಮುಂದಿನ ಸೀಟಿನಲ್ಲಿ ಸುಮಿತ್ರಾ ಕುಳಿತಳು. ಸುಂದರ್ ಕಾರನ್ನು ನೆರೆರಾಜ್ಯದ ಅರಣ್ಯಪ್ರದೇಶದ ಅಂಚಿಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದ. ಬಾಲಕ ಗಾಢನಿದ್ರೆಯಲ್ಲಿದ್ದ. ಸಂಧ್ಯಾ ಕಾರಿನಿಂದ ಕೆಳಗಿಳಿದಳು. ಸುಮಿತ್ರಾ ಮತ್ತು ಸುಂದರ್ ಕಾರಿನ ಹಿಂದಿನ ಸೀಟಿಗೆ ಹೋಗಿ ಬಾಲಕನ ಎರಡೂ ಬದಿಗೆ ಕುಳಿತರು. ಬಾಲಕ ಮಿಸುಕಾಡದಂತೆ ಸುಮಿತ್ರಾ ಒತ್ತಿಹಿಡಿದಳು. ಸುಂದರ್ ಬಾಲಕನ ಕತ್ತನ್ನು ಹಿಸುಕಿ ಕೊಲೆ ಮಾಡಿದ. ಶವವನ್ನು ಅರಣ್ಯಕ್ಕೆ ಎಳೆದುಕೊಂಡು ಹೋಗಿ ಎಸೆದ. ಆನಂತರ ಎಲ್ಲರೂ ಮನೆಗೆ ಮರಳಿದರು. ಬಾಲಕನ ದೇಹ ಮಾರನೆಯ ದಿನವೇ ಪತ್ತೆಯಾಯಿತು. ಸ್ಥಳೀಯ ಪೊಲೀಸರು ದೇಹದ ಮೇಲೆ ಮಹಜರ್ ಮತ್ತು ಪೋಸ್ಟ್ ಮಾರ್ಟಂ ನಡೆಸಿ ಬಾಲಕನ ಕೊಲೆಯಾಗಿದೆ ಎಂದು ತಿಳಿದು ಕೊಲೆ ಕೇಸನ್ನು ದಾಖಲಿಸಿದರು. ಆದರೆ ಬಾಲಕ ಯಾರು ಎಂದು ತಿಳಿಯದ ಕಾರಣ ತನಿಖೆ ಸ್ಥಗಿತಗೊಂಡಿತು.

ಇದಾದ ಎರಡು ತಿಂಗಳ ನಂತರ ಬಾಲಕನ ಅಜ್ಜಿ ಸಂಧ್ಯಾಗೆ ಕರೆ ಮಾಡಿ ಮೊಮ್ಮಗನನ್ನು ಏಕೆ ಕಳಿಸಿಲ್ಲ ಎಂದು ಕೇಳಿದಾಗ ಕೋವಿಡ್ ಕಾರಣದಿಂದ ಓಡಾಡುವಂತಿರಲಿಲ್ಲ, ಅವನ ಶಾಲೆ ಪುನರಾರಂಭವಾಗುವ ಮೊಡಲು ಕಳಿಸುವೆ ಎಂದು ಆಕೆ ಉತ್ತರಿಸಿದಳು. ಕೆಲಕಾಲಾನಂತರ ಬಾಲಕನ ಶಾಲೆ ಪುನರಾರಂಭವಾಯಿತು. ಆತ ಶಾಲೆಗೆ ಬರದಿರುವುದನ್ನು ಗಮನಿಸಿದ ಅವನ ತರಗತಿಯ ಮಾಸ್ತರರು ಮಾರುಕಟ್ಟೆಯಲ್ಲಿ ತರಕಾರಿ ಮಾರುತ್ತಿದ್ದ ಸಂಧ್ಯಾಳನ್ನು ವಿಚಾರಿಸಿದರು. ಬಾಲಕನನ್ನು ಮುಂದಿನ ಓದಿಗಾಗಿ ಅವನ ಅಜ್ಜಿಯ ಮನೆಗೆ ಕಳುಹಿಸಿರುವುದಾಗಿ ಸಂಧ್ಯಾ ಉತ್ತರಿಸಿದಳು. ಮರುವಾರ ಅಜ್ಜಿ ಮತ್ತೆ ಸಂಧ್ಯಾಗೆ ಫೋನ್ ಮಾಡಿ ತನಗೆ ಮೊಮ್ಮಗನನ್ನು ನೋಡಲೇಬೇಕೆಂದೆನಿಸಿದೆ, ಒಂದು ದಿನದ ಮಟ್ಟಿಗಾದರೂ ಕರೆದುಕೊಂಡು ಬಾ ಎಂದಳು. ಚಾಲಾಕಿ ಸಂಧ್ಯಾ, ಅವನನ್ನು ನಿನ್ನ ಮನೆಗೇ ಎರಡು ವಾರಗಳ ಹಿಂದೆಯೇ ಕಳಿಸಿದೆನಲ್ಲಾ? ಎಂದಳು. ಆತ ಬರಲಿಲ್ಲ ಎಂದು ಅಜ್ಜಿ ಹೇಳಿದಾಗ ಸಂಧ್ಯಾ ಗಾಬರಿಯಾದಂತೆ ನಟಿಸಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವುದಾಗಿ ತಿಳಿಸಿದಳು.

ಆನಂತರ ಸಂಧ್ಯಾಗೆ ಭಯ ಶುರುವಾಯಿತು. ಒಂದಲ್ಲ ಒಂದು ದಿನ ತನ್ನ ಗುಟ್ಟು ಬಯಲಾಗುತ್ತದೆ ಎಂದು ಹೆದರಿ ಸುಂದರ್ ಜೊತೆ ಸಮಾಲೋಚಿಸಿದಳು. ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದರು. ಸುಂದರ್​ನೊಡನೆ ಪೊಲೀಸ್ ಠಾಣೆಗೆ ಹೋದ ಸಂಧ್ಯಾ, ತನ್ನ ಮಗ ಕಳೆದ 5 ತಿಂಗಳುಗಳಿಂದ ಕಾಣೆಯಾಗಿರುವುದಾಗಿ ದೂರಿತ್ತಳು. ಇಷ್ಟು ತಡವಾಗಿ ದೂರು ನೀಡಿದ ಕಾರಣವೇನು ಎಂದು ಠಾಣಾಧಿಕಾರಿ ಪ್ರಶ್ನಿಸಿದಾಗ ಸಂಧ್ಯಾ ಹಾರಿಕೆಯ ಉತ್ತರ ಕೊಟ್ಟಳು. ಆದರೂ ಬಾಲಕನ ಪೋಟೋ ಮತ್ತು ಇತರ ವಿವರಗಳನ್ನು ತೆಗೆದುಕೊಂಡ ಪೊಲೀಸರು ದೂರನ್ನು ದಾಖಲಿಸಿದರು. ಬಾಲಕನ ವಿವರಗಳನ್ನು ರಾಜ್ಯದ ಪೊಲೀಸರಿಲ್ಲದೇ ನೆರೆ ರಾಜ್ಯದ ಪೊಲೀಸರಿಗೂ ಕಳಿಸಿದರು.

ಈ ವಿವರಗಳನ್ನು ಪಡೆದ ನೆರೆ ರಾಜ್ಯದ ಪೊಲೀಸ್ ಅಧಿಕಾರಿಯೊಬ್ಬರು ನಾಪತ್ತೆಯಾದ ಬಾಲಕದ ಫೋಟೋ ತಾವು ತನಿಖೆ ಮಾಡುತ್ತಿದ್ದ ಕೊಲೆ ಪ್ರಕರಣದ ಬಾಲಕನ ದೇಹವನ್ನು ಹೋಲುತ್ತಿರುವುದನ್ನು ಗಮನಿಸಿದರು. ಕಾಣೆಯಾದ ದೂರು ದಾಖಲಿಸಿದ್ದ ಠಾಣಾಧಿಕಾರಿಯನ್ನು ಸಂರ್ಪಸಿ ತಮ್ಮ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು. ಕೂಡಲೇ ಪೊಲೀಸರು ಸಂಧ್ಯಾಳನ್ನು ಠಾಣೆಗೆ ಕರೆಸಿ, ಪಕ್ಕದ ರಾಜ್ಯದಲ್ಲಿ ಬಾಲಕನೊಬ್ಬನ ಶವ ಸಿಕ್ಕಿದೆ, ಅದು ಕಾಣೆಯಾದ ನಿನ್ನ ಮಗನದ್ದೇ ಎಂದು ಪರಿಶೀಲಿಸಲು ಹೋಗೋಣ ಎಂದರು. ಏನೂ ತಿಳಿಯದವಳಂತೆ ಸಂಧ್ಯಾ ಪೊಲೀಸರ ಜೊತೆ ನೆರೆಯ ರಾಜ್ಯದ ಪೊಲೀಸ್ ಠಾಣೆಗೆ ಹೋಗಿ ಅಲ್ಲಿದ್ದ ಬಟ್ಟೆಗಳು ಮತ್ತು ಫೋಟೋವನ್ನು ನೋಡಿ ಕೊಲೆಯಾಗಿದ್ದ ಬಾಲಕನು ತನ್ನ ಮಗನೇ ಎಂದು ಗುರುತಿಸಿದಳು. ಯಾರು ಕೊಲೆ ಮಾಡಿರಬಹುದೆಂಬ ಸಂಶಯವಿದೆ ಎಂದು ಕೇಳಿದಾಗ ಆಕೆ ಯಾರೂ ಇಲ್ಲ ಎಂದಳು.

ಆ ಸಮಯದಲ್ಲಿ ಅವಳೊಡನೆ ಕಾಣೆಯಾದ ಪ್ರಕರಣ ದಾಖಲಿಸಿದ್ದ ಹೆಡ್ ಕಾನ್​ಸ್ಟೆಬಲ್ ಹೋಗಿದ್ದರು. ಕಾಣೆಯಾದ ಬಾಲಕನ ಬಗ್ಗೆ ದೂರುಕೊಡಲು ರೌಡಿಯೊಬ್ಬನ ಜತೆಗೆ ಸಂಧ್ಯಾ ತಮ್ಮ ಠಾಣೆಗೆ ಬಂದಿದ್ದಾಗಿಯೂ ದೂರನ್ನು 5 ತಿಂಗಳ ನಂತರ ಕೊಟ್ಟಿದ್ದಾಗಿಯೂ ಆತ ತನಿಖಾಧಿಕಾರಿಗೆ ತಿಳಿಸಿದರು. ಆಗ ತನಿಖಾಧಿಕಾರಿ ಅವಳನ್ನು ತೀವ್ರವಾಗಿ ವಿಚಾರಿಸಿದಾಗ ಆಕೆ ಹೆದರಿ ನಡೆದ ವಿಷಯ ಬಾಯ್ಬಿಟ್ಟಳು. ಅವಳ ಹೇಳಿಕೆ ಮೇರೆಗೆ ಅವಳನ್ನಲ್ಲದೆ ಸುಂದರ್ ಮತ್ತು ಸುಮಿತ್ರಾಳನ್ನೂ ಬಂಧಿಸಲಾಯಿತು.

ಮೂರೂ ಜನರ ಫೋನ್​ಗಳ ಸಿಡಿಆರ್ ರೆಕಾರ್ಡ್ ತರಿಸಿದಾಗ ಅವರೆಲ್ಲರೂ ಕೊಲೆಯಾದ ಸ್ಥಳದಲ್ಲಿದ್ದುದು ಬೆಳಕಿಗೆ ಬಂದಿತು. ರಾಜ್ಯದ ಗಡಿಭಾಗದಲ್ಲಿರುವ ಟೋಲ್ ಪ್ಲಾಝಾದ ಸಿಸಿಟಿವಿ ಫೂಟೇಜಿನಲ್ಲಿ ಆ ಮೂರೂ ಜನರಿದ್ದ ಕಾರು ಟೋಲ್ ಗೇಟಿಗೆ ಬಂದದ್ದು ಮತ್ತು ಅಲ್ಲಿಂದ ನಿರ್ಗಮಿಸಿದ ವಿವರಗಳು ದಾಖಲಾಗಿದ್ದು ಇದು ಸಹ ಮಹತ್ವದ ಸಾಕ್ಷ್ಯವಾಗಿದೆ. ಆದರೆ ಈ ಕೊಲೆ ಪ್ರಕರಣದಲ್ಲಿ ಯಾವುದೇ ಪ್ರತ್ಯಕ್ಷ ಸಾಕ್ಷಿಗಳಿಲ್ಲದಿರುವುದರಿಂದ ಆರೋಪಿಗಳು ಖುಲಾಸೆಯಾಗುವ ಸಂದರ್ಭವೇ ಹೆಚ್ಚು. ಹೀಗಾಗಿ ಸಂಧ್ಯಾಳನ್ನು ಮಾಫಿ ಸಾಕ್ಷಿಯನ್ನಾಗಿ ಮಾಡಬಹುದೇ ಎನ್ನುವ ಬಗ್ಗೆ ಚಿಂತನೆ ನಡೆಯುತ್ತಿದೆ. ‘ಕನಲ್ದ ಹುಲಿ, ಕೆರಳ್ದ ಹರಿ, ಮುಳ್ ಕರಡಿ, ಛಲನಾಗ, ಅಣುಕು ಕಪಿ, ಸೀಳ್ನಾಯಿ ಮೊದಲಾದ ಮೃಗದ, ಸೆಣಸುಮುಸುಡಿಯ ಘೊರದುಷ್ಟಚೇಷ್ಟೆಗಳೆಲ್ಲ ವಣಗಿಹುವು ನರಮನದಿ ಮಂಕುತಿಮ್ಮ’ ಎಂಬ ನುಡಿಗೆ ಈ ಮೂವರು ಆರೋಪಿಗಳೇ ಸಾಕ್ಷಿ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net