

ದಮನಿತ ಸಮುದಾಯಗಳಿಗೆ ಸ್ವಾಭಿಮಾನ, ಘನತೆ-ಗೌರವ, ಸಮಾನತೆ ತಂದುಕೊಡಲು ತಮ್ಮ ಬದುಕಿನುದ್ದಕ್ಕೂ ರಚನಾತ್ಮಕ ಕಾರ್ಯಗಳ ಮೂಲಕ ಧ್ಯಾನಿಸಿದ ಬಾಬಾಸಾಹೇಬ್ ಅಂಬೇಡ್ಕರ್ ಅವರು ಪರಿನಿಬ್ಬಾಣಗೊಂಡ ದಿನ ಡಿಸೆಂಬರ್ 6. ಇದು ಮಾನವೀಯತೆಯ ಸಾಧಕನನ್ನು ನೆನೆಯುತ್ತ ನಮ್ಮ ಅಂತರಂಗವನ್ನು ಪುನರ್ ವಿಮರ್ಶೆ ಮಾಡಿಕೊಳ್ಳಬೇಕಾದ ದಿನವಾಗಿದೆ.
ಸ್ವಾತಂತ್ರ್ಯದ ನಂತರ ನಿರ್ದಿಷ್ಟವಾಗಿ ಮತ್ತು ಸುರಕ್ಷಿತವಾಗಿ ಮುನ್ನಡೆಯುವ ಕಲ್ಪನೆ ಹೊಂದಿರದ ದೇಶಕ್ಕೆ ಮಾರ್ಗದರ್ಶಿ ಶಕ್ತಿಯಾದಂಥ ಸಂವಿಧಾನವನ್ನು ನೀಡಿದ ಕಾರಣಕ್ಕಾಗಿ ನಾವು ಅವರನ್ನು ಮನಸಾರೆ ಪ್ರೀತಿಸುವುದು ಮತ್ತು ಗೌರವಿಸುವುದು. ಹದಿನಾರು ಎಂಬಂಥ ಸಣ್ಣ ಗ್ರಾಮದಲ್ಲಿ ಹುಟ್ಟಿದ ನಾನು, ಭೂಮಿಯಿಲ್ಲದ, ಸೌಲಭ್ಯವಿಲ್ಲದ ಮತ್ತು ಅಂತಹ ಬೆಂಬಲವೂ ಇಲ್ಲದಂಥ ಪರಿಸ್ಥಿತಿಯಲ್ಲಿ, ಸಂವಿಧಾನದ ನೀಡಿದ ಶಿಕ್ಷಣದ ಹಕ್ಕಿನ ಬಲದೊಂದಿಗೆ ನಾಲ್ಕು ಅಕ್ಷರ ಕಲಿತು, ಎಂಬಿಬಿಎಸ್ ಪದವಿಯನ್ನು ಅಭ್ಯಾಸ ಮಾಡಿ, ಶಾಸಕನಾಗಿ, ಮಂತ್ರಿಯಾಗಿ ಸಮಾಜಕ್ಕೆ ಕೊಡುಗೆ ನೀಡುವಂಥ ಶಕ್ತಿ ಪ್ರಾಪ್ತವಾಗಿದ್ದು, ಬಾಬಾಸಾಹೇಬರಿಂದ ಎಂಬುದನ್ನು ನಾನು ಎಂದಿಗೂ ಮರೆಯುವುದಿಲ್ಲ. ಇದು ನನ್ನ ಕಥೆ ಮಾತ್ರವಲ್ಲ, ಬದಲಿಗೆ ಗ್ರಾಮೀಣ ಅಥವಾ ನಗರ ಭಾಗದಲ್ಲಿ ಅತ್ಯಂತ ಬಡತನದ ಮತ್ತು ಸಾಮಾಜಿಕ ಅವಮಾನದ ಸ್ಥಿತಿಯಲ್ಲಿ ಬೆಳೆದು ಶಿಕ್ಷಣದ ಕಾರಣಕ್ಕಾಗಿಯೇ ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದು ಸಮಾಜದಲ್ಲಿ ತಲೆಎತ್ತಿ ನಿಂತವರ ಕಥೆ. ಇಂತಹ ಕೋಟಿ ಕಥೆಗಳು ಹುಟ್ಟುವುದರ ಹಿಂದೆ, ನಾಲ್ಕು ಗೋಡೆಗಳ ಮಧ್ಯೆ ಮಹಾತಪಸ್ವಿಯಂತೆ ಕುಳಿತು ಅಧ್ಯಯನ ನಡೆಸಿದ ಬಾಬಾಸಾಹೇಬರ ಶ್ರಮ ಇದೆ. ಹೀಗಾಗಿಯೇ ಯಾವ ಅನುಮಾನವಿಲ್ಲದೇ ನಮ್ಮ ದೈನಂದಿನ ಘನತೆಯ ಮತ್ತು ಗೌರವಗಳ ಬದುಕಿನ ಪ್ರತಿಫಲನವಾಗಿರುತ್ತಾರೆ ಅವರು.
ಅವಮಾನದ ಬೀದಿಗಳಲ್ಲಿ ಹುಟ್ಟಿ, ಸ್ವಾಭಿಮಾನದ ಹಣತೆಯಾಗಿ ಪ್ರಜ್ವಲಿಸಿದ ಅಂಬೇಡ್ಕರ್ ಅವರು ನಮ್ಮಂತೆಯೇ ಓರ್ವ ಸಾಮಾನ್ಯರಾಗಿದ್ದವರು. ಆದರೆ ಎಲ್ಲರಿಗೂ ಸಮಾನತೆಯ ವಾತಾವರಣವನ್ನು ನೀಡಲೇಬೇಕೆಂಬ ಅವರ ಅದಮ್ಯ ಹಠವೇ ಅವರನ್ನು ಇಂದು ಮಹಾತ್ಮನ ಮಾರ್ಗಕ್ಕೆ ತಂದು ನಿಲ್ಲಿಸಿದೆ. ಭಾರತಕ್ಕೆ ಬಾಬಾಸಾಹೇಬರು ಬಹಳಷ್ಟು ನೀಡಿದ್ದಾರೆ. ಆದರೆ ಇಂದು ಅವರನ್ನು ‘ಕೇವಲ ಮೀಸಲಾತಿ ನೀಡಿ ಹೋದವರು’ ಎಂಬಂತೆ ಬಿಂಬಿಸುವ ಸಂಕುಚಿತ ಮನಸ್ಸನ್ನು ತೋರಲಾಗುತ್ತಿದೆ. ಆದರೆ, ‘ನಾನು ಮೊದಲಿಗೆ ಮತ್ತು ಕೊನೆಗೆ ಭಾರತೀಯನಾಗಿರುತ್ತೇನೆ’ ಎಂದ ಬಾಬಾಸಾಹೇಬರು ಓರ್ವ ದೇಶಪ್ರೇಮಿಯಾಗಿ ಭಾರತಕ್ಕಾಗಿ ಸಾಕಷ್ಟು ಜವಾಬ್ದಾರಿಗಳನ್ನು ಪೂರೈಸಿದರು.
ಭಾರತಕ್ಕೆ ಬಾಬಾಸಾಹೇಬರು ನೀಡಿದ ಕೊಡುಗೆಗಳು ಬಹಳಷ್ಟಿವೆ. ಕುಡಿಯುವ ನೀರಿಗಾಗಿ ಹೋರಾಟ ನಡೆಸಿದ ಮೊದಲ ಕ್ರಾಂತಿಕಾರಿ ಬಾಬಾಸಾಹೇಬರು, ಜೊತೆಗೆ ಹೆಣ್ಣುಮಕ್ಕಳ ಸಮಾನ ಹಕ್ಕುಗಳಿಗಾಗಿಯೂ ಕಾನೂನಾತ್ಮಕ ಹೋರಾಟ ನಡೆಸಿದರು ಮತ್ತು ಹಿಂದೂ ಕೋಡ್ ಬಿಲ್ ಅನ್ನು ಜಾರಿಗೊಳಿಸಲು ಪ್ರಯತ್ನಿಸಿದರು. ಭಾರತದಲ್ಲಿ ಮೊದಲ ಬಾರಿಗೆ ಸ್ಥಾಪನೆಯಾದ ರಿಸರ್ವ್ ಬ್ಯಾಂಕ್ನ ರುವಾರಿ ಅಂಬೇಡ್ಕರರು; ಅಲ್ಲದೆ ಭಾರತದಲ್ಲಿ ಮೊದಲ ಬಾರಿಗೆ ವಿದ್ಯುತ್ ಮತ್ತು ನೀರಿನ ಕುರಿತಂತೆ ಜನರಿಗೆ ಅನುಕೂಲವಾಗುವ ನಿಯಮಗಳನ್ನು ರೂಪಿಸಿದವರು ಅವರೇ. ವಿದ್ಯುತ್ ಎಂಬುದು ಸರ್ಕಾರದ ನಿಯಂತ್ರಣದಲ್ಲಿ ಇರಬೇಕೆಂದೂ ಹೇಳಿದ್ದರು. ನೀರಾವರಿ ಕುರಿತ ಆಲೋಚನೆಗಳು ಪ್ರವಾಹಗಳನ್ನು ನಿಯಂತ್ರಿಸುವಂಥ ಅಣೆಕಟ್ಟುಗಳ ನಿರ್ವಣಕ್ಕೆ ಕಾರಣವಾದವು. ದಾಮೋದರ ಕಣಿವೆಯ ಯೋಜನೆಗಳು ಅವರ ಕನಸಿಕ ಕೂಸು ಎಂದು ಈ ವೇಳೆ ನಾವು ಸ್ಮರಿಸಬಹುದಾಗಿದೆ.
ಇದರ ಜೊತೆಗೆ ಕಾರ್ವಿುಕರು ಎಷ್ಟು ಅವಧಿ ದುಡಿಯಬೇಕು, ಅವರ ಘನತೆಯ ನಿಟ್ಟಿನಲ್ಲಿ ಮಾಲೀಕರು ಯಾವ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿರುವ ಬಾಬಾಸಾಹೇಬರು, ದುಡಿಯುವ ಕೈಗಳಿಗೆ ಘನತೆ ತಂದರು. ಭೂಮಿಯು ಸರ್ಕಾರದ ವಶದಲ್ಲಿ ಇರಬೇಕೆಂಬ ಅವರ ಆಲೋಚನೆಯ ಕಾರಣಕ್ಕಾಗಿ ಮುಂದೆ ಇಂದಿರಾ ಗಾಂಧಿ ಮತ್ತು ದೇವರಾಜ ಅರಸು ಅಂಥವರು ಬಡವರಿಗೆ ಭೂಮಿಯನ್ನು ನೀಡಲು ಸಾಧ್ಯವಾಯಿತು.
ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿ ಮಾಡುವ ಮೂಲಕ ಜನಸಾಮಾನ್ಯರ ಕೈಗೆ ಅಧಿಕಾರ ನೀಡಿದ ಅಂಬೇಡ್ಕರರು ‘ಒಂದು ಮತ, ಒಂದು ಮೌಲ್ಯ’ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಯಾವುದೋ ಶ್ರೇಷ್ಠತೆಯ ಭ್ರಮೆಯಲ್ಲಿ ತೇಲುತ್ತಿದ್ದವರಿಗೆ ಮನುಷ್ಯನ ಸಮಾನ ಮೌಲ್ಯಗಳ ದರ್ಶನ ಮಾಡಿಸಿದರು. ಅಲ್ಲಿಯವರೆಗೂ ಸ್ವರ್ಗ ಮತ್ತು ನರಕದಷ್ಟು ವ್ಯತ್ಯಾಸವಿದ್ದ ಭಾರತೀಯ ಸಮಾಜವು ಸಮಾನತೆಯ ಹೊಸ ರೀತಿಗಳಿಗೆ ತನ್ನನ್ನು ಅನಿವಾರ್ಯವಾಗಿ ತೊಡಗಿಸಿಕೊಂಡಿತು. ಸಾಮಾಜಿಕವಾಗಿಯೂ ಓರ್ವ ಸುಧಾರಕರು ಮಾಡುವುದಕ್ಕಿಂತಲೂ ಹೆಚ್ಚಿನ ಪರಿಣಾಮವನ್ನು ಉಂಟು ಮಾಡಿದ ಬಾಬಾಸಾಹೇಬರು ಅಸ್ಪೃ್ಯತೆಯನ್ನು ನಿಷೇಧಿಸಿದರು. ಒಂದು ವೇಳೆ ಅವರ ಕಾನೂನಿನ ರಕ್ಷಣೆ ಇಲ್ಲದೆ ಹೋಗಿದ್ದರೆ ಇಲ್ಲಿನ ಬಹುಜನರ ಪರಿಸ್ಥಿತಿ ಕಷ್ಟದಾಯಕವಾಗಿ ಇರುತ್ತಿತ್ತು. ಇನ್ನು ಮಹಿಳೆಯರಿಗೆ ಸಮಾನ ಹಕ್ಕುಗಳು ಬೇಕೆಂದು ಮಂಡಿಸಿದ ‘ಹಿಂದೂ ಕೋಡ್ ಬಿಲ್’ ಅನುಮೋದನೆ ಆಗದೇ ಇದ್ದಾಗ ಅವರು ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಮಹಿಳಾಪರವಾದ ಐತಿಹಾಸಿಕ ಹೆಜ್ಜೆಗಳಲ್ಲಿ ಒಂದು. ಆದರೆ ಇಷ್ಟು ದಿನಗಳಾದರೂ ನಮ್ಮ ಮಹಿಳೆಯರು ಬಾಬಾಸಾಹೇಬರ ಬಗ್ಗೆ ಗಂಭೀರವಾಗಿ ತಿಳಿಯದೇ ಇರುವುದು ಬೇಸರದ ಸಂಗತಿ. ಇನ್ನು ಜಾತಿ, ವರ್ಗ, ದೇವರು ಧರ್ಮ ಎಂದು ಸಮಾಜವನ್ನು ನಿಯಂತ್ರಣದಲ್ಲಿ ಇಡುತ್ತಿದ್ದ ಜನರನ್ನು ಬಾಬಾಸಾಹೇಬರಷ್ಟು ನಿಖರವಾಗಿ ಮತ್ತು ಸ್ಪಷ್ಟವಾಗಿ ಯಾರೂ ಎದುರಿಸಲು ಸಾಧ್ಯವಿಲ್ಲ. ಕಾರಣ 22 ಧರ್ಮಗಳ ಗ್ರಂಥಗಳು ಮತ್ತು ಆ ಧಾರ್ವಿುಕ ಸಮಾಜಗಳ ಸ್ಥಿತಿಗತಿಯನ್ನು ಚೆನ್ನಾಗಿ ಅಧ್ಯಯನ ಮಾಡಿದ್ದ ಅವರು, ಆಯಾ ನಿರ್ದಿಷ್ಟ ಧರ್ಮಗಳ ಮೌಢ್ಯತೆ, ಅವೈಚಾರಿಕತೆ ಮತ್ತು ಅವುಗಳ ಸಾಮಾಜಿಕ ದುಷ್ಪರಿಣಾಮದ ಬಗ್ಗೆ ಯಾವುದೇ ವಿವಾದವಿಲ್ಲದೆ ನಿಖರವಾಗಿ ಮಾತನಾಡಬಲ್ಲವರಾಗಿದ್ದರು. ಹೀಗಾಗಿಯೇ ಅವರ ಪ್ರಕಾರ ಧರ್ಮ ಎಂಬುದು ಒಂದು ಆಚರಣೆಯ ಆಯ್ಕೆಯಾಗಿತ್ತೇ ಹೊರತು, ಈಗಿನಂತೆ ಬದುಕನ್ನೇ ಆವರಿಸಿಕೊಂಡ ಅಂಧಶ್ರದ್ಧೆಯ ವಿದ್ಯಮಾನ ಆಗಿರಲಿಲ್ಲ. ಈ ಪ್ರಬುದ್ಧತೆಯ ಕಾರಣದಿಂದಾಗಿಯೇ ಅಂಬೇಡ್ಕರರಿಗೆ ಎಲ್ಲ ಧರ್ಮ, ಜಾತಿಗಳ ಜನರನ್ನು ಸಮಾನವಾಗಿ ಕಾಪಾಡುವಂಥ ಸಂವಿಧಾನವನ್ನು ರಚಿಸಲು ಸಾಧ್ಯವಾಯಿತು.
ಬಾಬಾಸಾಹೇಬರ ಹಾದಿಗೆ ಮರಳುತ್ತ: ನಾನು ಗಮನಿಸಿದಂತೆ ಆಗ ಯಾವ ಕಾರಣಗಳನ್ನು ಮುಂದಿಟ್ಟುಕೊಂಡು ಜನರನ್ನು ನಿಯಂತ್ರಣ ಮತ್ತು ಭಯದಲ್ಲಿ ಇಡಲಾಗಿತ್ತೋ ಅದೇ ಸವಕಲು ಕಾರಣಗಳನ್ನು ಮತ್ತೆ ಮತ್ತೆ ಜನರ ಬದುಕಲ್ಲಿ ವ್ಯಾಪಕವಾಗಿ ಈಗಲೂ ತರಲಾಗುತ್ತಿದೆ. ದೇವರು, ಧರ್ಮ ಮತ್ತು ಜಾತಿಗಳೇ ಸಮಾಜವನ್ನು ವ್ಯವಸ್ಥಿತವಾಗಿ ಇಡಬಲ್ಲ ಮತ್ತು ಜನರನ್ನು ಇನ್ಯಾರಿಂದಲೋ ರಕ್ಷಿಸುವ ಸೂತ್ರಗಳೆಂದು ತಿಳಿಸಲಾಗುತ್ತಿದೆ. ಆದರೆ ಎಲ್ಲ ಧರ್ಮಗಳನ್ನು ಚೆನ್ನಾಗಿ ಅರಿತು, ಧರ್ಮದ ಉದ್ದೇಶವನ್ನು ತಿಳಿದಿರುವ ಬಾಬಾಸಾಹೇಬರು ಈ ದೇಶಕ್ಕೆ ರಚಿಸಿಕೊಟ್ಟ ಸಂವಿಧಾನವು ಈ ಸೀಮಿತ ಲೋಕ ತಿಳಿವಳಿಕೆಯನ್ನು ಮೀರಿ ಬೆಳೆಯುವಂಥ ಶಕ್ತಿಯನ್ನು ನಮಗೆ ಬಹುದೊಡ್ಡ ಪ್ರಮಾಣದಲ್ಲೇ ನೀಡಿದೆ ಎಂಬುದನ್ನು ನಾವೆಲ್ಲರೂ ತಿಳಿದುಕೊಂಡು, ಬಾಬಾಸಾಹೇಬರಂತೆ ಶಿಕ್ಷಣ ಮತ್ತು ಅಧ್ಯಯನದ ಮಾರ್ಗವನ್ನು ಹಿಡಿಯಬೇಕು. ಆಗ ನಮಗೆ ವೈಚಾರಿಕತೆ ಮತ್ತು ವೈಜ್ಞಾನಿಕತೆ ಎಂದರೆ ಏನೆಂದು ಅರ್ಥವಾಗಿ ಅವು ಸಮಾಜದಲ್ಲೂ ಇರಬೇಕು ಎನಿಸುತ್ತದೆ, ಮಹಿಳೆಯರ ಸಮಾನ ಹಕ್ಕುಗಳು ಮುಖ್ಯವಾಗುತ್ತವೆ, ಮಕ್ಕಳ ಅಪೌಷ್ಠಿಕತೆಯ ಬಗ್ಗೆ ಅರ್ಥವಾಗುತ್ತದೆ, ನಿಜದ ದೇಶದ ಕಲ್ಪನೆ ಬರುತ್ತದೆ. ಅವು ಪ್ರಬುದ್ಧ ಭಾರತದ ನಿರ್ವಣಕ್ಕೆ ನೆರವಾಗುತ್ತವೆ.
ನಮ್ಮ ಸರ್ಕಾರ ಕೂಡ ಇಂಥ ಹತ್ತಾರು ಮಹತ್ತರ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಸಂವಿಧಾನದ ಪೀಠಿಕೆಯ ಓದನ್ನು ಕಡ್ಡಾಯಗೊಳಿಸುವುದರ ಜೊತೆಗೆ, ವರ್ಷಪೂರ್ತಿ ಸಂವಿಧಾನದ ಆಶಯಗಳನ್ನು ತಿಳಿಸಲು ಕ್ಯಾಬಿನೆಟ್ ಮಟ್ಟದಲ್ಲಿ ನಿರ್ಧಾರವನ್ನು ತೆಗೆದುಕೊಂಡಿದೆ. ಬಾಬಾಸಾಹೇಬರು ಕನಸುಕಂಡ ಪ್ರಬುದ್ಧ ಭಾರತದ ಆಶಯಗಳನ್ನು ಜಾರಿಗೊಳಿಸುವ ಎಲ್ಲ ಪ್ರಯತ್ನಗಳನ್ನು ನಾವು ಪ್ರಾಮಾಣಿಕವಾಗಿ ಮಾಡಲಿದ್ದೇವೆ ಎಂದು ಸಾಮಾಜಿಕ ನ್ಯಾಯದ ಹರಿಕಾರ, ಶೋಷಿತ ವರ್ಗಗಳ ಸೂರ್ಯ, ಜ್ಞಾನದ ಚಿಲುಮೆಯಾದ ಬಾಬಾಸಾಹೇಬರ ಪರಿನಿಬ್ಬಾಣ ದಿನದಂದು ಗೌರವಪೂರ್ವಕವಾಗಿ ಆಶಿಸುತ್ತೇನೆ.
(ಲೇಖಕರು ರಾಜ್ಯ ಸಮಾಜಕಲ್ಯಾಣ ಸಚಿವರು)