ಬೆರಗು ಮೂಡಿಸೋ ಇವಿ ಜಗತ್ತು: ಸುತ್ತಮುತ್ತ ಏನೆಲ್ಲ ಆಗುತ್ತಿದೆ?

EV
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಮೋಟಾರ್ ವಾಹನಗಳ ಕ್ಷೇತ್ರದಲ್ಲಿ ಇದೀಗ ಎಲೆಕ್ಟ್ರಿಕ್ ವಾಹನ (ಇವಿ)ಗಳ ಜಮಾನ ಶುರುವಾಗಿದ್ದು, ಜನತೆ ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. 2 ವರ್ಷದಿಂದೀಚೆಗೆ ನಡೆದಿರುವ ಬೆಳವಣಿಗೆ ಅಚ್ಚರಿ ಮೂಡಿಸುವಂಥದ್ದು. ಹೊಸ ಹೊಸ ಆವಿಷ್ಕಾರಗಳ ಜತೆಗೆ ಈ ಕ್ಷೇತ್ರದಲ್ಲಿ ಬರುತ್ತಿರುವ ಅಪರಿಮಿತ ಹೂಡಿಕೆಗಳು, ನೂರಾರು ಸ್ಟಾರ್ಟ್​ಅಪ್​ಗಳು, ಸಾಂಪ್ರದಾಯಿಕ ವಾಹನ ಉತ್ಪಾದಕರ ಇವಿ ಆಸಕ್ತಿ ಅಚ್ಚರಿ ಮೂಡಿಸುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜನರ ನಿರೀಕ್ಷೆ ಹಾಗೂ ಅದಕ್ಕೆ ತಕ್ಕಂತೆ ದಿನದಿನಕ್ಕೂ ನವನವೀನ ಮಾದರಿಗಳು ಮಾರುಕಟ್ಟೆ ಪ್ರವೇಶ ಮಾಡುತ್ತಿರುವುದು, ಮಾರಾಟದಲ್ಲಿ ಚುರುಕುತನ ಇವಿ ಲೋಕ ಇನ್ನಷ್ಟು ಹಿಗ್ಗುವ, ವ್ಯಾಪ್ತಿ ವಿಸ್ತರಿಸುವ ವಾಹನ ಕ್ಷೇತ್ರದ ಅಂದಾಜುಗಳನ್ನೇ ತಲೆಕೆಳಗುಮಾಡುವಂತೆ ಕಾಣಿಸುತ್ತಿದೆ. ದ್ವಿಚಕ್ರ ವಾಹನ ಮಾತ್ರವಲ್ಲದೆ ಕಾರುಗಳಲ್ಲೂ ಇವಿ ಬಯಕೆ ಜನರಲ್ಲಿ ಕಾಣಿಸಿದೆ. ಮೂಲಸೌಕರ್ಯದ ಕೊರತೆ ಬಗ್ಗೆ ಅಳುಕಿದ್ದರೂ ಪರಿಸರಾಸಕ್ತಿ ಹಾಗೂ ಹೊಸತನದ ಮೇಲೆ ಅಪಾರ ನಂಬಿಕೆ ಇಟ್ಟವರು ಇವಿ ಕಾರಿನ ಮೊರೆ ಹೋಗುತ್ತಿದ್ದಾರೆ. ಕಾರುಗಳ ಪೈಕಿ ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಇ ವೆರಿಟೊ, ಮಹಿಂದ್ರಾ ಇ2ಒ, ಟಾಟಾ ಟಿಗೋರ್ ಕಾರುಗಳು ಮುಂಚೂಣಿಯಲ್ಲಿವೆ. ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಪೈಪೋಟಿ ಸಾಕಷ್ಟಿದೆ. ಹೀರೋ, ಓಲಾ, ಏಥರ್, ಸಿಂಪಲ್ ಎನರ್ಜಿ, ಪ್ಯೂರ್ ಇವಿ, ಟಿವಿಎಸ್, ಬಜಾಜ್ ಚೇತಕ್, ಒಕಿನಾವ, ಆಂಪಿಯರ್ ನಡುವೆ ಪೈಪೋಟಿ ಕಾಣಿಸಿದೆ. ಒಟ್ಟಾರೆ 115 ಕಂಪನಿಗಳಿದ್ದರೂ, ಐಸಿ ಇಂಜಿನ್ ವಾಹನದ ಮಟ್ಟಕ್ಕೆ ಕಾರ್ಯಕ್ಷಮತೆ ಇರುವ ಇವಿ ಉತ್ಪಾದಕರ ಪಟ್ಟಿಯಲ್ಲಿ 10-12 ಕಂಪನಿಗಳು ಮಾತ್ರ ಕಾಣಿಸುತ್ತಿವೆ. ಅದರಲ್ಲಿ ಓಲಾಗೆ ಪ್ರಸ್ತುತ ಒಂದು ಲಕ್ಷ ವಾಹನಕ್ಕೆ ಬೇಡಿಕೆ ಇದೆ.

ಮಾರಾಟ ಹೇಗಿದೆ?

ಇಂಧನ ಬೆಲೆ ಏರಿಕೆಯ ಬಿಸಿ ನಡುವೆಯೂ ಕರೊನಾ ಸಂಕಷ್ಟದ ಅವಧಿಯಲ್ಲೂ ದೇಶದಲ್ಲಿ ಇವಿ ಕ್ಷೇತ್ರಕ್ಕೆ ಪುಷ್ಟಿ ನೀಡುವಂತಹ ಬೆಳವಣಿಗೆ ನಡೆದಿದೆ. ದೇಶದ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕರ ಸಮುದಾಯದ ವರದಿ ಪ್ರಕಾರ 2021ರಲ್ಲಿ 2.33 ಲಕ್ಷ ದ್ವಿಚಕ್ರ ಇವಿ ಮಾರಾಟವಾಗಿದೆ. 2020ರಲ್ಲಿ ಅಂದಾಜು ಒಂದು ಲಕ್ಷ ಇವಿ ಮಾರಾಟವಾಗಿತ್ತಂತೆ. ಹೈಸ್ಪೀಡ್ ವರ್ಗದಲ್ಲಿ 1.43 ಲಕ್ಷದಷ್ಟು ವಾಹನ ಮಾರಾಟವಾಗಿದ್ದರೆ, 25 ಕಿಮೀಗಿಂತ ವೇಗದಲ್ಲಿ ಚಲಿಸಲಾರದ 91 ಸಾವಿರ ವಾಹನ ಮಾರಾಟವಾಗಿದೆ. ಹೊರ ದೇಶದಲ್ಲಿ ಉತ್ಪಾದನೆಯಾಗಿ ಇಲ್ಲಿ ಮಾರಾಟವಾದ ಇವಿ ಹೊರತುಪಡಿಸಿ ಇಲ್ಲೇ ಉತ್ಪಾದನೆಯಾದ ಸಂಖ್ಯೆ ಇದಾಗಿದೆ. ಚೈನಾದಿಂದ ದೊಡ್ಡ ಪ್ರಮಾಣದಲ್ಲಿ ಸಣ್ಣ ಪ್ರಮಾಣದ ಇವಿ ವಾಹನಗಳು ಮಾರುಕಟ್ಟೆಯಲ್ಲಿವೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. 2022ರ ಜನವರಿಯಲ್ಲಿ ಒಟ್ಟಾರೆ 49,676 ಇವಿ ಮಾರಾಟವಾಗಿದೆ. ಇದರಲ್ಲಿ. 27,571 ದ್ವಿಚಕ್ರ ವಾಹನವಾದರೆ, 1893 ತ್ರಿಚಕ್ರ ಸರಕು ಸಾಗಣೆ ವಾಹನಗಳು. 17 ಸಾವಿರದಷ್ಟು ಪ್ರಯಾಣಿಕರನ್ನು ಹೊತ್ತೊಯ್ಯುವ ತ್ರಿಚಕ್ರ ವಾಹನ ಹಾಗೂ 3020 ಇವಿ ಕಾರುಗಳು ಮಾರಾಟವಾಗಿವೆ. 2022ರ ಜನವರಿಯಲ್ಲಿ ಮಾರಾಟವಾದ ದ್ವಿಚಕ್ರ ಇವಿ ಪೈಕಿ ಹೀರೋ- 7762, ಒಕಿನಾವ- 5611, ಆಂಪಿಯರ್- 4217, ಏಥರ್- 1870, ಪುರ್ ಎನರ್ಜಿ- 1690, ಟಿವಿಎಸ್- 1,111, ಒಲಾ-1,100 ಗ್ರಾಹಕರಿಗೆ ವಿತರಣೆಯಾಗಿದೆ. ಇದೇ ಅವಧಿಯಲ್ಲಿ ಟಾಟಾ ಮೋಟರ್ಸ್- 2892 ಇವಿ ಕಾರು ಮಾರಾಟ ಮಾಡಿದೆ.

ಬೊಮ್ಮಾಯಿ ಬಜೆಟ್ ಮೇಲೆ ನಿರೀಕ್ಷೆ: ಮಾರ್ಚ್ 4ರಂದು ಬಸವರಾಜ ಬೊಮ್ಮಾಯಿ 2022-23ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ಈ ವೇಳೆ ಇವಿ ಕ್ಷೇತ್ರ ಅವರ ಭಾಷಣದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದೆ. ಇವಿ ಖರೀದಿಗೆ ಪ್ರೋತ್ಸಾಹ ನೀಡುವಂತಹ ತೀರ್ಮಾನ ಪ್ರಕಟಿಸಬಹುದೆಂಬ ಆಸೆಯಲ್ಲಿದೆ.

ಏಥರ್: ಇಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಏಥರ್ ಇತ್ತೀಚೆಗೆ ಸಾಕಷ್ಟು ಸದ್ದು ಮಾಡುತ್ತಿದೆ. ಓಲಾ ಇವಿ ಮಾರುಕಟ್ಟೆ ಪ್ರವೇಶಕ್ಕೆ ಮುನ್ನ ಜಬರ್ದಸ್ತ್ ಆಗಿ ತಳವೂರಿದ್ದು ಅಥೇರ್ ಎನರ್ಜಿ. ಈ ಕಂಪನಿಯ ಬಗ್ಗೆ ಆಸಕ್ತಿ ವಹಿಸಿದ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯ ದಿಗ್ಗಜ ಹೀರೋ ಅಥೇರ್​ನಲ್ಲಿ ಹೊಸದಾಗಿ 420 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಚಾರ್ಜಿಂಗ್ ಮೂಲ ಸೌಕರ್ಯ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಸೋರ್ಸಿಂಗ್ ವಿಚಾರದಲ್ಲಿ ಅಥೆರ್ ಜತೆಗೆ ಪಾಲುದಾರಿಕೆ ಮಾಡಿಕೊಳ್ಳಲು ಹೀರೋ ಮುಂದಾಗಿದೆ.

ಹೀರೋ ಮುಂಚೂಣಿ: ಹೀರೋ ಎಲೆಕ್ಟ್ರಿಕ್ ಇವಿ ಮಾರಾಟದಲ್ಲಿ ಮುಂಚೂಣಿಯಲ್ಲಿದೆ ಎಂಬ ಮಾಹಿತಿ ಇದೆ. ಜೈಪುರದಲ್ಲಿರುವ ಕಂಪನಿಯ ತಾಂತ್ರಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಸಿಐಟಿ) ಮತ್ತು ಮ್ಯೂನಿಕ್​ನಲ್ಲಿರುವ ಟೆಕ್ ಸೆಂಟರ್​ಗಳ ಸಹಯೋಗದಲ್ಲಿ ಹೊಸ ದ್ವಿಚಕ್ರ ವಾಹನ ಅಭಿವೃದ್ಧಿಪಡಿಸಿದೆ. ಹೊಸ ಮಾಡೆಲ್​ಅನ್ನು ಆಂಧ್ರದ ಚಿತ್ತೂರಿನಲ್ಲಿರುವ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುತ್ತದೆ.

ಯುವಕರನ್ನು ಸೆಳೆಯಲು ಡರ್ಟ್ ಇವಿ: ಇವಿ ಎಂದರೆ ಮಹಿಳೆಯರ ಓಡಾಟಕ್ಕೆ, ಕಾಸು ಕಡಿಮೆ ಖರ್ಚು ಮಾಡಲು ಬಯಸುವವರಿಗೆ, ಹಿರಿಯರಿಗೆ ಎಂಬ ಅಭಿಪ್ರಾಯಗಳಿವೆ. ಇಗ್ನಿಟ್ರಾನ್ ಮೋಟೋಕಾರ್ಪ್ ಹೆಸರಿನ ಎಲೆಕ್ಟ್ರಿಕ್ ವಾಹನ ಸ್ಟಾರ್ಟ್-ಅಪ್ ಯುವಕರನ್ನು ಸೆಳೆಯಲು ತನ್ನ ಎರಡನೇ ಇ-ದ್ವಿಚಕ್ರ ವಾಹನವನ್ನು ಪರಿಚಯಿಸಿದೆ. 85ಕಿಮೀ ಪ್ರತಿ ಗಂಟೆಗೆ ವೇಗದ ಸಾಮರ್ಥ್ಯ ಹೊಂದಿ, ಜಿಯೋ ಲೊಕೇಟ್, ಜಿಯೋ-ಫೆನ್ಸಿಂಗ್, ಯುಎಸ್​ಬಿ ಚಾರ್ಜಿಂಗ್, ಬ್ಲೂಟೂಥ್, ಕೀರಹಿತ ಇಗ್ನಿಷನ್, ಡಿಜಿಟಲ್ ಕ್ಲಸ್ಟರ್​ಗಳನ್ನು ಈ ಬೈಕ್ ಹೊಂದಿದೆ. ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ಸ್ ಮೋಡ್ ಇದರ ವಿಶೇಷತೆಯಾಗಿದೆ.

ಯಮಹಾ 125 ಸಿಸಿ ಇವಿ: ಜನರ ಮನ ಗೆದ್ದ ಜಪಾನ್ ಮೂಲದ ಯಮಹಾ ತನ್ನ ಎಲೆಕ್ಟ್ರಿಕ್ ಸ್ಕೂಟರ್​ಅನ್ನು ಭಾರತಕ್ಕೆ ಪರಿಚಯಿಸುತ್ತಿದ್ದು, ಇದು ಲೀಥಿಯಂ ಆಧಾರಿತ ಬ್ಯಾಟರಿಗೆ ಪರ್ಯಾಯವಾಗಿ ಅಗ್ಗದ ದರದ ಬ್ಯಾಟರಿ ಬಳಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮಾರುಕಟ್ಟೆಯಲ್ಲಿದೆ.

ಇವಿ ಅಚ್ಚರಿಗಳು ಒಂದೆರಡಲ್ಲ: ಎಲೆಕ್ಟ್ರಿಕ್ ವಾಹನ ಖರೀದಿ ಮಾಡುತ್ತೀರಾ, ಚಾರ್ಜ್ ಎಲ್ಲಿ ಮಾಡುತ್ತೀರಾ, ದಾರಿ ನಡುವೆ ವಾಹನ ನಿಂತು ಹೋದರೆ ಕಥೆ ಏನು ಎಂಬ ಚರ್ಚೆ ಜನರ ನಡುವೆ ಇದೆ. ಅದೇ ತರನಾಗಿ ಚಾರ್ಜಿಂಗ್ ಕ್ಷೇತ್ರದಲ್ಲಿ ವ್ಯಾಪಕವಾದ ಸಂಶೋಧನೆ ಅಭಿವೃದ್ಧಿಗಳು ನಡೆೆಯುತ್ತಿವೆ. ಸ್ಟಾರ್ಟ್​ಅಪ್​ಗಳು, ಸಂಶೋಧಕರು, ಆಸಕ್ತರು ತಮ್ಮ ಆಲೋಚನಾ ಲಹರಿಯಲ್ಲಿ ಹೊಸ ಹೊಸತನ್ನು ಪರಿಚಯಿಸುತ್ತಲೇ ಇದ್ದಾರೆ. ಉದಾಹರಣೆಗೆ, ಪುದುಚೇರಿ ಮೂಲದ ವಿಜಯನ್ ಪ್ರೇಮಾನಂದ್ ಎಂಬವರು ಅಭಿವೃದ್ಧಿಪಡಿಸಿರುವ ಇ-ಬೈಕ್​ನಲ್ಲಿ ಇರುವ ಎರಡು ಬ್ಯಾಟರಿಗಳು ತನ್ನಿಂತಾನೇ ಚಾರ್ಜ್ ಆಗುತ್ತವೆ. ತಮ್ಮ ಉತ್ಪನ್ನಕ್ಕೆ ಅವರು ಪೇಟೆಂಟ್ ಕೂಡ ಪಡೆದುಕೊಂಡಿದ್ದಾರೆ. ಅದನ್ನು ವ್ಯಾಪಕವಾಗಿ ಅಭಿವೃದ್ಧಿಪಡಿಸುವ ಇಚ್ಛೆಹೊಂದಿದ್ದು, ವಿವಿಧ ಕಂಪನಿ ಸಂಪರ್ಕದಲ್ಲೂ ಇದ್ದಾರೆ. ಅವರು ಅಭಿವೃದ್ಧಿಪಡಿಸಿದ ವಾಹನದಲ್ಲಿ ಇರುವ ಬ್ಯಾಟರಿಗಳು ಪರಸ್ಪರ ಚಾರ್ಜ್ ಆಗುವಂತೆ ವಿನ್ಯಾಸ ಗೊಳಿಸಲಾಗಿದೆ. ಬೇರೆ ಬ್ಯಾಟರಿಗಳಂತೆ ಶೀಘ್ರವಾಗಿ ಚಾರ್ಜ್ ಖಾಲಿಯಾಗುವುದಿಲ್ಲ.

ಲಿಥಿಯನ್: ಅಯಾನ್ ಸೆಲ್ ಉತ್ಪಾದನಾ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ಅಮೆರಿಕದ ಸಿ4ವಿ ರಾಜ್ಯದಲ್ಲಿ 4015 ಕೋಟಿ ರೂಪಾಯಿಗಳ ಹೂಡಿಕೆ ಮಾಡುತ್ತಿದೆ. ಈಗಾಗಲೇ ಪ್ರಮುಖ ಪ್ರಕ್ರಿಯೆ ಮುಗಿಸಿದೆ.

ಫೇಮ್ ಬಸ್ಸುಗಳ ಓಡಾಟ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ಕಾರುಗಳಷ್ಟೇ ಅಲ್ಲದೇ ಸರಕು ಸಾಗಣೆ ವಾಹನ ಈಗಾಗಲೆ ಮಾರುಕಟ್ಟೆಯಲ್ಲಿದೆ. ಇನ್ನೊಂದು ಬದಿಯಲ್ಲಿ ಕೇಂದ್ರ ಸರ್ಕಾರ ‘ಫೇಮ್ ಹೆಸರಿನ ಯೋಜನೆ ಮೂಲಕ ಎಲೆಕ್ಟ್ರಿಕ್ ಬಸ್​ಗಳನ್ನು ರಾಜ್ಯಗಳಿಗೆ ನೀಡುತ್ತಿದ್ದು, ಈ ಮೂಲಕ ಸಾರ್ವಜನಿಕ ಸಾರಿಗೆಯಲ್ಲೂ ಸಹ ಎಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜ ನೀಡುತ್ತಿದೆ.

ಬೆಂಗಳೂರಲ್ಲಿ ಹೆಚ್ಚಾಗುತ್ತಿದೆ ಬಳಕೆ: ರಾಜ್ಯದ ಸಾರಿಗೆ ಇಲಾಖೆ ಮಾಹಿತಿ ಪ್ರಕಾರ 2018ರಲ್ಲಿ ಕೇವಲ 3,806 ವಿದ್ಯುತ್ ವಾಹನ ನೋಂದಣಿಯಾಗಿತ್ತು. 2021ರ ನವೆಂಬರ್ ವೇಳೆಗೆ ಈ ಪ್ರಮಾಣ 22,264ಕ್ಕೆ ಏರಿಕೆಯಾಗಿದೆ. ಅದರಲ್ಲೂ 19,615 ದ್ವಿಚಕ್ರ ವಾಹನ ನೋಂದಣಿಯಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ 163 ಇವಿ ಚಾರ್ಜಿಂಗ್ ಕೇಂದ್ರ ಕಾರ್ಯನಿರ್ವಹಿಸುತ್ತಿವೆ.

ನಿರ್ಮಲಾ ಹೇಳಿದ ಗುಟ್ಟು: 2022-23ನೇ ಸಾಲಿನ ದೇಶದ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮಹಾನಗರಗಳ ಕೆಲವು ಭಾಗದಲ್ಲಿ ಪೆಟ್ರೊಲ್ ಹಾಗೂ ಡೀಸೆಲ್ ಚಾಲಿತ ವಾಹನಗಳ ಸಂಚಾರವನ್ನೆ ನಿರ್ಬಂಧಿಸುವ ಸುಳಿವು ನೀಡಿದ್ದಾರೆ. ಶೂನ್ಯ ಇಂಗಾಲ ಹೊರಸೂಸುವಿಕೆ ವಿಶೇಷ ವಲಯಗಳನ್ನು ಕೂಡ ರಚಿಸಲು ಕೇಂದ್ರ ಉತ್ಸುಕವಾಗಿರುವಂತಿದ್ದು, ಸಿಎನ್​ಜಿ ಮತ್ತು ಇವಿಗೆ ಉತ್ತೇಜನ ನೀಡಲು ಇದು ಸಹಕಾರಿಯಾಗಬಹುದೆಂದು ಭಾವಿಸಲಾಗಿದೆ.

ಫುಡ್ ಡೆಲವರಿಗೆ ಇವಿ: ಟಿವಿಎಸ್ ಮೋಟರ್ ಕಂಪನಿಯು ಸ್ವಿಗ್ಗಿ ಜತೆ ಕೆಜೋಡಿಸಿದೆ. ಈ ಮೂಲಕ ದೊಡ್ಡ ನಗರಗಳಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಫುಡ್ ಡೆಲಿವರಿ ಮಾಡುವ ಕಲ್ಪನೆ ಒಡಮೂಡಿದೆ. ಡಾಮಿನೊಸ್ ಪಿಜ್ಜಾ ಡೆಲಿವರಿಗೆ ಕೆಲವು ಕಡೆಗಳಲ್ಲಿ ಆಂಪೀರ್ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಸಂಸ್ಥೆಯ ಝೀಲ್ ಮಾಡೆಲ್ ಸ್ಕೂಟರ್​ಗಳನ್ನು ಬಳಸಲಾಗುತ್ತಿದೆ.

ನಮ್ಮ ಸ್ಟಾರ್ಯ: ಹಳೆಯ ದ್ವಿಚಕ್ರ ವಾಹವವನ್ನೇ ಇವಿಯಾಗಿ ಪರಿವರ್ತಿಸುವಲ್ಲಿ ಸಂಶೋಧನೆ ನಡೆಸಿ ಅಭಿವೃದ್ಧಿಪಡಿಸಿರುವ ಬೆಂಗಳೂರಿನ ಸ್ಟಾರ್ಯ ಮೇನಿಂದ ದೇಶಾದ್ಯಂತ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದೆ. ಬೇರೆಲ್ಲ ಕಂಪನಿಗಳು ಚೈನಾ, ಥೈವಾನ್ ಸೇರಿ ವಿವಿಧ ದೇಶಗಳಿಂದ ಉಪಕರಣ ತರಿಸಿ ಅಸೆಂಬಲ್ ಮಾಡಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಆದರೆ, ಸ್ಟಾರ್ಯ ಸಂಶೋಧನೆ, ಅಭಿವೃದ್ಧಿ ಎಲ್ಲವೂ ಬೆಂಗಳೂರಿನಲ್ಲೇ ಆಗಿದೆ ಎಂಬುದು ವಿಶೇಷ ಸಂಗತಿ.ಈ ಸಂಸ್ಥೆ ಒಂದು ವಾರದ ಮಟ್ಟಿಗೆ ತನ್ನ ಬುಕಿಂಗ್ ಓಪನ್ ಮಾಡಿತ್ತು. 500 ವಾಹನಗಳ ಪರಿವರ್ತನೆ ಕಾರ್ಯಕ್ಕೆ ಒಪ್ಪಿದ್ದು, ಏಪ್ರಿಲ್ ಬಳಿಕ ಬೆಂಗಳೂರು ನಗರದಲ್ಲಿ ಇವು ಸಂಚರಿಸಲಿವೆ. ಸ್ಟಾರ್ಯ ಸಿಇಒ ರವಿ ಜಗನ್ನಾಥ್ ಪ್ರಕಾರ, ಹಾಲಿ ದ್ವಿಚಕ್ರ ವಾಹನ ಸವಾರರೇ ಇವಿಗೆ ಪರಿವರ್ತನೆಯಾಗುವವರು, ಅವರನ್ನು ಓಲೈಸಲು ಸರ್ಕಾರದ ಸಹಾಯ ಅತ್ಯವಶ್ಯಕ. ನಮ್ಮ ಪ್ರಯತ್ನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ವಾಹನ ಮಾಲಿಕರಿಗೆ ಸರ್ಕಾರದ ನೆರವು ದೊರೆತರೆ ಖಂಡಿತ ದೊಡ್ಡದೊಂದು ಬದಲಾವಣೆ ನಿರೀಕ್ಷಿಸಬಹುದು ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net