

ವಿಶ್ವದ ಜನಸಂಖ್ಯೆಯ ಸುಮಾರು ಶೇ.33 ರಷ್ಟು ಜನರು ನಿದ್ರೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನಗಳು ಹೇಳಿವೆ. ನಿದ್ರಾಹೀನತೆ ಮುಂದುವರಿದರೆ ಖಿನ್ನತೆ, ಹೃದ್ರೋಗ ಮತ್ತು ಡಯಾಬಿಟಿಸ್ನಂತಹ ದೀರ್ಘಕಾಲೀನ ಮತ್ತು ಹೆಚ್ಚು ಗಂಭೀರ ಪರಿಣಾಮದ ಸಾಧ್ಯತೆ ಹೆಚ್ಚು. ನಿದ್ರಾಹೀನತೆ ಮನುಷ್ಯನ ದೇಹಕ್ಕೆ ಬರುವ ಒಂದು ಸ್ಥಿತಿ. ಮನುಷ್ಯನಿಗೆ ನಿದ್ರೆ ಅವಶ್ಯಕವಾಗಿ ಬೇಕು. ಹೇಗೆ ಆಹಾರ, ನೀರು ಹಾಗೂ ಗಾಳಿ ಸೇವನೆ ಜೀವಿಸಲು ಅನಿವಾರ್ಯವೋ ಅದೇ ರೀತಿ ದೇಹಕ್ಕೆ ನಿದ್ರೆಯೂ ಅವಶ್ಯಕ. ನಿದ್ರೆ ಸರಿಯಾಗಿ ಮಾಡದಿರುವುದು, ಅಡೆತಡೆಯ ನಿದ್ದೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ. ನಿದ್ರಾಹೀನತೆ ಉಂಟಾಗದಂತೆ ಜೀವನಶೈಲಿ ಬದಲಾಯಿಸಿಕೊಳ್ಳುವುದು ಇಂದಿನ
ತುರ್ತು ಅಗತ್ಯವಾಗಿದೆ. ನಿದ್ರಾಹೀನತೆಯಿಂದ ನಿದ್ರಾ ಮಂಪರಿನ ಸ್ಥಿತಿ, ಶಕ್ತಿಯ ಕೊರತೆ, ಇರಿಸುಮುರಿಸು ಮತ್ತು ಕೆಲವೊಮ್ಮೆ ಖಿನ್ನತೆ ಉಂಟಾಗಬಹುದು. ಅನಿಗದಿತ ರೀತಿಯ ನಿದ್ರಾ ಅಭ್ಯಾಸಗಳು ಅಥವಾ ಅನಿಯಮಿತ ಕೆಲಸದ ಗಂಟೆಗಳು ನಿದ್ರಾಹೀನತೆಗೆ ಕಾರಣವಾಗಬಹುದು. ಈ ಎಲ್ಲದರಿಂದ ದೇಹದ ಜೈವಿಕ ಗಡಿಯಾರಕ್ಕೆ ಅಡ್ಡಿಯಾಗುತ್ತದೆ. ವಯಸ್ಕರಲ್ಲಿ ಶೇ.15ರಷ್ಟು ಜನರು ನಿದ್ರಾಹೀನತೆಯಿಂದ ಬಳಲುತ್ತಾರೆ. ವಯಸ್ಸಾದಂತೆ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಪುರುಷರಿಗಿಂತ ಮಹಿಳೆಯರು ಇದಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಒಬ್ಬ ವ್ಯಕ್ತಿಯು ಮೂಲಅಗತ್ಯವಾದ ನಿದ್ರೆಯಿಲ್ಲದೆ ಬದುಕಲಾಗದ ಅವಧಿಗಿಂತ ಮೂರು ಪಟ್ಟು ಹೆಚ್ಚು ಸಮಯ ಬೆಕಾದರೆ ಊಟವಿಲ್ಲದೆ ಬದುಕಬಹುದು ಎಂದು ಹೇಳಲಾಗುತ್ತದೆ.
ಇನ್ಸೋಮ್ನಿಯಾ: ನಿಮಗೆ ದಣಿವಾಗಿದ್ದರೂ ಪ್ರತಿ ರಾತ್ರಿ ನಿದ್ರೆ ಬರುತ್ತಿಲ್ಲ.ನಿತ್ಯವೂ ಮಲಗಲು ಪರದಾಡುತ್ತಿದ್ದೀರಿ ಎಂದರೆ ನೀವು ಇನ್ಸೋಮ್ನಿಯಾ ಎಂಬ ನಿದ್ರಾಹೀನತೆಯ ಪ್ರಕಾರದಿಂದ ಬಳಲುತ್ತಿ ರುವ ಸಾಧ್ಯತೆ ಇರಬಹುದು. ಇದರಲ್ಲೂ 2 ವಿಭಾಗಗಳಿದ್ದು ಅವುಗಳನ್ನು ಅಕ್ಯೂಟ್ ಹಾಗೂ ಕ್ರಾನಿಕ್ ಇನ್ಸೋಮ್ನಿಯಾ ಎಂದು ಗುರುತಿಸಲಾಗಿದೆ.
ಸ್ಲೀಪ್ ಅಪ್ನಿಯಾ: ಮಲಗಿರುವಾಗ ಉಸಿರಾಟದಲ್ಲಿ ಅಡಚಣೆಯುಂಟಾಗಿ ಥಟ್ಟನೆ ಏಳುವಂಥ ನಿದ್ರಾಹೀನತೆಯನ್ನು ಸ್ಲೀಪ್ ಅಪ್ನಿಯಾ ಎಂದು ಕರೆಯುತ್ತಾರೆ. ಈ ಸ್ಥಿತಿ ಬರಲು ಕಾರಣ ನೀವು ಉಸಿರಾಡುವಾಗ ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿರ ಬಹುದು, ಇಲ್ಲವೆ ಆಳವಿಲ್ಲದ ಉಸಿರು ಹೊರಬಿಡುತ್ತಿರಬಹುದು. ಈ ಸ್ಥಿತಿಯಿಂದ ಬಳಲುವ ಜನರು ಮಲಗಿದಾಗ ಒಮ್ಮೊಮ್ಮೆ ಉಸಿರಾಡುವುದನ್ನೇ ನಿಲ್ಲಿಸಿಬಿಡುತ್ತಾರೆ, ಪರಿಣಾಮ ಥಟ್ಟನೆ ಎಚ್ಚರವಾಗಿ ಬಿಡುತ್ತದೆ. ಇದನ್ನು ನಿರ್ಲಕ್ಷಿಸಿದರೆ ಇದು ರಕ್ತದೊತ್ತಡ ಏರುವಂತೆ ಮಾಡಬಹುದು ಹಾಗೂ ಹೃದಯಾಘಾತವಾಗುವ ಸಾಧ್ಯತೆಯೂ ಇರುತ್ತದೆ.
ನಾಕೋಲೆಪ್ಸಿ: ಈ ಸ್ಥಿತಿಯಲ್ಲಿ ವ್ಯಕ್ತಿ ದಿನವಿಡಿ ದಣಿದಿರುವ, ನಿದ್ರೆಯ ಗುಂಗಿನಲ್ಲಿರುವ ಮನಸ್ಥಿತಿಯಲ್ಲೇ ಇರುತ್ತಾನೆ. ಈ ಸ್ಥಿತಿಯನ್ನು ವೈದ್ಯಕೀಯವಾಗಿ ನಿದ್ರಾಘಾತ ಎಂತಲೂ ಕರೆಯುತ್ತಾರೆ. ಹೃದಯಾಘಾತವಾಗುವ ರೀತಿಯಲ್ಲೇ ಒಮ್ಮೊಮ್ಮೆ ಈ ಸ್ಥಿತಿಯಲ್ಲಿರುವವರು ಥಟ್ಟನೆ ನಿದ್ರಾಘಾತಕ್ಕೆ ಒಳಗಾಗುತ್ತಾರೆ. ಅಂದರೆ ದಿನದ ಯಾವುದೇ ಸಮಯದಲ್ಲಿ ಆ ವ್ಯಕ್ತಿಗಳಿಗೆ ತಡೆದುಕೊಳ್ಳಲಾಗದಂತಹ ನಿದ್ರೆ ಬರಬಹುದು. ದೈಹಿಕವಾಗಿ ಜಾಗರೂಕತೆಯಿಂದ ಮಾಡಬೇಕಾಗಿರುವ ಕೆಲಸಗಳನ್ನು ಮಾಡುವ ಜನರಿಗೆ ಈ ಸ್ಥಿತಿಯು ಸಾಕಷ್ಟು ಅಪಾಯವನ್ನು ತಂದೊಡ್ಡಬಹುದು.
ಒಟ್ಟಿನಲ್ಲಿ, ನಿದ್ರಾಹೀನತೆ ಉಂಟಾಗಲು ಸಾಕಷ್ಟು ಕಾರಣಗಳಿವೆ ಎಂದು ಹೇಳಬಹುದು ಒಂದೊಮ್ಮೆ ನಿಮಗೆ ನಿದ್ರಾಹೀನತೆ ಉಂಟಾಗಿದೆ ಎಂಬ ಸಂದೇಹ ಉಂಟಾದರೆ ಅದನ್ನು ನಿರ್ಲಕ್ಷಿಸಬೇಡಿ. ನಿಮ್ಮನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿಟ್ಟುಕೊಳ್ಳುವುದು ಒಂದು ಯುದ್ಧವೇನಲ್ಲ. ಆಟ ಆಡಿ, ಈಜಿ, ನಡೆದಾಡಿ, ನಿಮಗೇನು ಇಷ್ಟವೋ ಅದನ್ನು ಮಾಡಿ. ದಿನಕ್ಕೆ ಕನಿಷ್ಠ 6 ರಿಂದ 8 ಗಂಟೆ ನಿದ್ರೆ ಮಾಡಿ. ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಸಲಹೆ ಪಡೆದುಕೊಳ್ಳಿ. ಯೋಗ, ಧ್ಯಾನ, ನಿಗದಿತ ವ್ಯಾಯಾಮ ರೂಢಿ ಅಳವಡಿಸಿಕೊಳ್ಳು ವುದು ಪೂರಕವಾದ ಹಾಗೂ ಪರಿಣಾಮಕಾರಿಯಾದ ಜೀವನಶೈಲಿ.