

| ರೇಖಾ ಬೆಳವಾಡಿ ಆಪ್ತ ಸಲಹೆಗಾರರು
ನೀವು ಎಂದಾದರೂ ಮಾವಿನ ಹಣ್ಣನ್ನು ಹಾಗೂ ಕಿತ್ತಳೆ ಹಣ್ಣನ್ನೂ ಹೋಲಿಸಿದ್ದೀರಾ? ಎಂದು ನಾನು ನಿಮ್ಮನ್ನು ಕೇಳಿದರೆ ಇದು ಎಂಥ ಪ್ರಶ್ನೆ ಎಂದು ನೀವು ನಗಬಹುದು ಅಥವಾ ಆಶ್ಚರ್ಯ ಪಡಬಹುದು ಅಲ್ಲವೇ? ಹಾಗೊಮ್ಮೆ ಹೋಲಿಸಿದ್ದರೆ ಅದರ ಫಲಿತಾಂಶ ಏನಿರಬಹುದು ಒಮ್ಮೆ ಊಹಿಸಿ.
ಎರಡೂ ಹಣ್ಣುಗಳೇ ಆದರೂ ರುಚಿ, ಬಣ್ಣ, ವಾಸನೆ ಎಲ್ಲವೂ ಬೇರೆ ಬೇರೆ. ಕಿತ್ತಳೆ ಮಾವಾಗುವುದಿಲ್ಲ ಅಥವಾ ಮಾವಿನ ಹಣ್ಣಿನ ಸಿಪ್ಪೆ ಬಿಡಿಸಿದರೆ ಕಿತ್ತಳೆ ತೊಳೆಗಳು ಬರುವುದಿಲ್ಲ. ಮೂಲಭೂತವಾಗಿ ಎರಡೂ ಹಣ್ಣುಗಳನ್ನು "ಹೋಲಿಸುವ" ಅಂಶಕ್ಕೆ ಅರ್ಥವೇ ಇಲ್ಲ. ಹೀಗಿರುವಾಗ ಮಾನವರಾದ ನಾವು ಈ ಹೋಲಿಕೆ ಎಂಬ ಸುಳಿಯೊಳಗೇಕೆ ಸಿಕ್ಕಿಹಾಕಿಕೊಳ್ಳುತ್ತೇವೆ? ವಿಭಿನ್ನತೆಯನ್ನು ಏಕೆ ಗೌರವಪೂರ್ವಕವಾಗಿ ಒಪ್ಪಿಕೊಳ್ಳುವುದಿಲ್ಲ?
ಹೀಗೊಂದು ಸಣ್ಣ ಚಟುವಟಿಕೆಯಲ್ಲಿ ಭಾಗವಹಿಸೋಣ. ಈ ಕ್ಷಣದಲ್ಲಿ ನಿಮ್ಮ ಹತ್ತಿರ ಹಾಗೂ ಸುತ್ತಮುತ್ತ ಇರುವ ಒಬ್ಬರನ್ನು ನಿಮ್ಮ ಜೊತೆ ಚಟುವಟಿಕೆಯಲ್ಲಿ ಭಾಗವಹಿಸಲು ಕರೆಯಿರಿ.
ಈಗ ನೀವು ಚಿತ್ರಿಸಿದ ಚಿತ್ರವನ್ನು ಒಂದು ನಿಮಿಷ ಗಮನಿಸಿ ನಂತರ ನಿಮ್ಮ ಪಕ್ಕದವರು ಚಿತ್ರಿಸಿರುವ ಚಿತ್ರವನ್ನು ಗಮನಿಸಿ ಮತ್ತು ಅದರೊಂದಿಗೆ ಹೋಲಿಸಿ. ಈಗ ಹೇಳಿ, ನಿಮ್ಮ ಚಿತ್ರವನ್ನು ಮತ್ತೊಬ್ಬರ ಚಿತ್ರದೊಂದಿಗೆ ಹೋಲಿಸಿದಾಗ ಗಮನಿಸಿದ ಅಂಶಗಳು ಯಾವುವು?
ಇನ್ನೂ ಹಲವಾರು ಅಂಶಗಳನ್ನು ನೀವು ಗುರುತಿಸಿರಬಹುದು.. ಅಂದರೆ ಬಣ್ಣ, ಆಕಾರ, ಆಸಕ್ತಿ, ತೆಗೆದುಕೊಂಡ ಸಮಯ, ಸೃಜನಶೀಲತೆ, ಕಾಗದವನ್ನು ಬಳಸಿಕೊಂಡ ರೀತಿ, ಆಯ್ಕೆ ಆಸಕ್ತಿಯಲ್ಲಿ ವಿಭಿನ್ನತೆ ಇದೆ. ಇಬ್ಬರೂ ಚಿತ್ರಿಸಿರುವುದು ಸೇಬನ್ನೇ ಆದರೂ ಇಬ್ಬರ ಚಿತ್ರವೂ ವಿಭಿನ್ನವಾಗಿದೆ ಹಾಗೂ ವಿಶಿಷ್ಟವಾಗಿದೆ. ಎರಡೂ ಚಿತ್ರಗಳನ್ನು ಒಪ್ಪಿಕೊಳ್ಳುತ್ತೇವೆ.
ಅಂತೆಯೇ ಪ್ರತಿಯೊಬ್ಬರೂ ದೈಹಿಕ, ಮಾನಸಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಭಾವನಾತ್ಮಕವಾಗಿ ನಮ್ಮದೇ ರೀತಿಯಲ್ಲಿ ವಿಶಿಷ್ಠವಾದ ವ್ಯಕ್ತಿತ್ವ ಹೊಂದಿದ್ದು ವಿಭಿನ್ನವಾಗಿ, ವಿಶೇಷವಾಗಿದ್ದೇವೆ. ಜೈವಿಕ ಅಂಶಗಳು, ವಾತಾವರಣ, ಭಾವನಾತ್ಮಕ ಅಂಶಗಳು, ಆಸಕ್ತಿ ವಯಸ್ಸು, ಸೃಜನಶೀಲತೆ, ವಿಷಯ ಹಾಗೂ ವ್ಯಕ್ತಿ ಪ್ರಭಾವ ಇನ್ನೂ ಅನೇಕ ಅಂಶಗಳು ವ್ಯಕ್ತಿಯ ವಿಭಿನ್ನತೆಗೆ ಕಾರಣವಾಗಿವೆ. ಇದು ಪ್ರಕೃತಿಸಹಜ ಹಾಗೂ ಸುಂದರ. ಹೀಗಿರುವಾಗ ನಾವು ನಮ್ಮನ್ನು ಹಾಗೂ ಇತರರನ್ನು "ಇದ್ದ ಹಾಗೆಯೇ" ವೈಯುಕ್ತಿಕ ವಿಭಿನ್ನತೆಯೊಂದಿಗೆ ಒಪ್ಪಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ ಎನಿಸುವುದಿಲ್ಲವೇ? ಇದರ ಬಗ್ಗೆ ನಮಗೆ ಹೆಮ್ಮೆ ಹಾಗೂ ಗೌರವ ಇರುವುದು ಮುಖ್ಯ.
ಮತ್ತೊಂದು ವಿಚಾರ ಎಂದರೆ ಹೋಲಿಸಿ (compare) ಎಂದಾಗ ನಾವು ಯಾವ ಅಂಶಗಳನ್ನು ಹೆಚ್ಚಾಗಿ ಗಮನಿಸಿದೆವು ಎಂದು ಒಮ್ಮೆ ಯೋಚಿಸಿ..
ನಮ್ಮ ಹಾಗೂ ಇತರರು ಚಿತ್ರಿಸಿದ ಚಿತ್ರದಲ್ಲಿದ್ದ ವ್ಯತ್ಯಾಸಗಳನ್ನು ಹೆಚ್ಚಾಗಿ ಪಟ್ಟಿ ಮಾಡುತ್ತೇವೆ ಅಲ್ಲವೇ? ನಮ್ಮ ಚಿತ್ರಗಳಲ್ಲಿದ್ದ ಸಮಾನ ಅಂಶಗಳ ಕಡೆಗೆ ಗಮನ ಕೊಡುವುದು ಸಹ ಅಗತ್ಯ ಎನಿಸುವುದಿಲ್ಲವೇ..?
ಸಮಾನ ಅಂಶಗಳ ಕಡೆ ಗಮನ ಕೊಡುವುದು ಮನೆ, ಸ್ನೇಹಿತರು, ಶಾಲೆ, ಕಾಲೇಜು, ಕಚೇರಿ, ಬಂಧುಗಳಲ್ಲಿ ಉತ್ತಮ ಸಂಬಂಧ ಹಾಗೂ ಬಾಂಧವ್ಯ ಬೆಳೆಸಿಕೊಳ್ಳಲು ಸಹಕಾರಿ. "ವೈಯಕ್ತಿಕ ವಿಭಿನ್ನತೆಗಳನ್ನು ಗೌರವಿಸಿ/ಒಪ್ಪಿಕೊಳ್ಳುವುದು" ಹಾಗೂ "ಸಮಾನ ಅಂಶಗಳ ಕಡೆಗೆ ಹೆಚ್ಚಿನ ಗಮನ ಕೊಡುವುದು" ಎರಡೂ ಅಂಶಗಳು ವ್ಯಕ್ತಿಯ ವ್ಯಕ್ತಿತ್ವಕ್ಕೆ ನಾವು ಸಲ್ಲಿಸುವ ಗೌರವ.