ಬಾಡಿಗೆ ಹಂತಕರಿಂದ ನಡೆದ ಹತ್ಯೆ: ಆ ಕ್ಷಣ ಅಂಕಣ ಭಾಗ-2

Aa Kshana
Published on
ಅಸ್ನೋಟಿಕರ್ ಕೊಲೆ ನಡೆಯುವ ಇಪ್ಪತ್ತು ದಿನಗಳ ಹಿಂದೆ ದಿಲೀಪ್ ನಾಯಕ್ ಒಡೆತನದ ರೇಗೇ ಕಾಂಪೌಂಡ್ ಕಟ್ಟಡಕ್ಕೆ ಇಬ್ಬರು ಅಪರಿಚಿತರು ಬಂದಿದ್ದರೆಂದೂ ಅವರು ಕೆಂಪು ಬಣ್ಣದ ಮೋಟರ್ ಬೈಕ್​ನಲ್ಲಿ ಓಡಾಡುತ್ತಿದ್ದರೆಂದೂ ತಿಳಿಯಿತು. ಈ ಇಬ್ಬರೂ ಎರಡು-ಮೂರು ಬಾರಿ ಕಾರವಾರಕ್ಕೆ ಬಂದಿದ್ದು, ಪ್ರತಿ ಬಾರಿಯೂ ಎರಡು-ಮೂರು ದಿನಗಳ ಕಾಲ ಇರುತ್ತಿದ್ದರೆಂದೂ ಪೊಲೀಸರಿಗೆ ಗೊತ್ತಾಯಿತು. ಇದಲ್ಲದೆ ಬಿಳಿಯ ಬಣ್ಣದ ಕಾರು ಸಹ ಅದೇ ಕಾಂಪೌಂಡಿನಲ್ಲಿ ನಿಂತಿರುತ್ತಿತ್ತು ಎಂದು ತಿಳಿದಾಗ ಮುಂಬೈನಿಂದ ಬಂದಿದ್ದ ಹಂತಕರು ಅಸ್ನೋಟಿಕರ್ ಚಲನವಲನಗಳ ಬಗ್ಗೆ ಗಮನ ಹರಿಸಿರಬಹುದೆಂದು ಊಹಿಸಲಾಯಿತು.

ಪ್ರಕರಣದ ಮುಖ್ಯ ಶಂಕಿತ ದಿಲೀಪ್ ನಾಯಕನನ್ನು ಪತ್ತೆ ಮಾಡುವವರೆಗೆ ಹಂತಕರು ಯಾರು ಎಂದು ತಿಳಿಯುವುದಿಲ್ಲವೆಂದು ಸಿಓಡಿ ಪೊಲೀಸರು ಮುಂಬೈ ಪೊಲೀಸರನ್ನು ಸಂರ್ಪಸಿದರು. ದಿಲೀಪ್ ಎಲ್ಲಿದ್ದಾನೆಂದು ಹುಡುಕಲು ಅವರ ಸಹಾಯ ಕೋರಿದರು. ದಿಲೀಪ್ ದುಬೈಗೆ ಓಡಿಹೋಗಿರುವುದಾಗಿ ಕೆಲವೇ ದಿನಗಳಲ್ಲಿ ತಿಳಿದು ಬಂದಿತು. ಡಿಐಜಿ ಜ್ಯೋತಿಪ್ರಕಾಶ್ ಮಿರ್ಜಿ ನೇತೃತ್ವದ ಸಿಓಡಿ ತಂಡ ದುಬೈಗೆ ಹೋಗಿ ನಾಯಕ್ ಎಲ್ಲಿದ್ದಾನೆ ಎಂದು ತಿಳಿಯಲು ಅಲ್ಲಿನ ಸರ್ಕಾರದ ನೆರವನ್ನು ಕೋರಿತು. ಆದರೆ ಅವರಿಂದ ಯಾವುದೇ ಸಹಕಾರ ಸಿಗಲಿಲ್ಲ. ಕಡೆಗೆ ಪೊಲೀಸ್ ಅಧಿಕಾರಿ ಲವಕುಮಾರ್ ದುಬೈನ ಕೆಲವು ಭಾರತೀಯರ ಸಹಾಯದಿಂದ ದಿಲೀಪ್ ನಾಯಕನನ್ನು ಪತ್ತೆ ಮಾಡಿದರು. ಆತನನ್ನು 2000ದ ಏಪ್ರಿಲ್​ನಲ್ಲಿ ಕಾರವಾರಕ್ಕೆ ಕರೆದುಕೊಂಡು ಬರಲಾಯಿತು.

ಆತನನ್ನು ತೀವ್ರವಾಗಿ ವಿಚಾರಿಸಿದಾಗ, ‘ಈ ಕೊಲೆಯನ್ನು ಮಾಡಿಸಲು ಮುಂಬೈನ ಭೂಗತ ಪಾತಕಿ ಅಶ್ವಿನ್ ನಾಯಕ್​ನನ್ನು ಒಮ್ಮೆ ಭೇಟಿ ಮಾಡಿದ್ದೆ’ ಎಂದು ಒಪ್ಪಿಕೊಂಡ. ಈ ಕೊಲೆ ಮಾಡಿಸಲು ಅಶ್ವಿನ್ 30 ಲಕ್ಷ ರೂಪಾಯಿ ಕೇಳಿ 10 ಲಕ್ಷ ಮುಂಗಡವಾಗಿ ಕೊಡಲು ಹೇಳಿದ. ಆದರೆ ಅಷ್ಟು ಹಣ ಕೊಡಲು ತಾನು ತಯಾರಾಗಿರದ ಕಾರಣ ಕೊಲೆಯ ಯೋಚನೆಯನ್ನೇ ಕೈಬಿಟ್ಟೆ ಎಂದ.

ಅಶ್ವಿನ್ ನಾಯಕ್​ನನ್ನು ಪತ್ತೆ ಮಾಡಿದರೆ ಏನಾದರೂ ಕುರುಹು ಸಿಗಬಹುದೇನೋ ಎಂದು ಇನ್ಸ್​ಪೆಕ್ಟರ್ ಲವಕುಮಾರ್ ಮುಂಬೈಗೆ ಹೋದರು. ಅಶ್ವಿನ್ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದಾನೆಂದು ತಿಳಿದು, ದೆಹಲಿಗೆ ಹೋಗಿ ಅವನನ್ನು ಜೈಲಿನಲ್ಲಿ ಭೇಟಿ ಮಾಡಿದರು. ಹಿಂದೊಮ್ಮೆ ಈ ಕೊಲೆ ಮಾಡಿಸಲು ತನ್ನನ್ನು ದಿಲೀಪ್ ಭೇಟಿ ಮಾಡಿದ್ದನ್ನು ಒಪ್ಪಿಕೊಂಡ ಅಶ್ವಿನ್, ತಾನು ಮೂವತ್ತು ಲಕ್ಷ ರೂ. ಕೇಳಿದಾಗ ದಿಲೀಪ್ ಮತ್ತೆ ತನ್ನನ್ನು ಸಂರ್ಪಸಲಿಲ್ಲ ಎಂದ. ಕೊಲೆಯನ್ನು ಯಾರು ಮಾಡಿಸಿದರೋ ತನಗೆ ತಿಳಿದಿಲ್ಲ ಎಂದ.

ಏತನ್ಮಧ್ಯೆ ಸಾಕ್ಷಿಗಳು ಕಂಡಿದ್ದ ಬಿಳಿಯ ಬಣ್ಣದ ಕಾರು ಅಗ್ರನಾಯಕ್ ಎನ್ನುವವನಿಗೆ ಸೇರಿದ್ದಾಗಿ ತಿಳಿಯಿತು. ಆತ ಕಾರವಾರದ ಸಮೀಪದ ಸದಾಶಿವಗಢದ ನಿವಾಸಿಯಾಗಿದ್ದು ಅಲ್ಲಿಯೇ ಕಲ್ಲಿನ ಕ್ರಷರ್ ಹೊಂದಿದ್ದ. ಆತ ಕಾರವಾರದಲ್ಲಿ ಬಹುಮಹಡಿ ಕಟ್ಟಡ ನಿರ್ವಿುಸುತ್ತಿದ್ದು, ಆ ಕಟ್ಟಡ ಮುನಿಸಿಪಲ್ ನಿಯಮಗಳ ಉಲ್ಲಂಘನೆ ಮಾಡಿತ್ತೆಂದೂ, ಆ ಕಟ್ಟಡ ಕೆಡವಲು ಕಾರವಾರ ನಗರಸಭೆ ಆತನಿಗೆ ನೋಟೀಸನ್ನು ನೀಡಿತ್ತೆಂದೂ ತಿಳಿಯಿತು. ಆಗ ತನ್ನ ಕಟ್ಟಡವನ್ನು ಉಳಿಸಲು ಅಗ್ರನಾಯಕ್ ವಸಂತ್ ಅಸ್ನೋಟಿಕರ್​ರ ಸಹಾಯ ಕೇಳಿದ್ದನೆಂದೂ ಆದರೆ ಶಾಸಕರು ಒಪ್ಪದ ಕಾರಣ ಆತ ಶಾಸಕರ ವಿರುದ್ಧವಾಗಿ ದಿಲೀಪ್ ಜತೆ ಸೇರಿದ್ದನೆಂದೂ ತಿಳಿಯಿತು.

ಇಷ್ಟರಲ್ಲಿ ಮುಂಬೈಯ ರಬಾಲೆ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್ ದತ್ತ ಗುಳೆ ದರೋಡೆ ಪ್ರಕರಣವೊಂದರಲ್ಲಿ ತಾವು ಕೆಲವರನ್ನು ಬಂಧಿಸಿದ್ದು, ಅವರಲ್ಲೊಬ್ಬ ಕಾರವಾರದ ಶಾಸಕರ ಕೊಲೆ ಮಾಡಿದ್ದಾಗಿ ಹೇಳಿದನೆಂಬ ಮಾಹಿತಿಯನ್ನು ರಾಜ್ಯ ಡಿಜಿಪಿ ಕಚೇರಿಗೆ ಕಳಿಸಿದರು. ಲವಕುಮಾರ್ ರಬಾಲೆ ಪೊಲೀಸ್ ಠಾಣೆಗೆ ಧಾವಿಸಿದರು. ಅಲ್ಲಿದ್ದ ಬಂಧಿತ ಆರೋಪಿ ಸಂಜಯ್ ಮೋಹಿತೆಯನ್ನು ಮಾತನಾಡಿಸಿದರು. ಆತ ಶಾಸಕರ ಕೊಲೆಯನ್ನು ತನ್ನ ಸಹಚರರಾದ ಆಂಟನಿ ರೋಜಾರಿಯೋ ಮತ್ತು ಓಂಪ್ರಕಾಶ್ ಗಿರಿ ಜತೆ ಸೇರಿ ಮಾಡಿದ್ದಾಗಿ ತಿಳಿಸಿದ. ತಾನೇ ಮೋಟಾರ್ ಬೈಕ್ ಹಿಂದೆ ಕುಳಿತು ಶಾಸಕರ ಮೇಲೆ ಗುಂಡು ಹಾರಿಸಿದೆ ಎಂದೊಪ್ಪಿಕೊಂಡ. ಕೊಲೆಗೆ ಉಪಯೋಗಿಸಿದ್ದ ರಿವಾಲ್ವರ್ ಅನ್ನು ಆಂಟನಿಗೆ ಮರಳಿಸಿದೆನೆಂದು ತಿಳಿಸಿದ.

ನಂತರ ಸಿಓಡಿ ತಂಡ ಇತರ ಆರೋಪಿಗಳಾದ ಆಂಟನಿ ಮತ್ತು ಗಿರಿಯನ್ನು ಹುಡುಕತೊಡಗಿತು. ಮುಂಬೈ ಹೊರವಲಯದ ಠಾಣೆ ಉಪನಗರದ ನಿವಾಸಿಯಾಗಿದ್ದ ಆಂಟನಿ ಪೊಲೀಸ್ ಎನ್​ಕೌಂಟರ್​ನಲ್ಲಿ ಕೆಲ ದಿನಗಳ ಹಿಂದೆ ಹತನಾಗಿದ್ದನೆಂದು ತಿಳಿಯಿತು. ಗಿರಿಯ ಹುಟ್ಟೂರಾದ ಉತ್ತರ ಪ್ರದೇಶದ ಜೌನ್​ಪುರಕ್ಕೆ ಹೋದಾಗ ಆತನೂ ಮುಂಬೈ ಪೊಲೀಸರ ಎನ್​ಕೌಂಟರ್​ನಲ್ಲಿ ಹತನಾಗಿದ್ದಾನೆಂದು ತಿಳಿಯಿತು.

ಹೀಗಾಗಿ ಮೂವರು ಬಾಡಿಗೆ ಹಂತಕರಲ್ಲಿ ಜೀವಂತವಾಗಿದ್ದವನು ಸಂಜಯ್ ಮೋಹಿತೆ ಒಬ್ಬನೇ. ಅವನನ್ನು ವಶಕ್ಕೆ ಒಪ್ಪಿಸಲು ಸಿಓಡಿ ಪೊಲೀಸರು ಮಹಾರಾಷ್ಟ್ರದ ನ್ಯಾಯಾಧೀಶರನ್ನು ಕೋರಿ ತಮ್ಮ ವಶಕ್ಕೆ ಪಡೆದರು. ಆತನನ್ನು ಕಾರವಾರದಲ್ಲಿ ಕೂಲಂಕಷವಾಗಿ ಪ್ರಶ್ನಿಸಲಾಯಿತು. ಆತ ಹೀಗೆಂದ: ‘ಕೊಲೆಯ ಸುಪಾರಿಯನ್ನು ಪಡೆದ ಕೂಡಲೇ ನಾವು ಮೂರೂ ಜನ ಗೋವಾದ ಮೂಲಕ ಕಾರವಾರಕ್ಕೆ ಬಂದೆವು. ನಮ್ಮ ಉಪಯೋಗಕ್ಕೆಂದು ಒಂದು ಕಾರು ಮತ್ತು ಮೋಟರ್​ಬೈಕ್ ಕೊಡಲಾಗಿತ್ತು. ಊಟ, ವಸತಿಯ ವ್ಯವಸ್ಥೆ ಮಾಡಲಾಗಿತ್ತು. ಸಮುದ್ರತೀರದಲ್ಲಿ ವಾಕ್ ಮಾಡುತ್ತಿದ್ದ ಅಸ್ನೋಟಿಕರರನ್ನು ನಮಗೆ ತೋರಿಸಿ ಅವರ ಕೊಲೆ ಮಾಡಲು ಹೇಳಿ ಇದಕ್ಕೆ ಬೇಕಾದ ಪೂರ್ವತಯಾರಿ ಮಾಡಲು ತಿಳಿಸಲಾಯಿತು.

ಆ ರಾತ್ರಿ ಶಾಸಕರು ಕಲ್ಯಾಣ ಮಂಟಪಕ್ಕೆ ಹೋಗಿದ್ದಾರೆಂಬ ಮಾಹಿತಿ ಬಂದ ಕೂಡಲೇ ಬೈಕಿನಲ್ಲಿ ಅಲ್ಲಿಗೆ ಹೋದೆವು. ಬೈಕನ್ನು ಓಂಪ್ರಕಾಶ್ ಗಿರಿ ಓಡಿಸುತ್ತಿದ್ದ, ನಾನು ಅವನ ಹಿಂದೆ ಕುಳಿತಿದ್ದೆ. ನಮ್ಮಿಬ್ಬರ ಬಳಿಯೂ ರಿವಾಲ್ವರ್​ಗಳಿದ್ದವು. ಮೊದಲಿಗೆ ಓಂಪ್ರಕಾಶ್ ಗುಂಡು ಹಾರಿಸಿದಾಗ ಅದು ಶಾಸಕರಿಗೆ ತಗುಲಲಿಲ್ಲ. ತಕ್ಷಣ ನನ್ನ ರಿವಾಲ್ವರ್​ನಿಂದ ನಾಲ್ಕು ಗುಂಡುಗಳನ್ನು ಶಾಸಕರ ಮೇಲೆ ಹಾರಿಸಿ ಅವರ ಕೊಲೆ ಮಾಡಿದೆ. ನಂತರ ಸದಾಶಿವಗಢಕ್ಕೆ ಹೋದೆವು. ಅಲ್ಲಿ ಆಂಟನಿ ಇನ್ನೊಬ್ಬ ವ್ಯಕ್ತಿಯ ಜತೆ ನಮಗಾಗಿ ಕಾಯುತ್ತಿದ್ದ. ಮೋಟರ್​ಬೈಕ್ ಅನ್ನು ಯಾರೋ ತೆಗೆದುಕೊಂಡು ಹೊರಟುಹೋದರು. ನಾವು ಆಂಟನಿ ಜತೆಯಲ್ಲಿದ್ದವನ ಕಾರಿನಲ್ಲಿ ಗೋವಾಕ್ಕೆ ಹೋದೆವು. ಅಲ್ಲಿ ಒಂದು ರಾತ್ರಿ ಹೋಟೆಲ್​ನಲ್ಲಿದ್ದು, ಮಾರನೆಯ ದಿನ ವಿಮಾನದಲ್ಲಿ ಮುಂಬೈಗೆ ಬಂದವು’. ಕೊಲೆಗೆ ಉಪಯೋಗಿಸಿದ್ದ ಆಯುಧ ವಶಪಡಿಸಿಕೊಳ್ಳುವುದು ಮುಖ್ಯವಾಗಿತ್ತು. ಆದರೆ ಅದನ್ನಿಟ್ಟುಕೊಂಡಿದ್ದ ಆಂಟನಿ ಅಸುನೀಗಿದ್ದ. ಆಗ ಮೋಹಿತೆಯೇ ಪೊಲೀಸರ ಸಹಾಯಕ್ಕೆ ಬಂದ. ‘ಸರ್, ಆ ಆಯುಧವನ್ನು ಆಂಟನಿ ನಮ್ಮ ಗ್ಯಾಂಗಿನ ಇನ್ನೊಬ್ಬ ಸದಸ್ಯನಿಗೆ ಕೊಟ್ಟಿದ್ದ. ಆ ವ್ಯಕ್ತಿಯನ್ನು ಕೊಲ್ಹಾಪುರ ಜಿಲ್ಲೆಯ ಶಿರೋಳಿ ಎಂಐಡಿಸಿ ಠಾಣೆಯ ಪೊಲೀಸರು ದರೋಡೆ ಕೇಸೊಂದರಲ್ಲಿ ವಶಕ್ಕೆ ಪಡೆದಿರುವುದಾಗಿ ತಿಳಿದಿತ್ತು. ಅಲ್ಲೊಮ್ಮೆ ವಿಚಾರಿಸಿ ನೋಡಿ’ ಎಂದ.

ಲವಕುಮಾರ್ ಕೊಲ್ಹಾಪುರಕ್ಕೆ ಹೋಗಿ ಅಲ್ಲಿನ ನ್ಯಾಯಾಲಯದ ಸುಪರ್ದಿಯಲ್ಲಿದ್ದ ರಿವಾಲ್ವರನ್ನು ವಶಕ್ಕೆ ಪಡೆದು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿದರು. ಅಸ್ನೋಟಿಕರ್ ದೇಹದಿಂದ ಹೊರತೆಗೆಯಲಾಗಿದ್ದ ಗುಂಡುಗಳನ್ನು ಅದರಿಂದಲೇ ಹಾರಿಸಲಾಗಿದೆ ಎಂಬ ವರದಿ ಬಂದಿತು. ಕಾರವಾರದ ಕಾರಾಗೃಹದಲ್ಲಿಯೇ ಆರೋಪಿಯನ್ನು ಗುರುತು ಪತ್ತೆ ಮಾಡುವ ಪರೇಡ್ ನಡೆಸಲಾಯಿತು. ಕೊಲೆಯಾದ ರಾತ್ರಿ ಅಸ್ನೋಟಿಕರ್ ಜೊತೆಯಿಲ್ಲಿದ್ದ ಹಲವಾರು ಜನರು ಸಂಜಯ್ ಮೋಹಿತೆಯನ್ನು ಈತನೇ ಗುಂಡು ಹಾರಿಸಿದವನೆಂದು ಗುರುತಿಸಿದರು. ಮೋಹಿತೆ ನೀಡಿದ್ದ ಮಾಹಿತಿ ಮೇರೆಗೆ ಪೊಲೀಸರು ಗೋವಾದ ಹೋಟೆಲ್​ಗೆ ಹೋದಾಗ ಆ ಕೊಠಡಿಯನ್ನು ದಿಲೀಪ್ ನಾಯಕ್​ನ ಬಲಗೈ ಬಂಟನಾಗಿದ್ದ ಆರ್ನಾಲ್ಡ್ ರೇಗೋ ಎನ್ನುವವನು ಕಾಯ್ದಿರಿಸಿದ್ದಾಗಿ ತಿಳಿಯಿತು. ಅವನನ್ನೂ ಬಂಧಿಸಲಾಯಿತು. ಹಂತಕರನ್ನು ಸದಾಶಿವಗಢದಿಂದ ಆ ಹೋಟೆಲ್ಲಿಗೆ ಕರೆತಂದಿದ್ದ ಅಗ್ರನಾಯಕ್​ನನ್ನೂ, ಷಡ್ಯಂತ್ರದ ರೂವಾರಿ ದಿಲೀಪ್​ನನ್ನೂ ಬಂಧಿಸಲಾಯಿತು.

ಕೊಲೆಯ ಷಡ್ಯಂತ್ರ ಹಾಗೂ ಕೊಲೆ ಮಾಡಿದ ಆರೋಪದ ಮೇಲೆ ದಿಲೀಪ್ ನಾಯಕ್, ರೋನಾಲ್ಡ್ ರೇಗೋ, ಅರೂಪ್ ಅಗ್ರನಾಯಕ್, ಆಂಟನಿ ರೋಜಾರಿಯೋ, ಓಂಪ್ರಕಾಶ್ ಗಿರಿ ಮತ್ತು ಸಂಜಯ್ ಮೋಹಿತೆ ಹೀಗೆ ಆರು ಜನರ ಮೇಲೆ ಕಾರವಾರದ ಸೆಷನ್ಸ್ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ಇವರಲ್ಲಿ ಆಂಟನಿ ಮತ್ತು ಓಂಪ್ರಕಾಶ್ ಮೃತಪಟ್ಟಿದ್ದ ಕಾರಣ ಉಳಿದ ನಾಲ್ಕು ಜನರ ಮೇಲೆ ವಿಚಾರಣೆ ಆರಂಭವಾಯಿತು. ಏತನ್ಮಧ್ಯೆ, ದಿಲೀಪ್ ಹೈಕೋರ್ಟಿನಿಂದ ಜಾಮೀನು ಪಡೆದ. ಆದರೆ ಆತ ಜೈಲಿನಿಂದ ಹೊರಬಂದ ನಂತರ 2004ರ ಮಾರ್ಚ್ 3ರಂದು, ಕಾರವಾರದಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಆತನನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು.

ಉದಯ್ ಅಲಿಯಾಸ್ ರಾಜ ಎನ್ನುವವನು ತಾನು ಹಿಂದಿನ ವೈಷಮ್ಯದ ಮೇಲೆ ದಿಲೀಪನ ಕೊಲೆ ಮಾಡಿದೆ ಎಂದು ಒಪ್ಪಿಕೊಂಡ. ಹೀಗಾಗಿ ಅಸ್ನೋಟಿಕರ್ ಕೊಲೆ ಪ್ರಕರಣದ ವಿಚಾರಣೆ ಕೇವಲ ಮೂರು ಆರೋಪಿಗಳ ಮೇಲೆ ನಡೆಯಿತು. ಕೊಲೆ ನಡೆದ 21 ವರ್ಷಗಳ ಸುದೀರ್ಘ ಕಾಲದ ನಂತರ 2021ರ ಏಪ್ರಿಲ್​ನಲ್ಲಿ ಈ ಪ್ರಕರಣದ ತೀರ್ಪು ಹೊರಬಂದಿತು. ನ್ಯಾಯಾಲಯವು ಕೊಲೆಗಾರ ಮೋಹಿತೆಗೆ ಜೀವಾವಧಿ ಶಿಕ್ಷೆ ನೀಡಿ, ಉಳಿದಿಬ್ಬರನ್ನು ಬಿಡುಗಡೆ ಮಾಡಿತು. ಕಡೆಗೂ ಪೊಲೀಸ್ ತನಿಖೆ ಯಶಸ್ವಿಯಾಯಿತು.

ಪ್ರಕರಣದ ಮೂರೂ ಆರೋಪಿಗಳ ಅಸ್ವಾಭಾವಿಕ ಸಾವು, ‘ಯಾರು ಬಂದೂಕಿನಿಂದ ಜೀವಿಸುತ್ತಾರೋ ಅವರು ಬಂದೂಕಿನಿಂದಲೇ ಸಾಯುತ್ತಾರೆ’ ಎನ್ನುವ ನುಡಿಯನ್ನು ಸತ್ಯವಾಗಿಸಿತು.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net