

ಯೋಗವೆಂಬ ಸಂಸೃ್ಕ ಪದದ ಮೂಲ ಧಾತುರೂಪ - ಯುಜ್, ಎಂದರೆ ಜೋಡಿಸು ಅಥವಾ ಕೂಡಿಸು. ಆದ್ದರಿಂದ ಯೋಗವು, ಹೆಚ್ಚಿನ ಪಾಶ್ಚಾತ್ಯರು ಭಾವಿಸುವಂತೆ, ಕೇವಲ ದೇಹದ ವಿವಿಧ ಭಂಗಿ-ವಿನ್ಯಾಸಗಳಿಗೆ ಸೀಮಿತವಾಗಿಲ್ಲ. ಯೋಗವೆಂದರೆ ದೇಹ, ಮನಸ್ಸು ಮತ್ತು ಆತ್ಮಗಳನ್ನು ಒಂದುಗೂಡಿಸುವ ವಿಜ್ಞಾನ. ಯೋಗಿಯು ಈ ಮೂರೂ ಒಂದಾಗುವಿಕೆಯನ್ನು ಅಥವಾ ಅವುಗಳ ಏಕತ್ವವನ್ನು ಅನುಭವಿಸುತ್ತಾನೆ. ಒಟ್ಟು 195 ಸೂತ್ರಗಳನ್ನೊಳಗೊಂಡ ಪತಂಜಲಿ ಯೋಗಶಾಸ್ತ್ರವು ಇದನ್ನೇ ಬೋಧಿಸುತ್ತದೆ. ಈ ಸೂತ್ರಗಳೇ ಅಷ್ಟಾಂಗ ಯೋಗಸೂತ್ರಗಳು ಎಂಬ ಹೆಸರಿನಿಂದ ಇಂದು ಜಗತ್ತಿನಲ್ಲಿ ಪ್ರಸಿದ್ಧವಾಗಿವೆ. ಯೋಗದ ಈ ಅಷ್ಟ (ಎಂಟು) ಅಂಗಗಳ ಪೈಕಿ ಆಸನ ಅಥವಾ ಯೋಗಾಸನವೆಂಬುದು ಒಂದು ಅಂಗವಷ್ಟೆ. ನಿಜವಾದ ಅರ್ಥದಲ್ಲಿ ಯೋಗದ ಅನುಷ್ಠಾನ ಅಥವಾ ಆಚರಣೆಯೆಂದರೆ, ಈ ಎಂಟೂ ಅಂಗಗಳ ಆಚರಣೆ. ಮಹರ್ಷಿ ಪತಂಜಲಿಯ ಪ್ರಕಾರ ಈ ಅಷ್ಟಾಂಗ ಯೋಗವೆಂದರೆ ಏನು?
ಯೋಗಃ ಚಿತ್ತವೃತ್ತಿ ನಿರೋಧಕಃ ಚಿತ್ತಚಾಂಚಲ್ಯದ ಅಥವಾ ಮನೋಚಾಂಚಲ್ಯದ ನಿಯಂತ್ರಣವೇ ಯೋಗ (ಪತಂಜಲಿ ಯೋಗಸೂತ್ರಗಳು - 1.2). ಎಲ್ಲಾ ಯೋಗಸಾಧನೆಗಳ ಮೂಲ ಉದ್ದೇಶವೆಂದರೆ, ಎಲ್ಲಾ ಮನೋವೃತ್ತಿಗಳನ್ನು ನಿಗ್ರಹಿಸಿ ಆತ್ಮನೊಂದಿಗೆ ಏಕತ್ವವನ್ನು ಸಾಧಿಸಿ ನಿಶ್ಚಲತ್ವದಲ್ಲಿ ನೆಲೆಯಾಗುವುದು. ಇಂತಹ ಸ್ಥಿತಿಯನ್ನು ಸಾಧಿಸಲು, ಪತಂಜಲಿ ಮಹರ್ಷಿಯು ಎಂಟು ಸೋಪಾನಗಳ ಅಷ್ಟಾಂಗ ಯೋಗವನ್ನು ಬೋಧಿಸಿದ್ದಾನೆ. ಮೊದಲೆರಡು ಅಂಗಗಳು ದೇಹ-ಮನಸ್ಸುಗಳ ಶಿಸ್ತಿಗೆ ಸಂಬಂಧಿಸಿವೆ.
2. ನಿಯಮ: ಈ ಮೇಲಿನ ಸಾಮಾಜಿಕ ಶಿಸ್ತನ್ನು ಪಾಲಿಸಬೇಕಾದರೆ, ಸಾಧಕನು ತನ್ನ ಅಂತರಂಗ ಮತ್ತು ವೈಯಕ್ತಿಕ ಜೀವನಗಳಲ್ಲಿ ಈ ನಿಯಮವನ್ನು ಅನುಷ್ಠಾನಕ್ಕೆ ತರಬೇಕಾಗುತ್ತದೆ. ಯೋಗಿಯು ಸದಾ ತನ್ನ ಮನಸ್ಸಿನಲ್ಲಿ ಪರಿಶುದ್ಧತೆ ಮತ್ತು ದೃಢತೆಗಳನ್ನು ಇಟ್ಟುಕೊಳ್ಳಲು ಸಹಾಯಕವಾಗುವ ನಿಯಮದ ಐದು ಮೌಲ್ಯಗಳೆಂದರೆ, ಶೌಚ (ಶುಚಿತ್ವ), ಸಂತೋಷ, ತಪಸ್ಸು, ಸ್ವಾಧ್ಯಾಯ (ಆಧ್ಯಾತ್ಮಿಕ ಗ್ರಂಥಗಳ ಅಧ್ಯಯನ) ಮತ್ತು ಈಶ್ವರ ಪ್ರಣಿಧಾನ (ಭಗವಂತನಲ್ಲಿ ಶರಣಾಗತಿ). ಭಗವಂತನ ಅಸ್ತಿತ್ವದಲ್ಲಿ ವಿಶ್ವಾಸವಿಲ್ಲದ ನಾಸ್ತಿಕರಿಗೆ ಐದನೆಯ ಮೌಲ್ಯದ ಪಾಲನೆಯು ಸಾಧ್ಯವಿಲ್ಲದಿರುವುದರಿಂದ, ಅವರು ಯೋಗಿಗಳಾಗುವುದು ಅಸಾಧ್ಯ. ಅಂತಹ ವ್ಯಕ್ತಿಗಳು ಕೇವಲ ದೇಹಕ್ಕೆ ಸಂಬಂಧಿಸಿದ ಆಸನಗಳನ್ನು ಅಥವಾ ಉತ್ತಮ ಸಾಮಾಜಿಕ ವರ್ತನೆಗಳನ್ನು ಕಲಿಯಬಹುದೇ ಹೊರತು, ಅವರು ಯೋಗದ ಅತ್ಯುನ್ನತ ಸ್ಥಿತಿಯನ್ನು ಗಳಿಸಲು ಸಾಧ್ಯವಿಲ್ಲ.
3. ಆಸನ: ಕೇವಲ ದೇಹಕ್ಕೆ ಸಂಬಂಧಿಸಿದ ಯೋಗದ ಈ ಅಂಗವು ಯೋಗಾಸನ ಎಂಬ ಹೆಸರಿನಿಂದ ಅತಿ ಜನಪ್ರಿಯವಾಗಿದೆ. ಯೋಗಸಾಧನೆಗೆ ಅತ್ಯಂತ ಅಗತ್ಯವಾದ ದೇಹದ ಆರೋಗ್ಯ ಮತ್ತು ದಾರ್ಢ್ಯಗಳನ್ನು ಗಳಿಸಿ ಉಳಿಸಿಕೊಳ್ಳಲು ಆಸನದ ದೈನಂದಿನ ಅನುಷ್ಠಾನವು ಬಹು ಸಹಾಯಕ. ನೂರಾರು ಆಸನಗಳ ಪೈಕಿ, ಹಲವು ದೇಹದ ಭಂಗಿಗಳ ಅಥವಾ ಆಸನಗಳ ಸಂಯೋಗವಾದ ಸೂರ್ಯ ನಮಸ್ಕಾರವು ಇಂದು ಜಗತ್ತಿನಾದ್ಯಂತ ಜನಪ್ರಿಯವಾಗಿದೆ. ಯಾರಾದರೂ ಕೇವಲ ಯೋಗಾಸನಗಳನ್ನು ಮಾತ್ರ ಮಾಡುತ್ತಾ, ತಾವು ಯೋಗಿಗಳಾಗಿದ್ದೇವೆಂದು ಹೇಳಿಕೊಂಡರೆ ಅದು ಹಾಸ್ಯಾಸ್ಪದ! ಆಸನಗಳ ಮೂಲಕ ಉತ್ತಮ ಆರೋಗ್ಯವನ್ನು ಗಳಿಸಿ, ಯಮ-ನಿಯಮಗಳ ಮೂಲಕ ಮಾನಸಿಕ ಪರಿಶುದ್ಧತೆಯನ್ನು ಪಡೆಯುವುದು ಯೋಗದ ಆರಂಭಿಕ ಹಂತವಷ್ಟೆ.
4. ಪ್ರಾಣಾಯಾಮ: ಇದು ಪರಿಪೂರ್ಣ ಉಸಿರಾಟದ ಕಲೆ ಅಥವಾ ವಿಜ್ಞಾನ. ಎಲ್ಲರ ಉಸಿರಾಟವು ಜನನದಿಂದಲೇ ಪ್ರಾರಂಭವಾಗುವುದೆಂಬುದು ನಿಜ. ಆದರೆ, ಹೆಚ್ಚಿನವರಲ್ಲಿ ಅದು ಸಂಪೂರ್ಣ ಸರಿಯಾದ ರೀತಿಯಲ್ಲಿ ಆಗುತ್ತಿರುವುದಿಲ್ಲ. ಪ್ರಾಣಾಯಾಮವು ನಾವು ಪ್ರಜ್ಞಾಪೂರ್ವಕವಾಗಿ ಉಸಿರಾಟವನ್ನು ಪರಿಪೂರ್ಣವಾಗುವಂತೆ ಸರಿಪಡಿಸಿಕೊಳ್ಳುವ ವಿಧಾನವಾಗಿದೆ. ಇಲ್ಲಿ ಪ್ರಾಣವೆಂದರೆ ಪ್ರಾಣವಾಯು. ಆಯಾಮವೆಂದರೆ ಒಂದು ನಿಗದಿತ ಸಮಯ. ಪ್ರಾಣಾಯಾಮವೆಂದರೆ, ನಾವು ನಿಗದಿತ ಸಮಯಕ್ಕನುಗುಣವಾಗಿ ಪ್ರಾಣವಾಯುವನ್ನು ಹೀರಿಕೊಂಡು ಹೊರಗೆ ಬಿಡುವ ಅಥವಾ ಉಚ್ಛಾ್ವಸ -ನಿಶ್ವಾಸಗಳ ವಿಧಾನ. ಪೂರಕ (ಉಸಿರನ್ನು ಒಳಗೆ ತೆಗೆದುಕೊಳ್ಳುವುದು), ಕುಂಭಕ (ಉಸಿರನ್ನು ಒಳಗೆ ನಿಲ್ಲಿಸಿಕೊಳ್ಳುವುದು) ಮತ್ತು ರೇಚಕ (ಉಸಿರನ್ನು ಹೊರಗೆ ಬಿಡುವುದು) ಗಳು ಪ್ರಾಣಾಯಾಮದ ಮೂರು ಭಾಗಗಳು. ಈ ಮೂರನ್ನೂ ಮೇಳೈಸಿ, ನಿಗದಿತ ಸಮಯಕ್ಕನುಗುಣವಾಗಿ ಉಚ್ಛಾ್ವಸ-ನಿಶ್ವಾಸಗಳನ್ನು ಮಾಡಬೇಕಾಗಿರುತ್ತದೆ. ನಿಧಾನಗತಿಯ ಉಸಿರಾಟಕ್ಕೆ ಮನಸ್ಸನ್ನು ಸ್ಥಿರಗೊಳಿಸುವ ಶಕ್ತಿಯಿದೆ. ಉಸಿರನ್ನು ಒಳಗೆ ಹಿಡಿದಿಟ್ಟುಕೊಳ್ಳುವ ಕ್ರಿಯೆಯಾದ ಕುಂಭಕವು ಯೋಗದ ಒಂದು ಮುಖ್ಯ ಅಂಶ. ಇದು ವ್ಯಾನ ಅಥವಾ ಯೋಚನಾರಹಿತ ಮನಸ್ಸಿಗೆ ಸಂಬಂಧಿಸಿದೆ. ನಮಗೆ ಯಾವುದಾದರೂ ರೋಚಕ ಯಾ ಆಘಾತಕಾರೀ ಅನುಭವವಾದಾಗ, ಕೆಲವು ಕ್ಷಣಗಳ ಕಾಲ ನಮ್ಮ ಮನಸ್ಸು ಶೂನ್ಯವಾಗಿ ಉಸಿರಾಟವು ನಿಂತುಬಿಡುತ್ತದೆಯಲ್ಲವೇ? ಹೀಗೆ ನಮ್ಮ ಉಸಿರಾಟಕ್ಕೂ ಮತ್ತು ಮನಸ್ಸಿಗೂ ನಿಕಟ ಸಂಬಂಧವಿದೆ. ಹಾಗಾಗಿ ಪ್ರಾಣಾಯಾಮದ ಕ್ರಮವಾದ ಅಭ್ಯಾಸದ ಮೂಲಕ ನಾವು ನಮ್ಮ ಮನಸ್ಸನ್ನು ನಿಯಂತ್ರಿಸಲು ಸಾಧ್ಯ.
5. ಪ್ರತ್ಯಾಹಾರ: ಇದು ಮನಸ್ಸನ್ನು ಹೊರಗಿನ ವಸ್ತು-ವಿಷಯಗಳಿಂದ ಒಳಗೆಳೆದುಕೊಳ್ಳುವ ಕ್ರಿಯೆ. ಹೀಗೆ ಅಂತಮುಖಗೊಳಿಸಿದ ಮನಸ್ಸನ್ನು ಒಂದೇ ಒಂದು ಯೋಚನೆಯ ಮೇಲೆ, ಎಂದರೆ ಇಲ್ಲಿ ಯೋಗಕ್ಕೆ ಪ್ರಸ್ತುತವಾಗಿ, ಅಂತರಂಗದಲ್ಲಿರುವ ಆತ್ಮನ ಮೇಲೆ ಕೇಂದ್ರೀಕರಿಸುವುದು ಯೋಗದ ಮುಂದಿನ ಹಂತವಾದ ಧಾರಣ. ಈ ಎರಡನ್ನೂ ಇಚ್ಛಾಪೂರ್ವಕವಾಗಿ ಮಾಡುವ ಶಕ್ತಿಯನ್ನು ಗಳಿಸುವುದು ಯೋಗಸಾಧನೆಯಲ್ಲಿ ಬಹು ಪ್ರಧಾನವಾಗಿದೆ. ಆಮೆಯು ತನಗೆ ಇಷ್ಟವಾದಾಗ ತನ್ನ ಅಂಗಾಂಗಗಳನ್ನು ಸುಲಭವಾಗಿ ಒಳಗೆ ಸೆಳೆದುಕೊಳ್ಳುವಂತೆ, ಯೋಗಿಯು ತನ್ನ ಇಂದ್ರಿಯ-ಮನಸ್ಸುಗಳನ್ನು ಅಂತಮುಖಗೊಳಿಸುವ ಶಕ್ತಿಯನ್ನು ಹೊಂದಿರುವನೆಂದು ಭಗದ್ಗೀತೆಯು ಅರುಹುತ್ತದೆ.
6. ಧಾರಣ: ಮೇಲೆ ಹೇಳಿದಂತೆ ಪ್ರತ್ಯಾಹಾರದ ಮೂಲಕ ಒಳಗೆಳೆದುಕೊಂಡ ಮನಸ್ಸನ್ನು ಅಂತರಂಗದಲ್ಲಿರುವ ಆತ್ಮನ ಮೇಲೆ ಕೇಂದ್ರೀಕರಿಸುವ ಕ್ರಿಯೆಯೇ ಧಾರಣ. ಕೆಲವು ಕ್ಷಣಗಳ ಕಾಲ ಹೀಗೆ ಮನಸ್ಸನ್ನು ಕೇಂದ್ರೀಕರಿಸುವುದು ಸುಲಭಸಾಧ್ಯವಾದರೂ, ಅದನ್ನು ಹೆಚ್ಚು ಕಾಲ ಅಲ್ಲಿಯೇ ನಿಲ್ಲಿಸುವುದು ಕಷ್ಟ. ಇದು ಹೇಗೆಂದರೆ, ಒಬ್ಬ ವ್ಯಕ್ತಿಯು ಯಾವಾಗಲೋ ಒಮ್ಮೊಮ್ಮೆ ಒಳ್ಳೆಯ ಕೆಲಸಗಳನ್ನು ಮಾಡುವುದು ಸುಲಭವಾದರೂ, ಸದಾ ಕಾಲ ಒಳ್ಳೆಯ ಕೆಲಸಗಳಲ್ಲಿಯೇ ನಿರತನಾಗಿರುವುದು ಕಷ್ಟವಷ್ಟೆ! ಇದನ್ನು ಸಾಧಿಸಲು, ಇತರ ಎಲ್ಲಾ ವಿಷಯಗಳಲ್ಲಿಯೂ (ಸಂಗೀತ, ನೃತ್ಯ, ಕ್ರೀಡೆ, ಶಿಕ್ಷಣ, ಇತ್ಯಾದಿ) ಇರುವಂತೆ, ದೀರ್ಘಕಾಲದ ಅಭ್ಯಾಸವು ಅಗತ್ಯ. ಹಗ್ಗದ ಮೇಲೆ ನಡೆಯುವ ಸಾಹಸಕ್ಕೆ ಅಗತ್ಯವಾಗುವ ಕೇಂದ್ರೀಕೃತ ಗಮನವು ಇಲ್ಲಿ ಅತ್ಯವಶ್ಯಕ. ಇಂತಹ ಸತತ ಆಭ್ಯಾಸದಿಂದ ಲಭ್ಯವಾಗುವ ಧಾರಣ ಶಕ್ತಿಯಿಂದ ಸಾಧಕನು ತನ್ನ ಮನಸ್ಸಿನ ಮೇಲೆ ಮಹತ್ತರ ನಿಯಂತ್ರಣವನ್ನು ಗಳಿಸುತ್ತಾನೆ.
7. ಧ್ಯಾನ: ದೀರ್ಘಕಾಲದ ಧಾರಣವೇ ಧ್ಯಾನವೆಂದು ಹೇಳಬಹುದು. ಹೀಗೆ ದೀರ್ಘಕಾಲ ಆತ್ಮನನ್ನು ಧ್ಯಾನಿಸುವ ಸಾಧಕನು ಕ್ರಮೇಣ ದೇಹ-ಮನಸ್ಸುಗಳ ಪ್ರಜ್ಞೆಯನ್ನು ದಾಟಿ ಆತ್ಮನ ಅನುಭವವನ್ನು ಪಡೆಯುತ್ತಾನೆ. ಮನಸ್ಸನ್ನು ಯಾವುದಾದರೂ ಒಂದೇ ಒಂದು ವಿಷಯದಲ್ಲಿ ತಲ್ಲೀನಗೊಳಿಸಿದಾಗ, ಯಾವುದೇ ವ್ಯಕ್ತಿಯು ದೇಹದ ಪರಿವೆಯನ್ನು ಮರೆಯುವುದು ಸಹಜವಷ್ಟೆ. ಉದಾಹರಣೆಗೆ, ಸಂಗೀತಗಾರನ ಮನಸ್ಸು ತನ್ನ ಸಂಗೀತದಲ್ಲಿಯೇ ಸಂಪೂರ್ಣ ತನ್ಮಯವಾದಾಗ, ಅವನು ತನ್ನ ಸುತ್ತಮುತ್ತಲ ಸನ್ನಿವೇಶವನ್ನು ಮಾತ್ರವಲ್ಲದೆ ತನ್ನ ಇರುವಿಕೆಯನ್ನೇ ಮರೆಯುತ್ತಾನಲ್ಲವೇ? ಆದರೆ, ಇಂತಹ ಸ್ಥಿತಿಯನ್ನು ಪಡೆಯಲು ಸಾಧಕನು ದೀರ್ಘಕಾಲ ಸತತ ಅಭ್ಯಾಸವನ್ನು ಮಾಡಬೇಕಾಗುತ್ತದೆ.
8. ಸಮಾಧಿ: ಸಮಾಧಿ ಸ್ಥಿತಿಯು ಸರ್ವ ಯೋಗಸಾಧನೆಗಳ ಪರಾಕಾಷ್ಠೆ. ಈ ಸ್ಥಿತಿಯಲ್ಲಿ ಯೋಗಿಯು ದೇಹ, ಮನಸ್ಸು ಮತ್ತು ಆತ್ಮಗಳ ಏಕತ್ವವನ್ನು ಅನುಭವಿಸಿ, ಯಾವುದೇ ಪರಿಶ್ರಮವಿಲ್ಲದೆ ಅದರಲ್ಲಿಯೇ ನೆಲೆಗೊಳ್ಳುತ್ತಾನೆ. ಸಮ ಎಂದರೆ ಸಮತ್ವ. ಸಮಾಧಿಯೆಂದರೆ, ಯಾವುದೇ ಕ್ಷೋಭೆಯಿಲ್ಲದ ಸಮತ್ವದ ಸ್ಥಿತಿ. ಇದನ್ನೇ ಭಗವದ್ಗೀತೆಯು, ಸಮತ್ವಂ ಯೋಗ ಉಚ್ಯತೇ ಎಂದು ಹೇಳಿದೆ. ಈ ಸ್ಥಿತಿಯಲ್ಲಿ, ಆತ್ಮ ಹಾಗೂ ದೇಹ-ಮನಸ್ಸುಗಳ ಮಧ್ಯದ ಭಿನ್ನತೆಯು ಸಂಪೂರ್ಣ ಮರೆಯಾಗಿ, ಯೋಗಿಯು ತನ್ನ ಪರಮ ನಿರ್ಮಲ ಅಸ್ತಿತ್ವದಲ್ಲಿಯೇ ನೆಲೆಗೊಳ್ಳುತ್ತಾನೆ. ಜನಸಾಮಾನ್ಯರು ಇದನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುವ ಒಂದು ಉದಾಹರಣೆಯೆಂದರೆ, ನಾವು ಪ್ರತಿರಾತ್ರಿ ಮಲಗಿ ನಿದ್ರಿಸುವ ಪ್ರಕ್ರಿಯೆ. ಮೊದಲು ನಾವು ಎಚ್ಚರದಿಂದಿರುವ ಜಾಗೃತಾವಸ್ಥೆಯಲ್ಲಿ, ನಮಗೆ ದೇಹ ಮತ್ತು ಮನಸ್ಸುಗಳೆರಡರ ಪರಿವೆಯಿರುತ್ತದೆ. ನಾವು ಕನಸಿಗೆ ಜಾರಿದಾಗ, ದೇಹದ ಪರಿವೆಯು ಮರೆಯಾಗಿ ಕೇವಲ ಮನಸ್ಸಿನ ಪ್ರಕ್ರಿಯೆಯು ಮಾತ್ರ ಉಳಿಯುತ್ತದೆ. ನಾವು ಕನಸು ಕಾಣುತ್ತಿರುವಾಗ, ದೇಹವು ಹಾಸಿಗೆಯಲ್ಲಿ ಮಲಗಿರುವಾಗಲೇ, ನಮಗೆ ರೈಲು ಪ್ರಯಾಣದ ನಿಚ್ಚಳ ಅನುಭವಾಗುತ್ತಿರುತ್ತದೆ; ಅಲ್ಲಿನ ಗದ್ದಲವನ್ನು ಕಿವಿಯಲ್ಲಿ ಕೇಳಿದಂತಾಗುವ ಅನುಭವದ ಜೊತೆಗೆ, ಅಲ್ಲಿಯ ವಾಸನೆಯೂ ಮೂಗಿಗೆ ಬಡಿದಂತಹ ಅನುಭವವೂ ಆಗುತ್ತಿರುತ್ತದೆಯಲ್ಲವೇ! ಮೊದಲು ನಾವು ಎಚ್ಚರದಿಂದಿದ್ದು ದೇಹ-ಮನಸ್ಸುಗಳೆರಡರ ಪರಿವೆಯ ಜೊತೆಗೆ, ಮನಸ್ಸನ್ನು ಕೇಂದ್ರೀಕೃತಗೊಳಿಸಲು ನಾವು ಮಾಡುತ್ತಿರುವ ಅರಿವೂ ಇರುವ ಸ್ಥಿತಿಯು ಧಾರಣವಿದ್ದಂತೆ. ಕನಸಿನ ಸ್ಥಿತಿಯಲ್ಲಿ, ನಮಗೆ ದೇಹದ ಪರಿವೆಯು ಮಾಯವಾಗಿ, ನಾವು ಕೇವಲ ಮನಸ್ಸಿನ ಆಟದಲ್ಲಿಯೇ ತಲ್ಲೀನವಾಗಿರುವ ಸ್ಥಿತಿಯು ಧ್ಯಾನವಿದ್ದಂತೆ. ಕೊನೆಗೆ ನಾವು ಗಾಢ ನಿದ್ರೆಗೆ ಜಾರಿದಾಗ, ನಮಗೆ ಮನಸ್ಸಿನ ಪರಿವೆಯೂ ಮರೆಯಾಗಿ, ನಾವು ಸಮಯ, ಸ್ಥಳ ಮತ್ತು ಸನ್ನಿವೇಶಗಳ ಅರಿವನ್ನೂ ಸಂಪೂರ್ಣವಾಗಿ ಕಳೆದುಕೊಳ್ಳುತ್ತೇವೆ. ಇದನ್ನು ನಾವು ಸಮಾಧಿ ಸ್ಥಿತಿಗೆ ಹೋಲಿಸಬಹುದು. ಆದರೆ, ಇವೆರಡರ ಮಧ್ಯೆಯಿರುವ ಮುಖ್ಯ ವ್ಯತ್ಯಾಸವೆಂದರೆ, ಗಾಢ ನಿದ್ರೆಯಲ್ಲಿ ನಮಗೆ ನಮ್ಮ ಇರುವಿಕೆಯ ಅರಿವೂ ಇರುವುದಿಲ್ಲ; ಸಮಾಧಿ ಸ್ಥಿತಿಯಲ್ಲಿ ನಮ್ಮ ಇರುವಿಕೆಯ ಅರಿವು ಇರುತ್ತದೆ, ಆದರೆ ದೇಹ-ಮನಸ್ಸುಗಳ ಅರಿವು ಇರುವುದಿಲ್ಲ. ಈ ಸ್ಥಿತಿಯನ್ನು ನಾವು ಕೇವಲ ಅನುಭವ ಮಾತ್ರದಿಂದ ಅರಿಯಬಹುದೇ ಹೊರತು, ಅದನ್ನು ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ. ಆದ್ದರಿಂದಲೇ, ಉಪನಿಷತ್ತುಗಳು ಅದನ್ನು ಯತೋ ವಾಚೋ ನಿವರ್ತತೇ ಅಪ್ರಾಪ್ಯ ಮನಸ್ಸಾ ಸಹ ಆ ಅನುಭವವು ಮಾತು ಮತ್ತು ಮಸ್ಸುಗಳಿಗೆ ಅತೀತವೆಂದು ಹೇಳಿವೆ.
ಸಮಾಧಿಯು ಎಲ್ಲಾ ಯೋಗಗಳ ಪರಾಕಾಷ್ಠೆಯಾಗಿದ್ದು, ಇದನ್ನು ಪಡೆದವರನ್ನು ಮಾತ್ರ ಯೋಗಿಗಳೆಂದು ನಾವು ಕರೆಯಬಹುದು. ಎರಡು ರೀತಿಯ ಸಮಾಧಿ ಸ್ಥಿತಿಗಳೆಂದರೆ, ನಿರ್ವಿಕಲ್ಪ ಸಮಾಧಿ ಹಾಗೂ ಸವಿಕಲ್ಪ ಸಮಾಧಿ. ನಿರ್ವಿಕಲ್ಪ ಸಮಾಧಿಯು ನಮ್ಮ ಯಾವುದೇ ಪ್ರಯತ್ನವಿಲ್ಲದೆ ತಾನಾಗಿಯೇ ಲಭಿಸುವ ಸ್ಥಿತಿ. ಉದಾಹರಣೆಗೆ, ಯಾವುದೋ ಪ್ರಬಲ ಆಘಾತವಾದಾಗ, ನಮ್ಮ ಮನಸ್ಸು ಸಂಪೂರ್ಣ ಶೂನ್ಯವಾಗಿ, ನಮಗೆ ನಮ್ಮ ಇರುವಿಕೆಯು ಮಾತ್ರ ಅರಿವಿರುತ್ತದೆ; ಉಳಿದೆಲ್ಲವೂ, ಆಘಾತದಿಂದಾಗಿ ನಮ್ಮ ಅರಿವಿನಿಂದ ಮರೆಯಾಗಿಬಿಡುತ್ತದೆ. ತ್ರಿಪುರ ರಹಸ್ಯದಲ್ಲಿ ಈ ಬಗ್ಗೆ ನೀಡಿರುವ ಉದಾಹರಣೆಯೆಂದರೆ, ತನ್ನ ಎಳೆಪ್ರಾಯದ ಮಗನ ಹಠಾತ್ ಮರಣದ ಆಘಾತಕಾರಿ ವಾರ್ತೆಯನ್ನು ಕೇಳಿದ ತಂದೆಯ ಮನಃಸ್ಥಿತಿ. ಸವಿಕಲ್ಪ ಸಮಾಧಿಯು ನಾವು ಯೋಗಸಾಧನೆಯಿಂದ ಸಾಧಿಸುವ ಸ್ಥಿತಿ. ಅತ್ಯುನ್ನತ ಸಮಾಧಿಯೆಂದರೆ, ಸಹಜ ಸಮಾಧಿ. ಈ ಸ್ಥಿತಿಯಲ್ಲಿ ಯೋಗಿಯು ಹಗಲಿರುಳೂ ಎಲ್ಲಾ ಅವಸ್ಥೆಗಳಲ್ಲಿಯೂ (ಜಾಗೃತ ಸ್ವಪ್ನ ಸುಷುಪ್ತಿ) ಸದಾ ಆತ್ಮನಲ್ಲಿಯೇ ರತನಾಗಿರುತ್ತಾನೆ. ಇಂತಹ ಸ್ಥಿತಿಯು ಪರಿಪೂರ್ಣ ಚಿತ್ತಶುದ್ಧಿಯನ್ನು ಹೊಂದಿದ ಯೋಗಿಗೆ ದೀರ್ಘ ಅಭ್ಯಾಸದಿಂದ ಲಭ್ಯವಾಗುತ್ತದೆ.
ಈ ಸರ್ವಶ್ರೇಷ್ಠ ಯೋಗಪದ್ಧತಿಯು ಜಗತ್ತಿಗೆ ಭಾರತದ ಅಮೂಲ್ಯ ಕೊಡುಗೆಯಾಗಿದೆ!
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)