ಸ್ವರ್ಗ-ನರಕದ ನಡುವೆ ಅಸತೋಮಾ ಸದ್ಗಮಯ

sadguru
Published on
sadguru
ಪ್ರಪಂಚದಲ್ಲಿ ಎಲ್ಲೆಡೆ, ಸ್ವರ್ಗ ಮತ್ತು ನರಕವನ್ನು ಪ್ರತಿಪಾದಿಸುತ್ತಿರುವುದು, ಸಮಾಜದಲ್ಲಿ ಜನರನ್ನು ಹಿಡಿತದಲ್ಲಿಟ್ಟುಕೊಳ್ಳುವುದಕ್ಕೆ. ಒಬ್ಬ ವ್ಯಕ್ತಿ ಅಥವಾ ಒಂದು ಗುಂಪಿನ ಜನರನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗದಿದ್ದಾಗ ಕೆಲವರು ಈ ಉಪಾಯವನ್ನು ಮಾಡಿದರು. ‘ಇಲ್ಲಿ ನಾನು ನಿನ್ನನ್ನು ಶಿಕ್ಷಿಸಲಾಗದಿದ್ದರೆ, ಅಲ್ಲಿ ಬಂದಾಗ ನಿಮ್ಮನ್ನು ಹಿಡಿಯುವೆವು, ನೀವು ತೋರಿಸಿದ ಒಳ್ಳೆಯತನಕ್ಕೆ, ನಿಮಗೆ ಇಲ್ಲಿ ಪುರಸ್ಕಾರ ಕೊಡಲಾಗದಿದ್ದರೆ ಅಲ್ಲಿ ಕೊಡುವೆವು’ ಎಂದರು.

ಆದರೆ, ಸತ್ಯವೆನ್ನುವುದು ಈ ಅಸ್ತಿತ್ವದ ನಿಜಸ್ವರೂಪವನ್ನು ಬಿಟ್ಟು ಬೇರೆ ಯಾವುದಾದರೂ ಆಗಿದ್ದರೆ, ಅಲ್ಲಿಗೆ ಹೋಗುವುದರಲ್ಲಿ ಲಾಭ ಇಲ್ಲ. ನಾವು ಅಸತೋಮ ಸದ್ಗಮಯ ಎಂದಾಗ ಅದರ ಅರ್ಥ ಅಸತ್ಯದಿಂದ ಸತ್ಯದೆಡೆಗೆ ಪ್ರಯಾಣ ಎಂದು. ಆದರೆ, ಇದು ನಿಜವಾಗಿಯೂ ಪ್ರಯಾಣವಲ್ಲ. ಪ್ರಯಾಣ ಎಂಬ ಪದದ ಅರ್ಥ ಕ್ರಮಿಸಬೇಕಾದ ಒಂದು ದೂರವಿದೆ ಎಂಬ ಅನಿಸಿಕೆಯನ್ನು ತರುತ್ತದೆ. ಇಲ್ಲಿ ದೂರ ಅಥವಾ ಅಂತರ ಏನೂ ಇಲ್ಲ. ಜ್ಞಾನ ಎಂಬುದು ಎಲ್ಲೋ ದೂರದಲ್ಲಿಲ್ಲ, ಏಕೆಂದರೆ ನೀವು ಏನನ್ನು ತಿಳಿದುಕೊಳ್ಳಬೇಕೆಂದು ಬಯಸಿದ್ದೀರೋ ಅದು ಬೆಟ್ಟದ ತುದಿಯಲ್ಲಿ ಇಲ್ಲ, ಅದು ನಿಮ್ಮೊಳಗೆಯೇ ಇದೆ.

ನಿಮ್ಮೊಳಗಿನ ಸ್ವರ್ಗ ಮತ್ತು ನರಕ: ಯೋಗ ಮೊದಲು ದಾಳಿ ಮಾಡುವುದು ಸ್ವರ್ಗ ಮತ್ತು ನರಕ ಎಂಬ ನಂಬಿಕೆಯ ಮೇಲೆ. ಈ ಸ್ವರ್ಗ ಮತ್ತು ನರಕ ಇರುವವರೆಗೂ, ನಿಮ್ಮ ಅಂತರ್ಯದ ಯೋಗಕ್ಷೇಮದ ತಂತ್ರ ಮತ್ತು ನಿಮ್ಮ ವಿಮೋಚನೆಯ ಕಡೆಗೆ ಹೋಗುವ ಕ್ರಿಯೆಯು ಅರ್ಥಹೀನವಾಗುತ್ತದೆ. ಏಕೆಂದರೆ, ಎಷ್ಟೇ ಆದರೂ ನಾವು ಹೋಗಬೇಕಾದದ್ದು ಎರಡು ಜಾಗಗಳಿಗೆ ಮಾತ್ರ. ನೀವು ಕಡೆಗೆ ಒಂದು ಕೆಟ್ಟ ಜಾಗಕ್ಕೆ ಅಥವಾ ಒಂದು ಒಳ್ಳೆಯ ಜಾಗಕ್ಕೋ ಹೋಗುವಿರಿ. ನೀವು ಹೇಗಾದರೂ ಒಂದು ಒಳ್ಳೆಯ ಜಾಗಕ್ಕೆ ಒಂದು ಟಿಕೆಟನ್ನು ಸಂಪಾದಿಸಿದರೆ ನೀವು ಇಲ್ಲಿ ಹೇಗೆ ಬದುಕಬೇಕೆಂಬುದನ್ನು ಯೋಚಿಸಬೇಕಾಗಿಲ್ಲ. ಮಾನವತೆಯು ಮತ-ಧರ್ಮಗಳ ಒತ್ತಾಸೆಯಿಂದ ಇನ್ನೂ ಸ್ಥೂಲರೂಪದಲ್ಲಿಯೇ ಇದೆ. ನೀವು ಏನು ಮಾಡಿದರೂ ಪರವಾಗಿಲ್ಲ ಈ ಕೆಲವು ವಿಚಾರಗಳನ್ನು ಮಾತ್ರ ನಂಬಿದರೆ, ಒಳ್ಳೆಯ ಜಾಗಕ್ಕೆ ನಿಮ್ಮ ಟಿಕೆಟು ಮಾಡಿಸಿಕೊಂಡ ಹಾಗೆ.

ನಿಮ್ಮಲ್ಲಿರುವ ಸ್ವರ್ಗ ಮತ್ತು ನರಕವನ್ನು ನೀವು ಈ ಕ್ಷಣ ನಾಶ ಮಾಡದಿದ್ದರೆ, ಸತ್ಯದೆಡೆಗೆ ಸಾಗುವ ಸಾಧ್ಯತೆ ಇರುವುದಿಲ್ಲ. ಈಗ ನಿಮ್ಮ ದೇಹ ಮತ್ತು ಮನಸ್ಸು ತಮ್ಮೊಳಗೆ ಸ್ವರ್ಗವನ್ನು ಅಥವಾ ನರಕವನ್ನು ಸೃಷ್ಟಿಸುತ್ತಿರುತ್ತದೆ: ಎರಡನ್ನೂ ಒಟ್ಟಿಗೆ ಮಾಡುವ ಸಾಮರ್ಥ್ಯ ಅದಕ್ಕಿದೆ. ನೀವು ಎಲ್ಲಿದ್ದರೂ ಪರವಾಗಿಲ್ಲ ಅದು ಸ್ವರ್ಗ ಅಥವಾ ನರಕವನ್ನು ಸೃಷ್ಟಿಸುತ್ತಿರುತ್ತದೆ.

ನಿಮ್ಮ ಮನಸ್ಸಿನ ವಿವೇಚನೆ ಹೇಗೆಂದರೆ ನೀವು ನರಕವನ್ನು ಸೃಷ್ಟಿಸಿದಾಗ, ಮತ್ತು ಅದು ತುಂಬಾ ಚಿತ್ರಹಿಂಸೆಯಾದಾಗ ನೀವು ಅದನ್ನು ಸ್ವಲ್ಪ ಬದಲಾಯಿಸುತ್ತೀರಿ. ಹಾಗೆಯೇ ನೀವು ಸ್ವರ್ಗವನ್ನು ಸೃಷ್ಟಿಸಿದಾಗ, ಅದು ತುಂಬಾ ಚೆಂದವಾದಾಗ ನೀವು ವಾಸ್ತವವನ್ನು ಮರೆತು ಅದರ ಸಂಪರ್ಕ ಕಳೆದುಕೊಳ್ಳುತ್ತೀರಿ. ಆಗ ವಾಸ್ತವವು ನಿಮಗೆ ಒಂದು ಹೊಡೆತ ಕೊಡುತ್ತದೆ. ಆಗ ನೀವು ಮತ್ತೆ ಸ್ವಲ್ಪ ಹಿಂದಕ್ಕೆ ಬರುತ್ತಿರಿ. ಆದರೆ, ನೀವು ನಿಮ್ಮ ದೇಹವನ್ನು ಕಳೆದುಕೊಂಡಾಗ ನಿಮ್ಮ ವಿವೇಚನೆ ಕಳೆದುಕೊಳ್ಳುವಿರಿ. ಆಗ, ಮನಸ್ಸು ಸ್ವರ್ಗವನ್ನು ಸೃಷ್ಟಿಸುತ್ತಿರುವ ಕ್ರಿಯೆಯಲ್ಲಿ ಇದ್ದರೆ ಸ್ವರ್ಗವನ್ನೇ ಸೃಷ್ಟಿಸುತ್ತಿರುತ್ತದೆ. ಸಹಸ್ರಾರು- ಪಾಲು ಆಹ್ಲಾದತೆಯನ್ನು ಸೃಷ್ಟಿಸುತ್ತದೆ. ಅದೇ ರೀತಿಯಲ್ಲಿ ಯಾವ ಮನಸ್ಸು ನರಕವನ್ನು ಸೃಷ್ಟಿಸುತ್ತಿರುತ್ತದೆಯೋ ಅದು ನರಕವನ್ನೇ ಸೃಷ್ಟಿಸುತ್ತಿರುತ್ತದೆ ಸಹಸ್ರಾರು - ಪಾಲು ಹೆಚ್ಚಾಗಿ ಸೃಷ್ಟಿಸುತ್ತದೆ. ಏಕೆಂದರೆ ಅಲ್ಲಿ ವಿವೇಚನೆ ಇಲ್ಲ. ಅದು ತುಂಬಾ ಜಾಸ್ತಿ ಎನ್ನಿಸಿದಾಗ - ಅದನ್ನು ನಿಲ್ಲಿಸುವ ಸಾಮರ್ಥ್ಯ ನಿಮಗಿರುವುದಿಲ್ಲ.

ಸ್ವರ್ಗವನ್ನು ಅಥವಾ ನರಕವನ್ನು ಸೃಷ್ಟಿಸಲು ಬೇಕಾದ ಸಾಮಗ್ರಿಗಳು ನಿಮ್ಮ ಸುತ್ತಮುತ್ತಲೇ ಇದೆ. ನಿಮ್ಮ ಶಕ್ತಿಗಳ ಚಾಲನೆಯ ವಿಧಾನದಿಂದ ಅದು ಯಾವಾಗಲೂ ನಮ್ಮ ಸುತ್ತಲೇ ಇರುತ್ತದೆ. ಆದರೆ, ಇದು ಸ್ವರ್ಗ ಅಥವಾ ನರಕದ ದೊಡ್ಡ ಪ್ರಪಂಚವೇ ಆಗಬಹುದು. ನೀವು ನಿಮ್ಮ ತಾರತಮ್ಯತೆಯಿಂದ ಮುಂದುವರಿದರೆ, ನಾನು ನರಕವನ್ನು ನಾಶ ಮಾಡಿ ಸ್ವರ್ಗವನ್ನು ಇಟ್ಟುಕೊಳ್ಳುವೆ ಎಂದು ತೀರ್ವನಿಸುವಿರಿ. ಆದರೆ, ಇದು ಎಂದಿಗೂ ನಡೆಯುವುದಿಲ್ಲ. ಏಕೆಂದರೆ, ಎರಡನ್ನೂ ನಿರ್ಮಾಣ ಮಾಡುವ ಸಾಮಗ್ರಿಗಳು ಒಂದೇ. ಅದೇ ಕೊಠಡಿಗಳು. ಕೆಲವರಿಗೆ ಅದು ಪರಮಾನಂದದ ಕೊಠಡಿಗಳು, ಕೆಲವರಿಗೆ ಅದು ಚಿತ್ರಹಿಂಸೆಯ ಕೊಠಡಿಗಳು. ಯಾವುದೇ ಕ್ಷಣದಲ್ಲಿ ಅದು ಬದಲಾಗಬಹುದು. ಅದು ಒಂದು ಲೈಟ್ ಸ್ವಿಚ್​ನ ಹಾಗೆ - ನಿಮ್ಮ ಹತ್ತಿರ ಎರಡು ತರಹದ ಲೈಟ್ ಇದೆಯೆಂದುಕೊಳ್ಳೋಣ. ಒಂದು ಬಿಳಿಯ ಬಣ್ಣದ್ದು ಮತ್ತೊಂದು ನೀಲಿ ಬಣ್ಣದ್ದು. ನೀಲಿ ಬಣ್ಣದ್ದನ್ನು ಬೆಳಗಿಸಿದರೆ ನಿಮಗೆ ಒಂದು ರೀತಿಯ ಅನುಭವವಿರುತ್ತದೆ ಮತ್ತು ಬಿಳಿಯ ಬಣ್ಣದ ಲೈಟನ್ನು ಬೆಳಗಿಸಿದರೆ ತಕ್ಷಣ ಅದು ಬೇರೆ ಜಾಗ ಎಂದೆನಿಸುತ್ತದೆ. ಆದರೆ, ಕತ್ತಲೆಯಲ್ಲಿ ಯಾರಾದರೂ ಲೈಟ್ ಹಾಕಲು ತಳಮಳ ಮಾಡಿ ಬಿಳಿಯ ಬಣ್ಣದ ಲೈಟ್ ಬದಲು ನೀಲಿಯ ಬಣ್ಣವನ್ನು ಬೆಳಗಿಸಿದರೆ ಅಥವಾ ನೀಲಿ ಬಣ್ಣದ ಬದಲು ನೀವು ಬಿಳಿಯ ಲೈಟನ್ನು ಬೆಳಗಿಸಬಹುದು. ಇದು ತಪ್ಪದೆ ನಡೆಯುತ್ತದೆ.

ಬೆಳಕನ್ನು ಮೀರಿ..: ಯಾರೂ ಕೇವಲ ನರಕವನ್ನು ನಾಶ ಮಾಡಿ ಸ್ವರ್ಗವನ್ನು ಇಟ್ಟುಕೊಳ್ಳಲಾಗುವುದಿಲ್ಲ. ನಿಮ್ಮ ಮನಸ್ಸಿನಲ್ಲಿ ನರಕದ ಯೋಚನೆ ಹೋಗದಿದ್ದರೂ, ನಿಮ್ಮ ತಾರತಮ್ಯ ಪ್ರಕ್ರಿಯೆಯನ್ನು ಬಲಪಡಿಸುವ ಮೂಲಕ ನೀವು ಸದಾ ಆನಂದದಲ್ಲಿ ಇರಬಹುದು. ನರಕದ ಯೋಚನೆ ಇನ್ನೆಂದಿಗೂ ಬರುವುದಿಲ್ಲ ಎಂದು ನೀವು ನೋಡಬಹುದು. ಅದು ಸಾಧ್ಯವಿಲ್ಲ ಎಂಬ ಕಾರಣದಿಂದಲ್ಲ. ಆದರೆ, ನೀವು ಅದರ ಬಗ್ಗೆ ಎಚ್ಚರವಾಗಿರುವುದರಿಂದ.

ಎಚ್ಚರದಿಂದಿರುವ ಸಾಮರ್ಥ್ಯ ಒಂದು ಮಟ್ಟಕ್ಕೆ ಮಾತ್ರ ಸಾಧ್ಯ. ಅದೂ.. ಇದೂ.. ಮಾಡುವ ಸಾಮರ್ಥ್ಯವಿರುವ, ಆ ಕಟ್ಟಡ ನಿರ್ಮಾಣ ಮಾಡುವ ಸಾಮಗ್ರಿಗಳನ್ನು ನೀವು ತೆಗೆದುಬಿಟ್ಟರೆ, ಆಗ ನೀವು ಒಂದು ಕತ್ತಲೆ ಕೋಣೆಯಲ್ಲಿ ಕುಳಿತಿರುವಾಗ, ಅಲ್ಲಿ ಬಿಳಿ ಲೈಟ್ ಆಗಲಿ, ನೀಲಿ ಲೈಟ್ ಆಗಲಿ ಇರಲು ಸಾಧ್ಯವಿಲ್ಲ. ಯಾಕೆಂದರೆ ನೀವು ಒಂದು ಬೆಳಕಿನ ಅವಶ್ಯಕತೆಯೇ ಇಲ್ಲದ ದಾರಿಯನ್ನು ಹಿಡಿದಿದ್ದೀರಿ. ಬೆಳಕು ಬೇಕಾಗಿರುವುದು ಯಾರು ಅವರ ಕಣ್ಣನ್ನು ತೆರೆದು ಬೇರೆಲ್ಲಿಗೋ ಹೋಗಬೇಕೆಂದಿದ್ದಾರೋ ಅವರಿಗೆ. ಯಾರು ಕಣ್ಣು ಮುಚ್ಚಿ ಬೇರೆಲ್ಲಿಯೋ ಇರುವರೋ ಅವರಿಗೆ ಬೆಳಕೇ ಬೇಡ. ಅಂತಹವರಿಗೆ ಬೆಳಕು ಒಂದು ಕಿರಿಕಿರಿಯೇ.

ಚಿಪ್ಪನ್ನು ಒಡೆಯುವುದು: ಹಾಗಾಗಿ ಅಸತ್ಯದಿಂದ ಸತ್ಯದೆಡೆಗೆ ಹೋಗುವ ಕ್ರಿಯೆ ನಿಜವಾಗಿಯೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಬಗ್ಗೆ ಅಲ್ಲ. ಅದು ಒಂದು ಮೊಟ್ಟೆಯ ಚಿಪ್ಪಿನ ಹಾಗೆ. ಈಗ ನೀವು ಚಿಪ್ಪಿನಿಂದ ಆಚೆ ಇದ್ದೀರಿ, ನೀವು ಒಳಗೆ ಹೋಗಬೇಕೆಂದು ಕೊಂಡಾಗ ಮೊಟ್ಟೆಯನ್ನು ನೀವು ಒಡೆಯುವಿರಿ. ನಿಮ್ಮ ಆಲೋಚನೆಯೆಂದರೆ, ಅದು ಬಿರುಕು ಬಿಟ್ಟಾಗ ನೀವು ಒಳಗೆ ಹೋಗುವಿರಿ ಎಂದು. ಆದರೆ, ಅದು ಹಾಗಾಗುವುದಿಲ್ಲ, ಒಂದು ಕೋಳಿಮರಿ ಆಚೆ ಬರುತ್ತದೆ - ಅದೇ ಸತ್ಯ. ನೀವು ಇಲ್ಲಿ ಕುಳಿತು ಒಳಗೆ ಹೋಗಬೇಕೆಂದುಕೊಂಡಿದ್ದೀರಿ, ಆದರೆ, ನೀವು ಅದನ್ನು ಒಡೆದರೆ ಯಾರೂ ಒಳಗೆ ಹೋಗುವುದಿಲ್ಲ - ಒಂದು ಸಂಪೂರ್ಣ ಹೊಸ ಸಾಧ್ಯತೆ ಆಚೆ ಬರುತ್ತದೆ. ಈ ಕಾರಣದಿಂದಲೇ ಯೋಗದ ಚಿಹ್ನೆಯು ಸಹಸ್ರಾರ - ಸಾವಿರ ದಳದ - ಹೂವು ಹೊರಬರುವ ಹಾಗೆ. ನೀವು ಚಿಪ್ಪನ್ನು ಒಡೆದಾಗ ಏನೋ ಒಂದು ನೀವು ಎಂದಿಗೂ ಊಹಿಸದಿದ್ದ ಸಾಧ್ಯತೆ ಹೊರಬರುತ್ತದೆ.

ನೀವು ಈ ಚಿಪ್ಪನ್ನು ಒಡೆಯಬೇಕೆಂದುಕೊಂಡರೂ, ನೀವು ನೀವಾಗಿಯೇ ಎಂದಿಗೂ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಅದು ನೀವೇ, ನಿಮ್ಮನ್ನು ನೀವೇ ಹೇಗೆ ಒಡೆದುಕೊಳ್ಳುತ್ತೀರಿ? ನಿಮಗೆ ಅಷ್ಟು ಗಟ್ಟಿ ಹೃದಯ ಇಲ್ಲ. ಮನಸ್ಸು ಹೇಳಬಹುದು - ಸರಿ ಇದನ್ನು ಒಡೆಯೋಣ, ಒಂದು ಕೋಳಿ ಮರಿ ಆಚೆ ಬರುತ್ತದೆ, ಆದರೆ, ನಿಮ್ಮಷ್ಟಕ್ಕೆ ನೀವೇ ಮಾಡಲು ನಿಮಗೆ ಅಷ್ಟು ಗಟ್ಟಿ ಹೃದಯ ಇರುವುದಿಲ್ಲ.

ಆದ್ದರಿಂದ ನೀವು ಹೊರಗಿನ ಸುತ್ತಿಗೆಯೊಂದನ್ನು ಹುಡುಕುವಿರಿ, ಸಾಮಾನ್ಯವಾಗಿ ಅದನ್ನು ಅನುಗ್ರಹ ಎಂದು ಕರೆಯುತ್ತಾರೆ. ನಿಮ್ಮನ್ನು ನೀವು ಸರಿಯಾಗಿ ತಯಾರು ಮಾಡಿಕೊಂಡಾಗ, ಅದು ನಿಮ್ಮ ಹತ್ತಿರಕ್ಕೆ ಆಕರ್ಷಿತವಾಗುತ್ತದೆ. ಅದು ಹೇಗೆಂದರೆ ಒಂದು ಮಗುವಿನ ಹಲ್ಲು ಅಲ್ಲಾಡುತ್ತಿದ್ದಾಗ, ಅದನ್ನು ಮುಟ್ಟಬೇಡ, ಅದನ್ನು ಮುಟ್ಟಬೇಡ ಎಂದು ಹೇಳುತ್ತಿರುತ್ತದೆ. ತಾಯಿ ಹೇಳುತ್ತಾಳೆ, ನನ್ನನ್ನು ನೋಡಲು ಬಿಡು... ಮತ್ತೆ ಸ್ವಲ್ಪ ಕೈಯಾಡಿಸುತ್ತಾಳೆ, ನಂತರ ಚಕ್ ಎಂದು ಆ ಹಲ್ಲು ಕೈಗೆ ಬರುತ್ತದೆ. ಆಮೇಲೆ ಮಗುವಿಗೆ ಎಂತಹಾ ಖುಷಿ, ಅದು ಬಂದುಬಿಟ್ಟಿದೆ ಎಂದು. ನಿಮಗೆ ಆ ಭಾವನೆ ನೆನಪಿನಲ್ಲಿ ಇದೆಯೇ? ನಿಮ್ಮ ಹಲ್ಲು ಆಗಷ್ಟೇ ಬಿದ್ದು ಹೋದಾಗ? ನೋವು ಹೊರಟುಹೋಯಿತು ಬರೀ ಖಾಲಿ ಭಾವನೆ, ನೀವು ಅದರ ಜತೆ ಇಷ್ಟು ದಿನ ಆಟ ಆಡಿದಿರಿ. ಆದರೆ, ನಿಮ್ಮಷ್ಟಕ್ಕೆ ನೀವೇ ಅದನ್ನು ಎಂದೂ ಕೀಳುತ್ತಿರಲಿಲ್ಲ. ಆದ್ದರಿಂದ ನಾವು ಆ ಕ್ಷಣಕ್ಕೆ ಎದುರು ನೋಡುತ್ತಿದ್ದೇವೆ, ಸಾಧನೆಯೆಂದರೆ ಅಷ್ಟೇ - ನಿಮ್ಮ ಬಾಯಿಯನ್ನು ತೆಗೆಸುವುದು - ಅದು ಸುಲಭವಲ್ಲ. ನಿಮಗೇ ಗೊತ್ತಲ್ಲವೇ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net