

ಒಂದೂರಿನಲ್ಲಿ ಒಬ್ಬ ಶಿವ ಭಕ್ತನಿದ್ದ. ಆತ ಕೌಪೀನ ಧರಿಸಿ, ಒಂದು ಮರದಡಿಯಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದ. ಒಂದು ದಿನ ಆ ದಾರಿಯಲ್ಲಿ ರಾಜ್ಯದ ರಾಜ ಸಂಚರಿಸುತ್ತಾ ಬಂದ. ಈ ಭಕ್ತನ ತೇಜಸ್ಸನ್ನು ಕಂಡು, ರಾಜನಿಗೆ ಸಂತೋಷವಾಯಿತು. ಒಂದು ದಿನ ಮಟ್ಟಿಗಾದರೂ ಅರಮನೆಗೆ ಬಂದು ಅನುಗ್ರಹಿಸಬೇಕೆಂದು ಕೇಳಿ, ಒಪ್ಪಿಸಿ, ತನ್ನ ರಥದಲ್ಲೆ ಅರಮನೆಗೆ ಅವನನ್ನು ಕರೆತಂದ. ಅವನಿಗೆ ರಾಜಭವನದಲ್ಲಿ ಭವ್ಯ ಕೊಠಡಿಯನ್ನು ವಾಸ್ತವಕ್ಕೆ ನೀಡಲಾಯಿತು. ಒಳ್ಳೆಯ ಭೋಜನವೂ ಆಯಿತು. ಮರುದಿನ ಭಕ್ತ ಹಿಂದಿರುಗಲು ಸಿದ್ಧನಾದ. ಆಗ ಅವನ ಹಾಸಿಗೆಯ ಮೂಲೆಯಲ್ಲಿ ಒಂದು ಅಮೂಲ್ಯ ರತ್ನ ಖಚಿತ ಹಾರ ಕಾಣಿಸಿತು. ಅದನ್ನು ತನ್ನ ಜೋಳಿಗೆಗೆ ಹಾಕಿಕೊಂಡ. ತನ್ನಂಥ ಜಂಗಮ ಭಕ್ತ ಹೀಗೆ ಮಾಡುವುದು ಸರಿಯಲ್ಲವೆಂದು ಅವನಿಗೆ ತಿಳಿದಿತ್ತು. ಆದರೂ ರಾಜನಲ್ಲಿ ಬೇಕಾದಷ್ಟು ಸಂಪತ್ತಿದೆ. ಇದೊಂದು ಹಾರ ಇಲ್ಲವಾದರೂ ತೊಂದರೆಯಾಗುವುದಿಲ್ಲ. ಅಲ್ಲದೆ, ತಾನೇ ಕೇಳಿದರೂ, ಹಾರವನ್ನು ತೆಗೆದುಕೊಂಡರೂ ದೋಷವಿಲ್ಲ ಎಂದು ಮನಸ್ಸಿನಲ್ಲಿ ಸಮರ್ಥಿಸಿಕೊಂಡು, ಅರಮನೆಗೆ ವಿದಾಯ ಹೇಳಿದ.
ಮರಳಿ ತನ್ನ ಆಶ್ರಮದ ಆಹಾರ ಸೇವಿಸಿದ ಬಳಿಕ ಅವನ ಮನಸ್ಸಿನಲ್ಲಿ ತಾನು ಮಾಡಿದ್ದು ತಪ್ಪು ಎಂದು ತೋರಿತು. ಬಳಿಕ ರಾಜನಲ್ಲಿಗೆ ಹಿಂತಿರುಗಿ ತಾನೊಬ್ಬ ಜಂಗಮವಾಗಿದ್ದರೂ ಈ ತಪ್ಪು ಮಾಡಿದ್ದೆ ಎಂದು ಒಪ್ಪಿಕೊಂಡ. ರಾಜನಿಗೆ ಆಶ್ಚರ್ಯವಾಯಿತು. ಸ್ವಯಂ ಶಿವ ಭಕ್ತನಾಗಿದ್ದ ರಾಜನಿಗೆ ಇದನ್ನು ನಂಬಲಾಗಲಿಲ್ಲ. ಆದ್ದರಿಂದ ಈ ಪ್ರಕರಣದ ಬಗ್ಗೆ ತನಿಖೆ ಮಾಡಿಸಿದ. ಜಂಗಮನಿಗೆ ಯಾವ ಆಹಾರ ನೀಡಲಾಗಿದೆ ಎಂದು ವಿಚಾರಿಸಿದಾಗ ಒಂದು ಸತ್ಯಾಂಶ ತಿಳಿದುಬಂತು. ಆ ದಿನ ಕೆಲವು ಕಳ್ಳರು ಅಕ್ಕಿಯ ಚೀಲಗಳನ್ನು ಕದ್ದೊಯುತ್ತಿದ್ದರು. ರಾಜಭಟರನ್ನು ಕಂಡು ಅವನ್ನು ಅರಮನೆಯಲ್ಲೇ ಎಸೆದು ಓಡಿ ಹೋಗಿದ್ದರು. ಆ ಅಕ್ಕಿ ಅರಮನೆಯ ಪಾಕಶಾಲೆಗೆ ಬಂದಿತ್ತು. ಅದರಿಂದ ಮಾಡಿದ ಅನ್ನವನ್ನೇ ಜಂಗಮನಿಗೆ ಬಡಿಸಲಾಗಿತ್ತು. ಹೀಗೆ ಕಳ್ಳರ ಸಂಪರ್ಕದ ಊರ್ಜೆಯಿಂದ ಕಲುಷಿತವಾದ ಆಹಾರವನ್ನು ಸೇವಿಸಿದ್ದರಿಂದಲೇ ಜಂಗಮನ ಬುದ್ದಿ ಕಲುಷಿತವಾಯಿತು ಎಂದು ರಾಜನಿಗೆ ಮನದಟ್ಟಾಯಿತು.
ನಾವು ಉಟ ಮಾಡುವಾಗ ಬ್ರಹ್ಮಾರ್ಪಣಂ ಬ್ರಹ್ಮಹವಿ ಎಂಬ ಮಂತ್ರವನ್ನುಚ್ಚರಿಸಿ, ಆಹಾರಕ್ಕೆ ನೀರನ್ನು ಪ್ರೋಕ್ಷಣೆ ಮಾಡಿದ ಬಳಿಕವೇ ಉಣ್ಣುತ್ತೇವೆ. ಅಡುಗೆಯಲ್ಲಿ ಎಂತೆಂಥ ಋಣಾತ್ಮಕ ಶಕ್ತಿಗಳು ಸೇರಿಕೊಂಡಿರುತ್ತವೊ ಎಂದು ನಮಗೆ ತಿಳಿದಿಲ್ಲ. ಆಹಾರವು ಮನಸ್ಸನ್ನು ಬೇಕಾದೆಡೆಗೆ ಸೆಳೆಯಬಲ್ಲದು. ಶುದ್ಧ ಆಹಾರದಿಂದ ಬುದ್ಧಿಯ ಪರಿಶುದ್ಧತೆ, ಶುದ್ಧ ಬುದ್ದಿಯಿಂದ ಜ್ಞಾಪಕಶಕ್ತಿಯ ಪ್ರಾಪ್ತಿ ಎಂಬ ಉಲ್ಲೇಖ ಛಾಂದೋಗ್ಯ ಉಪನಿಷತ್ನಲ್ಲಿದೆ. ಮಿದುಳಿನ ಬೆಳವಣಿಗೆ ಹಾಗೂ ಮನಸ್ಸಿನ ಪ್ರಶಾಂತತೆಗೆ ಪುಷ್ಠಿಕರ ಆಹಾರ ಬಹುಮುಖ್ಯವಾಗಿರುತ್ತದೆ. ಭಗವದ್ಗೀತೆ ಈ ರೀತಿ ಹೇಳಿದೆ
ಯುಕ್ತಾಹಾರ ವಿಹಾರಸ್ಯ ಯುಕ್ತ ಚೇಷ್ಟಸ್ಯ ಕರ್ಮಸು|
ಯುಕ್ತಸ್ವಪ್ನ ಅವಭೋದಸ್ಯ ಯೋಗೋಭವತಿ ಸುಖಃ||
ಮಾನವನಲ್ಲಿ ಸದ್ವಿಚಾರ ಸದ್ಭಾವನೆಯನ್ನುಂಟು ಮಾಡಿ ಸತ್ವಥವನ್ನು ತೋರುವ ಆಹಾರ ಮತ್ತು ವಿಹಾರಗಳೇ ಪಥ್ಯ.