

| ಅತುಲ ದಾಮಲೆ, ಬೆಂಗಳೂರು
‘ತುಟಿಗಳ ನಡುವೆ ಸಿಕ್ಕಿಸಿಕೊಂಡು, ಕಿಡಿ ಹಚ್ಚಿ, ಉಚ್ಛಾ್ವಸ-ನಿಶ್ವಾಸದಲ್ಲಿ ತೊಡಗಿದರೆ ಆಹಾ..’ ಎಂದೆಲ್ಲ ಸಿಗರೇಟನ್ನು ವೈಭವೀಕರಿಸಿ ಬರೆದಿರುವುದನ್ನು ಕೆಲವರಾದರೂ ಓದಿರುತ್ತೀರಿ. ಇನ್ನು ಕೆಲವರು, ಗಲ್ಫ್ರೆಂಡ್ನ ಬಿಟ್ಟರೂ ಸಿಗರೇಟ್ ಮಾತ್ರ ಬಿಡಲ್ಲ ಎಂದು ಹೇಳುತ್ತಾರೆ. ಮತ್ತೊಂದಷ್ಟು ಜನರ ಪ್ರಕಾರ ಸಿಗರೇಟ್ ಸೇದಿದರೆ ಕ್ಯಾನ್ಸರ್ ಬರಲ್ಲ, ಬಂದರೂ ಅದು ವೀಕ್ ಜೆನೆಟಿಕ್ಸ್ ಇರುವವರಿಗೆ ಮಾತ್ರ ಎಂದುಕೊಂಡಿರುತ್ತಾರೆ. ಆದರೆ ತಂಬಾಕಿನ ಚಟವಿದ್ದು ಬಿಡಲು ನೀವು ಬಯಸಿದ್ದರೆ ಒಂದೇ ದಾರಿ.. ನೀವೇ ಮನಸ್ಸಿಟ್ಟು ಬಿಡಬೇಕು! ಸಾಧ್ಯ ಆಗಲಿಲ್ಲ ಎಂದರೆ ಹಠ ಹಿಡಿದು ಮನಃಶಾಸ್ತ್ರಜ್ಞರ ಸಹಾಯ ಪಡೆದಾದರೂ ಬಿಡಬೇಕು. ಸಿಗರೇಟ್ಪ್ರಿಯರ ‘ಬತ್ತಿ’ ಹೊಗಳಿಕೆ ನಾನಾ ವಿಧ, ಅದು ನಿಲ್ಲುವುದೇ ಇಲ್ಲ. ಇನ್ನು ಪಾನ್ ಮಸಾಲಾಗಳ ರೂಪ ಪಡೆದಿರುವ ಗುಟ್ಕಾದ ಹೊಗಳಿಕೆ ಕೇಳಿ ಬರದಿದ್ದರೂ ಮೆಲ್ಲನೆ ಮೂಲೆಯಲ್ಲಿ ಅಂಗೈ ಮೇಲೆ ಉಜ್ಜಿ ಮೆಲ್ಲುವವರ ಸಂಖ್ಯೆ ಕಡಿಮೆ ಏನಿಲ್ಲ.
ತಂಬಾಕು ಜಗತ್ತಿನಾದ್ಯಂತ ತಲುಪಿದ್ದು ಹೇಗೆ?: ಲಭ್ಯ ಪ್ರಮುಖ ದಾಖಲೆಗಳ ಪ್ರಕಾರ, ಕ್ರಿಸ್ಟೋಫರ್ ಕೊಲಂಬಸ್ 1492ರಲ್ಲಿ ಅಮೆರಿಕದ ಸಮುದ್ರಯಾನದ ಸಂದರ್ಭದಲ್ಲಿ ಟೊಬಾಗೋ ಹೆಸರಿನ ದ್ವೀಪಗಳಲ್ಲಿ ಸ್ಥಳೀಯರು ಒಂದು ಪುಡಿಮಾಡಿದ ಒಣ ಎಲೆಯನ್ನು ಆಘ್ರಾಣಿಸುತ್ತಿರುವುದನ್ನು ಕಂಡಿದ್ದ. ನಂತರ ಆತ ತನ್ನೊಂದಿಗೆ ಸ್ವಲ್ಪ ಪ್ರಮಾಣದ ಒಣಗಿದ ಎಲೆಗಳು ಮತ್ತು ಬೀಜಗಳನ್ನು ತೆಗೆದುಕೊಂಡು ಹಿಂದಿರುಗಿದ್ದ. ಹೀಗೆ ತಂಬಾಕು ಯುರೋಪಿಗೆ ಪರಿಚಯಿಸಲ್ಪಟ್ಟಿತು. ನಂತರದ ದಿನಗಳಲ್ಲಿ ಜಗತ್ತಿನೆಲ್ಲೆಡೆ ತಲುಪಿತ್ತು.
ವಿಶ್ವಸಂಸ್ಥೆ ಮಾಹಿತಿ ಪ್ರಕಾರ ಭಾರತದಲ್ಲಿ ಸರಿಸುಮಾರು 26.7 ಕೋಟಿ ಜನರು ತಂಬಾಕು ಸೇವಿಸುತ್ತಾರೆ. ಇವರೆಲ್ಲರೂ 15ರ ವಯಸ್ಸಿಗೂ ಮೇಲ್ಪಟ್ಟವರು. ಭಾರತದಲ್ಲಿ ಸಿಗರೇಟಿಗಿಂತ ಹೆಚ್ಚಾಗಿ ಜಗಿದು ತಿನ್ನುವ ತಂಬಾಕನ್ನೇ ಜನರು ಇಷ್ಟಪಡುತ್ತಾರೆ. ನಮ್ಮಲ್ಲಿ ಗುಟ್ಕಾ, ಜರ್ದಾ ಬ್ಯಾನ್ ಆಗಿದ್ದರೂ, ತಂಬಾಕು ಮಾರುಕಟ್ಟೆಯಲ್ಲಿದೆ. ಹಾಗಾಗಿಯೇ ಪಾನ್ ಮಸಾಲಾ ಕೊಳ್ಳಲು ಹೋಗುವ ಬಹುತೇಕರು ಸಣ್ಣ ಪ್ಯಾಕೆಟ್ನಲ್ಲಿ ತಂಬಾಕನ್ನೂ ಖರೀದಿಸಿ ತಾವೇ ಗುಟ್ಖಾ ತಯಾರಿಸಿ ಮೆಲ್ಲುತ್ತಾರೆ. ಇನ್ನು ದವಡೆ ಹಾಗೂ ತುಟಿಯ ನಡುವೆ ಸಣ್ಣ ತಂಬಾಕು ತುಂಬಿದ ಚೀಲ ಇಟ್ಟುಕೊಂಡು ಜಗಿಯದೇ ಸೇದದೇ ಇರುವ ರೂಪವೂ ಇದೆ! ಹೌದು, ಇಲ್ಲಿಂದಲೇ ಅನೇಕ ಯುವಕರು ತಂಬಾಕು ಸೇವನೆಗೆ ಕಾಲಿಡುವುದು. ತಂಬಾಕಿನ ರುಚಿ ನೋಡಿದವರು ಇತರ ನಶೆ ನೀಡುವ ವಸ್ತುಗಳನ್ನು ಒಮ್ಮೆಯಾದರೂ ಬಳಸದೇ ಇರುವುದು ಬಹಳ ಅಪರೂಪ.
ಪ್ರತಿ ವರ್ಷವೂ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ತಂಬಾಕುರಹಿತ ದಿನ ಆಚರಿಸುವಾಗ ಒಂದು ಪ್ರಮುಖ ವಿಚಾರವನ್ನು ಮುನ್ನೆಲೆಗೆ ತರುತ್ತದೆ. ಅದೇ ರೀತಿ ಈ ಬಾರಿ ವಿಶ್ವಸಂಸ್ಥೆ ‘ಆಹಾರ ಮುಖ್ಯವೇ, ತಂಬಾಕು ಮುಖ್ಯವೇ?’ ಎಂಬ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ. ಅದರಂತೆ ಈ ಬಾರಿ ತಂಬಾಕು ಕೃಷಿಗೆ ಕಡಿಮೆ ಪ್ರಾಶಸ್ಱ ನೀಡುವಂತೆ ಎಲ್ಲಾ ದೇಶಗಳಿಗೆ ಕರೆ ನೀಡಿದೆ.
ಭಾರತೀಯ ಮಾರುಕಟ್ಟೆಗಳಲ್ಲಿ ಮಿಂಟ್ ಫ್ಲೇವರ್ನ ಸಿಗರೇಟ್ಗಳಿಗೆ ಬಾಯಲ್ಲಿಡುವ ತಂಬಾಕಿಗೆ ಭಾರಿ ಪ್ರಾಶಸ್ಱ. ಗಂಟಲಿಗೆ, ಬಾಯಿಗೆ ತಂಬಾಕಿನ ಕಿಕ್ ಜತೆಗೆ ತಣ್ಣನೆಯ ಅನುಭವ ನೀಡುವುದೇ ಇದರ ಉದ್ದೇಶ. ಇತ್ತೀಚೆಗೆ ವಿದೇಶಿ ಕಂಪನಿಗಳ ಪ್ರಭಾವದಿಂದ ಸಿಗರೇಟ್ ಉತ್ಪಾದಿಸುವ ಭಾರತದ ಅತಿ ದೊಡ್ಡ ಕಂಪನಿ ಕೂಡ ವಿವಿಧ ಫ್ಲೇವರ್ಗಳ ‘ಬತ್ತಿ’ಗಳನ್ನು ಉತ್ಪಾದಿಸಲು ಶುರು ಮಾಡಿದೆ. ಇದಲ್ಲದೇ ಫಿಲ್ಟರ್ ಇಲ್ಲದೆ ಸಿಗರೇಟ್ ಸೇದಲು ಬಯಸುವ ಜನರಿಗಾಗಿ ಸಿಗಾರ್ ಕೂಡ ಲಭ್ಯ ಇವೆ! ಅಂದರೆ ಇದರರ್ಥ, ನಾನಾ ರೂಪದಲ್ಲಿ ಜನರಿಗೆ ತಂಬಾಕು ಸಿಗುತ್ತಿದೆ. ತಂಬಾಕಿನ ಬೇಡಿಕೆ ನಿರಂತರವಾಗಿ ಏರುತ್ತಿದೆ. ಕರೊನಾ ಕಾಲದಲ್ಲಿ ಒಮ್ಮೆ ತಂಬಾಕಿನ ಮಾರಾಟ ಇಳಿಕೆಯಾಗಿದ್ದು ಬಿಟ್ಟರೆ ಏರುವುದು ಮಾತ್ರ ನಿಲ್ಲುತ್ತಿಲ್ಲ. 2020ರಲ್ಲಿ ತಂಬಾಕು ಮಾರುಕಟ್ಟೆ 8.32 ಲಕ್ಷ ಕೋಟಿ ರೂ. ಮಾರುಕಟ್ಟೆ ಗಾತ್ರವಿದ್ದರೆ 2023ರ ಹೊತ್ತಿಗೆ ತಂಬಾಕು ಮಾರುಕಟ್ಟೆ ಗಾತ್ರ 10.52 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ನ್ಯೂಜಿಲೆಂಡ್ನಲ್ಲಿ ಹೊಸ ತಲೆಮಾರಿನ ಜನರಿಗೆ ತಂಬಾಕನ್ನು ನಿಷೇಧಿಸಲಾಗಿದೆ. ಈ ಮೂಲಕ ನಿಧಾನವಾದರೂ ಸರಿ, ಮೂಲದಿಂದಲೇ ತಂಬಾಕನ್ನು ಅಲ್ಲಿನ ಸರ್ಕಾರ ಕಿತ್ತೊಗೆಯಲು ಕ್ರಮ ಕೈಗೊಂಡಿದೆ. ಇದೇ ರೀತಿಯ ಯೋಜನೆಯನ್ನು ಭಾರತದಲ್ಲಿ ತಂದರೆ ಭವಿಷ್ಯದ ಯುವಜನತೆಯನ್ನು ಆರೋಗ್ಯಪೂರ್ಣ ಸದೃಢ ಜನಾಂಗವಾಗಿ ರೂಪಿಸಲು ಪ್ರಯತ್ನಿಸಿದಂತಾಗುತ್ತದೆ.
ಈ ತಂಬಾಕು ದೊಡ್ಡ ರಾಕ್ಷಸ. ತಂಬಾಕು ಉತ್ಪನ್ನದ ತ್ಯಾಜ್ಯದಲ್ಲಿ 7000ಕ್ಕೂ ಹೆಚ್ಚು ವಿಷಕಾರಿ ರಾಸಾಯನಿಕಗಳಿವೆ. ಈ ಕಾರ್ಸಿನೊಜೆನಿಕ್ ರಾಸಾಯನಿಕಗಳು ಪರಿಸರದಲ್ಲಿ ಸಂಗ್ರಹಗೊಳ್ಳುತ್ತವೆ. ಸಿಗರೇಟ್ ಬಟ್ ಮೂಲಕ ಸಂಗ್ರಹಗೊಂಡು ನೀರಿನಲ್ಲಿ ಸೇರಿದರೆ ಇವು ಜಲಚರಗಳ ಹೊಟ್ಟೆ ಸೇರಿ ಕಡೆಗೆ ನಮ್ಮ ಹೊಟ್ಟೆಗೂ ಸೇರುತ್ತವೆ. ಈ ಕುರಿತಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುತ್ತೋಲೆಯಲ್ಲೂ ಉಲ್ಲೇಖವಾಗಿದೆ. ತಂಬಾಕು ಬಳಕೆಯಿಂದ ಹೃದಯದ ಸಮಸ್ಯೆ ಜತೆಗೆ ಕ್ಯಾನ್ಸರ್ ಬಾಧಿಸುತ್ತದೆ. ಬಾಯಿ, ರಕ್ತನಾಳಕ್ಕೆ ಹಾನಿ, ಕುತ್ತಿಗೆ ಮತ್ತು ಶಿರದ ಕ್ಯಾನ್ಸರ್, ಗಂಟಲು, ಧ್ವನಿಪೆಟ್ಟಿಗೆ, ಮಿದುಳು, ಅನ್ನನಾಳ, ಶ್ವಾಸಕೋಶ, ಪಿತ್ತಕೋಶ, ಮೂತ್ರಪಿಂಡ ಮತ್ತು ಸ್ತನ ಸೇರಿ ವಿವಿಧ ಅಂಗಗಳ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಜತೆಗೆ ಪಾರ್ಶ್ವವಾಯು, ಕುರುಡುತನ, ಹಲ್ಲು ಮತ್ತು ವಸಡು ಕಾಯಿಲೆಗಳೂ ಬಾಧಿಸುವ ಸಾಧ್ಯತೆ ಹೆಚ್ಚು. ನೇರವಾಗಿ ಕ್ಯಾನ್ಸರ್ ಬಂದು ಆರೋಗ್ಯಕ್ಕೆ ಹಾನಿ ಉಂಟಾಗದಿದ್ದರೂ ಬೇರೆ ಬೇರೆ ರೀತಿಗಳಲ್ಲಿ ತಂಬಾಕು ಮನುಷ್ಯನ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಹದಗೆಡಿಸುವ ಸಾಮರ್ಥ್ಯ ಹೊಂದಿದೆ. ಇನ್ನು ತಂಬಾಕು ಬಿಡಬೇಕು ಎನಿಸಿ ಬಿಡಲು ಪ್ರಯತ್ನಿಸಿ ಸೋಲುವುದರಿಂದ ನಿರಂತರ ಪಾಪಪ್ರಜ್ಞೆ, ಖಿನ್ನತೆ ಮುಂತಾದ ಮಾನಸಿಕ ತೊಂದರೆಗಳು ಕಾಡುತ್ತವೆ.
ತಂಬಾಕಿನ ಮಾರುಕಟ್ಟೆ ದಿನೇದಿನೆ ವಿಸ್ತಾರವಾಗುತ್ತಿದೆ. ಜನರ ಬೇಡಿಕೆಗೆ ಅನುಗುಣವಾಗಿ ತಂಬಾಕನ್ನು ಉತ್ಪಾದಿಸುವುದು ತಂಬಾಕು ನಿಯಂತ್ರಣ ಮಂಡಳಿಯ ಗುರಿ ಎಂದು ಅದರ ವೆಬ್ಸೈಟ್ನಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಜನರು ಹೆಚ್ಚು ಕೇಳಿದರೆ ಸ್ವಲ್ಪಸ್ವಲ್ಪವಾದರೂ ಸರಿ ಹೆಚ್ಚೇ ನೀಡುವುದು. ಅಂದರೆ ಚಟ ತೀರಿಸಲು ತಂಬಾಕು ಸಿಗುತ್ತಲೇ ಇರುತ್ತದೆ. ಹೊಸ ತಂಬಾಕು ಉತ್ಪಾದಕರಿಗೆ ಪರವಾನಗಿ ನೀಡದೇ ಇದ್ದರೂ ಉತ್ಪಾದನೆ ಮಾತ್ರ ಇಳಿಯುತ್ತಿಲ್ಲ ಎಂಬುದನ್ನು ಮಾರುಕಟ್ಟೆಯ ವಿಸ್ತಾರವೇ ಸೂಚಿಸುತ್ತಿದೆ. ಇದೆಲ್ಲದರ ಅರ್ಥ ಏನೆಂದರೆ, ತಂಬಾಕು ಉತ್ಪನ್ನಗಳ ಬಳಕೆಯನ್ನು ನಿಲ್ಲಿಸಲು ವ್ಯಸನಿ ತಾನೇ ಮುನ್ನುಗ್ಗಬೇಕೇ ಹೊರತು, ಮಾರುಕಟ್ಟೆ ವ್ಯವಸ್ಥೆಯಲ್ಲಿ ಸಹಕಾರ ಸಿಗುವುದು ಕಠಿಣ.
ರಾಜ್ಯದಲ್ಲೂ ಉತ್ಪಾದನೆ ಅಧಿಕ: ತಂಬಾಕು ನಿಯಂತ್ರಣ ಮಂಡಳಿಯ ಅಧಿಕೃತ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ 9.8 ಲಕ್ಷ ಟನ್ ತಂಬಾಕನ್ನು ಉತ್ಪಾದಿಸುವ ಮಿತಿ ಹೇರಲಾಗಿದೆ. ಕಳೆದ 10 ವರ್ಷಗಳಿಂದ ರಾಜ್ಯ ಸರಾಸರಿಯಾಗಿ ಪ್ರತಿ ವರ್ಷ 9,73,380 ಟನ್ ತಂಬಾಕನ್ನು ಉತ್ಪಾದನೆ ಮಾಡಿದೆ.
ಕರ್ನಾಟಕದಲ್ಲಿ ಸದ್ಯ ಯಾವುದೇ ರೂಪದಲ್ಲಿ ತಂಬಾಕು ಬಳಸುವವರ ಪ್ರಮಾಣ ಶೇ. 22.8 ಇದೆ. ತಂಬಾಕು ಸೇವನೆಯಿಂದ ಕ್ಯಾನ್ಸರ್ ಮಾತ್ರವಲ್ಲ ಕ್ಷಯದಂಥ ಮಾರಣಾಂತಿಕ ರೋಗಗಳು ಬರುತ್ತವೆ. ಸದ್ಯ ತಂಬಾಕು ಬಳಕೆ ಹಿನ್ನೆಲೆ ಹೊಂದಿರುವ ಸುಮಾರು 69,700 ರೋಗಿಗಳನ್ನು ಗುರುತಿಸಲಾಗಿದೆ. ಅದಲ್ಲದೆ ಆರೋಗ್ಯ ತಪಾಸಣೆ ವೇಳೆ ಸುಮಾರು 11,725 ಮಂದಿ ತಂಬಾಕು ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಆದರೆ ಕೇವಲ 3,494 ತಂಬಾಕು ವ್ಯಸನಿಗಳು ಮಾತ್ರ ತಂಬಾಕು ವ್ಯಸನತಡೆ ಕೇಂದ್ರಗಳೊಂದಿಗೆ ಸಂಪರ್ಕದಲ್ಲಿದ್ದಾರೆ.