

| ಮೇಧಾ ಪ್ರಹ್ಲಾದಾಚಾರ್ಯ ಜೋಶಿ
ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಸ್ತ್ರೀಗೆ ಒಂದು ಉನ್ನತ ಹಾಗೂ ಗೌರವಯುತವಾದ ಸ್ಥಾನವಿದೆ. ಮಮತೆ, ಕರುಣೆ, ವಾತ್ಸಲ್ಯ, ಭೂಭಾರದಷ್ಟು ತಾಳ್ಮೆ, ಇವೆಲ್ಲ ಹೆಣ್ಣಿಗೆ ಗರ್ಭದಿಂದ ಬಂದ ಆಭರಣಗಳು. ಪ್ರಕೃತಿಗೂ ಸ್ತ್ರೀಗೂ ಒಂದು ಅವಿನಾಭಾವ ಸಂಬಂಧವಿದೆ. ಸ್ತ್ರೀಯನ್ನು ಭೂಮಿತಾಯಿಯಾಗಿಯೂ, ನದಿಗಳ ಹೆಸರುಗಳಿಂದಲೂ ಪ್ರತಿಬಿಂಬಿಸುವ ಸಂಸ್ಕೃತಿ ನಮ್ಮದು. ಒಂದು ಕುಟುಂಬ, ಸಮಾಜ, ದೇಶ, ಆರೋಗ್ಯಕರ ಮನೋಭಾವನೆಯಿಂದ ಮುನ್ನಡೆದು ಉನ್ನತಿ ಹೊಂದಲು ಉತ್ತಮ ಸ್ತ್ರೀಯರ ಪಾತ್ರ ಅತ್ಯಗತ್ಯ.
ಹೆಣ್ಣಿಗೆ ತನ್ನದೇ ಆದ ಅಪೂರ್ವವಾದ ದೈಹಿಕ ರಚನೆ, ಸ್ವಭಾವ, ಕ್ರಿಯಾಶೀಲತೆ, ಮಾನಸಿಕ ಸಮನತೋಲನಗಳಿವೆ. ಪುರುಷನಿಗೆ ಅವನದ್ದೇ ಆದ ದೇಹರಚನೆ, ಸ್ವಭಾವ, ಕ್ರಿಯಾಶೀಲತೆಗಳಿವೆ. ಇದು ತಾರತಮ್ಯವಲ್ಲ. 3 ಸದಾ 2ಕ್ಕಿಂತ ದೊಡ್ಡದು ಮತ್ತು 4ಕ್ಕಿಂತ ಚಿಕ್ಕದು. ಇದು ಮೂರಕ್ಕೆ ಪಕ್ಷಪಾತವಲ್ಲ. ಅನ್ಯಾಯವೂ ಅಲ್ಲ. ಇದು 3ರ ಪ್ರಾಕೃತಿಕ ಸ್ವಭಾವ ಮತ್ತು ಬದಲಾಗದ ಸತ್ಯ. ಹೀಗೆಯೇ ಪ್ರಕೃತಿ ಸೃಷ್ಟಿಸಿದ ಸ್ತ್ರೀ-ಪುರುಷರ ಸುಂದರ ಸಂಬಂಧ.
ಅನಾದಿಕಾಲದಿಂದ ಬಂದ ಸನಾತನ ಶಾಸ್ತ್ರಗಳಲ್ಲಿ ಮನುಸ್ಮೃಯೂ ಒಂದು. ಇದು ವೇದಾರ್ಥಗಳನ್ನು ಸರಿಯಾಗಿ ಒಳಗೊಂಡಿದೆ. ಇದರಲ್ಲಿ ಸ್ತ್ರೀಯರನ್ನು ಬಹಳ ಗೌರವಯುತವಾಗಿ ಮತ್ತು ಉಚ್ಚಸ್ಥಾನದಲ್ಲಿ ಅಲಂಕರಿಸಿದ್ದಾರೆ ಎಂಬುದಕ್ಕೆ ಅನೇಕ ವಾಕ್ಯಗಳಿವೆ.
ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವ್ವನೆ |
ರಕ್ಷಂತಿ ಸ್ಥವಿರೇ ಪುತ್ರಾಃ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ || (ಮ.ಸ್ಮೃ 9-3)
ಏನಿದರ ನಿಜವಾದ ಮರ್ಮ...? ಸಮಾಜದಲ್ಲಿ ಸ್ತ್ರಿ-ಪುರುಷರ ಪಾತ್ರಗಳನ್ನು ವಿಶ್ಲೇಷಣೆ ಮಾಡುವ ಸಂದರ್ಭದಲ್ಲಿ ಮನು ಹೇಳಿದ ಮಾತು ಇದು.
ಬಾಲ್ಯದಿಂದ ಕೌಮಾರಾವಸ್ಥೆಯವರೆಗೂ ತಂದೆ ರಕ್ಷಿಸಬೇಕು ಎಂದಿದ್ದಾರೆ. ತಂದೆಯ ಅಧೀನವಾಗಿ ದಾಸ್ಯತ್ವದಲ್ಲಿ ಇರಬೇಕು ಎಂದಿಲ್ಲ. ರೈತ ತಾನು ಕಷ್ಟಪಟ್ಟು ಬೆಳೆದ ಬೆಳೆ ಕಾಡುಪ್ರಾಣಿಗಳಿಂದ, ಆಗದವರಿಂದ, ಹಾಳಾಗಬಾರದೆಂದು ಕಬ್ಬಿಣದ ಬೇಲಿಯನ್ನು ಹಾಕುತ್ತಾನೆ. ಬೆಳೆದ ಬೆಳೆಯನ್ನು ಬಂಧನದಲ್ಲಿಟ್ಟಿರುವ ಎಂದು ಅಂದುಕೊಳ್ಳುವುದು ಎಷ್ಟು ಮೂರ್ಖತನವೋ ಹಾಗೆಯೇ ಕುಲದ್ವಯತಾರಿಣೀ ಎಂದು ಎರಡು ವಂಶವನ್ನು ಬೆಳಗಿ ಉದ್ಧರಿಸುವ ಹೆಣ್ಣನ್ನು ತಂದೆ ರಕ್ಷಿಸುವಾಗ, ಅಧೀನದಲ್ಲಿಟ್ಟಿದ್ದಾನೆ ಎಂದು ತಿಳಿಯುವುದು ಅಷ್ಟೇ ಮೂರ್ಖತನ. ಮಗಳ ಬಗ್ಗೆ ತಂದೆಗೆ ವಿಶೇಷ ಅಭಿಮಾನ. ಆದ್ದರಿಂದ ಹೆಣ್ಣುಮಗಳನ್ನು ದೈಹಿಕವಾಗಿ, ಚಾರಿತ್ರಿಕವಾಗಿ, ಯಾವುದೇ ಅನ್ಯಾಯಕ್ಕೊಳಗಾಗದಂತೆ ಕಾಪಾಡುವುದು ತಂದೆಯ ಕರ್ತವ್ಯ ಮತ್ತು ಅವನ ಧರ್ಮ.
ಭರ್ತಾ ರಕ್ಷತಿ ಯೌವ್ವನೇ- ಪತಿಯು ಪತ್ನಿಯನ್ನು ಯೌವ್ವನದಲ್ಲಿ ರಕ್ಷಿಸಬೇಕು ಎಂದಿದ್ದಾರೆಯೇ ವಿನಃ ಅಧೀನದಲ್ಲಿರಲಿ ಎಂದಿಲ್ಲ. ತಂದೆ ಕಾಳಜಿಯಿಂದ ತನ್ನ ಮಗಳನ್ನು ರಕ್ಷಿಸಿ ಇನ್ನೊಬ್ಬನಿಗೆ ಧಾರೆಯರೆಯುತ್ತಾನೆ. ಅವಳನ್ನು ಇನ್ನೊಂದು ಮನೆಯಿಂದ ತನ್ನ ಮನೆಗೆ ತರುವ ಧೈರ್ಯ ಮಾಡಿದವ ತಂದೆಯಂತೆಯೇ ಮುಂದೆ ಅವಳನ್ನು ರಕ್ಷಿಸಬೇಕು. ಕೇವಲ ದೈಹಿಕವಾಗಿ ಅಷ್ಟೇ ಅಲ್ಲದೇ ಮಾನಸಿಕವಾಗಿ, ಸಮಾಜದಲ್ಲಿ ಅವಳ ಸ್ಥಾನಮಾನಕ್ಕೆ ಕುಂದು ಬರದಂತೆ ನೋಡಿಕೊಳ್ಳುವುದು ಅವನ ಕರ್ತವ್ಯ. ಇದು ಗ್ರಹಸ್ಥಧರ್ಮದ ನಿಯಮ.
ರಕ್ಷಂತಿ ಸ್ಥವಿರೇ ಪುತ್ರಾಃ- ವೃದ್ಧಾಪ್ಯದಲ್ಲಿರುವ ತಾಯಿಯನ್ನು ಪುತ್ರ ರಕ್ಷಿಸಬೇಕು. ತಂದೆ ಸ್ವಯಂ ವೃದ್ಧರಾಗಿರುವದರಿಂದ ಇದು ಮಗನ ಕರ್ತವ್ಯ. ಇಲ್ಲಿ ಮಗ ರಕ್ಷಿಸಬೇಕೆಂದು ಆಜ್ಞಾಪಿಸಿದ್ದಾರೆಯೇ ಹೊರತು ವಯಸ್ಸಾದ ಕಾರಣ ತಾಯಿ ಮಗನ ಅಧೀನದಲ್ಲಿರಬೇಕು ಎಂದಿಲ್ಲ. ಹೀಗೆ ಹೆಂಡತಿ, ವೃದ್ಧ ತಾಯಿ, ಮತ್ತು ಮಗಳು ಎಲ್ಲರನ್ನೂ ಆಯಾ ಅವಸ್ಥೆಗಳಿಗೆ ತಕ್ಕಂತೆ ಆಯಾ ಸೌಕರ್ಯಗಳಿಂದ ಅವರವರ ಸ್ವಾಭಿಮಾನದ ರಕ್ಷಣೆಯನ್ನು ಮಾಡುತ್ತ ಜತೆಗಿರುವುದೇ ರಕ್ಷತಿ ಎಂಬುದರ ಅರ್ಥ. ಇಲ್ಲಿ ಮನು ರಕ್ಷಣೆ ಎಂಬ ಪದವನ್ನು ಆದೇಶವಾಗಿ ಜವಾಬ್ದಾರಿಯ ಎಚ್ಚರಿಕೆಯಂತೆ ಪುರುಷನಿಗೆ ಹೇಳಿದ್ದಾರೆಯೇ ಹೊರತು, ಹೆಣ್ಣು ತಂದೆಗೆ, ಗಂಡನಿಗೆ, ಮಗನಿಗೆ ದಾಸಿಯಾಗಿರಬೇಕೆಂದು ಎಲ್ಲಿಯೂ ಅರ್ಥೈಸಿಲ್ಲ.
ನ ಸ್ತ್ರೀ ಸ್ವಾತಂತ್ರ್ಯಮರ್ಹತಿ- ಎಂದರೆ ದಾಸರ ಮುಂಡಿಗೆಗಳಂತೆ ಮೇಲ್ನೋಟಕ್ಕೆ ಒಂದರ್ಥ ಕಂಡರೂ ಅದರ ನೈಜ ಅರ್ಥ ಬೇರೆಯೇ ಇದೆ. ಸ್ವಾತಂತ್ರ್ಯ ಎಂದರೆ ಒಂದು ರೀತಿ ಒಬ್ಬಂಟಿ ಎಂತಲೂ ಅರ್ಥ. ಹಾಗಾಗಿ ಮಗಳು, ಹೆಂಡತಿ, ತಾಯಿಯನ್ನು ಯಾವ ಅವಮಾನ, ಕಿರುಕುಳ, ಹಿಂಸೆ, ಅತ್ಯಾಚಾರ, ಇವುಗಳಿಂದ ರಕ್ಷಿಸಬೇಕೆಂಬುದು ಮನು ಕಠೋರವಾಗಿ ಆದೇಶಿಸಿದ್ದಾರೆ.
ನ ಸ್ತ್ರೀ ಸ್ವಾತಂತ್ರ್ಯಮರ್ಹತಿ ಈ ಒಂದು ವಾಕ್ಯದ ವಿಪರೀತಾರ್ಥಗಳು, ತಿರುಚಿ ಹೇಳಿದ ಅನೇಕ ಪುಸ್ತಕಗಳೇ ಇವೆ. ಸ್ತ್ರೀಯರ ದೇಹಪ್ರಕೃತಿಯ ಕಾರಣದಿಂದ ಎಲ್ಲ ಸಂದರ್ಭಗಳಲ್ಲಿಯೂ ತನ್ನನ್ನು ತಾನು ಸಮರ್ಪಕವಾಗಿ ರಕ್ಷಿಸಿಕೊಳ್ಳಲು ಆಗುವದಿಲ್ಲ. ಆದ್ದರಿಂದ ನ ಸ್ವಾತಂತ್ರ್ಯಂ ಎಂಬ ಪದದ ಬಳಕೆ ಅಷ್ಟೇ. ಮನು ಪುರುಷರ ಆತ್ಮಸಂಯಮನದ ಬಗ್ಗೆ ಮತ್ತು ಪರಸ್ತ್ರೀಯರೊಂದಿಗೆ ಬಹಳ ಸಂಯಮದಿಂದ ವರ್ತಿಸುವದರ ಬಗ್ಗೆಯೂ ಅನೇಕ ಕಠೋರವಾದ ಮಾತುಗಳನ್ನು ಹೇಳಿದ್ದಾರೆ. ಆದ್ದರಿಂದ ಮನುಸ್ಮೃಯಲ್ಲಿ ಎಲ್ಲರೂ ಸಮಾನ. ಅದಕ್ಕಾಗಿ ಇದನ್ನು ಯಾವುದೇ ಪೂರ್ವದುರಾಗ್ರಹಗಳಿಲ್ಲದೇ ಅಧ್ಯಯನ ಮಾಡುವುದು ಅಗತ್ಯ. ಅನೇಕ ಆಧುನಿಕ ವಿಚಾರವಾದಿಗಳು ಮನುವಿನ ಹೆಸರು ಕೇಳಿದರೆ ಸಾಕು ಕೆಂಡದಂತೆ ಉರಿಕಾರುತ್ತಾರೆ. ಇತಿಹಾಸದಲ್ಲಿ ಅನೇಕ ಬಾರಿ ಸ್ತ್ರೀಯರ ಅಧೋಗತಿಗೆ ಮನು ಕಾರಣವೆಂಬಂತೆ ಬಿಂಬಿಸುತ್ತಾರೆ. ಒಂದು ವೇಳೆ ಹೆಣ್ಣಿನ ಬಗ್ಗೆ ದಾಸ್ಯತ್ವದ ಭಾವನೆ ಇದ್ದರೆ ಮನು ಹೀಗೇಕೆ ಹೇಳುತ್ತಿದ್ದರು-
ಯತ್ರ ನಾರ್ಯಸ್ತು ಪೂಜ್ಯಂತೇ... (ಮ.ಸ್ಮೃ 3-56)
ಎಲ್ಲಿ ಸ್ತ್ರೀಯರು ಪೂಜನೀಯರಾಗಿರುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿ ಒಲಿಯುತ್ತಾರೆ. ಎಲ್ಲಿ ಸ್ತ್ರೀಯರನ್ನು ಗೌರವಿಸುವದಿಲ್ಲವೋ ಅಲ್ಲಿ ಮಾಡಿದ ಎಲ್ಲ ಸತ್ಕಾರ್ಯಗಳು ನಿಷ್ಪಲವಾಗುತ್ತವೆ. ಸ್ತ್ರೀಯರು ಅನ್ಯಾಯದಿಂದ ದುಃಖಿಸಿದರೆ
ಆ ವಂಶವೇ ನಾಶವಾಗುತ್ತದೆ. ಸ್ತ್ರೀಯರು ಸಂತುಷ್ಟರಾದರೆ ಆ ವಂಶ ಸ್ವರ್ಗಸುಖದಲ್ಲಿರುತ್ತದೆ. (ಮ.ಸ್ಮೃ 3-57)
ಸಂತಾನವನ್ನು ಪಡೆದು ವಂಶಾಭಿವೃದ್ಧಿಯನ್ನು ಮಾಡುವ ಹೆಣ್ಣು ಮನೆಗೆ ನಿರಂತರ ಬೆಳಕಿನಂತೆ. ಅಂತಹ ಸ್ತ್ರೀ ಇಲ್ಲದ ಮನೆ ಎಂದಿಗೂ ಶೋಭಿಸುವದಿಲ್ಲ. (ಮ.ಸ್ಮೃ 9-26)
ಇಷ್ಟೇ ಅಲ್ಲದೇ ಆಸ್ತಿ ಹಕ್ಕುಗಳ ವಿಷಯದಲ್ಲಿಯೂ ಬಹಳ ಸೂಕ್ಷ್ಮವಾದ ಕಾನೂನುಗಳನ್ನು ಮಹಿಳೆಯರಿಗಾಗಿ ಮನುಗಳು ರೂಪಿಸಿದ್ದಾರೆ. ಪುತ್ರೇಣ ದುಹಿತಾ ಸಮಾ ಮಗ-ಮಗಳು ಇಬ್ಬರೂ ಸಮಾನರು ಎಂದಿದ್ದಾರೆ. (ಮ.ಸ್ಮೃ 9-130)
ತಾಯಿಯ ಪ್ರತ್ಯೇಕವಾದ ಆಸ್ತಿ ಇದ್ದರೆ ತಾಯಿಯ ಮರಣವಾದ ನಂತರ ಅವಳಿಚ್ಛೆಯಂತೆ ಆಸ್ತಿಯನ್ನು ಮಗಳಿಗೇ ಅಥವಾ ಮಗ ಮಗಳು ಇಬ್ಬರೂ ಹಂಚಿಕೊಳ್ಳಬೇಕು. (ಮ.ಸ್ಮೃ 9-131, 192)
ವಂಶಪಾರಂಪರ್ಯವಾಗಿ ಬಂದಿರುವ ಆಸ್ತಿಯಲ್ಲಿ ಮಗ ಮತ್ತು ಮಗಳಿಗೆ ಸಮಾನಹಕ್ಕಿರಬೇಕೆಂದು ಮನುಗಳು ಆದೇಶಿಸಿದ್ದಾರೆ. (ಮ.ಸ್ಮೃ 1-4)
ಸ್ತ್ರೀಯರಿಗೆ ಅನ್ಯಾಯ, ಅತ್ಯಾಚಾರ, ಹತ್ಯೆ, ಮಾಡಿದ್ದಲ್ಲಿ ಅಂತಹವರನ್ನು ಅತಿಘೊರವಾದ ಶಿಕ್ಷೆ ವಿಧಿಸಬೇಕೆಂದಿದ್ದಾರೆ. (ಮ.ಸ್ಮೃ 2-52, 8-29, 9-213)
ಒಮ್ಮೆ ಇತಿಹಾಸವನ್ನು ನೋಡಿದಾಗ ಮಹಾಸತಿ ದ್ರೌಪದಿಯ ಸೀರೆ ಸೆಳೆದಿದ್ದಕ್ಕೆ ಭೀಮಸೇನ ನಿರ್ದಾಕ್ಷಿಣ್ಯವಾಗಿ ದುರ್ಯೋಧನನನ್ನು ಸಂಹರಿಸಿದ್ದು. ಪತಿವ್ರತೆ ಸೀತೆಯನ್ನು ಅಪಹರಿಸಿದ್ದಕ್ಕೆ ಶ್ರೀರಾಮನು ರಾವಣನನ್ನು ಸಂಹರಿಸಿದ್ದು. ಇವು ಸ್ತ್ರೀಯರ ರಕ್ಷಣೆಗೆ ಒಂದು ನಿದರ್ಶನ.
ಎಷ್ಟೇ ಆಧುನಿಕರಾದರೂ ವಿಚಾರವಂತರಾದರೂ ಇಂದಿಗೂ ಮಗಳು ತಂದೆಯ ಸಂರಕ್ಷಣೆಯಲ್ಲಿಲ್ಲವೇ? ಸ್ತ್ರೀಯರು ತಮ್ಮ ಗಂಡನೊಡನೆ ಗಂಡನ ಮನೆಯಲ್ಲಿಲ್ಲವೇ? ವಯಸ್ಸಾದ ಮೇಲೆ ಮಗನೊಡನೆ ಇರದೇ ತಾವಾಗಿಯೇ ವೃದ್ಧಾಶ್ರಮಕ್ಕೆ ತೆರಳಿದ್ದಾರಾ? ಇಲ್ಲ. ನಮ್ಮ ಇತಿಹಾಸ ನೋಡಿದರೆ, ಯಥಾರ್ಥವಾಗಿ ಅಧ್ಯಯನ ಮಾಡಿದರೆ ಎಲ್ಲದಕ್ಕೂ ಸರಿಯಾಗಿ ಅರ್ಥ ತಿಳಿಯುತ್ತದೆ. ನ ಸ್ತ್ರೀ ಸ್ವಾತಂತ್ರ್ಯಮರ್ಹತಿ- ಯಾವ ಸನ್ನಿವೇಶಗಳಲ್ಲಿಯೂ ತಾಯಿ, ಹೆಂಡತಿ, ಮಗಳು, ನಿಸ್ಸಹಾಯಕಳಾಗಿರಬಾರದೆಂಬುದು ಉದ್ದೇಶ. ಇದುವೇ ನೈಜ ಅರ್ಥ. ಪದಗಳ ಮರ್ಮ.