

| ಮೇಧಾ ಪ್ರಹ್ಲಾದಾಚಾರ್ಯ ಜೋಶಿ
ಪ್ರಳಯ ಕಾಲದಲ್ಲೂ ಸದಾ ನಾರಾಯಣನ ಜತೆಗೇ ಇರುವ, ನಿತ್ಯಾವಿಯೋಗಿನಿ ಎನಿಸಿದ ನಿತ್ಯಮುಕ್ತಳಾದ ಕ್ಷೀರಬ್ಧಿಕನ್ಯಿಕೆ ಮೊದಲಾದ ನಾನಾ ಹೆಸರುಗಳಿಂದ ಕರೆಯಲ್ಪಡುವವಳು ಶ್ರೀ ಮಹಾಲಕ್ಷ್ಮಿದೇವಿ. ಅವಳ ವಿಶೇಷ ಪೂಜೆ ಶ್ರಾವಣ ಶುಕ್ಲ ಪಕ್ಷದ ಎರಡನೆಯ ಶುಕ್ರವಾರದಲ್ಲಿ ಅತಿ ವೈಭವದಿಂದ ಸಂಭ್ರಮ ಸಡಗರಗಳಿಂದ ಆಚರಿಸುವ ಹಬ್ಬವೇ ಶ್ರೀ ವರಮಹಾಲಕ್ಷ್ಮಿ ವ್ರತ.
ಸ್ತ್ರೀಯರಿಗೆ ಸೌಮಾಂಗಲ್ಯ, ಸಂತಾನ ಭಾಗ್ಯ, ಕನ್ಯೆಯರಿಗೆ ಸದ್ಗುಣಿಯಾದ ಪತಿಯ ಪ್ರಾಪ್ತಿ, ಸಕಲ ಐಶ್ವರ್ಯಗಳ ಪ್ರಾಪ್ತಿ ಹೀಗೆ ಎಲ್ಲ ವರಗಳನ್ನು ನೀಡುವ ಲಕ್ಷ್ಮಿ ಪೂಜೆಯೇ ಈ ವರಮಹಾಲಕ್ಷ್ಮಿ ವ್ರತ.
ಪೂಜಾ ವಿಧಾನ: ಆಚಾರ್ಯರ ಸಮ್ಮುಖದಲ್ಲಿ ಅವರಿಂದ ಆಶೀರ್ವಾದ ಪಡೆದು ಈ ವ್ರತದ ಸಂಕಲ್ಪವನ್ನು ಮಾಡಬೇಕು. ನಂತರ ಮನೆಯಲ್ಲಿ ಗುರು ಹಿರಿಯರಿಗೆ ನಮಸ್ಕರಿಸಿ ಪೂಜೆಗಾಗಿ ಸಂಕಲ್ಪಿಸಬೇಕು. ಪೂಜೆಯು ನಿರ್ವಿಘ್ನವಾಗಿ ಸಾಗಲೆಂದು ಮೊಟ್ಟ ಮೊದಲು ವಿಘ್ನೕಶ್ವರನನ್ನು ಪ್ರಾರ್ಥಿಸಿ ಗಣಪತಿ ಪೂಜೆಯನ್ನು ಮಾಡಬೇಕು.
ಈ ಪೂಜೆಯ ಪ್ರಾರಂಭದಲ್ಲಿ ಮಾಡುವುದು ಯಮುನಾ ಪೂಜೆ. ಸಾಮಾನ್ಯವಾಗಿ ಎಲ್ಲ ವ್ರತಗಳನ್ನು ನದಿಯ ತೀರದಲ್ಲಿ ಆಚರಿಸಬೇಕೆಂದು ಶಾಸ್ತ್ರಗಳು ವಿಧಿಸಿವೆ. ಆದರೆ ಈಗಿನ ಅನಾನುಕೂಲ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲವೆಂದು ಸಕಲ ನದಿ ತೀರ್ಥಗಳ ಸನ್ನಿಧಾನವಿರುವ ತುಳಸಿ ಬೃಂದಾವನದ ಸಮೀಪದಲ್ಲಿ ಯಮುನಾ ಕಳಶವನ್ನು ಸ್ಥಾಪಿಸಬೇಕು. ಆ ಕಲಶದಲ್ಲಿ ಗಂಗೆ ಗೋದಾವರಿ ಯಮುನಾ ಮೊದಲಾದ ನದ್ಯಭಿಮಾನಿಗಳನ್ನು ಆವಾಹಿಸಿ, ಉಪಚಾರ ಪೂಜೆಯನ್ನು ಮಾಡಬೇಕು. ನಂತರ ಆ ಕಲಶವನ್ನು ತೆಗೆದುಕೊಂಡು ಮನೆಯ ಮುಖ್ಯದ್ವಾರವನ್ನು ಮುಂದೆ ಮಾಡಿಕೊಂಡು ಮನೆಯ ಒಳಗೆ ಪ್ರವೇಶಿಸಬೇಕು. ವರಮಹಾಲಕ್ಷ್ಮಿಯ ಪೂಜೆಗೆಂದು ಅಲಂಕೃತವಾದ ಮಂಟಪದಲ್ಲಿ ಇಡಬೇಕು. ಅದರ ಮುಂದೆ ಮತ್ತೊಂದು ಕಳಶವನ್ನು ಇಟ್ಟು ಅದರಲ್ಲಿ ಶ್ರೀ ಲಕ್ಷ್ಮಿನಾರಾಯಣರಿಬ್ಬರನ್ನು ಆವಾಹಿಸಿ ಪೂಜಿಸಬೇಕು. ಕೇವಲ ಲಕ್ಷ್ಮಿಯನ್ನೇ ಪೂಜಿಸುವುದು ಎಂದಿಗೂ ವಿಹಿತವಲ್ಲ. ಅದು ಶಾಸ್ತ್ರ ವಿರುದ್ಧ. ‘ವಿಷ್ಣುನಾ ಸಹಿತಾ ಧ್ಯಾತಾ ಸಾಪಿ ತುಷ್ಟಿಂ ಪರಾಂ ವ್ರಜೇತ್’ -ಲಕ್ಷ್ಮೀನಾರಾಯಣರಿಬ್ಬರು ಅನಾದಿಕಾಲದಿಂದ ಅನಂತಕಾಲದವರೆಗೂ ಸದಾ ಜತೆಯಾಗಿಯೇ ಇರುವವರು. ಆದ್ದರಿಂದಲೇ ಲಕ್ಷ್ಮಿದೇವಿಯನ್ನು ದೇವರಿಂದ ನಿತ್ಯಾವಿಯೋಗಿನಿ ಎಂದು ಕರೆದಿದ್ದಾರೆ. ಲಕ್ಷ್ಮಿ ಪೂಜೆಯನ್ನು ಮಾಡುವವರು ಲಕ್ಷ್ಮಿ ಅನುಗ್ರಹವನ್ನು ಬಯಸುವವರು ವಿಷ್ಣುವಿನಲ್ಲಿ ಭಕ್ತಿಯನ್ನು ಮಾಡಲೇಬೇಕು. ಹೀಗೆ ಯಮುನಾ ಪೂಜೆಯ ನಂತರ ಮಹಾಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವ ಕಳಶಕ್ಕೆ ವಿಧಿವತ್ತಾಗಿ ಷೋಡಶೋಪಚಾರ ಪೂಜೆಯನ್ನು ಪ್ರಾರಂಭಿಸಬೇಕು.
ಕಳಶಕ್ಕೆ ನಾರಾಯಣ ಅಷ್ಟಾಕ್ಷರ ಮಂತ್ರದಿಂದ ಅಭಿಮಂತ್ರಿಸಬೇಕು. ಆಮೇಲೆ ಪೀಠ ಪೂಜೆ. ಯಾವ ಮಂಟಪದಲ್ಲಿ ಲಕ್ಷ್ಮಿ ಪೂಜೆ ಆಗಬೇಕೋ ಆ ಮಂಟಪದ ಪೂಜೆಯೇ ಪೀಠ ಪೂಜೆ. ಕಲಶದಲ್ಲಿ ಶುದ್ಧವಾದ ನೀರನ್ನು ತುಂಬಿಸಿ ಅರಿಶಿಣ ಕುಂಕುಮ ಗಂಧ ಅಕ್ಷತೆ ಹೂವು ಎಲ್ಲವನ್ನು ಹಾಕಿ ಪೂಜಿಸಬೇಕು. ಈ ವರಮಹಾಲಕ್ಷ್ಮಿ ಪೂಜೆಗೆ ಸಂಪ್ರದಾಯಗಳು ಅನೇಕ ಇವೆ. ಕೆಲವರು ಲಕ್ಷ್ಮಿ ದೇವಿಯ ಪ್ರತಿಮೆಯನ್ನು ಸ್ಥಾಪಿಸಿ ಆ ಪ್ರತಿಮೆಯಲ್ಲಿಯೇ ಆವಾಹನ ಮಾಡಿ ಪೂಜಿಸುತ್ತಾರೆ. ಇನ್ನು ಕೆಲವರು ಕಲಶವನ್ನು ಸ್ಥಾಪಿಸಿ ಕಲಶದಲ್ಲಿ ಲಕ್ಷ್ಮಿ ಆವಾಹನೆಯನ್ನು ಮಾಡಿ ಅಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಆಚರಿಸುತ್ತಾರೆ. ಹೀಗೆ ಅವರವರ ಸಂಪ್ರದಾಯದಂತೆ ಪ್ರತಿಮೆಯಲ್ಲಿ ಅಥವಾ ಕಲಶದಲ್ಲಿ ಪ್ರಾಣ ಪ್ರತಿಷ್ಠಾಪನೆಯ ವಿಧಿಯನ್ನು ಪೂರೈಸಬೇಕು.
ಈ ವ್ರತಕ್ಕೆ ಬದ್ಧರಾಗಲು ದೋರ ಬಂಧನವನ್ನು ವಿಧಿಸಿದ್ದಾರೆ. (ದಾರ ಕಟ್ಟಿಕೊಳ್ಳುವುದು ಅಥವಾ ಕಂಕಣ ಬಂಧನ). ಅಂತೆಯೇ 9 ಅಥವಾ 12 ಎಳೆಯ ದಾರವನ್ನು ಅರಿಶಿನದ ನೀರಿನಲ್ಲಿ ನೆನೆಸಿ ವೀಳ್ಯದೆಲೆಯಲ್ಲಿಟ್ಟು ದೇವಿಯ ಮುಂದಿಟ್ಟು ಪೂಜಿಸಬೇಕು. ಕಲಶದಲ್ಲಿ ಧ್ಯಾನ ಆವಾಹನಾದಿಗಳನ್ನು ಮಾಡಬೇಕು. ನಂತರ ಪಂಚಾಮೃತ ಸ್ನಾನವನ್ನು ತಿಳಿಸಿದ್ದಾರೆ. ಪಂಚಾಮೃತ ಅಭಿಷೇಕಕ್ಕಾಗಿ ಲಕ್ಷ್ಮೀನಾರಾಯಣರ ಪ್ರತಿಮೆಯನ್ನು ಆರಂಭದಲ್ಲಿಯೇ ಇಟ್ಟುಕೊಂಡು ಅದನ್ನೇ ನಂತರ ತಟ್ಟೆಯಲ್ಲಿರಿಸಿ ಪಂಚಾಮೃತ ಅಭಿಷೇಕ ಮಾಡಬೇಕು.
ನಂತರ ಅದನ್ನು ಶುದ್ಧಿಗೊಳಿಸಿ ವಸ್ತ್ರ, ಮಂಗಳಸೂತ್ರ, ಗೆಜ್ಜೆವಸ್ತ್ರ, ಹಾಗೂ ಯಥಾ ಶಕ್ತಿ ಅನೇಕ ಆಭರಣಗಳಿಂದ ಪೂಜಿಸಬೇಕು. ನಂತರ ಸೌಭಾಗ್ಯ ದ್ರವ್ಯಗಳಾದ ಅರಿಶಿನ ಕುಂಕುಮ ಅಕ್ಷತೆ ಇವುಗಳನ್ನು ಸಮರ್ಪಿಸಬೇಕು. ತದನಂತರ ಮಲ್ಲಿಗೆ, ಕೇದಿಗೆ, ಜಾಜಿ, ಸಂಪಿಗೆ, ಸೇವಂತಿಗೆ ಮೊದಲಾದ ಸುಗಂಧ ಪುಷ್ಪಗಳನ್ನು ಅರ್ಪಿಸಬೇಕು. ಮಂತ್ರಾಕ್ಷತೆ ಹೂಗಳನ್ನು ಹಾಕುತ್ತಾ ಲಕ್ಷ್ಮಿ ದೇವಿಯ ಅಂಗಪೂಜೆಯನ್ನು ಮಾಡಬೇಕು. ದೇವಿಯ ಮುಂದಿರಿಸಿದ ದಾರಕ್ಕೆ ಲಕ್ಷ್ಮಿ ದೇವಿಯ 9 ನಾಮಗಳಿಂದ ದೋರ ಗ್ರಂಥ ಪೂಜೆಯನ್ನು ಮಾಡಬೇಕು. ನಾನಾವಿಧವಾದ ಪತ್ರಗಳನ್ನು ಅರ್ಪಿಸಬೇಕು. ಶ್ರೀ ಮಹಾಲಕ್ಷ್ಮಿಯ ಅಷ್ಟೋತ್ತರ ಶತನಾಮ ಪೂಜೆಯನ್ನು ಮಾಡಬೇಕು. ಸ್ತ್ರೀಯರು ಶ್ರೀವರಲಕ್ಷ್ಮಿ ಕಲಶದ ಮುಂದೆ ಒಂದು ತಟ್ಟೆಯನ್ನಿಟ್ಟು ಅಲ್ಲಿ ಬಿಡಿ ಹೂವುಗಳಿಂದ ಅಥವಾ ಕುಂಕುಮದಿಂದ ಶತನಾಮ ಪೂಜೆಯ ಅರ್ಚನೆಯನ್ನು ಮಾಡಬೇಕು. ದೀಪವನ್ನು ಸಮರ್ಪಿಸಬೇಕು. ಊದುಬತ್ತಿ ಅಥವಾ ಗಂಧದ ಪುಡಿಯಿಂದ ಧೂಪವನ್ನು ಸಮರ್ಪಿಸಬೇಕು.
ನಂತರ ಲಕ್ಷ್ಮೀದೇವಿಯ ನೈವೇದ್ಯ. ವರಮಹಾಲಕ್ಷ್ಮಿಗೆ ನಾನಾ ತರಹದ ಭಕ್ಷಗಳನ್ನು ಅದರಲ್ಲಿಯೂ ಮುಖ್ಯವಾಗಿ ಶಾವಿಗೆಯ ಪಾಯಸ ಹಾಗೂ ಕಡಲೆ ಹೂರಣದ ಹೋಳಿಗೆಯನ್ನು ವಿಶೇಷವಾಗಿ ನಿವೇದಿಸಬೇಕೆಂದು ತಿಳಿಸಿದ್ದಾರೆ. ಅನೇಕ ತರಹದ ವಿಹಿತವಾದ ಹಣ್ಣುಗಳನ್ನು ನಿವೇದಿಸಬೇಕು. ಐದು ವೀಳ್ಯದೆಲೆ ಸುಣ್ಣ ಅಡಿಕೆಯಿಂದ ಕೂಡಿದ ತಾಂಬೂಲವನ್ನು ಅರ್ಪಿಸಬೇಕು. ಅದರೊಂದಿಗೆ ದಕ್ಷಿಣೆಯನ್ನು ಸಮರ್ಪಿಸಬೇಕು. ಅನುಕೂಲವಿದ್ದವರು ಹೂರಣದಲ್ಲಿಯೇ ಆರತಿಯನ್ನು ಮಾಡಬೇಕು. ಇಲ್ಲದಿದ್ದರೆ ಬತ್ತಿಯಿಂದಲೂ ಮಂಗಳಾರತಿಯನ್ನು ಮಾಡಬಹುದು. ಕೊನೆಗೆ ಪ್ರದಕ್ಷಿಣೆ ನಮಸ್ಕಾರ ಪ್ರಾರ್ಥನೆಯನ್ನು ಸಮರ್ಪಿಸಬೇಕು. ಕೈಯಲ್ಲಿ ಮಂತ್ರಾಕ್ಷತೆ ಹೂಗಳನ್ನು ಹಿಡಿದುಕೊಂಡು ಪ್ರಾರ್ಥಿಸಿ, ಪೂಜೆಯ ಸಮಾಪನೆಯನ್ನು ಮಾಡಿ ಅಘರ್Â ಪಾತ್ರೆಗೆ ನೀರಿನ ಸಮೇತ ಬಿಡಬೇಕು. ಪೂಜೆ ಸಮಾಪನೆಯ ನಂತರ ಪೂಜಿಸಿದ 9 ಅಥವಾ 12 ಎಳೆಯ ದಾರವನ್ನು ಹಿರಿಯ ಮುತೆôದೆಯ ಕೈಯಿಂದ ಅಥವಾ ಪತಿಯ ಕೈಯಿಂದ ಹೂವಿನೊಂದಿಗೆ ಸೇರಿಸಿ ಬಲಗೈಗೆ ಕಟ್ಟಿಸಿಕೊಳ್ಳಬೇಕು. ಪೂಜೆಯನ್ನು ಸಾಂಗವಾಗಿ ಮಾಡಿಸಿದ ಆಚಾರ್ಯರಿಗೆ ವಾಯನ ದಾನದ ಕ್ರಮವನ್ನು ತಿಳಿಸಿದ್ದಾರೆ.
ಪುರಾಣ ಭಾಸ್ಕರಾದಿ ಸೂತಮುನಿಗಳ ಹಾಗೂ ಶೌನಕರ ಸಂವಾದದಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತದ ಕಥೆಯ ವರ್ಣನೆ ಇದೆ. ಈ ಲೋಕದಲ್ಲಿ ಕಷ್ಟಕಾರ್ಪಣ್ಯಗಳನ್ನು ಪರಿಹರಿಸಿಕೊಳ್ಳಲು ಪಾಪಗಳನ್ನು ಕಳೆದುಕೊಳ್ಳಲು ಪುತ್ರ ಪೌತ್ರಾದಿ ಸಂಪತ್ತುಗಳನ್ನು ಪಡೆಯಲು ಲಕ್ಷ್ಮೀನಾರಾಯಣರ ಅನುಗ್ರಹವು ಅತಿ ಅವಶ್ಯಕ. ಅವರ ಅನುಗ್ರಕ್ಕಾಗಿಯೇ ಶ್ರೀ ವರಮಹಾಲಕ್ಷ್ಮಿ ವ್ರತವೆಂಬ ಪೂಜೆಯಿದೆಯೆಂದು ಸೂತರು ಶೌನಕರಿಗೆ ತಿಳಿಸುತ್ತಾರೆ. ಈ ಪೂಜೆಯಿಂದ ಇಹಲೋಕದಲ್ಲಿ ಹಾಗೂ ಪರಲೋಕದಲ್ಲಿ ಮಹಾ ಸುಖವು ಲಭಿಸುವುದು. ಆದರೆ ಭಕ್ತಿ ಆದರಗಳು ಈ ವ್ರತದಲ್ಲಿ ಬಹಳ ಮುಖ್ಯವಾದ ದ್ರವ್ಯಗಳು ಎಂದು ನುಡಿದರು. ಈ ವ್ರತದ ಕಥೆಯನ್ನು ವಿವರಿಸುತ್ತಾರೆ ಶೌನಕರು. ಹಿಂದೆ ವಿದರ್ಭ ದೇಶದಲ್ಲಿ ಚಾರುಮತಿ ಎಂಬ ಪತಿವ್ರತಾ ಸ್ತ್ರೀಯು ತನ್ನ ಪತಿಯನ್ನೇ ಸರ್ವಸ್ವವೆಂದು ತಿಳಿದು ಪತಿಯಲ್ಲಿಯೇ ಭಗವಂತನನ್ನು ಉಪಾಸಿಸಿದಳು. ಅತ್ಯಂತ ದಯಾಗುಣವನ್ನು ಹೊಂದಿದ ಚಾರುಮತಿಯ ಸದ್ಗುಣಗಳಿಂದ ಪ್ರಸನ್ನಳಾದ ಲಕ್ಷ್ಮೀದೇವಿಯು ಒಮ್ಮೆ ಅವಳ ಸ್ವಪ್ನದಲ್ಲಿ ಬಂದು ಚಾರುಮತಿ ನಾನು ವರಲಕ್ಷ್ಮಿ. ನಿನಗೆ ಅನುಗ್ರಹ ಮಾಡಲು ಬಂದಿರುವೆ. ಬರುವ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ನನ್ನನ್ನು ನನ್ನ ಪತಿಯಾದ ನಾರಾಯಣನ ಸಮೇತಳಾಗಿ ಭಕ್ತಿ ಭಾವಗಳಿಂದ ಪೂಜಿಸು. ನಿನಗೆ ಮಂಗಳವಾಗುತ್ತದೆ ಎಂದು ತಿಳಿಸಿ ಅಂತರ್ಧಾನಳಾದಳು. ಲಕ್ಷ್ಮಿ ಆಜ್ಞೆಯಂತೆ ಚಾರುಮತಿಯು ವರಮಹಾಲಕ್ಷ್ಮಿಯ ವ್ರತವನ್ನು ಆಚರಿಸಿ ಸಕಲ ಐಶ್ವರ್ಯವನ್ನು ಪಡೆದಳು. ಭವಿಷ್ಯೋತ್ತರ ಪುರಾಣದಲ್ಲಿ ಇದರ ವರ್ಣನೆ ಇದೆ. ಯಾರು ಈ ವ್ರತವನ್ನು ಮಾಡುವರೋ ಕೇಳುವರೋ ಅಥವಾ ಇನ್ನೊಬ್ಬರಿಗೆ ಹೇಳುವರೋ ಅವರೆಲ್ಲರೂ ಇದರಲ್ಲಿ ಪುಣ್ಯಭಾಜನರು. ಅವರ ಎಲ್ಲ ಕಷ್ಟಗಳು ನಾಶವಾಗಿ ವರಮಹಾಲಕ್ಷ್ಮಿಯ ಅನುಗ್ರಹವಾಗುವುದು.